ಬೆಂಗಳೂರು: ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣರಾದ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಗಣೇಶನ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ ನಡೆಸಿದವರನ್ನು ಕಂಡು ಹಿಡಿದು ಶಿಕ್ಷಿಸಬೇಕೆಂದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸಮಿತಿ ಒತ್ತಾಯಿಸಿದೆ.
ಇಂತಹ ಉದ್ವಿಗ್ನ ಸ್ಥಿತಿಯನ್ನು ತನ್ನ ಕೋಮುವಾದಿ ರಾಜಕೀಯಕ್ಕೆ ಬಳಸಿಕೊಳ್ಳುವ ಬಿಜೆಪಿಯ ಹುನ್ನಾರಗಳನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡು, ಕೋಮುವಾದಕ್ಕೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಸಿಪಿಐ(ಎಂ) ಮನವಿ ಮಾಡುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಡಾ.ಕೆ ಪ್ರಕಾಶ್ ತಿಳಿಸಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಿದ ಘಟನೆಯಿಂದ ಉಂಟಾಗಿರುವ ಉದ್ವಿಗ್ನತೆ ಸೌಹಾರ್ದತೆಗೆ ದಕ್ಕೆ ಉಂಟು ಮಾಡಿದೆ, ಉದ್ವಿಗ್ನತೆಯನ್ನು ಶಮನ ಮಾಡಿ ಸೌಹಾರ್ದ ಮೂಡಿಸಲು ಮತ್ತು ಸೌಹಾರ್ದ ಕೆಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಶಕ್ತಿಗಳ ಮೇಲೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ. ಇಡೀ ಜಿಲ್ಲೆಯಲ್ಲಿ ಈ ಬಾರಿ ಯಾವುದೇ ಗಲಭೆಯಾಗದಂತೆ ಕ್ರಮ ವಹಿಸಿದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮದ್ದೂರಿನಲ್ಲಿ ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ, ಸಣ್ಣ ನಿರ್ಲಕ್ಷ್ಯವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕು ಮತ್ತು ನಿರ್ಲಕ್ಷö್ಯ ತಾಳಿದ ಅಧಿಕಾರಿಗಳನ್ನು ಘಟನೆಗೆ ಹೊಣೆ ಮಾಡಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಬಿಜೆಪಿಯ ಕೋಮುವಾದಿ ರಾಜಕೀಯಕ್ಕೆ ಬಲಿ ಬೀಳದಂತೆ ಮನವಿ: ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ನೆಲೆಯೂರಲು ಹತಾಶ ಪ್ರಯತ್ನಗಳನ್ನು ನಡೆಸುತ್ತಿದೆ. ಕಳೆದ ವರ್ಷ ನಾಗಮಂಗಲ, ಈಗ ಮದ್ದೂರು, ಹಿಂದೆ ಶ್ರೀರಂಗಪಟ್ಟಣ, ಕೆರೆಗೋಡು ಹೀಗೆ ಗಲಭೆ ಮತ್ತು ಉದ್ವಿಗ್ನತೆ ಸೃಷ್ಟಿಸಿ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಕೆಲಸ ಮಾಡುತ್ತಿದೆ. ಜಿಲ್ಲೆಯ ಪ್ರಜ್ಞಾವಂತ ಜನತೆ ಇಂತಹ ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗಬಾರದು, ಜನತೆಯ ಬದುಕಿನ ಪ್ರಶ್ನೆಗಳಿಗೆ ಯಾವತ್ತು ಕಾಳಜಿ ವಹಿಸದಿರುವ ಬಿಜೆಪಿ ಗಲಭೆ ಸದರ್ಭಗಳಲ್ಲಿ ರಣಹದ್ದಿನಂತೆ ಮುಗಿ ಬೀಳುತ್ತದೆ. ನಿನ್ನೆಯ ಮದ್ದೂರಿನ ಬಂದ್ ಮತ್ತು ಪ್ರತಿಭಟನೆಯೂ ಕೂಡಾ ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ನಾಯಕರ ಪ್ರಾಯೋಜನೆ ಎಂಬುದನ್ನು ಜನತೆ ಅರ್ಥ ಮಾಡಿಕೊಂಡು ಸೌಹಾರ್ದತೆ ಉಳಿಸಲು ಶ್ರಮಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಮನವಿ ಮಾಡಿದೆ.
