ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರವಲ್ಲ. ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡುವುದಿಲ್ಲ. ಇನ್ನೇನಿದ್ದರೂ ನಿರ್ಬಂಧ, ನಿಯಮಗಳ ಕಟ್ಟುನಿಟ್ಟಿನ ಪಾಲನೆಯಷ್ಟೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್ ಕೆ. ಕೊರೊನಾ ಮೂರನೇ ಅಲೆಯ ಈ ಸಂದರ್ಭದಲ್ಲಿ ಜನರು ಸ್ವ ಆಸಕ್ತಿಯಿಂದ ಮುಂದೆ ಬಂದು ಕೋವಿಡ್ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬೇಕು ಎಂದರು.
ʼಆರಂಭದ ಹಂತದಲ್ಲಿ ಕೋವಿಡ್ ಸೋಂಕು, ವೈರಾಣುವಿನ ಗುಣ ಮತ್ತು ಸ್ವಭಾವ, ಚಿಕಿತ್ಸಾ ವಿಧಾನ ಯಾವುದೂ ಗೊತ್ತಿರಲಿಲ್ಲ. ಆಗ ಅನುಭವದ ಕೊರತೆಯಿಂದ ಲಾಕ್ಡೌನ್ ಜಾರಿಗೊಳಿಸಿದ್ದೆವು. ಇನ್ನು ಮುಂದೆ ಹಾಗಾಗುವುದಿಲ್ಲʼ ಎಂದರು.
ಎರಡು ವರ್ಷಗಳ ಅನುಭವದಿಂದ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಯ ಕುರಿತು ಅರಿವು ಇದೆ. ಈಗ ಕೋವಿಡ್ ಹರಡುವುದನ್ನು ಲಾಕ್ಡೌನ್ ಜಾರಿಗೊಳಿಸುವುದರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಲಸಿಕೆ ಮತ್ತು ಮುನ್ನೆಚ್ಚರಿಕೆಯಿಂದ ಮಾತ್ರವೇ ಕೋವಿಡ್ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಈಗಾಗಲೇ 25 ಸಾವಿರ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲನೇ ಡೋಸ್ ನೀಡಿದ್ದು ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ಇಡೀ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಉಡುಪಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅತಿಹೆಚ್ಚು ಕೋವಿಡ್ ಪಾಸಿಟಿವ್ ದರ ವರದಿಯಾಗುತ್ತಿದೆ. ಈ ಜಿಲ್ಲೆಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.
ಓಮಿಕ್ರಾನ್
ಓಮಿಕ್ರಾನ್ ಸೋಂಕಿನ ತೀವ್ರತೆ ಗಂಭೀರ ಸ್ವರೂಪದಲ್ಲಿಲ್ಲ. ಆದರೆ, ಕೋವಿಡ್ ಎರಡೂ ಲಸಿಕೆ ಪಡೆಯದವರಲ್ಲಿ ಸೋಂಕು ತಗುಲಿದರೆ ತೀವ್ರತೆ ಹೆಚ್ಚಾಗುತ್ತದೆ. ಸಾವು ಕೂಡ ಸಂಭವಿಸಲು ಸಾಧ್ಯವಿದೆ. ಇನ್ನುಳಿದ ಶೇಕಡಾ 20ರಷ್ಟು ಮಂದಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದು ಸುರಕ್ಷಿತವಾಗಿರಿ, ಆಸ್ಪತ್ರೆಗೆ ಹೋಗುವುದು, ಐಸಿಯುಗೆ ದಾಖಲಾಗುವುದು, ಸಾವು ಸಂಭವಿಸುವುದು ತಪ್ಪುತ್ತದೆ ಎಂದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ದೃಢಪ್ರಮಾಣ ದರ ಶೇ 3.95 ರಷ್ಟು ಇದೆ. ಈ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಕೋವಿಡ್ ನಿಯಂತ್ರಣ ಕುರಿತು ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಲಸಿಕೆ ಪಡೆಯುವುದರಿಂದ ಮಾತ್ರ ಕೋವಿಡ್ನಿಂದ ರಕ್ಷಣೆ ಸಾಧ್ಯ. ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರಲಿದೆ ಮತ್ತು ಸಾವಿನಿಂದಲೂ ಪಾರಾಗಬಹುದು. ಎಲ್ಲರೂ ಲಸಿಕೆ ಪಡೆಯುವ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಆರೋಗ್ಯ ಸಚಿವರು ಮನವಿ ಮಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಸುಮಾರು ಒಂದು ಗಂಟೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದರಲ್ಲಿ ಎರಡು ಪ್ರಮುಖ ಅಂಶ ತಿಳಿಸಿದ್ದಾರೆ. ಒಂದು ರಾಜ್ಯ, ದೇಶದಲ್ಲಿ ಸಂಪೂರ್ಣ ಲಸಿಕೆ ನೀಡುವ ಮೂಲಕ ಸಾಂಕ್ರಾಮಿಕ ತಡೆಯಲು ಸಾಧ್ಯವಿಲ್ಲ. ಇಡೀ ಪ್ರಪಂಚದಲ್ಲಿ, ಎಲ್ಲಾ ದೇಶಗಳಲ್ಲಿ ಸಂಪೂರ್ಣ ಲಸಿಕೀರಣ ಆದರೆ ಮಾತ್ರ ಕೋವಿಡ್ ಸೋಂಕನ್ನು ಸಂಪೂರ್ಣ ತಡೆಯಲು ಮತ್ತು ನಿವಾರಿಸಲು ಸಾಧ್ಯ ಎಂದು ಹೇಳಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕರು ಆರು ತಿಂಗಳ ಹಿಂದೆಯೇ ಮನಗಂಡು ಅನೇಕ ಬಡ ದೇಶಗಳಿಗೆ ಭಾರತದಿಂದ ಉಚಿತವಾಗಿ ಲಸಿಕೆ ಸರಬರಾಜು ಮಾಡಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ ಕೂಡ ಎಂದರು.
ಇಂದು ಸಭೆ: ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸಾ ವ್ಯವಸ್ಥೆ ಕುರಿತು ಚರ್ಚಿಸಲು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ರಾಜ್ಯಮಟ್ಟದ ಕೋವಿಡ್ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.