ಈ ಮೂರು ಕೃಷಿ ಕಾನೂನುಗಳು ಮಹಿಳೆಯರ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂಬ ಕಾರಣಕ್ಕೆ ಅನೇಕ ಮಹಿಳಾ ರೈತರು ಮತ್ತು ಸಂಘಟನೆಗಳು ಕೂಡ ಆಂದೋಲನದಲ್ಲಿ ಸೇರಿಕೊಂಡಿವೆ. ಗ್ರಾಹಕರಾಗಿ ಅಥವಾ ರೈತರಾಗಿ ಮಾತ್ರವಲ್ಲದೆ ಸಂಬಂಧಿತ ಕ್ಷೇತ್ರಗಳಲ್ಲಿನ ಕಾರ್ಮಿಕರು / ಉತ್ಪಾದಕರಾಗಿಯೂ ಮಹಿಳೆಯರ ಮೇಲೆ ಈ ಕರಾಳ ಕಾನೂನುಗಳು ಪರಿಣಾಮ ಬೀರುತ್ತವೆ. ಈ ಸಮಸ್ಯೆಗಳನ್ನು ಎತ್ತಿತೋರಿಸುವ ಮೂಲಕ, ಮಹಿಳಾ ಸಂಘಟನೆಗಳು ಹೋರಾಟದ ಆಯಾಮವನ್ನು ವಿಸ್ತರಿಸಲು ಮತ್ತು ಅದರ ವ್ಯಾಪ್ತಿಯನ್ನು ಹೆಚ್ಚು ಸಮಗ್ರಗೊಳಿಸಲು ಸಹಾಯ ಮಾಡಬಹುದು.
ಪ್ರೊ. ಅರ್ಚನಾ ಪ್ರಸಾದ್
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಭಾರತದ ರೈತರು 2020 ರಲ್ಲಿ ಆ ಶಾಸನಗಳನ್ನು ತಂದಂದಿನಿಂದಲೂ ಚಳುವಳಿ ನಡೆಸುತ್ತಿದ್ದಾರೆ. ಕಳೆದ ನವೆಂಬರ್ 26 ರಿಂದ ದೆಹಲಿಯ ಗಡಿಪ್ರದೇಶಗಳಲ್ಲಿ ಪ್ರತಿಭಟನೆಕಾರರು ಈ ‘ಕರಾಳ ಕಾನೂನು’ಗಳ ವಾಪಸ್ಸಾತಿಗೆ ಆಗ್ರಹಿಸುತ್ತಾ ಧರಣಿ ಆರಂಭಿಸುವುದರೊಂದಿಗೆ ಇದು ಶಿಖರವನ್ನು ತಲುಪಿದೆ. ಈ ಕಾನೂನುಗಳು ಮಹಿಳೆಯರ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂಬ ಕಾರಣಕ್ಕೆ ಅನೇಕ ಮಹಿಳಾ ರೈತರು ಮತ್ತು ಸಂಘಟನೆಗಳು ಕೂಡ ಆಂದೋಲನದಲ್ಲಿ ಸೇರಿಕೊಂಡಿವೆ. ಈ ಕಾನೂನುಗಳ ಅನುಷ್ಠಾನವು ಹೆಚ್ಚಿನ ಕೃಷಿ ಕುಟುಂಬಗಳಿಗೆ ಆಸ್ತಿತ್ವದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಈಗ ಅನೇಕರು ಗಮನಸೆಳೆದಿದ್ದಾರೆ, ಮತ್ತು ಇವುಗಳಿಂದ ಸ್ಪಷ್ಟವಾಗಿ ತಮ್ಮ ಕುಟುಂಬಗಳ ದೈನಂದಿನ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯಿರುವ ಮಹಿಳೆಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.
ಮಹಿಳಾ ಸಂಘಟನೆಗಳು ವಿಶೇಷವಾಗಿ ಅಗತ್ಯ ಸರಕುಗಳ ಕಾಯ್ದೆಯ ತಿದ್ದುಪಡಿಗಳ ವಿರುದ್ಧ ಪ್ರತಿಭಟಿಸುತ್ತಿವೆ, ಈ ತಿದ್ದುಪಡಿ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳ ಆಕ್ರಮ ದಾಸ್ತಾನಿಗೆ ಕುಮ್ಮಕ್ಕು ನೀಡುತ್ತದೆ ಮತ್ತು ಬೆಲೆ ಏರಿಕೆಗೆ ಕಾರಣವಾಗುತ್ತದೆ. ಸಾರ್ವಜನಿಕ ಸಂಗ್ರಹಣೆ ಮತ್ತು ಆಹಾರ ಧಾನ್ಯಗಳ ವಿತರಣೆಯನ್ನು ಆಧರಿಸಿದ ಸಾರ್ವಜನಿಕ ವಿತರಣಾ ವ್ಯವಸ್ಥೆ, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಆಧಾರದ ಮೇಲೆಯೂ ದಾಳಿ ಮಾಡುತ್ತವೆ. ಆದ್ದರಿಂದ, ರೈತರ ಪ್ರಸ್ತುತ ಚಳವಳಿಗೆ ಬೆಂಬಲ ನೀಡುವ ಪ್ರಕ್ರಿಯೆ, ಕೃಷಿ ಕಾನೂನುಗಳು ಹೆಚ್ಚಿನ ಕುಟುಂಬಗಳಿಗೆ ಮತ್ತು ವಿಶೇಷವಾಗಿ ಆ ಕುಟುಂಬಗಳ ಮಹಿಳೆಯರ. ಹಸಿವು ಮತ್ತು ಆಹಾರ ಅಭದ್ರತೆ ಹೆಚ್ಚಲು ಕಾರಣವಾಗುತ್ತವೆ ಎಂಬ ಸರಿಯಾದ ತಿಳುವಳಿಕೆಯನ್ನು ಆಧರಿಸಿದೆ.
ಕಾರ್ಪೊರೇಟ್ ನುಸುಳಿಕೆಯ ದುಷ್ಪರಿಣಾಮಗಳು
ಇದರ ಹೊರತಾಗಿ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಮಹಿಳಾ ಕಾರ್ಮಿಕರ ಮೇಲೆ ಕೃಷಿ ವ್ಯವಹಾರದಲ್ಲಿ ಕಾರ್ಪೋರೇಟ್ ಗಳ ನುಸುಳಿಕೆಯ ಆಳವಾದ ಪರಿಣಾಮವನ್ನು ಗುರುತಿಸುವ ಅವಶ್ಯಕತೆಯಿದೆ. ನಮಗೆ ತಿಳಿದಿರುವಂತೆ, ಶೇಕಡಾ 70 ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೂಲಿಗೆಲಸಗಾರರಲ್ಲಿ ಸುಮಾರು ಮೂರನೇ ಎರಡರಷ್ಟು ಮಹಿಳೆಯರು. ಕೃಷಿಕೂಲಿ, ಹೈನುಗಾರಿಕೆ ಮತ್ತು ಮೀನುಗಾರಿಕೆ ಉದ್ಯಮಗಳು, ಅರಣ್ಯ ಉತ್ಪನ್ನ ಸಂಗ್ರಹಣೆ ಮತ್ತು ಮಾರಾಟ ಮುಂತಾದ ಕೃಷಿಯನ್ನೇ ಅವಲಂಬಿಸಿದ ಉದ್ಯೋಗಗಳಲ್ಲಿದ್ದಾರೆ ಇವುಗಳಲ್ಲದೆ, ನೆರೆಹೊರೆಯ ಮತ್ತು ಸ್ಥಳೀಯ ಮಾರುಕಟ್ಟೆಗಳ ಅವಶ್ಯಕತೆಗಳನ್ನು ಪೂರೈಸುವ ಸ್ವ-ಉದ್ಯೋಗಿ ಕುಟುಂಬ ಉದ್ಯಮಗಳಲ್ಲಿ ಮಹಿಳೆಯರು ಕೂಲಿಯಿಲ್ಲದ ಕಾರ್ಮಿಕರಾಗಿ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಬಹುತೇಕ ಎಲ್ಲರೂ ಅಸಂಘಟಿತ ವಲಯದಲ್ಲಿದ್ದಾರೆ ಮತ್ತು ಇತ್ತೀಚಿನ ಕಾಯ್ದೆಗಳಿಂದ ತೀವ್ರವಾಗಿ ಸಂಕಷ್ಟಕ್ಕೊಳಗಾಗುತ್ತಾರೆ.
ನಾವು ತಜ್ಞರು ಮತ್ತು ರೈತ ಸಂಘಗಳಿಂದ ಪದೇ ಪದೇ ಕೇಳಿರುವಂತೆ ಈ ಮೂರು ಕೃಷಿ ಕಾನೂನುಗಳು, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಮಾರುಕಟ್ಟೆಗಳ ಸ್ವರೂಪವನ್ನು ಬದಲಾಯಿಸುತ್ತವೆ. ಚರ್ಚೆಯ ಗಮನವು ಕೃಷಿ ಕ್ಷೇತ್ರದ ಮೇಲೆ ಇದ್ದರೂ, ಮಾರುಕಟ್ಟೆ ಸಂಯೋಜನೆ ಮತ್ತು ಕಾರ್ಪೊರೇಟ್ ಗುತ್ತಿಗೆ ಕೃಷಿಯನ್ನು ಉತ್ತೇಜಿಸುವ ಈ ಕಾನೂನುಗಳ ಪರಿಣಾಮವು ಸಂಬಂಧಿತ ಕ್ಷೇತ್ರಗಳಾದ ಹೈನುಗಾರಿಕೆ, ಮೀನುಗಾರಿಕೆ ಮತ್ತು ಆಹಾರದ ಚಿಲ್ಲರೆ ವ್ಯಾಪಾರದಲ್ಲೂ ಕಂಡುಬರುತ್ತದೆ.
ಅಸಂಘಟಿತ ವಲಯದ ಸಣ್ಣ ಉತ್ಪಾದನೆಯ ಕಾರ್ಪೊರೇಟೀಕರಣದ ಮೂಲಕ ಗದ್ದೆಯಿಂದ ಅಂಗಡಿಯವರೆಗಿನ ಸಂಪೂರ್ಣ ಉತ್ಪಾದನೆ ಮತ್ತು ಪೂರೈಕೆ ಸರಪಳಿಯನ್ನು ನಿಯಂತ್ರಿಸಲು ಸೂಪರ್ ರ್ಮಾರ್ಕೆಟ್ ಮತ್ತು ಕೃಷಿ ವ್ಯಾಪಾರಿ ಸಂಸ್ಥೆಗಳಿಗೆ ಈ ಕಾನೂನುಗಳು ಅವಕಾಶ ನೀಡುತ್ತವೆ. ಇತ್ತೀಚಿನ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಕರ್ಯ) ಕಾಯ್ದೆ-2020 ಮತ್ತು ರೈತ (ಸಶಕ್ತೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ರ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಇದರ ಮುಖ್ಯ ಗುರಿ ಗ್ರಾಮೀಣ ಭಾರತದ ಪ್ರತಿಯೊಂದು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ವಿದೇಶಿ-ಬಂಡವಾಳದ ನುಸುಳಿಕೆಯನ್ನು ಸಾಧ್ಯಗೊಳಿಸಲು ಜಾಗತಿಕ ಮೌಲ್ಯ ಸರಪಳಿಗಳನ್ನು ರಚಿಸುವುದಾಗಿದೆ. ಅಂತಹ ಮರುಸಂಘಟನೆಯ ಮೂಲಕ, ಮುಂದಿನ 3-4 ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಒಂಬತ್ತು ಬಿಲಿಯನ್ ಡಾಲರುಗಳನ್ನು ಆಕರ್ಷಿಸುವ ಗುರಿಯನ್ನು ಸರ್ಕಾರ ಹೊಂದಿದೆ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ವಿದೇಶಿ-ನೇರ ಬಂಡವಾಳಕ್ಕೆ ಒಪ್ಪಿಗೆ ನೀಡಿದೆ. ಈ ಕ್ಷೇತ್ರಗಳಲ್ಲಿ ಶೇ .80 ಕ್ಕಿಂತ ಹೆಚ್ಚು ಉತ್ಪಾದನೆಯು ಅಸಂಘಟಿತ ವಲಯದಲ್ಲಿದ್ದು, ಶೇಕಡಾ 70-72ರಷ್ಟು ಉದ್ಯೋಗಿಗಳು ಮಹಿಳೆಯರಾಗಿದ್ದಾರೆ.
ಯಾವ, ಮತ್ತು ಎಷ್ಟು ಮಹಿಳೆಯರಿಗೆ ಸಂಕಷ್ಟಗಳು ಕಾದಿವೆ
ಆದ್ದರಿಂದ ಈ ಕಾನೂನುಗಳಿಂದ ಕೃಷಿ ಮತ್ತು ಸಂಬಂಧಿತ ಕೃಷಿಯೇತರ ಕ್ಷೇತ್ರಗಳಲ್ಲಿನ ಎಷ್ಟು, ಯಾವ, ಮತ್ತು ಎಷ್ಟು ಮಹಿಳೆಯರು ಸಂಕಷ್ಟಕ್ಕೊಳಗಾಗುತ್ತಾರೆ ಎಂದು ಪರಿಶೀಲಿಸುವುದು ಸೂಕ್ತವಾಗಿದೆ. ನಮಗೆ ಲಭ್ಯವಿರುವ ಸಾರ್ವಜನಿಕ ದತ್ತಾಂಶವು ಸೀಮಿತವಾಗಿದ್ದರೂ, ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ, ಮಹಿಳೆಯರು ಪ್ರಮುಖ ಪಾತ್ರವಹಿಸುವ ಕೆಲವು ವಿಭಾಗಗಳನ್ನು ನಾವು ಗುರುತಿಸಬಹುದು.
ಮೊದಲ ವಿಧದ ಅಸಂಘಟಿತ ವಲಯದ ಉದ್ಯಮಗಳನ್ನು ‘ಗೃಹಾಧಾರಿತ ಉದ್ಯಮಗಳು’ ಎಂದು ವರ್ಗೀಕರಿಸಲಾಗಿದೆ, 2018 ರಲ್ಲಿ ಸುಮಾರು 47.4 ಲಕ್ಷ ಮಹಿಳೆಯರು ಕೂಲಿ ಸಂದಾಯವಾಗುವ ಆರ್ಥಿಕ ಚಟುವಟಿಕೆಗಳಲ್ಲಿರುತ್ತಾರೆ ಎಂದು ಅಂದಾಜಿಸಲಾಗಿದೆ; ಇದು ಕೃಷಿಯಲ್ಲಿ ಮಹಿಳೆಯರ ಎಲ್ಲಾ ಉದ್ಯೋಗಗಳಲ್ಲಿ ಶೇಕಡಾ 7.5 ರಷ್ಟಿದೆ ಮತ್ತು ಪ್ರಾಣಿಗಳ ಸಾಕಣಿಕೆ ಮತ್ತು ಸುಗ್ಗಿಯ ನಂತರದ ಬೆಂಬಲ ಚಟುವಟಿಕೆಗಳಂತಹ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಕಾರ್ಮಿಕರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಸ್ವಂತ-ಖಾತೆ ಕೆಲಸಗಾರರಾಗಿದ್ದರೆ, ಶೇಕಡಾ 61 ರಷ್ಟು ಜನರು ಸ್ವಯಂ ಉದ್ಯೋಗಿ ಉದ್ಯಮಗಳಲ್ಲಿ ಅವಲಂಬಿತ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.
ಎರಡನೇ ವಿಭಾಗ ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಹೊಂದಿದ್ದು, ಅವರು ಈ ಕ್ಷೇತ್ರಗಳಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಉದ್ಯೋಗಗಳನ್ನು ನಿಭಾಯಿಸಿತ್ತಾರೆ.. ಸರ್ಕಾರದ ಮಾಹಿತಿಯ ಪ್ರಕಾರ, 2016 ರಲ್ಲಿ ಸುಮಾರು 1.7 ಕೋಟಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಇದ್ದರು, ಇವರಲ್ಲಿ ಹೆಚ್ಚಿನವರು ಮಹಿಳೆಯರು; ಮತ್ತೊಂದು ಅಧ್ಯಯನದಲ್ಲಿ, 2018 ರಲ್ಲಿ ಹಾಲು ಉತ್ಪಾದನೆಯಲ್ಲಿ ಸುಮಾರು 60 ಲಕ್ಷ ಮಹಿಳೆಯರು ವರ್ಷಕ್ಕೆ 90-120 ದಿನಗಳವರೆಗೆ ಉದ್ಯೋಗದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಗ್ರಾಮೀಣ ಉದ್ಯೋಗಗಳು ಕೃಷಿ ಕುಟುಂಬಗಳಿಗೆ ಗಮನಾರ್ಹ ಆದಾಯವನ್ನು ನೀಡುತ್ತವೆ; ಸರ್ಕಾರದ ಅಂದಾಜಿನ ಪ್ರಕಾರವೇ ಸುಮಾರು 7.5 ಕೋಟಿ ಕೃಷಿ ಕುಟುಂಬಗಳು ಕನಿಷ್ಠ ಒಂದು ಅಥವಾ ಎರಡು ಜಾನುವಾರುಗಳನ್ನು ಹೊಂದಿದ್ದು, ಮಹಿಳೆಯರೇ ಹಾಲು ಉತ್ಪಾದನೆಯಲ್ಲಿ ಹೆಚ್ಚಿನ ಭಾಗದ ಕೆಲಸವನ್ನು ನಿಭಾಯಿಸುತ್ತಾರೆ. 2016 ರಲ್ಲಿ ಗೃಹಾಧಾರಿತ ಮತ್ತು ಚಿಲ್ಲರೆ ಮೀನುಗಾರಿಕೆ ಕ್ಷೇತ್ರದಲ್ಲಿ ಸುಮಾರು 1 ಕೋಟಿ ಮಹಿಳೆಯರು ಉದ್ಯೋಗದಲ್ಲಿದ್ದರು. ಒಂದು ಅಂದಾಜಿನ ಪ್ರಕಾರ, ಈ ಪೈಕಿ ಶೇಕಡಾ 48 ರಷ್ಟು ಮಹಿಳೆಯರು ಮೀನು ಚಿಲ್ಲರೆ ವ್ಯಾಪಾರದಲ್ಲಿದ್ದಾರೆ ಮತ್ತು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ.
ಮಹಿಳೆಯರು ಪ್ರಮುಖ ಪಾತ್ರವಹಿಸುವ ಮೂರನೇ ವಿಭಾಗವೆಂದರೆ ಬೀದಿಬದಿ ವ್ಯಾಪಾರ ಮತ್ತು ಆಹಾರ ಸಂಸ್ಕರಣೆ / ಚಿಲ್ಲರೆ ವ್ಯಾಪಾರ. ಈ ವಿಭಾಗಕ್ಕೆ ಯಾವುದೇ ವಿಶ್ವಾಸಾರ್ಹ ಸ್ಥೂಲ ಅಂಕಿ-ಅಂಶಗಳಿಲ್ಲದಿದ್ದರೂ, ಕೆಲವು ಅಧ್ಯಯನಗಳು ಕಿರಾಣಿ ಚಿಲ್ಲರೆ ವ್ಯಾಪಾರದಲ್ಲಿ ಸುಮಾರು 10 ಲಕ್ಷ ಮಹಿಳೆಯರು ಮತ್ತು ಆಹಾರ ಸಂಸ್ಕರಣೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಅಂದಾಜು ಮಾಡಲಾಗದ ಸಂಖ್ಯೆಯ ಮಹಿಳೆಯರು ಕೆಲಸ ಮಾಡುತ್ತಾರೆಂದು ಸೂಚಿಸುತ್ತವೆ.
ಇದಲ್ಲದೆ, ಮೇಲೆ ಹೇಳಿದಂತೆ, ಸುಮಾರು 50 ಲಕ್ಷ ಮೀನು ಚಿಲ್ಲರೆ ವ್ಯಾಪಾರಿಗಳಿದ್ದಾರೆ.. ಆದ್ದರಿಂದ, ಸಾಂಪ್ರದಾಯಿಕ ಮೂಲ ಅಂದಾಜಿನ ಪ್ರಕಾರ ಅಸಂಘಟಿತ ವಲಯದ ಸುಮಾರು 1 ರಿಂದ 2 ಕೋಟಿ ಮಹಿಳಾ ಕಾರ್ಮಿಕರು ಈ ಕಾನೂನುಗಳಿಂದ ಸಂಕಷ್ಟಕ್ಕೊಳಗಾಗುತ್ತಾರೆ.
ಈ ನಿಟ್ಟಿನಲ್ಲಿ ನೋಡಿದರೆ, ಸರ್ಕಾರದ ಘೋಷಣೆಗಳನ್ನು ಮಹಿಳಾ ಕಾರ್ಮಿಕರ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಹೊಂದಿಸಲಾಗಿವೆ. ಪರಿಣಾಮದ ಸಮಗ್ರ ಸ್ವರೂಪವನ್ನು ಅಂದಾಜಿಸುವುದು ಕಷ್ಟವಾದರೂ, ಇತರ ದೇಶಗಳಲ್ಲಿನ ಕೃಷಿಯೇತರ ವಲಯದ ಕಾರ್ಪೊರೇಟಿಕರಣದ ಕೆಲವು ನಿದರ್ಶನಗಳು ಲಭ್ಯವಿವೆ.
ಬೇರೆ ದೇಶಗಳ ಅನುಭವಗಳ ಪಾಠ
ಹಲವಾರು ಆಫ್ರಿಕನ್, ಆಗ್ನೇಯ ಏಷ್ಯಾ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳ ಅನುಭವಗಳು ವಿವರಿಸುವಂತೆ, ಅಸಂಘಟಿತ ವಲಯದ ಸ್ವ-ಉದ್ಯೋಗಿ ಕಾರ್ಮಿಕರೊಂದಿಗಿನ ಗುತ್ತಿಗೆ ಒಪ್ಪಂದಗಳು ಉಭಯ ಗುತ್ತಿಗೆ ಪಕ್ಷಗಳ ನಡುವಿನ ಅಸಮಾನ ಸಮೀಕರಣಗಳಿಂದಾಗಿ ಭಾರಿ ಬೆಲೆ ಹಿಂಡುವಿಕೆಗೆ ಕಾರಣವಾಗಿವೆ.
ಚೀನಾದಲ್ಲಿನ ಹೈನುಗಾರಿಕೆ ವಲಯದಲ್ಲಿ ಕಾರ್ಪೊರೇಟ್ ನುಗ್ಗುವ ಸಂದರ್ಭದಲ್ಲಿ ನಡೆಸಿದ ಅಧ್ಯಯನಗಳು ಸಣ್ಣ ಡೈರಿ ರೈತರಿಗೆ ಕಡಿಮೆ ಆದಾಯಕ್ಕೆ ಕಾರಣವಾದ ಬೆಲೆ ಹಗರಣಗಳಿಗೆ ಸಂಬಂಧಿಸಿವೆ. ಇದೇ ರೀತಿಯ ಅನುಭವವು ಫ್ರಾನ್ಸ್ ನ ವಿಷಯದಲ್ಲೂ ಕಂಡುಬಂದಿದೆ.
ಮೀನುಗಾರಿಕೆ ಕ್ಷೇತ್ರದಲ್ಲೂ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಸ್ವತಂತ್ರ ಸಂಶೋಧಕರ ಹಲವಾರು ಅಧ್ಯಯನಗಳು ಪೂರೈಕೆ ಸರಪಳಿಗಳ ಪ್ರವೇಶದೊಂದಿಗೆ ಕಡಿಮೆ ಸಂಬಳದ ಗುತ್ತಿಗೆ ಉದ್ಯೋಗಕ್ಕೆ ಕಾರ್ಮಿಕರನ್ನು ಬಲವಂತಪಡಿಸಿದ ನಿದರ್ಶನಗಳನ್ನು ವಿವರಿಸುತ್ತವೆ.. ಇವುಗಳಲ್ಲಿ, ಮಹಿಳಾ ಕಾರ್ಮಿಕರು ಹದಗೆಡುತ್ತಿರುವ ಕೆಲಸದ ಪರಿಸ್ಥಿತಿಗಳನ್ನು ಮತ್ತು ಥೈಲ್ಯಾಂಡ್ ಮತ್ತು ಫಿಲಿಪೈನ್ಸ್ ನಂತಹ ದೇಶಗಳಲ್ಲಿ ಲೈಂಗಿಕ ಕಳ್ಳಸಾಗಣೆಯನ್ನು ಎದುರಿಸುತ್ತಿದ್ದಾರೆ.
ಈ ಉದಾಹರಣೆಗಳು ಗ್ರಾಮೀಣ ಆರ್ಥಿಕತೆಯ ವ್ಯವಸ್ಥೆಯು ಸರಬರಾಜು ಸರಪಳಿಗಳಾಗುವುದರಿಂದ ಸಂಭವಿಸುವ ದುಷ್ಪರಿಣಾಮಗಳಿಗೆ ಒಂದು ನಿದರ್ಶನವನ್ನು ಒದಗಿಸುತ್ತವೆ. ಈ ಅನೇಕ ಕೆಲಸಗಳಲ್ಲಿ ಮಹಿಳೆಯರು ಶ್ರಮ ಪ್ರಕ್ರಿಯೆಗಳ ಅತ್ಯಂತ ತಳಮಟ್ಟದಲ್ಲಿರುವುದರಿಂದ, ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಕಾರ್ಪೊರೇಟ್‌ಗಳ ಲಾಭಕೋರ ಅನ್ವೇಷಣೆಯಲ್ಲಿ ಮಹಿಳೆಯರು ಮತ್ತಷ್ಟು ಶೋಷಣೆಯನ್ನು ಎದುರಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ.
ಈ ಚರ್ಚೆಯು ಕೃಷಿ ಮತ್ತು ಕೃಷಿಯೇತರ ಉತ್ಪಾದನೆಯಲ್ಲಿ ಕೃಷಿ ಕಾನೂನುಗಳು ಮತ್ತು ಮಹಿಳಾ ಕಾರ್ಮಿಕರ ನಡುವಿನ ಪರಸ್ಪರ ಸಂಬಂಧಗಳನ್ನು ಎತ್ತಿ ತೋರಿಸಿದೆ. ಕೃಷಿ ವಿರೋಧಿ ಕಾನೂನುಗಳಲ್ಲಿ ಕೃಷಿ ಉತ್ಪನ್ನಗಳ ವ್ಯಾಖ್ಯಾನದಲ್ಲಿ ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಸೇರಿಸಿರುವುದು ಮಹಿಳಾ ಕಾರ್ಮಿಕರ ಮೇಲೆ ಪರಿಣಾಮ ಬೀರುವ ವಿಧಾನಕ್ಕೆ ಒಂದು ಅಶುಭ ಸೂಚಕವಾಗಿದೆ.
ಕೃಷಿ ಕಾನೂನುಗಳನ್ನು ವಿರೋಧಿಸುವ ರೈತ ಚಳವಳಿಯನ್ನು ಬೆಂಬಲಿಸುವ ಪ್ರಜಾಪ್ರಭುತ್ವ ಮಹಿಳಾ ಆಂದೋಲನವು ಈ ಕೆಲವು ವಿಷಯಗಳನ್ನು ತನ್ನ ವಿಶಾಲ ಅಭಿಯಾನದಲ್ಲಿ ಸೇರಿಸಬೇಕಾಗಿದೆ. ನಾವು ನೋಡಿದಂತೆ, ಗ್ರಾಹಕರಾಗಿ ಅಥವಾ ರೈತರಾಗಿ ಮಾತ್ರವಲ್ಲದೆ ಸಂಬಂಧಿತ ಕ್ಷೇತ್ರಗಳಲ್ಲಿನ ಕಾರ್ಮಿಕರು / ಉತ್ಪಾದಕರಾಗಿಯೂ ಮಹಿಳೆಯರ ಮೇಲೆ ಈ ಕರಾಳ ಕಾನೂನುಗಳು ಪರಿಣಾಮ ಬೀರುತ್ತವೆ. ಈ ಸಮಸ್ಯೆಗಳನ್ನು ಎತ್ತಿತೋರಿಸುವ ಮೂಲಕ, ಮಹಿಳಾ ಸಂಘಟನೆಗಳು ಹೋರಾಟದ ಆಯಾಮವನ್ನು ವಿಸ್ತರಿಸಲು ಮತ್ತು ಅದರ ವ್ಯಾಪ್ತಿಯನ್ನು ಹೆಚ್ಚು ಸಮಗ್ರಗೊಳಿಸಲು ಸಹಾಯ ಮಾಡಬಹುದು.
ಕನ್ನಡಕ್ಕೆ: ಸಿ.ಆರ್.ಶಾನಭಾಗ