ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಹೋಗಿಲ್ಲ. ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಎಚ್ಚರಿಕೆಯಿಂದ ಕೊರೊನಾವನ್ನು ನಿಯಂತ್ರಿಸಬೇಕಿದೆ. ಮಹಾರಾಷ್ಟ್ರ ಮತ್ತು ಕೇರಳದ ಗಡಿ ಭಾಗದ ಹಳ್ಳಿಗಳಲ್ಲಿ ಪೂರ್ಣಪ್ರಮಾಣದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಕೋವಿಡ್ ತಡೆಯಲು ಜಿಲ್ಲಾವಾರು ಯೋಜನೆಗೆ ನಿರ್ಧಾರ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಹಾಸನ, ಬೆಂಗಳೂರು ಗ್ರಾಮೀಣ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಲಸಿಕೆ ವಿತರಣೆಗೆ ಪರಿಣಾಮಕಾರಿಯಾಗಿ ಹೆಚ್ಚಿಸಲು ಕ್ರಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೋವಿಡ್ ಮೂರನೇ ಅಲೆ ನಿಯಂತ್ರಣ ಸಂಬಂಧ ಇಂದು ಸಿಎಂ ಗೃಹ ಕಛೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ತಾಂತ್ರಿಕ ತಜ್ಞರು, ಅಧಿಕಾರಿಗಳೊಂದಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದರು. ರಾಜ್ಯದಲ್ಲಿರುವ ಈಗಿರುವ ನಿಯಮಗಳನ್ನೇ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹೊಸದಾಗಿ ಯಾವುದೇ ನಿಯಮವಿಲ್ಲ. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ರಾತ್ರಿ ಕರ್ಫ್ಯೂ ಹಾಗೂ ಎಂಟು ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ಇದನ್ನೆ ಮುಂದುವರೆಸಬೇಕು. ಹೊಸದಾಗಿ ಯಾವುದೇ ನಿಯಮಗಳಿಲ್ಲ ಎಂದು ಹೇಳಿದರು.
ಕೋವಿಡ್ ದೃಢೀಕೃತ ಪ್ರಕರಣಗಳ ದರ ಶೇಕಡ 2ರಷ್ಟು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳ ಪ್ರಾರಂಭಸಬಹುದಾಗಿದೆ. ಪೋಷಕರು ಮತ್ತು ಶಿಕ್ಷಕರು ಕೊರೊನಾ ಲಸಿಕೆ ಪಡೆದಿರಬೇಕು. ಕೊವಿಡ್ ಪ್ರಕರಣಗಳ ದರ ಶೇಕಡಾ 2ಕ್ಕಿಂತ ಹೆಚ್ಚಿದ್ದರೆ, ಒಂದು ವಾರ ಶಾಲೆಯನ್ನು ಮುಚ್ಚಿ, ಸ್ಯಾನಿಟೈಸ್ ಮಾಡ್ತೇವೆ. ಸ್ಯಾನಿಟೈಸ್ ಮಾಡಿ ವಾರದ ಬಳಿಕ ಶಾಲೆ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ಇಂದು 1, 632 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 25 ಜನರು ಕೋವಿಡ್ನಿಂದಾಗಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 22, 698 ಪ್ರಕರಣಗಳಿವೆ.
ರಾಯಚೂರು, ಕಲಬುರಗಿ, ಕೊಪ್ಪಳ, ಹಾವೇರಿ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲು ಚಿಂತಿಸಲಾಗಿದೆ. ಡೆಲ್ಟಾ ವೈರಸ್ ಪತ್ತೆಗೆ ಜಿನೋಮ್ ಲ್ಯಾಬ್ ಅಗತ್ಯವಾಗಿದ್ದು, ಮುಂದಿನ 3 ವಾರದಲ್ಲಿ 6 ಜಿನೋಮ್ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಲಾಗುವುದು. ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿಯಲ್ಲಿ ಲ್ಯಾಬ್‌ಗಳು ಆರಂಭ ಮಾಡಲಾಗುವುದು.
ರಾಜ್ಯದಲ್ಲಿ 2ನೇ ಅಲೆ ಮುಗಿದಿಲ್ಲ, 3ನೇ ಅಲೆ ಆರಂಭವಾಗಿಲ್ಲ. ಎರಡನೇ ಅಲೆ ಕಡಿಮೆ ಆದರೂ ಪ್ರಕರಣ ಏರಿಕೆ ಕಂಡು ಬಂದಿದೆ. ಕೋವಿಡ್ ಸಂಬಂಧ ಸಭೆ ನಡೆದಿದೆ. ವೈಜ್ಞಾನಿಕವಾದ, ಅಂಕಿ ಅಂಶಗಳ ಸಮೇತ, ಅಂತರಾಷ್ಟ್ರೀಯ, ರಾಷ್ಟ್ರೀಯ ಟ್ರೆಂಡ್ ಬಗ್ಗೆ ಕೋವಿಡ್ ಸ್ಥಿತಿಗತಿ ಬಗ್ಗೆ ತಿಳಿಸಿದ್ದಾರೆ. ಟಾಸ್ಕ್ ಪೋರ್ಸ್ ಕಮಿಟಿ ಅಂಕಿ ಅಂಶ ನೀಡಿದೆ. ಹಬ್ಬಗಳಿಗೆ ಕಳೆದ ವರ್ಷದ ಕೋವಿಡ್ ನಿಯಮಗಳೇ ಮುಂದುವರೆಯಲಿದೆ. ಮೊದಲ ಅಲೆ ಆರಂಭವಾಗಿದ್ದು ಕೇರಳ ರಾಜ್ಯದಲ್ಲಿ. ಈಗ ಹೆಚ್ಚು ಕೇಸ್ ಇರುವುದು ಕೂಡ ಕೇರಳದಲ್ಲಿಯೇ. ಕೇರಳ ಹೈಕೋರ್ಟ್‌ನಲ್ಲಿ ಕೇಸ್ ಹಾಕುವ ಬದಲು ಸೋಂಕು ನಿಯಂತ್ರಿಸಲಿ ಎಂದು ಅವರು ಆಶಿಸಿದರು.
ಮಕ್ಕಳ ಅಸ್ಪತ್ರೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿತ್ತು. ಅನ್ಯ ರಾಜ್ಯಗಳ ಓಡಾಟದ ಮೇಲೆ ಹೆಚ್ಚಿನ ನಿಗಾ ಇಡುವಂತೆ ತಿಳಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರಿಗೆ ಗಡಿ ಪ್ರವೇಶದ ವೇಳೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ಸಿಎಂ ಸೂಚಿಸಿದರು.
ಶೇಕಡ 2ಕ್ಕಿಂತ ಹೆಚ್ಚಾದರೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 40ರಷ್ಟು ಪ್ರಮಾಣದಲ್ಲಿ ಪಡೆಯುತ್ತೇವೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ದಾಖಲಿಸಲು ವ್ಯವಸ್ಥೆ ಮಾಡಿಕೊಳ್ಳಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಪಾಸಿಟಿವಿಟಿ ಹೆಚ್ಚಿದೆ ಎಂದರು.
ರಾಜ್ಯದಲ್ಲಿ 4 ಕೋಟಿಯಷ್ಟು ಲಸಿಕೆಯನ್ನು ಜನರಿಗೆ ನೀಡಲಾಗಿದೆ. ರಾಜ್ಯದಲ್ಲಿ ಸದ್ಯ 14,89,000 ಡೋಸ್ ಲಸಿಕೆಗಳು ಲಭ್ಯವಿದೆ. ಈ ತಿಂಗಳಾಂತ್ಯಕ್ಕೆ ಮತ್ತಷ್ಟು ಕೋವಿಡ್ ಲಸಿಕೆ ಬರಲಿದೆ. ರಾಜ್ಯಕ್ಕೆ ಸದ್ಯ 68 ಲಕ್ಷ ಲಸಿಕೆಯನ್ನು ಕಳುಹಿಸಲಾಗುತ್ತಿದೆ. ಮತ್ತಷ್ಟು ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.