ಮಾಧ್ಯಮ ಭ್ರಷ್ಟಾಚಾರದಲ್ಲಿ ಸರ್ಕಾರದ ಪಾಲು ಎಷ್ಟಿದೆಯೋ? ಓದುಗರ ಪಾಲೂ ಇದೆ!

ದಿನೇಶ್ ಅಮೀನ್ ಮಟ್ಟು

ಕರ್ನಾಟಕದ ಮಾಧ್ಯಮ ಕ್ಷೇತ್ರದ ಇತಿಹಾಸದಲ್ಲಿ ಈ ವರ್ಷದ ದೀಪಾವಳಿಗೆ ಒಂದು ವಿಶೇಷ ಪುಟ ಇರುತ್ತದೆ. ಪತ್ರಕರ್ತರ ಸ್ವೀಟ್ ಬಾಕ್ಸ್ ಪ್ರಕರಣ ದೀಪಾವಳಿ ಮುಗಿದರೂ ಮಾಲೆ ಪಟಾಕಿ ರೀತಿ ಸಿಡಿಯುತ್ತಲೇ ಇದೆ. ಬಹಿರಂಗವಾಗಿ ಇದರ ಬಗ್ಗೆ ಚರ್ಚೆ ನಡೆದಿರುವುದು ಕಡಿಮೆಯಾದರೂ ವಾಟ್ಸಪ್ ಮೆಸೆಜ್ ಗಳು ಪ್ರತಿದಿನದ ಅಪ್ ಡೇಟ್ ಕೊಡುತ್ತಿವೆ. ಈಗ ಫೇಸ್ ಬುಕ್ ನಲ್ಲಿಯೂ ಕಾಣಿಸಿಕೊಳ್ಳತೊಡಗಿದೆ.

“ಬಿಜೆಪಿ ವಿರುದ್ದದ 40% ಕಮಿಷನ್ ಮತ್ತು ಪೇಸಿಎಂ ಅಭಿಯಾನವನ್ನು ಹಿಮ್ಮೆಟ್ಟಿಸಲು ಮುಖ್ಯಮಂತ್ರಿಗಳ ಕಚೇರಿಯಿಂದಲೇ ಈ ಹಗರಣವನ್ನು ತೇಲಿಬಿಟ್ಟಿರಬಹುದೇ? ಎಂದು ನನ್ನ ಕಿಡಿಗೇಡಿ ಗೆಳೆಯನೊಬ್ಬ ನನಗೆ ಮೆಸೆಜ್ ಹಾಕಿದ್ದ.

ನಾನು ಓದಿದ ಹಾಗೆ ಲಂಚದ ಈ ವರೆಗಿನ ಅತ್ಯುತ್ತಮ ವ್ಯಾಖ್ಯಾನ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರದ್ದು. ಅವರು ಭ್ರಷ್ಟಾಚಾರದ ಬಗ್ಗೆ ಬರೆಯುತ್ತಾ ʻʻಲಂಚ ಎಂದರೆ ಅಮೇಧ್ಯ. ಅಮೇಧ್ಯವನ್ನು ಎಷ್ಟು ತಿಂದ ಎಂದು ಮುಖ್ಯ ಅಲ್ಲ, ಏನು ತಿಂದ ಎನ್ನುವುದು ಮುಖ್ಯ” ಎಂದು ವ್ಯಾಖ್ಯಾನಿಸಿದ್ದರು.

ತೇಜಸ್ವಿಯವರ ಈ ಮಾತನ್ನು ಒಪ್ಪುತ್ತಲೇ ಹೇಳುವುದಾದರೆ ಮಾಧ್ಯಮಗಳ ಮಾಲೀಕರು ಮತ್ತು ಸಂಪಾದಕರನ್ನು ಹೊರತುಪಡಿಸಿ ಉಳಿದ ಪತ್ರಕರ್ತರು ಭಾಗಿಯಾಗಿರುವ ಭ್ರಷ್ಟಾಚಾರದಲ್ಲಿನ ಹಣದ ಮೊತ್ತವನ್ನು ನಮ್ಮ ಕಾರ್ಯಾಂಗ, ಶಾಸಕಾಂಗ ಮತ್ತು ಉದ್ಯಮಗಳ ಭ್ರಷ್ಟಾಚಾರಕ್ಕೆ ಹೋಲಿಸಿದರೆ ಶೇಕಡಾ ಒಂದರಷ್ಟೂ ಇರಲಾರದು.

ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರಲ್ಲಿ ಎಲ್ಲರಿಗೂ ಅಮೇಧ್ಯ ಪಡೆಯಲು ಅವಕಾಶ ಇರುತ್ತದೆ. ಅವರವರ ಹುದ್ದೆ-ಅಧಿಕಾರಕ್ಕೆ ಅನುಗುಣವಾಗಿ ಅವರು ಒಂದಷ್ಟು ಪಡೆದಿರುತ್ತಾರೆ. ಭಾಷಾಂತರ ಮಾಡುತ್ತಾ, ವರದಿಗಳನ್ನು ತಿದ್ದುತ್ತಾ, ಪೇಜ್ ಗಳನ್ನು ಮಾಡುತ್ತಾ ಕೂತ ಬಹುಸಂಖ್ಯೆಯಲ್ಲಿರುವ ಪತ್ರಕರ್ತರು ಒಂದು ರೀತಿ ಅನಾಮಿಕರು. ಹೊರಜಗತ್ತಿನ ಜೊತೆ ಪತ್ರಕರ್ತರಾಗಿ ಸಂಪರ್ಕವೇ ಇರುವುದಿಲ್ಲ.

ಮೊದಲೆಲ್ಲ ದೀಪಾವಳಿ ಮತ್ತು ದಸರಾ ಹಬ್ಬದ ಕಾಲದಲ್ಲಿ ಪತ್ರಿಕೆ-ಚಾನೆಲ್ ಗಳ ಇಬ್ಬರು-ಮೂವರು ಮುಖ್ಯ ವರದಿಗಾರರು ಮತ್ತು ವರದಿಗಾರರಿಗೆ ಹಾಗೂ ಸಂಪಾದಕರಿಗೆ ತಲಾ ಒಂದೊಂದು ಬಾಕ್ಸ್,  ಜೊತೆಗೆ ಮಾಧ್ಯಮ ಕಚೇರಿಯ ಎಲ್ಲರಿಗೂ ವಿತರಿಸಲು 3-4 ಬಾಕ್ಸ್ ವಿತರಣೆಯಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿ ರೀತಿಯಲ್ಲಿ ಮೇಲಿನವರ ಕೈ ಬೆಚ್ಚಗೆ ಮಾಡಿದರೆ ಸಾಕಾಗುವುದಿಲ್ಲ, ಕೆಳಗಿನವರದ್ದೂ ಮಾಡಬೇಕಾಗುತ್ತದೆ ಎಂಬ ಒತ್ತಡದಿಂದಾಗಿ ಸುದ್ದಿ ಸಂಪಾದಕರು, ಇನ್ ಪುಟ್ ಎಡಿಟರ್ ಹೀಗೆ ಒಂದೆರಡು ಬಾಕ್ಸ್ ಗಳು ಹೆಚ್ಚು ಹೋಗುತ್ತಿರಬಹುದು.

ಒಂದು ಮಾಧ್ಯಮ ಸಂಸ್ಥೆಯಲ್ಲಿ ಸರಾಸರಿ 200-300 ಪತ್ರಕರ್ತರಿರಬಹುದು. ಅವರಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರು ಶೇಕಡಾ 10ರಿಂದ 20ರಷ್ಟಿರಬಹುದು. ಉಳಿದ ಶೇಕಡಾ 80ರಷ್ಟು ಪತ್ರಕರ್ತರು ಭ್ರಷ್ಟರಾಗುವುದೇ ಇಲ್ಲ  ಎಂದು ಶಪಥ ಮಾಡಿದವರಲ್ಲ. ಅವರಲ್ಲಿ ಶೇಕಡಾ 75ರಷ್ಟು ಪತ್ರಕರ್ತರು ಭ್ರಷ್ಟರಾಗಲು ಅವಕಾಶವಿಲ್ಲದ ಕಾರಣದಿಂದಾಗಿ ಪ್ರಾಮಾಣಿಕರಾಗಿ ಉಳಿದಿರುವವರು. ಇವರಲ್ಲಿ ಪ್ರಾಮಾಣಿಕರಾಗಿಯೇ ಇರಬೇಕೆಂದು ಶಪಥ ಮಾಡಿದವರು ಸುಮಾರು 25% ಇರಬಹುದು.

ಬೆರಳೆಣಿಕೆಯ ಮಹಿಳಾ ಪತ್ರಕರ್ತರನ್ನು ಹೊರತುಪಡಿಸಿದರೆ ಬಹುಸಂಖ್ಯಾತ ಮಹಿಳಾ ಪತ್ರಕರ್ತರ ಬಗ್ಗೆ ದೊಡ್ಡ ಮಟ್ಟದ ಆರೋಪಗಳಿಲ್ಲ ಎನ್ನುವುದನ್ನೂ ಗಮನಿಸಬೇಕಾಗಿದೆ. ಸಂಪಾದಕರ ಸ್ಥಾನದಲ್ಲಿ ಕೂತವರು, ವರದಿಗಾರಿಕೆ ಅದರಲ್ಲಿಯೂ ರಾಜಕೀಯ ವರದಿಗಾರಿಕೆ ಮಾಡುವ ಮಹಿಳಾ ಪತ್ರಕರ್ತರ ಸಂಖ್ಯೆ ಕಡಿಮೆ ಇರುವುದೂ ಇದಕ್ಕೆ ಕಾರಣ ಇರಬಹುದು. ಈ ಆಯಕಟ್ಟಿನ ಹುದ್ದೆಗಳಲ್ಲಿದ್ದ ಮಹಿಳೆಯರು ಆರೋಪಕ್ಕೆ ಹೊರತಾಗಿಲ್ಲ.

ಮಾಧ್ಯಮಗಳಲ್ಲಿ ವರದಿಗಾರರನ್ನು ಹೊರತುಪಡಿಸಿ ಉಳಿದವರಿಗೆ ಸಾರ್ವಜನಿಕ ಸಂಪರ್ಕವೇ ಕಡಿಮೆ. ಇವರನ್ನು ರಾಜಕಾಣಿ, ಉದ್ಯಮಿ, ಚಿತ್ರ ನಿರ್ಮಾಪಕ ಯಾರೂ ಮೂಸುವುದೂ ಇಲ್ಲ. ಇದರಿಂದಾಗಿ ಪತ್ರಕರ್ತರಾಗಬೇಕೆಂದು ಬಯಸುವವರೆಲ್ಲರ ಗುರಿ-ಆಸೆ ಎಲ್ಲವೂ ವರದಿಗಾರರಾಗುವುದು. ನಾನೊಬ್ಬ ಒಳ್ಳೆಯ ಉಪಸಂಪಾದಕ, ಸುದ್ದಿ ಸಂಪಾದಕನಾಗಬೇಕು ಎಂದು ಬಯಸಿ ಬಂದವರನ್ನು ನಾನು ನೋಡಿದ್ದೇ ಅಪರೂಪ. ಈ ಕಾರಣಕ್ಕೆ ಎಲ್ಲ ಸುದ್ದಿ ಮನೆಗಳಲ್ಲಿ ನಿರಂತರವಾಗಿ “ವರ್ಗ ಸಂಘರ್ಷ’ ನಡೆಯುತ್ತಲೇ ಇರುತ್ತದೆ. ಈ ಸಂಘರ್ಷದ ಫಲವಾಗಿ ಇತ್ತೀಚಿನ ವರ್ಷಗಳಲ್ಲಿ ಸ್ವೀಟ್ ಬಾಕ್ಸ್ ಗಳು ಸಂಪಾಕರು ಮತ್ತು ವರದಿಗಾರರ ಜೊತೆಗೆ ಪತ್ರಿಕೆಗಳ ಸುದ್ದಿ ಸಂಪಾದಕರು, ಮುಖ್ಯ ಉಪಸಂಪಾದಕರು ಚಾನೆಲ್ ಗಳ ಇನ್ ಪುಟ್ ಎಡಿಟರ್‌ ಗಳಿಗೂ ತಲುಪಲಾರಂಭಿಸಿದೆ. ವ್ಯತ್ಯಾಸ ಇಷ್ಟೆ: ಹಿಂದಿನ ಸ್ವೀಟ್ ಬಾಕ್ಸ್ ಗಳಲ್ಲಿ ಸಿಹಿತಿಂಡಿಗಳು ಮಾತ್ರ ಇತ್ತು, ಈ ಬಾರಿ ಹಣದ ಲಕೋಟೆ ಸೇರಿದೆ.

ಈ 80% ಪತ್ರಕರ್ತರಲ್ಲಿ ಬಹುಪಾಲು ಮಂದಿಯಲ್ಲಿ ಈಗಲೂ ಸ್ವಂತ ಮನೆ-ಕಾರುಗಳಿಲ್ಲ, ಸ್ಕೂಟರ್-ಬೈಕ್ ಗಳಿರಬಹುದು. ಕೆಲವರು ಕಷ್ಟಪಟ್ಟು ಮನೆ ಕಟ್ಟಿಸಿಕೊಂಡು ಇಎಂಐ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಕಾಯಿಲೆ ಬಂದು ಆಸ್ಪತ್ರೆ ವೆಚ್ಚಕ್ಕಾಗಿ ಮೈತುಂಬಾ ಸಾಲ ಮಾಡಿಕೊಂಡವರೂ ಇದ್ದಾರೆ. ಇತ್ತೀಚಿನ ಕೋವಿಡ್ ಕಾಲದಲ್ಲಿ ಉಳಿದ ಮಾಧ್ಯಮ ಸಂಸ್ಥೆಗಳನ್ನು ಬಿಟ್ಟು ಬಿಡಿ, ಪ್ರಜಾವಾಣಿಯಂತಹ ಪತ್ರಿಕೆಯಿಂದಲೇ ಒಂದೇ ಆದಾಯ ಇರುವ ಮಹಿಳಾ ಉದ್ಯೋಗಿಗಳನ್ನೂ ಸೇರಿದಂತೆ ಡಜನ್ ಗಟ್ಟಲೆ ಪತ್ರಕರ್ತರನ್ನು ಮನೆಗೆ ಕಳಿಸಿದರು. ಕೆಲವರಿಗೆ ಕಡ್ಡಾಯ ರಜೆ ಕೊಟ್ಟರು. ಹಿಂದೂ ಪತ್ರಿಕೆಯೂ ಜಿಲ್ಲಾ ವರದಿಗಾರರನ್ನು ಕಿತ್ತುಹಾಕಿದರು. ಇವರಲ್ಲಿ ಬಹುಸಂಖ್ಯೆಯ ಪತ್ರಕರ್ತರು ಪ್ರಾಮಾಣಿಕರೇ ಆಗಿದ್ದರು. ಇವರಿಗಾಗಿ ಕಣ್ಣೀರು ಹಾಕುವವರು ಯಾರೂ ಇರಲಿಲ್ಲ.

ಮಾಧ್ಯಮದಲ್ಲಿ ಭ್ರಷ್ಟಾಚಾರ ಕಡಿಮೆ ಎಂದ ಮಾತ್ರಕ್ಕೆ ಅದರ ಪರಿಣಾಮ ಕಡಿಮೆ ಎಂದರ್ಥ ಅಲ್ಲ. ಒಬ್ಬ ರಾಜಕಾರಣಿ ಇಲ್ಲವೇ ಸರ್ಕಾರಿ ನೌಕರ ಭ್ರಷ್ಟನಾಗುವುದಕ್ಕೂ ನೀತಿ-ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಕೂತಿರುವ ಪತ್ರಕರ್ತ ಇಲ್ಲವೇ ನ್ಯಾಯಾಧೀಶ ಭ್ರಷ್ಟನಾಗುವುದಕ್ಕೂ ಬಹಳ ವ್ಯತ್ಯಾಸ ಇದೆ. ಮಾಧ್ಯಮದಲ್ಲಿ ಭ್ರಷ್ಟರ ಸಂಖ್ಯೆ ಕಡಿಮೆ ಇದ್ದರೂ, ಇರುವ ಭ್ರಷ್ಟರ ಪ್ರಭಾವಳಿ ದೊಡ್ಡದು. ಒಂದು ಸಂಪಾದಕೀಯ, ಸಂಪಾದಕೀಯ ಪುಟದ ಲೇಖನ-ಅಂಕಣ, ವರದಿ-ವಿಶೇಷ ವರದಿಗಗಳು ರಾಜಕೀಯದ ದಿಕ್ಕು ದೆಸೆಯನ್ನು ಬದಲಾವಣೆ ಮಾಡುವಷ್ಟು ಪ್ರಭಾವಶಾಲಿಯಾಗಿರುತ್ತವೆ.

ಈ ಹಿನ್ನೆಲೆಯಲ್ಲಿ ಮಾಧ್ಯಮದ ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಪತ್ರಕರ್ತರನ್ನು ಸಾರಾಸಗಟಾಗಿ ಗಲ್ಲಿಗೇರಿಸಲು ಹೋಗಬೇಡಿ. ಪ್ರಜ್ಞಾಪೂರ್ವಕವಾಗಿಯೋ, ಪರಿಸ್ಥಿತಿಯ ಪಿತೂರಿಯಿಂದಾಗಿಯೋ ಪ್ರಾಮಾಣಿಕರಾಗಿ ಉಳಿದಿರುವ ಬಹುಸಂಖ್ಯಾತ ಪತ್ರಕರ್ತರ ಬಗ್ಗೆ ಸ್ವಲ್ಪ ಕನಿಕರ, ರಿಯಾಯಿತಿ ಇರಲಿ ಎನ್ನುವುದಷ್ಟೇ ಅರಿಕೆ.

ಇವರ ಬಗ್ಗೆ ಏನು ಮಾಡಬಹುದು ಎನ್ನುವುದನ್ನು ಸರ್ಕಾರದ ಜೊತೆಗೆ 50 ರೂಪಾಯಿ ಉತ್ಪಾದನಾ ವೆಚ್ಚದ ಪತ್ರಿಕೆಯನ್ನು 5 ರೂಪಾಯಿಗೆ ಕೊಂಡು ಓದುವ ಓದುಗನೂ ಯೋಚಿಸಬೇಕು. ಮಾಧ್ಯಮ ಭ್ರಷ್ಟಾಚಾರದಲ್ಲಿ ಸರ್ಕಾರದ ಎಷ್ಟು ಪಾಲಿದೆಯೋ, ಮಾಧ್ಯಮಗಳನ್ನು ಸರ್ಕಾರ ಮತ್ತು ಉದ್ಯಮಗಳ ಕಾಲಿನಡಿ ಹಾಕಿರುವ ಓದುಗರ ಪಾಲೂ ಇದೆ ಎನ್ನುವುದನ್ನು ಮರೆಯದಿರೋಣ.

Donate Janashakthi Media

Leave a Reply

Your email address will not be published. Required fields are marked *