ಅಣ್ಣಾಮಲೈ ವಿರುದ್ಧದ ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಕಾರ

ಚೆನ್ನೈ: ದ್ವೇಷ ಭಾಷಣ ಪ್ರಕರಣದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಅಣ್ಣಾಮಲೈ ಹೇಳಿಕೆಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು, “ಈ ಪ್ರಕರಣವು ಅಧಿಕಾರದ ಸ್ಥಾನದಲ್ಲಿರುವವರ ಮಾತುಗಳು ಮತ್ತು ಕಾರ್ಯಗಳು ವ್ಯಾಪಕ ವ್ಯಾಪ್ತಿಯನ್ನು ಮತ್ತು ಸಾರ್ವಜನಿಕರ ಮೇಲೆ ಹೆಚ್ಚಿನ ಪ್ರಭಾವವನ್ನು ಹೊಂದಿವೆ ಎಂಬುದನ್ನು ನೆನಪಿಸುತ್ತದೆ” ಎಂದು ಆದೇಶ ನೀಡುವಾಗ ಹೇಳಿದ್ದಾರೆ.

2022 ರಂದು ‘ಪೇಸ್ ತಮಿಳಾ ಪೇಸ್’ ಚಾನೆಲ್‌ಗೆ ನೀಡಿದ್ದ 44 ನಿಮಿಷಗಳ ಸುದೀರ್ಘ ಸಂದರ್ಶನದಲ್ಲಿ, ಪಟಾಕಿ ಸಿಡಿಸುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೊದಲ ಅರ್ಜಿಯನ್ನು ಕ್ರಿಶ್ಚಿಯನ್ ಮಿಷನರಿ ಎನ್‌ಜಿಒ ಸಲ್ಲಿಸಿದೆ ಎಂದು ಅಣ್ಣಾಮಲೈ ಹೇಳಿದ್ದರು. ಅವರ ಈ ಹೇಳಿಕೆಯ ವೀಡಿಯೋ ತುಣುಕನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ದ್ವೇಷ ಭಾಷಣದ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.

ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸದ ವೇಳೆ ಪ್ರಧಾನಿಯಾಗಿದ್ದ ಕಾಂಗ್ರೆಸ್‌ನ ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಘೋಷಣೆ

ವೀಡಿಯೋವನ್ನು ಆಧರಿಸಿ, ಪರಿಸರವಾದಿ ವಿ. ಪಿಯೂಷ್ ಅವರು ಅಣ್ಣಾಮಲೈ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಆದರೆ ಅಣ್ಣಾ ಮಲೈ ಅವರ ಹೇಳಿಕೆ ಸಾರ್ವಜನಿಕ ಶಾಂತಿಗೆ ಭಂಗ ತಂದಿಲ್ಲ ಎಂದು ಉಲ್ಲೇಖಿಸಿ ಅದನ್ನು ಎಫ್‌ಐಆರ್ ದಾಖಲಾಗಿರಲಿಲ್ಲ. ಇದರ ಬೆನ್ನಲ್ಲೇ ಪೀಯೂಷ್ ಅವರು ಸೇಲಂನ ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪ್ರಕರಣ ದಾಖಲಿಸಲು ವಿನಂತಿದ್ದರು.

ಅರ್ಜಿ ಆಲಿಸಿದ್ದ ನ್ಯಾಯಾಲಯವು ಅಣ್ಣಾಮಲೈ ಅವರು ಭಾರತೀಯ ದಂಡ ಸಂಹಿತೆಯ (IPC) 153A ಮತ್ತು 505(1)(b) ಅಡಿಯಲ್ಲಿ ಅಪರಾಧಗಳನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿತ್ತು. ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ಸಮನ್ಸ್ ಜಾರಿ ಮಾಡಿತ್ತು. ಈ ಪ್ರಕರಣವನ್ನು ರದ್ದು ಮಾಡುವಂತೆ ಅಣ್ಣಾಮಲೈ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅಣ್ಣಾಮಲೈ ನೀಡಿದ ಹೇಳಿಕೆಗಳು ಕ್ರಿಶ್ಚಿಯನ್ ಎನ್‌ಜಿಒ ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಂಬಿಸುವಲ್ಲಿ ‘ಸಮಾಜ ಒಡೆಯುವ’ ಉದ್ದೇಶ ಹೊಂದಿದೆ ಎಂದು ಹೈಕೋರ್ಟ್ ಹೇಳಿದೆ. “ದೀಪಾವಳಿ ಹಬ್ಬಕ್ಕೆ ಎರಡು ದಿನಗಳ ಮೊದಲು ಈ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಅಂಶದಿಂದ ಉದ್ದೇಶವನ್ನು ಗ್ರಹಿಸಬಹುದು. ಸಂದರ್ಶನದ ಈ ನಿರ್ದಿಷ್ಟ ಸಾರವನ್ನು ಮುಖ್ಯ ಸಂದರ್ಶನದಿಂದ ಹೊರತೆಗೆಯಲಾಗಿದೆ. ಅಲ್ಲದೆ, ಅವರ ಪಕ್ಷದ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ ಎಂಬ ಅಂಶದಿಂದಲೂ ಅವರ ಉದ್ದೇಶವನ್ನು ಗ್ರಹಿಸಬಹುದು” ಎಂದು ನ್ಯಾಯಾಲಯವು ಹೇಳಿದೆ.

ಇದನ್ನೂ ಓದಿ: ಮುಂಬೈ | ಕ್ಯಾಮೆರಾ ಮುಂದೆಯೆ ಶಿವಸೇನೆ (ಉದ್ಧವ್ ಬಣ) ನಾಯಕನ ಗುಂಡಿಕ್ಕಿ ಹತ್ಯೆ

ಇದಲ್ಲದೆ, ಪರಿಸರದ ಹಿತದೃಷ್ಟಿಯಿಂದ ಸಲ್ಲಿಸಲಾದ ಅರ್ಜಿಯನ್ನು ಅಣ್ಣಾಮಲೈ ಅವರು ಇದ್ದಕ್ಕಿದ್ದಂತೆ ಕೋಮು ದೃಷ್ಟಿಕೋನ ನೀಡಲಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. “ನಿರ್ದಿಷ್ಟ ಧರ್ಮದ ಬಗ್ಗೆ ದ್ವೇಷವನ್ನು ಸೃಷ್ಟಿಸುವ ಉದ್ದೇಶ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ಹೇಳಿಕೆಗಳನ್ನು ಗಣ್ಯ ವ್ಯಕ್ತಿಯಿಂದ ಮಾಡಲಾಗಿದ್ದು, ಅವರ ಮಾತುಗಳು ಜನಸಾಮಾನ್ಯರ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ” ಎಂದು ನ್ಯಾಯಾಲಯ ಹೇಳಿದೆ.

ಸಂದರ್ಶನ ನಡೆದು 400 ದಿನಗಳ ನಂತರವೂ ಯಾವುದೇ ಹಿಂಸಾಚಾರ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ ಎಂಬ ಅಣ್ಣಾಮಲೈ ಅವರ ವಕೀಲರ ವಾದವನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, ಸಂದರ್ಶನವು ಆನ್‌ಲೈನ್‌ನಲ್ಲಿ ಲಭ್ಯವಿದೆ ಮತ್ತು ಅದನ್ನು ಯಾವಾಗ ಬೇಕಾದರೂ ಬಳಸಬಹುದು ಎಂದು ಹೇಳಿದೆ. “ನಾಯಕರೊಬ್ಬು ನೀಡಿದ ಹೇಳಿಕೆಯ ಪ್ರಭಾವವನ್ನು ಕೇವಲ ತಕ್ಷಣದ ದೈಹಿಕ ಹಾನಿಯಾಗಿದೆ ಎಂದು ನೋಡುವ ಮೂಲಕ ಸೀಮಿತಗೊಳಿಸಬಾರದು. ಉದ್ದೇಶಿತ ಗುಂಪಿನ ಮನಸ್ಸಿನಲ್ಲಿ ಮೂಕ ಹಾನಿಯನ್ನುಂಟುಮಾಡಿದೆಯೇ ಎಂದು ನೋಡುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಇದು ನಂತರದ ಸಮಯದಲ್ಲಿ ನಡೆಯಬಹುದಾದ ಹಿಂಸಾಚಾರದ ವಿಷಯದಲ್ಲಿ ಅಥವಾ ನರಮೇಧದಲ್ಲಿ ಅಪೇಕ್ಷಿತ ಪರಿಣಾಮವನ್ನು ಬೀರುತ್ತದೆ” ಎಂದು ನ್ಯಾಯಮೂರ್ತಿ ವೆಂಕಟೇಶ್ ಹೇಳಿದ್ದಾರೆ.

ವಿಡಿಯೊ ನೋಡಿ:ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *