ಕೇಂದ್ರ ತೈಲ ಮಂತ್ರಿ ಧರ್ಮೇಂದ್ರ ಪ್ರಧಾನ್ ಮಾರ್ಚ್ 8ರಂದು ಲೋಕಸಭೆಯಲ್ಲಿ ಕೊಟ್ಟ ಅಂಕಿ-ಅಂಶಗಳ ಪ್ರಕಾರ ಕಳೆದ ಏಳು ವರ್ಷಗಳಲ್ಲಿ ಅಡುಗೆ ಅನಿಲದ ಬಲೆ ಎರಡು ಪಟ್ಟು ಅಗಿದೆ. ಇದೇ ವೇಳೆಯಲ್ಲಿ ಅಡುಗೆ ಅನಿಲದ ಮೇಲಿನ ವಿಧಿಸಿದ ತೆರಿಗೆಗಳಿಂದ ಕೇಂದ್ರ ಸರಕಾರ ಸಂಗ್ರಹಿಸಿರುವ ಮೊತ್ತದಲ್ಲಿ 459% ಏರಿಕೆಯಾಗಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಮಂತ್ರಿಗಳು ನೀಡಿದ ಅಧಿಕೃತ ಅಂಕಿ-ಅಂಶಗಳು ಹೀಗಿವೆ:
- ಮಾರ್ಚ್ 1, 2014 ರಲ್ಲಿ ಅಂದರೆ 2014ರ ಲೋಕಸಭಾ ಚುನಾವಣೆಗಳು ನಡೆಯುವ ವೇಳೆಗೆ 14.2 ಕೆ.ಜಿ. ಅಡುಗೆ ಅನಿಲದ ಸಿಲಿಂಡರ್ ನ ಬೆಲೆ ರೂ.410.5 . ಮಾರ್ಚ್ 1, 2021ರಂದು ಅದು ರೂ.819 ಆಗಿದೆ. ಇದೇ ಡಿಸೆಂಬರ್ 2020ಲ್ಲೂ ಅದರ ಬೆಲೆ ಇದ್ದದ್ದು ರೂ.594.
- ಪಡಿತರದ ಮೂಲಕ ಬಡವರಿಗೆ ಹಂಚುವ ಸೀಮೆ ಎಣ್ಣೆ ಬೆಲೆ ಮಾರ್ಚ್ 2014ರಲ್ಲಿ ರೂ.14.96 ಇತ್ತು. ಮಾರ್ಚ್ 2021ರಲ್ಲಿ ಇದು ರೂ.35.35. ಅಂದರೆ ಎರಡು ಪಟ್ಟಿಗಿಂತಲೂ ಹೆಚ್ಚು.
ಕಳೆದ ಎರಡು ವರ್ಷಗಳಲ್ಲಿ ಸಣ್ಣ ಬೆಲೆಯೇರಿಕೆಗಳು ಅಡುಗೆ ಅನಿಲ ಮತ್ತು ಪಡಿತರ ಸೀಮೆಎಣ್ಣೆಯ ಮೇಲಿನ ಸಬ್ಸಿಡಿಗಳನ್ನು ನಿರ್ಮೂಲ ಮಾಡಿವೆ!

“ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಅನುಕ್ರಮವಾಗಿ ಜೂನ್26,2010ರಿಂದ ಮತ್ತು ಅಕ್ಟೋಬರ್ 19. 2014ರಿಂದ ಮಾರುಕಟ್ಟೆ ನಿರ್ಧಾರಿತಗೊಳಿಸಿತು” ಎಂದು ಮಂತ್ರಿಗಳು ತಮ್ಮ ಉತ್ತರದಲ್ಲಿ ಹೇಳಿದರು. ಅಂದರೆ ಹಿಂದಿನ ಯುಪಿಎ ಸರಕಾರ ಪೆಟ್ರೋಲ್ ಬೆಲೆಗಳನ್ನು ಅದನ್ನು ತೈಲ ಮಾರಾಟ ಕಂಪನಿಗಳು ನಿರ್ಧರಿಸಲು ಬಿಟ್ಟಿತು. ಅದರಿಂದ ಆದ ಬೆಲೆಯೇರಿಕೆಗಳನ್ನು ಆಗ ಪ್ರತಿಪಕ್ಷವಾಗಿದ್ದ ಬಿಜೆಪಿ ಕಟುವಾಗಿ ವಿರೋಧಿಸುತ್ತಿದ್ದರೂ, ಅದು ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಬೆಲೆ ನಿರ್ಧಾರವನ್ನು ವಾಪಾಸು ತೆಗೆದುಕೊಳ್ಳುವ ಬದಲು ಅದನ್ನು ಮುಂದುವರಿಸಿದ್ದೇ ಅಲ್ಲದೆ, ಸರಕು ಸಾಗಾಣಿಕೆ ಹೆಚ್ಚಾಗಿ ಅವಲಂಬಿಸಿರುವ ಡೀಸೆಲ್ ಬೆಲೆಗಳಿಗೂ ಅದನ್ನು ವಿಸ್ತರಿಸಿತು!
ಬೆಲೆಯೇರಿಕೆಗಳ ಹೊಣೆಯನ್ನು ಈ ರೀತಿ ತೈಲ ಮಾರಾಟ ಕಂಪನಿಗಳ ಮೇಲೆ ಹೊರಿಸುತ್ತಲೇ, ಇವುಗಳ ಮೇಲಿನ ಅಬಕಾರಿ ಸುಂಕಗಳನ್ನು ನವಂಬರ್ 2014ರಿಂದ ಜನವರಿ 2016ರ ನಡುವೆ 9 ಬಾರಿ ಏರಿಸಿತು. ಇದರಿಂದಾಗಿ, ಈ 15 ತಿಂಗಳ ಅವಧಿಯಲ್ಲಿ, ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಇಳಿಯುತ್ತಿದ್ದರೂ, ಅದರ ಪ್ರಯೋಜನ ಭಾರತದ ಬಳಕೆದಾರಿಗೆ ಸಿಗದಂತಾಯಿತು; ಪೆಟ್ರೋಲ್ ಮೇಲಿನ ಸುಂಕದಲ್ಲಿ ಲೀಟರಿಗೆ ರೂ.11.77 ಮತ್ತು ಡೀಸೆಲ್ ಮೇಲೆ ರೂ.13.47 ರಷ್ಟು ಏರಿತು. ಅಕ್ಟೋಬರ್ 2017ರಲ್ಲಿ ಸುಂಕವನ್ನು ಲೀಟರಿಗೆ ರೂ.2, ಒಂದು ವರ್ಷದ ನಂತರ ಮತ್ತೆ ರೂ.1.50ರಷ್ಟು ಇಳಿಸಿದರೂ, ಜುಲೈ 2019ರಲ್ಲಿ ಮತ್ತೆ ಲೀಟರಿಗೆ ರೂ.2ರಂತೆ ಏರಿಸಿತು. ಮತ್ತೆ ಮಾರ್ಚ್ 2020ರಲ್ಲಿ ಲೀಟರಿಗೆ ರೂ.3, ಮತ್ತು ಮೇ 2020ರಲ್ಲಿ ಪೆಟ್ರೋಲ್ ಮೇಲೆ ಲೀಟರಿಗೆ ರೂ.10 ಮತ್ತು ಡೀಸೆಲ್ ಮೇಲೆ ರೂ.13 ರಂತೆ ಏರಿಸಿತು.
- ಕಳೆದ ಏಳು ವರ್ಷಗಳಲ್ಲಿ 12 ಬಾರಿ ಸುಂಕಗಳನ್ನು ಏರಿಸಿದ ಪರಿಣಾಮವಾಗಿ ಈಗ ಕೇಂದ್ರ ಸರಕಾರ ಪೆಟ್ರೋಲ್ ಮೇಲೆ ಲೀಟರಿಗೆ ರೂ.32.90 ಮತ್ತು ಡೀಸೆಲ್ ಮೇಲೆ ರೂ. 31.98 ಸುಂಕ ವಿಧಿಸುತ್ತಿದೆ.
- ಇದರಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕಗಳಿಂದ ಕೇಂದ್ರ ಸರಕಾರ 2013ರಲ್ಲಿ ರೂ.52, 537 ಕೋಟಿ ಸಂಗ್ರಹಿಸಿದ್ದರೆ, 2019-20ರಲ್ಲಿ ಇದು ರೂ. 2.13 ಲಕ್ಷ ಕೋಟಿ ಗೇರಿತು. 2020-21ರಲ್ಲಿ ಈ 11 ತಿಂಗಳಲ್ಲೇ ಅದು ರೂ.2.94 ಲಕ್ಷ ಕೋಟಿ ಎಂದು ಮಂತ್ರಿಗಳು ಸಲ್ಲಿಸಿರುವ ಅಂಕಿ-ಅಂಶಗಳು ಹೇಳುತ್ತವೆ. ಅಂದರೆ ಐದೂವರೆ ಪಟ್ಟಿಗಿಂತಲೂ ಹೆಚ್ಚು !
- ಪೆಟ್ರೋಲ್, ಡೀಸೆಲ್, ವಿಮಾನ ಇಂಧನ, ನೈಸರ್ಗಿಕ ಇಂಧನ ಮತ್ತು ಕಚ್ಚಾತೈಲದ ಮೇಲಿನ ಅಬಕಾರಿ ಸುಂಕಗಳಿಂದ ಎಪ್ರಿಲ್ 2020 ರಿಂದ ಜನವರಿ 2021ರ 10 ತಿಂಗಳ ಅವಧಿಯಲ್ಲಿ ರೂ.3.01ಲಕ್ಷ ಕೋಟಿ ಸಂಗ್ರಹಿಸಿದೆ.