– ವಸಂತರಾಜ ಎನ್.ಕೆ
ವೆನೆಜುವೇಲಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಮದುರೊ ಗೆದ್ದಿದ್ದಾರೆ. ಆದರೆ ಚುನಾವಣಾ ಕಮಿಶನ್ ಘೊಷಣೆಯನ್ನು ಒಪ್ಪದೆ, ‘ಚುನಾವಣಾ ಅಕ್ರಮ ನಡೆದಿವೆ’ ಯೆಂದು ವಿಪಕ್ಷಗಳು ಮತ್ತು ಯು.ಎಸ್ ಸರಕಾರ ತಕರಾರು ತೆಗೆದಿವೆ. ಸುಪ್ರೀಂ ಕೋರ್ಟು ಆಡಿಟ್ ನ ಮದುರೊ ಪ್ರಸ್ತಾವ ಒಪ್ಪದೆ, ವಿಪಕ್ಷದ ಅಭ್ಯರ್ಥಿ ತಾನು ಗೆದ್ದಿರುವುದಾಗಿ ಘೋಷಿಸಿದ್ದು ಯು.ಎಸ್ ಅದಕ್ಕೆ ಮಾನ್ಯತೆ ನೀಡಿದೆ. ಆದರೆ ವೆನೆಜುವೇಲಾದ ಕಳೆದ ಕಾಲು ಶತಮಾನದ ‘ಬೊಲಿವಾರಿಯನ್ ಕ್ರಾಂತಿ’ ತಂದ ದುಡಿಯುವ ಜನರ ಪ್ಸೈದ್ಧಾಂತಿಕ-ರಾಜಕೀಯ ಪ್ರಜ್ಞೆ, ಸೋಶಲಿಸ್ಟ್ ಪಕ್ಷದ ವ್ಯಾಪಕ ಸಾಮೂಹಿಕ ನೆಲೆ – ಇವು ವಿಪಕ್ಷಗಳ ಮತ್ತು ಯು.ಎಸ್ ನ “ಸರಕಾರ ಬದಲಾವಣೆ” ಹುನ್ನಾರದ ಯಶಸ್ಸಿನ ಸಾಧ್ಯತೆಯನ್ನು ಕುಗ್ಗಿಸಿದೆ.
ಜೊತೆಗೆ ಇರಾನ್, ರಶ್ಯಾದ ಮೇಲೆ ದಿಗ್ಬಂಧನಗಳ ಮೂಲಕ ತಾನೇ ಸೃಷ್ಟಿಸಿದ ಯುರೋಪಿನ ತೀವ್ರ ತೈಲ ಕೊರತೆ ನೀಗಿಸಲು ವೆನೆಜುವೇಲಾದ ತೈಲ ರಫ್ತು ಯು.ಎಸ್ ಗೆ ಅನಿವಾರ್ಯವಾಗಿದೆ. ಅದಕ್ಕಾಗಿ ಪರಸ್ಪರ ಒಪ್ಪಿತ ಸರಕಾರದ ರಚನೆ ಮತ್ತು ದಿಗ್ಬಂಧನ ಹಂತಹಂತವಾಗಿ ತೆಗೆಯುವ ಅನಿವಾರ್ಯತೆ, ಬೊಲಿವಾರಿಯನ್ ಕ್ರಾಂತಿಗೆ ಕಡಿವಾಣ, ಉಗ್ರ ಬಲಪಂಥೀಯ ಪಕ್ಷಗಳನ್ನು ಬಲ ಪಡಿಸುವುದು – ಈ ಪರಸ್ಪರ ವಿರೋಧಾತ್ಮಕ ಗುರಿಗಳ ನಡುವೆ ಸಮತೋಲನೆಯಲ್ಲಿ ಯಾವ ರೀತಿಯ ಹೊಂದಾಣಿಕೆ ಯು.ಎಸ್ ಮಾಡುತ್ತದೆ ಎಂಬುದರ ಮೇಲೆ ವೆನೆಜುವೇಲಾದ ಮುಂದಿನ ಬೆಳವಣಿಗೆಗಳು ಅವಲಂಬಿಸಿದೆ.
ವೆನೆಜುವೆಲಾ ಅಧ್ಯಕ್ಷೀಯ ಚುನಾವಣೆಗಳು ಜುಲೈ 28ರಂದು ನಡೆದಿದ್ದು, ನಿಕೊಲಸ್ ಮದುರೊ ಮೂರನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ, ಮದುರೊ ಶೇ.51.2 ಮತ್ತು ವಿರೋಧಿ ಅಭ್ಯರ್ಥಿ ಎಡ್ಮಂಡ್ ಗೊನ್ಸಾಲೆಸ್ ಶೇ. 44.2 ಮತ ಗಳಿಸಿದ್ದಾರೆ ಎಂದು ಅಲ್ಲಿನ ಚುನಾವಣಾ ಕಮಿಶನ್ ಘೋಷಿಸಿದೆ. ಆದರೆ ವಿರೋಧಿ ಅಭ್ಯರ್ಥಿ ಮತ್ತು ಅವರನ್ನು ಬೆಂಬಲಿಸುವ ಬಲಪಂಥೀಯ ಮತ್ತು ಉಗ್ರ ಬಲಪಂಥೀಯ ವಿರೋಧ ಪಕ್ಷಗಳು ಚುನಾವಣೆಗಳಲ್ಲಿ ಮತ ಎಣಿಕೆಯಲ್ಲಿ ಅಕ್ರಮಗಳಾಗಿವೆ ಎಂದು ಆಪಾದಿಸಿ ಫಲಿತಾಂಶ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ ಪಿಎಸ್ಐ ಅನುಮಾನಸ್ಪದ ಸಾವು: ಕಾಂಗ್ರೆಸ್ ಶಾಸಕನ ವಿರುದ್ಧ ದೂರು
ಈ ಘೋಷಣೆಯ ವಿರುದ್ಧ ವಿರೋಧ ಪಕ್ಷಗಳು ಹಿಂಸಾತ್ಮಕ ಪ್ರದರ್ಶನಗಳನ್ನು ನಡೆಸಿವೆ. ಮದುರೊ ಅವರ ಸೋಶಲಿಸ್ಟ್ ಪಕ್ಷ ಮತ್ತು ಅವರನ್ನು ಬೆಂಬಲಿಸುವ ಎಡ-ಪ್ರಗತಿಪರ ಪಕ್ಷಗಳು ಫಲಿತಾಂಶಗಳನ್ನು ಸ್ವಾಗತಿಸಿ ಮದುರೊ ರನ್ನು ಬೆಂಬಲಿಸುವ ಪ್ರತಿ-ಪ್ರದರ್ಶನಗಳನ್ನು ನಡೆಸಿವೆ ವಿಪಕ್ಷ ಬೆಂಬಲಿಗರು ಮತ್ತು ಮದುರೊ ಬೆಂಬಲಿಗರು ಹಾಗೂ ವಿಪಕ್ಷ ಬೆಂಬಲಿಗರು ಮತ್ತು ಪೋಲಿಸ್ ಪಡೆಗಳ ನಡುವೆ ತೀವ್ರ ಘರ್ಷಣೆಗಳು ನಡೆದಿವೆ. ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಪ್ರಕಟಿಸಿವೆ.
ವಿಪಕ್ಷ, ಯುಎಸ್ ನಿಂದ ಅಕ್ರಮದ ತಕರಾರು
ಯು.ಎಸ್. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮದುರೊ ಅವರ ವಿಜಯ ಒಪ್ಪಿಕೊಂಡು ‘ಟ್ವಿಟ್’ (ಎಕ್ಸ್ ) ಸಂದೇಶ ಕಳಿಸಿದ್ದರು. ಆದರೆ ಆ ನಂತರ ಯು.ಎಸ್ ನ ವಿದೇಶಾಂಗ ಕಾರ್ಯದರ್ಶಿ ಮತಎಣಿಕೆಯಲ್ಲಿ ಅಕ್ರಮಗಳಾಗಿವೆ ಎಂದು ಹೇಳಿಕೆಯಿತ್ತರು. ಆ ಸಂದೇಶದಲ್ಲಿ “ವೆನೆಜುವೆಲಾದ ಜನರ ರಾಜಕೀಯ ನಿರ್ಣಯವನ್ನು ಮನ್ನಿಸಬೇಕು” ಎಂದು ಹೇಳಿದ್ದರು. ಯು.ಎಸ್ ಮತ್ತು ಕೆಲವು ಯುರೋಪಿನ. ದ.ಅಮೆರಿಕದ ದೇಶಗಳ ವಿದೇಶಿ ವೀಕ್ಷಕರು, ನಾಯಕರು ‘ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಲಿಲ್ಲ’ ಎಂದಿದ್ದಾರೆ. ಆ ನಂತರ ಯು.ಎಸ್ ವಿದೇಶಾಂಗ ಕಾರ್ಯದರ್ಶಿ ವಿರೋಧ ಪಕ್ಷಗಳ ಅಭ್ಯರ್ಥಿ ಗೆದ್ದಿದ್ದಾರೆ ಮತ್ತು ಅವರನ್ನು ಅಧ್ಯಕ್ಷರಾಗಿ ಮನ್ನಣೆ ಕೊಡುವುದಾಗಿ ಹೇಳಿದ್ದಾರೆ.
ಈ ನಡುವೆ ವಿಪಕ್ಷ ಬೆಂಬಲಿಗರು ಮತ್ತು ಮದುರೊ ಬೆಂಬಲಿಗರು ಹಾಗೂ ವಿಪಕ್ಷ ಬೆಂಬಲಿಗರು ಮತ್ತು ಪೋಲಿಸ್ ಪಡೆಗಳ ನಡುವೆ ಬೀದಿ ಕಾಳಗ ಮುಂದುವರೆದಿವೆ. ಹಿಂಸಾಚಾರದಲ್ಲಿ ತೊಡಗಿರುವ ವಿಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ರಾಜಕೀಯ ಬಿಕ್ಕಟ್ಟು, ಅನಿಶ್ಚಿತತೆ ಉಂಟಾಗಿದೆ. ವೆನೆಜುವೇಲಾ ದ ಆಂತರಿಕ ವಿಷಯಗಳಲ್ಲಿ ಯು.ಎಸ್ ರಾಜಕೀಯ ಮಿಲಿಟರಿ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಆತಂಕ ಹಬ್ಬಿದೆ.
ಯು.ಎಸ್, ಯುರೋ ಕೂಟದ ಆಳುವ ವರ್ಗಗಳ ಮೂಗಿನ ನೇರಕ್ಕಿಲ್ಲದ, ಅವರಿಗೆ ಸವಾಲು ಹಾಕುವ ಮತ್ತು ತಮ್ಮ ರಾಷ್ಟ್ರೀಯ ಸಾರ್ವಭೌಮತ್ವವನ್ನು ದೃಢವಾಗಿ ಪ್ರತಿಪಾದಿಸುವ ಯಾವುದೇ ದೇಶದ ಸರಕಾರವನ್ನು ಉರುಳಿಸಿ, ತಮ್ಮ ಕೈಗೊಂಬೆ ಸರಕಾರವನ್ನು ಸ್ಥಾಪಿಸುವುದು ತಮ್ಮ ಮೂಲಭೂತ ಹಕ್ಕು ಎಂದು ಭಾವಿಸಿದ್ದಾರೆ. 1950ರ ದಶಕದಲ್ಲಿ ಇರಾನ್, ಕಾಂಗೋದಿಂದ ಹಿಡಿದು, 90ರ ದಶಕದ ಯುಗೊಸ್ಲಾವಿಯ, ಇರಾಕ್, ಲಿಬ್ಯಾ ಮತ್ತು ಕಳೆದ ದಶಕದ ಉಕ್ರೇನ್ ವರೆಗೆ ಇಂತಹ ರಾಜಕೀಯ-ಮಿಲಿಟರಿ ಪ್ರವೇಶಗಳು ನಡೆದಿವೆ. ದಕ್ಷಿಣ ಅಮೆರಿಕಾದ ದೇಶಗಳಂತೂ ತನ್ನ ‘ಹಿತ್ತಲು’ ಎಂದು ಭಾವಿಸುವ ಯು.ಎಸ್ ಪ್ರಭುತ್ವ 1950 ರ ದಶಕದಲ್ಲಿ ಗ್ವಾಟೆಮಾಲಾ, ಕ್ಯೂಬಾ ಹಿಡಿದು, 60-70 ರ ದಶಕದಲ್ಲಿ ಬ್ರೆಜಿಲ್, ಚಿಲಿ, ಚುನಾವಣೆಗಳಲ್ಲಿ ತನಗೆ ವಿರೋಧಿಯಾದ ಪ್ರಜಾಸತ್ತಾತ್ಮಕ ಪ್ರಗತಿಪರ ಸರಕಾರ ಬಂದಾಗ ಅವನ್ನು ಉರುಳಿಸಿ ಮಿಲಿಟರಿ ಸರ್ವಾಧಿಕಾರ ಸ್ಥಾಪಿಸಿದೆ.
ಚುನಾವಣೆಗಳಲ್ಲಿ ಬಲಪಂಥೀಯ, ಭಯೋತ್ಪಾದಕ, ನಿರಂಕುಶವಾದಿ, ಫ್ಯಾಸಿಸ್ಟ್ ಶಕ್ತಿಗಳನ್ನು ಬೆಂಬಲಿಸಿದೆ. ಇಂತಹ ಶಕ್ತಿಗಳಿಗೆ ಹಣ, ಸಿಬ್ಬಂದಿ, ತರಬೇತಿ, ಮಾಧ್ಯಮ ಪ್ರಚಾರದ ಸಂಪನ್ಮೂಲಗಳ ಹೊಳೆಯೇ ಹರಿಸುತ್ತದೆ. ಅವುಗಳ ಪರವಾಗಿ ಹುಸಿ ಅಭಿಪ್ರಾಯ ಸಂಗ್ರಹ ಚುನಾವಣೆಯ ಪ್ರಕ್ರಿಯೆಯನ್ನೇ ಈ ಶಕ್ತಿಗಳ ಪರವಾಗಿಸಲು ಪ್ರಯತ್ನಿಸುತ್ತದೆ. ಆ ಮೇಲೂ ಸೋತರೆ ‘ಚುನಾವಣಾ ಅಕ್ರಮಗಳಾಗಿವೆ’ ಎಂದು ಅಂತರರಾಷ್ಟ್ರೀಯವಾಗಿ ಹುಯಿಲೆಬ್ಬಿಸಲಾಗುತ್ತದೆ. “ಸರಕಾರದ ಬದಲಾವಣೆ”ಯ ಅಗತ್ಯವಿದ್ದಾಗ ಚುನಾವಣೆಗಳ ಸುತ್ತ ಮಾತ್ರವಲ್ಲ ಯಾವುದೇ ಹಂತದಲ್ಲಿ “ಪ್ರಜಾಪ್ರಭುತ್ವದ ರಕ್ಷಣೆ”, “ಮಾನವ ಹಕ್ಕುಗಳ ದಮನ”ದ ಹುಯಿಲು ಸಹ ಎಬ್ಬಿಸಲಾಗುತ್ತದೆ.
ಸೋಶಲಿಸ್ಟ್ ಪಕ್ಷದ ವ್ಯಾಪಕ ಸಾಮೂಹಿಕ ನೆಲೆ
ವೆನೆಜುವೇಲಾ ದಲ್ಲೂ ಇದೇ ನಡೆಯುತ್ತಿದ್ದು 90ರ ದಶಕದ ಕೊನೆಯಲ್ಲಿ ಹ್ಯೂಗೋ ಚವೇಝ್ ಅವರ 1999ರಲ್ಲಿ ಎಡ ಪ್ರಗತಿಪರ ಸರಕಾರಗಳು ಅಧಿಕಾರಕ್ಕೆ ಬರುವ ಆಗಿನ “ಎಳೆಗೆಂಪು ಅಲೆ”ಯ ಹರಿಕಾರನಾಗಿ ಅಧ್ಯಕ್ಷರಾಗಿ ಚುನಾಯಿತವಾದಂದಿನಿಂದ ಅವರು ಮರು-ಆಯ್ಕೆಯಾಗುತ್ತಾ 13 ವರ್ಷ ಅಧಿಕಾರದಲ್ಲಿ ಮುಂದುವರೆದರು. ಮಾತ್ರವಲ್ಲ ಅವರು “ಬೊಲಿವಾರಿಯನ್ ಕ್ರಾಂತಿ” ಎಂದು ಕರೆಯುವ ತೀವ್ರತರದ ಸಾಮಾಜಿಕ ಸುಧಾರಣೆ, ಆರ್ಥಿಕ-ರಾಜಕೀಯ ಬದಲಾವಣೆಗಳನ್ನು ತಂದರು. ವೆನೆಜುವೇಲಾದ ಬಹುಸಂಖ್ಯಾತ ದುಡಿಯುವ ಜನರಲ್ಲಿ ‘ಚವಿಸ್ಮೊ” (ಅಥವಾ ಚವೇಝ್ ವಾದ) ಬೇರುವೂರಿದೆ. ಇದರ ಜತೆಗೆ ಜಾರಿಗೆ ತಂದ ‘ಬೊಲಿವಾರಿಯನ್ ಸಂವಿಧಾನ” ಮತ್ತು ‘21ನೇ ಶತಮಾನದ ಸಮಾಜವಾದ’ದ ಪರಿಕಲ್ಪನೆ ದುಡಿಯುವ ಜನರಲ್ಲಿ ಉತ್ಸಾಹ ತುಂಬಿದೆ.
ಮಾತ್ರವಲ್ಲದೆ ಅವರು ಹಲವು ಎಡ-ಪ್ರಗತಿಪರ ಚಳುವಳಿ ಪಕ್ಷಗಳ ಒಗ್ಗೂಡಿಸುವಿಕೆಯಿಂದ ಸ್ಥಾಪಿಸಿದ ಸೋಶಲಿಸ್ಟ್ ಪಕ್ಷದ ಮತ್ತು ಸುಮಾರು 14 ಲಕ್ಷ ಸದಸ್ಯತ್ವವಿರುವ ಅದರ (ಸಮುದಾಯ, ಯುವಜನ ಸೇರಿದಂತೆ) ಹಲವು ಸಾಮೂಹಿಕ ಸಂಘಟನೆಗಳ ಅಗಾಧ ಜಾಲ ಭಾರೀ ಸಾಮೂಹಿಕ ನೆಲೆ ಒದಗಿಸಿದೆ. ಈ ಸೈದ್ಧಾಂತಿಕ-ಸಂಘಟನಾ ಬಲವಲ್ಲದೆ, ಈ ಅವಧಿಯಲ್ಲಿ ಜಾರಿಗೆ ತಂದ ಜನಕಲ್ಯಾಣ ಕಾರ್ಯಕ್ರಮಗಳು, ಜನರನ್ನು ಬದಲಾವಣೆಗೆ ಅಣಿನೆರೆಸುವ ಹಲವು ನವೀನ ಪ್ರಯೋಗಗಳು ಸೋಶಲಿಸ್ಟ್ ಪಕ್ಷವನ್ನು ಅಜೇಯ ಶಕ್ತಿಯಾಗಿಸಿದೆ. ಹೀಗಾಗಿ ಈ ಅವಧಿಯಲ್ಲಿ ನಡೆದ ಮಿಲಿಟರಿ ಕ್ಷಿಪ್ರದಂಗೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಯಿತು. ಯು.ಎಸ್ ಮತ್ತು ವೆನೆಜುವೇಲಾದ ಆಳುವ ವರ್ಗಗಳ ಬೆಂಬಲಿತ ಬಲಪಂಥೀಯ ಪಕ್ಷಗಳ ಮೂಲಕ ನಡೆಸಲಾಗುತ್ತಿದ್ದ ಜನಮರುಳು ಆಟಗಳೂ ನಡೆಯದಾಗಿವೆ. ಪ್ರತಿ ಚುನಾವಣೆಯಲ್ಲೂ ಸೋಶಲಿಸ್ಟ್ ಪಕ್ಷ ಗೆಲುವು ಸಾಧಿಸುತ್ತಾ ಬಂದಿದೆ.
2013ರಲ್ಲಿ ಚವೇಝ್ ಸಾವಿನ ನಂತರ ಅವರ ಆಕರ್ಷಕ ಮತ್ತು ಪರಿಣಾಮಕಾರಿ ನಾಯಕತ್ವದ ಕೊರತೆ ಸೋಶಲಿಸ್ಟ್ ಪಕ್ಷವನ್ನು ಕಾಡಿದೆ. ಇದಲ್ಲದೆ, ಅವರ ನಂತರ ನಾಯಕತ್ವ ವಹಿಸಿದ ನಿಕೊಲಸ್ ಮದುರೊ – ದೇಶದ ಶೇ.90 ಆದಾಯ ಒದಗಿಸುವ ಆರ್ಥಿಕದ ಬೆನ್ನೆಲುಬಾಗಿದ್ದ ತೈಲ ಬೆಲೆಗಳ ಕುಸಿತ; ಇದೇ ಸಮಯದಲ್ಲಿ ಯು.ಎಸ್ ದೇಶದ ಮೇಲೆ ಹೊರಿಸಿದ ಆರ್ಥಿಕ ದಿಗ್ಬಂಧನಗಳು; ಇದರ ಪರಿಣಾಮವಾಗಿ ಜೀವನವಶ್ಯಕ ವಸ್ತುಗಳ ಕೊರತೆ, ಜೀವನ ನಿರ್ವಹಣಾ ವೆಚ್ಚ ಏರಿಕೆ: – ಇವೆಲ್ಲ ಸವಾಲುಗಳನ್ನು ಎದುರಿಸಬೇಕಾಯಿತು.
ಆದರೂ ಸೋಶಲಿಸ್ಟ್ ಪಕ್ಷದ ಸೈಧ್ಧಾಂತಿಕ-ಸಂಘಟನಾ ಶಕ್ತಿ, ಅಗಾಧ ಸಾಮೂಹಿಕ ನೆಲೆ ಮತ್ತು ಜನತೆಯ ಉನ್ನತ ರಾಜಕೀಯ ಪ್ರಜ್ಞೆ – ಇವೆಲ್ಲವುಗಳಿಂದ ಜನತೆಯ ಹಲವು ಸಂಕಟಗಳ ನಡುವೆಯೂ, ಯು.ಎಸ್ ಮತ್ತು ವೆನೆಜುವೇಲಾದ ಆಳುವ ವರ್ಗಗಳ ಬೆಂಬಲಿತ ಬಲಪಂಥೀಯ ಪಕ್ಷಗಳ ಬಲ ಕುಸಿತವಾಗಿದೆ. ಯು.ಎಸ್ ಈ ಪಕ್ಷಗಳನ್ನು ನಾಯಕರನ್ನು ಗಟ್ಟಿಗೊಳಿಸಲು, ಹೊಸ ಪಕ್ಷಗಳನ್ನು ಹುಟ್ಟಿಸಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿವೆ. ಇವು ಸರಕಾರದ ವಿರುದ್ಧ ಭ್ರಷ್ಟ, ಕಾನೂನು ಬಾಹಿರ ಮತ್ತು ಹಿಂಸಾತ್ಮಕ ಕ್ರಮಗಳನ್ನು ವಹಿಸಿದಾಗ ಸರಕಾರ ಅವುಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಹಲವು ನಾಯಕರು ದೇಶಾಂತರ ಹೋಗಬೇಕಾಗಿ ಬಂದಿದೆ. ಪ್ರತಿ ಚುನಾವಣೆಯಲ್ಲೂ ಹೊಸ ಪಕ್ಷಗಳು, ನಾಯಕರನ್ನು ಹುಡುಕಬೇಕಾಗಿ ಬಂದಿದೆ.
ಆಧರೂ ಅವುಗಳ ಆಟಗಳು ನಡೆದಿಲ್ಲ. ಹಾಗಾಗಿ ಉಗ್ರ ಬಲಪಂಥಿಯ ಪಕ್ಷಗಳು ಸರಕಾರದ ಭ್ರಷ್ಟಾಚಾರ, ಚುನಾವಣಾ ಅಕ್ರಮಗಳ ಹುಸಿ ಆಪಾದನೆಯೊಂದಿಗೆ ಹಿಂಸಾಚಾರಕ್ಕೆ ಇಳಿದಿವೆ. ಜಗತ್ತಿನ ಎಲ್ಲೆಡೆ ಉಗ್ರ ಬಲಪಂಥೀಯ ಫ್ಯಾಸಿಸ್ಟ್ ಪಕ್ಷಗಳು (2020ರಲ್ಲಿ ಟ್ರಂಪ್ ಪ್ರಯತ್ನಿಸಿದಂತೆ) ಮಾಡುವಂತೆ “ಚುನಾವಣೆ ಕದಿಯುವ” ಪ್ರಯತ್ನದಲ್ಲಿ ತೊಡಗಿವೆ. ವಿದೇಶೀ (ಯು.ಎಸ್), ಅಂತರರಾಷ್ಟ್ರೀಯ ರಾಜಕೀಯ-ಮಿಲಿಟರಿ ಮಧ್ಯಪ್ರವೇಶಕ್ಕೆ ಕರೆ ಕೊಡುತ್ತಿವೆ. ರಾಜಕೀಯ ನೆಲೆಯಿಲ್ಲದ ಇವುಗಳಿಗೆ ಚುನಾವಣೆ ಗೆಲ್ಲುವ ಶಕ್ತಿಯಿರಲಿಲ್ಲ. ಈ ವಾಸ್ತವ ಗೊತ್ತಿರುವವರೆಗೆ “ಚುನಾವಣಾ ಅಕ್ರಮ”ಗಳ ಬಗ್ಗೆ ನಡೆದಿರುವ ಅಂತರರಾಷ್ಟ್ರೀಯ ಪ್ರಚಾರದ ಸತ್ಯಾಸತ್ಯತೆ ತಿಳಿಯುತ್ತದೆ.
ಯುರೋಪಿಗೆ ವೆನೆಜುವೇಲಾ ತೈಲ ಪೂರೈಕೆಯ ಅಗತ್ಯತೆ
ತಾನೇ ಬೆಳೆಸಿದ ಬೆಂಬಲಿಸುವ ವೆನೆಜುವೆಲಾದ ಬಲಪಂಥಿಯ ಉಗ್ರ-ಬಲಪಂಥೀಯ ಪಕ್ಷಗಳ ವೈಫಲ್ಯದಿಂದ ಹುಟ್ಟಿದ ಹತಾಶೆಯನ್ನು ನಿರ್ವಹಿಸುವುದು ಯು.ಎಸ್ ಗೆ ಕಷ್ಟವಾಗಿದೆ. ಈ ಪರಿಸ್ಥಿತಿ ಬಳಸಿ ಯು.ಎಸ್ “ಸರಕಾರ ಬದಲಾವಣೆ” ಗೆ ಮಿಲಟರಿ ಮಧ್ಯಪ್ರವೇಶದ ಮೂಲಕ ಪ್ರಯತ್ನಿಸಬಹುದಿತ್ತು. ವೆನೆಜುವೆಲಾದ ಆರ್ಥಿಕವನ್ನು ಹಾಳುಗೆಡವಲು ಪ್ರಯತ್ನಿಸ ಬಹುದಿತ್ತು. ಆದರೆ ತಾನೇ ಇರಾನ್ ಮತ್ತು ರಶ್ಯದ ಮೇಲೆ ಹೇರಿದ ದಿಗ್ಬಂಧನದಿಂದ ಉಂಟಾದ ಯುರೋಪಿನ ತೈಲ-ಇಂಧನದ ತೀವ್ರ ಕೊರತೆ ನೀಗಲು ಅದಕ್ಕೆ ವೆನೆಜುವೇಲಾದ ತೈಲ ಬೇಕಾಗಿದೆ. ಅದಕ್ಕೆ ಅಲ್ಲಿ ಕೈಗೊಂಬೆಯಲ್ಲದಿದ್ದರೂ ಸುಭದ್ರ ಸರಕಾರ ಬೇಕಾಗಿದೆ. ಹಿಂದೆ ಮಾಡಿದಂತೆ ಅದರ ಆರ್ಥಿಕ ಹಾಳುಗಡೆಹುವ ಆಯ್ಕೆ ಅದಕ್ಕಿಲ್ಲ. ಹಾಗಾಗಿ ಅದು “ಸರಕಾರ ಬದಲಾವಣೆ” ಗೆ ಪ್ರಯತ್ನ ಮುಂದುವರೆಸುತ್ತಲೇ, ಆಳುವ ಪಕ್ಷದ ಜತೆ ಸಹಕಾರ ನೀಡುವ, ವ್ಯವಸ್ಥೆಯೊಳಗೆ ಕೆಲಸ ಮಾಡುವ ಒಪ್ಪಂದಕ್ಕೆ ಬರುವಂತೆ ಬಲಪಂಥೀಯ ಪಕ್ಷಗಳ ಮೇಲೆ 2022ರಿಂದ ಒತ್ತಡ ಹೇರುವ ಪ್ರಯತ್ನಿಸುತ್ತಿವೆ.
ಜೂನ್ 2022ರಲ್ಲಿ ಅದು ಇಟಲಿ ಮತ್ತು ಸ್ಪೈನಿನ ಎರಡು ಕಂಪನಿಗಳಿಗೆ ಯುರೋಪಿಗೆ ತೈಲ ಸಾಗಾಣಿಕೆಗೆ ನೀಡುವ ಮಟ್ಟಿಗೆ ದಿಗ್ಬಂಧನ ಸಡಿಲಿಸಿತು. ಈ ಅಬಾಧಿತ ತೈಲ ಪೂರೈಕೆ, ಬೊಲಿವಾರಿಯನ್ ಸರಕಾರವನ್ನು ದುರ್ಬಲಗೊಳಿಸುವುದು, ಉಗ್ರ-ಬಲಪಂಥೀಯ ಪಕ್ಷಗಳನ್ನು ಬಲ ಪಡಿಸುವುದು – ಈ ಪರಸ್ಪರ ವಿರೋಧಾತ್ಮಕ ಕಾರ್ಯಗಳ ನಡುವೆ ಸಮತೋಲನೆಗೆ ಹೆಣಗುತ್ತಿದೆ. ಈ ಹೆಣಗಾಟದ ಫಲವಾಗಿ ಅಕ್ಟೋಬರ್ 2023ರಲ್ಲಿ “ಕ್ರಮಬದ್ಧ ಚುನಾವಣೆ” ಯ ಆಧಾರದ ಮೇಲೆ ಚುನಾವಣೆಯ ನಂತರ ಹಂತ ಹಂತವಾಗಿ ಆರ್ಥಿಕ ದಿಗ್ಬಂಧನ ತೆಗೆಯುವ ಬಾರ್ನಡೋಸ್ ಒಪ್ಪಂದವಾಯಿತು. ಮದುರೊ ಗೆದ್ದರೆ ಅದನ್ನು ಒಪ್ಪಿಕೊಳ್ಳುವುದನ್ನು ಈ ಒಪ್ಪಂದ ಒಳಗೊಂಡಿತ್ತು. ಆದರೆ ಉಗ್ರ-ಬಲಪಂಥೀಯ ಕೂಟ ಇದಕ್ಕೆ ಒಪ್ಪದೆ ಹಿಂಸಾಚಾರಕ್ಕೆ ಇಳಿದಿವೆ. ಮದುರೊ ವಿಪಕ್ಷಗಳನ್ನು ಮತ್ತು ಯು.ಎಸ್ ಸರಕಾರ ಒಲಿಸಲು ಸುಪ್ರೀಂ ಕೋರ್ಟಿನಿಂದ ಚುನಾವಣಾ ಮತೆಣಿಕೆಯ ಅಡಿಟ್ ಮಾಡಿಸುವ ಸಲಹೆ ಮಾಡಿದ್ದಾರೆ.
ಯು.ಎಸ್ ತನ್ನ ಹಿತಾಸಕ್ತಿಗಳನ್ನು ಬಿಟ್ಟು ಎಷ್ಟರ ಮಟ್ಟಿಗೆ ಈ ಪಕ್ಷಗಳನ್ನು ಬೆಂಬಲಿಸುವುದು ಎಂಭುದರ ಮೇಲೆ ಮುಂದಿನ ಬೆಳವಣಿಗೆಗಗಳು ಅವಲಂಬಿಸಿವೆ. ಮಿಲಿಟರಿ ಮತ್ತು ಜನತೆ ಎರಡರಲ್ಲೂ ವ್ಯಾಪಕ ನೆಲೆಯಿರುವ ಮದುರೊ ಅವರ ಸೋಶಲಿಸ್ಟ್ ಸರಕಾರವನ್ನು ಉರುಳಿಸಿವುದು, ಇನ್ನೊಂದು ಸುಭದ್ರ ಸರಕಾರವನ್ನು ನಡೆಸುವುದು ಸುಲಭ ಸಾಧ್ಯವಲ್ಲ.
ಇದನ್ನೂ ನೋಡಿ: ರಾಜ್ಯಪಾಲರು ಬಿಜೆಪಿ ಕೈಗೊಂಬೆ, ಅವರ ನೋಟಿಸ್ಗೆ ಹೆದರಲ್ಲ – ಸಿಎಂ ಸಿದ್ದರಾಮಯ್ಯJanashakthi Media