ಮಧು ಬಂಗಾರಪ್ಪ ಅವರೇ ಸುಳ್ಳು ಹೇಳುವ ಸಚಿವರಾಗಬೇಡಿ

                                                                                                                                                                                                                                                                  ಬಿ. ಶ್ರೀಪಾದ ಭಟ್
 ಮೊದಲಿಗೆ  ಮಾನ್ಯ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಸುಳ್ಳು ಹೇಳುವ ಸಚಿವರಾಗಬೇಡಿ

ಎರಡನೆಯದಾಗಿ : ಯಾದಗಿರಿ, ಚನ್ನಪಟ್ಟಣ , ಚಿತ್ರದುರ್ಗ, ಚಿಕ್ಕಬಳ್ಳಾಪುರ ಇತ್ಯಾದಿ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆ ಮುಚ್ಚಲು ಏತಕ್ಕೆ ಆದೇಶ ಹೊರಡಿಸುತ್ತಿದ್ದಾರೆ?
ಇದು ನಿಮಗೆ ಗೊತ್ತಿಲ್ಲವೇ? ಯಾವುದು ನಿಜ? ಜನಪ್ರತಿನಿಧಿಗಳಾಗಿ ಜನರಿಗೆ ಹಾದಿ ತಪ್ಪಿಸುವ ರೀತಿ ವರ್ತಿಸಬೇಡಿ

ಇದನ್ನೂ ಓದಿ : ಕೆಜೆವಿಎಸ್‌ : ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಮೂರನೆಯದಾಗಿ :  ಸ್ಥಳೀಯ ಶಾಲೆಗಳನ್ನು ಮುಚ್ಚಿ ಕೆಪಿಎಸ್ (ಮ್ಯಾಗ್ನೆಟ್) ಶಾಲೆಗಳನ್ನು ತೆರೆಯುತ್ತಿದ್ದೀರಿ. ಇದು ವಾಸ್ತವ. ಇದನ್ನು ಯಾಕೆ ನಿರಾಕರಿಸುತ್ತಿದ್ದೀರಿ? ಪ್ರತಿ ಹಳ್ಳಿಯಲ್ಲೂ ಶಾಲೆಯ ಗಂಟೆ ಮೊಳಗುತ್ತಿರಬೇಕು ಎನ್ನುವ ಆಶಯವನ್ನು ಭಗ್ನಗೊಳಿಸುತ್ತಿದ್ದೀರಿ… ಇದರಿಂದ ವಂಚಿತ ಸಮುದಾಯಗಳ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ ಎನ್ನುವ ಅರಿವು ಇದೆಯೇ? ಒಂದನೇ ತರಗತಿಯಿಂದ ಐದನೇ ತರಗತಿಯ ನಡುವೆ  ಶೇ.2ರಷ್ಟು, ಆರನೇ ತರಗತಿಯಿಂದ ಹತ್ತನೇ ತರಗತಿಯ ನಡುವೆ ಶೇ10ರಷ್ಟು ಮಕ್ಕಳು ಡ್ರಾಪ್ ಔಟ್ ಆಗುತ್ತಿದ್ದಾರೆ. ಇವರಲ್ಲಿ ಬಹುಪಾಲು ದಲಿತ ಸಮುದಾಯದವರು.. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು.. ಹೇಳಿ ಸಾರ್ ಇದಕ್ಕಾಗಿ ನೀವು ಶಿಕ್ಷಣ ಮಂತ್ರಿಗಳಾಗಿದ್ದೀರಾ?

ನಾಲ್ಕನೆಯದಾಗಿ :  ಕೆಪಿಎಸ್ ನಲ್ಲಿ ಇಂಗ್ಲಿಷ್ ಮಾಧ್ಯಮದ ಆಕರ್ಷಣೆ ಇದೆ. ಇರಲಿ. ಆದರೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿಲ್ಲ. ಕನ್ನಡದ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರೇ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ತರಬೇತಿ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಉತ್ತಮ ಕಲಿಕೆ ಸಾಧ್ಯವಿಲ್ಲ. ಇಂಗ್ಲೀಷ್ ಮಾಧ್ಯಮ ಹೆಸರಿನಲ್ಲಿ ಏನನ್ನು ಕಲಿಯದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಏನು ಪರಿಹಾರ ಕಂಡುಕೊಂಡಿದ್ದೀರಿ?

ಐದನೆಯದಾಗಿ : ಕೆಪಿಎಸ್ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸಲು ಶಾಲಾ ಶಿಕ್ಷಣ ಇಲಾಖೆಯಿಂದ ಪಠ್ಯಕ್ರಮ ರಚನೆಯಾಗಿದೆಯೇ? ತಿಳಿದುಬಂದ ಮಾಹಿತಿ ಪ್ರಕಾರ
ಎನ್ ಸಿಆರ್ ಟಿ ಪಠ್ಯಪುಸ್ತಕಗಳನ್ನು ಹಾಗೆಯೇ ಬಳಸುತ್ತಿದ್ದೀರಿ? ಇದು ಎಸ್ ಇಪಿ ಶಿಫಾರಸುಗೆ ಅನುಗುಣವಾಗಿದೆಯೇ? ಕೆಪಿಎಸ್ ಶಾಲೆಗಳು
ಎನ್ ಸಿಆರ್ ಟಿ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಬೇಕು ಎಂದಾದರೆ ರಾಜ್ಯ ವ್ಯಾಸಂಗ ಕ್ರಮ(ಪೆಡಗಾಜಿ) ಕತೆ ಮುಗಿದಂತೆಯೇ?

ಆರನೆಯದಾಗಿ :  ಖಾಸಗಿ ಸಂಸ್ಥೆಗಳ ಅನುದಾನದಿಂದ ಕೆಪಿಎಸ್ ಶಾಲೆಗಳನ್ನು ತೆರೆಯುತ್ತಿದ್ದೀರಿ. ಅಂದರೆ ಹಂತ ಹಂತವಾಗಿ ಆ ಶಾಲೆಗಳು ಖಾಸಗಿಯವರ ಆಡಳಿತಕ್ಕೆ ಒಳಪಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸುವಿರಾ ಸರ್?

ಇನ್ನು ಈಗಿರುವ ಆಯ್ದ ಶಾಲೆಗಳನ್ನು ಉನ್ನತೀಕರಣದ ಹೆಸರಿನಲ್ಲಿ ಕೆಪಿಎಸ್ ಎಂದು ಬೋರ್ಡ್ ಹಾಕುತ್ತಿದ್ದೀರಿ?  ಅಲ್ಲಿ ಶಿಕ್ಷಕರಿದ್ದಾರೆಯೇ? ಮೂಲಭೂತ ಸೌಕರ್ಯಗಳಿವೆಯೇ? ಕಂಪ್ಯೂಟರ್ ಸೌಲಭ್ಯ ಇದೆಯೇ? ಆಧುನಿಕ ಗ್ರಂಥಾಲಯ ಹೊಂದಿದೆಯೇ? ಮುಖ್ಯವಾಗಿ ಶಿಕ್ಷಕರು ಬದ್ಧತೆಯಿಂದ ಪಾಠ ಮಾಡುತ್ತಿದ್ದಾರೆಯೇ?

ಏಳನೆಯದಾಗಿ :  ಸರ್ಕಾರಿ ಶಾಲೆಗಳಿಗೆ ಮಕ್ಕಳು ಯಾಕೆ ಬರುತ್ತಿಲ್ಲ? ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ, ಆದರೆ ಅಲ್ಲಿ ಶಿಕ್ಷಕರ ಕೊರತೆಯಿದೆ ಯಾಕೆ?

ಎಂಟನೆಯದಾಗಿ :  ಅರವತ್ತು ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ? ಇದರ ನೇಮಕಾತಿಗಾಗಿ ಕಾರ್ಯಯೋಜನೆಗಳೇನು? ನೀಲನಕ್ಷೆಯೇನು?

ಒಂಬತ್ತನೆಯದಾಗಿ : ಎಸ್ ಇಪಿ ಶಿಫಾರಸ್ಸುಗಳ ಕತೆ ಏನು? ಅದನ್ನು ಸಾರ್ವಜನಿಕವಾಗಿ ಯಾಕೆ ಮಂಡಿಸುತ್ತಿಲ್ಲಾ? ಯಾಕೆ ಪರಾಮರ್ಶೆ ಮಾಡಿ ಜಾರಿಗೊಳಿಸುತ್ತಿಲ್ಲ.

ಇದನ್ನೂ ನೋಡಿ : ಚುನಾವಣಾ ಆಯೋಗ RSSನ ಶಾಖೆಯೆ? ಕ್ಲಿಪ್ಟನ್ ಡಿ ರೊಜಾರಿಯೋ Janashakthi Media

 

Donate Janashakthi Media

Leave a Reply

Your email address will not be published. Required fields are marked *