ಮಹಾರಾಷ್ಟ್ರ: ಇಂಡಿಯಾ ಕೂಟ ಮತ್ತೆ ಜಯಭೇರಿ ಬಾರಿಸುವುದೆ? ಭಾಗ -2

– ವಸಂತರಾಜ ಎನ್.ಕೆ

ಮಹಾರಾಷ್ಟ್ರದಲ್ಲಿ ವಿಧಾನಸಬಾ ಚುನಾವಣೆಗಳು ನವೆಂಬರ್ 20ರಂದು ನಡೆಯಲಿದೆ. ರಾಷ್ಟ್ರೀಯವಾಗಿಯೂ ಈ ರಾಜ್ಯದ ಚುನಾವಣೆ ನಿರ್ಣಾಯಕವಾದ್ದು ಮತ್ತು ಮಹತ್ವದ್ದಾಗಿದ್ದು ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಇತ್ತೀಚಿನ ಚುನಾವಣಾ ರಾಜಕೀಯ ಹಿನ್ನೆಲೆ, ಇಂದಿನ ಪರಿಸ್ಥಿತಿ, ಚುನಾವಣಾ ವಿಷಯ ಪ್ರಚಾರ, ಸಂಬಾವ್ಯ ಫಲಿತಾಂಶಗಳ ವಿಶ್ಲೇಷಣೆ ಇಲ್ಲಿದೆ.

ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್,ಡಿ.ಎ ಕೂಟದ ಪರಾಭವಕ್ಕೆ ಕಾರಣವಾದ ಎಲ್ಲ ಕಾರಣಗಳು ಇನ್ನೂ ಪ್ರಸ್ತುತವಾಗಿವೆ. ಕೆಲವು ಇನ್ನಷ್ಟು ತೀವ್ರ ವಾಗಿವೆ. ಇವೆಲ್ಲವೂ ಚುನಾವಣಾ ಪ್ರಚಾರದ ವಿಷಯವಾಗದಿದ್ದರೂ, ಅದರ ಫಲಿತದ ಮೇಲೆ ಪರಿಣಾಮ ಬೀರಲಿವೆ. ಮಹಾರಾಷ್ಟ್ರ

ಪ್ರಾದೇಶಿಕ ಅಸ್ಮಿತೆ

ಸಂವಿಧಾನಾತ್ಮಕ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಿ, ನೈತಿಕತೆಯನ್ನು ಗಾಳಿಗೆ ತೂರಿ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಮತ್ತು ಎನ್.ಸಿ.ಪಿ ಗಳನ್ನು ಒಡೆದದ್ದು ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದು ಈಗಲೂ ಮುಂದುವರೆಯುತ್ತಿದೆ. ಈ ಪಕ್ಷಗಳ ಮೂಲನಾಯಕರ ಪರವಾಗಿ ಸಹಾನುಭೂತಿಯಿದೆ. ಕಳೆದ ಎರಡು ವರ್ಷಗಳಲ್ಲಿ ಶಿಂಧೆ ನಾಯಕತ್ವದ ಮಹಾಯುತಿ ಕೂಟ ನೀಡಿದ ಅತ್ಯಂತ ಭ್ರಷ್ಟ ಅದಕ್ಷ ಸರಕಾರದಿಂದ ಸಹ ಜನ ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ಮಹಾರಾಷ್ಟ್ರ

ಇದನ್ನೂ ಓದಿ: ಮಣಿಪುರ| ಬರಾಕ್ ನದಿಯಲ್ಲಿ 6 ಶವಗಳು ಪತ್ತೆ; ಸಿಎಂ ಮನೆ ಮೇಲೆ ದಾಳಿ

ಅಗಸ್ಟ್ 26, 2024ರಂದು ಸಿಂಧೂದುರ್ಗ ಜಿಲ್ಲೆಯ ಮಾಲ್ವಾನ್ ನಲ್ಲಿ ಸ್ಥಾಪಿಸಿದ್ದ ಛತ್ರಪತಿ ಶಿವಾಜಿಯ 35 ಅಡಿ ಎತ್ತರದ ಬೃಹತ್ ಪ್ರತಿಮೆ ಕುಸಿದು ಬಿದ್ದದ್ದು ಈ ಸರಕಾರದ ಭ್ರಷ್ಟತೆಯ, ಅದಕ್ಷತೆಯ ಪ್ತತೀಕವಾಗಿ ಬಿಟ್ಟಿದೆ. ಮಾತ್ರವಲ್ಲ ಪ್ರಾದೇಶಿಕ ಅಸ್ಮಿತೆಯ ಭಾವನೆಗಳಿಗೆ ಘಾಸಿ ಮಾಡಿದೆ. ಕೋಟ್ಯಾಂತರ ರೂ ಖರ್ಚಾದ ಪ್ರತಿಮೆಯ ಈ ಕುಸಿತ ಭ್ರಷ್ಟ ಕಾಂಟ್ರಾಕ್ಟರ್ ನ ಕಳಪೆ ಕಾಮಗಾರಿಯ ಫಲವೆಂಬುದು ಸ್ಪಷ್ಟ. ಇದನ್ನು ಸ್ವತಃ ಪ್ರಧಾನ ಮಂತ್ರಿ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ಲಾಭ ಪಡೆಯುವ ಭಾಗವಾಗಿ ಡಿಸೆಂಬರ್ 4, 2023ರಂದು ವೈಭವ, ವಿಜೃಂಭಣೆಯಿಂದ ಲೋಕಾರ್ಪಣೆ ಮಾಡಲಾಗಿತ್ತು.

ಮಹಾಯುತಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ‘ಗುಜರಾತಿ ಲಾಬ್ಬಿ’ಯ ಪ್ರಭಾವ ವಿಪರೀತವಾಗಿದ್ದು, ಮಹಾರಾಷ್ಟ್ರಕ್ಕೆ ಬರಲಿದ್ದ ಹಲವು ಪ್ರಮುಖ ಪ್ರಾಜೆಕ್ಟುಗಳು ಗುಜರಾತಿಗೆ ವರ್ಗಾವಣೆಯಾಗಿವೆ. ಇವುಗಳಲ್ಲಿ ಪ್ರಮುಖವಾದ್ದು – ಟಾಟಾ ವಿದ್ಯುತ್ ವಾಹನ ಕಾರ್ಖಾನೆ, ವೇದಾಂತ-ಫಾಕ್ಸ್ ಕಾನ್ ಸೆಮಿಕಂಡಕ್ಟರ್ ಸ್ಥಾವರ, ಬೋಯಿಂಗ್, ಏರ್ ಬಸ್ ಕಾರ್ಖಾನೆ ಮತ್ತು ಅಂತರ್ರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ (ಐ.ಎಫ್.ಎಸ್.ಸಿ). ಇತ್ತೀಚೆಗೆ ಇಡೀ ಧರವಿ ಪ್ರದೇಶವನ್ನು ಅದಾನಿಗೆ
ಪುನರ್-ಅಭಿವೃದ್ಧಿ ಗೆ ದಾನ ಮಾಡಿದ್ದು ಸಹ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಹಾಲು ಉತ್ಪಾದಕ ಮಹಾನಂದ ಡೈರಿಯನ್ನೂ ಅಮೂಲ್ ಗೆ ವರ್ಗಾಯಿಸಿ ಅದನ್ನು ರಾಜ್ಯದಲ್ಲಿ (ಕರ್ನಾಟಕದಲ್ಲಿ ಆದಂತೆ) ಪ್ರಬಲಗೊಳಿಸುವ ಪ್ರಯತ್ನ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

2019ರಲ್ಲಿ ‘ಮಹಾ ವಿಕಾಸ ಅಘಾಡಿ’ ಸರಕಾರ ರಚಿಸದಂತೆ ಮಾಡುವ ಪ್ರಯತ್ನದಲ್ಲಿ ಮತ್ತು ಜೂನ್ 2022ರಲ್ಲಿ ಅದನ್ನು ಉರುಳಿಸುವ ಪ್ರಯತ್ನದದಲ್ಲಿ ಅದಾನಿ ಪಾತ್ರವಿತ್ತು. ಅವರು ಆಗ ಬಿಜೆಪಿ ಪಕ್ಷದ ಅಧಿಕೃತ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಇತ್ತೀಚೆಗೆ ಅಜಿತ್ ಪವಾರ್ ಹೇಳಿದ್ದು ಈ ‘ಗುಜರಾತಿ ಲಾಬ್ಬಿ’ಯ ಮತ್ತು ಬಿಜೆಪಿಯ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಆರ್ಥಿಕ ಸಂಕಟಗಳು

ಎನ್.ಡಿ.ಎ ಪರಾಭವಕ್ಕೆ ಇನ್ನೊಂದು ಕಾರಣ ಜನ ಎದುರಿಸುತ್ತಿದ್ದ ಆರ್ಥಿಕ ಸಂಕಟಗಳು ಆಗಿದ್ದವು. ಕೃಷಿ ಮತ್ತು ಇತರ ಕ್ಷೇತ್ರಗಳ ಸಂಕಟಗಳು, ತೀವ್ರ ಬೆಲೆಏರಿಕೆ, ನಿರುದ್ಯೋಗದ ಸಮಸ್ಯೆಗಳು ಎಪ್ರಿಲ್ ಗಿಂತಲೂ ಇನ್ನಷ್ಟು ದುರ್ಭರವಾಗಿವೆಯೇ ವಿನಾ ಯಾವುದೇ ಪರಿಹಾರ ಕಂಡಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಈಗ ‘ಡಬ್ಬಲ್ ಇಂಜಿನ್’ ಸರಕಾರ ಇರುವುದರಿಂದ ಬೇರೆ ಪಕ್ಷಗಳನ್ನು ದೂರುವಂತಿಲ್ಲ. ಎಲ್ಲ ಆಕ್ರೋಶವೂ ಬಿಜೆಪಿ-ಎನ್.ಡಿ.ಎ ವಿರುದ್ಧವೇ ತಿರುಗುತ್ತದೆ. ರೈತರಿಗೆ ಸಿಗುವ
ಸೋಯಾಬಿನ್, ಹತ್ತಿ, ಈರುಳ್ಳಿ, ಕಬ್ಬು ಮತ್ತು ಹಾಲಿನ ಬೆಲೆ ಕುಸಿದಿದ್ದು ಪ್ರಮುಖ ಸಂಕಟವಾಗಿದೆ. ಸೋಯಾಬೀನ್ ಮತ್ತು ಹತ್ತಿಗಳನ್ನು ಹೆಚ್ಚಾಗಿ ವಿದರ್ಭ ಮತ್ತು ಮರಾಠಾವಾಡ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಈಗ ಆ ಬೆಳೆಗಳ ಕಟಾವಿನ ಸಮಯ.

ರೈತರಿಗೆ ಸಿಕ್ಕುತ್ತಿರುವುದು ಈ ಬೆಳೆಗಳಿಗೆ ನಿಗದಿ ಮಾಢಿದ ಕನಿಷ್ಠ ಬೆಂಬಲ ಬೆಲೆಗಿಂತ ಪ್ರತಿ ಕ್ವಿಂಟಾಲಿಗೆ 1000 ರೂ ಕಡಿಮೆ ಬೆಲೆ. ಮಹಾಯುತಿ ಸರಕಾರದ ಅವಧಿಯಲ್ಲಿ ಬರ, ಅಕಾಲಿಕ ಮಳೆ, ನೆರೆ, ಆಲಿಕಲ್ಲು ಮಳೆಗಳ ಸರಣಿಯೇ ಬಂದಿದ್ದು, ಇವುಗಳಿಂದ ಆದ ನಷ್ಟಕ್ಕೆ ಯಾವುದೇ ಪರಿಹಾರದ ಸೊಲ್ಲೇ ಇಲ್ಲ. ರಾಜ್ಯದ ಆರ್ಥಿಕ ಬೆಳವಣಿಗೆಯ ದರ 2014-19ರಲ್ಲಿ ಶೇ.6.1 ಇದ್ದಿದ್ದು 2019-24ರಲ್ಲಿ ಶೇ. 4.5 ಕ್ಕೆ ಇಳಿದಿದೆ. ರಾಜ್ಯದ ಕೈಗಾರಿಕಾ ಬೆಳವಣಿಗೆಯ ದರ 2014-19ರಲ್ಲಿ ಶೇ.5.5 ರಿಂದ ಇದ್ದಿದ್ದು 2019-24ರಲ್ಲಿ ಶೇ. 1.3 ಕ್ಕೆ ಇಳಿದಿದೆ. 2019-24ರ ಅವಧಿಯ ಸರಾಸರಿ ಮನ್ಯುಫ್ಯಾಕ್ಚರಿಂಗ್ ಬೆಳವಣಿಗೆ ದರ ಈಗ ನಕಾರಾತ್ಮಕ (ಶೇ. -1) ಆಗಿದೆ. ರಾಜ್ಯದ ಮೇಲೆ 7.11 ಲಕ್ಷ ಕೋಟಿ ರೂ ಸಾಲದ ಭಾರವಿದೆ.

ಮುಂದಿನ ವರ್ಷದ ಹೊತ್ತಿಗೆ ಸಾಲದ ಬೆಳವಣಿಗೆಯ ದರ ಆರ್ಥಿಕ ಬೆಳವಣಿಗೆಯ ದರಕ್ಕಿಂತ ಹೆಚ್ಚಾಗಲಿದೆ. ರಾಷ್ಟ್ರೀಯ ಆದಾಯದಲ್ಲಿ ರಾಜ್ಯದ ಪಾಲು 2010-11ರಲ್ಲಿ ಶೇ. 15.2 ಇದ್ದಿದ್ದು, 2023-24ರಲ್ಲಿ ಶೇ. 13.3 ಕ್ಕೆ ಇಳಿದಿದೆ. ರಾಜ್ಯಗಳ ತಲಾ ಆದಾಯದಲ್ಲಿ ಈಗ ರಾಜ್ಯ 6ನೇ ಸ್ಥಾನಕ್ಕೆ ಕುಸಿದಿದೆ.ಜನಾರೋಗ್ಯ ಅಭಿಯಾನ ತಯಾರಿಸಿದ ಆರೋಗ್ಯ ರಿಪೋರ್ಟ್ ಕಾರ್ಡನಲ್ಲಿ ರಾಜ್ಯಕ್ಕೆ ಬಹಳ ಕಡಿಮೆ (100 ರಲ್ಲಿ 23) ಅಂಕ ಕೊಟ್ಟಿದೆ. ಆರೋಗ್ಯಕ್ಕೆ ರಾಜ್ಯದ ತಲಾ ವೆಚ್ಚ ಕೇವಲ ರೂ. 1979 (ರಾಷ್ಟ್ರೀಯ ಸರಾಸರಿ ರೂ 2342ಕ್ಕಿಂತಲೂ ಕಡಿಮೆ). ರಾಜ್ಯ ದೇಶಧಲ್ಲಿ ಕೆಳಗಿನಿಂದ 6ನೇ ಸ್ಥಾನದಲ್ಲಿದೆ.

‘ಲಾಡಲೀ ಬೆಹನಾ’ ಮಹಾಯುತಿ ಕೈ ಹಿಡಿಯುವುದೇ?

ಲೋಕಸಭಾ ಚುನಾವಣೆಯಲ್ಲಿ ಪರಾಭವದ ನಂತರ ಗಾಬರಿಯಾಗಿದ್ದ ಮತ್ತು ಕಾಂಗ್ರೆಸ್ ‘ಗ್ಯಾರಂಟಿ ರಾಜಕೀಯ’ದ ಪರಿಣಾಮ ಕಂಡಿದ್ದ ಮಹಾಯುತಿ ಸರಕಾರ ವಿಧಾನಸಭಾ ಚುನಾವಣಾ ತಯಾರಿಯ ಭಾಗವಾಗಿ, ತರಾತುರಿಯಲ್ಲಿ ‘ಲಾಡಲಿ ಬೆಹನಾ’ (ಮುದ್ದಿನ ತಂಗಿ) ಯೋಜನೆ ಘೋಷಿಸಿತು. ಕರ್ನಾಟಕದ ‘ಗೃಹಲಕ್ಷ್ಮಿ’ ಮತ್ತು ಮಧ್ಯ ಪ್ರದೇಶದ ಅದೇ ಹೆಸರಿನ ಯೋಜನೆಯನ್ನು ಹೋಲುವ ಇದರ ಅಡಿಯಲ್ಲಿ 21 ರಿಂದ 65 ವರ್ಷದ ವರೆಗಿನ ಮತ್ತು 2.5 ಲಕ್ಷ್ಕಿಂತ ಕಡಿಮೆ ವಾರ್ಷಿಕ
ಆದಾಯದ ಮಹಿಳೆಯರು ಪ್ರತಿ ತಿಂಗಳು ರೂ 1500 ಪಡೆಯುತ್ತಾರೆ.

ಈ ಯೋಜನೆಯ ಕಳೆದ 5 ತಿಂಗಳುಗಳಿಂದ ಜಾರಿಯಾಗಿದ್ದು 2.40 ಕೋಟಿ ಮಹಿಳೆಯರು ಇದನ್ನು ಪಡೆಯುತ್ತಿದ್ದಾರೆ ಎಂದು ಸರಕಾರ ಹೇಳುತ್ತಿದೆ. ಇದು ಲೋಕಸಭಾ ಚುನಾವಣೆಯ ನಂತರದ ಪ್ರಮುಖ ಬೆಳವಣಿಗೆ. ಇದು ತನ್ನ ಕೈ ಹಿಡಿಯುವುದು ಎಂಬುದು ಮಹಾಯುತಿಯ ಭರವಸೆ. ಇದು ಜಾರಿಯಾಗಿ ಅದರ ಪರೀಣಾಮ ಬೀರಬೇಕು ಎಂದೇ ರಾಜ್ಯದ ಚುನಾವಣೆಯನ್ನು ಆದಷ್ಟು ದೂರ ತಳ್ಳಲಾಗಿತ್ತು.

ಮಹಾಯುತಿಯ ಪರವಾಗಿ (ಭರವಸೆಗೆ ಬದಲಾಗಿ ಜಾರಿಯಾದ ಯೋಜನೆಯಾಗಿ) ಇದು ದೊಡ್ಡ ಮತ್ತು ಒಂದೇ ಸಕಾರಾತ್ಮ ಅಂಶವಾಗಿದ್ದರೂ, ಇತರ ನಕಾರಾತ್ಮಕ ಅಂಶಗಳನ್ನು ಶಮನ ಗೊಳಿಸುವುದು ಸಾಧ್ಯವೇ ಎಂಬುದನ್ನು ಕಾದು ನೋಡಬೇಕು. ಆದರೆ ಇದು ಮಹಾಯುತಿಯ ನಷ್ಟವನ್ನು ಸ್ವಲ್ಪ ಮಟ್ಟಿಗಾದರೂ ಭರಿಸಬಹುದು.

ಮಹಾ ವಿಕಾಸ ಅಘಾಡಿ ತನ್ನದೇ ಆದ 5 ಗ್ಯಾರಂಟಿಗಳನ್ನು ಘೋಷಿಸಿ ‘ಲಾಡಲಿ ಬೆಹನಾ’ ಗೆ ಕೌಂಟರ್ ಕೊಟ್ಟಿದೆ. ಅವರ ಮಹಾಲಕ್ಷ್ಮಿ ಯೋಜನೆ ಪ್ರಕಾರ ಅರ್ಹ ಮಹಿಳೆಯರು ತಿಂಗಳಿಗೆ ರೂ 3000 ಮತ್ತು ಉಚಿತ ಬಸ್ ಪ್ರಯಾಣ ಪಡೆಯುತ್ತಾರೆ. ರೈತರಿಗೆ 3 ಲಕ್ಷ ಸಾಲಮನ್ನಾ ಮತ್ತು ಸಾಲಪಾವತಿಗೆ ರೂ 50 ಸಾವಿರ, ಆರೋಗ್ಯ ವಿಮೆ ಇಲ್ಲದ 25 ಲಕ್ಷ ಜನರಿಗೆ ಆರೋಗ್ಯ ವಿಮೆ , ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ 4000, ರೂ 500 ಸಬ್ಸಿಡಿ ದರದಲ್ಲಿ ವರ್ಷಕ್ಕೆ 6 ಅಡುಗೆ ಗ್ಯಾಸ್ ಸಿಲಿಂಡರುಗಳನ್ನು ಕೊಡುವ ಗ್ಯಾರಂಟಿಗಳನ್ನು ನೀಡಿದೆ. ಇದಲ್ಲದೆ ಜಾತಿ ಜನಗಣತಿ, ಮೀಸಲಾತಿಗೆ ಶೇ.50 ಮಿತಿ ಕಿತ್ತು ಹಾಕುವುದು, 2.5 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ರೈತ ಆತ್ಮಹತ್ಯೆ ತಡೆಯಲು ತುರ್ತು ಕ್ರಮಗಳು, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ, ಸಣ್ಣ, ಮಧ್ಯಮ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ಸೇರಿದಂತೆ 25 ಭರವಸೆಗಳನ್ನು ನೀಡಿದೆ.

ಇದಕ್ಕೆ ಪ್ರತಿಯಾಗಿ ಮಹಾಯುತಿಯ 10 ಗ್ಯಾರಂಟಿಗಳಲ್ಲಿ ‘ಲಾಡಲಿ ಯೋಜನೆಯ ಭತ್ಯೆ ರೂ 1500 ರಿಂದ ರೂ 2100ಕ್ಕೆ ಏರಿಕೆ, ಕಿಸಾನ್ ಸಮ್ಮಾನ್ ವಾರ್ಷಿಕ ರೂ 12 ರಿಂದ 15 ಸಾವಿರಕ್ಕೆ ಏರಿಕೆ, ವೃದ್ಧಾಪ್ಯ ಪೆಂಶನ್ ರೂ 1500 ರಿಂದ ರೂ 2100ಕ್ಕೆ ಏರಿಕೆ, ವಿದ್ಯುತ್ ಬಿಲ್ ನಲ್ಲಿ ಶೇ 30 ಸಬ್ಸಿಡಿ, ಕನಿಷ್ಟ ಬೆಂಬಲ ಬೆಲೆ ಮೇಲೆ 20% ಸಬ್ಸಿಡಿ – ಇತ್ಯಾದಿ ಸೇರಿವೆ. ಎರಡು ಕೂಟಗಳ ಗ್ಯಾರಂಟಿ ಸಮರದಲ್ಲಿ ಮಹಾ ವಿಕಾಸ ಅಘಾಡಿಯೇ ಮುಂದೆ ಇರುವಂತೆ ಕಾಣುತ್ತದೆ.

‘ಏಕ್ ಹೈ ತೋ ಸೇಫ್ ಹೈ’ ಅಥವಾ ‘ಬಟೇಂಗೆ ತೋ ಕಟೆಂಗೆ’

ಈಗಾಗಲೇ ನೋಡಿದ ಹಾಗೆ ಹಲವು ವಿಷಯಗಳಲ್ಲಿ ಆಳುವ ಡಬ್ಬಲ್ ಇಂಜಿನ್ ಸರಕಾರದ ವೈಫಲ್ಯಗಳಿಂದ ಜನ ಬೇಸತ್ತಿದ್ದು ಲೋಕಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಬಹುದು ಎಂಬ ಆತಂಕವಿದೆ. ಇದಕ್ಕೆ ಬಿಜೆಪಿ ಬಳಿ ಸಿದ್ಧೌಷಧವಿದೆ. ಅದು ಕೋಮುವಾದಿ ‘ಭಯೋತ್ಪಾದಕ’ ಪ್ರಚಾರ ಅಥವಾ ಅಪಪ್ರಚಾರ; ಮುಸ್ಲಿಮರ, ಇತರ ಅಲ್ಪಸಂಖ್ಯಾತರ, ವಲಸೆಗಾರರ, ಮತ್ತು ವಿರೋಧ ಪಕ್ಷಗಳ ಕುರಿತು ಭಯ ಹಬ್ಬಿಸುವುದು. ಇದರಿಂದ ಧ್ರುವೀಕರಣ ಸಾಧಿಸಿ ತನ್ನ ಕೋರ್ ಮತದಾರರನ್ನು ಉಳಿಸಿಕೊಳ್ಳುವುದರಲ್ಲಿ ಮಾತ್ರವಲ್ಲ, ಇತರ ವಿಷಯಗಳನ್ನು ಮರೆಸಿ ಇತರರನ್ನು ಸೆಳೆಯುವ ತಂತ್ರವನ್ನು ಬಿಜೆಪಿ ಪಕ್ಕಾ ಮಾಡಿದೆ. ಈ ತಂತ್ರದ ಸೂಪರ್-ಪರಿಣತ ಯುಪಿ ಮುಖ್ಯಮಂತ್ರಿ ಯೋಗಿ ಅವರು ಆರಂಭಿಸಿದ ‘ಬಟೇಂಗೆ ತೋ ಕಟೆಂಗೆ’ ಘೋಷಣೆ ಈ ಥರದ ಪ್ರಯತ್ನ.

ಜಾತಿ ಜನಗಣತಿ ಹಿಂದೂ ಸಮಾಜವನ್ನು ‘ಒಡೆಯುತ್ತದೆ’ ಮತ್ತು ಒಡೆದ ಮೇಲೆ ‘ಅನ್ಯರು’ (ಅಂದರೆ ಮುಸ್ಲಿಮರು) ನಿಮ್ಮನ್ನು ‘ಕಡಿಯುತ್ತಾರೆ’ ಎಂಬ “ಭಯೋತ್ಪಾದಕ’ ಭಾಷಣಗಳನ್ನು ಯೋಗಿ ಅವರು ಮಾಡಿದರು. ಆದರೆ ಹಲವು ಮುಸ್ಲಿಂ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿರುವ ಮತ್ತು ಮುಸ್ಲಿಮರ ಮತ ಕಳೆದುಕೊಳ್ಳ ಬಯಸದ ಅಜಿತ್ ಪವಾರ್ ಇದು ಮಹಾರಾಷ್ಟ್ರದಲ್ಲಿ ‘ನಡೆಯುವುದಿಲ್ಲ’ ಮತ್ತು ‘ಸರಿಯಾದ್ದಲ್ಲ’ ವೆಂದು ಸಾರ್ವಜನಿಕವಾಗಿಯೇ ಹೇಳಿದರು.

ಶಿಂಧೆ ಸಹ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು ಎನ್ನಲಾಗಿದೆ. ಅಲ್ಲದೆ ಈ ಕೋಮು ಪ್ರಚಾರ ಆಚಾರ ಸಂಹಿತೆಯ ಉಲ್ಲಂಘನೆಯೆಂದು ಮಹಾ ವಿಕಾಸ ಅಘಾಡಿ ಚುನಾವಣಾ ಕಮಿಶನ್ ಗೆ ದೂರು ಕೊಟ್ಟಿತು. ಹಾಗಾಗಿ ಅದೇ ‘ಮದ್ಯ’ವನ್ನು ಇನ್ನೊಂದು ‘ಬಾಟಲಿ’ಯಲ್ಲಿ ಹಾಕಲಾಯಿತು. ಅದೇ ಪ್ರಧಾನಿ ಮೋದಿ, ಗೃಹಮಂತ್ರಿ ಶಾ ಇತರ ಹಲವು ನಾಯಕರೂ ಈಗ ಬಿರುಸಿನಿಂದ ಮಾರುತ್ತಿರುವ “ಏಕ್ ಹೈ ತೋ, ಸೇಫ್ ಹೈ’ ಇದರರ್ಥವೂ ಅದೇ.

ಮುಸ್ಲಿಮರನ್ನು ಸಂಪ್ರೀತಗೊಳಿಸಲು ಹಿಂದೂ-ವಿರೋಧಿ ಕಾಂಗ್ರೆಸ್ ಜಾತಿವಾರಾಗಿ ಹಿಂದೂಗಳನ್ನು ಒಡೆಯುತ್ತಿದೆ. ಚುನಾವಣಾ ಕಮಿಶನ್ ದೃಷ್ಟಿಯಿಂದ ಇದು ಸೇಫ್ ಘೋಷಣೆ. ಅವರಿಗೆ ಯಾವುದೂ ಸೇಫ್ ಬಿಡಿ! ಆದರೆ ಇದು ‘ದೇಶದ ಐಕ್ಯತೆಯನ್ನು ಸೇಫ್ ಮಾಡುವ’ ಘೋಷಣೆ ಎಂದು ಮತದಾರರು ತಪ್ಪರ್ಥ ಮಾಡಿಕೊಳ್ಳದಂತೆ, ‘ಮೋದಿ-ಶಾ ಇಬ್ಬರೂ ಮತ್ತು ಇತರರು ಪುನರುಚ್ಚರಿಸುತ್ತಾ ‘ಔರಂಗಜೇಬ್ ಸಂತಾನ’, ‘ನುಸುಳುಕೋರರು’, ‘ವಕ್ಫ್ ರೈತರ ಜಮೀನು ಕಿತ್ತುಕೊಳ್ಳುತ್ತಿದೆ’, ‘ಲ್ಯಾಂಡ್ ಜಿಹಾದ್’’, ‘ಮುಸ್ಲಿಮರಿಗೆ ಮೀಸಲಾತಿ ಕೊಡಲು ಒಬಿಸಿ ಮೀಸಲಾತಿ ಕಿತ್ತುಕೊಳ್ಳಲಾಗುತ್ತದೆ’ – ಇತ್ಯಾದಿ ಮಾತುಗಳನ್ನೂ ಆಡುತ್ತಾರೆ.

ಆದರೆ ಈ ಘೋಷಣೆಗಳು ಬಿಜೆಪಿ ಕೂಟವನ್ನು ಹೆಚ್ಚೇನೂ ಸೇಫ್ ಮಾಡಲಾರದು. ಏಕೆಂದರೆ ಕೃಷಿ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದ್ದಂತೆ ಮೀಸಲಾತಿ ಬೇರೆ ರಾಜ್ಯಗಳಂತೆ ಮಹಾರಾಷ್ಟ್ರದಲ್ಲೂ ಕಗ್ಗಂಟಾಗುತ್ತಿದೆ. ಮರಾಠಾ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಹಕ್ಕೊತ್ತಾಯ ಕಳೆದ ಹಲವು ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿದೆ. ಈ ಚಳುವಳಿ ತೀವ್ರವಾಗಿರುವ ಮರಾಠಾವಾಡದ 8 ಸೀಟುಗಳಲ್ಲಿ ಬಿಜೆಪಿ ಒಂದು ಸೀಟನ್ನೂ ಗೆಲ್ಲಲಿಲ್ಲ. ಇತ್ತೀಚೆಗೆ ಮರಾಠಾ ಮೀಸಲಾತಿ ಚಳುವಳಿ (ಉಪವಾಸ ಸತ್ಯಾಗ್ರಹ, ಮುಂಬಯಿಗೆ ಜಾಥಾ ಇತ್ಯಾದಿ) ನಾಯಕತ್ವ ವಹಿಸಿರುವ ಮನೋಜ್ ಜಾರಂಗೆ ಪಾಟೀಲ್ ಮರಾಠಾ ಅಭ್ಯರ್ಥಿಗಳು ಈ ವಿಷಯದ ಮೇಲೆ ಚುನಾವಣೆಯಲ್ಲಿ ಭಾಗವಹಿಸಲು ಕರೆ ಕೊಟ್ಟಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಎಲ್ಲರನ್ನು ಹಿಂತೆಗೆಯಲು ಹೇಳಿದರು.

ಈ ನಿರ್ಣಯ ಮಹಾ ವಿಕಾಸ ಅಘಾಢಿಗೆ ಸಹಾಯಕವಾಗುತ್ತದೆ ಎಂದು ಹೇಳಲಾಗಿದೆ. ರಾಜಕೀಯವಾಗಿ ಆರ್ಥಿಕವಾಗಿಯೂ ಪ್ರಬಲವಾಗಿರುವ ಮರಾಠಾ ಸಮುದಾಯ ಜನಸಂಖ್ಯೆಯಲ್ಲಿ ಸುಮಾರು ಶೇ.30 ರಷ್ಟಿದ್ದು, ಅವರು ಒಬಿಸಿ ಗೆ ಸೇರಿಸಲು ಕೇಳುತ್ತಿರುವುದನ್ನು ಈಗ ಈ ಪಟ್ಟಿಯಲ್ಲಿರುವ ಸಮುದಾಯಗಳು
ವಿರೋಧಿಸುತ್ತಿವೆ. ಪ್ರತ್ಯೇಕ ಮೀಸಲಾತಿ ಕೊಡಲು ಶೇ,50 ಮಿತಿ ತಡೆಯಾಗಿದೆ. ಹಾಗಾಗಿ ಪ್ರತಿಯೊಂದು ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಜಾತಿ ಜನಗಣತಿಯಲ್ಲಿ ತಿಳಿದು, ಶೇ.50 ಮಿತಿ ತೆಗೆದು ವೈಜ್ಞಾನಿಕವಾಗಿ ಮೀಸಲಾತಿ ವ್ಯವಸ್ಥೆ ರೂಪಿಸುವುದು ಸರಿಯಾದ ಕ್ರಮ. ಬಿಜೆಪಿ ಇಷ್ಟು ಕಟುವಾಗಿ ಇದನ್ನು ವಿರೋಧಿಸುವುದು ಅದಕ್ಕೆ ಸಹಾಯಕವಾಗಲಿಕ್ಕಿಲ್ಲ.

ಬಿಜೆಪಿ ಒಂದು ಕಡೆ ಜಾತಿ ಜನಗಣತಿಯನ್ನು ವಿರೋಧಿಸುತ್ತಾ, ಇನ್ನೊಂದು ಕಡೆ ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿ ಕಟ್ಟುವ ಆಟ ಸಹ ಆಡುತ್ತಿದೆ. ಧಂಗಾರ್ ಎಂಬ ಸಾಕಷ್ಟು ಸಂಖ್ಯೆಯಲ್ಲಿರುವ ಅಲೆಮಾರಿ ಸಮುದಾಯವನ್ನು ಪರಿಶಿಷ್ಠ ಬುಡಕಟ್ಟು ಸ್ಥಾನಕ್ಕೆ ಒತ್ತಾಯ ಮಾಡಲು ಪ್ರಚೋದಿಸುತ್ತಿದೆ. ಇದನ್ನು ಈಗ ಪರಿಶಿಷ್ಠ ಬುಡಕಟ್ಟು ಪಟ್ಟಿಯಲ್ಲಿರುವ ಸಮುದಾಯಗಳು ವಿರೋಧಿಸುತ್ತಿವೆ. ಬಿಜೆಪಿ ನಾಯಕತ್ವದ ಎನ್.ಡಿ.ಎ ಭಾರತದ ಸಂವಿಧಾನದತ್ತ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾನತೆ, ಒಕ್ಕೂಟವಾದಗಳನ್ನು ಒಳಗಿಂದಲೇ ಕೊರೆದು ಟೊಳ್ಳಾಗಿಸಿ ಹಿಂದುತ್ವ ಫ್ಯಾಸಿಸ್ಟ್ ಮಾದರಿಯ ಪ್ರಭುತ್ವ ಸ್ಥಾಪಿಸುವತ್ತ ಹೊರಟಿದೆ. ಇದೂ ಒಂದು ಚುನಾವಣಾ ವಿಷಯ. ಇದನ್ನು ತಡೆಯಬೇಕಾದರೆ ಮಹಾರಾಷ್ಟ್ರದಲ್ಲಿ ಎನ್.ಡಿ.ಎ ಯನ್ನು ಸೋಲಿಸುವುದು ಅಗತ್ಯವಿದೆ ಎಂದು ನಂಬಿರುವ ಜನವಿಭಾಗವೂ ಇದೆ.

ಮಹಾ ವಿಕಾಸ ಅಘಾಡಿ ಮತ್ತೆ ಜಯಭೇರಿ ಬಾರಿಸುವುದೇ?

ಈಗಾಗಲೇ ಹೇಳಿದ ಹಾಗೆ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕಾರಣವಾದ ಹೆಚ್ಚಿನ ಅಂಶಗಳು ಈಗಲೂ ಪ್ರಸ್ತುತವಾಗಿವೆ. ಪ್ರಾದೇಶಿಕ ಅಸ್ಮಿತೆ, ಆರ್ಥಿಕ ಸಂಕಷ್ಟಗಳು ಇನ್ನಷ್ಟು ತೀವ್ರವಾಗಿದೆ. ಮಹಾಯುತಿಯ ‘ಲಾಡಲಿ ಬೆಹನಾ’’ ಇತ್ಯಾದಿ ಗ್ಯಾರಂಟಿ ಯೋಜನೆಗಳಿಗೆ ಮಹಾವಿಕಾಸ ಅಘಾಡಿ ‘ಪಂಚ ಗ್ಯಾರಂಟಿ’ಗಳ ಕೌಂಟರ್ ಕೊಟ್ಟಿದೆ. ಸಂವಿಧಾನದ ಸಂರಕ್ಷಣೆ, ಜಾತಿ ಜನಗಣತಿಯನ್ನು ಬೆಂಬಲಿಸುವ ಒಂದು ಜನವಿಭಾಗದ ಆಯ್ಕೆ ಸ್ಪಷ್ಟವಾಗಿದೆ. ಇನ್ನು ಉಳಿಯುವುದು ಕೋಮುವಾದಿ ಧ್ರುವೀಕರಣದ ತಂತ್ರ. ಇಲ್ಲೂ ಬಿಜೆಪಿಗೆ ತೀವ್ರ ಸವಾಲುಗಳಿವೆ. ಎಲ್ಲರಿಗೂ ತಿಳಿದಿರುವ ಹಾಗೆ ಕೋಮುವಾದಿ ಧ್ರುವೀಕರಣದಲ್ಲಿ ವಿರೋಧ ಪಕ್ಷಗಳನ್ನು ಜಾತಿವಾದಿ ಹಿಂದೂ-ವಿರೋಧಿ ಮುಸ್ಲಿಂ-ಸಂಪ್ರೀತಗೊಳಿಸುವ ಶಕ್ತಿಗಳು ಎಂದು ಜರೆದು ನಂಬಿಸುವುದು ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಶಿವಸೇನೆ ಪ್ರಮುಖ ಪಾತ್ರ ವಹಿಸುತ್ತಿರುವ ಮಹಾ ವಿಕಾಸ ಅಘಾಡಿ ಗೆ ಈ ಲೇಬಲ್ಲು ಅಂಟಿಸುವುದು ಸುಲಭವಲ್ಲ.

ಏಕೆಂದರೆ ದಶಕಗಳ ಕಾಲ ಬಿಜೆಪಿಯ ಮೈತ್ರಿ ಹೊಂದಿದ್ದ ಶಿವಸೇನಾ ಹಿಂದುತ್ವ ಪಕ್ಷವೆಂದೇ ಗುರುತಿಸಲ್ಪಡುವಂಥದ್ದು. ಬಾಬ್ರಿ ಮಸೀದಿ ಧ್ವಂಸದಲ್ಲಿ ಕರಸೇವೆಯಲ್ಲಿ ಶಿವಸೈನಿಕರೂ ಭಾಗವಹಿಸಿದ್ದರು. ಅದೇ ಸಮಯದಲ್ಲಿ, ಶಿವಸೇನಾ ಹಿಂದುತ್ವ ಸಿದ್ಧಾಂತಕ್ಕೆ ಬದ್ಧವಾಗಿದ್ದರೂ ಅದರ ನೆಲೆ ಕೇವಲ ಧಾರ್ಮಿಕ ನೆಲೆಯದ್ದಲ್ಲ. ಮರಾಠಿ ಸಾಮಾನ್ಯ ಮನುಷ್ಯನ ಕಲ್ಯಾಣ, ಪ್ರಾದೇಶಿಕ ಅಸ್ಮಿತೆ, ಸಾಮಾಜಿಕ ಸೇವೆಯ ಜಾಲದ ಮೂಲಕ ಕಟ್ಟಿದ ಸಾಮಾಜಿಕ ನೆಲೆ ಹೆಚ್ಚು ಮುಖ್ಯವಾದ್ದು. ಅದು ಹಿಂದುತ್ವಕ್ಕೆ ಬಂದಿದ್ದು ಹೆಚ್ಚಾಗಿ ಕಾಂಗ್ರೆಸ್-ವಿರೋಧಿ ರಂಗದಲ್ಲಿ ಭಾಗವಹಿಸುತ್ತಾ ಬಿಜೆಪಿಯ ಸನಿಹಕ್ಕೆ ಬಂದಾಗ.

ಯಾವುದೇ ಪಕ್ಷಗಳ ಮೈತ್ರಿಕೂಟ ಪರಿಣಾಮಕಾರಿಯಾಗಲು ವೈವಿಧ್ಯ ನೆಲೆಯ ಜನವಿಭಾಗಗಳು ಇರುವುದು ಒಳ್ಳೆಯದು. ಆದರೆ ಒಂದು ಪಕ್ಷದ ಅಭ್ಯರ್ಥಿ ಸ್ಪರ್ಧಿಸಿದಾಗ ಉಳಿದ ಪಕ್ಷಗಳ ಬೆಂಬಲಿಗ ಕಾರ್ಯಕರ್ತರು, ಜನವಿಭಾಗಗಳ ಮತ ಪರಸ್ಪರ ಪೂರ್ಣವಾಗಿ ವರ್ಗಾವಣೆಯಾಗಬೇಕಾಗುತ್ತದೆ. ಇದಕ್ಕೆ ಕೂಟದ ಪಕ್ಷಗಳು ಸೈದ್ಧಾಂತಿಕ ರಾಜಕೀಯ ಕಣ್ಣೋಟಗಳಾದರೂ ಪರಸ್ಪರ ವಿರೋಧಿಯಾಗಿರಬಾರದು. ಈ ದೃಷ್ಟಿಯಿಂದ ಹಿಂದುತ್ವ ಸಿದ್ಧಾಂತದ ಬಿಜೆಪಿ-ಶಿವಸೇನಾ ಕೂಟ ಮತ್ತು ‘ಸೆಕ್ಯುಲರ್’ ಪಕ್ಷಗಳಾದ ಕಾಂಗ್ರೆಸ್-ಎನ್.ಸಿ.ಪಿ ಕೂಟ ಪರಿಣಾಮಕಾರಿ ಕೂಟಗಳು.ಹಾಗಾಗಿಯೇ ಕೆಲವು ದಶಕಗಳಿಂದ ಎರಡೂ ಕೂಟಗಳು ಇದ್ದವು.

2019ರ ಚುನಾವಣೆಯ ನಂತರ ಮಹಾ ವಿಕಾಸ ಅಘಾಡಿ ಆಗಲಿ, 2022ರ ನಂತರ ರಚನೆಯಾದ ಮಹಾಯುತಿ ಕಿಚಡಿ ಕೂಟಗಳೇ ಎನ್ನಬೇಕು. ಸಾಮಾಜಿಕ ನ್ಯಾಯ ಸಮಾನ ಸಿದ್ಧಾಂತ ಹೊಂದಿದ್ದರೂ ಎಸ್.ಪಿ-ಬಿ.ಎಸ್.ಪಿಯ ಜನವಿಭಾಗಗಳ ನಡುವಿನ ಸಾಮಾಜಿಕ ಭಿನ್ನತೆಗಳಿಂದಲೇ ಆ ಕೂಟ ಪರಿಣಾಮಕಾರಿಯಾಗದ್ದನ್ನು ನೋಡಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಈ ಎರಡು ಕೂಟಗಳು ಪರಿಣಾಮಕಾರಿ ಆಗಲಿಕ್ಕಿಲ್ಲವೆಂದು ಭಾವಿಸಲಾಗಿತ್ತು.

ಆದರೆ ಹಿಂದಿನ ಮತ್ತು ನಂತರದ ಕೂಟದೊಳಗೆ ಮತ ಗಳಿಕೆ ನೋಡಿದರೆ ಸ್ವಲ್ಪ ಮಟ್ಟಿಗೆ ಅಜಿತ್ ಪವಾರ್ ಬಣಕ್ಕೆ ಈ ಸಮಸ್ಯೆ ಕಾಡಿದೆ ಎನ್ನಬಹುದು. ಆದರೆ ಮಹಾ ವಿಕಾಸ ಅಘಾಢಿ ಯನ್ನು ಅದು ಕಾಡಿಲ್ಲ. ಪ್ರಾದೇಶಿಕ ಅಸ್ಮಿತೆ, ಆರ್ಥಿಕ ಸಂಕಟಗಳು, ಸಂವಿಧಾನದ ಸಂರಕ್ಷಣೆ ಮತ್ತು ಪ್ರಸ್ತುತ ಸರಕಾರಗಳ ವೈಫಲ್ಯದ ವಿರುದ್ಧ ಪ್ರಧಾನ ವಿಷಯವಾದ್ದರಿಂದ ಇರಬಹುದು. ಹಾಗಾಗಿ ಈ ಬಾರಿಯೂ ಕೋಮು ಧ್ರುವೀಕರಣದ ಪ್ರಯತ್ನ ಅಜಿತ್ ಪವಾರ್ ಬಣಕ್ಕೆ ಏಟು ಕೊಡಬಹುದು.

ಲೋಕಸಬಾ ಚುನಾವಣೆಯಲ್ಲಿ ಶಿಂದೆ ಮುಖ್ಯಮಂತ್ರಿಯಾಗಿದ್ದರಿಂದ ಅವರ ಶಿವಸೇನಾ ಬಣ ತನ್ನ ನೆಲೆಯನ್ನು ಉಳಿಸಿಕೊಂಡಿರಬಹುದು. ಇದು ವಿಧಾನಸಭಾ ಚುನಾವಣೆಯಾಗಿರುವುದರಿಂದ, ಶಿಂಧೆಯನ್ನು ಮಹಾಯುತಿ ಸಂಭಾವ್ಯ ಮುಖ್ಯಮಂತ್ರಿಯಾಗಿ ಘೋಷಿಸದ್ದರಿಂದ ಮತ್ತು ಮಹಾ ವಿಕಾಸ ಅಘಾಡಿ ಸರಕಾರ ರಚನೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಶಿಂಧೆ ಬಣಕ್ಕೆ ಹೆಚ್ಚಿನ ಕುತ್ತು ಬರಬಹುದು. ಮಹಾರಾಷ್ಟ್ರದಲ್ಲಿ ಎರಡು ಕೂಟಗಳಲ್ಲದೆ ಸೀಮಿತವಾದರೂ ಗಟ್ಟಿ ನೆಲೆ ಸಿದ್ಧಾಂತ ಹೊಂದಿರುವ ಹಲವು ಸಣ್ಣ ಸ್ವತಂತ್ರ ಪಕ್ಷಗಳು ಇವೆ, ಇವು ಕೆಲವೊಮ್ಮೆ ಅವಕಾಶವಾದಿಯಾಗಿ ಇತರ ಪಕ್ಷಗಳ ಪ್ರಾಕ್ಸಿಯಾಗುವುದು ಇದೆ. ಕೋಷ್ಟಕ-1, ಕೋಷ್ಟಕ-2 ಗಮನಿಸಿದರೆ ಈ ಪಕ್ಷಗಳು ಗಮನಾರ್ಹ (ಶೇ.10-15) ಮತ ಗಳಿಸುವುದು ಕಂಡು ಬಂದಿದೆ.

ಆದರೆ ಲೋಕಸಬಾ ಚುನಾವಣೆಯಲ್ಲಿ ತಮ್ಮ ಕೆಲವು ನೆಲೆಗಳಾಚೆಗೆ ಜನ ಅವನ್ನು ನಿರ್ಲಕ್ಷಿಸುವುದು ಕಂಡು ಬಂದಿದೆ. 2019ರ ಚುನಾವಣೆಗಳಲ್ಲಿ ವ್ಯಾಪಕ ಸ್ಪರ್ಧೆಯಿಂದ ಯು,ಪಿ.ಎ ಗೆ ನಷ್ಟ ಮಾಡಿ ಎನ್.ಡಿ.ಎ ಗೆಲುವಿಗೆ ಕಾರಣವಾದ ಪ್ರಕಾಶ ಅಂಬೇಡ್ಕರ್ ಅವರ ಪಕ್ಷ ಮತ್ತು ಎಐಎಂಐಎಂ ಗಳನ್ನು ಇಲ್ಲಿ ಉದಾಹರಿಸಬಹುದು. ವ್ಯಾಪಕವಾಗಿ ಸ್ಪರ್ಧಿಸಿರುವ ಕೆಲವು ಪಕ್ಷಗಳು ಈ ರೀತಿಯಾಗಿ ಪ್ರಾಕ್ಸಿಯಾಗಿ ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದರೂ, ಅದು ಕಡಿಮೆಯೇ ಎಂದು ಹೇಳಬಹುದು. ಆದರೆ ಪ್ರಭಾವಶಾಲಿ, ಶ್ರೀಮಂತ ಪಕ್ಷೇತರ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಚುನಾಯಿತರಾಗುವ ಸಾಧ್ಯತೆಯಿದ್ದು,
ಎರಡು ಕೂಟಗಳ ಅಂತರ ಸಣ್ಣದಿದ್ದರೆ ಅವರು ಸರಕಾರ ರಚನೆಯಲ್ಲಿ ದೊಡ್ಡ ಪಾತ್ರ ವಹಿಸಬಹುದು.

ಮೇಲೆ ಹೇಳಿದ ಎಲ್ಲ ಅಂಶಗಳನ್ನು ಪರಿಶೀಲಿಸಿದರೆ ಮಹಾರಾಷ್ಟ್ರದ ಚುನಾವಣೆಗಳಲ್ಲಿ ಮಹಾ ವಿಕಾಸ ಅಘಾಢಿಗೆ ಗೆಲುವಿನ ಹೆಚ್ಚಿನ ಸಾಧ್ಯತೆಯಿದೆ ಎನ್ನಬಹುದು. ಆದರೆ ಭಾರೀ ಬಹುಮತ ಪಡೆಯದ ಹೊರತು, ಅದಕ್ಕೆ ಸರಕಾರ ರಚಿಸಲು ಸಾಧ್ಯವಾಗುತ್ತಾ ಎಂಬುದು ಬೇರೆ ಪ್ರಶ್ನೆ.

ಇದನ್ನೂ ನೋಡಿ: ಯುದ್ಧ : ವಿಶ್ವ ಕಾರ್ಪೊರೇಟ್‌ಗಳ ಸಂಚು – ಡಾ. ಅಮರ್‌ ಕುಮಾರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *