ವಸಂತರಾಜ ಎನ್.ಕೆ.
“ಗಡಿಗಳಿಲ್ಲದ ವರದಿಗಾರರು” ಪ್ರಕಟಿಸುವ, ಕಳೆದ ಮತ್ತು ಈ ವರ್ಷ ಭಾರತದ ‘ಮಾಧ್ಯಮ ಸ್ವಾತಂತ್ರ್ಯ’ ರ‍್ಯಾಂಕ್ ಗಳಲ್ಲಿ 180 ದೇಶಗಳಲ್ಲಿ 142ನೇ ಸ್ಥಾನಗಳಿಸಿದೆ. ಆರ್.ಎಸ್.ಎಫ್. ತನ್ನ ವರದಿಯಲ್ಲಿ ಭಾರತ “ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾದ ದೇಶಗಳಲ್ಲಿ ಒಂದು” ಎಂದು ಹೇಳಿದೆ. ಪ್ರಧಾನಿ ಮೋದಿ ಅವರು ಜಗತ್ತಿನ 37 “ಪತ್ರಿಕಾ ಸ್ವಾತಂತ್ರ್ಯದ ದಾಳಿಕೋರ”ರಲ್ಲಿ ಒಬ್ಬರು ಎಂದು ಹೆಸರಿಸಿದೆ. 2006ರಲ್ಲಿ 106 ಇದ್ದ ಈ ರ‍್ಯಾಂಕ್ ಸತತವಾಗಿ ಕುಸಿಯುತ್ತಾ ಬಂದಿತ್ತು. ವಿಶೇಷವಾಗಿ ಪತ್ರಕರ್ತರ ಮೇಲೆ ಸರಕಾರದ ದಮನ, ದೈಹಿಕ ದಾಳಿ, ಬೇಕಾಬಿಟ್ಟಿ ಇಂಟರ್ನೆಟ್ ಕಡಿತ ಮತ್ತು ಅಗಾಧವಾಗಿ ಹೆಚ್ಚಿದ ಏಕಸ್ವಾಮ್ಯ-ಇವುಗಳಿಂದಾಗಿ ಭಾರತದ ‘ಮಾಧ್ಯಮ ಸ್ವಾತಂತ್ರ್ಯ’ ರ‍್ಯಾಂಕ್ 142ಕ್ಕೆ ಕುಸಿದಿದೆ.
ಬಿಜೆಪಿ ಪಕ್ಷಕ್ಕ್ಷೆ ಮತ್ತು ಎನ್.ಡಿ.ಎ. ರಂಗಕ್ಕೆ ಮತ್ತು ಅವುಗಳ ಸರಕಾರಗಳಿಗೆ ತಲೆಬಾಗದ ಮಾಧ್ಯಮಗಳು ಮತ್ತು ಮಾಧ್ಯಮ ಕಾರ್ಯಕರ್ತರ ಮೇಲೆ ಹಿಂದೆಂದೂ ಕಾಣದ ಭೀಕರ ದಾಳಿಗಳು ಕಳೆದ ಕೆಲವು ವರ್ಷಗಳ ಅದರಲ್ಲೂ ಮೋದಿ ಸರಕಾರದ ಎರಡನೆಯ ಅವಧಿಯ ಹೊಸ ಆತಂಕಕಾರಿ ಬೆಳವಣಿಗೆ. ಈ ದಾಳಿಗಳಲ್ಲಿ ಮಾಧ್ಯಮಗಳ ಕಚೇರಿಗಳ ಮತ್ತು ಪತ್ರಕರ್ತರ ಮೇಲೆ ದೈಹಿಕ ದಾಳಿ, ಕೊಲೆಗಳು ಸೇರಿವೆ. ಮಾಧ್ಯಮವು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂರು ಅಂಗಗಳ ಮೇಲೆ ಕಣ್ಗಾವಲು ಇಡುವ ‘ನಾಲ್ಕನೇ ಅಂಗ’ ಎಂಬ ಸಾಂವಿಧಾನಿಕ ಆಶಯವನ್ನು ಬುಡಮೇಲು ಮಾಡುವುದು, ಪ್ರಜಾಸತ್ತಾತ್ಮಕ ಭಿನ್ನಮತಕ್ಕೆ ಯಾವುದೇ ವೇದಿಕೆ ದೊರಕದಂತೆ ಮಾಡುವುದು ಇವುಗಳ ಹಿಂದಿರುವ ಉದ್ದೇಶವೆಂಬುದು ಸ್ಪಷ್ಟ.
ಬಿಜೆಪಿ ಪಕ್ಷದ ಮತ್ತು ಎನ್.ಡಿ.ಎ ರಂಗದ ಮತ್ತು ಅವುಗಳ ಸರಕಾರಗಳ ಒತ್ತಡಕ್ಕೆ ತಲೆಬಾಗದ, ಅವನ್ನು ನಿರ್ದಾಕ್ಷಿಣ್ಯವಾಗಿ ಟೀಕೆ ಮಾಡುವ, ಅವುಗಳಿಗೆ ಮುಜುಗರ ತರುವ ವಾಸ್ತವ ವರದಿಗಳನ್ನು ಮಾಡುವ, ಸತ್ಯವನ್ನು ಹೇಳುವ ಮಾಧ್ಯಮಗಳ ಮೇಲೆ ಐಟಿ, ಈ.ಡಿ, ಸಿಬಿಐ ಮುಂತಾದ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಮಾಡಿದಾಳಿ ಮಾಡಲಾಗುತ್ತಿದೆ. ಇದು ಹೆಚ್ಚಾಗಿ ಕಾನೂನು ಬಾಹಿರವಾಗಿ ಅಥವಾ ಕಾನೂನಿನ ಬದ್ಧತೆಯ ಅಂಚಿನಲ್ಲಿರುವ ವಿಕೃತ ಅನ್ವಯದ ಮೂಲಕ ನಡೆಯುತ್ತಿದೆ. “ಮುಸ್ಲಿಮರ ಮೇಲೆ ಗುಂಪುದಾಳಿ”ಯ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಮೀಡಿಯಾ ಒನ್‌ಟಿವಿಯ ಪ್ರಸಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಯಿತು. ದಿ ವೈರ್, ನ್ಯೂಸ್‌ಕ್ಲಿಕ್, ನ್ಯೂಸ್ ಲಾಂಡ್ರಿ ಹಾಗೂ ಹಿಂದಿಯ ಮತ್ತು ದೇಶದ ಅತಿ ಹೆಚ್ಚು ಪ್ರಸಾರದ ‘ದೈನಿಕ ಭಾಸ್ಕರ್’ ಗಳ ಕಚೇರಿಗಳ ಅಥವಾ ಒಡೆಯರ ಅಥವಾ ನಿರ್ದೇಶಕರ ಮನೆಗಳ ಮೇಲೆ ಇ.ಡಿ. ದಾಳಿ, ತಪಾಸಣೆಗಳನ್ನು ಮಾಡಿ ಕಿರುಕುಳ ಕೊಡಲಾಯಿತು. ಅವು ಹವಾಲಾ, ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ, ಕಪ್ಪು ಹಣದ ಚಲಾವಣೆ ಮುಂತಾದ “ಆರ್ಥಿಕ ಅಪರಾಧ”ಗಳನ್ನು ಮಾಡಿವೆ ಎಂದು ಈ ಕೇಂದ್ರೀಯ ಸಂಸ್ಥೆಗಳು ಹಾಗೂ ಸದಾ ಸರಕಾರದ ಬೋಪರಾಕು ಹೇಳುವ ಮಾಧ್ಯಮಗಳು ಯಾವುದೇ ಪುರಾವೆ ಇಲ್ಲದೆ ಅಪಪ್ರಚಾರ ಮಾಡಿದವು. ಆದರೆ ಈ ದಾಳಿಗಳು, ಆಪಾದನೆಗಳ ಹಲವು ತಿಂಗಳುಗಳ ನಂತರವೂ ಯಾವುದೇ ಕೇಸ್ ದಾಖಲಾಗಿಲ್ಲ ಎಂಬುದೇ ಇವು ದುರುದ್ದೇಶದ ದಾಳಿಗಳು ಎಂದು ಸಿದ್ಧಪಡಿಸುತ್ತವೆ. ಈ ಮಾಧ್ಯಮಗಳು ಆಳುವ ಪಕ್ಷ ಮತ್ತು ಅವುಗಳ ಬೋಪರಾಕು ಹೇಳಲು ಒಪ್ಪದ ಕೆಲವೇ ಮಾಧ್ಯಮಗಳು ಎಂಬುದು, ಇವುಗಳ ‘ಬಾಯಿ ಮುಚ್ಚಿಸುವುದೇ’ ಈ ದಾಳಿಗಳ ಉದ್ದೇಶ ಎಂಬುದನ್ನು ಬಯಲು ಮಾಡುತ್ತದೆ.
ಕರ್ನಾಟಕದಲ್ಲಿ ಸಹ ಆಗಿನ ಬಿಜೆಪಿ ಮುಖ್ಯಮಂತ್ರಿಯ ಪುತ್ರನ ಭ್ರಷ್ಟಾಚಾರದ ಕುರಿತು ತನಿಖಾ ವರದಿ ಮಾಡಿದ್ದ ‘ಪವರ್ ಟಿವಿ’ ಚಾನೆಲ್ ಕಚೇರಿ ಮೇಲೆ ಸೆಪ್ಟೆಂಬರ್ 2020ರಲ್ಲಿ ಸಿಸಿಬಿ ದಾಳಿ ಮಾಡಿ ಸರ್ವರ್‌ನ್ನು ತೆಗೆದುಕೊಂಡು ಹೋಗಿ ಅದರ ಪ್ರಸಾರ ನಿಲ್ಲಿಸಿದರು. ಚಾನೆಲ್ ಒಡೆಯರ ಪತ್ರಕರ್ತರ ಮೇಲೆ ಕೇಸುಗಳನ್ನು ದಾಖಲಿಸಿದರು. ಅದರ ಸಾಮಾಜಿಕ ಮಾಧ್ಯಮಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನವನ್ನೂ ಮಾಡಲಾಯಿತು. ಇವೆಲ್ಲ ಕಾನೂನು ಬಾಹಿರ ಕ್ರಮಗಳಾಗಿದ್ದವು. ಹಿಂದೆ ರಾಜ್ಯದ ಸದನದಲ್ಲಿ ಬಿಜೆಪಿ ಸದಸ್ಯರ ನೀಲಿ ಚಿತ್ರದರ್ಶನದ ಪ್ರಕರಣದಿಂದ ಪಾಠ ಕಲಿತ ಬಿಜೆಪಿ ಅಧಿಕಾರಕ್ಕೆ ಬಂದಾಗ ಖಾಸಗಿ ಟಿವಿ ಚಾನೆಲ್ ಗಳಿಗೆ ಸದನದ ಕಲಾಪಗಳ ನೇರ ಪ್ರಸಾರವನ್ನು ಕಡಿತ ಮಾಡಿತು. ದೂರದರ್ಶನದ ನೇರ ಪ್ರಸಾರವನ್ನು ಮರುಪ್ರಸಾರ ಮಾಡುವಂತೆ ವಿಧಿಸಿತು.
ಸರಕಾರ ಮತ್ತು ಸ್ಥಳೀಯ ಆಡಳಿತಗಳಿಂದ (ಹೆಚ್ಚಾಗಿ ಕೇಂದ್ರ ಅಥವಾ ರಾಜ್ಯ ಸರಕಾರದ ಆಜ್ಞೆ ಮೇಲೆ) ಇಂಟರ್ನೆಟ್ ಕಡಿತದ ಬೇಕಾಬಿಟ್ಟಿ ದುರ್ಬಳಕೆ ಈ ಅವಧಿಯಲ್ಲಿ ಮಾಧ್ಯಮಗಳ ಮೇಲೆ ದಾಳಿಯ ಇನ್ನೊಂದು ಕರಾಳ ಮುಖ. ಇಂಟರ್ನೆಟ್ ಕಡಿತಗಳ ಸಂಖ್ಯೆಯಲ್ಲಿ 2020ರಲ್ಲಿ ಹಲವು ದಮನಕಾರಿ ಸರ್ವಾಧಿಕಾರಿ ದೇಶಗಳನ್ನು ಹಿಂದಿಕ್ಕಿ ಜಗತ್ತಿನಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ. ಇಂಟರ್ನೆಟ್ ಕಡಿತವು ಎಲ್ಲ ಮಾಧ್ಯಮಗಳನ್ನು ತೀವ್ರವಾಗಿ ಬಾಧಿಸುವುದಲ್ಲದೆ, ವೆಬ್ ಆಧಾರಿತ ಮಾಧ್ಯಮಗಳನ್ನು ಪೂರ್ಣವಾಗಿ ತಡೆಯುತ್ತದೆ. 2014ರ ವರೆಗೆ ಒಂದಂಕಿಯಲ್ಲಿದ್ದ ವಾರ್ಷಿಕ ಇಂಟರ್ನೆಟ್ ಕಡಿತಗಳ ಸಂಖ್ಯೆ 2014-17 ಅವಧಿಯಲ್ಲಿ ಎರಡಂಕಿಗೆ ಬಂದಿದ್ದು, ಒಟ್ಟು 130 ಆಗಿತ್ತು. 2018 ಜನವರಿಯಿಂದ 2021 ಮಾರ್ಚ್ ವರೆಗಿನ ಅವಧಿಯಲ್ಲಿ ವಾರ್ಷಿಕ ಮೂರಂಕಿಗೆ ಏರಿದ್ದು, ಒಟ್ಟು 380ಕ್ಕೆ ಏರಿದೆ (ಅಂದರೆ ಹಿಂದಿನ ಅವಧಿಯ 3 ಪಟ್ಟಾಗಿದೆ). ಕಡಿತದ ಅವಧಿಗಳು ಸಹ ದೀರ್ಘವಾಗಿದ್ದವು. ಉದಾಹರಣೆಗೆ 2019ರಲ್ಲಿ 106 ಕಡಿತಗಳು 4000 ಗಂಟೆಗಳ ಕಾಲ ಇದ್ದವು. ಜಮ್ಮು-ಕಾಶ್ಮೀರದ ಮೇಲೆ ಹೇರಲಾದ ಇಂಟರ್ನೆಟ್ ಕಡಿತ 213 ದಿನಗಳ ಕಾಲ (ಅಗಸ್ಟ್ 4, 2019 ರಿಂದ ಮಾರ್ಚ್ 4, 2020ವರೆಗೆ) ಸತತವಾಗಿತ್ತು. ಆ ಮೇಲೂ 2ಜಿ ನೆಟ್ ಮಾತ್ರಕೊಡಲಾಯಿತು. ಕರ್ನಾಟಕದಲ್ಲಿ ಸಹ 2019-20ರಲ್ಲಿ ಭಾರೀ ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಇಂಟರ್ನೆಟ್ ಕಡಿತ ಮಾಡಲಾಯಿತು ಎಂದು ವರದಿಯಾಗಿದೆ.
ಸಾರ್ವಜನಿಕ ಭದ್ರತೆ, ಸಾರ್ವಜನಿಕ ಶಾಂತಿಭಂಗ, ದ್ವೇಷ ಪ್ರಚಾರತಡೆ, ಅಪಾಯಕಾರಿ ಸುಳ್ಳು ಸುದ್ದಿ ತಡೆಗಳು ಈ ಕಡಿತಗಳಿಗೆ ಕಾರಣಗಳು ಎಂದು ಸರಕಾರಗಳು ಹೇಳುತ್ತಾ ಬಂದಿವೆ. ಆದರೆ ಪ್ರಮುಖವಾಗಿ ಸಿಎಎ-ಎನ್.ಆರ್.ಸಿ. ಚಳುವಳಿ, ದೆಹಲಿ ಕೋಮು ಗಲಭೆಗಳು, ದೆಹಲಿ ಗಡಿಗಳಲ್ಲಿ ರೈತರ ಹೆದ್ದಾರಿಧರಣಿಯಲ್ಲಿ ಹಲವು ಬಾರಿ, ಇತರ ಹಲವು ಚಳುವಳಿಗಳ ಸಂದರ್ಭದಲ್ಲಿ ಇಂಟರ್ನೆಟ್ ಕಡಿತ ಮಾಡಲಾಯಿತು, ಅಂದರೆ ಪ್ರಜಾಸತ್ತಾತ್ಮಕ ಭಿನ್ನಮತ ಹತ್ತಿಕ್ಕಲುಇದನ್ನು ಪ್ರಧಾನವಾಗಿ ಬಳಸಲಾಯಿತು ಎಂಬುದು ವಾಸ್ತವ. ಸರಕಾರದ ದಮನಕಾರಿ ಕ್ರಮಗಳ ಸುದ್ದಿ ಹರಡದಂತೆ ಮತ್ತು ಇತರ ಗಂಭೀರ ವೈಫಲ್ಯಗಳನ್ನು ಮುಚ್ಚಿಡಲು, ಭಿನ್ನ ಮತೀಯರ ಅಭಿವ್ಯಕ್ತಿಯನ್ನು ಮತ್ತು ಸರಕಾರಕ್ಕೆ ವಿರುದ್ಧವಾದ ಅಭಿಪ್ರಾಯಗಳ ಪ್ರಚಾರವನ್ನು ತಡೆಗಟ್ಟಲು, ಇಂಟರ್ನೆಟ್ ಕಡಿತವನ್ನು ಸರಕಾರಗಳು ಈಗ ಸೆಕ್ಷನ್ 144ರಷ್ಟು ಸಲೀಸಾಗಿ ಬಳಸುತ್ತಿವೆ ಎಂಬುದು ಸ್ಪಷ್ಟ.
ಕಳೆದ ಹತ್ತು (2010-20) ವರ್ಷಗಳಲ್ಲಿ 154 ಪತ್ರಕರ್ತರಿಗೆ ಅವರ ವೃತ್ತಿ ಸಂಬಂಧಿ ಪ್ರಕರಣಗಳಲ್ಲಿ ಶೋ ಕಾಸ್ ನೋಟೀಸ್ ಕೊಡಲಾಗಿದೆ ಅಥವಾ ಪೋಲಿಸ್ ವಿಚಾರಣೆಗೆ ಒಳಪಡಿಸಲಾಗಿದೆ, ಬಂಧಿಸಲಾಗಿದೆ. 2020 ಒಂದರಲ್ಲೇ ಇಂತಹ 67 ಪ್ರಕರಣಗಳು ಜರುಗಿವೆ. ಇವುಗಳಲ್ಲಿ 137 ಪ್ರಕರಣಗಳು ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ನಡೆದಿವೆ, 73 ಬಿಜೆಪಿ ಮತ್ತು 30 ಎನ್.ಡಿ.ಎ ಕೂಟದ ಆಡಳಿತದ ರಾಜ್ಯಗಳಲ್ಲಿ ನಡೆದಿವೆ. ಇದೇ ಅವಧಿಯಲ್ಲಿ 9 ವಿದೇಶೀ ಪತ್ರಕರ್ತರ ವಿಚಾರಣೆ ನಡೆಸಿದ, ವೀಸಾ ರದ್ದು ಮಾಡಿ ವಾಪಸು ಕಳಿಸಿದ ಅಥವಾ ವೀಸಾ ನಿರಾಕರಿಸಿದ ಪ್ರಕರಣಗಳು ನಡೆದಿವೆ. ಬಿಜೆಪಿ ಸರಕಾರದ 2014-19 ಅವಧಿಯಲ್ಲಿ ಪತ್ರಕರ್ತರ ಮೇಲೆ 198 ದೈಹಿಕ ಹಲ್ಲೆಯ ಪ್ರಕರಣಗಳು ನಡೆದಿವೆ. ಇವುಗಳಲ್ಲಿ 19 ಮಹಿಳಾ ಪತ್ರಕರ್ತರ ಮೇಲೆ ನಡೆದ ಹಲ್ಲೆಗಳು ಸೇರಿವೆ ಹಾಗೂ 30 ಸಾವಿನಲ್ಲಿ ಕೊನೆಗೊಂಡಿವೆ. ಈ 30 ಕೊಲೆಗಳಲ್ಲಿ 3 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. 2019 ಒಂದು ವರ್ಷದಲ್ಲೇ 36 ದೈಹಿಕ ಹಲ್ಲೆ ಪ್ರಕರಣಗಳು ನಡೆದಿವೆ.
ಪತ್ರಕರ್ತರ ಮೇಲೆ ದೈಹಿಕ ಹಲ್ಲೆ ಮತ್ತು ಪೋಲಿಸ್ ಪ್ರಕರಣಗಳ ಕಾರಣ ಹುಡುಕುತ್ತಾ ಹೋದರೆ ಒಂದೆಡೆ ಸರಕಾರದ ಆಳುವ ಪಕ್ಷದ ರಾಜಕಾರಣಿಗಳ ಕಾರ್ಯಕರ್ತರ ದೌರ್ಜನ್ಯ, ಗಂಭೀರ ವೈಫಲ್ಯಗಳ ಕುರಿತು ವರದಿ ಮಾಡಿದ ಅಥವಾ ಮಾಡಲು ಮಾಹಿತಿ ಸಂಗ್ರಹಿಸಿದ್ದು ಕಾರಣವೆಂದು ಕಾಣುತ್ತದೆ. ಇನ್ನೊಂದೆಡೆ ಭೂಮಿ ಮತ್ತಿತರ ಸಂಪನ್ಮೂಲಗಳ ಲೂಟಿ, ನೀರು, ಹೆಂಡ, ಗಣಿ ಮಾಫಿಯಾ ಗಳು, ಇತರ ಕಾನೂನು ಬಾಹಿರ ಚಟುಟವಟಿಕೆಗಳಲ್ಲಿ ತೊಡಗಿದ ಪ್ರಬಲ ವ್ಯಕ್ತಿಗಳು ಹಿತಾಸಕ್ತಿಗಳು ಹಾಗೂ ಅಧಿಕಾರಿ/ರಾಜಕಾರಣಿಗಳ ಜತೆಅವರ ಸಂಬಂಧಗಳನ್ನು ಬಯಲು ಮಾಡಿದ ಅಥವಾ ಆ ಹಾದಿಯಲ್ಲಿದ್ದ ಪತ್ರಕರ್ತರು ಗಂಭೀರ ಹಲ್ಲೆಗಳಿಗೆ ಒಳಗಾಗಿದ್ದಾರೆ. ಇಂತಹ ಹಲವು ಪತ್ರಕರ್ತರು ಜೀವಕ್ಕೆ ಅಪಾಯವಿಲ್ಲದಿದ್ದರೂ ಪ್ರಬಲ ಹಿತಾಸಕ್ತಿಗಳ ಒತ್ತಡದಿಂದ ಕೆಲಸ ಕಳೆದುಕೊಂಡಿದ್ದಾರೆ. ಕೊವಿದ್ ಸಂದರ್ಭದಲ್ಲಿ ಹಲವು ಮಾಧ್ಯಮ ಕಂಪನಿಗಳು ತಮ್ಮ ಉದ್ಯೋಗಿಗಳ ಸಹಾಯಕ್ಕೆ ಧಾವಿಸದೆ ಅವರನ್ನು ವಜಾ ಮಾಡುವ ಮೂಲಕ ಲಾಭ ಉಳಿಸುವ/ಹೆಚ್ಚಿಸುವ ಅಥವಾ ನಷ್ಟ ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.
ಕರ್ನಾಟಕದಲ್ಲಿ ಇಂತಹ ಹಲವು ದೈಹಿಕ ದಾಳಿಯ ಪ್ರಕರಣಗಳು ನಡೆದಿವೆ. ಸಿಎಎ/ಎನ್.ಪಿ.ಆರ್/ಎನ್.ಆರ್.ಸಿ. ವಿರೋಧಿಸಿದ್ದ ಕನ್ನಡ ನೆಟ್.ಕಾಂ ಸಂಪಾದಕರಾಗಿದ್ದ ಸಿರಾಜ್ ಬಿಸರಳ್ಳಿ ಮೇಲೆ ಸಭೆಯೊಂದರಲ್ಲಿ ಅವರು ಓದಿದ ಕವನದ ಆಧಾರದ ಮೇಲೆ ಕೇಸು ದಾಖಲೆ ಮಾಡಲಾಯಿತು. ಅವರಿಗೆ ಬೈಲ್ ದೊರೆಯಿತಾದರೂ, ಅವರ ಮತ್ತು ಅವರ ಪತ್ರಿಕೆಯ ಸಾ.ಮಾ ಖಾತೆಗಳ ಟ್ರೋಲಿಂಗ್ ಮಾಡಿ ಮುಚ್ಚಿಸುವ ಪ್ರಯತ್ನ ಮಾಡಲಾಯಿತು. ಹಿಂದೆ ಕೋರ್ಟಿನಲ್ಲಿ ಮುಚ್ಚಲಾಗಿದ್ದ 25 ವರ್ಷ ಹಳೆಯ ಕೇಸನ್ನು ಮತ್ತೆ ತೆರೆದು, ‘ನ್ಯಾಯಪಥ’ ಪತ್ರಿಕೆಯ ಆಗಿನ ಸಂಪಾದಕರಾಗಿದ್ದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಮೇಲೆ 2019 ಅಕ್ಟೋಬರ್ ನಲ್ಲಿ ‘ದೇಶದ್ರೋಹ’ದ ಕೇಸು ಹಾಕಲಾಯಿತು. ತುಮಕೂರಿನಲ್ಲಿ ಫಾರ್ಮಾ ಕಾರ್ಖಾನೆಯ ಪರಿಸರ ಮಾಲಿನ್ಯದ ಕುರಿತು ವರದಿ ಮಾಡಲು ಹೋಗಿದ್ದ ‘ರಾಜ್ ನ್ಯೂಸ’ ವರದಿಗಾರರ ಮೇಲೆ ಕಾರ್ಖಾನೆಯ ಸಿಬ್ಬಂದಿ ದಾಳಿ ಮಾಡಿದರು. ಮಂಗಳೂರಿನಲ್ಲಿ ಸಿಎಎ ಪ್ರತಿಭಟನೆ ವರದಿ ಮಾಡಲು ಬಂದಿದ್ದ ಕೇರಳದ 7 ಪತ್ರಕರ್ತರನ್ನು ಬಂಧಿಸಿ ಕೇರಳಕ್ಕೆ ‘ಗಡಿಪಾರು’ ಮಾಡಲಾಯಿತು. ಮೈಸೂರಿನಲ್ಲಿ ಒತ್ತುವರಿ ಮಾಡಿದ ಜಮೀನಿನಲ್ಲಿ ಕಟ್ಟಿದ ಗುಡಿಗಳನ್ನು ಕೆಡವಿದ ಪ್ರಕರಣದ ವಿರುದ್ಧ ಪ್ರತಿಭಟನೆಯ ವರದಿ ಮಾಡಲು ಪ್ರತಿಭಟನಾಕಾರ ನಾಯಕರೊಬ್ಬರ ಸಂದರ್ಶನರೆ ಕಾರ್ಡು ಮಾಡುತ್ತಿದ್ದ ‘ಕೌಸರ್ ನ್ಯೂಸ್’ ಎಂಬ ಪತ್ರಿಕೆಯ ಪತ್ರಕರ್ತ ಮಹಮ್ಮದ್ ಸಫ್ದರ್‌ಕೈಸರ್ ಮೇಲೆ ಸೆಪ್ಟೆಂಬರ್ 2021ರಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದರು. ಇವು ಕೆಲವು ಉದಾಹರಣೆಗಳಷ್ಟೇ.
“ಗಡಿಗಳಿಲ್ಲದ ವರದಿಗಾರರು” (ರಿಪೋಟರ‍್ಸ್ ಸಾನ್ಸ್ ಫ್ರಾಂಟಿಯರ್-ಆರ್.ಎಸ್.ಎಫ್) ಎಂಬ ಫ್ರಾನ್ಸ್ ನಲ್ಲಿ ಮುಖ್ಯನೆಲೆ ಹೊಂದಿರುವ ಅಂತರಾಷ್ಟ್ರೀಯ ಪತ್ರಕಾರಿತೆಯ ಲಾಭರಹಿತ ಸಂಸ್ಥೆ, ಜಗತ್ತಿನ ಎಲ್ಲ ದೇಶಗಳ ಮಾಧ್ಯಮ ಸ್ವಾತಂತ್ರ್ಯದ ಕುರಿತು ಮಾಹಿತಿ ಸಂಗ್ರಹಿಸಿ ಪರೀಶೀಲಿಸಿ ಹಲವು ವರ್ಷಗಳಿಂದ ಪ್ರಕಟಿಸುತ್ತಿದೆ. ಕಳೆದ ಮತ್ತು ಈ ವರ್ಷ ಭಾರತದ ‘ಮಾಧ್ಯಮ ಸ್ವಾತಂತ್ರ್ಯ’ ರ‍್ಯಾಂಕ್ ಗಳಲ್ಲಿ 180 ದೇಶಗಳಲ್ಲಿ 142ನೇ ಸ್ಥಾನ ಗಳಿಸಿದೆ. ಆರ್.ಎಸ್.ಎಫ್ ತನ್ನ ವರದಿಯಲ್ಲಿ ಭಾರತ “ಪತ್ರಕರ್ತರಿಗೆ ಅತ್ಯಂತ ಅಪಾಯ ಕಾರಿಯಾದ ದೇಶಗಳಲ್ಲಿ ಒಂದು” ಎಂದು ಹೇಳಿದೆ. ಪ್ರಧಾನಿ ಮೋದಿ ಅವರು ಜಗತ್ತಿನ 37 “ಪತ್ರಿಕಾ ಸ್ವಾತಂತ್ರ್ಯದ ದಾಳಿಕೋರ”ರಲ್ಲಿ ಒಬ್ಬರು ಎಂದು ಹೆಸರಿಸಿದೆ. ಇದನ್ನು ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು ಸರಕಾರಕ್ಕೆ ಇರಿಸು ಮುರುಸಾಗಿದೆ. ಆದರೆ ಈಗಾಗಲೇ ಆಳುವ ಪಕ್ಷ ಮತ್ತು ಸರಕಾರಗಳ ನೇರ ದಾಳಿ ಅಥವಾ ದಾಳಿಗಳಿಗೆ ಪರೋಕ್ಷ ಕುಮ್ಮಕ್ಕುಗಳನ್ನು ಗಮನಿಸಿದರೆ, ಇದು ಆಶ್ಚರ್ಯಕರವೇನಲ್ಲ ಮತ್ತು ಸರಿಯಾಗಿಯೇ ಇದೆ. ಮಾತ್ರವಲ್ಲ, 2006ರಲ್ಲಿ 106 ಇದ್ದ ಈ ರ‍್ಯಾಂಕ್ ಸತತವಾಗಿ ಕುಸಿಯುತ್ತಾ ಬಂದಿತ್ತು. ವಿಶೇಷವಾಗಿ ಪತ್ರಕರ್ತರ ಮೇಲೆ ಸರಕಾರದ ದಮನ, ದೈಹಿಕ ದಾಳಿ, ಬೇಕಾಬಿಟ್ಟಿ ಇಂಟರ್ನೆಟ್ ಕಡಿತ ಮತ್ತು ಅಗಾಧವಾಗಿ ಹೆಚ್ಚಿದ ಏಕಸ್ವಾಮ್ಯ-ಇವುಗಳಿಂದಾಗಿ ಭಾರತದ ‘ಮಾಧ್ಯಮ ಸ್ವಾತಂತ್ರ್ಯ’ ರ‍್ಯಾಂಕ್ 142ಕ್ಕೆ ಕುಸಿದಿದೆ. ಇದು ಜಾಗತಿಕವಾಗಿ ವ್ಯಾಪಕವಾಗಿ ವರದಿಯಾಗಿ ಸುದ್ದಿಯಾಯಿತು. ಪಾಕಿಸ್ತಾನ, ಬ್ರೆಜಿಲ್, ರಶ್ಯದಂತಹ ದೇಶಗಳಿಗಿಂತ ‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ’ ಭಾರತ ಕೆಲವೇ ರ‍್ಯಾಂಕುಗಳಿಂದ ಮುಂದಿರುವುದು ಸರಕಾರಕ್ಕೆ ವಿಶೇಷ ಮುಜುಗರ ತಂದಿದೆ. ವಾಸ್ತವ ಅಥವಾ ದೇಶೀಯ ಅಭಿಪ್ರಾಯಕ್ಕಿಂತ, ಅಂತರಾಷ್ಟ್ರೀಯ ಪ್ರತಿಷ್ಠೆ ಕುರಿತು ಹೆಚ್ಚು ಸಂವೇದನಾಶೀಲವಾಗಿರುವ ಸರಕಾರ ಕೂಡಲೇ ಇದಕ್ಕೆ ಒಂದು ಸಮಿತಿ ನೇಮಿಸಿತು. 15 ಸದಸ್ಯರ ಈ ಸಮಿತಿಯಲ್ಲಿ ಕೇವಲ 3 ಪತ್ರಕರ್ತರಿದ್ದರು. ಈ ಸಮಿತಿ ದೇಶದಲ್ಲಿ ‘ಮಾಧ್ಯಮ ಸ್ವಾತಂತ್ರ್ಯದ ಪರಿಸ್ಥಿತಿಯನ್ನು ಪರಿಶೀಲಿಸಿ’ ಒಂದು ವರದಿ ಸಲ್ಲಿಸಿ ಈ ರ‍್ಯಾಂಕಿಂಗ್ ‘ಪಾಶ್ಚಿಮಾತ್ಯ ಪೂರ್ವಗ್ರಹ’ದ ಫಲ ಎಂದಿದೆ. ಈ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಪಿ ಸಾಯಿನಾಥ್ ಈ ವರದಿಗೆ ಭಿನ್ನಮತ ಟಿಪ್ಪಣಿ ಸಲ್ಲಿಸಿದ್ದು ಅದನ್ನು ಪ್ರಶ್ನಿಸಿದ್ದಾರೆ. ಭಾರತದ ‘ಮಾಧ್ಯಮ ಸ್ವಾತಂತ್ರ್ಯ’ದ ಪರಿಸ್ಥಿತಿ ವಾಸ್ತವವಾಗಿ ಆರ್.ಎಸ್.ಎಫ್. ಹೇಳಿದ್ದಕ್ಕಿಂತಲೂ ಕೆಟ್ಟದಿದೆ ಎಂದು ಮಾಹಿತಿಗಳ ಮೂಲಕ ವಾದಿಸಿದ್ದಾರೆ.