ಶ್ರೀಮಂತರ ಲಾಭಕ್ಕಾಗಿ ಅರಣ್ಯಗಳ ನಾಶ, ಬಡ ಅರಣ್ಯ-ಅವಲಂಬಿತರ ಬದುಕಿನ ನಾಶ

ಪ್ರೊ. ಪ್ರಭಾತ್ ಪಟ್ನಾಯಕ್

ಅರಣ್ಯ ಭೂಮಿಯ ವಾಣಿಜ್ಯ ಶೋಷಣೆಯಿಂದ ಪರಿಸರ ಹಾನಿಯ ಹೊರತಾಗಿ, ಅರಣ್ಯಅವಲಂಬಿತ ಜನಸಂಖ್ಯೆಯ ಜೀವನೋಪಾಯದ ಪ್ರಶ್ನೆಯೂಇದೆ. ಅರಣ್ಯಗಳ ನಾಶವು ಅವರಿಗೆಯಾವುದೇ ಪರ್ಯಾಯ ಜೀವನೋಪಾಯದ ಮೂಲವನ್ನು ಒದಗಿಸದೆ, ಅವರ ಪ್ರಸ್ತುತ ಜೀವನೋಪಾಯದ ನಾಶವನ್ನು ಸೂಚಿಸುತ್ತದೆ.ಇದಲ್ಲದೆ ನಮ್ಮಂತಹ ದೇಶದಲ್ಲಿ ಭೂ-ಬಳಕೆಯ ಸಾಮಾಜಿಕರಣದ ಅಗತ್ಯತೆಯ ಪ್ರಶ್ನೆಯೂ ಇದೆ. ಮೂರು ಕುಖ್ಯಾತ ಕೃಷಿ ಕಾನೂನುಗಳು ಸ್ವಂತ ಬಳಕೆಗಾಗಿ, ಅಥವಾ ಭಾರತೀಯ ಆಹಾರ ನಿಗಮಕ್ಕೆ ಮಾರಾಟದ ಮೂಲಕ ರಾಷ್ಟ್ರೀಯ ಬಳಕೆಗಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸುವುದನ್ನು ಬಿಟ್ಟು, ಮುಂದುವರೆದ ದೇಶಗಳಿಗಾಗಿ ವಾಣಿಜ್ಯ ಬೆಳೆಗಳನ್ನು ಉತ್ಪಾದಿಸುವ ಕಡೆಗೆ ಭೂ-ಬಳಕೆಯನ್ನು ಬದಲಾಯಿಸುವಉದ್ದೇಶವನ್ನು ಹೊಂದಿದ್ದವು.ಅದು ಈಡೇರಲಿಲ್ಲ. ಈಗ ಅರಣ್ಯ ಸಂರಕ್ಷಣಾಕಾಯಿದೆಯ ತಿದ್ದುಪಡಿಯು ಅದನ್ನೇ ಮಾಡಲು ಪ್ರಯತ್ನಿಸುತ್ತಿದೆ: ಭೂ-ಬಳಕೆಯನ್ನು ಅರಣ್ಯದಿಂದ ರಿಯಲ್‌ಎಸ್ಟೇಟ್‌ ಅಥವಾ ಮುಂದುವರೆದ ದೇಶಗಳ ಅಥವಾ ದೇಶೀಯ ಶ್ರೀಮಂತರ ಬೇಡಿಕೆಗಳ ಸರಕುಗಳತ್ತ ತಿರುಗಿಸುವುದು.. .. ..  

ಕಾರ್ಪೊರೇಟ್ ಹಿತಾಸಕ್ತಿಗಳನ್ನೇ ಸದಾಕೋರುವ ಮೋದಿ ಸರ್ಕಾರವು ಒಂದು ಯೋಜನೆಯನ್ನು ಪ್ರಾರಂಭಿಸಿದೆ.ಅದರಲ್ಲಿ ರಿಯಲ್‌ಎಸ್ಟೇಟ್‌ ಡೆವಲಪರ್‌ಗಳು ಮತ್ತು ಇತರ ಕಾರ್ಪೊರೇಟ್‌ಗಳು ದೊಡ್ಡ ಪ್ರಮಾಣದಲ್ಲಿ ಭಾರತದ ಅರಣ್ಯಗಳ ಆವರಣವನ್ನು ಧ್ವಂಸಮಾಡಿ ಲಾಭಪೇರಿಸಿಕೊಳ್ಳಲು ಅವಕಾಶ ಮಾಡಿ ಕೊಡಲಾಗುತ್ತಿದೆ. ಸರ್ಕಾರ ಅರಣ್ಯವೆಂದು ಪರಿಗಣಿಸದ ಅರಣ್ಯದಲ್ಲಿನ ಪ್ರದೇಶಗಳನ್ನು ತೆಗೆದುಹಾಕಲು ಅರಣ್ಯ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿತರುತ್ತಿದೆ.

1996ರಲ್ಲಿ, ಸುಪ್ರೀಂಕೋರ್ಟ್ ಒಂದು ಆದೇಶವನ್ನು ನೀಡಿದ್ದು, ಅದರ ಪ್ರಕಾರ ಪ್ರತಿಯೊಂದು ಅರಣ್ಯ ಪ್ರದೇಶವನ್ನು, ಅದು ಯಾರ ಮಾಲೀಕತ್ವದಲ್ಲೇ ಇದ್ದರೂ, ಸರ್ಕಾರದ ದಾಖಲೆಗಳು ಆದನ್ನು ಅರಣ್ಯವೆಂದು ಗುರುತಿಸದಿದ್ದರೂ ಸಹ ರಕ್ಷಿಸಬೇಕು. ಸರ್ಕಾರದ ದಾಖಲೆಗಳು ಶೋಚನೀಯವೆನ್ನುವಷ್ಟು ಅಪೂರ್ಣವಾಗಿವೆ ಮತ್ತು ಯಾವುದು ಅರಣ್ಯ ಎಂಬ ಬಗ್ಗೆ ನಿರೂಪಣೆಗಳು ಸಂಪೂರ್ಣವಾಗಿ ಅಸ್ಪಷ್ಟವಾಗಿವೆೆ ಹಾಗೂ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ, ಇವುಗಳಲ್ಲಿ ಏಕರೂಪತೆ ಇಲ್ಲ ಎಂಬ ಸನ್ನಿವೇಶಕ್ಕೆ ಸ್ಪಂದಿಸಿ ಈ ಆದೇಶ ಬಂದಿತ್ತು. ಪ್ರತಿ ರಾಜ್ಯದಲ್ಲೂ ಅಧಿಕೃತ ದಾಖಲೆಗಳಲ್ಲಿ ಅರಣ್ಯಎಂದು ಗುರುತಿಸಿರದ ಎಲ್ಲ ಪ್ರದೇಶಗಳನ್ನು ಗುರುತಿಸಲು ಮತ್ತು ಅವಕ್ಕೆ ಅಧಿಕೃತ ಮಾನ್ಯತೆನೀಡಿ, ಆಮೂಲಕ ಅವುಗಳನ್ನು ಕಾನೂನಿನಡಿಯಲ್ಲಿ ರಕ್ಷಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.

ಆದೇಶ ಪಾಲಿಸದಿರುವುದೇ ನೆಪ

2014ರ ಹೊತ್ತಿಗೆ, ಸುಪ್ರೀಂಕೋರ್ಟ್ ಆದೇಶದ ಪೂರ್ಣ ಹದಿನೆಂಟು ವರ್ಷಗಳ ನಂತರವೂ ಪತ್ರಕರ್ತರ ಗುಂಪು ಪಡೆದ ಮಾಹಿತಿಗಳ ಪ್ರಕಾರ ಹರಿಯಾಣ, ಬಿಹಾರ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಅರಣ್ಯ ಪ್ರದೇಶಗಳನ್ನು ಗುರುತಿಸಲು ಮತ್ತು ಅವನ್ನು ಸರಕಾರದ ದಾಖಲೆಗಳಲ್ಲಿ ಸೇರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಸಂಗತಿ ಕೇಂದ್ರ ಸರ್ಕಾರಕ್ಕೆ ಕಾನೂನನ್ನೇ ತಿದ್ದುಪಡಿ ಮಾಡಲು ಮತ್ತು ಸರ್ಕಾರಿ ದಾಖಲೆಗಳು ಗುರುತಿಸದ ಅರಣ್ಯಗಳಿಗೆ ಎಲ್ಲಾ ರಕ್ಷಣೆಯನ್ನು ಹಿಂತೆಗೆದುಕೊಳ್ಳಲು ನೆಪ ಒದಗಿಸಿದೆ.

ಇದು ಸ್ಪಷ್ಟವಾಗಿ ಸುಪ್ರೀಂಕೋರ್ಟ್ ಆದೇಶದ ಸಾರವನ್ನು ಉಲ್ಲಂಘಿಸುತ್ತದೆ. ನ್ಯಾಯಾಲಯದ ಆದೇಶವನ್ನು ತ್ವರಿತವಾಗಿ ಅನುಸರಿಸಲು ರಾಜ್ಯಗಳಿಗೆ ಹೇಳಿ, ಆ ಮೂಲಕ ಎಲ್ಲಾ ಅರಣ್ಯಗಳಿಗೆ ಸರಿಯಾದ ರಕ್ಷಣೆ ಇರುವಂತೆ ಮಾಡುವ ಬದಲು, ಅಥವಾ ವರದಿ ಮಾಡದ ರಾಜ್ಯಗಳಲ್ಲಿ ದಾಖಲಾಗದ ಅರಣ್ಯ ಪಟ್ಟಿಗಳ ಪ್ರಮಾಣವನ್ನು ವರದಿ ಮಾಡಲು ತನ್ನದೇ ಆದ ತಜ್ಞರ ಸಮಿತಿಯನ್ನಾದರೂ ನೇಮಿಸುವ ಬದಲು, ನ್ಯಾಯಾಲಯದ ಆದೇಶವನ್ನು ಪಾಲಿಸದಿರುವುದನ್ನೇ ಆ ಆದೇಶದ ಒತ್ತನ್ನೇರದ್ದು ಮಾಡಲುಒಂದು ನೆಪವಾಗಿ ಬಳಸಲಾಗಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅರಣ್ಯ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿಯನ್ನು ಖಾಸಗಿ ತೋಟಗಳನ್ನು ಅರಣ್ಯಗಳ ವ್ಯಾಖ್ಯಾನದ ಅಡಿಯಲ್ಲಿ ಸೇರಿಸಲಾಗುತ್ತದೆ ಎಂಬ ಭಯವಿದ್ದುದರಿಂದ ತರಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.ತೋಟಗಳನ್ನು ಅರಣ್ಯಗಳೆಂದು ಪರಿಗಣಿಸಿದರೆ ಅದು ತೋಟದ ಮಾಲೀಕರಿಗೆ ತಮ್ಮ ಭೂಮಿಯನ್ನು ಅವರು ಬಯಸಿದರೆ, ಇತರ ಉದ್ದೇಶಗಳಿಗೆ ಬಳಸುವ ಸ್ವಾತಂತ್ರ‍್ಯವನ್ನು ನಿರಾಕರಿಸುತ್ತದೆ. ಮತ್ತು ಈ ಭಯವು ಖಾಸಗಿ ತೋಟಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಅದರಿಂದಾಗಿ ಹಸಿರು ಹೊದಿಕೆಯ ಬೆಳವಣಿಗೆಯನ್ನೂ ತಡೆಯುತ್ತದೆ. ಈ ಭಯವನ್ನು ಹೋಗಲಾಡಿಸಲು ಮತ್ತು ಹಸಿರು ಹೊದಿಕೆಯನ್ನು ವಿಸ್ತರಿಸಲು ಸರ್ಕಾರವು ಕಾಯಿದೆಗೆ ತಿದ್ದುಪಡಿ ಮಾಡುತ್ತಿದೆಯಂತೆ!

ಇದನ್ನೂ ಓದಿ: ರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ

ಸರಕಾರದ ನಿಜ ಆಶಯವೇ ಬೇರೆ

ಕನಿಷ್ಠ ಎರಡು ಕಾರಣಗಳಿಗಾಗಿ ಇದು ಸಂಪೂರ್ಣವಾಗಿ ತೋರಿಕೆಯ ವಾದವಾಗಿದೆ: ಮೊದಲನೆಯದಾಗಿ, ಇದು ತೋಟಗಳ ಬೆಳವಣಿಗೆಯ ಕೊರತೆಗೆ ಒಂದು ಕಾರಣವನ್ನು ಒಡ್ಡುತ್ತದೆ, ಅಂದರೆ ತೋಟ-ಮಾಲೀಕರ ಮನಸ್ಸಿನಲ್ಲಿ ಇರುವ ಭಯದಿಂದಾಗಿ ಈ ಬೆಳವಣಿಗೆಯಾಗಿಲ್ಲ ಎನ್ನುತ್ತದೆ.ಆದರೆ ಇದಕ್ಕೆಯಾವುದೇ ಸ್ವತಂತ್ರ ಮತ್ತು ಪ್ರಾಯೋಗಿಕ-ಆಧಾರದ ಪುರಾವೆಗಳಿಲ್ಲ ; ಮತ್ತು ಎರಡನೆಯದಾಗಿ, ಅರಣ್ಯಗಳು ಮತ್ತು ನೆಡುತೋಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಮಸ್ಯೆಗೆ ಪರಿಹಾರವಾಗಿ ಹೆಚ್ಚು ನಿಖರವಾದ ವ್ಯಾಖ್ಯಾನಗಳನ್ನು ರೂಪಿಸಬಹುದಾಗಿತ್ತು. ಅದರ ಬದಲು ಅನಗತ್ಯವಾಗಿ ಇಡೀ ಕಾನೂನನ್ನೇ ನಿರುಪಯುಕ್ತಗೊಳಿಸಲು ಅದನ್ನು ಬಳಸಲಾಗಿದೆ.ಸರ್ಕಾರದ ಆಶಯವು ಬೇರೆಯೇ ಆಗಿತ್ತು ಎಂಬುದಿಲ್ಲಿ ಸ್ಪಷ್ಟ: ಅದು ದೇಶದ ಸಮಸ್ತ ಅರಣ್ಯ ಪ್ರದೇಶದ ರಕ್ಷಣೆಯಾಗಿರಲಿಲ್ಲ,  ಬದಲಿಗೆ ಅದರ ಬಹಳಷ್ಟು ಭಾಗಗಳನ್ನು ವಾಣಿಜ್ಯ ಬಳಕೆಗೆ ತೆರೆಯುವುದಾಗಿತ್ತು.

ಹೀಗೆ ತೆರೆದುಕೊಡುವುದರಿಂದ ಆಗುವ ಪರಿಸರ ಹಾನಿ ಅಪಾರ. ಅಧಿಕೃತ ದಾಖಲೆಗಳ ಪ್ರಕಾರ ಅರಣ್ಯಗಳ ವ್ಯಾಪ್ತಿ ನಿಖರವಾಗಿ ಎಷ್ಟು ಎಂಬುದನ್ನು ಸರ್ಕಾರವು ಸಾರ್ವಜನಿಕರಿಗೆ ಬಹಿರಂಗಪಡಿಸಿಲ್ಲ, ಇದರಿಂದಾಗಿ ಈಗ ಎಷ್ಟುಅರಣ್ಯ ಪ್ರದೇಶವನ್ನು ವಾಣಿಜ್ಯ ಬಳಕೆಗೆ ತೆರೆಯಲಾಗುತ್ತದೆ ಎಂದು ಅಂದಾಜು ಮಾಡುವುದು ಕಷ್ಟಕರವಾಗಿದೆ, ಆದರೆ ಇದು ಗಣನೀಯ ಪ್ರಮಾಣದಲ್ಲಿದೆ ಎಂದು ಬಲ್ಲ ಮೂಲಗಳು ಸಂದೇಹ ಪಡುತ್ತಿವೆ.ಉದಾಹರಣೆಗೆ, ಹರಿಯಾಣದೊಳಗೆ ಬರುವ ಅರಾವಳಿ ಪರ್ವತಶ್ರೇಣಿಯನ್ನು ಆವರಿಸಿರುವ ಅರಣ್ಯಗಳನ್ನು ಅಧಿಕೃತವಾಗಿ ಅರಣ್ಯಗಳೆಂದು ದಾಖಲಿಸಲಾಗಿಲ್ಲ ಮತ್ತು ಅವು ವಾಣಿಜ್ಯ ಉದ್ದೇಶಗಳಿಗಾಗಿ ತೆರೆದುಕೊಳ್ಳುತ್ತವೆ; ರಾಜಧಾನಿಗೆ ಅವುಗಳ ಸಾಮೀಪ್ಯವು ಅವುಗಳನ್ನು ವಾಣಿಜ್ಯ ಯೋಜನೆಗಳಿಗೆ ಆಕರ್ಷಕ ಸ್ಥಳವನ್ನಾಗಿ ಮಾಡುತ್ತದೆ, ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಬಹಳ ಅಗತ್ಯವಿರುವ ಹಸಿರನ್ನು ತೆಗೆದುಹಾಕುತ್ತದೆ.

ಆದರೆ ಅರಣ್ಯ ಭೂಮಿಯ ಇಂತಹ ವಾಣಿಜ್ಯ ಶೋಷಣೆಯಿಂದ ಉಂಟಾಗುವ ಪರಿಸರ ಹಾನಿಯ ಹೊರತಾಗಿ, ಅರಣ್ಯ ಅವಲಂಬಿತ ಜನಸಂಖ್ಯೆಯ ಜೀವನೋಪಾಯದ ಪ್ರಶ್ನೆಯೂ ಇದೆ. ಅನೇಕ ಜನರು ಜೀವನೋಪಾಯಕ್ಕಾಗಿ ಸಣ್ಣ ಅರಣ್ಯ ಉತ್ಪನ್ನಗಳ ಸಂಗ್ರಹವನ್ನು ಅವಲಂಬಿಸಿದ್ದಾರೆ; ಅರಣ್ಯಗಳ ನಾಶವು ಅವರ ಪ್ರಸ್ತುತ ಜೀವನೋಪಾಯದ ನಾಶವನ್ನು ಸೂಚಿಸುತ್ತದೆ, ಆದರೆ ಅವರಿಗೆ ಸರ್ಕಾರ ಯಾವುದೇ ಪರ್ಯಾಯ ಜೀವನೋಪಾಯದ ಮೂಲವನ್ನು ಒದಗಿಸುವುದಿಲ್ಲ.ಇದು ಅವರು ದಟ್ಟದರಿದ್ರರಾಗಲು ಪ್ರಬಲ ಕಾರಣವಾಗುತ್ತದೆ; ಅವರು ಬಂಡವಾಳದ ಆದಿಮ ಸಂಚಯ ಎಂದು ಮಾರ್ಕ್ಸ್‌ಕರೆದಿರುವ ಪ್ರಕ್ರಿಯೆಯ ಬಲಿಪಶುಗಳಾಗುತ್ತಾರೆ. ಆದ್ದರಿಂದ ದಲಿತ ಮತ್ತು ಬುಡಕಟ್ಟು ಗುಂಪುಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳು ಮೋದಿ ಸರ್ಕಾರದ ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಭೂಬಳಕೆಯ ಸಾಮಾಜೀಕರಣದಅಗತ್ಯ

ಆದರೆ ಅರಣ್ಯ ಭೂಮಿಯನ್ನು ವಾಣಿಜ್ಯ ಬಳಕೆಗಾಗಿ ತೆರೆದಿರುವ ನಿರ್ದಿಷ್ಟ ಪ್ರಕರಣವು ನಮ್ಮಂತಹ ದೇಶದಲ್ಲಿ ಭೂ-ಬಳಕೆಯ ಸಾಮಾಜೀಕರಣದ ಅಗತ್ಯತೆಯ ಒಂದು ಹೆಚ್ಚು ವಿಶಾಲವಾದ ಸಮಸ್ಯೆಯ ಭಾಗವಾಗಿದೆ ಮತ್ತು ಅದನ್ನುಎತ್ತಿತೋರುತ್ತದೆ. ಭೂಮಿ ಒಂದು ವಿರಳ ಸಂಪನ್ಮೂಲವಲ್ಲವಷ್ಟೇ ಅಲ್ಲ.ಅದರ ಪೂರೈಕೆಯು ಕಾಲಾನಂತರದಲ್ಲಿ ಸುಲಭವಾಗಿ ವೃದ್ಧಿಸುವುದಿಲ್ಲ. ಆದ್ದರಿಂದ ಉದ್ಯೋಗ, ಆಹಾರ ಭದ್ರತೆ ಮತ್ತುಇತರ ಸಾಮಾಜಿಕ ಉದ್ದೇಶಗಳಿಗೆ ಏನಾಗುತ್ತದೆ ಎಂಬುದನ್ನು ನಿರ್ಧರಿಸಲು ಭೂಮಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದು ಬಹಳ ನಿರ್ಣಾಯಕವಾಗುತ್ತದೆ. ಸಾಮಾಜಿಕ ಉದ್ದೇಶಗಳ ಸಾಧನೆಗೆ ಭೂ-ಬಳಕೆಯ ಮಾದರಿಯು ತುಂಬಾ ಮುಖ್ಯವಾದ ಕಾರಣ, ಈ ಮಾದರಿಯನ್ನು ಮಾರುಕಟ್ಟೆಯ ಮರ್ಜಿಗೆ ಬಿಡಲಾಗುವುದಿಲ್ಲ. ಭೂಮಿ ಸಾಮಾಜಿಕ ಒಡೆತನದಲ್ಲಿ ಇಲ್ಲದಿದ್ದರೂ ಸಹ, ಭೂ-ಬಳಕೆಯನ್ನು ಸಾಮಾಜಿಕವಾಗಿಯೇ ನಿರ್ಧರಿಸಬೇಕು, ಇದೇತಾನೇ, ಇತರ ಉದ್ದೇಶಗಳಿಗಾಗಿ ಭತ್ತದ ಭೂಮಿಯನ್ನು ತಿರುಗಿಸುವುದನ್ನು ನಿಯಂತ್ರಿಸುವ ಕೇರಳ ಸರ್ಕಾರದ ಶಾಸನದ ಹಿಂದಿನ ತರ್ಕ.

ಇದರ ಅರ್ಥವೇನೆಂದರೆ, ಭೂಮಿ-ಮಾರಾಟದ ಒಂದು ನಿರ್ದಿಷ್ಟ ವಹಿವಾಟಿನ ಬಗ್ಗೆ ಖರೀದಿದಾರ ಮತ್ತು ಮಾರಾಟಗಾರನು ಒಪ್ಪಂದ ಮಾಡಿಕೊಂಡಿದ್ದರೂ, ಈ ವಹಿವಾಟಿನ ನಂತರ ಆ ಭೂಮಿಯನ್ನು ಪ್ರಸಕ್ತ ಬಳಕೆಗಿಂತ ಭಿನ್ನವಾಗಿ ಬಳಸುವುದಾದರೆ, ಅದಕ್ಕೆ ಸಾಮಾಜಿಕ ಅನುಮೋದನೆ ಇದ್ದರೆ ಮಾತ್ರವೇ ಆವಹಿವಾಟಿಗೆ ಅವಕಾಶ ನೀಡಬೇಕು. ಅರಣ್ಯ ಭೂಮಿಯನ್ನು, ಅದು ಯಾರದೇ ಒಡೆತನದಲ್ಲಿ ಇದ್ದರೂ,ಇತರ ಉದ್ದೇಶಗಳಿಗಾಗಿ ಬೇರೆಡೆಗೆ ತಿರುಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವ 1996ರ‍ಲ್ಲಿ ಸುಪ್ರಿಂಕೋರ್ಟ್ ಆದೇಶವನ್ನು ಈ ಸಾಮಾನ್ಯ ತತ್ವದ ಅನ್ವಯದ ನಿರ್ದಿಷ್ಟ ನಿದರ್ಶನವಾಗಿ ನೋಡಬಹುದು. ಈ ನಿರ್ದಿಷ್ಟ ನಿದರ್ಶನದಲ್ಲಿ, ಮುಕ್ತ ಮಾರುಕಟ್ಟೆಯ ಕ್ರಿಯೆಯನ್ನು ಮೊಟಕುಗೊಳಿಸಲು ತಕ್ಷಣದ ಮತ್ತು ಸರ್ವಸಾಮಾನ್ಯ ಒಪ್ಪಂದವಿರುತ್ತದೆ; ಆದರೆ ಮಾರುಕಟ್ಟೆಯ ಕ್ರಿಯೆಯನ್ನು ಮೊಟಕುಗೊಳಿಸುವ ಅಗತ್ಯವು ಹೆಚ್ಚು ವಿಸ್ತಾರವಾಗಿದೆ, ಅದು ಖಾಸಗಿ ಹಿತಾಸಕ್ತಿಗಳನ್ನು ಕಾಪಾಡುವುದು ಸಮಾಜದ ಹಿತಾಸಕ್ತಿಗಳ ರಕ್ಷಣೆಗೆ ಪೋಷಕವಾಗಿರಲೇ ಬೇಕೆಂದೇನಿಲ್ಲ ಎಂಬ ಸರಳ ತತ್ವದಿಂದ ಹೊಮ್ಮುವಂತದ್ದು.

ವಾಸ್ತವವಾಗಿ ಭೂ-ಬಳಕೆಯ ವಿಷಯದಲ್ಲಿ, ಮತ್ತು ಸಮಕಾಲೀನ ಭಾರತದ ಸಂದರ್ಭದಲ್ಲಿ, ಖಾಸಗಿ ಹಿತಾಸಕ್ತಿಯ ರಕ್ಷಣೆ ಮತ್ತು ಸಾಮಾಜಿಕ ಹಿತಾಸಕ್ತಿಯ ರಕ್ಷಣೆ ಸಾಮಾನ್ಯವಾಗಿ ಪರಸ್ಪರ ವಿರುದ್ಧವಾಗಿರುತ್ತದೆ. ಮಾರುಕಟ್ಟೆಯ ಸೆಳೆತ ಭೂಮಿಯನ್ನು ದುಡಿಯುವ ಬಡವರಿಗೆ ಸೇರಿದ ಅನೇಕರ ಅಗತ್ಯಗಳನ್ನು ಪೂರೈಸುವ ಬಳಕೆಯಿಂದ ಕೆಲವರ ಅಗತ್ಯಗಳನ್ನು ಪೂರೈಸುವ ರಿಯಲ್ ಎಸ್ಟೇಟ್‌ಗಳು ಮತ್ತು ಗಾಲ್ಫ್ ಕೋರ್ಸ್‌ಗಳತ್ತತಿರುಗಿಸುತ್ತದೆ.

ಇಲ್ಲಿ ನಾವು ನಮ್ಮಂತಹ ಒಂದು ಸಮಾಜದಲ್ಲಿ ಭೂ-ಬಳಕೆಯನ್ನು ಸಾಮಾಜಿಕವಾಗಿ ನಿರ್ಣಯಿಸಲು ನಿಖರವಾಗಿ ಎಂತಹ ವ್ಯವಸ್ಥೆಯನ್ನು ರಚಿಸ ಬೇಕು ಎಂಬುದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಸಹಜವಾಗಿ ಕಾಣುವ ಒಂದು ವ್ಯವಸ್ಥೆಯೆಂದರೆ, ಮಾರುಕಟ್ಟೆಗೆ ಬರುವ ಯಾವುದೇ ಭೂಮಿಯನ್ನು ಖರೀದಿಸುವ ಮೊದಲ ಹಕ್ಕನ್ನು ಸರ್ಕಾರಿ ಸ್ವಾಮ್ಯದ ನಿಗಮವು ಹೊಂದಿರುವುದು; ಅದು ಅದನ್ನು “ಮಂಜೂರಾದ” ಉದ್ದೇಶಗಳಿಗಾಗಿ ಮಾತ್ರ ಬಳಸುವ ಖರೀದಿದಾರರಿಗೆ ಭೂಮಿಯನ್ನು ಮಾರಾಟ ಮಾಡಬಹುದು; ಅಥವಾ, ಪರ್ಯಾಯವಾಗಿ, ಅದು “ಅನುಮೋದಿತ ಉದ್ದೇಶಗಳಿಗಾಗಿ” ಬಳಕೆಗಾಗಿ ಮಾತ್ರ ಎಂದಿದ್ದರೆ, ಅದನ್ನು ಮೀರಿ ಹೋಗುವವರು ದಂಡ ತೆರಬೇಕಾಗುತ್ತದೆ ಎಂಬ ನಿಬಂಧನೆಯೊಂದಿಗೆ ಮಾರಾಟಕ್ಕೆ ಮಾತ್ರ ಅನುಮತಿ ನೀಡಬಹುದು.

ಇದನ್ನೂ ಓದಿ: ಸಿದ್ಧರಾಮಯ್ಯ ಸರ್, ಚೆಂಡು ಈಗ ನಿಮ್ಮ ಅಂಗಳದಲ್ಲಿದೆ…..?

ಮಾರುಕಟ್ಟೆ-ನಿರ್ದೇಶಿತ ದಿಕ್ಕಿನತ್ತ ಮತ್ತೊಂದು ಪ್ರಯತ್ನ

ಆದರೆ ಮೋದಿ ಸರ್ಕಾರದ ಸಂಪೂರ್ಣ ಒತ್ತುತದ್ವಿರುದ್ಧ ದಿಕ್ಕಿನಲ್ಲಿದೆ, ಅಂದರೆ ಮಾರುಕಟ್ಟೆನಿರ್ದೇಶಿತ ದಿಕ್ಕಿನಲ್ಲಿ ಭೂ-ಬಳಕೆಯ ವಿಧಾನವನ್ನು ಬದಲಿಸಬೇಕು ಎಂಬುದರತ್ತ ಇದೆ. ಬಂಡವಾಳದ ಆದಿಮ ಸಂಚಯವೆಂದರೆ ಇದೇ ಆಗಿದೆ: ಇದರರ್ಥ ಕೇವಲ ಒಡೆತನದ ಕೇಂದ್ರೀಕರಣವಷ್ಟೇ ಅಲ್ಲ, ಹಲವರಲ್ಲಿ ಚದುರಿಹೋಗಿರುವ  ಸಣ್ಣ ಪ್ರಮಾಣದ ಮಾಲೀಕತ್ವದಿಂದ ಅಥವಾ ಸಾಮುದಾಯಿಕ ಮಾಲೀಕತ್ವದಿಂದ, ಕೆಲವೇ ಜನಗಳ ದೊಡ್ಡ ಪ್ರಮಾಣದ ಖಾಸಗಿ ಮಾಲೀಕತ್ವ ಸಾಗುವುದು ಎಂದೂ ಆಗುತ್ತದೆ. ಮಾಲೀಕತ್ವದಲ್ಲಿನ ಈ ಬದಲಾವಣೆಯೊಂದಿಗೇ, ಸಾಮಾನ್ಯವಾಗಿ ಭೂಮಿಯನ್ನು ಬಳಸುವ ಉದ್ದೇಶವೂ ಬದಲಾಗುತ್ತದೆ, ಹೆಚ್ಚಾಗಿ (ಸಣ್ಣ ಮಾಲೀಕರಕಡೆಯಿಂದ) ಬಳಕೆಗಾಗಿ ಉತ್ಪಾದನೆಯಿಂದ (ಯಾರ ಕೈಗಳಿಗೆ ಭೂಮಿ ಹಾದು ಹೋಗಿದೆಯೋ ಅವರ ಕಡೆಯಿಂದ) ಪೂರ್ಣ-ಪ್ರಮಾಣದ ಸರಕು ಉತ್ಪಾದನೆಯತ್ತ ಬದಲಾಗುತ್ತದೆ.

ಮೂರು ಕುಖ್ಯಾತ ಕೃಷಿ ಕಾನೂನುಗಳನ್ನುಇಂತಹುದೇ ಉದ್ದೇಶಗಳ ಸಾಧನೆಗೆಂದು ತರಲಾಗಿತ್ತು, ಅಂದರೆ. ಸ್ವಂತ ಬಳಕೆಗಾಗಿ, ಅಥವಾ ಭಾರತೀಯ ಆಹಾರ ನಿಗಮಕ್ಕೆ ಮಾರಾಟದ ಮೂಲಕ ರಾಷ್ಟ್ರೀಯ ಬಳಕೆಗಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸುವುದನ್ನು ಬಿಟ್ಟು, ಮುಂದುವರೆದ ಬಂಡವಾಳಶಾಹಿ ದೇಶಗಳಿಗಾಗಿ ವಾಣಿಜ್ಯ ಬೆಳೆಗಳನ್ನು ಉತ್ಪಾದಿಸುವ ಕಡೆಗೆ ಭೂ-ಬಳಕೆಯನ್ನು ಬದಲಾಯಿಸುವ ಉದ್ದೇಶವನ್ನು ಹೊಂದಿದ್ದವು. ಈಗ, ಅರಣ್ಯ ಸಂರಕ್ಷಣಾ ಕಾಯಿದೆಯ ತಿದ್ದುಪಡಿಯು ಅದನ್ನೇ ಮಾಡಲು ಪ್ರಯತ್ನಿಸುತ್ತಿದೆ: ಭೂ-ಬಳಕೆಯನ್ನು ಅರಣ್ಯದಿಂದ ರಿಯಲ್‌ಎಸ್ಟೇಟ್‌ ಅಥವಾ ಮುಂದುವರೆದ ದೇಶಗಳ ಅಥವಾ ದೇಶೀಯ ಶ್ರೀಮಂತರ ಬೇಡಿಕೆಗಳ ಸರಕುಗಳತ್ತ ತಿರುಗಿಸುವುದು, ಅತ್ತಅರಣ್ಯ-ಅವಲಂಬಿತ ಜನರನ್ನುಪೋಷಿಸುವ ಉತ್ಪನ್ನಗಳು ಅವರಿಗೆ ಇಲ್ಲದಂತೆ ಮಾಡುವುದು.

(ಅನು:ಕೆ.ವಿ.)

ವಿಡಿಯೋ ನೋಡಿ: ದೇಶವನ್ನು ಆಳವಾಗಿ ಘಾಸಿಗೊಳಿಸಿದ ಎರಡು ಘಟನೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *