ಮಹಾಸೋಂಕು ಮತ್ತು ವರ್ಗವಿಭಜನೆ

ನೈಸರ್ಗಿಕ ವಿಕೋಪಗಳು, ಅಂಟುಜಾಡ್ಯಗಳು ಹಾಗೂ ಪರಿಸರ ನಾಶ ಇವುಗಳ ಪರಿಣಾಮಗಳು ಎಲ್ಲ ವರ್ಗಗಗಳ ಮೇಲೂ ಒಂದೇ ತೆರನಾಗಿರುವುದಿಲ್ಲ. ಇವುಗಳಿಂದಾಗಿ ಹೆಚ್ಚು ಬಾಧೆಪಡುವುದು ಬಡವರೇ. ಈ ಮಹಾಸೋಂಕಿನ ಸಮಯದಲ್ಲಿ ಶೇರು ಮಾರುಕಟ್ಟೆಯು ಬಹಳ ಮುಂಚೆಯೇ ಚೇತರಿಸಿಕೊಂಡಿತು ಮತ್ತು ಹಣಕಾಸಿನ ಲಾಭಗಳು ಹೆಚ್ಚಾದವು. ತಂತ್ರಜ್ಞಾನದ ದೈತ್ಯ ಕಂಪನಿಗಳ ಲಾಭಗಳು ವಿವಿಧ ರೂಪದಲ್ಲಿ ಹೆಚ್ಚಾದವು ಮತ್ತು ದೊಡ್ಡ ಚಿಲ್ಲರೆ ವ್ಯಾಪಾರಿಗಳ ಆನ್‌ಲೈನ್ ಖರೀದಿಯು ಈ ಸಮಯದಲ್ಲಿಯೇ ವ್ಯಾಪಕವಾಗಿ ವಿಸ್ತಾರಗೊಂಡಿದೆ. ಮುಖೇಶ್ ಅಂಬಾನಿಯವರು ಇದೇ ಸಮಯದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕಾರ್ಪೊರೇಟ್‌ಗಳನ್ನು ಪಾರು ಮಾಡಲಾಗುತ್ತದೆ ಮತ್ತು ಸಂಪಾದನೆಯಲ್ಲಿ ನಷ್ಟ, ನಿರುದ್ಯೋಗ, ಹಸಿವು, ಸಾವು ಮತ್ತು ಹಾನಿಯ ರೂಪದಲ್ಲಿ ಮಹಾಸೋಂಕಿನ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬಡವರು ಅನುಭವಿಸಬೇಕಾಗುತ್ತದೆ.

ಸಂಜಯ್ ರಾಯ್

ಮಹಾಸೋಂಕು ಮತ್ತು ಅದರ ಪರಿಣಾಮಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಪ್ರಕಟಗೊಂಡಿವೆ, ಬಹಳ ಮುಖ್ಯವಾಗಿ, ಜನವರ್ಗಗಳು ಹಾಗೂ ಜನವಿಭಾಗಗಳ ಮೇಲೆ ಬೀರಿದ ಅದರ ವಿಭಿನ್ನ ಪರಿಣಾಮಗಳು, ಬಂಡವಾಳಶಾಹಿ ತನ್ನ ಸಂಚಯನದ ಪ್ರಕ್ರಿಯೆಯಲ್ಲಿ ಆಳವಾದ ಕಂದರಗಳನ್ನು ಹಾಗೂ ಸಂರಚನಾ ವಿಭಜನೆಗಳನ್ನು ಹುಟ್ಟುಹಾಕುತ್ತದೆ ಎಂಬುದನ್ನು ಹೊರಗೆಡಹಿವೆ.

ಇಪ್ಪತ್ತನೇ ಶತಮಾನದಲ್ಲಿ 1918 ರ ‘ಸ್ಪಾನಿಶ್ ಫ್ಲೂ’ನ ನಂತರ ನಾವು ಎರಡು ಮಹಾಸೋಂಕುಗಳನ್ನು (1957 ರ ಏಶಿಯನ್ ಫ್ಲೂ ಮತ್ತು 1968 ರ ಹಾಂಗ್‌ಕಾಂಗ್ ಫ್ಲೂ) ಎದುರಿಸಿದ್ದೇವೆ. ಇಪ್ಪತ್ತೊಂದನೇ ಶತಮಾನದಲ್ಲಿ ನಾವು ಈಗಾಗಲೇ 2009 ರಲ್ಲಿ ಏವಿಯನ್ ಫ್ಲೂ, 2002 ರಲ್ಲಿ ಸಾರ‍್ಸ್‌(SARS), 2012 ರಲ್ಲಿ ಮೆರ‍್ಸ್‌(MERS) ಮತ್ತು 2013-14 ರಲ್ಲಿ ಎಬೋಲಾ ಅಂತಿಮವಾಗಿ ಈಗ 2020ರಲ್ಲಿ ಕೋವಿಡ್-19 ಕಾಣುತ್ತಿದ್ದೇವೆ.

ಈ ಮಹಾಸೋಂಕುಗಳ ಪುನರಾವರ್ತನೆಯು ಕಾಲ ಸರಿದಂತೆ ಹೆಚ್ಚಾಗುತ್ತಲೇ ಇದೆ ಮತ್ತು ಬಹು ಮುಖ್ಯವಾಗಿ, ನಂತರದ ಈ ಬಹುತೇಕ ಮಹಾಸೋಂಕುಗಳ ಮೂಲವನ್ನು ಜಾಗತಿಕ ದಕ್ಷಿಣದಲ್ಲಿ ಪತ್ತೆಹಚ್ಚಲಾಗಿದೆ. ಇತ್ತೀಚಿನ ಪ್ರಕರಣಗಳಲ್ಲಿ ಮಾನವ-ಮಾನವರ ನಡುವಿನ ಹರಡಿಕೆ ಉಂಟಾಗಿರುವುದು ಇಲ್ಲಿಯೇ,  ವಿಶೇಷವಾಗಿ ಜಾಗತಿಕ ಕೃಷಿ ವ್ಯಾಪಾರದ ಕೇಂದ್ರಗಳಾದ ಪಟ್ಟಣಗಳಲ್ಲಿ; ವಾಣಿಜ್ಯ ಮಾರ್ಗಗಳು ಮತ್ತು ಜಾಗತಿಕ ಮೌಲ್ಯ ಸರಪಳಿಗಳ ಮೂಲಕ ಅದು ಜಾಗತಿಕವಾಗಿ ಹಬ್ಬಿದೆ; ಬಹುವಾಗಿ ಪಟ್ಟಣಗಳ, ಜನನಿಬಿಡ ಕೊಳಚೆ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು ಹಾಗೂ ವಲಸಿಗರ ಸಮೂಹಗಳಲ್ಲಿ ಆ ವೈರಾಣುವು ಬಹುವಾಗಿ ಹರಡುತ್ತದೆ ಎಂದು ಪರಿಗಣಿಸಲಾಗಿದೆ. ಆದರೆ ಈ ಬಾರಿ ಅದರ ಹರಡಿಕೆ, ಹಿಂದಿನ ರೋಗಗಳಂತೆ ಜಗತ್ತಿನ ಕತ್ತಲ ಹಾಗೂ ಬಡವರ ಪ್ರದೇಶಕ್ಕೆ ಸೀಮಿತವಾಗಲಿಲ್ಲ; ಬದಲಿಗೆ ಅದು ಬಂಡವಾಳವಾದದ ಕೋಟೆಗೆ ಲಗ್ಗೆಯಿಟ್ಟಿದೆ, ಶ್ರೀಮಂತರು ಹಾಗೂ ಸಂಪದ್ಭರಿತ ಕೇಂದ್ರಗಳು ತಾವು ಇದರಿಂದ ದೂರವಿರುತ್ತೇವೆ, ಬಡವರಿಗೆ ನೆರವು ಒದಗಿಸುವವರಾಗಿಯೇ ಇರುತ್ತೇವೆ ಎಂದು ಕಾಣುವುದು ಸಾಧ್ಯವಾಗಲಿಲ್ಲ.

ನಿರ್ದಯ ಲಾಭಕೋರತನ

ಬಂಡವಾಳಶಾಹಿಯು ತನ್ನ ನವ-ಉದಾರವಾದಿ ಹಂತದಲ್ಲಿ ನಿಸರ್ಗವನ್ನು ನಿರ್ದಯವಾಗಿ ತನ್ನ ಲಾಭದಾಸೆಗೆ ಬಳಸಿಕೊಳ್ಳುತ್ತದೆ ಮತ್ತು ಶ್ರಮ ಹಾಗೂ ನಿಸರ್ಗ ಸುಲಭವಾಗಿ ಕಡಿಮೆ ಬೆಲೆಗೆ ಸಿಗುವಂತಹ ಸ್ಥಳಗಳಿಗೆ ತನ್ನ ಉತ್ಪಾದನಾ ಚಟುವಟಿಕೆಗಳನ್ನು ವರ್ಗಾಯಿಸುತ್ತದೆ. ಲಾಭ ಗಳಿಕೆಗಾಗಿಯೇ ಜಾನುವಾರು ಕ್ರಾಂತಿ ಮತ್ತು ಅದರ ಪರಿಣಾಮವಾಗಿ ಆಹಾರ ಉತ್ಪನ್ನಗಳ ಸರಕೀಕರಣ, ಲಂಬಾತ್ಮಕ ಸಮಗ್ರೀಕರಿಸಿದ ಸಂರಚನೆಗಳಲ್ಲಿ ದೊಡ್ಡ ಪ್ರಮಾಣದ ಉತ್ಪಾದನೆ, ಜೈವಿಕ ತಂತ್ರಜ್ಞಾನದ ಹೊಸ ಶೋಧಗಳು ಮತ್ತು ಅಂತಹ ಮೌಲ್ಯ ಸರಪಳಿಗಳ ಕಾರ್ಪೊರೇಟೀಕರಣ ಇವುಗಳನ್ನೆಲ್ಲ ವಿಮರ್ಶಾತ್ಮಕವಾಗಿ ನೋಡಬೇಕಾದ ಅಗತ್ಯವಿದೆ.

ಜಾನುವಾರು ತಳಿ ಬೆಳೆಸುವಿಕೆ, ಜಲಕೃಷಿ, ತೋಟಗಾರಿಕೆ ಮತ್ತು ದೊಡ್ಡ ಪ್ರಮಾಣದ ಕೋಳಿ ಸಾಕಾಣಿಕೆ ಹಾಗೂ ಹಂದಿ ಸಾಕಾಣಿಕೆ ಉದ್ದಿಮೆಯನ್ನು ಕಾರ್ಪೊರೇಟೀಕರಣಗೊಳಿಸಲಾಗಿದೆ. ಇದರಲ್ಲಿ ಅಪಾರ ಪ್ರಮಾಣದ ಹೂಡಿಕೆಗಳು ಮತ್ತು ದೇಶದ ಉದ್ದಗಲಕ್ಕೂ ಮೌಲ್ಯ ಸರಪಳಿಗಳು ಉಂಟಾಗಿವೆ. ಉತ್ಪಾದನೆಗಳನ್ನು ದಕ್ಷಿಣ ಗೋಳಾರ್ಧದಲ್ಲಿ ನೆಲೆಗೊಳಿಸಲಾಗಿದೆ; ಏಕೆಂದರೆ ಅಲ್ಲಿ ಮೇವು ಉತ್ಪಾದನೆ, ಬಹು ನಿರ್ದಿಷ್ಟವಾಗಿ ಕಾಳುಗಳ ಉತ್ಪಾದನೆಯ ವೆಚ್ಚ ಬಹಳ ಕಡಿಮೆ, ಕೂಲಿದರಗಳು ಮುಂದುವರಿದ ದೇಶಗಳ ಸರಾಸರಿಗಿಂತ ಬಹಳ ಕಡಿಮೆ ಇರುತ್ತವೆ ಮತ್ತು ಪರಿಸರ ನಿಯಮಗಳು ಸಡಿಲವಾಗಿವೆ. ಅಂತಹ ಕೃಷಿವಾಣಿಜ್ಯ ಸರಪಳಿಗಳ ಕೊನೆತಾಣಗಳು ವೈರಾಣುಗಳ ಸಾರಿನ ತಟ್ಟೆಗಳಾಗಿವೆ, ಅಲ್ಲಿ ಮನುಷ್ಯರು ಪ್ರಾಣಿಗಳು, ಪಕ್ಷಿಗಳ ಜತೆ ಹತ್ತಿರದ ಸಂಪರ್ಕ ಪಡೆಯುತ್ತಾರೆ, ಮನುಷ್ಯರ ದೇಹಕ್ಕೆ ಅಲ್ಲಿ ರೋಗಕಾರಕಗಳು ಸುಲಭವಾಗಿ ಪ್ರವೇಶ ಪಡೆಯುತ್ತವೆ.

ವಾತಾವರಣ ಬದಲಾವಣೆ, ಅರಣ್ಯನಾಶ ಮತ್ತು ಮನುಷ್ಯರಿಂದ ಜೀವವೈವಿಧ್ಯ ಹಸ್ತಕ್ಷೇಪಗಳು ಕೆಲವು ವೇಳೆ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತವೆ ಹಾಗೂ ಕಾಡುಪ್ರಾಣಿಗಳ, ಪಕ್ಷಿಗಳ ಹಾಗೂ ಕೀಟಗಳ ಆವಾಸಸ್ಥಾನಗಳು ನಾಶವಾಗುತ್ತವೆ; ಅಂತಿಮವಾಗಿ ಈ ಆವಾಸಸ್ಥಾನಗಳಿಗೆ ಬಹಳ ಸಮೀಪದಲ್ಲಿರುವ ಜನರಿಗೆ ರೋಗ ಅಂಟಿಕೊಳ್ಳುತ್ತದೆ. ನಿಜ ಹೇಳಬೇಕೆಂದರೆ ಬೇರೆಲ್ಲಾ ಜೀವಿಗಳಿಗೆ ಇಲ್ಲದ ಅನುಕೂಲಗಳು ಮನುಷ್ಯರಿಗೆ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ ಸೃಷ್ಟಿಮಾಡಿಕೊಳ್ಳುವ ಅಸಾಧಾರಣ ಸಾಮರ್ಥ್ಯ ಇರುತ್ತದೆ; ಮತ್ತು ಅವರು ತಮ್ಮ ಸುತ್ತಮುತ್ತಲ ವಾತಾವರಣವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ ಹಾಗೂ ಆ ಪ್ರಕ್ರಿಯೆಯಲ್ಲಿ ಅವರು ಕೂಡ ಬದಲಾಗುತ್ತಾರೆ. ಆದರೆ ಮನುಷ್ಯರು ನಿಸರ್ಗದ ಅವಿಭಾಜ್ಯ ಅಂಗವೇ ಆಗಿದ್ದಾರೆ, ಅದರೊಳಗೇ ಬದುಕುತ್ತಾರೆ ಮತ್ತು ಲಾಭವನ್ನು ಬೆನ್ನತ್ತುವ ಬಂಡವಾಳವಾದವು ನಿಯಂತ್ರಣವೇ ಇಲ್ಲದೆ ನಿಸರ್ಗವನ್ನು ಸ್ವಾಧೀನಪಡಿಸಿಕೊಳ್ಳುವ ಸ್ವಾಯತ್ತ ಪ್ರಕ್ರಿಯೆಗೆ ಶಕ್ತಿತುಂಬುತ್ತದೆ, ಅದು ಅಂತಿಮವಾಗಿ ಬಂಡವಾಳವಾದಕ್ಕಷ್ಟೇ ಅಲ್ಲ, ಅಂತಿಮವಾಗಿ, ಮಾನವ ಕುಲಕ್ಕೇ ಬಿಕ್ಕಟ್ಟನ್ನು ಸೃಷ್ಟಿ ಮಾಡುತ್ತದೆ.

ಲಾಭಕ್ಕಾಗಿನ ಲಂಗುಲಗಾಮಿಲ್ಲದ ಹಂಬಲದ ಕಾರಣ ನೈಸರ್ಗಿಕ ಪ್ರಕ್ರಿಯೆಯಲ್ಲಿ ಮನುಷ್ಯನ ಹಸ್ತಕ್ಷೇಪವಾಗುತ್ತಿರುವುದು ಮತ್ತು ಆ ಕಾರಣ ಪರಸ್ಪರ ಸಂಬಂಧವಿರುವ ಪ್ರಕ್ರಿಯೆಗಳ ಪರಿಣಾಮಗಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೇ ನಿಯಂತ್ರಣಕ್ಕೆ ಒಳಪಡಿಸುವ ಪ್ರಯತ್ನ ನಡೆಯುತ್ತವೆ ಎಂಬುದನ್ನು ಪ್ರಸ್ತುತ ಮಹಾಸೋಂಕು ಮತ್ತೊಮ್ಮೆ ಒತ್ತಿ ಹೇಳುತ್ತಿದೆ. ಇದು ಒಂದು ನಿರ್ದಿಷ್ಟ ವರ್ಗ ಪ್ರಕ್ರಿಯೆಯ, ಅಂದರೆ ಬಂಡವಾಳ ಸಂಬಂಧಗಳ ವರ್ಗ ಪ್ರಕ್ರಿಯೆಯ ಗುಣಲಕ್ಷಣಗಳೇ ಹೊರತು ಹೊರತು ವಿಶಿಷ್ಟ ಗುಣಲಕ್ಷಣಗಳು; ಎಲ್ಲಾ ರೀತಿಯ ಮನುಷ್ಯನ ತೊಡಗುವಿಕೆಗೆ ನಿಸರ್ಗ ತೋರುವ ಅನಿವಾರ್ಯ ಪ್ರತೀಕಾರವಂತೂ ಖಂಡಿತಾ ಅಲ್ಲ. ನೈಸರ್ಗಿಕ ವಿಕೋಪಗಳು, ಅಂಟುಜಾಡ್ಯಗಳು ಹಾಗೂ ಪರಿಸರ ನಾಶ ಇವುಗಳ ಪರಿಣಾಮಗಳು ಎಲ್ಲ ವರ್ಗಗಗಳ ಮೇಲೂ ಒಂದೇ ತೆರನಾಗಿರುವುದಿಲ್ಲ. ಇವುಗಳಿಂದಾಗಿ ಹೆಚ್ಚು ಬಾಧೆಪಡುವುದು ಬಡವರೇ ಸರಿ. ಏಕೆಂದರೆ ಅದನ್ನು ಸರಿಪಡಿಸಲು ಅಥವಾ ಸುರಕ್ಷತಾ ಉಪಕರಣಗಳನ್ನು ಕೊಳ್ಳಲು ಅಥವಾ ರೋಗ ವಾಸಿಮಾಡಿಕೊಳ್ಳಲು ಖರ್ಚು ಮಾಡುವ ಪರಿಸ್ಥಿತಿಯಲ್ಲಿ ಅವರು ಇಲ್ಲ. ಪೌಷ್ಟಿಕಾಂಶಗಳ ಕೊರತೆಯಿರುವವರು ರೋಗದಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ; ಬಡವರು ಜನನಿಬಿಡ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಾರೆ ಮತ್ತು ಬಹಳ ಸುಲಭವಾಗಿ ರೋಗಕ್ಕೆ ಸಿಲುಕಿಕೊಳ್ಳುತ್ತಾರೆ, ಅವರು ಮನೆಯಲ್ಲಿ ಇರಲು ಸಾಧ್ಯವಿಲ್ಲ, ದುಡಿಯಲು ಹೊರಗೆ ಹೋಗಲೇ ಬೇಕಾಗುತ್ತದೆ, ಅವರ ಬಳಿ ಯಾವ ಉಳಿತಾಯದ ಹಣವೂ ಇರುವುದಿಲ್ಲ, ಮನೆಯಿಂದ ಕೆಲಸ ಮಾಡುವ ಆಯ್ಕೆ ಅವರಿಗಿರುವುದಿಲ್ಲ; ಅನೌಪಚಾರಿಕ ಕೆಲಸಗಾರರು, ವಲಸೆ ಕಾರ್ಮಿಕರು ಮತ್ತು ಸ್ವಯಂಉದ್ಯೋಗಿಗಳು ತಮ್ಮ ಕೆಲಸ ಹಾಗೂ ಆದಾಯ ಕಳೆದುಕೊಳ್ಳುತ್ತಾರೆ; ಆದರೆ ಶ್ರೀಮಂತರು ತಮ್ಮ ಹಣ, ಅಧಿಕಾರ ಹಾಗೂ ಸಾಮಾಜಿಕ ಬಂಡವಾಳವನ್ನು ಬಳಸಿ ಕಷ್ಟದ ದಿನಗಳಲ್ಲೂ ಹೇಗೋ ಪಾರಾಗುತ್ತಾರೆ.

ಮಾನಸಿಕ ಹಾಗೂ ದೈಹಿಕ ಶ್ರಮದ ನಡುವಿನ ವಿಭಜನೆ ಮತ್ತು ವರ್ಗ ವಿಭಜಿತ ಸಮಾಜಗಳು ಸೃಷ್ಟಿಸಿರುವ ಕಲ್ಪಿತ ಶ್ರೇಣಿವ್ಯವಸ್ಥೆಯು ಹಿಂದೆಂದಿಗಿಂತಲೂ ಈಗ ಹೆಚ್ಚು ಸ್ಪಷ್ಟವಾಗಿದೆ. ಉತ್ಪಾದನೆಯ ತೀವ್ರತರದ ಚಟುವಟಿಕೆಗಳಲ್ಲಿ ಸಮಾಜದ ಕಡುಬಡವ ವಿಭಾಗಗಳು ಪ್ರಮುಖವಾಗಿ ದೈಹಿಕ ಶ್ರಮವನ್ನು ಪೂರೈಸುತ್ತಾರೆ, ಅದೇ ಸಮಯದಲ್ಲಿ ಮಾನಸಿಕ ಶ್ರಮವನ್ನು ದೂರದಿಂದಲೇ ನಿರ್ವಹಿಸುವಲ್ಲಿ ಶ್ರೀಮಂತರು ಹಾಗೂ ಮಧ್ಯಮ ವರ್ಗದವರು ಬಹುವಾಗಿ ತೊಡಗಿಕೊಳ್ಳುವುದನ್ನು ಕಾಣುತ್ತೇವೆ. ಇದಕ್ಕೂ ಮಿಗಿಲಾಗಿ, ವಾಸ್ತವವಾಗಿ ಕೆಲಸಮಾಡುವ ಶ್ರಮಜೀವಿಗಳು ಸೋಂಕು ತಗುಲುವ ಅಪಾಯದಲ್ಲಿ ಇರುತ್ತಾರೆ ಮತ್ತು ಅವರನ್ನು ‘ಕೊರೋನಾ ವಾಹಕ’ರು ಎಂದು ಹೀಯಾಳಿಸಲಾಗುತ್ತಿದೆ; ಈ ಕಾರಣದಿಂದಾಗಿ ಅವರನ್ನು ಮೆಟ್ರೋ ನಗರಗಳಿಂದ ಉಚ್ಛಾಟಿಸುವುದು ಒಂದು ಕಡೆಯಾದರೆ, ಸರ್ಕಾರಗಳು ಹಾಗೂ ಜನಸಮುದಾಯ ಅವರ ಮೇಲೆ ಕಳಂಕ ಹೊರಿಸಿ ಅಪಪ್ರಚಾರ ಮಾಡುತ್ತಿರುವುದರಿಂದಾಗಿ ಶ್ರಮಜೀವಿಗಳ ಊರುಗಳಲ್ಲಿ ಕೂಡ ಅವರನ್ನು ಸೇರಿಸಿಕೊಳ್ಳದಿರುವ ಅಮಾನವೀಯ ಸ್ಥಿತಿಯನ್ನು ತಲುಪಿದೆ.

ಬಡವರೇ ಹೆಚ್ಚು ಕಷ್ಟ ಅನುಭವಿಸುತ್ತಾರೆ

ಈ ಮಹಾಸೋಂಕು ಎಲ್ಲರಿಗೂ ಒಂದೇ ಸಮನಾಗಿ ಕೆಟ್ಟದಾಗಿಲ್ಲ. ವಾಸ್ತವದಲ್ಲಿ, ಈ ಮಹಾಸೋಂಕಿನ ಸಮಯದಲ್ಲಿ ಶೇರು ಮಾರುಕಟ್ಟೆಯು ಬಹಳ ಮುಂಚೆಯೇ ಚೇತರಿಸಿಕೊಂಡಿತು ಮತ್ತು ಹಣಕಾಸಿನ ಲಾಭಗಳು ಹೆಚ್ಚಾದವು. ತಂತ್ರಜ್ಞಾನದ ದೈತ್ಯ ಕಂಪನಿಗಳ ಲಾಭಗಳು ವಿವಿಧ ರೂಪದಲ್ಲಿ ಹೆಚ್ಚಾದವು ಮತ್ತು ದೊಡ್ಡ ಚಿಲ್ಲರೆ ವ್ಯಾಪಾರಿಗಳ ಆನ್‌ಲೈನ್ ಖರೀದಿಯು ಈ ಸಮಯದಲ್ಲಿಯೇ ವ್ಯಾಪಕವಾಗಿ ವಿಸ್ತಾರಗೊಂಡಿದೆ. ಮುಖೇಶ್ ಅಂಬಾನಿಯವರು ಇದೇ ಸಮಯದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಅವರು ಈಗ ಒಂದು ಗಂಟೆಗೆ ರೂ.90 ಕೋಟಿ ಸಂಪಾದನೆ ಮಾಡುತ್ತಿದ್ದಾರೆ, ಆದರೆ ಅದೇ ಸಂದರ್ಭದಲ್ಲಿ ಶೇಕಡಾ 24 ರಷ್ಟು ಭಾರತೀಯರು ಮಾಸಿಕ ರೂ..3000/- ಕಿಂತಲೂ ಕಡಿಮೆ ಸಂಪಾದನೆ ಮಾಡುತ್ತಿದ್ದಾರೆ. ಇಂತಹ ಅಸಾಧಾರಣ ಕಾಲದಲ್ಲಿ ಭಾರತೀಯ ಬಿಲಿಯನರುಗಳ ಸಂಪತ್ತು 35% ಏರಿಕೆಯಾಗಿದೆ ಮತ್ತು ಕೃಷಿ ಕ್ಷೇತ್ರವನ್ನು ಹೊರತುಪಡಿಸಿ ಹಣಕಾಸಿನ ಕ್ಷೇತ್ರ ಈ ಸಮಯದಲ್ಲಿ ಹೆಚ್ಚು ತೊಂದರೆಗೆ ಒಳಗಾಗಿಲ್ಲ, ಏಕೆಂದರೆ ಅದರ ವ್ಯವಹಾರಗಳು ಡಿಜಿಟಲ್ ರೂಪದಲ್ಲಿ ನಡೆದಿವೆ.

ಬಡವರು ಮತ್ತು ಮಧ್ಯಮ ವರ್ಗದ ಮೇಲೆ ಈ ಮಹಾಸೋಂಕು ಬೀರಿದ ಪರಿಣಾಮಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿವೆ. ತಿಂಗಳಿಗೆ ರೂ.60,000 ಪಡೆಯುವ ಜನರ ಆದಾಯವು ಶೇಕಡಾ 10 ರಷ್ಟು ಕಡಿಮೆಯಾಗಿದ್ದರೆ, ರೂ.20,000 ಕಿಂತಲೂ ಕಡಿಮೆ ಆದಾಯ ಪಡೆಯುತ್ತಿರುವವರು ಸರಾಸರಿ ಶೇಕಡಾ 37 ರಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಇದು ಇನ್ನೂ ಮುಂದುವರೆದು, ಡಿಜಿಟಲ್ ವಿಭಜನೆ ಬಡವರು ಮತ್ತು ಬಡವರಲ್ಲದವರ ನಡುವೆ ಬಹು ದೊಡ್ಡ ಕಂದರವನ್ನು ಸೃಷ್ಟಿಮಾಡಿದೆ. ಶಿಕ್ಷಣ ಪಡೆಯುವಲ್ಲಿ, ಆರೋಗ್ಯ ಸೌಲಭ್ಯ, ಲಸಿಕೆ ಪಡೆಯುವಲ್ಲಿ ಹಾಗೂ ವಸ್ತುಗಳ ಖರೀದಿ ಹಾಗೂ ಮಾರಾಟದಲ್ಲಿ ಕೂಡ ಈ ವಿಭಜನೆಯನ್ನು ಸ್ಪಷ್ಟವಾಗಿ ಕಾಣಬಹುದು.

ಇವತ್ತು ಮಕ್ಕಳಿಗೆ ಏನು ಬೇಯಿಸಿ ಹಾಕಲಿ?

ಆಕ್ಸ್‌ಫಾಮ್ ಸಮೀಕ್ಷೆಯ ಪ್ರಕಾರ 32 ಕೋಟಿ ವಿದ್ಯಾರ್ಥಿಗಳು, ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೋವಿಡ್-19 ರ ಸಮಯದಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ, ಏಕೆಂದರೆ ಕೇವಲ ಶೇಕಡಾ 4 ರಷ್ಟು ವಿದ್ಯಾರ್ಥಿಗಳು ಮಾತ್ರ ಗಣಕಯಂತ್ರ(ಕಂಪ್ಯೂಟರ್) ಪಡೆಯಲು ಮತ್ತು ಶೇಕಡಾ 5 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅಂತರ್ಜಾಲ ಸಂಪರ್ಕ(ಇಂಟರ್ನೆಟ್ ಅಕ್ಸೆಸ್) ದೊರೆಯಿತು. ಸಮೀಕ್ಷೆಯು ಇನ್ನೂ ಮುಂದುವರೆದು ಹೇಳುವ ಪ್ರಕಾರ ಮೂರನೇ ಒಂದರಷ್ಟು ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಹಿಂದಿರುಗುವುದಿಲ್ಲ ಎಂದು ಶೇಕಡಾ 40 ರಷ್ಟು ಶಿಕ್ಷಕರು ಅಭಿಪ್ರಾಯಪಡುತ್ತಾರೆ. ಮುಂದಿನ ದಿನಗಳಲ್ಲಿ ಇದು ಗುರಿ ತಲುಪುವ ಹಾಗೂ ಸಂಪಾದನೆ ಮಾಡುವ ನಿಟ್ಟಿನಲ್ಲಿ ಉಳ್ಳವರು ಹಾಗೂ ಬಡವರ ನಡುವೆ ಇನ್ನೂ ಹೆಚ್ಚಿನ ಕಂದರ ಉಂಟುಮಾಡುತ್ತದೆ. ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ – ಭಾರತದ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ)ನ ಒಂದು ಅಂದಾಜಿನ ಪ್ರಕಾರ ಅದರ ಪಟ್ಟಿಯಲ್ಲಿರುವ ಕಂಪನಿಗಳು ಮಾರ್ಚ್ 2021 ರ ತ್ರೈಮಾಸಿಕದ ಕೊನೆಯಲ್ಲಿ ಕಳೆದ ದಶಕದಲ್ಲೇ ಮಿಗುತಾಯ ಹಾಗೂ ಮೀಸಲು ಹಣದಲ್ಲಿ ಅತ್ಯುತ್ತಮ ಬೆಳವಣಿಗೆಯ ಮೂಲಕ ಅತ್ಯಧಿಕ ಲಾಭವನ್ನು ಗಳಿಸಿವೆ, ಆದರೆ ಅದೇ ಸಮಯದಲ್ಲಿ ಸಣ್ಣ ಉದ್ದಿಮೆಗಳು ನಾಶವಾದವು, ಏಕೆಂದರೆ ಅವರ ಬಳಿ ತೊಡಗಿಸಿದ ಬಂಡವಾಳ(ವರ್ಕಿಂಗ್ ಕ್ಯಾಪಿಟಲ್) ಬಹಳ ಕಡಿಮೆ ಇದ್ದ ಕಾರಣ ಮುಂದುವರಿಸಲಾಗಲಿಲ್ಲ. ವಾಸ್ತವದಲ್ಲಿ, ಚೇತರಿಸಿಕೊಂಡ ಮೇಲೂ ನಿಧಿಯನ್ನು ಮತ್ತೆ ಭರ್ತಿ ಮಾಡಲು ಉಳಿತಾಯಗಳು ಬಹುತೇಕ ಬರಿದಾಗಿದ್ದವು ಮತ್ತು ತೊಡಗಿಸಿದ ಬಂಡವಾಳ ಬಹಳಷ್ಟು ಮುಗಿದಿದ್ದವು. ದೊಡ್ಡ ಕಾರ್ಪೊರೇಟ್ ಕಂಪನಿಗಳು ಚಿಕ್ಕ ಕಂಪನಿಗಳನ್ನು ವಶಪಡಿಸಿಕೊಂಡಿದ್ದರಿಂದಾಗಿ ಹೆಚ್ಚಿನ ಕ್ರೋಢೀಕರಣಕ್ಕೆ ಕಾರಣವಾಯಿತು ಮತ್ತು ಏಕಸ್ವಾಮ್ಯ ಕಾರ್ಪೊರೇಟ್‌ಗಳು ಬೆಳೆದವು.

ಈ ಮಹಾಸೋಂಕಿನ ಸನ್ನಿವೇಶವನ್ನು ಹಲವಾರು ಹಂತಗಳಲ್ಲಿ ಅಧಿಕಾರವನ್ನು ಚಲಾಯಿಸಲು ಹಾಗೂ ಕ್ರೋಢೀಕರಿಸಲು ಕೂಡ ಬಳಸಲಾಯಿತು. ಕುಟುಂಬಗಳಲ್ಲಿ, ಪುರುಷಪ್ರಾಧಾನ್ಯತೆಯ ತೀವ್ರಗೊಂಡ ಪ್ರತಿಪಾದನೆಯ ಭಾಗವಾಗಿ ಕೌಟುಂಬಿಕ ಹಿಂಸೆಯ ಘಟನೆಗಳು ಹೆಚ್ಚಾಗಿರುವುದನ್ನು ನೋಡುತ್ತೇವೆ. ಮತ್ತೊಂದೆಡೆ, ಅನೇಕ ಸಂಘಟನೆಗಳು ಹಾಗೂ ಸಂಸ್ಥೆಗಳಲ್ಲಿ, ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಎಲ್ಲರೂ ಪಾಲಿಸಲೇಬೇಕಾದ ಏಕಾಂತದ ಅನುಕೂಲವನ್ನು ಬಳಸಿಕೊಂಡು ಅಧಿಕಾರದಲ್ಲಿದ್ದ ಜನರು ತಮ್ಮ ಕೆಳಗಿನವರ ಮೇಲೆ ಸವಾರಿ ಮಾಡಲು ಶುರುಮಾಡಿದರು. ಕರಾಳ ಕಾರ್ಮಿಕ ಕಾನೂನುಗಳು ಮತ್ತು ಕೃಷಿ ಮಸೂದೆಗಳನ್ನು ಈ ಮಹಾಸೋಂಕಿನ ಸಮಯದಲ್ಲಿಯೇ ಯಾವುದೇ ಚರ್ಚೆಯಿಲ್ಲದೇ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ಕಷ್ಟದ ಸಮಯದಲ್ಲಿ, ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಿಸುವ ಕಾರ್ಯಸೂಚಿಯನ್ನು ಸರ್ಕಾರ ಮುಂದಕ್ಕೆ ತಂದಿತು. ಇದರಿಂದ ಹೆಚ್ಚು ನಷ್ಟ ಮಾಡಿಕೊಂಡ ಜನರಲ್ಲಿ ಕಾರ್ಮಿಕರೇ ಬಹಳ. 2019-2020ರ ಅವಧಿಯಲ್ಲಿ ನಿಯತಕಾಲಿಕ/ವೇತನ ಪಡೆಯುವ ಕಾರ್ಮಿಕರ ನೈಜ ಗಳಿಕೆಯು ಶೇಕಡಾ 7.6 ರಷ್ಟು ಕುಸಿಯಿತು ಮತ್ತು ಸ್ವಯಂ ಉದ್ಯೋಗಿಗಳ ಆದಾಯವು ಶೇಕಡಾ 26.4 ರಷ್ಟು ಇಳಿಯಿತು. ಭಾರತೀಯ ಕುಟುಂಬಗಳ ಶೇಕಡಾ 46 ರಷ್ಟು ಜನರು ತಮ್ಮ ಬದುಕು ಸಾಗಿಸಲು ಸಾಲ ಮಾಡಲೇ ಬೇಕಾಯಿತು. ಆದಕಾರಣ, ಲಾಭದ ದುರಾಸೆಯು ನಮ್ಮ ಬದುಕನ್ನೇ ಅಪಾಯಕ್ಕೊಡಿದೆ ಮತ್ತು ಪರಿಸರ, ನೈಸರ್ಗಿಕ ಸಂಪನ್ಮೂಲಗಳ ಲಂಗುಲಗಾಮಿಲ್ಲದ ವಿನಾಶವು ರೋಗ ಹಾಗೂ ಸಾವಿಗೆ ಕಾರಣವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕಾರ್ಪೊರೇಟ್‌ಗಳನ್ನು ಪಾರು ಮಾಡಲಾಗುತ್ತದೆ ಮತ್ತು ಸಂಪಾದನೆಯಲ್ಲಿ ನಷ್ಟ, ನಿರುದ್ಯೋಗ, ಹಸಿವು, ಸಾವು ಮತ್ತು ಹಾನಿಯ ರೂಪದಲ್ಲಿ ಮಹಾಸೋಂಕಿನ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬಡವರು ಅನುಭವಿಸಬೇಕಾಗುತ್ತದೆ.

ಅನು: ಟಿ. ಸುರೇಂದ್ರ ರಾವ್‌

Donate Janashakthi Media

Leave a Reply

Your email address will not be published. Required fields are marked *