ಕುಂದಾಪುರ: ತಾಲೂಕಿನ ಆಲೂರು ಗ್ರಾಮದ ಹಾಡಿಮನೆಯಲ್ಲಿ ನೆನ್ನೆ(ಜನವರಿ 23) ನಿಟ್ಟೆ ವಿಶ್ವವಿದ್ಯಾನಿಲಯ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲೆ ಮತ್ತು ಕೊರಗ ಸಂಘಟನೆಗಳ ಆಶ್ರಯದಲ್ಲಿ ಕೊರಗ ಜನಪದ ದಾಖಲೀಖರಣ ಮತ್ತು ನಿಘಂಟು ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ಕೊರಗ ಸಮುದಾಯದ ಹಿರಿಯ ಕಲಾವಿದರು, ಗುರಿಕಾರರು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 15 ಜನರನ್ನು ಗುರುತಿಸಿ ಗೌರವದ ಸನ್ಮಾನ ಕಾರ್ಯಕ್ರಮ ಜರುಗಿತು.
ಸಮುದಾಯದ ಹಿರಿಯ ಮಹಿಳೆ ಕಾಳು ಕೊರಗರವರು ದೀಪ ಬೆಳಗಿಸಿ ಕಾರ್ಯಾಗಾರ ಉದ್ಘಾಟನೆ ಮಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರು ಡಾ.ಸಾಯಿಗೀತಾ ವಿಚಾರ ಮಂಡನೆ ಮಾಡಿದರು. ಸಮುದಾಯದವರು ಹಿಂಜರಿಕೆಯಿಂದ ನಿಲ್ಲಬಾರದು ಮುಜುಗರ ಎನ್ನುವುದು ಇರಬಾರದು ನಮ್ಮ ಅನುಭವಗಳಿಗೆ ನಾವೇ ನೇತೃತ್ವ ವಹಿಸಿದವರು. ನಮ್ಮ ಎದುರಿನ ವ್ಯಕ್ತಿ ತುಂಬಾ ಓದಿರಬಹುದು, ಪದವಿ ಪಡೆದವರೂ ಆಗಿರಬಹುದು ಆದರೆ ನಮ್ಮ ಹಿರಿಯರಲ್ಲಿನ ಅನುಭವ ಯಾವ ಪದವಿಗೂ ಕಡಿಮೆ ಇಲ್ಲ. ಬುಟ್ಟಿ ಮಾಡುವ ಕೊರಗ ಸಮುದಾಯದ ಮಹಿಳೆ ಆ ಮಹಿಳೆಗೆ ಇರುವ ಕೌಶಲ್ಯ ಮತ್ತು ಅದರ ಕುರಿತು ಇರುವ ಜ್ಞಾನ ವಿಶಿಷ್ಟವಾದುದು ಎಂದು ತಿಳಿಸಿದರು.
ಇದನ್ನು ಓದಿ: ಪ್ರಭುತ್ವ ಮತ್ತು ಜನತೆ ಆದಿವಾಸಿ ಕೊರಗ ಸಮುದಾಯಕ್ಕೆ ಚಾರಿತ್ರಿಕವಾಗಿ ಅನ್ಯಾಯವೆಸಗಿದೆ
ಮುಂದುವರೆದು ಮಾತನಾಡಿದಾವರು, ಎಷ್ಟೇ ಶಿಕ್ಷಣ ಪಡೆದರು ಸಹ ಯಾರು ಕೂಡ ಯಾವುದೇ ಭಾಷೆಯ ಸಂಪೂರ್ಣ ವಿದ್ವಾಂಸರಲ್ಲ. ಎಲ್ಲರೂ ಸಹ ಕಲಿಕೆಯ ಹಾದಿಯಲ್ಲಿ ಇರುವವರೇ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಲು ಒಂದು ಜೀವಮಾನ ಕಾಲ ಸಾಕಾಗುದಿಲ್ಲ. ನಾವು ಕಲಿತ ಕಲಿತ ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಲು ಸಾಧ್ಯವಾಗಬೇಕು. ಕೊರಗ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಲ್ಲಿ ಕಲಿಕೆ ಬೇಕು. ಸಮುದಾಯ ಮತ್ತು ಕಲಿಕೆ ನಡುವೆ ಅಂತರ ಹೆಚ್ಚು ಮಾಡಲಾಗುತ್ತದೆ. ಸಮುದಾಯ ಮತ್ತು ಕಲಿಕೆ ಎರಡು ಜೊತೆ ಜೊತೆಗೆ ಸಾಗಬೇಕು. ನಮ್ಮ ಕಸುಬುಗಳು ಮತ್ತು ಕಲಿಕೆ ಜೊತೆ ಜೊತೆಗೆ ಸಾಗಬೇಕಿದೆ. ಹೀಗಾಗಿ ಭಾಷೆ ಉಳಿಸಬೇಕು ಎಂದಾದರೆ ದಾಖಲೀಖರಣದ ಜೊತೆಗೆ ಮಕ್ಕಳಲ್ಲಿ ಭಾಷೆ ಬೆಳಸುವಂತದ್ದು ಮಾಡಬೇಕು ಅಗತ್ಯವೆಂದು ಹೇಳಿದರು.
ಭಾಷೆಯ ದಾಖಲೀಕರಣ ಮಾಡಲು ನಾವು ಹಿಂದೆ ಕ್ಷೇತ್ರ ಕಾರ್ಯಕ್ಕೆ ಹೋದಾಗ ನಮ್ಮ ಹಿಂದಿನ ಹಿರಿಯರು ಹೇಳುವ ಮಾತು. ನೀವು ಸ್ವಲ್ಪ ಒಂದು 10 ವರ್ಷದ ಹಿಂದೆ ಈ ಕೆಲಸಕ್ಕೆ ಬರಬೇಕಿತ್ತು ಅವರೆಲ್ಲ ಈಗ ಇಲ್ಲ, ಹಿಂದಿನವರಿಗೆ ನಮಗಿಂತ ಹೆಚ್ಚು ತಿಳಿದಿತ್ತು ಎಂದಿದ್ದರು. ಆದರೆ ಈಗ ಕ್ಷೇತ್ರ ಕಾರ್ಯಕ್ಕೆ ಹೋದರು ಸಹ ಈಗಿನ ಹಿರಿಯರು ಹೇಳುತ್ತಾರೆ, ನೀವು 10 ವರ್ಷದ ಹಿಂದೆ ಬರಬೇಕಿತ್ತು ಎಂಬುದಾಗಿ. ಅಂದರೆ ನಮಗಿಂತ ಹಿಂದಿನವರು ತಿಳಿದವರು ಇದ್ದರು ಎನ್ನುವ ಮಾತಾಗಿದೆ. ಹೀಗೆ ನಮ್ಮ ಹಿರಿಯರು ನಮ್ಮಿಂದ ದೂರ ಆದಹಾಗೆ ಒಂದಿಷ್ಟು ಜ್ಞಾನ ಕಳೆದು ಹೋಗುತ್ತದೆ. ಇತ್ತೀಚೆಗೆ ಒಂದು ಭಾಷೆ ಮಾತನಾಡುವ ಉಳಿದಿರುವ ಒಬ್ಬನೇ ಒಬ್ಬ ವ್ಯಕ್ತಿಯು ತೀರಿ ಕೊಂಡಾಗ ಆ ಭಾಷೆ ಅಳಿವಾಯಿತ್ತು ಎನ್ನಲಾಗುತ್ತದೆ ಎಂಬ ಅಂಶಗಳನ್ನು ವಿವರಿಸಿದರು.
ಇದನ್ನು ಓದಿ: ದಲಿತ, ಮಹಿಳೆ, ಆದಿವಾಸಿ, ಹಿಂದುಳಿದವರನ್ನು ಶಿಕ್ಷಣದಿಂದ ದೂರ ಉಳಿಸುವ ಹುನ್ನಾರ: ವಿ.ಪಿ ಸಾನು
ಆದರೆ ಆ ಭಾಷೆ ಮೊದಲೇ ಅವನ ಜೊತೆ ಮಾತನಾಡುತ್ತಿರುವಾಗ ಆತ ತೀರಿ ಕೊಂಡಗಲೇ ಭಾಷೆಯು ನಾಶ ಆಯಿತು. ಉಳಿದಿರುವ ಒಬ್ಬ ವ್ಯಕ್ತಿಗೆ ಸಂವಹನ ನಡೆಸಲು ಯಾರು ಉಳಿದಿಲ್ಲ. ಆ ವ್ಯಕ್ತಿಯ ಹೊರತು ಬೇರೆ ಯಾರಿಗೂ ಆ ಭಾಷೆ ಬರುತ್ತಿರಲಿಲ್ಲ. ಆಗಲೇ ಭಾಷೆಯು ಸತ್ತಿದೆ. ಇಂದು ಭಾಷೆ ದಾಖಲೀಕರಣ ಮಾಡುವುದು ಸಹ ಅಗತ್ಯವಾಗಿದೆ. ಇಂದು ಕೃಷಿ ಕ್ಷೇತ್ರದಲ್ಲಿ ಸಹ ಗಣನೀಯ ಬದಲಾವಣೆ ಆಗಿದೆ. ಅದೇ ಸಂದರ್ಭದಲ್ಲಿ ಆ ಕೃಷಿಯ ಜೊತೆಗಿನ ಶಬ್ದಗಳ ಬಳಕೆ ನಿಂತು ಹೋಗುತ್ತದೆ. ಅದಕ್ಕಾಗಿ ಭಾಷೆಯ ದಾಖಲೀಖರಣ ಎನ್ನುವುದು ಮಹತ್ವದ್ದು ಎಂದು ತಿಳಿಸಿದ್ದರು.
ಕೊರಗ ಸಮುದಾಯದಲ್ಲಿ ಕಪ್ಪಡ ಕೊರಗ, ಸೊಪ್ಪು ಕೊರಗ, ತೊಪ್ಪು ಕೊರಗ, ಕುಂಟ್ಟು ಕೊರಗ ಎನ್ನುವ ನಾಲ್ಕು ಒಳ ಪಂಗಡಗಳು ಇದೆ. ಈ ನಾಲ್ಕು ಒಳಪಂಗಡಗಳ ಭಾಷೆ, ಜ್ಞಾನ ಎಲ್ಲಾವು ಬೇರೆಬೇರೆ ಆಗಿವೆ. ಭಾಷೆ ಗೊತ್ತಿರುವ ಸಮುದಾಯದವರೆ ದಾಖಲೀಕರಣ ಮಾಡುವ ಕೆಲಸವನ್ನು ಗೌರಿ ಕೆಂಜೂರು, ಬಾಬು ಪಾಂಗಾಳ, ಶ್ರೀಧರ ನಾಡ ರವರು ನಡೆಸುತ್ತಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕೊರಗ ಭಾಷೆಯ ಪ್ರತಿ ಶಬ್ದಗಳನ್ನು ಸಹ ದಾಖಲಿಸುವ ಗುರಿ ಹೊಂದಿದೆ. ಅದಕ್ಕಾಗಿ ಕೊರಗ ಸಮುದಾಯದ ಹಿರಿಯರು ಮಾಹಿತಿ ನೀಡಲು ಸಹಕರಿಸಬೇಕು. ಹಾಗೆ ಸಮುದಾಯದ ವಿದ್ಯಾರ್ಥಿಗಳು, ಯುವಜನರು ಸಹ ದಾಖಲೀಕರಣಕ್ಕೆ ಸಹಾಯವಾಗಿ ಬರಹ ರೂಪದಲ್ಲಿ, ಧ್ವನಿಗ್ರಹಣ ಮತ್ತು ಚಿತ್ರೀಕರಣವನ್ನು ಮಾಡಲು ಸಹಕಾರ ನೀಡಬೇಕಿದೆ ಎಂದು ತಿಳಿಸಿದರು.
ಕೊರಗ ಸಮುದಾಯದ ಕಲಾವಿದರು, ಗುರಿಕಾರರು, ಕೃಷಿ ಕ್ಷೇತ್ರದಲ್ಲಿ ತೊಡಗಿರುವ, ಸೃಜನಶೀಲ ಕುಲಕಸುಬು ನಿರತರನ್ನು ಸನ್ಮಾನಿಸಲಾಯಿತ್ತು. ಕುಷ್ಟು ಕೊರಗ ಯರುಕೊಣೇ, ಶಂಕರ ಬಾರಂದಾಡಿ, ಕಾಳು ಆಲೂರು, ಕರಿಯಮ್ಮ ಆಲೂರು, ಕೃಷ್ಣ ತೆಂಕಬೈಲು, ಮಾಸ್ತಿ ಹೆಮ್ಮಂಜೆ, ಕೊರಗ ನಾರ್ಕಳಿ, ರಾಮ ವಂಡ್ಸೆ, ಈರ ದೀಟಿ, ಹೊನ್ನಮ್ಮ ಕೊಣ್ಕಿ, ಐತಾ ನಂದ್ರೋಳಿ, ರಾಮ ಹೆರೂರು, ಸಂದೀಪ ಮಾರಣಕಟ್ಟೆ ಇವರು ಸನ್ಮಾನ ಸ್ವೀಕರಿಸಿದರು.
ಇದನ್ನು ಓದಿ: ಮೀಸಲಾತಿ ಸೌಲಭ್ಯ ವಂಚಿತ ಸಮುದಾಯಗಳಲ್ಲಿ ಆದಿವಾಸಿಗಳೇ ಹೆಚ್ಚು
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಲೂರು ಘಟಕದ ಅಧ್ಯಕ್ಷ ಗಣೇಶ ಆಲೂರು ವಹಿಸಿದರು. ಮುಖ್ಯ ಅತಿಥಿಗಳಾಗಿ ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ, ಆಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಶೆಟ್ಟಿ, ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಕೊರಗ ಸಮುದಾಯದವರು, ಸಾಹಿತಿಯೂ ಆಗಿರುವ ಬಾಬು ಪಾಂಗಳ, ಉಡುಪಿ ಜಿಲ್ಲಾ ಕೊರಗ ಸಂಘದ ಜಿಲ್ಲಾ ಅಧ್ಯಕ್ಷ ಗೌರಿ ಕೆಂಜೂರು, ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಜಿಲ್ಲಾ ಅಧ್ಯಕ್ಷ ಸುಂದರ ಕೊರಗ ಅವರುಗಳು ಉಪಸ್ಥಿತರಿದ್ದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀಧರ ನಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ನಂದ್ರೋಳಿ ಸ್ವಾಗತಿಸಿದರು, ಸುರೇಶ್ ಹೇರೂರು ವಂದಿಸಿದರು, ರೇವತಿ ಆಲೂರು ಕಾರ್ಯಕ್ರಮ ನಿರೂಪಿಸಿದರು.
ವರದಿ : ಶ್ರೀಧರ ನಾಡ
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ