ಮಹಿಳಾ ಲೋಕದೃಷ್ಟಿಯನ್ನು ಒಟ್ಟು ಸಮಾಜದ ಲೋಕದೃಷ್ಟಿಯಾಗಿಸಬೇಕು

ಹೆಣ್ಣು ರಾಜಕೀಯ ಕ್ಷೇತ್ರವಿರಲಿ, ಯಾವುದೇ ಕ್ಷೇತ್ರದಲ್ಲಿರುವುದೂ ಸಹಜ ಎಂಬ ಮನಸ್ಥಿತಿಗೆ ಪಲ್ಲಟವಾಗಬೇಕಿರುವುದು ಎಷ್ಟು ಮುಖ್ಯವೋ, ಅವಳು ಗಂಡಿನ ಜಾಗದಲ್ಲಿ ಕೂತುಕೊಳ್ಳುವುದಕ್ಕಿಂತಲೂ, ಅವಳದೇ ಆದ ಅಪೂರ್ವ ಲೋಕದೃಷ್ಟಿಯನ್ನು ಅವಳು ಹೊಂದಿದ್ದೂ ಅದನ್ನು ಒಟ್ಟು ಸಮಾಜದ ಲೋಕದೃಷ್ಟಿಯಾಗಿಸುವುದು ಅಷ್ಟೇ ಮುಖ್ಯ. ನಾವು ತೋರುವ ಹೊಸದಾರಿಯಲ್ಲಿ ನಮ್ಮ ನಾಯಕತ್ವ ಅತ್ಯಂತ ಸಹಜ ಸಂಗತಿ ಎಂಬ ಮನಸ್ಥಿತಿಯ ಪಲ್ಲಟ ಬೇಕಾಗಿದೆ. ಈ ಹೊಸದಾರಿ ಎಂದರೆ, ಮೊತ್ತ ಮೊದಲಿಗೆ ಭೂಮಿ ವಿಷರಹಿತವಾಗುವುದು, ರಾಜಕೀಯ ವಿಷರಹಿತವಾಗುವುದು, ಇವೆರಡರ ನಡುವೆ ಬದುಕುವ ಸಕಲ ಜೀವಿಗಳ ಸಾಮಾಜಿಕ ಬದುಕು ವಿಷರಹಿತವಾಗುವುದು. ಇದು ಹೆಣ್ಣು ರೂಪಿಸಿಕೊಂಡಿದ್ದ ದಾರಿ, ರೂಪಿಸಿಕೊಟ್ಟಿದ್ದ ದಾರಿ. ಮತ್ತು ಆ ದಾರಿಯನ್ನು ಮರು ಅನ್ವೇಷಣೆ ಮಾಡಿಕೊಂಡು ಸಾಮಾಜಿಕ, ರಾಜಕೀಯ ಪಲ್ಲಟ ಸಾಧಿಸುವುದು ನಮ್ಮ ಗುರಿ. 

-ಡಾ. ಸಬಿತಾ ಬನ್ನಾಡಿ

ಮಹಿಳಾ ಬದುಕಿನ ಪಲ್ಲಟಗಳು ಮಹಿಳೆಯ ನೆಲೆಯಿಂದಲೇ ಆಗುವುದು ಚರಿತ್ರೆಯಲ್ಲಿ ಬಹಳ ಅಪರೂಪ. ಅದು ಈಗಾಗಲೇ ಯಾರದೋ ಹಿಡಿತದಲ್ಲಿರುವ ಒಟ್ಟು ಜಾಗತಿಕ ವ್ಯವಸ್ಥೆಯ ಬದಲಾವಣೆಯ ಅಪ್ಪಳಿಸುವಿಕೆಯ ಅಲೆಯೊಂದಿಗೆ ತೇಲಿ ಇನ್ನೆಲ್ಲೋ ಬಂದು ನಿಲ್ಲುವುದೇ ಹೆಚ್ಚು. ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಿಕೊಳ್ಳಬಹುದು. ರಾಜಪ್ರಭುತ್ವವಿದ್ದಾಗ ಹೆಣ್ಣು ಹೆಚ್ಚೆಂದರೆ ರಾಣಿಯಾಗಿ ಅವನ ಅಂತಃಪುರದಲ್ಲಿ ಇರುವುದು ಅವಳಿಗೆ ಕೊಡಮಾಡಿದ ಅತಿ ಉಚ್ಛಸ್ಥಾನ. ಆದರೆ ಎಂದೂ ಅವಳಿಗೆ ರಾಣಿಯಾಗಿ ಸ್ವತಂತ್ರ ಆಡಳಿತ ಮಾಡುವ ಹಕ್ಕು ಇದ್ದಿರಲಿಲ್ಲ. (ಆಕಸ್ಮಿಕವಾಗಿ ರಾಜ ಸತ್ತು, ಗಂಡು ಮಕ್ಕಳಿಲ್ಲದಾಗ ಅವಳು ರಾಣಿಯಾಗಿ ವ್ಯವಹರಿಸಿದ್ದಿದೆ.) ಪ್ರಜಾಪ್ರಭುತ್ವ ಬಂದ ಮೇಲೂ ಜಗತ್ತಿನೆಲ್ಲೆಡೆ ಅರಂಭದಲ್ಲಿ ಹೆಣ್ಣಿಗೆ ಯಾವ ಪಾತ್ರವೂ ಇರಲಿಲ್ಲ. ಮಹಿಳಾ ಚಳುವಳಿ ಅಮೆರಿಕದಂತಹ ಮುಂದುವರಿದ ದೇಶಗಳಲ್ಲೂ ಮತದಾನದ ಹಕ್ಕಿಗಾಗಿ ಹೋರಾಡಬೇಕಾಯಿತು. ಗಮನಿಸಿ, ಚುನಾವಣೆಗೆ ನಿಲ್ಲುವ ಗಂಡಸರನ್ನು ಆಯ್ಕೆ ಮಾಡುವುದಕ್ಕಾಗಿ ಹಾಕುವ ಓಟಿನ ಹಕ್ಕನ್ನು ಕೇಳುವುದೂ ಆಗ ಕ್ರಾಂತಿಕಾರಕ ಸಂಗತಿ. ಇಲ್ಲೂ ಆಕೆ ಅದಾಗಲೇ ಇರುವ ವ್ಯವಸ್ಥೆಯೊಂದು ಹಲವು ಚಾರಿತ್ರಿಕ ಕಾರಣಗಳಿಗಾಗಿ ಬದಲಾದಾಗ, ಆ ಬದಲಾವಣೆಯ ಅಂಗವಾಗಿ ತನ್ನ ಪಾತ್ರವನ್ನು ತಾನೇ ಗುರುತಿಸಿಕೊಂಡು, ತನಗೆ ಈಗಾಗಲೇ ಇರುವ ಪಾತ್ರದ ಸ್ವರೂಪದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಾಳೆಯೇ ಹೊರತು ವ್ಯವಸ್ಥೆಯ ಬದಲಾವಣೆಯ ಸಂದರ್ಭದಲ್ಲಿ ಆ ಬದಲಾವಣೆಯ ಸ್ವರೂಪ ಹೇಗಿರಬೇಕು ಎಂದು ಹೆಣ್ಣನ್ನು ಕೇಳಿದ್ದೇ ಇಲ್ಲ.

B. Prabha (1933–2001) Indian artist

ಚರಿತ್ರೆಯಲ್ಲಿ ಆಗಿ ಹೋದ ಯಾವ್ಯಾವ ಆಂದೋಲನದಲ್ಲಿ ಹೆಣ್ಣೂ ಸಮಾನವಾಗಿ ಭಾಗಿಯಾಗಲು ಸಾಧ್ಯವಾಗಿದೆಯೋ, ಅಲ್ಲೆಲ್ಲಾ ಅದು ಹೆಚ್ಚು ಮಾನವೀಯ ನೆಲೆಯ ಒಳಗೊಳ್ಳುವಿಕೆಯ ಮತ್ತು ಅಹಿಂಸೆಯಿಂದ ಮುಂಚಲನೆ ಪಡೆದುಕೊಳ್ಳಲು ಪೂರಕವಾದ ಚಲನೆಯಾಗಿ ಮುಂದಡಿ ಇಟ್ಟಿದ್ದನ್ನು ನೋಡಬಹುದು. ಅದು ಭಕ್ತಿ ಆಂದೋಲನವಿರಲಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧಿ ನಾಯಕತ್ವದ ಸಂದರ್ಭದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆ ಇರಬಹುದು, ದಲಿತರನ್ನು ಒಗ್ಗೂಡಿಸಿ ಹೊಸ ಎಚ್ಚರ ಮೂಡಿಸುವ ಅಂಬೇಡ್ಕರ್ ನಾಯಕತ್ವದ ಸಂದರ್ಭದ ಹೆಣ್ಣು ಮಕ್ಕಳ ಸಾವಿರ ಸಾವಿರ ಸಂಖ್ಯೆಯ ಭಾಗವಹಿಸುವಿಕೆ ಇರಬಹುದು. ಈ ಭಾಗವಹಿಸುವಿಕೆಯೂ ಕೂಡ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ನಂತಹ ಸೂಕ್ಷ್ಮ ಮಹಿಳಾಪರ ಕಾಯ್ದೆ ರೂಪಿಸುವಲ್ಲಿ ಪೂರಕವಾಗಿ ಕೆಲಸ ಮಾಡಿರುತ್ತದೆ. ಅಂದರೆ ಮಹಿಳಾ ಬದುಕಿನ ಪಲ್ಲಟ ಎಂಬುದು ಹೆಣ್ಣು ಪೂರ್ಣ ಪ್ರಮಾಣದಲ್ಲಿ ಭಾಗಿಯಾದಾಗ ಆಗುವುದುಕ್ಕೂ, ಮಹಿಳೆಯನ್ನು ಮುಸುಕಿನಲ್ಲಿಟ್ಟು ಅವಳ ಪರವಾಗಿ ತಾನೇ, ಅವಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸುತ್ತೇನೆ ಎಂಬ ಪುರುಷಪ್ರಧಾನ ಅಹಂಕಾರವು ತಂದು ಸುರಿಯುವ ಪಲ್ಲಟಕ್ಕೂ ಮೂಲಭೂತ ವ್ಯತ್ಯಾಸವಿದೆ. ಎರಡರಲ್ಲೂ ಪರಿಣಾಮ ಎದುರಿಸುವಳು ಹೆಣ್ಣೇ ಆದರೂ ಎರಡನೆಯದು ಹಿಂಸೆಯ ಹೊಸ ವಿಧಾನಗಳಾಗಿ ಮಾತ್ರ ಅವಳ ಬದುಕಿನಲ್ಲಿ ಬದಲಾವಣೆ ತರುತ್ತವೆ. ಮತ್ತಿದು ಅವಳ ಬದುಕಿನಲ್ಲಿ ಇತ್ಯಾತ್ಮಕವಾದ ನೆಲೆಯಿಂದ ಅಮೂಲಾಗ್ರ ಪಲ್ಲಟಗಳನ್ನು ಮಾಡಿರುವುದಿಲ್ಲ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಒಂದು ಅಂಶವನ್ನು ಗಮನಿಸಬೇಕು. ಹೆಣ್ಣಿನ ಬದುಕಿನ ನಿರಂತರ ಏಕತಾನತೆಯೆಂಬುದು ಎಂದಿಗೂ ಬದಲಾಗಿಲ್ಲ. ಅದು ಪ್ರತಿನಿತ್ಯವೂ ಬಡಿಯುವ ರೊಟ್ಟಿಯೇ ಆಗಿರಲಿ, ಕತ್ತು ಬಗ್ಗಿಸಿ ಹೊಲಿವ ಗಾರ್ಮೆಂಟ್ ಕೆಲಸವೇ ಆಗಿರಲಿ ಈ ಏಕತಾನತೆ ಎಂಬುದೇ ಅವಳ ಚೈತನ್ಯವನ್ನು ಕುಗ್ಗಿಸುವ ಅತಿ ಸುಲಭದ, ಕಣ್ಣಿಗೆ ಕಾಣಿಸದ ಜೀವಾವಧಿ ಶಿಕ್ಷೆಯಂತದು. ಇದರ ನಡುವೆ ಆಕೆ ಚಿಂತನೆ ಮಾಡುವಂತೆ ಮಾಡುವ, ಮನಸ್ಸು ಅರಳಿಸಿಕೊಳ್ಳುವ ಅವಕಾಶವೇ ಬಹಳ ಕಡಿಮೆ ಇದ್ದಾಗಲೂ ಅವಳು ಆ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾಳೆ. ಮತ್ತು ಇನ್ನೊಂದೆಡೆಯಿಂದ ಅವಳ ದಿಕ್ಕು ತಪ್ಪಿಸುವ, ಬಗ್ಗು ಬಡಿಯುವ ಪ್ರಯತ್ನವೂ ನಡೆಯುತ್ತಲೇ ಬಂದಿದೆ. ಇದುವರೆಗೂ ಅವಳ ಸಾಮಾಜಿಕ, ರಾಜಕೀಯ ಪಾಲ್ಗೊಳ್ಳುವಿಕೆ ಅದೃಷ್ಟ, ಅಭಯ ಮತ್ತು ಒತ್ತಾಯದ ಸ್ಥಿತಿಯಲ್ಲೇ ಇದೆ. ಅದು ಆ ಹಂತದಿಂದ ಸಹಜ, ಸಾಧ್ಯ ಮತ್ತು ಇಚ್ಛೆಯನುಸಾರ ಎಂದಾಗಿ ಬದಲಾಗಬೇಕಿದೆ.

ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳನ್ನು ಅವಲೋಕಿಸುವಾಗ ಗಮನಿಸಬೇಕಾದ ಸಂಗತಿಯೆಂದರೆ, ಇವೆರಡೂ ಪರಸ್ಪರ ಬೇರೆಯಲ್ಲ ಎಂಬುದು. ರಾಜಕೀಯ ನೋಟಕ್ರಮವೊಂದು ಸಾಮಾಜಿಕತೆಯನ್ನು ರೂಪಿಸುತ್ತದೆ. ಸಾಮಾಜಿಕತೆಯ ನೆಲೆಯೇ ಹೆಣ್ಣಿನ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸುತ್ತದೆ. ಸದ್ಯದ ಸ್ಥಿತಿಯಲ್ಲಿ ಹೆಣ್ಣಿನ ರಾಜಕೀಯ ಪಾಲ್ಗೊಳ್ಳುವಿಕೆಯ ನಿರ್ವಾತ ಅಥವಾ ನಿರಾಶಾದಾಯಕ ಸ್ಥಿತಿಗೂ ಇನ್ನೂ ಖಚಿತ ರೂಪ ಪಡೆದು ಅನುಭವದ ಭಾಗವಾಗದ ಅವಳ ಸಾಮಾಜಿಕತೆಗೂ ಪರಸ್ಪರ ಸಂಬಂಧ ಇದೆ. ಅನುಭವದ ಭಾಗವಾಗದ ಸಾಮಾಜಿಕತೆ ಎಂದರೆ, ನಮ್ಮ ಪಠ್ಯಗಳಲ್ಲಿ, ಟಿ.ವಿ ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ರೂಪಿತವಾಗಿರುವ ಸಾಮಾಜಿಕತೆಯು ಒಂದು ತೆಳು, ಟೊಳ್ಳು ಪದರಗಳಲ್ಲಿದ್ದು ಅವಳ ವಾಸ್ತವ ಚಿತ್ರಣ ಸರಿಯಾದ ರೀತಿಯಲ್ಲಿ ಪ್ರತಿನಿಧೀಕರಣಗೊಂಡಿಲ್ಲ ಅನ್ನುವುದು. ಎಷ್ಟೋ ಬಾರಿ ನಮ್ಮ ಕಿವಿಗಳಿಗೆ ಬೀಳುವ ಮಾತೆಂದರೆ, ‘ಈಗೇನು, ಎಲ್ಲಾ ಅವಕಾಶಗಳೂ ಅವಳಿಗೆ ಸಮಾನವಾಗಿ ಸಿಗುತ್ತಿದೆ. ಅವಳೇ ಸರಿಯಾಗಿ ಉಪಯೋಗಿಸಿಕೊಳ್ಳಬೇಕು’ಎನ್ನುವುದು. ಮೇಲ್ನೋಟಕ್ಕೆ ಇದು ಹೌದು ಅಂತ ಅನ್ನಿಸಿಬಿಡಬಹುದು. ಆದರೆ ಎಚ್ಚೆತ್ತ ನೋಟದಲ್ಲಿ ನೋಡಿದಾಗ ಪರಿಸ್ಥಿತಿಯ ಇನ್ನೊಂದು ಮಗ್ಗುಲು ಕಾಣಿಸಿಕೊಳ್ಳುತ್ತದೆ. ಅದು ಹಲವು ಮರೆ ಮೋಸಗಳಲ್ಲಿ ಅಡಗಿಕೊಂಡಿರುವುದು ತೆರೆದುಕೊಳ್ಳುತ್ತದೆ. ಅವಳಿಗೆ ಸಿಕ್ಕುತ್ತಿರುವ ಹಲವು ಅವಕಾಶಗಳಲ್ಲಿ ಅವಳು ಬಿಡುವಿಲ್ಲದೆ ದುಡಿಯುತ್ತಿರುವುದೇನೋ ನಿಜ. ಆದರೆ ಅವಳ ದುಡಿಮೆಯನ್ನು ವ್ಯಯಿಸುವ, ಯೋಜಿಸುವ ಆಯ್ಕೆ ಅವಳಿಗಿರುವುದಿಲ್ಲ ಅಷ್ಟೆ.

ಕೆಲವು ಕಣ್ಣಿಗೆ ಕಾಣಿಸುವ ಸಂಗತಿಗಳನ್ನು ಮೊದಲು ಗಮನಿಸೋಣ. ಈಚಿನ ಮೂವತ್ತು ನಲವತ್ತು ವರ್ಷಗಳಲ್ಲಿ ಕೆಲವು ಅವಕಾಶಗಳು, ಸ್ಥಿತಿಗಳು ಖಂಡಿತಾ ಬದಲಾಗಿವೆ. ತಳವರ್ಗ, ಜಾತಿಯ ಹೆಣ್ಣುಮಕ್ಕಳ ‘ದುಡಿಮೆಯ ಘನತೆ’ (ಡಿಗ್ನಿಟಿ ಆಫ್ ಲೇಬರ್)ಯಲ್ಲಿ ಬದಲಾವಣೆ ಇದೆ. ಹಿಂದೆ ಇವರು ಮೇಲ್ಜಾತಿ ಜನರ ಒಕ್ಕಲುಗಳೋ, ಕೂಲಿಗಳೋ ಆಗಿದ್ದಾಗ ‘ಯಜಮಾನ’ನ ಕಣ್ಣಿನ ಮೊನೆಗೆ ಸಿಕ್ಕದೇ ಮಾನ ಉಳಿಸಿಕೊಳ್ಳೋದೇ ಕಷ್ಟ ಇತ್ತು. ಈಗ ಕೆಲಸದ ಸ್ಥಳಗಳಲ್ಲಿ ಕೆಲವು ಆಯ್ಕೆ ಸಿಗುವುದರಿಂದ ಸ್ವಲ್ಪಮಟ್ಟಿಗೆ ಬಚಾವಾಗಿದ್ದಾರೆ. ಹಾಗೆಯೇ ಮೇಲ್ಜಾತಿ ಹೆಣ್ಣುಮಕ್ಕಳೂ ಒಂದು ಹಂತದ ನಿಟ್ಟುಸಿರು ಬಿಡುತ್ತಾರೆ.  ಹಿರಿಯ ಹೆಂಗಸರು ಕಿರಿಯರಿಗೆ, ‘ನಿಮ್ಮ ಕಾಲವೇ ಚೆನ್ನಾಗಿದೆ. ನೀವೀಗ ಎಜುಕೇಶನ್ ಪಡೆದಿದ್ದೀರಿ, ದುಡಿತಿದೀರಿ, ಎಲ್ಲದಕ್ಕೂ ಗಂಡನ ಕೈ ಕಾಯ ಬೇಕಿಲ್ಲ’ಎಂದು ನಿಟ್ಟುಸಿರು ಬಿಡುತ್ತಾರೆ. ಹಾಗೆಯೇ ನಮ್ಮ ಟ್ರಾನ್ಸ್ಜೆಂಡರ್ ಸಹೋದರಿಯರಿಯರಿಗೆ ಸಣ್ಣದೊಂದು ಸ್ವೀಕಾರಭಾವ ಸಮಾಜದಲ್ಲಿ ಕಾಣಿಸುತ್ತಿದೆ. ಹಲವು ಸಾರ್ವಜನಿಕ ಕ್ಷೇತ್ರದಲ್ಲಿ ಹೆಂಗಸರ ಸ್ಥಿತಿ ಸುಧಾರಿಸಿದೆ. ಹಿಂದಿನ ಸಿನಿಮಾ ನಟಿಯರು ಮದುವೆ ಮರೆಮಾಚಬೇಕಿತ್ತು. ಪ್ರಸಿದ್ಧಿಯ ಉತ್ತುಂಗಕ್ಕೆ ಏರಿದ ಮೇಲೂ ಕೈಯಲ್ಲಿ ಕಾಸಿಲ್ಲದೆ, ವೈಯಕ್ತಿಕ ಬದುಕು ಮೂರಾಬಟ್ಟೆಯಾಗಿ ಆತ್ಮಹತ್ಯೆಗೆ ಶರಣಾಗುವುದಿತ್ತು. ಇಂದು ತಮ್ಮನ್ನು ನಿಭಾಯಿಸಿಕೊಳ್ಳುವ ವಿದ್ಯೆ ಕಲಿತಿದ್ದಾರೆ. ಹಾಗೆಯೇ ಇಂದು ಪೈಲಟ್‌ನಿಂದ ಹಿಡಿದು ಉಪಗ್ರಹ ಉಡಾವಣೆ ತನಕ ತನ್ನ ಆಸಕ್ತಿಯ ಕ್ಷೇತ್ರಕ್ಕೆ ನುಗ್ಗಬಹುದಾದ ಅವಕಾಶ ಕೆಲವರಿಗಾದರೂ ಇದೆ. ಇಂದು ಹೆಣ್ಣು ಒಬ್ಬಳೇ ದೇಶ ವಿದೇಶ ಸುತ್ತಬಹುದು. ಹೀಗೇ. ಇವೆಲ್ಲವೂ ಕೇಳುವುದಕ್ಕೆ ಬಹಳ ಖುಷಿ ಕೊಡುವ ಸಂಗತಿಗಳು. ಆದರೆ ನಮ್ಮ ಶಿಕ್ಷಣ, ಮನರಂಜನಾ ಮಾಧ್ಯಮ ಮುಂತಾದವುಗಳೆಲ್ಲ ಎಷ್ಟು ಚೆನ್ನಾಗಿ ಪಿತೃಪ್ರಧಾನತೆಯನ್ನು ನಮ್ಮ ಧಮನಿಗಳಲ್ಲಿ ತುಂಬಿದ್ದಾವೆಂದರೆ, ಈಗ ನಾವೇ ಅವರ ಏಜೆಂಟ್‌ಗಳಂತೆ ವರ್ತಿಸತೊಡಗಿದ್ದೀವಿ. ಇದು ಇಂದಿನ ಅತಿದೊಡ್ಡ ಸವಾಲು.

Day and Night – Arpana caur

ತಮ್ಮ ಹಕ್ಕುಗಳಿಗಾಗಿ ಹೋರಾಡಿ, ಬಲಿದಾನ ಆದ ಮಹಿಳೆಯರಿಗಾಗಿ ಮಾಡುವ, ಮಾಡಬೇಕಾದ ಮಹಿಳಾ ದಿನಾಚರಣೆಯು ಇಂದು ಸೆಲೆಬ್ರೇಶನ್ ಆಗಿ ಬಂಡವಾಳಶಾಹಿಯ ಕೈವಶವಾಗಿ, ಜಿಲ್ಲಾಡಳಿತದ ಕಾರ್ಯಕ್ರಮಗಳ ಭಾಗವಾಗಿ ತಮ್ಮ ಹಿತಾಸಕ್ತಿಗಳನ್ನು ಪೂರೈಸಲು ಸಿಗುವ ‘ಪ್ರೇಕ್ಷಕರ ತಂಗುದಾಣ’ವಾಗಿ ಬದಲಾಗಿದೆ. ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಕನಿಷ್ಠ ಬೇಡಿಕೆಗಳಿಗೆ ಹಗಲೂ, ರಾತ್ರಿ ಹೋರಾಡಿ, ದೂಷಿಸಿಕೊಂಡು, ಹೊಡೆಸಿಕೊಂಡು, ಜೈಲುಸೇರಿ ಕೆಲಸ ಮಾಡುವವರು ಯಾರೋ. ತಮ್ಮ ಅಧಿಕಾರದ ಮೂಗಿನಡಿ ಮಾಡಿಸುವ ಕಾರ್ಯಕ್ರಮಗಳಿಗೆ ರಾಜಕೀಯ ಸಮಾವೇಶಗಳಿಗೆ- ತಾವೆಂದೂ ಅವರಿಗಾಗಿ ಕೆಲಸ ಮಾಡದೆಯೇ- ಅವರು ಕಡ್ಡಾಯವಾಗಿ ಮೆರವಣಿಗೆ ಸಭೆಗಳಿಗೆ ‘ಸಂಖ್ಯೆ’ಗಳಾಗುವಂತೆ – ಆದೇಶ ಮಾಡುವವರು ಯಾರೋ ಅನ್ನುವ ಸ್ಥಿತಿ ನಮ್ಮ ಕಣ್ಣ ಮುಂದಿದೆ. ಅಂದರೆ, ಈ ‘ಬಳಸುವಿಕೆಗೆ’ ಇವತ್ತಿಗೂ ಸುಲಭವಾಗಿ ಸಿಕ್ಕುತ್ತಿರುವವಳು ಮಹಿಳೆಯೇ.

ಹಾಗಾದರೆ ಸವಾಲು ಎಲ್ಲಿದೆ? ಸವಾಲು ನಾವು ಪ್ರಾತಿನಿಧ್ಯವನ್ನಷ್ಟೇ ಸಾಧನೆ ಎಂದು ಭಾವಿಸಿದ್ದರಲ್ಲಿದೆ. ನಾವೀಗ ಎಲ್ಲೆಡೆ ಇದ್ದೇವೆ. ವ್ಯೋಮಾಕಾಶಗಳಲ್ಲಿ, ರಸ್ತೆ ರಸ್ತೆಗಳಲ್ಲಿ ನಾವು ಗಾಡಿ ಚಲಾವಣೆ ಮಾಡುತ್ತಿದ್ದೇವೆ. ಆದರೆ ನಾವೀಗ ಗಂಡಿನ ಬದಲಿಗೆ, ಅವನ ಜಾಗದಲ್ಲಿ, ಅವನೇ ಹಾಕಿಕೊಟ್ಟ ಪಥದಲ್ಲಿ ಚಲಾವಣೆ ಮಾಡುತ್ತಿದ್ದೇವೆ. ಹೀಗೆ ಮಾಡುವಾಗ ನಮ್ಮತನವನ್ನು ಬಿಟ್ಟುಕೊಟ್ಟು, ಅವನತನಕ್ಕೇ ಒಪ್ಪಿಗೆ ಕೊಟ್ಟು ಮುನ್ನಡೆದಿದ್ದೇವೆ. ಇದನ್ನು ಉದಾಹರಣೆಯೊಂದಿಗೆ ಗಮನಿಸೋಣ. ಮಂಡ್ಯದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಎರಡು ಪ್ರಸಂಗಗಳನ್ನು ನೆನಪಿಸಿಕೊಳ್ಳೋಣ. ಒಂದನೆಯದು ಇಲ್ಲಿ ನಡೆದು ಹೋದ ಅವಮರ್ಯಾದಾ ಹತ್ಯೆಗೆ ಸಂಬಂಧಿಸಿದ್ದು. ಒಂದೆಡೆಯಿಂದ ‘ನಾವೆಲ್ಲರೂ ಹಿಂದೂ ನಾವೆಲ್ಲರೂ ಒಂದು’ಎನ್ನುತ್ತಾ, ಅನ್ಯ ಕೋಮಿನ ವಿರುದ್ಧ ಹಿಂದೂಗಳನ್ನು ಧ್ರುವೀಕರಣ ಮಾಡಲಾಗುತ್ತದೆ. ಇನ್ನೊಂದೆಡೆಯಿಂದ ಹಿಂದೂ ಧರ್ಮಕ್ಕೆ ಸೇರಿರುವ ಬೇರೆ ಬೇರೆ ಜಾತಿಯ ಹುಡುಗಿಯನ್ನೋ, ಹುಡುಗನನ್ನೋ ನಮ್ಮ ಮಕ್ಕಳು ಪ್ರೀತಿಸಿ ಮದುವೆ ಆಗ್ತಾರೆ ಅಂದರೆ ಅವರನ್ನು ಹೊಡೆದು ಸಾಯಿಸುವ ಮಟ್ಟಕ್ಕೆ ಬಂದಿದೀವಿ. ಈ ಕೌರ್ಯ, ಅಮಾನುಷತೆ, ಮೇಲುರಿಮೆ, ಗಂಡಾಳ್ವಿಕೆಯ ಕೊಡುಗೆಗಳು. ಇವುಗಳು ಮೌಲ್ಯವಾಗುವುದರ ವಿರುದ್ಧ ನೆಲೆಯಲ್ಲಿ ನಾವೀಗ ತುರ್ತಾಗಿ ತಾಯಿಗುಣವನ್ನು ಮುನ್ನೆಲೆಗೆ ತರಬೇಕಾಗಿದೆ. ಇದರ ಕೊರತೆಯಿಂದಾಗಿಯೇ ಈ ಐವತ್ತು ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳು- ಅದರಲ್ಲೂ ದಲಿತ/ ದಮನಿತರ ಮೇಲೆ ಅತಿಹೆಚ್ಚು – ವೇಗ ಪಡೀತಿದೆ.  ಈ ಪ್ರಕರಣಗಳ ಹಿಂದೆ-ಮುಂದೆ ಯಾರಿದ್ದಾರೆ ಎಂಬ ಆಧಾರದಲ್ಲಿ ಸುದ್ದಿ ಮಾಧ್ಯಮಗಳು ತಾರತಮ್ಯ ಮಾಡಿ ಪ್ರಸಾರ ಮಾಡತೊಡಗಿವೆಯೇ ಹೊರತು ಅತ್ಯಾಚಾರವೆಂಬ ಮನಸ್ಥಿತಿಯೇ ನಾಶವಾಗಬೇಕೆಂಬ ಚಿಂತನೆ ಮುನ್ನೆಲೆಗೆ ಬರುತ್ತಿಲ್ಲ. ಅಷ್ಟೇ ಅಲ್ಲ, ಹೆಣ್ಣುಮಕ್ಕಳೇ ಜಾಣ ಮೌನ, ಆಯ್ಕೆಗಳ ರಾಜಕಾರಣವನ್ನು ರೂಢಿಸಿಕೊಳ್ಳತೊಡಗಿದ್ದಾರೆ. ಅಂದರೆ, ನಮ್ಮ ಕೈಗೇ ಬಡಿಗೆ ಕೊಟ್ಟು ನಮಗೇ ಹೊಡೆತ ಹಾಕುವಂತೆ ಮಾಡಲು ಗಂಡಾಳ್ವಿಕೆಯು ಯಶಸ್ಸು ಕಾಣತೊಡಗಿದೆ.

ಇನ್ನು ರಾಜಕೀಯ ಕ್ಷೇತ್ರವೂ ಅಷ್ಟೇ. ಇಲ್ಲಿ ಕೇವಲ ಪ್ರಾತಿನಿಧ್ಯ ಪಡೆಯುವುದೆಂದರೆ, ಅದು ಗಂಡಾಳ್ವಿಕೆಯ ವರ್ಗಾವಣೆಯಷ್ಟೇ ಆಗಿ ಉಳಿಯುತ್ತದೆ. ಹೀಗಾದಲ್ಲಿ ಹೋರಾಟಗಳು ನೆಲಕಚ್ಚಿ ಬಿಡುತ್ತವೆ. ಮಂಡ್ಯದಲ್ಲಿ ಸಂಸತ್ ಚುನಾವಣೆ ಸಂದರ್ಭದಲ್ಲಿ ಸುಮಲತಾ ಅವರು ಕಣಕ್ಕಿಳಿದ ಸಂದರ್ಭದಲ್ಲಿ ಹೇಗೆಲ್ಲಾ ನಾಲಿಗೆಯನ್ನು ಹರಿಬಿಡಲಾಯಿತು ಎಂಬುದನ್ನು ನೋಡಿದ್ದೀವಿ. ಆಕೆ ಹೆಣ್ಣು ಮಗಳೆಂಬ ಕಾರಣಕ್ಕೆ ಜಾತಿಯ ಪ್ರಶ್ನೆ, ಐಡೆಂಟಿಟಿಯ ಪ್ರಶ್ನೆ ಮುನ್ನೆಲೆಗೆ ಬಂತು. ಹೀಗೆಲ್ಲಾ ನಾಲಿಗೆ ಹರಿಬಿಟ್ಟವರದ್ದೇನೋ ಕೊಳಕು ಮನಸ್ಥಿತಿಯೆಂಬುದರಲ್ಲಿ ಸಂಶಯವಿಲ್ಲ. ಆದರೆ, ಆ ಮಾತುಗಳಿಗೆ ಉತ್ತರವಾಗಿ ಬಂದ ಮನಸ್ಥಿತಿ ಯಾವರೀತಿಯದು? ಮೇಲ್ನೋಟಕ್ಕೆ ಆಕೆಯ ಪರ ಎಂಬಂತೆ ಕಂಡರೂ, ಹೇಗೆ ತಿದ್ದಿತೀಡಿ ಇಟ್ಟ ಸಾಮಾಜಿಕತೆಯು ಹೆಣ್ಣನ್ನು ಅಧೀನ ಸ್ಥಿತಿಯಲ್ಲೇ ಪರಿಗಣಿಸುತ್ತದೆ ಎಂಬುದನ್ನು ಗಮನಿಸಬೇಕು. ಅದೂ ಈ ಸಂದರ್ಭದಲ್ಲಿ ಅತಿ ಜನಪ್ರಿಯರೆನಿಸಿದ ನಾಯಕ ನಟರು ಸುಮಲತಾ ಪರ ಪ್ರಚಾರ ಮಾಡಲು ಬಂದಿದ್ದರು. ಅವರಿಗೆ ತೋಚಿದ ಉತ್ತರ ಎಷ್ಟು ಅಸಹಾಯಕವಾಗಿದೆ ನೋಡಿ. ‘ಹೆಣ್ಣು ಮದುವೆ ಆದ ಮೇಲೆ ಯಾರ ಜಾತಿಗೆ ಸೇರಿಕೊಳ್ತಾರಪ್ಪಾ?’ ಎಂದು ಇವರು ಮರುಪ್ರಶ್ನಿಸಿದರೇ ಹೊರತು, ಮರು ಪ್ರಶ್ನೆಯ ಸ್ವರೂಪ ಬೇರೆಯಾಗಬಹುದಿತ್ತು ಎಂಬುದು ಯಾರಿಗೂ ಹೊಳೆಯಲಿಲ್ಲ. ಇದು ಹೆಣ್ಣಿನ ಸಾಮಾಜಿಕ ಸ್ಥಿತಿಯು ಇಂದಿಗೂ ಗಂಡಿನ ನೆರಳಿನಲ್ಲೇ ನಿರೂಪಿತವಾಗುವುದಕ್ಕೆ ನಿದರ್ಶನ. ನಮ್ಮ ಪ್ರಧಾನಿಗಳು ತಮ್ಮದಲ್ಲದ ವಾರಣಾಸಿಯಲ್ಲಿ ನಿಲ್ಲಬಹುದಾದರೆ, ನಮ್ಮ ಮಾಜಿ ಮುಖ್ಯಮಂತ್ರಿಗಳು ದೂರದ ಬಾದಾಮಿಯಲ್ಲಿ ನಿಲ್ಲಬಹುದಾದರೆ, ರಾಹುಲ್ ಗಾಂಧಿಯವರು ಕೇರಳದ ವಯನಾಡ್‌ನಲ್ಲಿ ಚುನಾವಣೆಗೆ ನಿಲ್ಲಬಹುದಾದರೆ, ಸುಮಲತಾ ಯಾಕೆ ಮಂಡ್ಯದಲ್ಲಿ ನಿಲ್ಲಬಾರದು? ಆಕೆಗೂ ಒಂದು ಸ್ವತಂತ್ರ ವ್ಯಕ್ತಿತ್ವ ಮತ್ತು ಭಾರತದಲ್ಲಿ ಎಲ್ಲಿಯಾದರೂ ಚುನಾವಣೆಗೆ ನಿಲ್ಲಬಹುದಾದ ಆಯ್ಕೆ ಮತ್ತು ಸ್ವಾತಂತ್ರ್ಯ ಇದೆ ಎಂಬುದನ್ನು ಜನರಿಗೆ ಮನಗಾಣಿಸಲು ಯಾಕೆ ಸಾಧ್ಯವಾಗದೇ ಹೋಯಿತು? ನಮಗೇ ಆ ಬಗ್ಗೆ ಒಂದು ನಂಬಿಕೆ ಇಲ್ಲದೇ ಹೋದರೆ ನಾವು ಉತ್ತರಿಸಲು ತಡವರಿಸುತ್ತೇವೆ.

ಹೆಣ್ಣು ರಾಜಕೀಯ ಕ್ಷೇತ್ರವಿರಲಿ, ಯಾವುದೇ ಕ್ಷೇತ್ರದಲ್ಲಿರುವುದೂ ಸಹಜ ಎಂಬ ಮನಸ್ಥಿತಿಗೆ ಪಲ್ಲಟವಾಗಬೇಕಿರುವುದು ಎಷ್ಟು ಮುಖ್ಯವೋ, ಅವಳು ಗಂಡಿನ ಜಾಗದಲ್ಲಿ ಕೂತುಕೊಳ್ಳುವುದಕ್ಕಿಂತಲೂ, ಅವಳದೇ ಆದ ಅಪೂರ್ವ ಲೋಕದೃಷ್ಟಿಯನ್ನು ಅವಳು ಹೊಂದಿದ್ದೂ ಅದನ್ನು ಒಟ್ಟು ಸಮಾಜದ ಲೋಕದೃಷ್ಟಿಯಾಗಿಸುವುದು ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿ ವಂದನಾ ಶಿವ ಹೇಳುವ, ಗ್ರ್ಯಾಂಡ್ ಮದರ್ಸ್ ಯುನಿವರ್ಸಿಟಿಯ ವಿಸ್ತೃತ ನೆಲೆಗಳ ಹುಡುಕಾಟ ಇಂದಿನ ತುರ್ತು. ಕೃಷಿ ಹೆಣ್ಣಿನ ಕೈಯಲ್ಲಿರುವತನಕವೂ ಆಕೆ ಬೀಜ ಸಂರಕ್ಷಣೆ ಮಾಡುತ್ತಾ ಬಂದಿದ್ದಾಳೆ. ಮಾತ್ರವಲ್ಲ, ಅವಳ ಕೈಯಲ್ಲಿ ಕೃಷಿ ಇರುವತನಕವೂ ಯಾವುದೇ ರೈತರ ಆತ್ಮಹತ್ಯೆ ಆಗಿರಲಿಲ್ಲ, ಆಹಾರ ಹೆಣ್ಣಿನ ಕೈಯಲ್ಲಿ ಇರುವ ತನಕವೂ ಜಂಕ್ ಫುಡ್ ಇರಲಿಲ್ಲ ಅಂತ ಅವರು ಹೇಳುತ್ತಾರೆ. ಅಂದರೆ, ಆ ಮೂಲಕ ಹೆಣ್ಣು ಗಂಡನ್ನೂ ಕಾಪಾಡಿದ್ದಾಳೆ. ಗಂಡಿನ ಕೈಗೆ ಕೃಷಿ ಹೋಗುತ್ತಿದ್ದಂತೆಯೇ, ಅವನು ಅದನ್ನು ಕೃಷಿ ವಿಶ್ವವಿದ್ಯಾಲಯ ಮಾಡಿ, ಬಂಡವಾಳಶಾಹಿಯ ಕಂಪೆನಿ ಮಾಡಿ- ಭೂಮಿಯನ್ನೂ, ಕೃಷಿಯನ್ನೂ, ರೈತರನ್ನೂ ನಾಶಮಾಡ ಹೊರಟಿರುವುದು ನಮ್ಮೆಲ್ಲಾ ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳ ರೂಪಕವಾಗಿದೆ. ಹೀಗಾಗಿ, ಆ ಆತ್ಮಹತ್ಯೆಯ ದಾರಿಯಲ್ಲಿ ನಮಗೆ ಪ್ರಾತಿನಿಧ್ಯ ಬೇಕಿಲ್ಲ. ಆ ಆತ್ಮಹತ್ಯೆಯ ಕ್ಯೂನಲ್ಲಿ ನಿಲ್ಲಲು ಜಗಳ ಬೇಕಿಲ್ಲ. ನಾವು ತೋರುವ ಹೊಸದಾರಿಯಲ್ಲಿ ನಮ್ಮ ನಾಯಕತ್ವ ಅತ್ಯಂತ ಸಹಜ ಸಂಗತಿ ಎಂಬ ಮನಸ್ಥಿತಿಯ ಪಲ್ಲಟ ಬೇಕಾಗಿದೆ. ಈ ಹೊಸದಾರಿ ಎಂದರೆ, ಮೊತ್ತ ಮೊದಲಿಗೆ ಭೂಮಿ ವಿಷರಹಿತವಾಗುವುದು, ರಾಜಕೀಯ ವಿಷರಹಿತವಾಗುವುದು, ಇವೆರಡರ ನಡುವೆ ಬದುಕುವ ಸಕಲ ಜೀವಿಗಳ ಸಾಮಾಜಿಕ ಬದುಕು ವಿಷರಹಿತವಾಗುವುದು. ಇದು ಹೆಣ್ಣು ರೂಪಿಸಿಕೊಂಡಿದ್ದ ದಾರಿ, ರೂಪಿಸಿಕೊಟ್ಟಿದ್ದ ದಾರಿ. ಮತ್ತು ಆ ದಾರಿಯನ್ನು ಮರು ಅನ್ವೇಷಣೆ ಮಾಡಿಕೊಂಡು ಸಾಮಾಜಿಕ, ರಾಜಕೀಯ ಪಲ್ಲಟ ಸಾಧಿಸುವುದು ನಮ್ಮ ಗುರಿ.

 

Donate Janashakthi Media

Leave a Reply

Your email address will not be published. Required fields are marked *