ಮಹಿಳಾ ದೌರ್ಜನ್ಯಗಳ ವಿರುದ್ಧ ಪ್ರಬಲ ಪ್ರತಿರೋಧಕ್ಕೆ ಸಿಪಿಐ(ಎಂ) ರಾಜ್ಯ ಸಮ್ಮೇಳನ ದೃಢ ಹೆಜ್ಜೆ

ಗಂಗಾವತಿ: ಇಲ್ಲಿ ನಡೆದ ಸಿಪಿಐ(ಎಂ) ಪಕ್ಷದ 23ನೇ ರಾಜ್ಯ ಸಮ್ಮೇಳನದಲ್ಲಿ ಭಾಗಿಯಾದ ಒಟ್ಟು 246 ಪ್ರತಿನಿಧಿಗಳಲ್ಲಿ 69 ಮಂದಿ ಮಹಿಳೆಯರಾಗಿದ್ದರು. ಸಮ್ಮೇಳನದ ನಂತರ ನೂತನವಾಗಿ ಚುನಾಯಿಸಲ್ಪಟ್ಟ ರಾಜ್ಯ ಸಮಿತಿಯ 34 ಸದಸ್ಯರಲ್ಲಿ 8 ಮಂದಿ ಮಹಿಳೆಯರು ಸಮಿತಿಗೆ ಆಯ್ಕೆಯಾಗಿದ್ದಾರೆ.

ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ನಿರ್ಣಯವನ್ನು ಅಂಗೀಕರಿಸಿದ ರಾಜ್ಯ ಸಮ್ಮೇಳನವು ಪಾಳೇಗಾರಿ ಮೌಲ್ಯಗಳು ಮತ್ತು ನವ ಉದಾರೀಕರಣದ ನೀತಿಗಳಿಂದಾಗಿ ಮಹಿಳೆಯರು ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವುದನ್ನು ವಿಶ್ಲೇಷಿಸಿದೆ. ಕೋವಿಡ್ ಅವಧಿಯಲ್ಲಿ ಲಾಕ್‌ಡೌನ್ ಪರಿಣಾಮದಿಂದಾಗಿ ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರಿಗೆ ಸೂಕ್ತ ಪರಿಹಾರ ವ್ಯವಸ್ಥೆಯನ್ನು ರೂಪಿಸಲು ವಿಫಲವಾದ ಸರ್ಕಾರಗಳು 2020-21ರಲ್ಲಿ ದೌರ್ಜನ್ಯಗಳು ಕಡಿಮೆಯಾಗಿವೆ ಎಂಬ ಹುಸಿ ಸಮರ್ಥನೆಯನ್ನು ನೀಡುತ್ತಿದೆ. ಅಲ್ಲದೆ, 2019-20ರಲ್ಲಿ ಕರ್ನಾಟಕದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿರುವುದನ್ನೂ ಇದೇ ಕಾಲಘಟ್ಟದಲ್ಲಿ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿರುವ ಅಂಕಿ-ಅಂಶಗಳು ದೌರ್ಜನ್ಯಗಳು ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಮರ್ಯಾದಾ ಹತ್ಯೆಗಳು, ಮತೀಯ ಗೂಂಡಾಗಿರಿಗಳು ಮಹಿಳಾ ವಿರೋಧಿ ಕೇಂದ್ರಿತವಾಗಿದೆ. ಮಹಿಳಾ ಸುರಕ್ಷತೆಯ ಕುರಿತು ಸರ್ಕಾರದ ಭರವಸೆಗಳು ನಿರಾಶಾದಾಯಕವಾಗಿದೆ. ಒಕ್ಕೂಟ ಸ್ವರೂಪದ ಪ್ರಜಾಸತ್ತಾತ್ಮಕ ಪ್ರಭುತ್ವ ರಚನೆಯ ರೂಪು ರೇಷೆಗಳಲ್ಲಿ “ಮಹಿಳೆಯರು ಅನುಭವಿಸುವ ಸಾಮಾಜಿಕ ಅಸಮಾನತೆಗಳು ಮತ್ತು ಭೇದ ಭಾವಗಳನ್ನು ನಿರ್ಮೂಲ ಮಾಡುವುದು, ಭೂಮಿಯೂ ಸೇರಿದಂತೆ ಆಸ್ತಿಯ ಉತ್ತರಾಧಿಕಾರ ಮೊದಲಾದ ವಿಚಾರಗಳಲ್ಲಿ ಮಹಿಳೆಯರಿಗೆ ಪುರುಷರ ಸಮಾನವಾದ ಹಕ್ಕುಗಳು, ಅದಕ್ಕೆ ಪೂರಕವಾಗಿ ರಕ್ಷಣಾತ್ಮಕ ಸಾಮಾಜಿಕ, ಆರ್ಥಿಕ ಮತ್ತು ಕೌಟುಂಬಿಕ ಕಾನೂನುಗಳ ಜಾರಿ ಹಾಗೂ ವೃತ್ತಿ ಮತ್ತು ಸೇವೆಗಳಲ್ಲಿ ಪ್ರವೇಶ ಖಚಿತತೆ, ಮಕ್ಕಳ ಪಾಲನೆ ಮತ್ತು ಮನೆಗೆಲಸಗಳಿಗೆ ಸೂಕ್ತ ಬೆಂಬಲ ಬೇಕಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಸಮಕಾಲೀನ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ, ಯುವತಿಯರ ಹಕ್ಕುಗಳ ರಕ್ಷಣೆ ಮತ್ತು ಸಂಗಾತಿಗಳನ್ನು ಸ್ವಯಂ ಆಯ್ಕೆ ಮಾಡಲು ಸ್ವಾಯತ್ತತೆಯ ಬೇಡಿಕೆ, ಅಲ್ಪ ಸಂಖ್ಯಾತ ಮಹಿಳೆಯರ ರಕ್ಷಣೆ ಮತ್ತು ಅವರ ಹಕ್ಕುಗಳು ಮತ್ತು ಹೀಗೆ, ಇತರ ಪಕ್ಷಗಳಿಗಿಂತ ಭಿನ್ನವಾಗಿ ಸಿಪಿಐ(ಎಂ) ಪಕ್ಷವು ಮಹಿಳೆಯರನ್ನು ಬೆಂಬಲಿಸುವಲ್ಲಿ ನಿಸ್ಸಂದಿಗ್ಧ ನಿಲುವನ್ನು ಹೊಂದಿದೆ.

ಸಿಪಿಐ(ಎಂ)ನ ಬಹುತೇಕ ಚಳುವಳಿಗಳಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ ಗಣನೀಯವಾಗಿರುವುದನ್ನು ಗಮನಿಸಬಹುದು. ಕರಾವಳಿ ತೀರದ ಹಂಚು ಕಾರ್ಮಿಕರು, ಬೀಡಿ ಕಾರ್ಮಿಕರು ತಮ್ಮ ಸವಲತ್ತುಗಳಿಗಾಗಿ ಹೋರಾಟಕ್ಕಿಳಿದಾಗ ಮುಂಚೂಣಿಯಲ್ಲಿ ನಿಲ್ಲುತಿದ್ದ ಮಹಿಳೆಯರಂತೆ ಇತ್ತೀಚೆಗೆ ಪ್ರಬಲಗೊಳ್ಳುತ್ತಿರುವ ಕಟ್ಟಡ ಕಾರ್ಮಿಕರ ಸಂಘಟನೆ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಾರರಲ್ಲಿ ಮಹಿಳೆಯರು ಪ್ರಮುಖವಾಗಿ ಗುರುತಿಸಲ್ಪಡುತಿದ್ದಾರೆ.

ದೇಶದಲ್ಲೇ ದಾಖಲೆ ಸಂಚಲನ ನಿರ್ಮಿಸಿದ ಅಂಗನವಾಡಿ ಮತ್ತು ಗಾರ್ಮೆಂಟ್ಸ್‌ ನೌಕರರ ಚಳವಳಿಗಳ ನೇತೃತ್ವವು ಮಹಿಳೆಯರದ್ದೇ ಆಗಿರುವುದನ್ನು ನೆನಪಿಸಿಕೊಳ್ಳಬೇಕು.

ಸಿಪಿಐ(ಎಂ) ರಾಜ್ಯ ಸಮ್ಮೇಳನ ಸ್ತ್ರೀ ಸಮಾನತೆಯ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವುದನ್ನು ಅಭಿಮಾನದಿಂದ ಗುರುತಿಸುತ್ತಾ ಮುಂಬರುವ ಹೋರಾಟಗಳು ಇನ್ನಷ್ಟು ಸೃಜನಶೀಲವಾಗಿರುತ್ತವೆ.

ವರದಿ: ರಮೇಶ್ ಗುಲ್ವಾಡಿ, ಕುಂದಾಪುರ

Donate Janashakthi Media

Leave a Reply

Your email address will not be published. Required fields are marked *