ಬರ ಪರಿಸ್ಥಿತಿ ನಿರ್ವಹಿಸುವುದರಲ್ಲಿ ಸರ್ಕಾರ ವಿಫಲ| ರಾಜ್ಯಪಾಲರಿಗೆ ಹೆಚ್.ಡಿ.ಕುಮಾರಸ್ವಾಮಿ ದೂರು

ಬೆಂಗಳೂರು: ರಾಜ್ಯಾದ್ಯಂತ ಜೆಡಿಎಸ್ ಪಕ್ಷ ನಡೆಸಿದ್ದ ಬರ ಅಧ್ಯಯನ ವರದಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ಡಿಸೆಂಬರ್-3 ಭಾನುವಾರ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿದರು.

ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ಜೊತೆ ರಾಜಭವನಕ್ಕೆ ನಿಯೋಗದಲ್ಲಿ ತೆರಳಿದ ಅವರು, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರದಿಂದ ಅನುದಾನ ಕೊಡಿಸಲು ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯಪಾಲರು, ನಿಮ್ಮ ಅಹವಾಲನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ರಾಜ್ಯ ಎದುರಿಸುತ್ತಿರುವ ತೀವ್ರ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಇದನ್ನೂ ಓದಿ:4 ರಾಜ್ಯಗಳ ಚುನಾವಣಾ ಫಲಿತಾಂಶ 2023 : 3 ರಾಜ್ಯದಲ್ಲಿ ಬಿಜೆಪಿ ಮುನ್ನಡೆ, ತೆಲಂಗಾಣದಲ್ಲಿ ಕಾಂಗ್ರೆಸ್‌

ಮಾನ್ಸೂನ್ ವೈಫಲ್ಯದಿಂದ ರಾಜ್ಯದಲ್ಲಿ ಒಟ್ಟು 48.15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ 46.09 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ರಾಜ್ಯ ಸರಕಾರವೇ ಅಂದಾಜು ಮಾಡಿರುವಂತೆ ರಾಜ್ಯದಲ್ಲಿ ಒಟ್ಟು 35.162.02 ಕೋಟಿ ರೂಪಾಯಿಯಷ್ಟು ಬೆಳೆ ಹಾನಿ ಆಗಿದ್ದು, ಎನ್‌ಸಿಆರ್‌ಎಫ್ ಮಾನದಂಡದ ಅಡಿಯಲ್ಲಿ ಕೇಂದ್ರ ಸರಕಾರದಿಂದ 18,171.44 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರಕಾರ ಕೋರಿದೆ. ಆದರೆ, ಇಷ್ಟು ಮೊತ್ತದ ಪರಿಹಾರದಿಂದ ರಾಜ್ಯದ ರೈತರ ಬವಣೆ ನೀಗುವುದಿಲ್ಲ. ಕೃಷಿಕರು ಅನುಭವಿಸಿರುವ ಒಟ್ಟಾರೆ ನಷ್ಟದಲ್ಲಿ ಶೇ.10ರಷ್ಟು ಪರಿಹಾರವೂ ಅವರಿಗೆ ಸಿಗುವುದಿಲ್ಲ. ಆದ್ದರಿಂದ ಈ ಹಿಂದೆ ನೀಡಿದಂತೆ ಪ್ರತಿ ಹೆಕ್ಟೇರ್ ಬೆಳೆ ನಾಶಕ್ಕೆ ಹೆಚ್ಚುವರಿ ಪರಿಹಾರವಾಗಿ 17,500 ರೂಪಾಯಿ ನೀಡಬೇಕು. ಈ ನಿಟ್ಟಿನಲ್ಲಿ ತಾವು ರಾಜ್ಯ ಸರಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಾನುವಾರುಗಳು ಕೂಡ ಸಂಕಷ್ಟದಲ್ಲಿವೆ. ರಾಜಧಾನಿ ಬೆಂಗಳೂರಿನಲ್ಲಿಯೂ ನೀರಿನ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ಬರ ಪರಿಸ್ಥಿತಿಯನ್ನು ಬಹಳ ಅಸಡ್ಡೆಯಿಂದ ನೋಡುತ್ತಿದೆ. ತೀವ್ರ ನಷ್ಟ ಅನುಭವಿಸಿದ ರೈತರಿಗೆ ಬರ ಪರಿಹಾರ ನೀಡದೆ ರಾಜ್ಯ ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ಅಂಶವನ್ನು ರಾಜ್ಯಪಾಲರ ಗಮನಕ್ಕೆ ತಂದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಆರಂಭವಾಗಿದೆ. ಕಳೆದ ಆರು ತಿಂಗಳಿನಿಂದ ರಾಜ್ಯ ಸರಕಾರ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ. ರಾಜಕೀಯದಲ್ಲಿ ಮೈ ಮರೆತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರು ಸೇರಿದಂತೆ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರು ಕುಮಾರಸ್ವಾಮಿಯವರ ಅವರಿಗೆ ಸಾಥ್ ನೀಡಿದರು.

ವಿಡಿಯೋ ನೋಡಿ:ಮೋದಿ ಸರಕಾರದ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ರೈತರು ಮೃತ್ಯು: ವಿಜೂ ಕೃಷ್ಣನ್ ಆರೋಪJanashakthi Media

Donate Janashakthi Media

Leave a Reply

Your email address will not be published. Required fields are marked *