ಮಹಿಳೆ: ನೆತ್ತಿಯ ಮೇಲೆ ಎಷ್ಟೊಂದು ನಿರ್ಬಂಧಗಳು

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಈ ಲೇಖನ

ನೀಲಾ ಕೆ.

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ
ಗಂಡು ಗಂಡಾದಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದಡೆ
ತನುವಿನ ಸೂತಕಕ್ಕೆ ತೆರಹುಂಟೆ?
ಮುನ್ನಿಲ್ಲದ ಸೂತಕಕ್ಕೆ ಜಗ ಮರುಳಾಯಿತು
ಎನ್ನ ದೇವ ಚನ್ನಮಲ್ಲಿಕಾರ್ಜುನನೆಂಬ ಗರುವಂಗೆ
ಜಗವೆಲ್ಲ ಹೆಣ್ಣು ನೋಡಾ

– ಅಕ್ಕಮಹಾದೇವಿ  

ನೀಲಾ ಕೆ.

ಮಹಿಳೆ ಅಂದರೇನೆ ಜೀವದಾಯಿನಿ. ಎಲ್ಲ ತೆರನ ಮನದ ಸೂತಕ ನೀಗಿಸಿಕೊಂಡು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೇನೇ ಮಹಿಳೆಯನ್ನು ಅರಿಯಲು ಸಾಧ್ಯ. ಅವಳನ್ನು ದೇಹವಾಗಿ ನೋಡುವ ಪರಿಪಾಠವು ದೀರ್ಘಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಆದಿಮ ಕಾಲದಲ್ಲಿ ನಿಸರ್ಗಸಹಜವಾಗಿ ಜೀವಿಸುವ ಹೊತ್ತಿನಲ್ಲಿ ಅವಳನ್ನು ಜೀವವಾಗಿ ನೋಡುವ ಪ್ರಕೃತಿದತ್ತ ನಂಬಿಕೆ ಇತ್ತು. ಯಾವುದೇ ಪೂರ್ವಾಗ್ರಹವಿಲ್ಲದೆ ಕಣ್ಣ ಮುಂದಿನ ಸತ್ಯವನ್ನು ಅರಿತುಕೊಳ್ಳುವ ಒಪ್ಪಿಕೊಳ್ಳುವ ದಿನಗಳವು. ಆ ಹೊತ್ತಿನಲ್ಲಿ ಅವಳು ಮಾನ್ಯತೆಗೆ ಭೂಷಿತವಾಗಿದ್ದ ಕಾಲ. ಅದು ಸತ್ಯದ ನಿಲುವಾಗಿತ್ತು. ಅದರೆ, ಕ್ರಮೇಣ ಸಾಮಾಜಿಕ ಸಂಪತ್ತು ಕೆಲವರದೇ ಕೈವಶವಾಗುತ್ತ ಹೋದಂತೆ ಸಮಾಜದ ನಂಬಿಕೆಗಳಲ್ಲಿಯೂ ಪಲ್ಲಟಗಳು ಕಾಣಿಸಿಕೊಳ್ಳತೊಡಗಿದವು. ಆರ್ಥಿಕ ಅಸಮಾನತೆಯು ಸಾಮಾಜಿಕ ಸ್ಥಿತ್ಯಂತರಗಳಿಗೆ ಕಾರಣವಾಗತೊಡಗಿತು. ಅಂತೆಯೇ ಶ್ರಮಿಕರ ಸ್ಥಾನಮಾನಗಳು ಸ್ಥಿತಿವಂತರ ಕೈಯಲ್ಲಿ ನಿರ್ಧಾರಗೊಳ್ಳತೊಡಗಿದವು. ದುಡಿಮೆಗೆ ಇನ್ನೊಂದು ಹೆಸರೇ ಮಹಿಳೆಯಾದ್ದರಿಂದ ಅವಳ ಸ್ಥಾನವನ್ನೂ ಅಸಮಾನದ ಶ್ರಮ ವಿಭಜನೆಯಲ್ಲಿ ತಳ್ಳಲ್ಪಟ್ಟಿತು. ಸಮಾಜದ ಸಂಪತ್ತು ಖಾಸಗಿ ಆಸ್ತಿಯಲ್ಲಿ ಹೊರಳು ಹಾದಿ ಹಿಡಿದು ಸಂಪತ್ತಿಗೆ ಸಂಪತ್ತು ಸೇರಿ ಮಿಗುತಾಯಗೊಂಡ ಸಂಪತ್ತೇ ಅಸಮಾನ ಸಮಾಜದ ನಿಗ್ರಹದ ಕೇಂದ್ರವಾಗತೊಡಗಿತು. ಆದರೆ, ಕ್ರಮೇಣ ಇದನ್ನು ಪ್ರಶ್ನಿಸುವ ಪ್ರತಿರೋಧಿಸುವ ಪರಂಪರೆಯೂ ಬೆಳೆಯತೊಡಗಿತು. ಆದ್ದರಿಂದಲೇ ಮನುಷ್ಯರ ಚರಿತ್ರೆಯು ಸಂಘರ್ಷದ ಚರಿತ್ರೆಯಾಗಿದೆ. ಅದು ರಕ್ತಸಿಕ್ತ ಚರಿತ್ರೆಯಾಗಿದೆ.

ಲಕ್ಷಾಂತರ ವರ್ಷಗಳ ಈ ಸುದೀರ್ಘವಾದ ಪಯಣದಲ್ಲಿ ಸಮತೆಗಾಗಿ ಬದಲಾವಣೆ ಬಯಸಿ ಅನೇಕ ಚಿಂತನೆಗಳು ಹುಟ್ಟಿಕೊಂಡವು. ಯಥಾಸ್ಥಿತಿವಾದ ಬಯಸಿಯೂ ಚಿಂತನೆಗಳು ಮೂಡಿದವು. ಇದೊಂದು ನಿರಂತರ ವಿಚಾರಗಳ ಸಂಘರ್ಷದ ಪಯಣವೇ ಆಗಿದೆ. ಈ ಪಯಣದಲ್ಲಿ ಮಹಿಳೆಯ ಅಸ್ಮಿತೆಯನ್ನು ಮಸಳಿಸುವ ವಿದ್ಯಮಾನಗಳಿಗೇ ಸಮಾಜ ಮಣೆ ಹಾಕುತ್ತಬಂದಿದೆ. ಅನೇಕ ವಿಚಾರಧಾರೆಗಳಿಗೆ ಧಾರ್ಮಿಕ ಚೌಕಟ್ಟು ಒದಗಿಸಿ ಕ್ರಮೇಣ ಭಾವನಾತ್ಮಕ ಸಂಗತಿಗಳೊಂದಿಗೆ ಮಿಳಿತಗೊಂಡು ಬಹುತೇಕ ಎಲ್ಲ ಧರ್ಮಗಳಲ್ಲಿ ಮಹಿಳೆಯನ್ನು ಎರಡನೆಯ ಸ್ಥಾನದಲ್ಲಿಯೇ ದೂಡಲಾಯಿತು. ಪಾಳೇಗಾರಿ ಪುರುಷಪ್ರದಾನ ವ್ಯವಸ್ಥೆಯಲ್ಲಿ ಹುಟ್ಟಿಕೊಂಡ ಧರ್ಮಗಳು ಮಹಿಳೆಯನ್ನು ಸರಿಸಮಾನವಾದ ಸಹಜೀವಿ ಎಂದು ಪರಿಗಣಿಸುವುದರ ದೃಷ್ಟಿಕೋನ ಹೊಂದಲಿಲ್ಲ. ಕಾಯಕ ಲೋಕವನ್ನು ಜಾತಿಗಳಲ್ಲಿ ವಿಂಗಡಿಸಲಾಯಿತು. ಅಸಮಾನ ವರ್ಣವ್ಯವಸ್ಥೆಯು ಸಮಾಜದ ಮೇಲೆ ಹಿಡಿತ ಸಾಧಿಸತೊಡಗಿತು. ಇದರ ಮುಖ್ಯ ಗುರಿಯು ಸಾರ್ವಜನಿಕ ಸಂಪತ್ತನ್ನು ಕೆಲವೇ ಜನರಲ್ಲಿ ಹಂಚಿಕೊಳ್ಳುವ ಹಿಕಮತ್ತಿನೊಂದಿಗೆ ಅಧಿಕಾರ ಕೇಂದ್ರಿತವಾಗಿತ್ತು… ಆಗ ಬಹುಸಂಖ್ಯಾತ ಸಮುದಾಯವನ್ನು ಅಲ್ಪಸಂಖ್ಯಾತ ಸಮುದಾಯದ ಎದುರು ನಿಲ್ಲಿಸಿ ಕೋಮುವಾದ ಹುಟ್ಟು ಹಾಕುವುದರ ಮೂಲಕ ಅದು ತನ್ನ ಯಶಸ್ಸನ್ನು ಕಂಡುಕೊಂಡಿತು. ಆದ್ದರಿಂದಲೇ ಭಾರತದ ನೆಲದಲ್ಲಿ ವರ್ಣ ವ್ಯವಸ್ಥೆಯನ್ನು ಗಟ್ಟಿಗೊಳಿಸುತ ಶ್ರಮ ಸಂಸ್ಕೃತಿಯನ್ನು ತುಚ್ಛಗೊಳಿಸಿಯೂ ಶ್ರಮಿಕರ ಮೂಲಕವೇ ಸೇವೆ ಪಡೆದುಕೊಳ್ಳುವಂತಹ ಗುಲಾಮಗಿರಿಯನ್ನು ಕಸಿ ಮಾಡಲಾಯಿತು. ಮಹಿಳೆ ಮತ್ತು ಸಮಸ್ತ ಶ್ರಮಿಕರನ್ನು ಗುಲಾಮಗಿರಿಯ ಬಲೆಯಲ್ಲಿ ದೂಡಲಾಯಿತು. ಮತ್ತು ಅದೇ ಸಂದರ್ಭದಲ್ಲಿ ಅವರ ಉಡುಗೆ, ತೊಡುಗೆ, ಭಾಷೆ, ಆಹಾರದ ಮೇಲೆ ನಿಯಂತ್ರಣ ಸಾಧಿಸಲಾಯಿತು. ಹಾಗೂ ಮತ್ತೆಲ್ಲ ಆಯ್ಕೆಯ ಹಕ್ಕಿನಿಂದ ವಂಚಿತಗೊಳಿಸುವ ಹುನ್ನಾರವು ಹುರಿಗೊಳಿಸಲಾಯಿತು. ಭಾರತದ ಸಂದರ್ಭದಲ್ಲಿ ಈ ಪಾತ್ರ ನಿರ್ವಹಿಸಿದ್ದು ಪುರೋಹಿತಶಾಹಿ. ಮೂರುಪಟ್ಟು ದುಡಿಮೆಗೈಯುವ ಸದೃಢ ಶಾರೀರಿಕ ಮತ್ತು ಮಾನಸಿಕ ಸ್ಥೈರ್ಯದ ಮಹಿಳೆಯನ್ನು ಚಂಚಲೆ, ಅಬಲೆ, ನರಕ ಎಂದೆಲ್ಲ ಕಪೋಲ ಕಲ್ಪಿತ ಚಿತ್ರಣಗಳ ಚೌಕಟ್ಟಿನೊಳಗೆ ದೂಡಲಾಯಿತು. ಶಾಸ್ತ್ರ ಮತ್ತು ಪುರಾಣಗಳ ಮೂಲಕ ಧಾರ್ಮಿಕ ಗ್ರಂಥಗಳ ಮೂಲಕ ಅವಳನ್ನು ಎಲ್ಲ ಹಕ್ಕುಗಳಿಂದ ಮೊಟಕುಗೊಳಿಸಿ ಸಮಾಜವನ್ನೂ ನಂಬಿಸಿ ಅವಳನ್ನು ನಂಬಿಸಿ ಈವರೆಗೆ ನಡೆದುಕೊಂಡು ಬಂದಿದೆ ಸಮಾಜ. ಆದರೆ ಇದೇ ಸಮಾಜದಲ್ಲಿ ಅನೇಕ ಚಿಂತನ ಧಾರೆಗಳು ಈ ಕಲ್ಪಿತ ನಂಬಿಕೆಗಳಿಗೆ ಪರ್ಯಾಯವಾಗಿ ವಾಸ್ತವಿಕ ಸತ್ಯಗಳನ್ನು ಆಧಾರದೊಂದಿಗೆ ಬೆಳೆದು ಬಂದಿವೆ. ’ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂಬ ಚಿಂತನೆಗಳನ್ನು ಮುನ್ನೆಲೆಗೆ ತರಲಾಯಿತು. ಅರಿವಿಂಗೆ ಬೇರೊಂದೊಡಲುಂಟೆ? ಎಂದು ಪ್ರಶ್ನಿಸಲಾಯಿತು. ಜೊತೆ ಜೊತೆಗೆ ಆರ್ಥಿಕ ಸಮಾನತೆಯ ಚಿಂತನೆಗಳೂ ಮುನ್ನೆಲೆಗೆ ಬಂದವು. ಈ ನೆಲೆಯ ಅನೇಕ ತಾತ್ವಿಕ ಧಾರೆಗಳಿಗೆ ಭಾರತದ ನೆಲವು ಸಾಕ್ಷಿಯಾಗಿ ನಿಂತಿದೆ. ಈ ಸಂಘರ್ಷದ ಮತ್ತು ಪರ್ಯಾಯ ತಾತ್ವಿಕ ಚಿಂತನೆಗಳು ಈವರೆಗೂ ನಿಲ್ಲದೆ ನಿರಂತರ ಚಲಿಸುತ ಸಾಗಿ ಬಂದಿವೆ.

ಭಾರತವು ಈಚೆಗಿನ ವರ್ಷಗಳಲ್ಲಿ ಕೋಮುವಾದಿ ನೆಲೆಯ ಚಿಂತನೆಗಳ ಆಕ್ರಮಣಕಾರಿತ್ವ ನೋಡುತ್ತಿದೆ. ವರ್ಣ ವ್ಯವಸ್ಥೆಯು ವಿಭಜನಕಾರಿ ಕಾರ್ಯಯೋಜನೆಯೊಂದಿಗೆ ಮುನ್ನುಗ್ಗುತ್ತಿದೆ. 19ನೇ ಶತಮಾನದ ಹೊತ್ತಿನಲ್ಲಿ ಜರ್ಮನ್ ಮತ್ತು ಇಟಲಿಯ ಸರ್ವಾಧಿಕಾರವನ್ನು ಆದರ್ಶವಾಗಿ ಪಡೆದುಕೊಂಡು ಭಾರತದಲ್ಲಿ ಸಾಂಸ್ಕೃತಿಕವಾಗಿ ಪ್ರವೇಶ ಪಡೆದು ಹಿ(ಸಿ)ಂದೂವನ್ನು ಹಿಂದೂತ್ವಗೊಳಿಸಿ ಕೋಮುವಾದಿ ಅಜೆಂಡಾದ ವಾಹಕವಾಗಿಸಲಾಯಿತು. ಅನೇಕ ಜಾತಿಗಳ ಗೊಂಚಲನ್ನೇ ಹಿಂದೂತ್ವದ ತೆಕ್ಕೆಗೆ ಜಾರಿಸಿ ಅದರೊಳಗೂ ಶ್ರೇಣೀಕರಣವನ್ನು ಕಾಪಾಡಿಕೊಂಡು ಬರಲಾಯಿತು.

ಹಾಗೆ ನೋಡಿದರೆ ಭಾರತವು ಅನೇಕ ಧರ್ಮಗಳ ನೆಲವಾಗಿದೆ. ಒಂದೆಡೆ ಎಲ್ಲ ಧರ್ಮಗಳೂ ಮಹಿಳೆಯನ್ನು ಸಹಜೀವಿಯಾಗಿ ಸಮಾನತೆಯಿಂದ ನೋಡಿಲ್ಲ ಎಂಬುದು ಸತ್ಯ. ಇನ್ನೊಂದೆಡೆ ಅವಳನ್ನು ಸಂಪೂರ್ಣವಾಗಿ ನಿಯಂತ್ರಿಸಿ ತನ್ನ ವಿರೋಧಿ ಮೌಲ್ಯಗಳನ್ನೇ ನಂಬುವಂತೆ ಮತ್ತು ಸುಖಿಸುವಂತೆ ಸಜ್ಜುಗೊಳಿಸಲಾಯಿತು. ಈಚೆಗೆ ನಡೆದ ಹಿಜಾಬ್ ಪ್ರಕರಣವನ್ನು ಗಮನಿಸಬಹುದು. ಉಡುಗೆ ತೊಡುಗೆಯ ಮೇಲೆ ಆಯ್ಕೆಯ ಹಕ್ಕಿರಬೇಕಾದದ್ದು ಅವಳದ್ದೇ. ಆದರೆ ನೈಜಾರ್ಥದಲ್ಲಿ ಹಾಗಾಗುತ್ತಿಲ್ಲ. ಏಕತಾನತೆಯ ಉಡುಗೆ-ತೊಡುಗೆ ಆಹಾರದ ಇಚ್ಛೆ ಸಹಜವಾಗಿಯೇ ಮನುಷ್ಯ ಜೀವಿ ಬಯಸುವುದಿಲ್ಲ. ಆದರೆ ಒಂದೇ ತೆರನ ಮತ್ತು ಕುಟುಂಬದ ಯಜಮಾನರು ಒಪ್ಪಿದ ತನ್ಮೂಲಕ ಸಮಾಜದ ಯಜಮಾನಿಕೆ ಒಪ್ಪಿದ ಉಡುಗೆ-ತೊಡುಗೆಗೆ ಮಹಿಳೆಯನ್ನು ಪಕ್ಕಾಗಿಸಲಾಗಿದೆ ಎಂಬುದು ನಗ್ನ ಸತ್ಯವಾಗಿದೆ. ಕುಟುಂಬವೆನ್ನುವುದು ಪುರುಷನ ಇಚ್ಛೆಯ ಅಣತಿಯಲ್ಲಿ ನಡೆಯುವ ಘಟಕವಾಗಿದೆ. ವಿವಾಹ ಮತ್ತು ಕುಟುಂಬ ಎಂಬ ಎರಡು ಸಂಸ್ಥೆಗಳನ್ನು ಮಹಿಳೆಯರ ಮೇಲೆ ನಿಯಂತ್ರಣ ಸಾಧಿಸಲೆಂದೇ ಬಳಕೆ ಮಾಡಲಾಗುತ್ತಿದೆ. ಸಮಾಜವನ್ನೂ ಇಂತಹದೇ ಯಜಮಾನಿಕೆಯಲ್ಲಿ ದೂಡುವ ಚಿಂತನೆಗಳು ಪ್ರಧಾನನೆಲೆಗೆ ತಲುಪಿವೆ. ಆದ್ದರಿಂದಲೇ ಅತ್ಯಾಚಾರ ನಡೆಯಲು ಕಡಿಮೆ ಬಟ್ಟೆ ತೊಟ್ಟಿದ್ದೇ ಕಾರಣ ಎಂದು ಹೇಳುವ ಹಿಂದೂತ್ವದ ಶಕ್ತಿಗಳು ಇನ್ನೊಂದೆಡೆ ಮೈತುಂಬ ಆವರಿಸಿಕೊಳ್ಳುವ ಬುರ್ಖಾ ಎಂಬ ಬಟ್ಟೆಯನ್ನು ಕಳಚಲು ಒತ್ತಡ ಹೇರುತ್ತವೆ. ಅತ್ತ ಸಮುದಾಯದ ಮೂಲಭೂತವಾದಿಗಳು ಇತ್ತ ಇನ್ನೊಂದು ಬಹುಸಂಖ್ಯಾತ ಸಮುದಾಯದ ಕೋಮುವಾದಿಗಳು ಇಬ್ಬರೂ ಪರಸ್ಪರ ವಿರೋಧಾತ್ಮಕ ನೆಲೆಯಲ್ಲಿ ಸ್ಪರ್ಧೆಗಿಳಿದು ತಮ್ಮ ಹಿಡನ್ ಅಜೆಂಡಾ ಜಾರಿಗಾಗಿ ಮಹಿಳೆಯನ್ನು ಅಸ್ತಿತ್ವಹೀನರನ್ನಾಗಿಸುತ್ತಾರೆ ಮತ್ತು ಅವಳ ಇಚ್ಛೆಯನ್ನೇ ಇಲ್ಲದಂತೆ ಮಾಡಿ ಹೊಸಕಿ ಹಾಕಿ ತಮಗೆ ಬೇಕಾದ ಇಚ್ಛೆಯನ್ನು ಅವಳ ಮೆದುಳಿಗೆ ತುರುಕಿ ಆ ವಿಚಾರಗಳಿಗಾಗಿ ಅವಳೂ ಹೋರಾಡುವಂತೆ ಉದ್ರೇಕಿಸಲಾಗುತ್ತದೆ. ಹಿಜಾಬ್ ವಿಚಾರದಲ್ಲಿ ಆದದ್ದು ಇದನ್ನೇ. ಪರೀಕ್ಷೆ ಬೇಕಾದರೆ ಬಿಡುತ್ತೇವೆ ಆದರೆ, ಹಿಜಾಬ್ ಅಥವ ಬುರ್ಖಾ ಬಿಡುವುದಿಲ್ಲ ಎಂಬ ನಿಲುವಿಗೆ ಬರುವಂತೆ ಅವಳ ಮೆದುಳನ್ನು ಕಸಿ ಮಾಡಲಾಗುತ್ತಿದೆ. ಬುರ್ಖಾ ಯಾ ಹಿಜಾಬ್, ಸೀರೆ ಯಾ ಸ್ಕರ್ಟ್ ಇವಾವುದೂ ಮುಖ್ಯವಲ್ಲ. ಅವೆಲ್ಲವೂ ಅವಳ ವೈಯಕ್ತಿಕ ಆಯ್ಕೆ. ಶಿಕ್ಷಣ ಕೊಡುವುದು ಮಾತ್ರ ತನ್ನ ಕರ್ತವ್ಯವಾಗಿದೆ ಎಂಬುದು ಪ್ರಭುತ್ವವು ಸ್ಪಷ್ಟಗೊಳಿಸಬೇಕು. ಆದರೆ ಹೀಗಾಗುತ್ತಿಲ್ಲ. ಏಕೆಂದರೆ ಸಮಾಜವನ್ನು ನಿಯಂತ್ರಿಸುತ್ತಿರುವ ಬಲಾಢ್ಯ ಕೋಮುವಾದಿ ಶಕ್ತಿಯು ಆಯಕಟ್ಟಿನ ಸ್ಥಾನಗಳಲ್ಲಿಯೂ, ಪ್ರಭುತ್ವದೊಳಗೂ, ನ್ಯಾಯಾಲಯದೊಳಗೂ ಪ್ರವೇಶ ಪಡೆದಿದೆ. ಮತ್ತು  ನ್ಯಾಯ ಎಂಬುದು ಸಹ ಮಹಿಳೆಯ ಆಯ್ಕೆಯ ಹಕ್ಕಿನ ಮೇಲೆ ಮಾಡುವ ಧಾಳಿಯ ಅವತಾರ ತೊಟ್ಟೇ ಬರುತ್ತಿದೆ.

ಜಗತ್ತಿನಲ್ಲಿ ನಡೆದ  ಯಾವುದೇ ಕೋಮುದಂಗೆಗಳಲ್ಲಿ ಮೊದಲ ಬಲಿಪಶು ಮಹಿಳೆಯಾಗಿರುತ್ತಾಳೆ. ಅವಳಿಗೆ ತಾನು ಎಲ್ಲ ಹಕ್ಕುಗಳಿಂದ ವಂಚಿತಳಾಗಿ ಸಮಾನತೆಯ ನೆಮ್ಮದಿಯ ಬದುಕಿನಿಂದ ಬೇರ್ಪಟ್ಟು ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದೇನೆ ಎಂಬುದು ಅರಿವಿಗೆ ಬಾರದಂತೆ ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಪಳಗಿಸಲಾಗುತ್ತಿದೆ. ಇದೇ ಇಂದಿನ ಭಾರತವು ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. ದೇವರು ದೈವತ್ವದ ಹೆಸರಿನಲ್ಲಿ ಅವಳನ್ನು ಅನೇಕ ವ್ರತ ಆಚರಣೆಗಳ ಮೂಲಕ ಮೌನಕ್ಕೆ, ಹಿಂಸೆಗೆ, ಪ್ರಶ್ನಾಹೀನತೆಯ ಮನಸ್ಥಿತಿಗೆ ಸಜ್ಜುಗೊಳಿಸಲಾಗುತ್ತದೆ.

ಆದ್ದರಿಂದಲೇ ಕೋಮುವಾದಿಗಳು ದುರ್ಗಾವಾಹಿನಿಯಂಥ ಸಂಘದ ಮೂಲಕ ಮಹಿಳೆಯ ಸಹಜ ತಾಯ್ತನದ ಗುಣಗಳನ್ನು ಅಳಿಸಿಹಾಕಿ ಅವಳನ್ನು ಎದುರಿನ ಸಮುದಾಯದ ಮಹಿಳೆಯರ ಮೇಲೆ ಧಾಳಿ ಮಾಡಲು ಸಿದ್ಧಗೊಳಿಸುತ್ತಾರೆ. ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಮಹಿಳೆ ಮಕ್ಕಳನ್ನು ತನ್ನ ವಿಚಾರಗಳ ವಾಹಕರನ್ನಾಗಿ ಮಾಡಿಕೊಂಡು ಅವರೊಂದಿಗೆ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತದೆ. ಕೋಮುದಂಗೆಗಳಾದಾಗ ಮೊದಲು ಧಾಳಿ ನಡೆಯುವುದೇ ಮಹಿಳೆಯ ಮೇಲೆ . ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯ, ಅಪಹರಣ, ಕೋಮುದ್ವೇಷದ ವಿಕೃತ ಹಿಂಸೆಗೆ ಅವಳನ್ನೇ ಬಲಿಪಶುವಾಗಿಸಲಾಗುತ್ತದೆ. ಗೋದ್ರಾ ಹತ್ಯಾಕಾಂಡದಲ್ಲಿ ಗರ್ಭಿಣಿ ಮಹಿಳೆಯ ಹೊಟ್ಟೆ ಬಗೆದು ಭ್ರೂಣವನ್ನು ತ್ರಿಶೂಲಿಗೆ ಚುಚ್ಚಿ ಕುಣಿದಾಡಿದ್ದು ಚರಿತ್ರೆ ಕಂಡ ಕ್ರೌರ್ಯದ ಮೇರುಘಟ್ಟವಾಗಿದೆ. ಕೋಮುವಾದವೆನ್ನುವುದೇ ಪೌರುಷವೆಂಬ ಅಟ್ಟಹಾಸದ ವಿಕಾರದೊಳಗೆ ಗಟ್ಟಿಗೊಳ್ಳುತ್ತ, ಕುಟುಂಬದೊಳಗೂ ಸಮಾಜದೊಳಗೂ ಎದುರಿನ ಕೋಮಿನೊಳಗೂ ಇರುವ ಮಹಿಳೆಯರನ್ನು ಹೆಬ್ಬಾವಿನಂತೆ ಆವರಿಸಿಕೊಳ್ಳುತ್ತ ಅವರ ಅಸ್ತಿತ್ವವನ್ನು ನುಜ್ಜುಗುಜ್ಜಾಗಿಸುತ ನುಗ್ಗುತ್ತದೆ. ಮತ್ತು ಮಹಿಳೆಯರ ಮೆದುಳಿಗೂ ಪ್ರವೇಶ ಪಡೆದು ತನ್ನದೇ ಚಿಂತನೆಗಳನ್ನು ಅವಳ ಚಿಂತನೆಗಳನ್ನಾಗಿಸುತ್ತದೆ. ಕೋಮುವಾದವು ಮಹಿಳಾ ಐಕ್ಯತೆಯನ್ನು ವಿಭಜಿಸುತದೆ. ಅವಳನ್ನು ಲೈಂಗಿಕ ಬಳಕೆಯ ವಸ್ತುವಾಗಿಯೇ ಇರುವಂತೆ ನೋಡಿಕೊಳ್ಳುತ್ತದೆ. ಇಂತಹ ಫ್ಯಾಸಿಸ್ಟ್ ಕ್ರೌರ್ಯದ ಹಿಂದೆ ಅಗಾಧವಾದ ಸಂಪತ್ತನ್ನು ಹಂಚಿಕೊಳ್ಳುವಿಕೆಯ ಪ್ರಕ್ರಿಯೆ ನಡೆಯುತ್ತಿರುತ್ತದೆ ಮತ್ತು ಅದು ಯಾರ ಗಮನಕ್ಕೂ ಬಾರದಷ್ಟು ಪರಿಣಾಮಕಾರಿಯಾಗಿ ಸಮೂಹದ ಮೇಲೆ ಹಿಂಸೆ, ಮಹಿಳೆ ಮಕ್ಕಳ ಮೇಲೆ ಹಿಂಸೆಯನ್ನು ಹರಿಯಬಿಡಲಾಗುತ್ತದೆ. ವಿಭಜನಕಾರಿ ಸೂತ್ರವನ್ನು ಎಲ್ಲ ವಿಭಾಗಗಳಲ್ಲಿಯೂ ಬಳಸುತ್ತದೆ. ಬಣ್ಣ, ಲಿಂಗ, ಜಾತಿ, ಧರ್ಮ, ಹೀಗೆ ಅದು ವಿಭಜಿಸುತ್ತಲೇ ಹೋಗುತ್ತದೆ. ಮಾತ್ರವಲ್ಲ ಬಲಾಢ್ಯದವಾದ ಬಂಡವಾಳಕ್ಕೆ ಆರ್ಥಿಕ ಲಾಭವೇ ಅಂತಿಮ ಗುರಿಯಾಗಿರುವುದರಿಂದ ಅದು ಇನ್ನೂ ಕ್ರೂರವಾದ ವಿಕಾರವಾದ ವಿಚಾರಗಳನ್ನು ಪುಷ್ಟೀಕರಿಸುತ್ತದೆ. ಅಧ್ಯಾತ್ಮವೆನ್ನುವುದರ ಅರ್ಥವನ್ನು ವಿರೂಪಗೊಳಿಸಿ ಶರೀರದಲ್ಲಿಯೇ ತಾರತಮ್ಯ ಹುಟ್ಟು ಹಾಕುತ್ತದೆ. ಎಡಗೈ ಕನಿಷ್ಠ ಬಲಗೈ ಶ್ರೇಷ್ಠ ಇತ್ಯಾದಿ ನಂಬಿಕೆಗಳು. ದೇವರನ್ನು ಒಲಿಸಿಕೊಳ್ಳಲು ದೇವದಾಸಿಯಾಗಿಸುವುದು, ಬಲಿ ಕೊಡುವುದು, ಕೂಸುಗಳನ್ನು ಬಲಿ ಕೊಡುವುದು ಇತ್ಯಾದಿ ನಂಬಿಕೆಗಳನ್ನು ಅಗಾಧವಾದ ದೈವತ್ವಕ್ಕೇರಿಸುತ್ತದೆ. ಈ ಚಿಂತನೆಗಳನ್ನು ಪ್ರಸಾರ ಪ್ರಚಾರಗೊಳಿಸಲು ಸತ್ಸಂಗ, ಧ್ಯಾನಕೇಂದ್ರ, ದೇವರ ದರ್ಶನ, ಪ್ರವಾಸ, ಯೋಗಾಭ್ಯಾಸ, ನಾನಾ ನಮೂನೆಯ ವ್ರತಾಚರಣೆಗಳು, ಹೋಮಹವನಗಳ ಬಗ್ಗೆ ಹುಸಿ ವೈಜ್ಞಾನಿಕತೆಯ ನಂಬಿಕೆಗಳ ಪ್ರಚಾರ ಮಾಡುವುದು ಹೀಗೆ ನಿರಂತರ ಚಟುವಟಿಕೆಗಳಿಗೆ ಬಂಡವಾಳದ ಲೋಕವು ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡುತ್ತದೆ. ಇವೆಲ್ಲದರ ಕೇಂದ್ರದಲ್ಲಿ ಮಹಿಳೆ ಇರುತ್ತಾಳೆ.

ಮಹಿಳೆಯನ್ನು ಕೋಮುವಾದಿ ಬಂಡವಾಳದ ಲೋಕವು ಸರಕೆಂದೇ ಪರಿಗಣಿಸುತ್ತದೆ.  ಆದ್ದರಿಂದಲೇ ವಿರೋಧಾತ್ಮಕ ನೆಲೆಯ ಅನೇಕ ಆಯಾಮಗಳಲ್ಲಿ ಅವಳನ್ನು ಅಣಿಗೊಳಿಸಿ ಬಳಸಿ ಲಾಭ ಮಾಡಿಕೊಳ್ಳುತ್ತದೆ. ಆದರೆ ಯಾವ ಆಯಾಮದಲ್ಲಿಯೂ ಸ್ತ್ರೀಯು ತನ್ನ ಅಸ್ಮಿತೆಯೊಂದಿಗೆ ಕಾಣಸಿಗುವುದಿಲ್ಲ. ಎಲ್ಲ ಕಡೆಯು ಅವಳು ಫ್ಲೆಗ್ಜಿಬಲ್ ಆದ ಬಳಕೆಯೋಗ್ಯವಾದ ವಸ್ತುವಾಗಿ ಮಾರ್ಪಡಿಸಲ್ಪಟ್ಟಿರುತ್ತಾಳೆ. ಅವಳು ವಿಜಲ್ ಹೊಡೆಯುವ ಕುಕ್ಕರ್‌ಗೂ ಗಡ್ಡ ಕೆರೆದುಕೊಳ್ಳುವ ಬ್ಲೇಡಿಗೂ ಅರೆನಗ್ನಳಾಗಿ ಜಾಹಿರಾತಾಗಬೇಕು. ಹಿಜಾಬ್ ಮತ್ತು ಬುರ್ಖಾ ಪ್ರಶ್ನೆ ಬಂದಾಗ ಎರಡೂ ಕಡೆಯ ಒತ್ತಡದಲ್ಲಿ ಅಪ್ಪಚ್ಚಿಯಾಗಿಯೂ ಅರಿವಿನಿಂದ ದೂರ ಉಳಿಯಬೇಕು. ಅವಳು ಕೋಮುದಂಗೆಯಾದಾಗ ಅತ್ಯಾಚಾರಕ್ಕೆ ದೌರ್ಜನ್ಯಕ್ಕೆ ಒಳಗಾಗಿಯೂ ಮೌನಿಯಾಗಿರಬೇಕು. ಮಾತಾಡಿದರೆ ಅವಳ ನಾಲಿಗೆ ಕತ್ತರಿಸಲಾಗುತ್ತದೆ. ಮತ್ತು ಕೊಲೆಗೈದು ಹೆತ್ತವರ ಅನುಮತಿ ಇಲ್ಲದೆ ರಾತೋರಾತ್ರಿ ದಹಿಸಲಾಗುತ್ತದೆ. ಅವಳು ದೇವರಿಗೆ ದಾಸಿಯಾಗಿಯೂ ಕುಟುಂಬಕ್ಕೂ ಸಮಾಜಕ್ಕೂ ಸೇವೆಗೈವ ಗುಲಾಮಳಾಗಿಯೂ ನಿತ್ಯ ಆಚರಣೆಯಲ್ಲಿ ತೊಡಗಿಕೊಳ್ಳಬೇಕು. ತನ್ನದೇ ಒಡಲ ಭ್ರೂಣವನ್ನು ಕಿತ್ತೆಸೆದೂ ಮಹಾತಾಯಿಗೆ ಒಡ್ಡಿಕೊಳ್ಳಲು ಮನಸು ಸಜ್ಜುಗೊಳಿಸಿಕೊಳ್ಳಬೇಕು. ಗೇಣು ಹೊಟ್ಟೆ ತುಂಬಿಕೊಳ್ಳಲು ಮಾರುದ್ದ ಮೈಯನ್ನು ಬಾಜಾರಿನಲ್ಲಿ ಬಿಕರಿಗಿಡಬೇಕು ಮತ್ತು ಅದೇ ಹೊತ್ತಿನಲ್ಲಿ ಸತಿ ಅನಸೂಯಾ ಸಂಪ್ರದಾಯದ ವಾಹಕಳಾಗಲು ಮುಂದೆ ಬರಬೇಕು. ಹೀಗೆ ಕೋಮುವಾದ ಮತ್ತು ಬಂಡವಾಳವಾದವು ಜೊತೆಜೊತೆಯಲ್ಲಿಯೇ ಮಹಿಳೆಯನ್ನು ಹೈರಾಣುಗೊಳಿಸುತ್ತ ಅವಳ ದುಡಿಮೆಯನ್ನು ಬಿಟ್ಟಿ ಪಡೆಯುತ ವಿಜ್ರಂಭಿಸುತ್ತದೆ. ಇಂತಹ ನಗ್ನವಾದ ನಿರ್ಲಜ್ಜವಾದ ವಿಜ್ರಂಭಣೆಗೆ ಸಾಕ್ಷಿಯಾಗಿ ಬಜೆಟ್ಟುಗಳು ಬಂದಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಬಜೆಟ್ಟುಗಳು ಜೆಂಡರ್ ಬಜೆಟ್ಟಿನ ಚಹರೆಯನ್ನು ಹೊಸಕಿ ಹಾಕಿದವು. ನಂತರ ಮಹಿಳಾ ಭಾಗಿದಾರಿಕೆಯನ್ನು ನಿರಾಕರಿಸಿ ಅವಳಿಗಾಗಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡವು. ಬೇಟಿ ಪಢಾವೊ ಬೇಟಿ ಬಚಾವೊ ಎಂದು ಹೇಳುತ್ತಲೇ ಅಕ್ಷರದ ಲೋಕದಿಂದಲೇ ಮಹಿಳಾ ಲೋಕವನ್ನು ಹೊರತಳ್ಳುವ ನೆಪ್ (ರಾಷ್ಟ್ರೀಯ ಶಿಕ್ಷಣ ನೀತಿ) ತರಲಾಯಿತು. ಹೀಗೆ ಕೋಮುವಾದವೆನ್ನುವುದು ಎಲ್ಲ ವಿಭಾಗಗಳಲ್ಲಿ ಹಾಸುಹೊಕ್ಕಾಗಿ ಈಗ ಕ್ರಮೇಣ ಫ್ಯಾಸಿಸ್ಟ್ ಸ್ವರೂಪದತ್ತ ಹೊರಳುತ್ತಿದೆ. ಇದರ ಮೊದಲ ಅಪಾಯಕಾರಿ ನೆರಳು ಬೀಳುವುದು ಮಹಿಳೆಯರ ಮೇಲೆ ಎಂಬ ಅರಿವು ಪಡೆದುಕೊಳ್ಳುವ ಜರೂರಿ ಇದೆ. ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹೊತ್ತಿನಲ್ಲಿ ರಾಜಕೀಯ ಅರಿವಿನೊಂದಿಗೆ ಸ್ತ್ರೀ ಅಸ್ಮಿತೆಯತ್ತ, ತನ್ಮೂಲಕ ಸಂಘಟಿತ ಶಕ್ತಿಯೊಂದಿಗೆ ಸಂಘರ್ಷದ ಹಾದಿಯತ್ತ ಮಹಿಳಾ ಲೋಕವು ಇಳಿಯಬೇಕಿದೆ.

Donate Janashakthi Media

Leave a Reply

Your email address will not be published. Required fields are marked *