ಬೆಳಗಾವಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನಾಯಕರು ನೀಡಿದ್ದ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಬೃಹತ್ ಬಹಿರಂಗ ಸಭೆಗೆ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾದ ಪರಿಣಾಮವಾಗಿ ವಿವಾದ ಮತ್ತಷ್ಟು ಭುಗಿಲೆದ್ದಿದೆ.
ಮಹಾರಾಷ್ಟ್ರದ ತಕಾರಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಬಳಿ ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ನೋಂದಣಿ ಫಲಕ ಹೊಂದಿರುವ ವಾಹನಗಳ ಮೇಲೆ ದಾಳಿ ನಡೆಸಿ ವಾಹನದ ಗಾಜುಗಳನ್ನು ಪುಡಿ ಮಾಡಲಾಗಿದೆ. ಸ್ಥಳದಲ್ಲಿದ್ದ ಪೊಲೀಸರೊಂದಿಗೆ ವಾಗ್ದಾದ ನಡೆಸಿದ ಪ್ರತಿಭಟನಾಕಾರರು, ಪರಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪಕ್ಕೆ ತಿರುಗಿದೆ. ಪ್ರಕ್ಷಬ್ದ ಸನ್ನಿವೇಶವನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ನಗರದತ್ತ ನುಗ್ಗಲು ಯತ್ನಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಹಾರಾಷ್ಟ್ರ ನೋಂದಣಿಯ 5ಕ್ಕೂ ಹೆಚ್ಚು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಲಾರಿಯ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಜೊತೆಗೆ ಮಹಾರಾಷ್ಟ್ರ ನೋಂದಣಿ ಇರುವ ಫಲಕದ ಮೇಲೂ ಕಪ್ಪುಮಸಿ ಬಳಿದು ಆಕ್ರೋಶ ಹೊರಹಾಕಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬೆಳಗಾವಿ ಪೊಲೀಸರು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರೊಂದಿಗೆ, ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಪೊಲೀಸ್ ವಾಹನವೇರಿದ ಕರವೇ ಕಾರ್ಯಕರ್ತರು ರಕ್ತವನ್ನು ಚೆಲ್ಲುತ್ತೇವೆ ನ್ಯಾಯವನ್ನು ಕೇಳುತ್ತೇವೆ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಹಾಗೂ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಶಕಗಳಿಂದಲೂ ಮಹಾರಾಷ್ಟ್ರ ರಾಜ್ಯ ಪದೇ ಪದೇ ವಿವಾದವನ್ನು ಮುನ್ನಲೆತೆ ತಂದು, ವಿವಾದವನ್ನು ಹುಟ್ಟುಹಾಕುತ್ತಿದೆ. ವಿವಾದವು ನ್ಯಾಯಾಲಯದಲ್ಲಿದ್ದರೂ, ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಿ ಶಾಂತಿಯನ್ನು ಕದಡಲು ಯತ್ನಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಚಿಕ್ಕೋಡಿ ಸೇರಿದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿಬಂದೋಬಸ್ತ್ ಅನ್ನು ಏರ್ಪಡಿಸಿದ್ದಾರೆ. ಬೆಳಗಾವಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇದೇ ವೇಳೆ, ಬೆಳಗಾವಿಗೆ ಭೇಟಿ ನೀಡಬೇಕಿದ್ದ ಮಹಾರಾಷ್ಟ್ರ ಸಚಿವರು ತಮ್ಮ ಭೇಟಿಯನ್ನು ಮುಂದೂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ. ಅವರೊಂದಿಗೆ ಇಬ್ಬರು ಡಿಸಿಪಿಗಳು, ನಾಲ್ವರು ಎಸಿಪಿ, 10 ಮಂದಿ ಪಿಎಸ್‌ಐ 11 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಬೆಳಗಾವಿ ವಿವಾದವು ನ್ಯಾಯಾಲಯದಲ್ಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನ್ಯಾಯಾಲಯದಲ್ಲಿಯೇ ಪ್ರಕರಣವನ್ನು ಬಗೆಹರಿಸಿಕೊಳ್ಳಬೇಕು. ವಿವಾದ ಸಂಘರ್ಷವಾಗಿ ತಿರುಗಿದ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವುದು ಉಚಿತವಲ್ಲ. ಅವರ ಭೇಟಿಯಿಂದ ಬೆಳಗಾವಿಯ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.