ಬೆಂಗಳೂರು : ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ. ಹಾಗಾಗಿ 2024 ರ ಲೋಕಸಭಾ ಚುನಾವಣೆಯಲ್ಲೂ ಪಾಠ ಕಲಿಸಲಿದ್ದಾರೆ ಎಂದು ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ಭಾನುವಾರ ಹೇಳಿದರು.
ಮೂರು ದಿನಗಳ ಕಾಲ ನಡೆಯುತ್ತಿರುವ ‘ದುಡಿಯುವ ಜನತೆಯ ಮಹಾಧರಣಿಯ, ಮೊದಲ ದಿನದ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, “ಭಾರತವು ಸ್ವತಂತ್ರಗೊಂಡು ಸಂವಿಧಾನ ರಚನೆಯಾದಾಗ ದೇಶದ ಒಕ್ಕೂಟ ವ್ಯವಸ್ಥೆಯ ವಿರೋಧಿಗಳು ಸಂವಿಧಾನ ಹೆಚ್ಚು ಕಾಲ ಚಾಲ್ತಿಯಲ್ಲಿರುವುದಿಲ್ಲ ಎಂದು ಕುಹಕವಾಡಿದ್ದರು. ಒಕ್ಕೂಟ ವ್ಯವಸ್ಥೆ ಭಾರತಕ್ಕೆ ಹೊಂದುವುದಿಲ್ಲ ಎಂದು ಆರೆಸ್ಸೆಸ್ ಹೇಳಿತ್ತು. ಪ್ರಪಂಚದಲ್ಲಿ ಅನೇಕ ದೇಶಗಳು ದೊಡ್ಡ ತಜ್ಞರನ್ನು ಕರೆಯಿಸಿ ಸಂವಿಧಾನ ರಚಿಸಿಕೊಂಡರೂ ಅವು ಉಳಿಯಲಿಲ್ಲ. ಹಾಗೆ ಕುಸಿದು ಹೋದ ಸಂವಿಧಾನಗಳನ್ನು ಕೂಡಾ ಗಮನಿಸಿ, ಪ್ರಪಂಚದ ಸರಾಸರಿ ನೋಡಿದರೆ ಒಂದು ಸಂವಿಧಾನದ ಸರಾಸರಿ ಆಯಸ್ಸು 17 ವರ್ಷಗಳು. ಆದರೆ ಭಾರತದ ಸಂವಿಧಾನ ಇಂದು 74 ವರ್ಷಗಳನ್ನೂ ದಾಟಿ ಮುನ್ನಡೆಯುವ ಸನ್ನದ್ಧತೆಯಲ್ಲಿದೆ, ಒಕ್ಕೂಟ ವ್ಯವಸ್ಥೆ ಬಲಗೊಂಡಿದೆ ಎಂದು ಹೇಳಿದರು.
ಅದೇ ಸಂದರ್ಭದಲ್ಲಿ ಮೈಮರೆಯದಂತೆ ಸರ್ಕಾರಗಳಿಗೆ ಎಚ್ಚರಿಕೆಯ ಕಿವಿಮಾತನ್ನೂ ಹೇಳಿದ ಅವರು. “ಈ ದೇಶದಲ್ಲಿ ಪ್ರಜೆಗಳೇ ಮಾಸ್ಟರ್ಸ್, ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂದು ಘೋಷಿಸುವ ಶಕ್ತಿಯನ್ನು ಸಂವಿಧಾನ ನೀಡಿದೆ. ಜನರ ಈ ಶಕ್ತಿಯನ್ನು ಮರೆತವರು ಎಷ್ಟೇ ಬಲಾಢ್ಯರಾದರೂ ಈ ಪ್ರಜಾಪ್ರಭುತ್ವ ಅವರನ್ನು ಸೋಲಿಸಿದೆ. ಇಂದಿರಾಗಾಂಧಿಯವರು ಒಂದು ಸಂದರ್ಭದಲ್ಲಿ ಅವಧಿ ಮುನ್ನ ಚುನಾವಣೆ ನಡೆಸಿ, ಏಕಾಧಿಪತ್ಯ ಚಲಾಯಿಸಲು ನೋಡಿ ಸೋತರು. ಇಂದು ಭಾರತದ ಪ್ರಧಾನಮಂತ್ರಿಗಳು ಮತ್ತು ಅವರ ಜೊತೆಗಾರರು ಅದೇ ರೀತಿಯ ಸರ್ವಾಧಿಕಾರಿ ಮನೋಭಾವವನ್ನು ತೋರಿದ್ದೇ ಆದರೆ ದೇಶದ ಜನರು ಅವರಿಗೂ ಪಾಠ ಕಲಿಸಲಿದ್ದಾರೆ” ಎಂದು ಹೇಳಿದರು.
“ಸಾಮಾಜಿಕ ನ್ಯಾಯ ಸಂವಿಧಾನದ ಒಂದು ಬಹುಮುಖ್ಯ ಅಂಗ. ಅದರಲ್ಲಿ ಮೀಸಲಾತಿ ಒಂದು ಅತಿ ಪ್ರಮುಖ ಪರಿಕಲ್ಪನೆ, ಕರ್ನಾಟಕವೂ ಈ ನಿಟ್ಟಿನಲ್ಲಿ ಮುಂಚೂಣಯಲ್ಲಿ ನಿಂತಿದೆ. 1872ರಲ್ಲಿ ಮೊದಲ ಜನಗಣತಿ ಭಾರತದಲ್ಲಿ ನಡೆಯಿತು ಅದು ಜಾತಿಗಣತಿಯಾಗಿತ್ತು. ಅದೇ ರೀತಿ ಭಾರತದಲ್ಲಿ ಮೊದಲು ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿಯನ್ನು ಜಾರಿಗೊಳಿಸಿದ ರಾಜ್ಯ ಕರ್ನಾಟಕ (ಅಂದಿನ ಹಳೇ ಮೈಸೂರು ರಾಜ್ಯ). 1874ರಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಯಾಯಿತು. ಇವೆಲ್ಲದರ ಬುನಾದಿಯ ಮೇಲೆ ರೂಪುಗೊಂಡಿರುವುದರಿಂದಲೇ ಭಾರತದ ಸಂವಿಧಾನವು ಸಾಮಾಜಿಕ ನ್ಯಾಯವನ್ನು ಬಲವಾಗಿ ಎತ್ತಿಹಿಡಿಯುತ್ತದೆ” ಎಂದರು.
ರೈತ ನಾಯಕ ಎಚ್. ಆರ್. ನವೀನ್ ಕುಮಾರ್ ಅವರ ಕದನ ಕಣ ಪುಸ್ತಕದ ಪರಿಷ್ಕೃತ 3 ನೇ ಮುದ್ರಣವನ್ನು ಹಿರಿಯ ಚಿಂತಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಬಿಡುಗಡೆ ಮಾಡಿ ಮಾತನಾಡಿದರು. ಕಳೆದ ವರ್ಷದಲ್ಲಿ ದೆಹಲಿಯನ್ನು ಕೇಂದ್ರವಾಗಿಸಿ ಸುಮಾರು 11 ತಿಂಗಳು ನಿರಂತರವಾಗಿ ನಡೆದ ರೈತಾಂದೋಲನವನ್ನು ಮುಂದಿಡುವ ಪುಸ್ತಕವನ್ನು ನವೀನ್ ಕುಮಾರ್ ನೀಡಿದ್ದಾರೆ. “ದೆಹಲಿಯ ರೈತ ಹೋರಾಟ ಸ್ವತಂತ್ರ ಭಾರತದ ಒಂದು ಚಾರಿತ್ರಿಕ ಹೋರಾಟ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಜಾರಿಮಾಡಲು ಹೊರಟ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೇಶದ ರೈತರು, ಮುಖ್ಯವಾಗಿ ಪಂಜಾಬ್, ಹರ್ಯಾಣ, ಉತ್ತರಪ್ರದೇಶಗಳ ರೈತರು ನಡೆಸಿದ ಕಡು ಹೋರಾಟ ಭಾರತದಲ್ಲಿ ಸ್ವಾತಂತ್ರ್ಯ ನಂತರ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆಯೆಂದು ಹೇಳಬಹುದಾದ ಒಂದು ಅತಿದೊಡ್ಡ ಮುಷ್ಕರ ಎಂದು ಹೇಳಬಹುದು. ಇದರ ಕ್ಷಣಕ್ಷಣದ ವಿವರ ನೀಡುವ ಕದನ ಕಣ ಪುಸ್ತಕವು ಕನ್ನಡ ಭಾಷೆಗೆ, ನಾಡಿಗೆ ಒಂದು ಕೊಡುಗೆ” ಎಂದು ಹೇಳಿದರು.
ಇದನ್ನೂ ಓದಿ : ದುಡಿಯುವವರ ಮಹಾಧರಣಿ| ಸಂಘ ಪರಿವಾರದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ – ದೇವನೂರ ಮಹಾದೇವ
ಹಾಗೆಯೇ, “ರೈತರನ್ನು ಕೇಂದ್ರ ಸರ್ಕಾರ ಕಡೆಗಣಸಿತ್ತು. ಆದರೆ ಸಾವಿರಾರು ಸಂಖ್ಯೆಯಲ್ಲಿ ಟ್ರಾಕ್ಟರ್‌ಗಳೊಂದಿಗೆ ಬಂದಿಳಿದ ರೈತರು ದೊಡ್ಡ ಶಾಕ್ ನೀಡಿದರು ಸರ್ಕಾರಕ್ಕೆ. ಅವರನ್ನು ಸ್ಟೇಡಿಯಂ ಒಳಗೆ ತುರುಕಲು ಸರ್ಕಾರ ನೋಡಿದಾಗ ರೈತ ಹೋರಾಟಗಾರರು, ‘ನಾವು ಸ್ವತಂತ್ರ ಭಾರತದ ಪ್ರಜೆಗಳು, ಯಾವುದೇ ಬಂಧನಗಳಿಗೆ ಒಳಪಡುವವರಲ್ಲ’ ಎಂದು ದೆಹಲಿಗೆ ಹೋಗುವ ಮುಖ್ಯರಸ್ತೆಗಳಲ್ಲೇ ತಂಗಿದರು, ರಸ್ತೆಗಳನ್ನು ಜಾಮ್ ಮಾಡಿದರು, ಜನರನ್ನು ಕಡೆಗಣಿಸುವ ಸರ್ಕಾರಗಳಿಗೆ ಚಳಿ ಬಿಡಿಸದರು. ಅರ್ನಬ್ ಗೋಸ್ವಾಮಿಯಂತಹ ಪತ್ರಕರ್ತರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿದ್ದರು, ಅದೇ ಸಮಯದಲ್ಲಿ ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡರು. ‘ಟ್ರಾಕ್ಟರ್ ಟು ಟ್ವಿಟರ್’ ಎಂಬಂತಹ ವಿನೂತನ ಪ್ರಯೋಗಗಳನ್ನು ಮಾಡಿದರು. ಇದನ್ನು ನಡೆಸಿದವರು ವಿದ್ಯಾರ್ಥಿಗಳು ಮತ್ತು ಟೆಕ್ ಸಂಸ್ಥೆಗಳ ಉದ್ಯೋಗಿಗಳು. ಹೀಗೆ ಎಲ್ಲ ವರ್ಗದ ಜನತೆ ಪಾಲ್ಗೊಂಡ ಬೃಹತ್ ಆಂದೋಲನ ರೈತ ಚಳುವಳಿ” ಎಂದು ವಿವರಿಸಿದರು.
ದಸಂಸ ಚಾಲನಾ ಸಮಿತಿಯ ಮುಖಂಡರು, ಡಿಎಸ್‌ಎಸ್ ಸಂಯೋಜಕದ ರಾಜ್ಯಾಧ್ಯಕ್ಷರಾದ ವಿ ನಾಗರಾಜ್ ಅವರು ಮಾತನಾಡುತ್ತಾ, “ಸ್ವತಂತ್ರ ಭಾರತದಲ್ಲೇ ಇಂದಿಗೂ ತಲೆ ಮೇಲೆ ಮಲ ಹೊರುವ ಪದ್ಧತಿ ಜಾರಿಯಲ್ಲಿದೆ. ದಲಿತ-ದಮನಿತರು ಇಂದಿಗೂ ಅಸಹನೀಯ ದಮನಕ್ಕೆ ಗುರಿಯಾಗಿದ್ದಾರೆ. ಇಂದು ಆಳುತ್ತಿರುವವರು ಯಾಕೆ ರೈತರ ಪರವಾಗಿಲ್ಲ, ಕಾರ್ಮಿಕರ ಪರವಾಗಿಲ್ಲ, ದಲಿತರ ಪರವಾಗಿಲ್ಲ ಎಂದು ನಾವು ಆಲೋಚಿಸಬೇಕಿದೆ. ಕೆ.ಎಸ್.ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದಾಗ ಎಲ್ಲ ಜನತೆಯ ಸಮಸ್ಯೆಗಳ ಬಗ್ಗೆ ಅವರು ದನಿಯೆತ್ತುತ್ತಿದ್ದರು. ನಾವು ನಮ್ಮ ಪ್ರತಿನಿಧಿಗಳಾಗಿ ಯಾರಿರಬೇಕು ಎಂದು ಆಲೋಚಿಸಬೇಕು, ಚುನಾವಣೆಯ ವ್ಯವಸ್ಥೆಯನ್ನು ಬದಲಿಸಬೇಕು, ಅಂತಹ ಶಕ್ತಿ ಈ ಹೋರಾಟಕ್ಕೆ ಬರಲಿ” ಎಂದು ಆಶಯದ ಮಾತುಗಳನ್ನಾಡಿದರು.
ಕೃಷಿ ಬೆಲೆ ಆಯೋಗದ ಈ ಹಿಂದಿನ ಅಧ್ಯಕ್ಷರಾಗಿದ್ದ ಪ್ರೊ. ಪ್ರಕಾಶ್ ಕಮ್ಮರಡಿಯವರು ಮಾತನಾಡುತ್ತಾ “ಭಾರತವು ನಿಜವಾದ ಪ್ರಜಾಪ್ರಭುತ್ವ ದೇಶವಾಗಿದ್ದರೆ ಇಲ್ಲಿ ರೈತರು ನಿರಂತರ ಧರಣಿ ಮಾಡಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲ. ಇಲ್ಲಿ ಸಾಯುವ ರೈತರ ಅಂಕಿಅಂಶ ಮಾತ್ರ ಸಿಗುತ್ತದೆ, ಬದುಕಿರುವ ರೈತರ ಬದುಕನ್ನು ಉತ್ತಮಪಡಿಸಲು ಏನೂ ಸಿಗುವುದಿಲ್ಲ. ಕೊರೊನಾ ಕಾಲದಲ್ಲೂ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾಗಿ ಬಂದಿತ್ತು. ನಗರದ ಜನತೆಗೆ ಹಣ್ಣು ಹಂಪಲು ಸಿಗದಂತಾದರೆ ಆಹಾರ ಸಿಗದಂತಾದರೆ ಸಮಸ್ಯೆಗಳು ತಾನಾಗೇ ಪರಿಹಾರವಾಗಬಹುದು” ಎಂದರು.
ವೇದಿಕೆಯಲ್ಲಿ ಆಳಂದದ ಶಾಸಕರಾದ ಬಿ. ಆರ್. ಪಾಟೀಲ್ ಅವರು ಉಪಸ್ಥಿತರಿದ್ದು, ಹೋರಾಟಗಾರರ ಆಗ್ರಹಗಳನ್ನು ಆಲಿಸಿದರು. ಅದಲ್ಲದೆ ಈ ವೇದಿಕೆಯಲ್ಲಿ ಅಧ್ಯಕ್ಷೀಯ ಮಂಡಳಿಯಾಗಿ ಹಿರಿಯ ಹೋರಾಟಗಾರರಾದ ಚಾಮರಸ ಮಾಲಿ ಪಾಟೀಲ್, ಎಚ್. ಆರ್.ನವೀನ್ ಕುಮಾರ್, ಡಾ. ಸಿದ್ದನಗೌಡ ಪಾಟೀಲ್, ಪುಟ್ಟಮಾದು, ನಾಗಮ್ಮಾಳ್, ಗುರುಪ್ರಸಾದ್ ಕೆರಗೋಡು, ಕೆ.ಎಸ್.ವಿಮಲಾ, ಕರಿಯಪ್ಪ ಗುಡಿಮನಿ, ಡಿ.ಎಚ್.ಪೂಜಾರ್, ವಿ.ಎನ್.ಭಟ್ ಮೊದಲಾದವರು ಇದ್ದರು. ಅಧ್ಯಕ್ಷೀಯ ಮಂಡಳಿಯ ಪರವಾಗಿ ಚಾಮರಸ ಮಾಲಿ ಪಾಟೀಲ್ ಅವರು ಮಾತನಾಡಿದರು.
ಕಾರ್ಮಿಕ ಸಂಘಟನೆಗಳ ಪರವಾಗಿ ಸಿಐಟಿಯು ಕೇಂದ್ರ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್ ಡಿಎಸ್‌ಎಸ್(ಅಂಬೇಡ್ಕರ್‌ವಾದ) ಸಂಚಾಲಕ ಮಾವಳ್ಳಿ ಶಂಕರ್, ರೈತ ಸಂಘಟನೆಗಳ ಪರವಾಗಿ ಮಾತು – ಅಮೀನ್ ಪಾಷ ದಿದ್ಗಿ ಮಾತನಾಡಿದರು. ಚಿಂತಕರಾದ ಡಾ. ವಿಜಯಾ ಅವರು ಪೀಠಿಕೆಯನ್ನು ಬೋಧಿಸಿದರು. ಕಾರ್ಯಕ್ರಮವನ್ನು ಟಿ.ಯಶವಂತ ನಿರ್ವಹಿಸಿದರೆ, ಸ್ವಾಗತವನ್ನು ಕೆವಿ ಭಟ್, ವಂದನಾರ್ಪಣೆಯನ್ನು ಪಿಆರ್‌ಎಸ್ ಮಣಿ ಮಾಡಿದರು.
ಮಹಾಧರಣಿಯಲ್ಲಿ ಸೇರಿದ್ದ ಜನಸ್ತೋಮ
ಇದನ್ನೂ ಓದಿ : ದುಡಿಯುವ ಜನರ ಮಹಾಧರಣಿ| ಸಂವಿಧಾನ ಸಂಕಲ್ಪ | ಸಂವಿಧಾನ ಪೀಠೀಕೆ ಬೋಧನೆ