ದಾಖಲಾದ ಪ್ರಕರಣದ ಆರೋಪಿಗಳಿಗೆ ಕೆಳ ನ್ಯಾಯಾಲಯ ಪೋಕ್ಸೋ ಅಡಿ ಶಿಕ್ಷೆ ವಿಧಿಸುತ್ತದೆ. ಅನ್ಯಾಯ ಮಾಡಿದವರಿಗೂ ‘ನ್ಯಾಯ’ ಕೇಳುವ ಹಕ್ಕಿದೆ ಈ ದೇಶದಲ್ಲಿ. ಹಾಗೆಂದೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರುತ್ತದೆ. ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಕಾಯ್ದೆಯ ಸಮರ್ಪಕ ಜಾರಿಯ ಆದೇಶ ಕೊಡುವ ಬದಲು ಪೋಕ್ಸೋ ಕಾಯ್ದೆಯ ಕಲಮುಗಳನ್ನು ತಪ್ಪು ತಪ್ಪಾಗಿ ವ್ಯಾಖ್ಯಾನಿಸಿ, ಆಕೆಯ ಬಟ್ಟೆಯ ಮೇಲಿನಿಂದ ಮೊಲೆ ಕಿವುಚಿದ್ದು ಲೈಂಗಿಕ ದೌರ್ಜನ್ಯವೆಂದು ಕರೆಯಲಾಗದು, ‘ಚರ್ಮ ಸ್ಪರ್ಶ’ ನಡೆದಿಲ್ಲವಾದುದರಿಂದ ಈ ಪ್ರಕರಣವನ್ನು ಮಾನಭಂಗದ ಅಡಿಯಲ್ಲಿ ಪರಿಗಣಿಸಬಹುದು ಎಂಬ ಆದೇಶ ನೀಡಲಾಯಿತು. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಕೇವಲ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯತೆಯನ್ನು ಪ್ರದರ್ಶಿಸಿದರೆ ಅದು ಲೈಂಗಿಕ ಕಿರುಕುಳವಾಗಲಾರದು, ಎಂದಿದ್ದಲ್ಲದೇ ಐ.ಪಿ.ಸಿಯ ಪ್ರಕಾರ ಈಗಾಗಲೇ ಅನುಭವಿಸಿದ 5 ತಿಂಗಳ ಶಿಕ್ಷೆ ಸಾಕೆಂದು ಬಿಡುಗಡೆಯೂ ಮಾಡಿಬಿಟ್ಟಿತೆಂದು ವರದಿಗಳನ್ನು ನೋಡಿದ್ದೇವೆ.
– ವಿಮಲಾ.ಕೆ.ಎಸ್.
ಪುರುಷ ಆಲೋಚನಾಕ್ರಮದಿಂದ ರೂಪಿಸಲ್ಪಟ್ಟ ನಡವಳಿಕೆಗಳು ಮತ್ತು ಕಾನೂನುಗಳು, ಹಾಗೂ ಪುರುಷ ದೃಷ್ಟಿಕೋನದಿಂದಲೇ ಮಹಿಳೆಯರ ನಡವಳಿಕೆಗಳನ್ನು ನಿರ್ಣಯಿಸುವ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಸ್ವತಂತ್ರವಾಗಿ ಇರಲು ಸಾಧ್ಯವಿಲ್ಲ ಎನ್ನುತ್ತಾರೆ ಚಿಂತಕ ಹೆನ್ರಿಕ್ ಇಬ್ಸನ್
ಇದು ಸರ್ವೊಚ್ಛ ನ್ಯಾಯಾಲಯದ ನ್ಯಾಯಯುತ ತೀರ್ಪೊಂದನ್ನು ಪ್ರಕಟಿಸುವಾಗ ಜಸ್ಟೀಸ್ ಏ.ಎಂ. ಖನ್ವೀಲ್‌ಕರ್ ಮತ್ತು ಎಸ್.ರವೀಂದ್ರ ಭಟ್ ರವರಿದ್ದ ಪೀಠ ಉಲ್ಲೇಖಿಸಿದ ಮಾತು. ಹತ್ತೊಂಬತ್ತನೇ ಶತಮಾನದಲ್ಲಿ ನಾರ್ವೆಯಲ್ಲಿದ್ದ ಪ್ರಸಿದ್ಧ ನಾಟಕಕಾರ, ಲೇಖಕ, ನಿರ್ದೇಶಕ ಹೆನ್ರಿಕ್ ಇಬ್ಸನ್ ಹೇಳಿದ ಮಾತಿದು. ಪುರುಷ ಪ್ರಧಾನ ಮೌಲ್ಯಗಳು ವಿಜ್ರಂಭಿಸುವ ಸಮಾಜದಲ್ಲಿ ಮಹಿಳೆಯರ ಸ್ಥಿತಿಯ ಕುರಿತು ಇಬ್ಸನ್ ರವರ ಈ ಮಾತುಗಳು ಬಹಳ ಪ್ರಖರ ಅಭಿಪ್ರಾಯಗಳಾಗಿವೆ.
ಮಹಿಳೆಯರ ವಿಷಯಕ್ಕೆ ಸಂಬಂಧಿಸಿದಂತೆ ಈಗ ಎಂದರೆ 21ನೇ ಶತಮಾನದಲ್ಲಿಯೂ ಕೂಡಾ ಬಹಳ ಬದಲಾವಣೆಗಳು ಕಾಣದಿರುವ ಅಂಶಗಳು ಮತ್ತೆ ಮತ್ತೆ ಕಣ್ಣಿಗೆ ರಾಚುತ್ತಿವೆ. ಆಳವಾಗಿ ಬೇರೂರಿರುವ ಅಸಮಾನತೆ, ಗೊಡ್ಡು ಕಂದಾಚಾರಗಳನ್ನು ಸಂವಿಧಾನದ ಪ್ರಖರ ಬೆಳಕಿನಲ್ಲಿ ಜಗತ್ತಿಗೆ ತೋರಿಸಿ ಸರಿದಾರಿಗೆ ಹಚ್ಚಬೇಕಾದ ನ್ಯಾಯಪೀಠಗಳೇ ಇನ್ನಷ್ಟು ಕಂದಾಚಾರಗಳನ್ನು ಬೆಳೆಸುವತ್ತ ಮುಖಮಾಡಿರುವುದು ಈ ಕಾಲದ ದುರಂತಗಳಲ್ಲಿ ಒಂದು. ಹೆಣ್ಣೆಂದರೆ ಭೊಗವಸ್ತು ಎಂಬ ಕೀಳು ಮನೋಭಾವದ ಜೊತೆಯೇ ಸದಾಸರ್ವದಾ ಆಕೆಯನ್ನು ಯಾರಾದರೂ ರಕ್ಷಿಸಬೇಕೆಂಬ ಪಾಳೆಯಗಾರಿ ಮೌಲ್ಯಗಳು ಕೂಡಾ ಇನ್ನೂ ಗಟ್ಟಿಯಾಗುತ್ತಿರುವ ಹೊತ್ತಿದು. ಅದಕ್ಕೆ ಕಾನೂನಾತ್ಮಕ ಮುದ್ರೆ ಒತ್ತುವ ಕೆಲಸ ನ್ಯಾಯಾಲಯಗಳಿಂದಲೂ ನಡೆಯುತ್ತಿವೆ. ಉದಾಹರಣೆಗೆ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಕರಣಗಳನ್ನು ಅವು ನಿಭಾಯಿಸಿರುವ ರೀತಿ. ಮಧ್ಯಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ, ಜಾಮೀನು ನೀಡಲು ಕರಾರುಗಳೆಂಬಂತೆ -ಸಂತ್ರಸ್ಥೆಗೆ ರಾಖಿ ಕಟ್ಟಿ, ಸಿಹಿ ಕೊಟ್ಟು ಅವಳನ್ನು ರಕ್ಷಣೆ ಮಾಡುತ್ತೇನೆ ಎಂಬ ಸೋದರ ಭಾವ ತುಂಬುವ ಸಂಪ್ರದಾಯದಂತೆ 11000/ ರೂಪಾಯಿಗಳನ್ನು ಕೊಡುವಂತೆ ಮತ್ತು ಹೊಸ ಬಟ್ಟೆ, ಸಿಹಿತಿಂಡಿ ಕೊಳ್ಳಲು ಇನ್ನೂ 5000/ ಕೊಡುವಂತೆ ಸಲಹೆ ನೀಡಿದಂಥಹ ಅಸಂಬದ್ಧ ಘಟನೆ ನಡೆದಿತ್ತು. ದೇಶದ ಪ್ರಜ್ಞಾವಂತರು ಇದನ್ನು ಆಕ್ಷೇಪಿಸಿದ್ದರು. ಅಪರ್ಣಾ ಭಟ್ ಮತ್ತು ಇತರ ಎಂಟು ಜನ ವಕೀಲರು ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ತೀರ್ಪು ನೀಡಿದ ಸವೋಚ್ಛನ್ಯಾಯಾಲಯ ಮಹಿಳಾ ಸಂವೇದನೆಯನ್ನು ಬೆಳೆಸಲು ಅಗತ್ಯವಾದ 12 ಸೂತ್ರಗಳನ್ನು ಮುಂದಿಟ್ಟಿದೆ ಮತ್ತು ತನ್ನ ಆದೇಶದ ಮೊದಲ ಸಾಲುಗಳಲ್ಲಿ ಹೆನ್ರಿಕ್ ಇಬ್ಸನ್ ರನ್ನು ಉಲ್ಲೇಖಿಸಿದೆ.
ಮುಂಬೈ ಹೈ ಕೊರ್ಟಿನ ನಾಗಪುರ ಪೀಠದಿಂದ ಕೂಡ ಇನ್ನೂ ಆಘಾತಕಾರಿ ಆದೇಶಗಳನ್ನು ನೀಡಲಾಗಿತ್ತೆನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಲೇಬೇಕು.
ಮಕ್ಕಳು ಲೈಂಗಿಕ ಕಿರುಕುಳ, ದೌರ್ಜನ್ಯಗಳಂಥಹ ಸಂದರ್ಭದಲ್ಲಿಯೂ ಅದನ್ನು ವಿರೋಧಿಸಲಾರದ ಅಥವಾ ಅದರ ಕುರಿತು ಸ್ಪಷ್ಟವಾಗಿ ಹೇಳಲಾರದಂಥಹ ಪರಿಸ್ಥಿತಿಯಲ್ಲಿರುತ್ತಾರೆಂಬ ಕಾರಣಕ್ಕೆ ಬಹುತೇಕವಾಗಿ ಅಂಥಹ ದೌರ್ಜನ್ಯಗಳಿಗೆ ತುತ್ತಾಗುತ್ತಾರೆ. ಏನೂ ಅರಿಯದ ಹಸುಳೆಗಳ ಮೇಲೆ ತಮ್ಮ ಕಾಮಪ್ರತಾಪವನ್ನು ತೋರಿಸುವ ವ್ಯಕ್ತಿಗಳ ಹೀನಾಯ ಕೃತ್ಯ ಮತ್ತು ಅಕ್ಷಮ್ಯ ಅಪರಾಧವೆಸಗುವ ಕ್ರೌರ್ಯದ ಮನಃಸ್ಥಿತಿಗೆ ಕಠಿಣ ಶಿಕ್ಷೆಯಾಗಲೇಬೇಕೆಂದೇ ಪೋಕ್ಸೋ ಕಾಯ್ದೆ 2012ರಲ್ಲಿ ಜಾರಿಗೆ ಬಂತು. ಈ ಕಾಯ್ದೆಯೇ ಅವರ ಪೋಷಕಸ್ಥಾನವನ್ನು ವಹಿಸಿಕೊಳ್ಳುವಷ್ಟು ಸಶಕ್ತವಾಗಿದೆ ಎಂದು ಭಾವಿಸಲಾಗುತ್ತದೆ. ಎಷ್ಟೆಂದರೆ ಅಕಸ್ಮಾತ್ ಯಾವುದೇ ಪ್ರಕರಣದಲ್ಲಿ ಎರಡು ರೀತಿಯ ಅಭಿಪ್ರಾಯಗಳ ಸಾಧ್ಯತೆ ಇದ್ದರೆ ಆಗ ನ್ಯಾಯಾಲಯವು ಲವಲೇಶವೂ ಯೋಚಿಸದೇ ಅಪ್ರಾಪ್ತರಿಗೆ ಸಲ್ಲುವ ರೀತಿಯ ತೀರ್ಮಾನಕ್ಕೇ ಬರಬೇಕೆಂದೂ ಹೇಳುತ್ತದೆ ಈ ಕಾನೂನು. ಆದರೆ ಇತ್ತೀಚೆಗೆ ಎಂದರೆ ಜನವರಿ 2021ರಲ್ಲಿ ಮುಂಬೈ ಹೈಕೊರ್ಟಿನ ನಾಗಪುರ ಪೀಠದೆದುರು ಬಂದ ಎರಡು ಪೋಕ್ಸೋ ಕಾನೂನಿನ ಅಡಿಯ ಪ್ರಕರಣದಲ್ಲಿ ಬಂದ ಆದೇಶಗಳು ಈ ಕಾನೂನಿನ ಮೂಲ ಉದ್ದೇಶಕ್ಕೇ ಚ್ಯುತಿ ಬರುವಂಥದ್ದಾಗಿತ್ತು. ಮತ್ತೆ ನಾವಿಲ್ಲಿ ಗಮನಿಸಬೇಕು ಈ ಆದೇಶಗಳನ್ನು ನೀಡಿದ ನ್ಯಾಯಾಧೀಶರು ಒಬ್ಬ ಮಹಿಳೆ! ಲಿಂಗ ಸಂವೇದನೆ ಎನ್ನುವುದು ಬೆಳೆಸಿಕೊಳ್ಳಬೇಕಾದ ಪ್ರಜ್ಞೆ. ಹುಟ್ಟಿನಿಂದ ತಾನಾಗಿಯೇ ಬಂದು ಬಿಡುವುದಲ್ಲ.
ಏನಿದು ಪ್ರಕರಣ ಮತ್ತು ಆದೇಶ:
ಪ್ರಕರಣ 1-ಪುರುಷನೊಬ್ಬ ಅಪ್ರಾಪ್ತ ಯುವತಿಯನ್ನು ಬಲಾತ್ಕರಿಸಿ ಆಕೆಯ ಮೊಲೆ ಹಿಡಿದು ಕಿವುಚಿ ಬಟ್ಟೆ ಕಳಚಲು ಪ್ರಯತ್ನ ಮಾಡುತ್ತಾನೆ.
ಪ್ರಕರಣ 2- ಅಪ್ರಾಪ್ತ ಯುವತಿಯೆದುರು ತನ್ನ ಪ್ಯಾಂಟ್ ಜಿಪ್ ಎಳೆದು ಅಸಭ್ಯವಾಗಿ ಪುರುಷನೊಬ್ಬ ವರ್ತಿಸುತ್ತಾನೆ.
ದಾಖಲಾದ ಪ್ರಕರಣದ ಆರೋಪಿಗಳಿಗೆ ಕೆಳ ನ್ಯಾಯಾಲಯ ಪೋಕ್ಸೋ ಅಡಿ ಶಿಕ್ಷೆ ವಿಧಿಸುತ್ತದೆ. ಅನ್ಯಾಯ ಮಾಡಿದವರಿಗೂ ‘ನ್ಯಾಯ’ ಕೇಳುವ ಹಕ್ಕಿದೆ ಈ ದೇಶದಲ್ಲಿ. ಹಾಗೆಂದೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರುತ್ತದೆ. ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಕಾಯ್ದೆಯ ಸಮರ್ಪಕ ಜಾರಿಯ ಆದೇಶ ಕೊಡುವ ಬದಲು ಪೋಕ್ಸೋ ಕಾಯ್ದೆಯ ಕಲಮುಗಳನ್ನು ತಪ್ಪು ತಪ್ಪಾಗಿ ವ್ಯಾಖ್ಯಾನಿಸಿ, ಆಕೆಯ ಬಟ್ಟೆಯ ಮೇಲಿನಿಂದ ಮೊಲೆ ಕಿವುಚಿದ್ದು ಲೈಂಗಿಕ ದೌರ್ಜನ್ಯವೆಂದು ಕರೆಯಲಾಗದು, ‘ಚರ್ಮ ಸ್ಪರ್ಶ’ ನಡೆದಿಲ್ಲವಾದುದರಿಂದ ಈ ಪ್ರಕರಣವನ್ನು ಮಾನಭಂಗದ ಅಡಿಯಲ್ಲಿ ಪರಿಗಣಿಸಬಹುದು ಎಂಬ ಆದೇಶ ನೀಡಲಾಯಿತು. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಕೇವಲ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯತೆಯನ್ನು ಪ್ರದರ್ಶಿಸಿದರೆ ಅದು ಲೈಂಗಿಕ ಕಿರುಕುಳವಾಗಲಾರದು, ಎಂದಿದ್ದಲ್ಲದೇ ಐ.ಪಿ.ಸಿಯ ಪ್ರಕಾರ ಈಗಾಗಲೇ ಅನುಭವಿಸಿದ 5 ತಿಂಗಳ ಶಿಕ್ಷೆ ಸಾಕೆಂದು ಬಿಡುಗಡೆಯೂ ಮಾಡಿಬಿಟ್ಟಿತೆಂದು ವರದಿಗಳನ್ನು ನೋಡಿದ್ದೇವೆ.
ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಔರಂಗಾಬಾದ್ ಪೀಠದ ಆದೇಶವನ್ನು ಪ್ರಶ್ನಿಸಿ ಆರೋಪಿಯೊಬ್ಬ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಿದ ಪ್ರಕರಣದಲ್ಲಿ ಸರ್ವೋಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರೆ ಸಂತ್ರಸ್ಥೆಯನ್ನು ಮದುವೆಯಾಗುವಿಯಾ ಎಂಬ ಪ್ರಶ್ನೆಯನ್ನು ಆರೋಪಿಗೆ ಅವರ ವಕೀಲರ ಮೂಲಕ ಕೇಳಿದರೆಂದು ವರದಿಯಾಯಿತು. ಗಂಭೀರವಾದ ಆಕ್ಷೇಪಗಳು ಬಂದ ನಂತರ ತನ್ನ ಅಭಿಪ್ರಾಯವನ್ನು ತಿರುಚಿ ವರದಿ ಮಾಡಲಾಗಿದೆ ಎಂಬ ಸಮಝಾಯಿಸಿ ಬಂತಾದರೂ ಇಂಥಹ ಮನೋಭಾವ ಆಗಾಗ ಪ್ರಕಟವಾಗುತ್ತಲೇ ಇವೆ.
ಈಗ ಸುಪ್ರಿಂಕೋರ್ಟಿನ ದ್ವಿ-ಸದಸ್ಯ ಪೀಠದ ನ್ಯಾಯಪರ ತೀರ್ಪು ಅತ್ಯಂತ ಸ್ವಾಗತಾರ್ಹವಾದುದು. ಇಲ್ಲಿ ಬಹಳ ಸ್ಪಷ್ಟವಾಗಿ ಲಿಂಗ ಸಂವೇದನೆ ಮತ್ತು ಸಮಾನತೆಯನ್ನು ಸ್ಥಿರಗೊಳಿಸುವತ್ತ ದಿಟ್ಟ ಹೆಜ್ಜೆಯೊಂದು ಕಾಣಸಿಗುತ್ತಿದೆ. ಮತ್ತು ಇತ್ತೀಚಿನ ಹಾಗೂ ಬಹಳ ಹಿಂದಿನ ಎಂದರೆ ೭೦ ರ ದಶಕದ ಮಥುರಾ ಪ್ರಕರಣದಿಂದಲೂ ಆರಂಭಿಸಿ ಇತ್ತೀಚಿನ ಪ್ರಕರಣಗಳವರೆಗೂ ಹೊರ ಬರುತ್ತಿರುವ ಪುರುಷ ಪ್ರಧಾನ, ಪಾಳೆಯಗಾರಿ, ಮಹಿಳಾ ಮತ್ತು ಮನುಷ್ಯ ವಿರೋಧೀ ತೀರ್ಪುಗಳಿಗೆ ಸಂವಿಧಾನದ ಆಶಯಗಳ ಅಡಿಯಲ್ಲಿ ನೇರವಾದ ಉತ್ತರ ನೀಡುವಂತಿದೆ.
24 ಪುಟಗಳ ನ್ಯಾಯತೀರ್ಪು ಈ ಹಿಂದಿನ ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ. ಮೇಲ್ಮನವಿದಾರರು ಪ್ರಸ್ತಾಪಿಸಿದ ಅಸಹನೀಯ ಮತ್ತು ಸಂವಿಧಾನ ವಿಧಿಸಿದ ಮಹಿಳಾ ಘನತೆಯನ್ನು ಎತ್ತಿಹಿಡಿಯುವುದಕ್ಕೆ ವ್ಯತಿರಿಕ್ತವಾದ ಅಂಶಗಳನ್ನೊಳಗೊಂಡ ಆದೇಶಗಳನ್ನು ಉಲ್ಲೇಖಿಸಿದೆ. ಅವುಗಳ ಮೂಲಕ ಒಂದು ಪ್ರಕರಣದ ವಿಚಾರಣೆ, ಆದೇಶ, ತೀರ್ಪುಗಳು ಮಹಿಳೆಯ ಘನತೆಗೆ ಕುಂದು ತರುವ, ಮಹಿಳಾ ವಿರೋಧೀ ಅಂಶಗಳನ್ನು ಹೊಂದಿರಬಾರದೆಂಬ ಸ್ಪಷ್ಟ ನಿರ್ದೇಶನಗಳನ್ನೂ ನೀಡಿದೆ. ಅದರ ಭಾಗವಾಗಿಯೇ ಅಡ್ವೊಕೆಟ್ ಜನರಲ್‌ರವರೂ ಕೂಡಾ ಪಾಳೆಯಗಾರಿ ಮತ್ತು ಪುರಾತನ ಆಲೋಚನಾ ಕ್ರಮವನ್ನು ಹೊಂದಿದ ನ್ಯಾಯಾಧೀಶರುಗಳನ್ನು ಸಂವೇದನಾಶೀಲಗೊಳಿಸಲು ಮತ್ತು ಹೆಚ್ಚು ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಲು ಮಾಡಿದ ಸಲಹೆ ಮಾಡಿದ ಸಂಗತಿಯೂ ಇದೆ.
24 ಪುಟಗಳ ನ್ಯಾಯತೀರ್ಪು ಈ ಹಿಂದಿನ ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ. ಮೇಲ್ಮನವಿದಾರರು ಪ್ರಸ್ತಾಪಿಸಿದ ಈ ಮೊದಲಿನ ಅಸಹನೀಯ ಮತ್ತು ಸಂವಿಧಾನ ವಿಧಿಸಿದ ಮಹಿಳಾ ಘನತೆಯನ್ನು ಎತ್ತಿಹಿಡಿಯುವುದಕ್ಕೆ ವ್ಯತಿರಿಕ್ತವಾದ ಅಂಶಗಳನ್ನೊಳಗೊಂಡ ಆದೇಶಗಳನ್ನು ಉಲ್ಲೇಖಿಸಿದೆ. ಅವುಗಳ ಮೂಲಕ ಒಂದು ಪ್ರಕರಣದ ವಿಚಾರಣೆ, ಆದೇಶ, ತೀರ್ಪುಗಳು ಮಹಿಳೆಯ ಘನತೆಗೆ ಕುಂದು ತರುವ, ಮಹಿಳಾ ವಿರೋಧೀ ಅಂಶಗಳನ್ನು ಹೊಂದಿರಬಾರದೆಂಬ ಸ್ಪಷ್ಟ ನಿರ್ದೇಶನಗಳನ್ನೂ ನೀಡಿದೆ. ಅದರ ಭಾಗವಾಗಿಯೇ ಅಡ್ವೊಕೆಟ್ ಜನರಲ್‌ರವರೂ ಕೂಡಾ ಪಾಳೆಯಗಾರಿ ಮತ್ತು ಪುರಾತನ ಆಲೋಚನಾ ಕ್ರಮವನ್ನು ಹೊಂದಿದ ನ್ಯಾಯಾಧೀಶರುಗಳನ್ನು ಸಂವೇದನಾಶೀಲಗೊಳಿಸಲು ಮತ್ತು ಹೆಚ್ಚು ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಲು ಮಾಡಿದ ಸಲಹೆ ಮಾಡಿದ ಸಂಗತಿಯೂ ಇದೆ. ಇಲ್ಲಿ ಲಿಂಗ ಸಂವೇದನೆ ಕೇವಲ ಪುರುಷರಿಗೆ ಮಾತ್ರ ಆಗುವುದಲ್ಲ ಎಂಬುದನ್ನು ಗುರುತಿಸಬೇಕು. ತೀರ್ಪಿನಲ್ಲಿ ಸಾಮಾನ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ವ್ಯಕ್ತಪಡಿಸುವ ಈ ಕೆಳಗಿನ ಮಾದರಿಗಳನ್ನು ನೋಡಬಹುದು :
* ಮಹಿಳೆಯರು ಅಬಲೆಯರು.
* ಮಹಿಳೆಯರು ಸ್ವತಂತ್ರ ತೀರ್ಮಾನಗಳನ್ನು ಮಾಡಲಾರರು.
* ಕುಟುಂಬದ ಯಜಮಾನಿಕೆ ಪುರುಷರದಾದ್ದರಿಂದ ಕುಟುಂಬಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳಬೇಕು.
* ಮಹಿಳೆಯರು ಯಾವತ್ತೂ ಆಜ್ಞಾಧಾರಕರು ಮತ್ತು ವಿಧೇಯರಾಗಿರಬೇಕು.
* ಗುಣವಂತ ಮಹಿಳೆಯರ ನಡತೆ ಉತ್ತಮವಾಗಿರುತ್ತದೆ.
* ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗಲು ಬಯಸುತ್ತಾಳೆ.
* ಮಕ್ಕಳನ್ನು ನೋಡಿಕೊಳ್ಳುವುದು ಮಹಿಳೆಯರದೇ ಜವಾಬ್ದಾರಿ.
* ಮಹಿಳೆಯರ ಮೇಲೆ ನಡೆಯುವ ದೌಜ್ಯನ್ಯಕ್ಕೆ ಅವರು ರಾತ್ರಿ ಹೊತ್ತಿನಲ್ಲಿ ಒಂಟಿಯಾಗಿರುವುದು, ಅವರು ಹಾಕಿಕೊಳ್ಳುವ ಉಡುಪುಗಳು ಕಾರಣ.
* ಮಹಿಳೆಯರು ಭಾವಜೀವಿಗಳು ಮತ್ತು ಉತ್ಪ್ರೇಕ್ಷಿತ/ನಾಟಕೀಯವಾಗಿ ಪ್ರತಿಕ್ರಿಯಿಸುತ್ತಾರೆ, ಆದ್ದರಿಂದ ಅವರು ಕೊಡುವ ಪುರಾವೆಗಳನ್ನು ದೃಢಪಡಿಸಿಕೊಳ್ಳಬೇಕು.
* ಲೈಂಗಿಕವಾಗಿ ಸಕ್ರಿಯರಾಗಿರುವ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಹಮತದ ಸಾಂಗತ್ಯವಿರುವುದನ್ನು ಪರೀಕ್ಷಿಸಲು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೊಡುವ ಪುರಾವೆಗಳನ್ನು ಸಂದೇಹವಿಟ್ಟೇ ನೋಡಬೇಕು.
* ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ದೈಹಿಕ ಗಾಯದ ಗುರುತುಗಳು ಮೇಲ್ನೋಟಕ್ಕೆ ಕಾಣದಿದ್ದರೆ ಅದನ್ನು ಸಹಮತದ ಲೈಂಗಿಕ ಸಂಬಂಧವೆಂದೇ ಪರಿಗಣಿಸಬೇಕು.
ಎಂಬಿತ್ಯಾದಿ ಮಹಿಳಾವಿರೋಧೀ, ಪ್ರಗತಿವಿರೋಧೀ ಮನಃಸ್ಥಿತಿಗಳಿಂದ ಪ್ರಜ್ಞಾಪೂರ್ವಕವಾಗಿ ಹೊರಬರಬೇಕು. ಮತ್ತು
* ಯಾವುದೇ ಕಾರಣಕ್ಕೂ ಜಾಮೀನು ಷರತ್ತುಗಳು ಸಂತ್ರಸ್ಥೆಯ ಜೊತೆಗೆ ಸಂಪರ್ಕಕ್ಕೆ ಆಸ್ಪದ ನೀಡಬಾರದು. ಕಿರುಕುಳ ಅಥವಾ ಒತ್ತಡದ ಸಂಭವವಿದ್ದಲ್ಲಿ ಸಂತ್ರಸ್ಥೆಗೆ ಸೂಕ್ತ ರಕ್ಷಣೆಯ ವ್ಯವಸ್ಥೆ ಮಾಡಲೇಬೇಕು. * ಆರೋಪಿಗೆ ಅಕಸ್ಮಾತ್ ಜಾಮೀನು ನೀಡಿದರೆ ತಕ್ಷಣವೇ ದೂರುದಾರರಿಗೆ ಮಾಹಿತಿ ಒದಗಿಸಬೇಕು. * ಜಾಮೀನಿನ ಷರತ್ತುಗಳಲ್ಲಿ ಮಹಿಳೆಯರ, ನಡೆ, ಚಾರಿತ್ರ್ಯಗಳ, ವಸ್ತ್ರ ಉಡುಗೆ ಮುಂತಾದವುಗಳ ಕುರಿತು ಪಿತೃಪ್ರಧಾನ ಮನೋಭಾವದ ಹೇಳಿಕೆಗಳನ್ನು ನೀಡಬಾರದು. * ಆರೋಪಿಯ ಜೊತೆ ಸಂತ್ರಸ್ಥೆಯ ವಿವಾಹ, ರಾಜಿ ಮುಂತಾದ ಕಾನೂನಿನ ಪರಿಧಿಗೆ ಒಳಪಡದ ಸಲಹೆಗಳನ್ನು ನ್ಯಾಯಾಲಯವು ಯಾವತ್ತೂ ನೀಡಬಾರದು. * ವಿಚಾರಣೆಯ ಸಂದರ್ಭದಲ್ಲಿ ದೂರುದಾರರು ಯಾವುದೇ ರೀತಿಯ ಮುಜುಗರ, ಗಾಬರಿ, ಒತ್ತಡಗಳಿಗೆ ಒಳಗಾಗದಂತೆ ನ್ಯಾಯಾಧೀಶರು ಸಂವೇದನಾಶೀಲರಾಗಿ ನಡೆದುಕೊಳ್ಳಬೇಕು. * ನ್ಯಾಯಾಧೀಶರು ಲಿಖಿತ ಅಥವಾ ಮೌಖಿಕವಾಗಿ ಸಂತ್ರಸ್ಥರ ವಿಶ್ವಾಸ ಕುಂದಿಸುವ ರೀತಿಯ ಹೇಳಿಕೆಗಳನ್ನು ನೀಡದೇ ನ್ಯಾಯಾಲಯವು ಪಾಲಿಸಬೇಕಾದ ನಿಷ್ಪಕ್ಷಪಾತ ನಡವಳಿಕೆಗಳನ್ನು ಪಾಲಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ.
ಅಟಾರ್ನಿ ಜನರಲ್ ರವರು ಪ್ರಸ್ತಾಪಿಸಿದಂತೆ ಎಲ್ಲ ಹಂತಗಳ ನ್ಯಾಯದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಕಡ್ಡಾಯವಾಗಿ ಲಿಂಗ ಸಂವೇದನಾಶೀಲತೆಯ ತರಬೇತಿಯನ್ನು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನ್ಯಾಯಾಂಗ ಅಕಾಡೆಮಿಯ ಮೂಲಕ ನೀಡುವುದು. ಮತ್ತು ಲಿಂಗ ಸಂವೇದನಾಶೀಲತೆಗೆ ಸಂಬಂಧಿಸಿದ ಎಲ್ಲ ನಿರ್ದೇಶನಗಳೂ ಎಲ್ಲ ಹಂತದ ನ್ಯಾಯಾಧೀಶರನ್ನು ಒಳಗೊಳ್ಳಬೇಕು. ಕಾನೂನು ವಿದ್ಯಾಲಯಗಳ ಪಠ್ಯಗಳಲ್ಲಿ ಲಿಂಗ ಸಂವೇದನೆಯ ಪಾಠಗಳು ಅಡಕಗೊಳ್ಳಬೇಕು, ಮತ್ತು ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷಾ ಪತ್ರಿಕೆಗಳು ಲಿಂಗ ಸಂವೇದನೆಯ ಕುರಿತ ಪ್ರಶ್ನೆಗಳನ್ನು ಹೊಂದಿರಬೇಕು. ಎಂಬ ಎಷ್ಟೋ ಕಾಲದಿಂದ ಮಹಿಳಾ ಚಳುವಳಿ ಎತ್ತುತ್ತಿದ್ದ ವಿಷಯಗಳನ್ನು ಸಲಹೆಯಾಗಿ ಮುಂದಿಟ್ಟಿದ್ದಾರೆ. ಇದರ ಜೊತೆಯೇ ಅವರು ಎಲ್ಲ ರಾಜ್ಯಗಳ ಉಚ್ಛ ನ್ಯಾಯಾಲಯಗಳ ಮಟ್ಟದಲ್ಲಿ ವಿಷಯ ಪರಿಣಿತರ ಸಹಾಯ ಪಡೆದು ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಪಠ್ಯವನ್ನು ಸಿದ್ಧಪಡಿಸಲು ಸಾಧ್ಯವಾಗಬೇಕೆಂದು ಸಲಹೆಯನ್ನೂ ನೀಡಿದ್ದಾರೆ.
ಈ ಹಿಂದೆಯೂ ಕೆಲವು ಪ್ರಕರಣಗಳಲ್ಲಿ ಮಹಿಳಾ ಪರ ಅಭಿಪ್ರಾಯಗಳು (ಉದಾಹರಣೆಗಳು ಈ ತೀರ್ಪಿನ ಆದೇಶದಲ್ಲಿಯೇ ಉಲ್ಲೇಖಿಸಿರುವಂತೆ) ಅಲ್ಲಲ್ಲಿ ಬಂದಿವೆ. ಆದರೆ ಬಹುತೇಕ ಸಮಾಜದ ಭಾಗವಾಗಿಯೇ ಮಹಿಳೆಯರ ಮತ್ತು ದಮನಿತರ ವಿಷಯಗಳಲ್ಲಿ ನ್ಯಾಯದಾನ ವ್ಯವಸ್ಥೆಯ ಮನೋಭಾವವೂ ಇರುವುದರಿಂದ ಸರ್ವೋಚ್ಛ ನ್ಯಾಯಾಲಯದ ಸರ್ವೋಚ್ಛ ವ್ಯಕ್ತಿಯ ಮೂಲಕವೂ ಪಾಳೆಯಗಾರಿ ಮೌಲ್ಯಗಳನ್ನು ಬಿಂಬಿಸುವ ಅಭಿಪ್ರಾಯಗಳನ್ನು ಹೊರಹಾಕಿಸುತ್ತಿರುತ್ತದೆ. ಅಂಥಹ ಅದೆಷ್ಟು ಪ್ರಕರಣಗಳು ನಮ್ಮ ಮುಂದಿವೆ. ಇತ್ತೀಚೆಗೆ ಮಧ್ಯಪ್ರದೇಶದಿಂದಲೇ ಬಂದ ರಾಜೀವ್ ಜಾಟವ್ ಮತ್ತು ಮಧ್ಯಪ್ರದೇಶ ಸರಕಾರ ನಡುವಿನ ಪ್ರಕರಣದಲ್ಲಿ (ಈ ಪ್ರಕರಣ ಕೂಡ ಅಲ್ಲಿಯದೇ ಎಂಬುದು ಗಮನಾರ್ಹ) ಆರೋಪಿಗೆ ಜಾಮೀನು ನೀಡಿದ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ಆತ ಕೊವಿಡ್ ಸೈನಿಕನಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಜಿಲ್ಲಾ ನ್ಯಾಯಾಧೀಶರ ವಿಪತ್ತು ನಿರ್ವಹಣೆಯ ಕಾರ್ಯದಡಿ ಕೆಲಸ ನಿರ್ವಹಿಸಬೇಕು, ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿತ್ತು!!. ಹಾಗೆಯೇ ನಮ್ಮದೇ ರಾಜ್ಯದಲ್ಲಿ ಉಚ್ಛನ್ಯಾಯಾಲಯವು ಲೈಂಗಿಕ ಕಿರುಕುಳದ ಪ್ರಕರಣವೊಂದರಲ್ಲಿ ಜಾಮೀನು ನೀಡಲು ದೂರುದಾರಳ ನಡತೆಯನ್ನು ಪ್ರಶ್ನಿಸಿ ಅಭಿಪ್ರಾಯ ವ್ಯಕ್ತ ಪಡಿಸಿದ ಘಟನೆ ಕೂಡಾ ಇನ್ನೂ ಹಸಿ ಹಸಿ ಇದೆ.
ಈ ಪ್ರಕರಣದಲ್ಲಿ ನ್ಯಾಯಾಲಯವು ಅಂಥಹ ಅಂಶಗಳನ್ನು ಗುರುತಿಸಿದೆ ಪ್ರಸ್ತಾಪಿಸಿದೆ ಮತ್ತು ನ್ಯಾಯದಾನ ವ್ಯವಸ್ಥೆಯೊಳಗೆ ಬರಬೇಕಾದ ಸಂವೇದನಾಶೀಲತೆಯ ಕುರಿತು, ಆಗಲೇ ಬೇಕಾದ ಬದಲಾವಣೆಯ ಕುರಿತು ಮಾತನಾಡಿದೆ ಎನ್ನುವ ಕಾರಣಕ್ಕಾಗಿ ಇದೊಂದು ವಿಶೇಷ ಉಲ್ಲೇಖಾರ್ಹ ನ್ಯಾಯತೀರ್ಪು ಎಂದು ನಾನು ಭಾವಿಸುತ್ತೇನೆ.
ನನಗೆ ಇದು ಕತ್ತಲ ಸುರಂಗದೊಳಗೆ ತಡಕಾಡುತ್ತ ನಡೆಯುವಾಗ ಸಿಕ್ಕ ಬೆಳಕಿನ ಕೋಲಿನಂತೆ ಕಾಣುತ್ತಿದೆ. ಆದರೆ ಇದು ಒಮ್ಮೊಮ್ಮೆ, ಕೆಲವರಿರುವ ಪೀಠಗಳಿಂದ ಮಾತ್ರ ಬರುವ ನ್ಯಾಯದಾನದ ಭಾಗವಾಗಿರದೇ ಇಡೀ ನ್ಯಾಯಾಂಗ ವ್ಯವಸ್ಥೆ ಈ ತೆರನ ಸಂವೇದನಾಶೀಲತೆಗೆ ಒಳಗಾಗಲು ಸಾಧ್ಯವಾಗುವ ಸನ್ನಿವೇಶ ನಿರ್ಮಾಣವಾಗಬೇಕು. ಅದು ಮಾತ್ರವೇ ಸಮಾಜದ ಪರಿವರ್ತನೆಯ ಭಾಗವಾಗಿ ಒಂದು ಹೆಜ್ಜೆಯಾಗಬಹುದು. ಮತ್ತು ದೇಶದ ಸಂವಿಧಾನದತ್ತ ಘನತೆಯ ಬದುಕಿನ ಜಾರಿಯತ್ತ ಮಹತ್ವದ ಹೆಜ್ಜೆಯೂ ಆಗಬಹುದು.