ಲಾಕ್‌ಡೌನ್ ಮಾತ್ರವೇ ಕೋವಿಡ್ ನಿಯಂತ್ರಿಸದು: ಸಿಪಿಐ(ಎಂ)

ಮುಖ್ಯಮಂತ್ರಿ ಯಡಿಯೂರಪ್ಪರವರು ಮಗದೊಮ್ಮೆ ಸಮರ್ಪಕವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಕೋವಿಡ್-19ರ ನಿಯಂತ್ರಣಕ್ಕೆ ಮೂರನೇ ಬಾರಿ ಲಾಕ್‌ಡೌನ್ ಘೋಷಿಸಿದ್ದಾರೆ. ಈ ಲಾಕ್‌ಡೌನ್ ನಾಳೆಯಿಂದ ಮುಂದಿನ ಜುಲೈ 07, ರವರೆಗೆ ಜಾರಿಯಲ್ಲಿರಲಿದೆ.

ಬೆಂಗಳೂರು: ಸಾಂಕ್ರಾಮಿಕ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಈ ಲಾಕ್‌ಡೌನನ್ನು ತಜ್ಞರ ಸೂಚನೆ ಮೇರೆಗೆ ಘೋಷಿಸಲಾಗಿದೆ ಎಂದಿದ್ದಾರೆ. ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿ ಇದನ್ನು ಸ್ವಾಗತಿಸುತ್ತದೆ. ಆದರೇ, ರಾಜ್ಯ ಸರಕಾರ ಎಲ್ಲ ಸೋಂಕಿತರನ್ನು ಗುರುತಿಸಿ, ಪ್ರತ್ಯೇಕಿಸಿ, ಸಮರೋಪಾದಿಯಲ್ಲಿ ಅಗತ್ಯ ನೆರವಿಗೆ ಕ್ರಮವಹಿಸದೇ ಕೇವಲ ಲಾಕ್‌ಡೌನ್ ಮೂಲಕ ಮಾತ್ರವೇ ಸಾಂಕ್ರಾಮಿಕ ನಿಯಂತ್ರಿಸುವ ನಿಲುಮೆಯನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ಖಂಡಿಸಿದ್ದಾರೆ.

ಇದನ್ನು ಓದಿ: ಹಳ್ಳಿಗಳಿಗೆ ಕೊರೊನಾ ಹಬ್ಬಲು ಸರಕಾರದ ಲಾಕ್‌ಡೌನ್‌ ಕಾರಣವೆ?

ರಾಜ್ಯದಾದ್ಯಂತ ಸೋಂಕಿತರಿಗೆ ಬೇಕಾದ ಶೂಶೃಸೆಯ ಹಾಗೂ ಆಸ್ಪತ್ರೆಗಳ ಮತ್ತು ಅಗತ್ಯ ಔಷಧಿಗಳ ವ್ಯವಸ್ಥೆಗೆ ತುರ್ತಾಗಿ ಕ್ರಮವಹಿಸದೇ, ಭಯಭೀತಿಯ ಕಾರಣದಿಂದ ಸಮೂಹ ಸನ್ನಿಗೊಳಗಾಗುತ್ತಿರುವ ಜನತೆಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡದೇ ಮತ್ತು ಸಾಮೂಹಿಕ ಲಸಿಕೀಕರಣಕ್ಕೆ ಅಗತ್ಯ ಕ್ರಮವಹಿಸದೇ ಸಾಂಕ್ರಾಮಿಕವನ್ನು ನಿಯಂತ್ರಿಸಲಾಗದು ಎಂದು ಯು.ಬಸವರಾಜ ಅವರು ವಿವರಿಸಿದ್ದಾರೆ.

ಈ ಕುರಿತು ಕೈಗೊಂಡ ಕ್ರಮಗಳು ಮತ್ತು ಅದಕ್ಕಾಗಿ ಒದಗಿಸಲಾದ ಮೊತ್ತದ ಕುರಿತು ರಾಜ್ಯದ ಜನತೆಯ ಮುಂದಿಡದೇ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ತೀವ್ರ ಖಂಡನೀಯವಾಗಿದೆ.

ಎರಡನೇ ಅಲೆಯು ನಗರ ಹಾಗೂ ಬಹುತೇಕ ಗ್ರಾಮೀಣ ಪ್ರದೇಶವನ್ನು ವ್ಯಾಪಕವಾಗಿ ಬಾಧಿಸಿದೆ. ಸೋಂಕಿತರನ್ನು ಅವರ ಮನೆಗಳಲ್ಲಿ ಉಳಿಯಲು ಹೇಳಲಾಗುತ್ತಿದೆ. ಗ್ರಾಮೀಣ ಹಾಗೂ ನಗರದ ಬಹುತೇಕ ಬಡವರ ಮನೆಗಳಲ್ಲಿ ಸೋಂಕಿತರು ಪ್ರತ್ಯೇಕವಾಗಿರಲು ಅಗತ್ಯ ಸೌಲಭ್ಯಗಳು ಇಲ್ಲ. ಸರಕಾರವೇ ಇಂತಹವರನ್ನು ವಿಶ್ವಾಸಕ್ಕೆ ತಗೆದುಕೊಂಡು ಸ್ಥಳೀಯವಾಗಿ ಪ್ರತ್ಯೇಕವಾಗಿರಿಸಲು ವ್ಯವಸ್ಥೆಗಳನ್ನು ಮಾಡಿಲ್ಲ.ಅದಕ್ಕೆ ಬೇಕಾದ ಬಂಡವಾಳ ಮತ್ತು ಚಿಕಿತ್ಸೆ ಹಾಗೂ ಊಟೋಪಚಾರದ ವ್ಯವಸ್ಥೆಗಳನ್ನು ಮಾಡಿಲ್ಲ. ಇದರಿಂದಾಗಿ ಕೋವಿಡ್-19 ಮನೆಗಳ ಎಲ್ಲ ಸದಸ್ಯರಿಗೂ ಹರಡಲು ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗ ವ್ಯಾಪಕವಾಗುತ್ತಿದೆ. ತರಕಾರಿ ಹಣ್ಣುಗಳ ಬೆಲೆಗಳು ಗಗನಮುಖಿಯಾಗಿವೆ. ಆದಾಗಲೂ ಲಭ್ಯವಾಗುತ್ತಿಲ್ಲ. ಜೀವನ ವೆಚ್ಚ ದುಬಾರಿಯಾಗುತ್ತಿದೆ.

ಇದನ್ನು ಓದಿ: ದನಿಗಳನ್ನು ಅಡಗಿಸಿ-ಜೀವಗಳನ್ನಾದರೂ ಕಾಪಾಡುವಿರಾ?

ಕಳೆದ ಮೂರು-ನಾಲ್ಕು ತಿಂಗಳಿಂದ ಸಾಂಕ್ರಾಮಿಕದಿಂದ ಉಂಟಾದ ರಾಜ್ಯದ ಜನತೆಯ ದುಸ್ಥಿತಿ ನಿರ್ವಹಿಸಲು ಪರಿಹಾರದ ಪ್ಯಾಕೇಜ್ ನೀಡುವಂತೆ ರಾಜ್ಯದ ಜನತೆ ಹಲವು ಬಾರಿ ಒತ್ತಾಯಿಸಿದ ನಂತರ ಮುಖ್ಯಮಂತ್ರಿಗಳು ಈಚೆಗೆ ಘೋಷಿಸಿದ ಪರಿಹಾರವು ಯಾತಕ್ಕೂ ಸಾಲದೆಂದು ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ ಹಾಗೂ ಸಮಗ್ರ ಪರಿಹಾರಕ್ಕೆ ಕ್ರಮವಹಿಸುವಂತೆ ಮರಳಿ ಒತ್ತಾಯಗಳು ಕೇಳಿ ಬಂದಿದೆ. ಆದಾಗಲೂ, ಮುಖ್ಯಮಂತ್ರಿಗಳು ಅವುಗಳನ್ನು ಪರಿಗಣಿಸದೇ ಉಪೇಕ್ಷೆಯನ್ನು ಮಾಡುತ್ತಿರುವುದು  ತೀವ್ರ ಕಳವಳಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಿಸಲು ಜನತೆ ಪೌಷ್ಠಿಕತೆಯನ್ನು ಪಡೆಯುವುದು ಅಷ್ಠೇ ಅಗತ್ಯವಿದೆ. ಆದ್ದರಿಂದ ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ  ಮಾಸಿಕ 10,000 ರೂಗಳ ನಗದು ಮತ್ತು ಕುಟುಂಬದ ತಲಾ ವ್ಯಕ್ತಿಗೆ 10 ಕೇಜಿ ಆಹಾರ ಸಾಮಗ್ರಿಗಳ ಮತ್ತು ಆರೋಗ್ಯ ಸುರಕ್ಷತೆಯ ಪೊಟ್ಟಣಗಳನ್ನು ಒದಗಿಸಬೇಕು ಆಗ್ರಹಿಸಿದ್ದಾರೆ.

ಲಾಕ್‌ಡೌನ್ ಹಾಗೂ ಸಾಂಕ್ರಾಮಿಕದಿಂದ ಉಂಟಾದ ಬೆಳೆ ನಷ್ಟಕ್ಕೆ ತಲಾ ಎಕರೆಗೆ ಕನಿಷ್ಢ 25,000 ರೂ.ಗಳ ಪರಿಹಾರ ಹಾಗೂ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರ ಮತ್ತು ಮಹಿಳೆಯರ ಸ್ತ್ರೀ ಶಕ್ತಿ ಸಂಘಗಳ ಸಾಲವೂ ಸೇರಿದಂತೆ ಎಲ್ಲ ಸಾಲ ಮನ್ನಾ ಮಾಡಬೇಕು. ಕಾರ್ಮಿಕರಿಗೆ ವೇತನ ಸಹಿತ ರಜೆಯನ್ನು ಒದಗಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮರಳಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ. ಅದೇ ರೀತಿ, ರಾಜ್ಯದ ಜನತೆಗೆ ಈ ಕುರಿತು ಕೋವಿಡ್ ಸುರಕ್ಷತೆಯೊಂದಿಗೆ ಪ್ರತಿಭಟನೆಗಳನ್ನು ಮುಂದುವರೆಸಲು ಕರೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *