ದಿಗ್ಬಂಧನವೇನೋ ಸರಿ, ಆದರೆ ಜನಗಳ ಪಾಡೇನು?

ಪ್ರಕಾಶ ಕಾರಟ್

ಆರೋಗ್ಯ ಪರಿಣಿತರ ಪ್ರಕಾರ ಮೂರು ವಾರಗಳ ಸಂಪೂರ್ಣ ದಿಗ್ಬಂಧನ ಈ ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯವಾಗಿದೆ. ಆದರೆ ಇದನ್ನು ನಿರ್ಲಕ್ಷ್ಯದಿಂದ ಮತ್ತು ಹೃದಯಹೀನವಾಗಿ ಮಾಡಲಾಗಿದೆ. ಏಕೆಂದರೆ, ನಮ್ಮ ಜನಸಂಖ್ಯೆಯ ಬಹುದೊಡ್ಡ ವಿಭಾಗಕ್ಕೆ ಇದರಿಂದಾಗಿ ತಮ್ಮ ಕುಟುಂಬಗಳ ಹಸಿವು ಹಿಂಗಿಸಲು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಹಣವಿಲ್ಲದಂತಾಗುತ್ತದೆ ಎಂಬುದು ವಾಸ್ತವ ಸಂಗತಿ. ಇಂತಹ ಒಂದು ತೀವ್ರತರ ಹೆಜ್ಜೆಯನ್ನು ಇಡುವ ಮೊದಲು ಆರ್ಥಿಕ ಉದ್ದಿಮೆಗಳನ್ನು ರಕ್ಷಿಸುವ ಮತ್ತು ಒಟ್ಟು ಆದಾಯವನ್ನು ಕಳಕೊಳ್ಳುವ ಜನಗಳಿಗೆ ಪರಿಹಾರ ಒದಗಿಸುವ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಜವಾಬ್ದಾರಿಯಾಗಿತ್ತು. ಆದರೆ ಅದೇನನ್ನೂ ಮಾಡಲಿಲ್ಲ.

ಪ್ರಧಾನ ಮಂತ್ರಿಗಳಿಂದ ಕೊರೊನ ವೈರಸ್ ಮಹಾಮಾರಿಯನ್ನು ಎದುರಿಸುವ ಬಗ್ಗೆ ಎರಡು ರಾಷ್ಟ್ರೀಯ ಪ್ರಸಾರ ಭಾಷಣಗಳು ಬಂದವು. ಆದರೆ ಮುಂಬರಲಿರುವ ಆರ್ಥಿಕ ಹಿಂಜರಿತ ಮತ್ತು ಜನಗಳ ಜೀವನಾಧಾರಗಳು ಮತ್ತು ಆದಾಯಗಳಿಗೆ ಆಗಿರುವ ಬೃಹತ್ ಭಂಗವನ್ನು ನಿಭಾಯಿಸಲು ಸರಕಾರದಿಂದ ಯಾವುದೇ ಆರ್ಥಿಕ ಕಮ್ರಗಳ ಪ್ರಸ್ತಾಪವೇ ಇವುಗಳಲ್ಲಿ ಇರಲಿಲ್ಲ.

ಮಾರ್ಚ್ ೨೪ರಂದು ಪ್ರಧಾನ ಮಂತ್ರಿಗಳ ಎರಡನೇ ಭಾಷಣ ೨೧ದಿನಗಳ ದೇಶವ್ಯಾಪಿ ದಿಗ್ಬಂಧನವನ್ನು (ಲಾಕ್‌ಡೌನ್) ಪ್ರಕಟಿಸಿತು. ಇಂತಹ ಒಂದು ತೀವ್ರತರ ಹೆಜ್ಜೆಯನ್ನು ಇಡುವ ಮೊದಲು ಆರ್ಥಿಕ ಉದ್ದಿಮೆಗಳನ್ನು ರಕ್ಷಿಸುವ ಮತ್ತು ಒಟ್ಟು ಆದಾಯವನ್ನು ಕಳಕೊಳ್ಳುವ ಜನಗಳಿಗೆ ಪರಿಹಾರ ಒದಗಿಸುವ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಜವಾಬ್ದಾರಿಯಾಗಿತ್ತು. ಆದರೆ ಅದೇನನ್ನೂ ಮಾಡಲಿಲ್ಲ.

ಮಾರ್ಚ್ ೨೦ರಂದು ತನ್ನ ಮೊದಲ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ಒಂದು ಜನತಾ ಕರ್ಫ್ಯೂ ಪ್ರಕಟಿಸಿದರು. , ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಅರ್ಥವ್ಯವಸ್ಥೆಯ ಬಗ್ಗೆ ಒಂದು ಕಾರ್ಯಪಡೆಯನ್ನು ರಚಿಸಿರುವುದಾಗಿಯೂ ಹೇಳಿದರು. ಆದರೆ ಅದರ ಫಲಿತಾಂಶವೇನೂ ಕಾಣ ಬರಲಿಲ್ಲ. ಐದು ದಿನಗಳ ನಂತರ ಪ್ರಧಾನಿಗಳ ಎರಡನೇ ಭಾಷಣದಲ್ಲಿ ಈ ವಿಷಯದಲ್ಲಿ ಕೆಲವು ಪ್ರಕಟಣೆಗಳನ್ನು ನಿರೀಕ್ಷಿಸಲಾಗಿತ್ತು.

ಈ ಭಾಷಣದಲ್ಲಿದ್ದ ಒಂದೇ ಒಂದು ಪ್ರಕಟಣೆಯೆಂದರೆ ಹೆಚ್ಚು ವೆಂಟಿಲೇಟರುಗಳು, ವೈಯಕ್ತಿಕ ಸುರಕ್ಷಾ ಉಡುಗೆ-ತೊಡಿಗೆಗಳು ಮತ್ತು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಶುಶ್ರೂಷೆ ವಾರ್ಡ್‌ಗಳಿಗೆಂದು ೧೫,೦೦೦ ಕೋಟಿ ರೂ.ಗಳನ್ನು ಆರೋಗ್ಯ ವಲಯಕ್ಕೆ ಕೊಡಲಾಗುವುದು ಎಂದು. ಆದರೆ ಹೆಚ್ಚು ತಪಾಸಣಾ ಕಿಟ್‌ಗಳ ಮತ್ತು ಬಹಳ ಹಿಂದೆ ಬಿದ್ದಿರುವ ತಪಾಸಣಾ ವ್ಯವಸ್ಥೆಯ ವಿಸ್ತರಣೆಯ ಪ್ರಸ್ತಾಪವೂ ಇರಲಿಲ್ಲ.

ಈ ಹಣವನ್ನು ಪ್ರಕಟಿಸಿರುವುದು ದೇಶದಲ್ಲಿ ಮೊದಲ ಕೊರೊನ ವೈರಸ್ ಪ್ರಕರಣ ದಾಖಲಾದ ೫೩ ದಿನಗಳ ನಂತರ! ದೇಶದೆಲ್ಲೆಡೆ ಡಾಕ್ಟರುಗಳು ಮತ್ತು ನರ್ಸ್‌ಗಳು ಸುರಕ್ಷಾ ಸಾಧನಗಳ ಕೊರತೆಯ ಬಗ್ಗೆ ದೂರುತ್ತಲೇ ಇದ್ದರು. ಇದನ್ನು ಆದ್ಯತೆಯ ಮೇಲೆ ತಗೊಳ್ಳಬೇಕಾಗಿತ್ತು. ಆರೋಗ್ಯ ಮೂಲರಚನೆಗಳಲ್ಲಿ ಅಗತ್ಯವಾಗಿರುವ ಅಗಾಧ ವಿಸ್ತರಣೆಯನ್ನು ನೋಡಿದರೆ ಮಂಜೂರು ಮಾಡಿರುವ ಈ ಮೊತ್ತ ಏನೇನೂ ಸಾಲದು. ಆರೋಗ್ಯ ಒಂದು ರಾಜ್ಯಪಟ್ಟಿಯಲ್ಲಿನ ವಿಷಯವಾದ್ದರಿಂದ ಕೇಂದ್ರ ಸರಕಾರ ರಾಜ್ಯಸರಕಾರಗಳಿಗೆ ಉದಾರ ಅನುದಾನಗಳನ್ನು ನೀಡಬೇಕು. ಈ ಮಹಾಮಾರಿಯಾದರೂ ಸಾರ್ವಜನಿಕ ಆರೋಗ್ಯಪಾಲನೆಯನ್ನು ನಿರ್ಲಕ್ಷಿಸಿ ಖಾಸಗೀಕೃತ ಆರೋಗ್ಯ ವಲಯವನ್ನು ಪ್ರೋತ್ಸಾಹಿಸುವ ತಪ್ಪಿನ ಬಗ್ಗೆ ಕೇಂದ್ರ ಮತ್ತು ಹೆಚ್ಚಿನ ರಾಜ್ಯಸರಕಾರಗಳ ಕಣ್ಣು ತೆರೆಸಬೇಕು.

ಆರೋಗ್ಯ ಪರಿಣಿತರ ಪ್ರಕಾರ ಮೂರು ವಾರಗಳ ಸಂಪೂರ್ಣ ದಿಗ್ಬಂಧನ ಈ ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯವಾಗಿದೆ. ಆದರೆ ಇದನ್ನು ನಿರ್ಲಕ್ಷ್ಯದಿಂದ ಮತ್ತು ಹೃದಯಹೀನವಾಗಿ ಮಾಡಲಾಗಿದೆ. ಏಕೆಂದರೆ, ನಮ್ಮ ಜನಸಂಖ್ಯೆಯ ಬಹುದೊಡ್ಡ ವಿಭಾಗಕ್ಕೆ ಇದರಿಂದಾಗಿ ತಮ್ಮ ಕುಟುಂಬಗಳ ಹಸಿವು ಹಿಂಗಿಸಲು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಹಣವಿಲ್ಲದಂತಾಗುತ್ತದೆ ಎಂಬುದು ವಾಸ್ತವ ಸಂಗತಿ. ಅನೌಪಚಾರಿಕ ವಲಯದಲ್ಲಿ ದಿನಗೂಲಿಗಳು, ಕ್ಯಾಶುವಲ್ ಕಾರ್ಮಿಕರು ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ಅನೌಪಚಾರಿಕ ವಲಯದಲ್ಲಿ ೩೯ ಕೋಟಿ ಕಾರ್ಮಿಕರಿದ್ದಾರೆ. ಅವರಲಿ ಹೆಚ್ಚಿನವರು ಉದ್ಯೋಗ ಕಳಕೊಂಡಿದ್ದಾರೆ. ಅವರನ್ನು ಅವರ ಮನೆಗಳಿಗೆ ಸೀಮಿತಗೊಳಿಸುವ ಮೊದಲು ಸರಕಾರ ಅವರಿಗೆ ಉಚಿತ ರೇಶನ್‌ಗಳನ್ನು ಮತ್ತು ಸ್ವಲ್ಪ ಆದಾಯ ಬೆಂಬಲವನ್ನು ಒದಗಿಸಬೇಕಾಗಿತ್ತು.; ಜನಧನ ಖಾತೆಯಲ್ಲಿ ೫೦೦೦  ರೂ.ಗಳನ್ನು ಹಾಕಬಹುದಾಗಿತ್ತು.

ವಲಸೆ ಕಾರ್ಮಿಕರು ಸಾವಿರ ಸಾವಿರ ಸಂಖ್ಯೆಯಲ್ಲಿ ದಿಗ್ಬಂಧನದ ಮೊದಲೂ ಮನೆಗಳಿಗೆ ಹೋಗಲಾರದೆ ಸಿಲುಕಿ ಕೊಂಡಿದ್ದರು. ಕೇಂದ್ರ ಸರಕಾರಕ್ಕೆ ಅವರ ಬಗ್ಗೆ ಕಾಳಜಿ ಇದ್ದಂತಿಲ್ಲ.

ಕೆಲವು ರಾಜ್ಯ ಸರಕಾರಗಳು ಮಾತ್ರವೇ ಸ್ವಲ್ಪ ಪರಿಹಾರಗಳನ್ನು ಪ್ರಕಟಿಸಿವೆ. ಎಲ್ಲ ಬಿಪಿಎಲ್/ಎಪಿಎಲ್ ಕಾರ್ಡುದಾರರಿಗೆ ಒಂದು ತಿಂಗಳ ಉಚಿತ ರೇಶನ್, ಪೆನ್ಶನ್ ಬಾಕಿ ಮತ್ತು ಮುಂಗಡ ಪಾವತಿ, ಮಕ್ಕಳ ಸ್ಕೀಮ್‌ಗಳಲ್ಲಿ ಅವರ ಮನೆಗಳಿಗೆ ಮಧ್ಯಾಹ್ನದ ಊಟದ ಕಿಟ್‌ಗಳನ್ನು ಒದಗಿಸಿರುವ ಕೇರಳದ ಎಲ್‌ಡಿಎಫ್ ಸರಕಾರ ಉದ್ಯೋಗಹೀನ ವಲಸೆ ಕಾರ್ಮಿಕರಿಗೆ ಕೂಡ ಕ್ರಮಗಳನ್ನು ಕೈಗೊಂಡಿದೆ ಎಂಬುದು ಗಮನಾರ್ಹ. ಉಳಿದುಕೊಳ್ಳುವ ಕೇಂದ್ರಗಳಿಗೆ ಅವರನ್ನು ವರ್ಗಾಯಿಸಿದೆ, ಅವರಿಗೆ ಉಚಿತ ರೇಶನ್‌ಗಳನ್ನು ಕೊಟ್ಟಿದೆ ಮತ್ತು ವೈದ್ಯಕೀಯ ತಪಾಸಣೆಗಳನ್ನೂ ಮಾಡಿಸಿದೆ. ದಿಲ್ಲಿ, ಪಂಜಾಬ್, ತಮಿಳುನಾಡು ಮತ್ತಿತರ ಕೆಲವು ರಾಜ್ಯ ಸರಕಾರಗಳೂ ನಗದು ವರ್ಗಾವಣೆ ಅಥವ ಉಚಿತ ರೇಶನ್‌ಗಳನ್ನು ಪ್ರಕಟಿಸಿವೆ.

ಇನ್ನು ಸಂಘಟಿತ ವಲಯದ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಪ್ರಧಾನ ಮಂತ್ರಿಗಳು ತಮ್ಮ ಮೊದಲ ಭಾಷಣದಲ್ಲಿ ಅವರನ್ನು ಕೆಲಸದಿಂದ ತೆಗೆದು ಹಾಕಬಾರದು ಅಥವ ಅವರ ಸಂಬಳ ಕಡಿತ ಮಾಡಬಾರದು ಎಂದು ಉದ್ಯೋಗದಾತರಿಗೆ ಮನವಿ ಮಾಡಿಕೊಂಡಿದ್ದರು. ನಂತರ ಕಾರ್ಮಿಕ ಇಲಾಖೆ ಇದೇ ರೀತಿಯ ಸಲಹಾ ಪತ್ರವನ್ನು ಜಾರಿ ಮಾಡಿತ್ತು. ಇಂತಹ ಸದಾಶಯಗಳು ಕೆಲಸ ಮಾಡವು. ಸರಕಾರ ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡರಲ್ಲೂ ಉದ್ಯೋಗಗಳನ್ನು ಮತ್ತು ಸೌಲಭ್ಯಗಳನ್ನು ರಕ್ಷಿಸುವ ಅಧಿಸೂಚನೆಯನ್ನು ಹೊರಡಿಸಬೇಕಾಗುತ್ತದೆ. ಇದು ಕಾಂಟ್ರಾಕ್ಟ್ ಕಾರ್ಮಿಕರಿಗೂ ಅನ್ವಯವಾಗಬೇಕು. ಬ್ರಿಟನ್ನಿನ ಕನ್ಸರ್ವೆಟಿವ್ ಪಕ್ಷದ ಸರಕಾರ ಕೂಡ ಸಂಬಳ ಕೊಡುವುದು ಕಷ್ಟವೆನಿಸುವ  ಕಂಪನಿಗಳ ನೌಕರರ ೮೦ಶೇ.ದಷ್ಟು ಸಂಬಳವನ್ನು ಭರಿಸುವ ಒಂದು ಸ್ಕೀಮನ್ನು ರೂಪಿಸಿದೆ. ಇದು ಮೂರು ತಿಂಗಳ ಅವಧಿಯದಾಗಿದ್ದು, ನಂತರ ಮುಂದುವರೆಸಬಹುದಾದದ್ದು.

ತುಂಬಾ ದುಷ್ಪರಿಣಾಮಗಳಿಗೆ ಈಡಾಗಿರುವ ವಲಯಗಳಿಗೆ ನೆರವಾಗಲು ಹಣಕಾಸು ಪ್ಯಾಕೇಜುಗಳು ಬೇಕಾಗುತ್ತವೆ. ಆದರೆ ಇಂತಹ ನೆರವನ್ನು ನೀಡುವಾಗ ಲೇ-ಆಫ್ ಅಥವ ಸಂಬಳ ಕಡಿತಗಳನ್ನು ಮಾಡಬಾರದು ಎಂಬ ಶರತ್ತನ್ನು ಹಾಕಬೇಕು. ಉದಾಹರಣೆಗೆ, ವಿಮಾನಯಾನ ವಲಯಕ್ಕೆ ನೆರವು ಬೇಕಾಗಿದೆ, ಆದರೆ ಅವರು ಗೋ ಏರ್ ಮಾಡಿದಂತೆ ನೌಕರರ ರಿಟ್ರೆಂಚ್‌ಮೆಂಟ್‌ಗೆ ಇಳಿಯುವುದಾಗಲೀ, ಅಥವ ಇಂಡಿಗೋ ಮಾಡಿದಂತೆ ಸಂಬಳ ಕಡಿತಗಳನ್ನು ಮಾಡಲು ಬಿಡಬಾರದು. ಎಲ್ಲಕ್ಕೂ ಮಿಗಿಲಾಗಿ, ಕೇಂದ್ರ ಸರಕಾರ ರಾಜ್ಯಗಳಿಗೆ ಹೆಚ್ಚಿನ ನಿಧಿಗಳನ್ನು ಪೂರೈಸಬೇಕು, ಮತ್ತು ಅವರ ಸಾಲ ಪಡೆಯುವ ಮಿತಿಗಳನ್ನು ಹೆಚ್ಚಿಸಬೇಕು.

ಕಳೆದ ಕೆಲವು ದಿನಗಳಲ್ಲಿ ತರಕಾರಿಗಳು ಮತ್ತು ಇತರ ಆವಶ್ಯಕ ಸರಕುಗಳ ಬೆಲೆಗಳು ಹಲವು ನಗರಗಳಲ್ಲಿ ಒಮ್ಮೆಲೇ ಏರಿವೆ. ಕೇಂದ್ರ ಸರಕಾರ ರಾಜ್ಯ ಸರಕಾರಗಳ ಜತೆಗೂಡಿ ಆವಶ್ಯಕ ಸರಕುಗಳ ಪೂರೈಕೆಗಳ ಸುಲಲಿತ ಸಾಗಾಟ, ವಿಶೇಷವಾಗಿ ಅಂತರ-ರಾಜ್ಯ ವರ್ಗಾವಣೆಗಳನ್ನು ಖಾತ್ರಿಪಡಿಸಬೇಕು. ಈಗಾಗಲೇ ಸಾಗಾಟಕ್ಕೆ ತೊಂದg ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಸರಕು-ಸಾಮಾನುಗಳಿಗೆ ತಡೆಗಳುಂಟಾಗಿರುವ ವರದಿಗಳು ಬಂದಿವೆ.

ದಿಗ್ಬಂಧನದ ಅಧಿಕೃತ ಅಧಿಸೂಚನೆಯಲ್ಲಿ ಎರಡು ಅಂಶಗಳು ಬಿಟ್ಟು ಹೋಗಿರುವುದು, ಈ ಕ್ರಮ ಕೈಗೊಳ್ಳುವ ಮೊದಲು ಸಾಕಷ್ಟು ಯೋಚಿಸಿರಲಿಲ್ಲ ಮತ್ತು ಸಿದ್ಧತೆಗಳಿರಲಿಲ್ಲ ಎಂಬುದನ್ನು ತೋರಿಸುತ್ತವೆ. ಯಾವ ಸರಕಾರೀ ಇಲಾಖೆಗಳು ಕೆಲಸ ಮಾಡಬೇಕು, ಅವನ್ನು ಮುಚ್ಚಬಾರದು ಎಂಬ ಪಟ್ಟಿಯಲ್ಲಿ ಆರೋಗ್ಯ ಮತ್ತು ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಗಳ ಹೆಸರುಗಳು ಕಾಣೆಯಗಿವೆ. ಈ ಇಲಾಖೆಗಳು ಕಾರ್ಯನಿರತವಾಗಿರದಿದ್ದರೆ, ಮಹತ್ವದ ಆರೋಗ್ಯ ವಲಯ ಮತ್ತು ಅಗತ್ಯ ಸರಕುಗಳ ಪೂರೈಕೆ ಹೇಗೆ ಪರಿಣಾಮಕಾರಿಯಾಗಿರಲು ಸಾಧ್ಯ?  ಕೃಷಿ ವಲಯದಲ್ಲೂ, ಬೆಳೆಗಳ ಉತ್ಪಾದನೆ, ಸಾಗಾಟ, ತರಕಾರಿಗಳು ಮತ್ತು ಹಣ್ಣುಗಳು, ಅವುಗಳ ದಾಸ್ತಾನು, ವಿತರಣೆ ಇತ್ಯಾದಿಗಳ ಕುರಿತಂತೆಯೂ ಈ ದಿಗ್ಬಂಧನ ಅವಧಿಯ ಮಾರ್ಗಸೂಚಿಗಳಿಲ್ಲ. ಮೋದಿ ಸರಕಾರ ದುಡಿಯುವ ಜನಗಳಿಗೆ, ಅದರಲ್ಲೂ ಬಡ ಮತ್ತು ಸಂಕಟಗಳಿಗೆ ಈಡಾಗುವ ವಿಭಾಗಗಳಿಗೆ ಆರ್ಥಿಕ ಹಿಂಜರಿತ ತಾರದ, ಮತ್ತು ಹಣದ ನೆರವು ಹಾಗೂ ಅಗತ್ಯ ಆಹಾರ ಪೂರೈಕೆಯನ್ನು ಒದಗಿಸುವ ಕ್ರಮಗಳಿರುವ ಒಂದು ಸಮಗ್ರ ಪ್ಯಾಕೇಜನ್ನು ತಕ್ಷಣವೇ ಪ್ರಕಟಿಸಬೇಕಾದ್ದು ಅತ್ಯಂತ  ಮುಖ್ಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *