ಕರಾವಳಿ ಭಾಗದ ಭಗೀರಥ’ ಎಂದೇ ಖ್ಯಾತಿ ಗಳಿಸಿರುವ ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ.
ಕೃಷಿಗೆ ಪ್ರಧಾನವಾಗಿ ಬೇಕಾದದ್ದು ನೀರು. ಕೃಷಿ ಭೂಮಿ ಇದ್ದರೂ ನೀರಿಲ್ಲದೇ ಕೃಷಿಯೇ ಮಾಡಲು ಅಸಾಧ್ಯ ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವವರೇ ಹೆಚ್ಚು! ಇಂತಹ ಪರಿಸ್ಥಿತಿಯಲ್ಲಿ ತನ್ನ ಅಪರಿಮಿತ ಪರಿಶ್ರಮದಿಂದ ಬೋಳುಗುಡ್ಡೆಯಲ್ಲಿ ನೀರು ತಂದವರು ಅಮೈ ಮಹಾಲಿಂಗ ನಾಯ್ಕ ಅವರು.
ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕ 77 ವರ್ಷದ ಮಹಾಲಿಂಗ ನಾಯ್ಕ್
ನಾಯ್ಕರು, 40 ವರ್ಷಗಳ ಹಿಂದೆ ಊರಿನ ಸ್ವಂತ ಕೃಷಿಕರ ತೋಟಗಳಲ್ಲಿ ದುಡಿಯುವಾಗ ತಮ್ಮದೇ ಸ್ವಂತ ತೋಟ ಮಾಡುವ ಕನಸು ಕಂಡಿದ್ದರು. ಆದರೆ, ಅವರ ಬಳಿ ಒಂದಿಂಚೂ ಜಮೀನು ಇರಲಿಲ್ಲ. ಅದೊಂದು ದಿನ ಮಹಾಬಲ ಭಟ್ಟರು ಮಹಾಲಿಂಗ ನಾಯ್ಕರಿಗೆ ಎರಡು ಎಕರೆ ಜಮೀನು ನೀಡಲು ಒಪ್ಪಿಕೊಂಡರು. 1978ರಲ್ಲಿ ಮಹಾಬಲ ಭಟ್ಟರ ಬೆಂಬಲದಿಂದಾಗಿ ಎರಡು ಎಕರೆ ಗುಡ್ಡ ಬಹುಮಾನ ರೂಪದಲ್ಲಿ ಪ್ರಾಪ್ತವಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಅವರಿಗೆ ನವ ಕೃಷಿಯ ಬಗ್ಗೆ ತಿಳಿದಿರಲಿಲ್ಲ. ಇದನ್ನೆ ಅವರು ಸವಾಲಾಗಿ ಸ್ವೀಕರಿಸಿದರು.
ಸುರಂಗ ಕೊರೆದ ಕಥೆ : ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿತ್ತು. ಆದರೂ ಇವರ ಪ್ರಯತ್ನ ಬಿಟ್ಟಿರಲಿಲ್ಲ. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಕಡಿಮೆ ಇತ್ತು. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದದು ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ, ಉಳಿದರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಪ್ರಯತ್ನವನ್ನು ಮಾಡಲು ಮಂದಾಗಿದ್ದರು.
30 ಮೀ. ಉದ್ದದ ಸುರಂಗ ಕೊರೆದರೂ ನೀರು ಸಿಗಲಿಲ್ಲ. ಇದರಿಂದ ನಿರಾಸೆಯಾಗದ ಅವರು ಪ್ರಯತ್ನ ಮುಂದುವರಿಸಿ ಸೀಮೆಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದರು. ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಅವರ ಪ್ರಯತ್ನವನ್ನು ನೋಡಿ ಹಲವರು ಗೇಲಿ ಮಾಡಿದ್ದರು. ಮಹಾಲಿಂಗ ನಾಯ್ಕರಿಗೆ ಆರನೇ ಪ್ರಯತ್ನ ಫಲ ನೀಡಿತು.
ಆರನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ ಕೊರೆದರು. 25 ಮೀ. ತಲುಪುವಾಗ ನೀರು ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀ. ಉದ್ದದ ಸುರಂಗವಾಗುವ ಹೊತ್ತಿಗೆ ಯೆಥೇಚ್ಛ ನೀರು ಸಿಕ್ಕಿತು. ಆಗ ಅವರ ತೋಟದ ಕನಸು ಮತ್ತೆ ಗರಿಗೆದರಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಕೆ, ತೆಂಗು, ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತ ಮೂವರು ಮಕ್ಕಳು ಇವರ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
300 ಅಡಕೆ, ಬಾಳೆ ಗಿಡಗಳು : ಮಹಾಲಿಂಗ ನಾಯ್ಕ ಒಂದು ಎಕರೆಯಲ್ಲಿ ಅಡಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡಿದ್ದರೆ. ಇನ್ನೊಂದು ಎಕರೆಯಲ್ಲಿ ಕಾಡು ಬೆಳೆಸಿದ್ದಾರೆ. ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್ ನ ಖರ್ಚಿಲ್ಲದೆ ಗ್ರಾವಿಟಿ ಮೂಲಕ ಅಡಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ನೀರು ಉಣಿಸುತ್ತಾರೆ. ಅವರ ತೋಟದಲ್ಲಿ 300 ಅಡಕೆ, 75 ತೆಂಗು, 200 ಬಾಳೆ ಗಿಡಗಳಿವೆ. ಹಟ್ಟಿಗೊಬ್ಬರ, ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರದ ಬಗ್ಗೆ ಮಹಾಲಿಂಗ ನಾಯ್ಕರಿಗೆ ಗೊತ್ತಿಲ್ಲ. ಜಮೀನಿನಲ್ಲಿ ಇಂಗು ಗುಂಡಿಗಳ ಮೂಲಕ ಜಲಕೊಯ್ಲು ಮಾಡುತ್ತಾರೆ.
ನೀರೇ ಇಲ್ಲದ ಬರಡು ಭೂಮಿಯಲ್ಲಿ ಸುರಂಗ ನಿರ್ಮಾಣ ಮಾಡಿ ನೀರು ಬರಿಸಿದ ಆಧುನಿಕ ಭಗೀರಥ ಮಹಾಲಿಂಗ ನಾಯ್ಕ್ ಅವರಿಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಗೌರವ ಲಭಿಸಿದೆ.