ವೇದರಾಜ್ ಎನ್.ಕೆ
“ಆಗ ನನಗೆ 20-22ವರ್ಷ ವಯಸ್ಸಿದ್ದಿರಬೇಕು, ನಾನು ಮತ್ತು ನನ್ನ ಸಹಯೋಗಿಗಳು ಬಾಂಗ್ಲಾದೇಶ್ ಜನತೆಯ ಸ್ವಾತಂತ್ರ್ಯಕ್ಕಾಗಿ ಒಂದು ಸತ್ಯಾಗ್ರಹ ಮಾಡಿದೆವು. ನನ್ನನ್ನು ಬಂಧಿಸಲಾಯಿತು ಮತ್ತು ನನಗೆ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಬೆಂಬಲಿಸಿ ಜೈಲಿಗೆ ಹೋಗುವ ಅವಕಾಶ ಸಿಕ್ಕಿತ್ತು”
ನಮ್ಮ ಪ್ರಧಾನಿಗಳು ನೆರೆಯ ಬಾಂಗ್ಲಾದೇಶ್ 50ನೇ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ನುಡಿದ ಈ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗಳನ್ನು ಎಬ್ಬಿಸಿವೆ. ಈ ಏಳು ವರ್ಷಗಳಲ್ಲಿ ಸತತವಾಗಿ ಕಂಡು ಬರುತ್ತಿರುವ ‘ಬಡಾಯಿ’ಗಳ ಪ್ರವೃತ್ತಿಯ ಅನುಭವಗಳ ಹಿನ್ನೆಲೆಯಲ್ಲಿ ಇದೂ ಅದರ ಮತ್ತೊಂದು ಉದಾಹರಣೆ ಎಂದು ಬಹಳಷ್ಟು ಮಂದಿಗೆ ಅನಿಸಿದ್ದರೆ ಆಶ್ಚರ್ಯವೇನಿಲ್ಲ.
ವ್ಯಂಗ್ಯಚಿತ್ರ: ಪಂಜು ಗಂಗೊಳ್ಳಿ
***
ಆದರೆ ಈ ಬಾರಿ ಆಳುವ ಪಕ್ಷದ ಟ್ರೋಲಿಗರನ್ನು ಇಂತಹ ಟೀಕೆಗೆ ಸಿದ್ಧಗೊಳಿಸಲಾಗಿತ್ತು ಎಂದು ಕಾಣುತ್ತದೆ. 1971 ಆಗಸ್ಟ್ 1ರಿಂ ದ11 ರವರೆಗೆ ಈಗಿನ ಬಿಜೆಪಿಯ ಹಿಂದಿನ ಆವೃತ್ತಿಯಾಗಿದ್ದ ಭಾರತೀಯ ಜನಸಂಘ “ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಿ’ ಎಂಬ ಸತ್ಯಾಗ್ರಹಕ್ಕೆ ಕರೆ ಕೊಟ್ಟಿತ್ತು ಎಂದು ಅವರೆಲ್ಲ ಹೇಳಿದ್ದಾರೆ. ಆಗಸ್ಟ್ 12, 1971 ರಂದು ಜನಸಂಘದ ಮುಖಂಡ ವಾಜಪೇಯಿಯವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಒಂದು ಬೃಹತ್ ರ್ಯಾಲಿ ನಡೆದಿತ್ತು, ಅದರಲ್ಲಿ ಗುಜರಾತಿನ ಒಂದು ತಂಡವೂ ಪಾಲ್ಗೊಂಡಿತ್ತಂತೆ. . ಆದರೆ ಅದರಲ್ಲಿ ಮೋದಿಯವರು ಇದ್ದರೇ ಎಂಬುದು ಅವರಲ್ಲಿ ಬಹುಮಂದಿಗೆ ಖಾತ್ರಿಯಿದ್ದಂತಿಲ್ಲ.
ಆದರೆ, ಈ ರ‍್ಯಾಲಿ ಪ್ರಮುಖವಾಗಿ ಮುಂದೆ ಬಾಂಗ್ಲಾದೇಶಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಿ ಅದರ ವಿಮೋಚನೆಯಲ್ಲಿ ಭಾರತ ಸಕ್ರಿಯವಾಗಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟ ಭಾರತ-ಸೋವಿಯೆತ್ ಒಕ್ಕೂಟ ಮೈತ್ರಿ ಸಂಧಿಯ ವಿರುದ್ಧವಾಗಿತ್ತು ಎಂಬುದು ಗಮನಾರ್ಹ. ಈ ಒಪ್ಪಂದ ಬಾಂಗ್ಲಾದೇಶಕ್ಕೆ ಭಾರತ ಮಾಡಿದ ವಿಶ್ವಾಸಘಾತ ಎಂಬುದು ಜನಸಂಘದ ಪ್ರಚಾರವಾಗಿತ್ತು. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಆಗ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದ ಅಮೆರಿಕಾದ ಸಿಐಎ ಕೂಡ ಭಾರತ-ಸೋವಿಯೆತ್ ಒಕ್ಕೂಟ ಮೈತ್ರಿ ಸಂಧಿಯ ವಿರುದ್ಧ ಇದೇ ದನಿಯಲ್ಲಿ ಪ್ರಚಾರ ನಡೆಸಿತ್ತು .
ಇದನ್ನು ಓದಿ : ಚುನಾವಣಾ ಕಾಲ 2021 – ಕೋಬ್ರಾ ಡ್ಯಾನ್ಸರ್ , ಮೆಟ್ರೋಮ್ಯಾನ್ ಇತ್ಯಾದಿ
ಅದೇನೆ ಇರಲಿ, ಮಾರ್ಚ್ 25-26, 1971ರ ಮಧ್ಯರಾತ್ರಿ ಆಗಿನ ಪೂರ್ವ ಪಾಕಿಸ್ತಾನದಲ್ಲಿ ಚುನಾವಣಾ ಫಲಿತಾಂಶವನ್ನು ಹುಸಿಗೊಳಿಸಲು ದಮನ ನಡೆಸುತ್ತಿದ್ದ ಪಾಕಿಸ್ತಾನೀ ಆಳರಸರ ವಿರುದ್ಧ ಸಮರಕ್ಕೆ ನೇತೃತ್ವ ನೀಡುತ್ತಿದ್ದ ಶೇಖ್ ಮುಜಿಬುರ್ ರಹಮಾನ್ ರನ್ನು ಬಂಧಿಸಿ ರಾವಲ್ಪಿಂಡಿಗೆ ಒಯ್ಯಲಾಯಿತು. ಇದರಿಂದಾಗಿ ಮಾರ್ಚ್ 27 ರಂದು ಸಶಸ್ತ್ರ ಸಮರದ ನೇತೃತ್ವ ವಹಿಸಿದ್ದ ಮೆಜರ್ ಜಿಯಾ ಉರ್ ರಹಮಾನ್ ಬಾಂಗ್ಲಾದೇಶ್ ಸ್ವತಂತ್ರ ವಾಗಿದೆ ಎಂದು ಹೋರಾಟಗಾರರ ಪರವಾಗಿ ಘೋಷಿಸಿದರು.
ಭಾರತದ ಸಂಸತ್ತು ಪೂರ್ವ ಬಂಗಾಲದ ಹೋರಾಟವನ್ನು ಬೆಂಬಲಿಸಿ ನಿರ್ಣಯವನ್ನು ಅಂಗೀಕರಿಸಿತು. ಆದರೆ ಅಧಿಕೃತವಾಗಿ ಮಾನ್ಯತೆಯನ್ನು ಘೋಷಿಸಿದರೆ ಆಗ ಜೈಲಿನಲ್ಲಿದ್ದ ಮುಜಿಬುರ್ ರಹಮಾನ್‍ರ ಮೇಲೆ ರಾಜದ್ರೋಹದ ಆರೋಪ ಹಾಕಿ ಕೂಡಲೇ ಗಲ್ಲಿಗೇರಿಸುವ ಸಂಭವ ಇತ್ತಾದ್ದರಿಂದ ಮತ್ತು ಪಾಕಿಸ್ತಾನ ಕೂಡ ಭಾರತದಂತೆ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಿರುವುದರಿಂದ ಹಾಗೂ ಅಮೆರಿಕ ಅದರ ಬೆಂಬಲಕ್ಕೆ ನಿಂತಿದ್ದರಿಂದ , ಮೂಡಿಬರುತ್ತಿದ್ದ ಸನ್ನಿವೇಶದಲ್ಲಿ ಸರಕಾರ ಹೋರಾಟಗಾರರ ಪರವಾಗಿ ಕೈಗೊಳ್ಳಬಹುದಾದ ಕ್ರಮಗಳು ಸಾರ್ವಜನಿಕ ಚರ್ಚೆಯ ವಿಷಯವಾಗಬಾರದೆಂದು ಆಗಿನ ಪ್ರಧಾನಿ ಇಂಧಿರಾ ಗಾಂಧಿ ಮಾರ್ಚ್ 26ರಂದು ಪ್ರಮುಖ ವಿರೋಧ ಪಕ್ಷಗಳ ಮುಖಂಡರನ್ನು ಕೋರಿದ್ದರು (A Satyagraha and Asatyagraha: Narendra Modi and the Liberation of Bangladesh, ದಿ ವೈರ್, ಮಾರ್ಚ್ 27). ಇಂತಹ ಕ್ರಮಗಳ ಭಾಗವಾಗಿ ಭಾರತ-ಸೋವಿಯೆತ್ ಒಕ್ಕೂಟ ಮೈತ್ರಿಸಂಧಿ ನಡೆಯಿತು. ಇದರಿಂದ ಕುಪಿತಗೊಂಡ ಜನಸಂಘ ಈ ‘ಸತ್ಯಾಗ್ರಹ’ಕ್ಕೆ ಕರೆ ನೀಡಿತ್ತು ಎನ್ನಲಾಗಿದೆ.
ಮುಂದೆ ಭಾರತ ಬಹಿರಂಗವಾಗಿ ಬಾಂಗ್ಲಾದೇಶದ ನೆರವಿಗೆ ನಿಂತಾಗ, ಅದರ ವಿರುದ್ಧ ಅಮೆರಿಕಾದ ನೌಕಾಸೇನೆಯ ಏಳನೇ ಫ್ಲೀಟ್ ಬಂಗಾಳ ಕೊಲ್ಲಿ ಪ್ರವೇಶಿಸದಂತೆ ತಡೆಯೊಡ್ಡಿದ್ದು ಈ ಭಾರತ-ಸೋವಿಯೆತ್ ಒಕ್ಕೂಟ ಮೈತ್ರಿಸಂಧಿಯೇ ಎಂಬುದು ಈಗ ಚರಿತ್ರೆ.
, ಅಂತಿಮವಾಗಿ ಡಿಸೆಂಬರ್ 17, 1971ರಂದು ಪಾಕಿಸ್ತಾನದ ಸೇನೆ ಭಾರತದ ಸೇನೆಗೆ ಶರಣಾಗತವಾಯಿತು.
ವ್ಯಂಗ್ಯಚಿತ್ರ: ಮಾಲಿ
***
ಮಾನ್ಯ ಪ್ರಧಾನ ಮಂತ್ರಿಗಳು ತಾನೂ 20-22ರ ಪ್ರಾಯದಲ್ಲಿ ಬಾಂಗ್ಲಾದೇಶಕ್ಕಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ ಎಂಬುದನ್ನು ಬಹಳ ಹೆಮ್ಮೆಯಿಂದ ಬಾಂಗ್ಲಾದೇಶದ ಯುವ ಜನಾಂಗವಕ್ಕೆ ನೆನಪಿಸಬಯಸುತ್ತೇನೆ ಎಂದು ಹೇಳಿದರು.
ನಿಜ, ಇಂದಿರಾ ಗಾಂಧಿಯವರು ಮಹತ್ವದ ಪಾತ್ರ ವಹಿಸಿದರು ಎಂಬುದನ್ನೂ ಅವರು ತನ್ನ ಭಾಷಣದಲ್ಲಿ ಹೇಳಿದರು. ಆದರೂ ತಾನೂ ಏನೇನೂ ಕಮ್ಮಿಯಿಲ್ಲ ಎಂದು ಅವರು ಬಾಂಗ್ಲಾದೇಶದ ಯುವಜನರಿಗೆ ಬಿಂಬಿಸ ಬಯಸುತ್ತಿದ್ದರೆ?
“ನಾನು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದೆ ಮತ್ತು ಬಂಧನಕ್ಕೊಳಗಾದೆ!”
ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ
1978ರಲ್ಲಿ ಪ್ರಕಟವಾದ ಅವರ ಪುಸ್ತಕ ‘ಸಂಘರ್ಷ್ ಮಾ ಗುಜರಾತ್’(ಸಂಘರ್ಷದಲ್ಲಿ ಗುಜರಾತ)ದಲ್ಲಿ ಅವರು ಇದನ್ನು ಉಲ್ಲೇಖಿಸಿಲ್ಲ, ಆದರೆ ಆ ಪುಸ್ತಕದ ಬ್ಲರ್ಬ್‍ನಲ್ಲಿ ಕರ್ತೃ ಬಗೆಗಿನ ಪರಿಚಯದಲ್ಲಿ ಈ ಬಗ್ಗೆ ಒಂದು ಸಾಲು ಇದೆಯಷ್ಟೇ ಎಂದು ಹೇಳಲಾಗಿದೆ.
***
ಅಲ್ಲದೆ ಇಲ್ಲಿ ಒಂದು ‘ಆಂದೋಲನ’ದ ವಿಚಾರವೂ ಇತ್ತು, ಬೇರೊಂದು ರಾಷ್ಟ್ರದ ಬಗ್ಗೆ ಪ್ರೇಮದ ವಿಚಾರವೂ ಇತ್ತು.
ಇದನ್ನು ಬಾಂಗ್ಲಾದೇಶದ ಯುವಜನಾಂಗಕ್ಕೆ ಹೆಮ್ಮೆಯಿಂದ ನೆನಪಿಸ ಬಯಸುವ ನಮ್ಮ ಪ್ರಧಾನಿಗಳ ಇತ್ತೀಚಿನ ‘ಆಂದೋಲನ ಜೀವಿ’ ಎಂಬ ಪ್ರತಿಭಟನಾಕಾರರ ವಿರುದ್ಧದ ದೂಷಣೆಯ ಹಿನ್ನೆಲೆಯಲ್ಲಿ ಇದನ್ನು ಹೇಗೆ ನೋಡಬೇಕು ಎಂಬ ಪ್ರಶ್ನೆ ಏಳುವುದೂ ಸಹಜ ತಾನೇ? ವಿಶೇಷವಾಗಿ ಭಾರತದ ಯುವಜನರಲ್ಲಿ.
“ ಅಯ್ಯೋ ದೇವರೇ, ಆ ದಿನಗಳಲ್ಲಿ ನೀವು
ಒಬ್ಬ ಆಂದೋಲನಜೀವಿಯಾಗಿದ್ದಿರೇನು?”
ವ್ಯಂಗ್ಯಚಿತ್ರ: ಅಲೋಕ್ ನಿರಂತರ್
***
ಮತ್ತು ಇದಕ್ಕೆ ಮೊದಲು ಪ್ರತಿಭಟನೆಗೆ ಮುಂದಾದವರ ಮೇಲೆಲ್ಲಾ ಸಾರಾಸಗಟು ‘ರಾಷ್ಟ್ರದ್ರೋಹ’ದ ಆರೋಪ ಹೊರಿಸುತ್ತಿದ್ದುದು ಕೂಡ ನೆನಪಾಗದಿರುತ್ತದೆಯೇ?
ಮೇಲೆ ಹೇಳಿದಂತೆ, ಮೋದಿಯವರ ಮಟ್ಟಿಗೆ ಆಂದೋಲನದ ಆರಂಭದ ಅನುಭವಗಳಲ್ಲಿ ಒಂದಾದ ಈ ‘ಸತ್ಯಾಗ್ರಹ’ದ ಬೇಡಿಕೆಯ ಪರಿಣಾಮವೆಂದರೆ ಆಗಿನ್ನೂ ಪಾಕಿಸ್ತಾನದ ನಾಗರಿಕರಾಗಿದ್ದ ಮುಜಿಬುರ್ ರಹಮಾನರ ಮೇಲೆ ರಾಜದ್ರೋಹದ, ರಾಷ್ಟ್ರದೋಹದ ಮೊಕದ್ದಮೆ ಮತ್ತು ಗಲ್ಲುಶಿಕ್ಷೆ ಎಂದು ತಿಳಿಯದಷ್ಟು ಈ ‘ಸತ್ಯಾಗ್ರಹ’ದ ಕರೆ ನೀಡಿದ್ದ ಜನಸಂಘದ ಮುಖಂಡರು ಅಮಾಯಕರೇನೂ ಆಗಿರಲಿಕ್ಕಿಲ್ಲ ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ಮಾಡಿದವರು.
“ಬಾಂಗ್ಲಾದೇಶದಿಂದಲೇ ಕೇಳುಗರೊಬ್ಬರು ನಿಮ್ಮ ಆ ಸಹಯೋಗಿಗಳು
(ನಿಮ್ಮೊಂದಿಗೆ ಸತ್ಯಾಗ್ರಹ ಮಾಡಿದವರು) ಯಾವ ಕ್ಷೇತ್ರದವರು
ಎಂದು ಕೇಳಿದರೆ ಅವರು ಆಂಟಿ-ನ್ಯಾಷನಲ್ ಎಂದೇ
ಕರೆಯಲ್ಪಡುತ್ತಾರೆಯೇ ಅಥವ ಇನ್ನೇನಾದರೂ?”
ವ್ಯಂಗ್ಯಚಿತ್ರ: ಶೇಖರ್ ಗುರೇರ
***
ಇಷ್ಟೇ ಅಲ್ಲ, ಪ್ರಧಾನಿಗಳ ಈ ಹೆಮ್ಮೆಯ ಹಿನ್ನೆಲೆಯಲ್ಲಿ ಆಳುವ ಪಕ್ಷದ ಇನ್ನೊಂದು ಪ್ರಿಯ ವಿಷಯದ (‘ಬಾಂಗ್ಲಾ ನುಸುಳುಕೋರರು’) ಗತಿಯೇನು?
ವ್ಯಂಗ್ಯಚಿತ್ರ: ಪಿ.ಮಹಮ್ಮದ್, ವಾರ್ತಾಭಾರತಿ
***
ಅದಿರಲಿ, ‘ಆಂದೋಲನಜೀವಿ ,’ರಾಷ್ಟ್ರದ್ರೋಹ’ ಮತ್ತು ‘ನುಸುಳುಕೋರರು’ ಎಂಬಿತ್ಯಾದಿ ವಿಚಾರಗಳ ಮುಂದೆ ಪ್ರಶ್ನೆ ಚಿಹ್ನೆ ಇಡುವ ‘ಬಾಂಗ್ಲಾದೇಶಕ್ಕಾಗಿ ಸತ್ಯಾಗ್ರಹದ ಹೆಮ್ಮೆಯ ಸ್ಮರಣೆ’ ಏಕಿರಬಹುದು ಎಂಬುದೂ ಮತ್ತೊಂದು ಪ್ರಶ್ನೆ
“ಮಾದರಿ ಸಂಹಿತೆಯ ಬಂಧನವಿಲ್ಲದ ಒಂದು ಬಂಗಾಲಿ ಭಾಷಿಕ ನಾಡಿಗೆ ಸ್ವಾಗತ”
ವ್ಯಂಗ್ಯಚಿತ್ರ: ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್