ಎಮ್ ಪೋಕ್ಸ್ (ಮಂಕಿ ಪೊಕ್ಸ್): ಆತಂಕ ಬೇಡ, ಎಚ್ಚರಿಕೆ ಇರಲಿ

ಡಾ| ಕೆ. ಸುಶೀಲಾ
2024ರಲ್ಲಿ ಇಲ್ಲಿ ತನಕ ನೈಜೀರಿಯಾದಲ್ಲಿ 39 ಎಮ್‌ಪೊಕ್ಸ್ ಪ್ರಕರಣಗಳು ಮತ್ತು ರಿಪಬ್ಲಿಕ್ ಆಫ್ ಕಾಂಗೋದಲ್ಲಿ 17,500 ಪ್ರಕರಣಗಳು ಹಾಗೂ ಇವುಗಳಲ್ಲಿ 540 ಸಾವುಗಳೂ ವರದಿಯಾಗಿವೆ. ಹಾಗೂ ಸ್ವೀಡನ್‌ನಲ್ಲಿ ಒಂದು ಪ್ರಕರಣ ಮತ್ತು ಏಷ್ಯಾದಲ್ಲಿ ಈ ಕಾಯಿಲೆಯ ಮೊತ್ತಮೊದಲ ಪ್ರಕರಣ ಪಾಕಿಸ್ತಾನದಲ್ಲಿ ವರದಿಯಾಗಿದೆ. ಆಫ್ರಿಕಾದ 13 ದೇಶಗಳಲ್ಲಿ ಈಗಾಗಲೇ ಈ ಕಾಯಿಲೆ ಹರಡಿದೆ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ಇದು “ಪ್ರಪಂಚದ ಸಾರ್ವಜನಿಕ ಆರೋಗ್ಯದ ಆಪತ್ಕಾಲಿಕ ಸ್ಥಿತಿ” ಎಂದು 15-08-2024 ರಂದು ಘೋಷಿಸಿದೆ. ಪೋಕ್ಸ್

ಮಧ್ಯ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ `ಎಮ್ ಪೊಕ್ಸ್’ ಎನ್ನುವ ಕಾಯಿಲೆ ಹೆಚ್ಚಿದ್ದು, ಅಲ್ಲಿಂದ ವಿದ್ಯಾಬ್ಯಾಸಕ್ಕಾಗಿ ಹೈದರಾಬಾದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುವುದರಿಂದ, ಹೈದ್ರಾಬಾದ್ ಈ ಕಾಯಿಲೆಯ ಬಗೆಗೆ ಹೆಚ್ಚು ಜಾಗರೂಕತೆ ವಹಿಸಬೇಕೆಂದು ಕೆಲವು ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಪೋಕ್ಸ್

ಏನಿದು ಎಮ್ ಪೊಕ್ಸ್ ಯಾ ಮಂಕಿ ಪೋಕ್ಸ್

ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಒಂದು ಸಾಂಕ್ರಾಮಿಕ ಕಾಯಿಲೆ. ಇದು ಅಪರೂಪವಾದರೂ ಹೊಸ ಕಾಯಿಲೆ ಅಲ್ಲ. ಸಿಡುಬು (ಸ್ಮಾಲ್ ಪೋಕ್ಸ್) ಕಾಯಿಲೆ ಉಂಟುಮಾಡುವ `ಆರ್ಥೋಪೊಕ್ಸ್’ ಕುಟುಂಬಕ್ಕೆ ಸೇರಿದ ಡಿ.ಎನ್.ಎ. ವೈರಸ್ ಈ ಎಮ್ ಪೊಕ್ಸ್ ಕಾಯಿಲೆಗೆ ಕಾರಣ. ಈ ವೈರಸ್ 1958ರಲ್ಲಿ ಮಂಗನಲ್ಲಿ ಮೊತ್ತಮೊದಲು ಕಂಡುಹಿಡಿಯಲ್ಪಟ್ಟರೂ, ಮೊತ್ತಮೊದಲ ಪ್ರಕರಣ 1970ರಲ್ಲಿ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬೆಳಕಿಗೆ ಬಂದಿತ್ತು. ಹಾಗೂ 2003ರಲ್ಲಿ ಮೊತ್ತಮೊದಲ ಬಾರಿ ಆಪ್ರಿಕಾ ಖಂಡದ ಹೊರಗೆ ಅಮೇರಿಕಾ ದೇಶದಲ್ಲಿ ಕಾಣಿಸಿಕೊಂಡಿತ್ತು. ಹಾಗೂ 2020, 2022ರಲ್ಲಿ ಮತ್ತೆ ಪುನಃ ಯುರೋಪಿನ ಕೆಲವು ದೇಶಗಳಲ್ಲಿ ಉತ್ತರ ಅಮೇರಿಕಾ, ಅಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡಿತ್ತು. ಪೋಕ್ಸ್

ಇದನ್ನೂ ಓದಿ: ನಗದು ಬದಲು ದಿನಸಿ ಕಿಟ್ ಸ್ವಾಗತ , ಅವೈಜ್ಞಾನಿಕ ಕಾರ್ಡ್ ಕಡಿತಕ್ಕೆ ವಿರೋದ – ಸಿಪಿಐಎಂ

ಈ ವೈರಸ್‌ನಲ್ಲಿ 2 ವಿಧದ ವೈರಸ್-ಕ್ಲಾಡ್ I ಕ್ಲಾಡ್ II ಗಳಿದ್ದು ಕ್ಲಾಡ್ I ಹೆಚ್ಚು ಗಂಭೀರ ಮಟ್ಟದ ಕಾಯಿಲೆ ಉಂಟುಮಾಡುತ್ತದೆ. ಹಾಗೂ ಇದರಲ್ಲಿ ಸಾವಿನ ಪ್ರಮಾಣ ಶೇ. 10. ಕ್ಲಾಡ್ II ವೈರಸ್‌ನಲ್ಲಿ ಸಾವಿನ ಪ್ರಮಾಣ ಶೇ. 1 ಆಗಿರುತ್ತದೆ. ಪೋಕ್ಸ್

ಹರಡುವಿಕೆಯ ಕ್ರಮ:

ಈ ಕಾಯಿಲೆ ಮಂಗ, ಇಲಿ, ಅಳಿಲು ಮುಂತಾದ ಪ್ರಾಣಿಗಳಿಂದ ಮಾನವರಿಗೆ, ಹಾಗೂ ಮಾನವರಿಂದ ಮಾನವರಿಗೆ ಹರಡುತ್ತದೆ. ಶಿಶುಗಳು, ಎಳೆಯ ಮಕ್ಕಳು, ಚಿಕ್ಕ ಪ್ರಾಯದವರು ಹಾಗೂ ಗರ್ಭಿಣಿಸ್ತ್ರೀಯರನ್ನು ಮತ್ತು ರೋಗ ನಿರೋಧಕಶಕ್ತಿ ಕಡಿಮೆ ಇರುವವರನ್ನು ಈ ಕಾಯಿಲೆ ಹೆಚ್ಚು ಭಾಧಿಸುತ್ತದೆ.

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವಿಕೆ:

ಈ ವೈರಸ್ ಸೋಂಕಿರುವ ಪ್ರಾಣಿಗಳು (1) ಮನುಷ್ಯರನ್ನು ಕಚ್ಚಿದರೆ, ಪರಚಿದರೆ ಅಥವಾ ಅವುಗಳ ರಕ್ತವು ದೇಹದ ಇತರೆ ದ್ರವ ಅಥವಾ ಅವುಗಳ ಚರ್ಮದೊಂದಿಗೆ ಮಾನವ ಸಂಪರ್ಕ ಉಂಟಾದಾಗ (2) ಅಥವಾ ಈ ಸೋಂಕಿರುವ ಪ್ರಾಣಿಗಳ ಮಾಂಸಾಹಾರ ತಯಾರಿಸುವಾಗ ಮತ್ತು ತಿಂದರೆ ಆಗ ಈ ಕಾಯಿಲೆಗೆ ಮಾನವರು ಬಲಿಯಾಗುತ್ತಾರೆ.

ಮನುಷ್ಯರಿಂದ ಮನುಷ್ಯರಿಗೆ:

1) ಈ ಕಾಯಿಲೆಯ ಸೋಂಕಿನಿಂದ ಬಳಲುವ ರೋಗಿಗಳ ಚರ್ಮದಲ್ಲಿರುವ ‘ದದ್ದು’, ಹುಣ್ಣು, ಹೊಟ್ಟು ಅಥವಾ ಅದರ ದೇಹದ ದ್ರವದ ಸಂಪರ್ಕಕ್ಕೆ ಆರೋಗ್ಯವಂತ ವ್ಯಕ್ತಿ ಬಂದಾಗ.

2) ಅಥವಾ ಈ ಸೋಂಕಿನಿಂದ ಬಳಲುವ ರೋಗಿಯು ಉಪಯೋಗಿಸಿದ ವಸ್ತುಗಳ (ಉದಾ: ಬಟ್ಟೆ, ಹಾಸಿಗೆ, ಕುರ್ಚಿ, ಮಂಚ ಮೊದಲಾದವುಗಳು) ಸಂಪರ್ಕಕ್ಕೆ ಬಂದರೆ.

3) ರೋಗಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೆ.

4) ಗರ್ಭಿಣಿ ಸ್ತ್ರೀಯರಲ್ಲಿ ಮಾಸು (ಕಸ, ಪ್ಲಾಸೆಂಟಾ)ವಿನ ಮೂಲಕ ಗರ್ಭಸ್ಥ ಶಿಶುವಿಗೆ.

5) ರೋಗಿ ಕೆಮ್ಮಿದಾಗ, ಸೀನಿದಾಗ ಅವರ ಸ್ರಾವದ ಸೂಕ್ಷ್ಮ ಕಣಗಳು ಆರೋಗ್ಯವಂತ ವ್ಯಕ್ತಿಯ ಮೂಗು, ಬಾಯಿ, ಕಣ್ಣಿನ ಮೂಲಕವೂ ಅವರ ದೇಹ ಪ್ರವೇಶಿಸಿ (ಇದಕ್ಕೆ ಸುದೀರ್ಘ ಸಂಪರ್ಕದ ಅವಶ್ಯಕತೆ ಇದೆ) ಈ ಕಾಯಿಲೆ ಮಾನವರಿಂದ ಮಾನವರಿಗೆ ಹರಡುತ್ತದೆ. ಆದರೆ ಈ ಕಾಯಿಲೆ ಸಿಡುಬು ಹಾಗೂ ಕೊವಿಡ್‌ನಷ್ಟು ಶ್ರೀಘ್ರವಾಗಿ ಒಬ್ಬರಿಂದೊಬ್ಬರಿಗೆ ಹರಡುವ ಕಾಯಿಲೆ ಅಲ್ಲ.

ಇನ್‌ಕ್ಯುಲೇಷನ್ ಅವಧಿ: ರೋಗಕಾರಕಗಳೂ ಆರೋಗ್ಯವಂತ ವ್ಯಕ್ತಿಯ ದೇಹ ಪ್ರವೇಶಿಸಿದ ನಂತರ ರೋಗದ ಗುಣ ಲಕ್ಷಣ ಕಾಣಿಸಿಕೊಳ್ಳುವ ತನಕದ ಮಧ್ಯಾವಧಿಗೆ ಇನ್‌ಕ್ಯುಲೇಷನ್ ಅವಧಿ (ರೋಗವು ಪಕ್ವಸ್ಥಿತಿಗೆ ಬರುವ ಕಾಲ) ಎನ್ನುತ್ತಾರೆ.

ಎಮ್ ಪೊಕ್ಸ್ನಲ್ಲಿ ಈ ಕಾಲಾವಧಿ ಸಾಮಾನ್ಯವಾಗಿ 7 ರಿಂದ 14 ದಿನ. ಆದರೆ ಕೆಲವೊಮ್ಮೆ ಈ ಅವಧಿ 5 ದಿನಗಳಷ್ಠು ಕಡಿಮೆ ಇದ್ದರೆ, ಕೆಲವೊಮ್ಮೆ 21 ದಿನಗಳ ತನಕದ ಧೀರ್ಘ ಕಾಲವಾಗಿರಬಹುದು.

ಈ ಕಾಯಿಲೆಯ ಗುಣ ಲಕ್ಷಣಗಳು:

ಈಗಾಗಲೇ ನೋಡಿದಂತೆ ಈ ಗುಣಲಕ್ಷಣಗಳು ಈ ಕಾಯಿಲೆಯ ರೋಗಿಯ ಸಂಪರ್ಕಕ್ಕೆ ಬಂದ ಆರೋಗ್ಯವಂತ ವೃತ್ತಿಯಲ್ಲಿ 5 ರಿಂದ 21 ದಿನಗಳ ಅಂತರದಲ್ಲಿ ಕಾಣಿಸಿಕೊಳ್ಳುವುದು. ಮೊದಲ ಲಕ್ಷಣಗಳು-ಚಳಿ ಜ್ವರ, ಅತಿಯಾದ ತಲೆನೋವು, ಮೈಕೈನೋವು, ಗಂಟಲುನೋವು ಹಾಗೂ ದುಗ್ದ ಗ್ರಂಥಿ (ಲಿಂಫ್ ಸೋಚ್ಸ್)ಗಳ ಊತ ಕಾಣಿಸಿಕೊಳ್ಳುವುದು.

2) ಜ್ವರ ಪ್ರಾರಂಭವಾದ 1 ರಿಂದ 5 ದಿನಗಳಲ್ಲಿ ಸಮತಟ್ಟಾದ ಕೆಳಪು ದದ್ದುಗಳು ಮುಖದ ಮೇಲೆ, ಬಾಯಿ, ಗಂಟಲಲ್ಲಿ, ಎದೆ, ಬೆನ್ನು, ತೋಳು, ತೊಡೆ, ಕೈ ಕಾಲು, ಜನನಾಂಗಗಳು, ಗುದನಾಳ, ಗುದದ್ವಾರದಲ್ಲಿ ಕಾಣಿಸಿಕೊಳ್ಳುತ್ತವೆ. ಮುಂದೆ ಇವುಗಳು ಗುಳ್ಳೆಗಳಾಗಿ ನಂತರ ಈ ಗುಳ್ಳೆಗಳು ನಸು ಹಳದಿ ಬಣ್ಣದ ಕೀವು(ರಸಿಗೆ)ನಿಂದ ತುಂಬುವುದು. ಮುಂದಿನ ದಿನಗಳಲ್ಲಿ ಈ ರಸಿಗೆಯ ಗುಳ್ಳೆಗಳು ಹೊಟ್ಟಾಗಿ ಚರ್ಮದಿಂದ ಬೇರ್ಪಡುವವು ಹಾಗೂ ಚರ್ಮದಲ್ಲಿನ ಹುಣ್ಣು ಒಣಗುವುದು. ಈ ಗುಳ್ಳೆಗಳು ಕೆಲವೇ ಕೆಲವು ಸಂಖ್ಯೆಯಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಸಾವಿರಾರು ಸಂಖ್ಯೆಯಲ್ಲಿ ಇರಬಹುದು.

ಈ ರಸಿಗೆಯ ಗುಳ್ಳೆಗಳು ಯಾ ಹುಣ್ಣುಗಳು ಬಹಳ ಚಿಕ್ಕದಿರಬಹುದು ಅಥವಾ ಒಂದರೊಡಗೊಂದು ಸೇರಿ ಅತೀ ದೊಡ್ಡದಾಗಬಹುದು. ಆಗ ಇದು ಅತೀವ ನೋವಿಗೆ ಕಾರಣವಾಗಬಹುದು. ಹಾಗೂ ಬಾಯಿ, ಜನನಾಂಗ, ಗುದದ್ವಾರ, ರೆಕ್ಟಂಗಳಲ್ಲಿರುವ ಈ ಗುಳ್ಳೆಗಳು ಅತಿನೋವು ನೀಡಬಹುದು. ಇದರಿಂದ ರೋಗಿಗೆ ಅಹಾರ ಸೇವನೆ, ಮಲ ಮೂತ್ರ ವಿಸರ್ಜನೆಯ ಸಮಯ ಅತ್ಯಂತ ತ್ರಾಸದಾಯಕವಾಗುವುದು ಸಹಜ.

3) ಇನ್ನು ಕೆಲವೇ ಕೆಲವು ಪ್ರಕರಣಗಳಲ್ಲಿ ದೇಹದ ಮೇಲೆ ದದ್ದು, ಗುಳ್ಳೆಗಳು ಕಾಣಿಸಿಕೊಳ್ಳದೆ ಬರೀ ಗುದನಾಳ(ರೆಕ್ಟಂ)ದಲ್ಲಿ ಅತೀವ ನೋವು ಹಾಗೂ ಅಲ್ಲಿಂದ ರಕ್ತಸ್ರಾವ ಕಾಣಿಸಿಕೊಳ್ಳಬಹುದು.

ಈ ಗುಣ ಲಕ್ಷಣಗಳು ಶಿಶು, ಮಕ್ಕಳು ಹಾಗು ಚಿಕ್ಕ ಪ್ರಾಯದವರಲ್ಲಿ, ಗರ್ಭಿಣಿಯರಲ್ಲಿ ಮತ್ತು ರೋಗ ನಿರೋಧಕ ಶಕ್ತಿ ಕುಗ್ಗಿರುವ (ಉದಾ: ಎಚ್.ಐ.ವಿ. ಸೋಂಕಿರುವವರು)ವರಲ್ಲಿ ಬಹಳ ಗಂಭೀರವಾಗಿರುವುದು.

ರೋಗ ನಿಧಾನ ಹೇಗೆ?:

ಈ ಕಾಯಿಲೆ ಹರಡಿರುವ ಪ್ರದೇಶಕ್ಕೆ ಭೇಟಿ ನೀಡಿದ ವ್ಯಕ್ತಿಯಲ್ಲಿ 5 ರಿಂದ 21 ದಿನಗಳಲ್ಲಿ ಈ ಕಾಯಿಲೆಯ ಗುಣ ಲಕ್ಷಣಗಳು ಕಾಣಿಸಿಕೊಂಡರೆ; ಈ ರೋಗಿಗಳ ದೇಹದ ಮೇಲಿರುವ ಗುಳ್ಳೆಗಳಿಂದ ಸಂಗ್ರಹಿಸಿದ ದ್ರವ ಅಥವಾ ಚರ್ಮದ ಮೇಲಿನ ಹೊಟ್ಟನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸುವುದರಿಂದ ಈ ಕಾಯಿಲೆಯನ್ನು ಪತ್ತೆ ಹಚ್ಚಬಹುದು.

ಚಿಕಿತ್ಸೆ: ಹೆಚ್ಚಿನ ವೈರಸ್ ಸೋಂಕುಗಳಿಂದ ಉಂಟಾದ ಕಾಯಿಲೆಗಳಂತೆ ಈ ಕಾಯಿಲೆಯನ್ನು ಗುಣಪಡಿಸುವ ನಿರ್ದಿಷ್ಟ ಔಷಧಿ ಇಲ್ಲ. ಹೆಚ್ಚಾಗಿ ಈ ಕಾಯಿಲೆ 2ರಿಂದ 4 ವಾರಗಳಲ್ಲಿ ತನ್ನಿಂದ ತಾನೇ ಗುಣವಾಗುವುದು.

1) ಬಹಳ ಮಂದಸ್ಥಿತಿಯ ಕಾಯಿಲೆಗೆ ಯಾವುದೇ ಚಿಕಿತ್ಸೆಯ ಅಗತ್ಯ ಇಲ್ಲ.
2) ನೋವಿದ್ದಾಗ ನೋವು ಶಮನಕ ಔಷಧಿ ನೀಡಬಹುದು. ಈ ಗುಳ್ಳೆಗಳೊಂದಿಗೆ ಬ್ಯಾಕ್ಟೀರಿಯಾದ ಸೋಂಕು ತಗಲಿದರೆ ಅದರ ಶಮನಕ್ಕೆ ಅಗತ್ಯವಾದ ಆ್ಯಂಟಿಬಯೋಟಿಕ್ ನೀಡಬಹುದು.
3) ಇನ್ನು ಇದರಿಂದಾಗಿ ರೋಗಿಯ ಸ್ಥಿತಿ ಗಂಭೀರವಾದರೆ ಆಗ ಆ್ಯಂಟಿವೈರಸ್ ಔಷಧ ನೀಡಬೇಕಾಗಬಹುದು. ವಾಂತಿ ಭೇಧಿಯಾಗಿ ಯಾ ಬಾಯಿ ಗಂಟಲಿನಲ್ಲಿ ಗುಳ್ಳೆ ಹುಣ್ಣುಗಳಾಗಿ ಅಹಾರ ಸೇವನೆ ಅಸಾಧ್ಯವಾಗಿ, ದೇಹದಲ್ಲಿ ನಿರ್ಜಲೀಕರಣ ಹಾಗೂ ನಿತ್ರಾಣವಾದಾಗ ರಕ್ತನಾಳದ ಮೂಲಕ ದ್ರವ (ಪ್ಲುಯಿಡ್) ನೀಡಬೇಕಾಗಬಹುದು ಹಾಗೂ ತುಂಬಾ ಗಂಭೀರ ಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗದ ಆಸ್ಪತ್ರೆಗೆ ದಾಖಲು ಮಾಡಬೇಕಾಗುವುದು.

ಈ ಕಾಯಿಲೆಯಿಂದ ಬರಬಹುದಾದ ಗಂಭೀರ ತೊಂದರೆ (ಕೊಂಪ್ಲಿಕೇಷನ್)ಗಳು:

1) ಗಂಭೀರ ಸ್ಥಿತಿಯ ನಿರ್ಜಲೀಕರಣ
2) ಚರ್ಮದ ಇತರ ಸೋಂಕುಗಳು
3) ನ್ಯೂಮೋನಿಯಾ ಕಾಯಿಲೆ
4) ಮಿದುಳಿನ ಪೊರೆಯ ಉರಿಊತ(ಎನ್‌ಕಿಫೆಲೈಟಿಸ್)
5) ಕಣ್ಣಿನ ಕರಿಗೊಂಬೆ(ಕಾರ್ನಿಯಾ)ಯಲ್ಲಿ ಈ ವೈರಸ್‌ನ ಸೋಕಿನಿಂದಾಗುವ ಗುಳ್ಳೆ, ಹುಣ್ಣುಗಳಿಂದಾಗಿ ಕಣ್ಣಿನ ದೃಷ್ಟಿ ನಾಶವಾಗಬಹುದು.

ಆದರೆ ಈ ಕಾಯಿಲೆ ಬಂದ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣದ ರೋಗಗಳು ಯಾವುದೇ ಗಂಭೀರ ತೊಂದರೆಗೆ ಒಳಗಾಗದೆ 2-4 ವಾರದಲ್ಲಿ ಗುಣ ಮುಖರಾಗುತ್ತಾರೆ.
ತಡೆಗಟ್ಟುವಿಕೆ:

ಈಗಾಗಲೇ ಹೇಳಿದಂತೆ ಅಪರೂಪವಾಗಿದ್ದರೂ ಈ ಕಾಯಿಲೆ ಕೋವಿಡ್-19 ರಂತೆ ಹೊಸ ಕಾಯಿಲೆ ಅಲ್ಲ. ಆದರೆ ಇದರ ಗುಣಲಕ್ಷಣಗಳು ಸಾಧಾರಣವಾಗಿ ಸಿಡುಬಿನ (ಸ್ಮಾಲ್‌ಪಾಕ್ಸ್) ಗುಣಲಕ್ಷಣಗಳನ್ನೇ ಹೋಲುವುದರಿಂದ ಈ ಕಾಯಿಲೆಯನ್ನು ಪತ್ತೆ ಹಚ್ಚುವ ಪ್ರಮಾಣ ಕಡಿಮೆ ಇತ್ತು. 1980 ರಲ್ಲಿ ಪ್ರಪಂಚದಿಂದ ಸಿಡುಬು ನಿರ್ಮೂಲನೆ ಘೋಷಿಸಿದ ನಂತರ ಸಿಡುಬು ತಡೆಗಟ್ಟುವ ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದೆ. ಈ ಲಸಿಕೆ ಎಮ್ ಪೋಕ್ಸ್ ತಡೆಗಟ್ಟುವಲ್ಲೂ ಸಹಕಾರಿ. ಈ ಕಾಯಿಲೆಯ ಹೆಚ್ಚಿನ ಪತ್ತೆ ಮತ್ತು ಹೆಚ್ಚಳಕ್ಕೆ ಇವುಗಳ ಕಾರಣವಾಗಿವೆ ಹಾಗೂ ಹಲವು ಆಫ್ರಿಕಾದ ದೇಶಗಳಲ್ಲಿ ಇದು ಎಂಡೆಮಿಕೆ (ಸಾಮಾನ್ಯವಾಗಿ ನಿರಂತರವಾಗಿರುವ)ಕಾಯಿಲೆ.

ಆದರೂ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಆಗಾಗೆ ಆಸ್ಟ್ರೇಲಿಯಾ ಹಾಗೂ ಯೂರೋಪ್, ಉತ್ತರ ಅಮೇರಿಕಾಗಳ ಕೆಲವು ದೇಶಗಳಲ್ಲಿ ಕಾಣಿಸಿಕೊಂಡಿದ್ದರೂ, ಏಷ್ಯಾ ಖಂಡ ಸೇರಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿಲ್ಲ. ಆದ್ದರಿಂದ ಇಲ್ಲಿನ ಜನರಲ್ಲಿ ಈ ಕಾಯಿಲೆಯ ವಿರುದ್ಧದ ರೋಗ ನಿರೋಧಕ ಶಕ್ತಿ ಕಡಿಮೆ. ಹೀಗಾಗಿ ಈ ಕಾಯಿಲೆ ಹರಡದಂತೆ ಎಚ್ಚರಿಗೆ ವಹಿಸುವುದು ಅತೀ ಅಗತ್ಯ. ಅದರಲ್ಲೂ ಸ್ವೀಡನ್‌ನಲ್ಲಿ ಕಾಣಿಸಿಕೊಂಡ ಈ ಕಾಯಿಲೆಯ ವೈರಸ್ ರೋಗಿಗಳಲ್ಲಿ ಗಂಭೀರ ಕಾಯಿಲೆಯನ್ನು ಉಂಟು ಮಾಡಿ ಶೇ. 10ರಷ್ಟು ಸಾವನ್ನುಂಟು ಮಾಡುವ ಸಾಮರ್ಥ್ಯ ಹೊಂದಿದೆ.

ಹಾಗೂ ಪಾಕಿಸ್ತಾನದಲ್ಲಿ ಏಷ್ಯಾ ಖಂಡದ ಮೊತ್ತ ಮೊದಲ ಈ ಕಾಯಿಲೆಯ ಪ್ರಕರಣ ಕಾಣಿಸಿಕೊಂಡಿದ್ದು ಈ ಲೇಖನ ಬರೆಯುವ ತನಕ ಅದು ತರುವ ಕಾಯಿಲೆಯ ತೀವ್ರತೆಯ ಬಗೆಗೆ ತಿಳಿದಿಲ್ಲ.

ಹಾಗಾಗಿ ಈ ಕಾಯಿಲೆಯಿಂದ ಪಾರಾಗಲು ಹೆಚ್ಚಿನ ಗಮನ ಅಗತ್ಯ. ಆರೋಗ್ಯವಂತ ವ್ಯಕ್ತಿಗಳು ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮಗಳು.

1) ಈ ಎಮ್ ಪೋಕ್ಸ್ ರೋಗ ಸಮಾಜದಲ್ಲಿ ಕಾಣಿಸಿಕೊಂಡರೆ-ಆಗ ಯಾವುದೇ ವ್ಯಕ್ತಿ ಕೆಮ್ಮುತ್ತಿದ್ದರೆ, ಸೀನುತ್ತಿದ್ದರೆ ಅಥವಾ ಇನ್ನಿತರ ಈ ಕಾಯಿಲೆಯ ಗುಣಲಕ್ಷಣಗಳಿಂದ ಬಳಲುತ್ತಿದ್ದರೆ ಅವರಿಂದ ದೂರವಿರುವುದು ಅಗತ್ಯ. ಅದರ ದೈಹಿಕ ಹಾಗೂ ಲೈಂಗಿಕ ಸಂಪರ್ಕ ಮಾಡದಿರಿ. ರೋಗಿಗಳು ಉಪಯೋಗಿಸುವ ಯಾವುದೇ ವಸ್ತುವಿನ ಸಂಪರ್ಕದಿಂದ ದೂರವಿರಿ. ಈ ಕಾಯಿಲೆ ಎಂಡೆಮಿಕ್ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿದರೆ ಆಗ ಮೇಲೆ ಹೇಳಿದ ಜಾಗ್ರತೆಯೊಂದಿಗೆ, ಈ ಕಾಯಿಲೆ ಹರಡಬಹುದಾದ ಅಲ್ಲಿನ ಪ್ರಾಣಿಗಳಿಂದ ದೂರವಿರಿ. ಹಾಗೂ ರೋಗಿ ಕಾಯಿಲೆಯಿಂದ ಗುಣಮುಕ್ತರಾದ 12 ವಾರಗಳ ತನಕ ಅದರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಾಗ ನಿರೋಧ್ ಉಪಯೋಗ ಉತ್ತಮ.

2) ರೋಗಿಗಳು ಈ ಕಾಯಿಲೆ ಪರರಿಗೆ ಹರಡದಂತೆ ತೆಗೆದುಕೊಳ್ಳಬೇಕಾದ ಜಾಗ್ರತೆ-ತಮ್ಮನ್ನು ಪರರಿಂದ ಬೇರ್ಪಡಿಸುವುದು ಅವಶ್ಯಕ. ಕೆಮ್ಮುವಾಗ, ಸೀನುವಾಗ ಇತರರಿಗೆ ದ್ರವದ ಸೂಕ್ಷö್ಮ ಹನಿ ಸಿಡಿಯದಂತೆ ಮುಖದ ಮಾಸ್ಕ್ ಉಪಯೋಗ ಅಗತ್ಯ. ತಮ್ಮ ದೇಹದಲ್ಲಾದ ಗುಳ್ಳೆ, ಹುಣ್ಣುಗಳು, ದ್ರವ, ಹೊಟ್ಟುಗಳು ಇತರರ ಯಾ ಇತರೆ ವಸ್ತುಗಳ ಸಂಪರ್ಕಕ್ಕೆ ಬರದಂತೆ ಅದನ್ನು ಸಂಪೂರ್ಣ ಮುಚ್ಚುವಂತೆ ಬಟ್ಟೆ ಧರಿಸುವುದು ಸೂಕ್ತ.

3) ವೈದ್ಯಕೀಯ ಸಿಬ್ಬಂದಿಗಳು ಅಥವಾ ಮನೆಯಲ್ಲಿ ಈ ರೋಗಿಗಳ ಆರೈಕೆ ನೋಡಿಕೊಳ್ಳುವವರು ಬಾಯಿ, ಮೂಗು, ಕಣ್ಣುಗಳ ರಕ್ಷಣೆಗೆ ಮುಖದ ಮಾಸ್ಕ್ ಹಾಕಿಕೊಳ್ಳುವುದು, ಕೈಗಳಿಗೆ ಗ್ಲೌಸ್ ಧರಿಸುವುದು ಹಾಗೂ ಡಿಸ್ಪೋಸೆಬಲ್ ಗೌನ್ಸ್ಗಳನ್ನು ಹಾಕಿಕೊಳ್ಳುವುದು ಅವಶ್ಯಕ.

ನಮ್ಮ ದೇಶದಲ್ಲಿ ಈ ಕಾಯಿಲೆಯ ಧೀರ್ಘಕಾಲಿಕ, ನಿರಂತರ ಸೋಂಕಿನ ಸಂಭವ ಕಡಿಮೆಯಾಗಿ ಕಾಣುತ್ತಿದೆ. ಎಚ್.ಐ.ವಿ. ಸೋಂಕಿತರಲ್ಲಿ ಈ ಸೋಂಕು ಹರಡುವ ಸಂಭವ ಹೆಚ್ಚಾಗಿರುವುದರಿಂದ `ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ಈಗೊಂದು ವರ್ಷದಿಂದ ಹೆಚ್ಚಾಗಿ ಈ ಸೋಂಕಿತರು ಸೇರಿ ಇತರರಲ್ಲೂ ಈ ಕಾಯಿಲೆಗಾಗಿ ಅವರ ದೇಹ ದ್ರವ ಪರೀಕ್ಷೆ (ಸೀರೋಸರ್ವೆ) ಯನ್ನು ನಡೆಸುತ್ತಿದೆ.

ಇನ್ನು ತಮಿಳುನಾಡು ಸಾರ್ವಜನಿಕ ಆರೋಗ್ಯ ಹಾಗೂ ರೋಗ ತಡೆಗಟ್ಟುವಿಕೆಯ ಮುಖ್ಯಸ್ಥರು ತಮ್ಮ ರಾಜ್ಯದ ವಿಮಾನ ಹಾಗೂ ಹಡಗು ನಿಲ್ದಾಣದ ಆರೋಗ್ಯ ಸೇವೆಯ ಮುಖ್ಯಸ್ಥರಿಗೆ ಈ ಕಾಯಿಲೆ ಎಂಡೆಮಿಕ್ ಆಗಿರುವ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ಗಮನ ನೀಡಲು ಸಲಹೆ ನೀಡಿದ್ದಾರೆ.

ಇನ್ನೂ ಕೇಂದ್ರ ಸರ್ಕಾರ ದೇಶದ ಎಲ್ಲಾ ವಿಮಾನ, ಹಡಗು ನಿಲ್ದಾಣ ಹಾಗೂ ಭೂಪ್ರದೇಶದ ಮೂಲಕ ದೇಶ ಪ್ರವೇಶಿಸುವ ಪ್ರಮುಖ ಸ್ಥಳಗಳಿಂದ ದೇಶ ಪ್ರವೇಶಿಸುವವರ ಆರೋಗ್ಯದ ಬಗ್ಗೆ ಜಾಗರೂಕತೆ ಪಡಿಸಲು ರಾಜ್ಯಗಳಿಗೆ ಸಲಹೆ ನೀಡಿದೆ. ಹಾಗೂ ಈ ಕಾಯಿಲೆ ಪತ್ತೆ ಹಚ್ಚುವಿಕೆ ಹಾಗೂ ರೋಗಿಗಳನ್ನು ಬೇರ್ಪಡಿಸಿ ಶುಶ್ರೂಷೆ ನೀಡಲು ಅಗತ್ಯವಾದ ಪ್ರಯೋಗಾಲಯ ಆರೋಗ್ಯ ಸೌಲಭ್ಯಗಳನ್ನು ಸಿದ್ದವಾಗಿಡಲು ಸಲಹೆ ನೀಡಿದೆ.

ಇನ್ನು ಈ ಕಾಯಿಲೆಗೂ ಸಿಡುಬು ಕಾಯಿಲೆಗೂ ಹಲವು ಸಾಮ್ಯಗಳಿದ್ದರೂ ಇವುಗಳಲ್ಲಿ ಹಲವು ವ್ಯತ್ಯಾಸಗಳೂ ಇವೆ.

ಎಮ್ ಪೋಕ್ಸ್ ಸಿಡುಬಿನಷ್ಟು ಶೀಘ್ರವಾಗಿ ಹರಡದು. ಎಮ್ ಪೋಕ್ಸ್ನಲ್ಲಿ ದುಗ್ದ ಗ್ರಂಥಿಗಳು ಊದಿಕೊಳ್ಳುತ್ತವೆ. ಸಿಡುಬಿನಲ್ಲಿ ಈ ಗ್ರಂಥಿಗಳೂ ಊದಿಕೊಳ್ಳುವುದಿಲ್ಲ. ಎಮ್ ಪೋಕ್ಸ್ನಲ್ಲಿ ಮರಣ ಪ್ರಮಾಣ ಶೇ. 1 ರಿಂದ 10. ಆದರೆ ಸಿಡುಬಿನಲ್ಲಿ ಮರಣ ಪ್ರಮಾಣ ಶೇ. 30 ರಿಂದ 50.

ಸಿಡುಬು ಕಾಯಿಲೆಯ ವೈರಸ್ ಮನುಷ್ಯರಲ್ಲಿ ಮಾತ್ರ ಇರುತ್ತದೆ. ಎಮ್ ಪೋಕ್ಸ್ ಕೆಲವು ಪ್ರಾಣಿಗಳಲ್ಲಿ ಇದ್ದು ಅವುಗಳಿಂದ ಮನುಷ್ಯರಿಗೂ ಹಾಗೂ ಮುಂದೆ ಮನುಷ್ಯರಿಂದ ಮನುಷ್ಯರಿಗೂ ಹರಡುತ್ತವೆ.

ಸಿಡುಬು ಕಾಯಿಲೆ ಎಮ್ ಪೊಕ್ಸ್ಗಿಂತ ಹೆಚ್ಚು ಗಂಭೀರ ಕಾಯಿಲೆ.

ಇದನ್ನೂ ನೋಡಿ: ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ‌ ಚಳವಳಿಯ ಪಾತ್ರ – ಜಾನಕಿ ನಾಯರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *