ನಾ ದಿವಾಕರ
ಉಚಿತ ಸವಲತ್ತು/ಸೌಕರ್ಯಗಳು ವಂಚಿತ ಸಮುದಾಯಗಳ ಸಾಂವಿಧಾನಿಕ ಹಕ್ಕು
ಭಾಗ 1
ಸನ್ನಿವೇಶ 1 : ಗಗನ ಚುಂಬಿ ಮಹಲುಗಳಲ್ಲಿ, ಹವಾನಿಯಂತ್ರಿತ ಕೋಣೆಗಳಲ್ಲಿ, ಇಟಾಲಿಯನ್ ಕಿಚನ್‌ಗಳಲ್ಲಿ ತಯಾರಿಸಿದ ಪಿಜ್ಜಾ ಇತ್ಯಾದಿಗಳನ್ನು ಮೇಯುತ್ತಾ ಬದುಕು ಸವೆಸುವ ವ್ಯಕ್ತಿಗೆ ಅಥವಾ ಸಮುದಾಯಕ್ಕೆ ತುಸು ದೂರದಲ್ಲೇ ಇರುವ ಕಟ್ಟದ ಕಾರ್ಮಿಕರ ಗುಡಿಸಲುಗಳ ಸಮುಚ್ಚಯ ಸದಾ ಅಪಥ್ಯವಾಗಿಯೇ ಕಾಣುತ್ತದೆ. ತಾವು ಬದುಕುವ ಮುಗಿಲೆತ್ತರದ ಕಟ್ಟಡಗಳ ಅಡಿಪಾಯದಲ್ಲಿ ಇದೇ ಗುಡಿಸಲು ವಾಸಿಗಳ ಬೆವರು ಮತ್ತು ಶ್ರಮ ಸಮ್ಮಿಳಿತವಾಗಿರುವುದು ಗಣನೆಗೇ ಬರುವುದಿಲ್ಲ. ಯಾರೊಬ್ಬರೂ ತಮ್ಮ ಮಕ್ಕಳಿಗೆ ಈ ಗುಡಿಸಲುಗಳನ್ನು ತೋರಿಸುತ್ತಾ, ಇವರೇ ನಮ್ಮ ಮನೆಯನ್ನು ಕಟ್ಟಿದವರು, ನಮ್ಮ ಮಹಲಿನ ಗೇಟು ಕಾಯ್ದವರು ಎಂದು ಹೇಳುವುದೂ ಇಲ್ಲ. ಬದಲಾಗಿ ಮಕ್ಕಳು ಯಾವುದೇ ಕಾರಣಕ್ಕೂ ಆ ಜೋಪಡಿಗಳ ಬಳಿ ನುಸುಳದಂತೆ ಎಚ್ಚರ ವಹಿಸುತ್ತಾರೆ. ಆಧುನಿಕ ಜೀವನಶೈಲಿಗೆ ಒಗ್ಗಿಹೋಗುವ ಒಂದು ಇಡೀ ತಲೆಮಾರು ಈ ಗುಡಿಸಲು ವಾಸಿಗಳನ್ನು ನಿಕೃಷ್ಟವಾಗಿಯೇ ಕಾಣುತ್ತಾ, ತಮ್ಮ ಸುತ್ತಲಿನ ವಾತಾವರಣವನ್ನು ಭಂಗಗೊಳಿಸುವ ಪ್ರತ್ಯೇಕ ಸಮಾಜದಂತೆಯೇ ಕಾಣುತ್ತದೆ.
ಸನ್ನಿವೇಶ 2 : ಇತ್ತೀಚಿನ ದಿನಗಳಲ್ಲಿ ಒಂದು ಆಡಳಿತಾತ್ಮಕ ಫ್ಯಾಷನ್ ಆಗಿರುವ ಸ್ವಚ್ಚ ನಗರಿ ಎಂಬ ಕಿರೀಟ ಧರಿಸಲು ಎಲ್ಲ ಮಹಾನಗರಗಳೂ ಪೈಪೋಟಿ ನಡೆಸುತ್ತವೆ. ಕೇಂದ್ರ/ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೆರವು ಪಡೆಯುವ ಸಲುವಾಗಿ ನಡೆಯುವ ಈ ಪೈಪೋಟಿಗೆ ನೆರವಾಗುವ ಸಾವಿರಾರು ಸ್ವಚ್ಚತಾ ಕಾರ್ಮಿಕರು, ಪೌರ ಕಾರ್ಮಿಕರು ಮತ್ತು ಒಳಚರಂಡಿಗಳನ್ನು ಸ್ವಚ್ಚಗೊಳಿಸುವ ಶ್ರಮಿಕರು ನಗರ ಪ್ರದೇಶದಿಂದಾಚೆಗೆ ತಮ್ಮದೇ ಆದ ಪ್ರತ್ಯೇಕ ಬಡಾವಣೆಗಳಲ್ಲಿ ವಾಸಿಸುತ್ತಾರೆ. ಇಲ್ಲಿ ಜಾತಿ ಮತ್ತು ವರ್ಗ ಎರಡೂ ಸಮ್ಮಿಳಿತವಾಗಿರುವುದನ್ನು ಗಮನಿಸಬೇಕು. ದಿನನಿತ್ಯ ಮನೆಬಾಗಿಲಿಗೆ ಬಂದು ಕಸ ಸಂಗ್ರಹಿಸುವ ಮತ್ತು ಕಟ್ಟಿಕೊಂಡ ಹೇಲುಗುಂಡಿಗಳನ್ನು ಚರಂಡಿಗಳನ್ನು ಸ್ವಚ್ಚಗೊಳಿಸುವ ನೂರಾರು ಶ್ರಮಿಕರು ವಾಸಿಸುವ ಕಾಲೋನಿಗಳು ಆಧುನೀಕರಣಗೊಂಡ ಹಿತವಲಯದ ಸಮಾಜದಿಂದ ತುಸು ದೂರವೇ ಉಳಿದಿರುತ್ತದೆ. ಈ ಹಿತವಲಯ ಸಮಾಜದ ಮಕ್ಕಳ ದೃಷ್ಟಿಯಲ್ಲಿ ಈ ಕಾಲೋನಿಗಳು ದೂರದ ದ್ವೀಪಗಳಂತೆಯೇ ಕಾಣುತ್ತವೆ. ಯಾವುದೇ ಪ್ರತಿಷ್ಠಿತ/ಸಾಧಾರಣ ಶಿಕ್ಷಣ ಸಂಸ್ಥೆಗಳು ತಮ್ಮ ಮಕ್ಕಳನ್ನು ಅಲ್ಲಿಗೆ ಕರೆದೊಯ್ದು ಮಕ್ಕಳಿಗೆ ಅಲ್ಲಿನ ಜನಜೀವನದ ಪರಿಚಯ ಮಾಡುವ ʼಸಾಹಸʼ ಮಾಡುವುದಿಲ್ಲ.
ಸನ್ನಿವೇಶ 3 : ಮನೆಮನೆಯ ಬಾಗಿಲಿಗೆ ಬಂದು ಕಸ ಸಂಗ್ರಹಿಸುವ ಮತ್ತು ಅದನ್ನು ತ್ಯಾಜ್ಯ ಸಂಗ್ರಹ ಘಟಕದವರೆಗೂ ತಲುಪಿಸಿ, ಘನ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಮನೆಗೆ ತೆರಳುವ ಈ ಪೌರ ಕಾರ್ಮಿಕರ ಪೌರತ್ವವು ಯಾವುದೇ ಐಎಎಸ್ ಅಧಿಕಾರಿಯ ಅಥವಾ ಸಚಿವರ ಪೌರತ್ವದಷ್ಟೇ ಮೌಲಿಕವಾದುದು ಎಂಬ ಅರಿವು ಆಧುನೀಕರಣಗೊಂಡ ಹಿತವಲಯದ ಸಮಾಜದಲ್ಲಿ ಇರುವುದಿಲ್ಲ. ದಿನನಿತ್ಯ ಮುಂಜಾನೆ ಇವರ ಮುಖಗಳನ್ನೇ ನೋಡುತ್ತಿದ್ದರೂ ಮಕ್ಕಳಿಗೆ, ದೊಡ್ಡವರಿಗೂ ಸಹ, ಇವರ ಹೆಸರುಗಳೇ ತಿಳಿದಿರುವುದಿಲ್ಲ. 50 ವರ್ಷಗಳ ಹಿಂದೆ ಹೇಲುಗುಂಡಿ/ಮೋರಿ ಸ್ವಚ್ಚಗೊಳಿಸಲು ಬರುತ್ತಿದ್ದ ತೋಟಿಗಳಿಗೆ ನೀಡುತ್ತಿದ್ದ ಹಾಗೆಯೇ ಇಂದಿಗೂ ಈ ಕಾರ್ಮಿಕರಿಗೆ ಹಳಸಲು ಅನ್ನ ನೀಡುವ ಪರಿಪಾಠ ನಗರವಾಸಿಗಳಲ್ಲಿದೆ. (ಅದೂ ಪ್ಲಾಸ್ಟಿಕ್ ಕವರುಗಳಲ್ಲಿ). ತಮ್ಮ ಮಕ್ಕಳಿಗೆ ಈ ಶ್ರಮಿಕರ ಬದುಕಿನ ಬವಣೆಯನ್ನು ಕುರಿತು ಯಾವುದೇ ಪೋಷಕರು ಅರಿವು ಮೂಡಿಸುವುದಿಲ್ಲ. “ ಅವರು ಇರುವುದೇ ಹಾಗೆ ಅಥವಾ ಇರಬೇಕಾದ್ದೇ ಹಾಗೆ “ ಎನ್ನುವ ಕರ್ಮಸಿದ್ಧಾಂತದ ನೆಲೆಯಲ್ಲಿ ಈ ಶ್ರಮಿಕರ ನಿತ್ಯಕಾಯಕ ಸಾಗುತ್ತದೆ.
ಸನ್ನಿವೇಶ 4 : ಆಧುನಿಕ ಜಗತ್ತಿನಲ್ಲಿ ಹಿತವಲಯದಲ್ಲಿ ವಾಸಿಸುವ ಸುಶಿಕ್ಷಿತ ಶ್ರೀಮಂತ/ಮಧ್ಯಮವರ್ಗದ ಮಂದಿಗೆ ಆದಿವಾಸಿ ತಾಂಡಾಗಳು ಅಥವಾ ಹಾಡಿಗಳು ಪ್ರವಾಸಿ ತಾಣಗಳಾಗಿ ಕಾಣುವುದಷ್ಟೇ ಅಲ್ಲದೆ ಈ ಬುಡಕಟ್ಟು ಜನಸಮುದಾಯಗಳ ಜೀವನಶೈಲಿ ʼ ಪ್ರಾಚೀನ ಪರಂಪರೆಯ ʼ ದ್ಯೋತಕವಾಗಿ ಕಾಣುತ್ತದೆ. ಸಮಾಜಮುಖಿ ಸಂಶೋಧನಾತ್ಮಕ ಮನೋಭಾವವೇ ಇಲ್ಲದ ಸುಶಿಕ್ಷಿತ ವರ್ಗಗಳಲ್ಲಿ ಆದಿವಾಸಿಗಳ ಬದುಕು ನಮ್ಮ ಗತಪರಂಪರೆಯನ್ನು ಮೆಲುಕು ಹಾಕಲು ಇರುವ ಒಂದು ಪ್ರಾತ್ಯಕ್ಷಿಕೆಯಾಗಿ ಕಾಣುತ್ತದೆ. ಶಾಲಾ ವಿದ್ಯಾರ್ಥಿಗಳನ್ನು ಈ ಪ್ರದೇಶಗಳಿಗೆ ಪ್ರವಾಸ ಕರೆದೊಯ್ಯುವ ಶಾಲೆಗಳಲ್ಲೂ ಸಹ, ಹಿಂದಿರುಗಿದ ನಂತರ ವಿದ್ಯಾರ್ಥಿಗಳಿಗೆ “ ಬುಡಕಟ್ಟು ಸಮುದಾಯಗಳ ಜೀವನಶೈಲಿ ಮತ್ತು ವಾತಾವರಣ ”ದ ಬಗ್ಗೆ ಪ್ರಬಂಧಗಳನ್ನು ಬರೆಯುವ ಪ್ರಾಜೆಕ್ಟ್ ವರ್ಕ್ ನೀಡಲಾಗುತ್ತದೆ. ಅಲ್ಲಿನ ಸುಂದರ ಪರಿಸರದ ಹಿಂದೆ ಅಡಗಿರುವ ಹಸಿವು, ಬಡತನ, ಜೀವನಾವಶ್ಯ ಸೌಕರ್ಯಗಳ ಕೊರತೆ ಮತ್ತು ಪ್ರತ್ಯೇಕತೆಯ ನೋವು ಆಧುನಿಕ ಸಮಾಜದ ಕಣ್ಣಿಗೆ ಗೋಚರಿಸುವುದೇ ಇಲ್ಲ. ಇದನ್ನು ನೋಡುವ ಮಕ್ಕಳಲ್ಲಿ ಮೂಡಬಹುದಾದ ಕುತೂಹಲಗಳನ್ನೂ ಶೋಧಿಸುವ ಪ್ರಯತ್ನಗಳು ನಡೆಯುವುದಿಲ್ಲ.
ಸನ್ನಿವೇಶ 5 : ನವ ಉದಾರವಾದ ಮತ್ತು ಆಧುನಿಕ ಮಾರುಕಟ್ಟೆ ಆರ್ಥಿಕತೆಯ ನೆಲೆಯಲ್ಲಿ ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ನಗರೀಕರಣ ಪ್ರಕ್ರಿಯೆ ಮತ್ತು ತತ್ಸಂಬಂಧಿ ಮೂಲ ಸೌಕರ್ಯಗಳ ಕಾಮಗಾರಿಗಳು ಸುಶಿಕ್ಷಿತ/ಹಿತವಲಯದ ಮಕ್ಕಳ ಮನಸ್ಸನ್ನು ಸ್ವಾಭಾವಿಕವಾಗಿ ಸೂರೆಗೊಳ್ಳುತ್ತದೆ. ನೋಡನೋಡುತ್ತಿರುವಂತೆಯೇ ಒಂದು ರಸ್ತೆ ಅಗಲವಾಗಿ-ಎರಡಾಗಿ, ಮೇಲ್ ಸೇತುವೆಗಳು ಮೇಲೆದ್ದು, ಮೆಟ್ರೋ ರೈಲುಗಳು ನಗರದ ಅಂದವನ್ನು ಹೆಚ್ಚಿಸುತ್ತವೆ. ರಸ್ತೆ ಅಗಲೀಕರಣದ ಕಾಮಗಾರಿ ಸಹಜ ಪ್ರಕ್ರಿಯೆಯಂತೆ ನಡೆಯುತ್ತದೆ. ತಮ್ಮ ಸಂಚಾರವನ್ನು ಸುಗಮಗೊಳಿಸುವ ಈ ಕಾಮಗಾರಿಗಳಿಗೆ ನೂರಾರು ಕುಟುಂಬಗಳೇ ನಿರ್ಗತಿಕವಾಗುವ ಒಂದು ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿರುತ್ತದೆ. ಇಲ್ಲಿರುವ ವಿಡಂಬನೆ ಎಂದರೆ ಈ ನಗರೀಕರಣ ಪ್ರಕ್ರಿಯೆಯಲ್ಲಿ ಜೋಪಡಿಗಳನ್ನು/ಮನೆಗಳನ್ನು ನಿತ್ಯ ದುಡಿಮೆಗಾಗಿ ಬುಲ್ಡೋಜ್ ಮಾಡುವ ಶ್ರಮಿಕರು ಸ್ವತಃ ತಮ್ಮ ಮೂಲ ನೆಲೆಯಿಂದ ಉಚ್ಚಾಟಿತರಾಗಿರುತ್ತಾರೆ. ನಗರೀಕರಣ ಮತ್ತು ನಗರಗಳ ಉನ್ನತೀಕರಣದ ಬಗ್ಗೆ ಮಕ್ಕಳಲ್ಲಿ ಹೆಮ್ಮೆ ಮೂಡಿಸಲೆತ್ನಿಸುವ ಸುಶಿಕ್ಷಿತ/ಹಿತವಲಯದ ಮಂದಿ, ತಮ್ಮ ಮಕ್ಕಳಿಗೆ ಈ ನಿರ್ಗತಿಕರಾಗುವ ಸಮುದಾಯಗಳ ಬಗ್ಗೆ ಅತ್ಯಲ್ಪ ಮಾಹಿತಿಯನ್ನೂ ನೀಡುವುದಿಲ್ಲ.
ಈ ಐದೂ ಸನ್ನಿವೇಶಗಳಲ್ಲಿ ಜಾತಿ ಮತ್ತು ವರ್ಗದ ತಾರತಮ್ಯದ ನೆಲೆಗಳು ಹಾಗೂ ಶ್ರೇಣಿ ಪರಮಾಧಿಪತ್ಯದ ಧೋರಣೆ ಸ್ಫುಟವಾಗಿ ಕಾಣುತ್ತದೆ. ಹಾಗೆಯೇ ಆಧುನಿಕ ಜಗತ್ತಿನ ಹಿತವಲಯದಲ್ಲಿರುವ ಪರಿಪಕ್ವವಾದ ಜಾತ್ಯತೀತ ಧೋರಣೆಯನ್ನು (Secular outlook) ಇಲ್ಲಿ ಕಾಣುವುದು ಸಾಧ್ಯ.
ದಾರಿದ್ರ್ಯತೆಯ ಸಾಮಾಜಿಕ ದೃಷ್ಟಿ
ಆದರೆ ಈ ಸನ್ನಿವೇಶಗಳ ನಡುವೆ ಆಧುನಿಕ/ಸುಶಿಕ್ಷಿತ/ಹಿತವಲಯದ ಸಮಾಜ ಗುರುತಿಸಬೇಕಾದ್ದು ಅಲ್ಲಿ ಕಾಡುವ ಬಡತನ, ಹಸಿವು, ನಿರ್ಗತಿಕತೆ ಹಾಗೂ ಕಾಯಕ ಬದುಕಿನ ಅಸಹಾಯಕತೆಗಳು. ನಾಡಿನ ಭವ್ಯ ಪರಂಪರೆ ಮತ್ತು ಸಮಕಾಲೀನ ಶ್ರೀಮಂತಿಕೆಯ ಬಗ್ಗೆ ಬೆನ್ನುತಟ್ಟಿಕೊಳ್ಳುವ ಮೇಲ್ವರ್ಗದ, ಮೇಲ್ಜಾತಿಯ ಸಮುದಾಯಗಳಿಗೆ ಈ ʼ ಅನ್ಯಲೋಕದ ʼ ಮಕ್ಕಳು ಮತ್ತು ಸಾಮಾನ್ಯವಾಗಿ ಅಲ್ಲಿನ ಮಹಿಳೆಯರಲ್ಲಿರುವ ಅಪೌಷ್ಟಿಕತೆ, ಅನಕ್ಷರತೆ, ಆಹಾರ-ಶಿಕ್ಷಣ-ಆರೋಗ್ಯ ಸೌಲಭ್ಯಗಳ ಕೊರತೆ ಢಾಳಾಗಿ ಕಾಣುತ್ತಲೇ ಇದ್ದರೂ ಒಳಹೊಕ್ಕು ನೋಡುವ ವ್ಯವಧಾನ ಕಂಡುಬರುವುದಿಲ್ಲ. ಕಾಯಕ ಜಗತ್ತಿನ ಬೆವರಿನ ದುಡಿಮೆ ಮತ್ತು ಅವಕಾಶವಂಚಿತ ಜೀವನದ ಫಲಾನುಭವಿಗಳನ್ನು ಈ ಸಮಾಜ ಪ್ರತಿನಿಧಿಸುತ್ತದೆ. ಇಂತಹ ಒಂದು ಸಮಾಜ ತನ್ನ ಸಮಾಜಮುಖಿ ಮುಖವಾಡವನ್ನು ತೊಟ್ಟುಕೊಂಡೇ, ಹೊಸ ತಲೆಮಾರಿನ ಎಳೆ ಮನಸುಗಳನ್ನು ಸಹ ವಾಸ್ತವಕ್ಕೆ ವಿಮುಖವಾಗಿಸುತ್ತದೆ. ಹಾಗಾಗಿಯೇ ಏಕಾದಶಿ ಉಪವಾಸ ಅಥವಾ ಸೋಮವಾರದ ಮಾಂಸಾಹಾರ ವರ್ಜನೆಯ ಹಿಂದೆ ವೈಜ್ಞಾನಿಕತೆಯನ್ನು ಗುರುತಿಸುವ ಯುವ ಮನಸುಗಳು ಈ ಅನ್ಯಲೋಕದಲ್ಲಿರುವ ಹಸಿವೆಯ ಕಾರಣಗಳನ್ನು ವೈಜ್ಞಾನಿಕವಾಗಿ ಶೋಧಿಸಲು ಮುಂದಾಗುವುದಿಲ್ಲ.
ಬಡತನ, ದಾರಿದ್ರ್ಯ ಮತ್ತು ಹಸಿವು ಇವು ಮಾನವ ಸಮಾಜವನ್ನು ಸದಾ ಕಾಲವೂ ಕಾಡುವ ಒಂದು ವ್ಯಾಧಿ. ಇದನ್ನು ಗುರುತಿಸಿಯೂ ಸಹ ಕಾರಣಗಳನ್ನು ಶೋಧಿಸಲು ಮುಂದಾಗದೆ ಪ್ರಕೃತಿ ನಿಯಮವೇನೋ ಎಂಬಂತೆ ಪರಿಭಾವಿಸಿ ಹಿತವಲಯಗಳಲ್ಲಿ ಬದುಕುವುದು ಸಮಾಜದ ಒಂದು ವರ್ಗದ ವ್ಯಸನ. ಬಡತನ ಮತ್ತು ಹಸಿವು ಅನುಭವಕ್ಕೆ ನಿಲುಕುವಂತೆಯೇ ಅನುಭಾವದ ನೆಲೆಗಳಿಗೂ ನಿಲುಕಲು ಸಾಧ್ಯ. ಆದರೆ ಹಸಿವಿನಿಂದ ಉಂಟಾಗುವ ವೇದನೆ, ತಳಮಳ, ಅಪಮಾನ ಹಾಗೂ ಚಿತ್ರಹಿಂಸೆ ಕೇವಲ ಅನುಭವಕ್ಕೆ ಮಾತ್ರವೇ ನಿಲುಕುವಂತಹುದು. ಸಮಾಜದ ಅಭಿವೃದ್ಧಿ ಪಥದಲ್ಲಿ ಫಲಾನುಭವಿಗಳಾಗಿ ತಮ್ಮದೇ ಆದ ಬದುಕು ರೂಪಿಸಿಕೊಳ್ಳುವ ಹಿತವಲಯಗಳಲ್ಲಿ ಮಕ್ಕಳನ್ನು ಬೆಳೆಸುವಾಗ, ಈ ಅಗೋಚರ ವೇದನೆ ಮತ್ತು ತಲ್ಲಣಗಳನ್ನು ಅರ್ಥಮಾಡಿಕೊಳ್ಳುವಂತಹ ಒಳನೋಟಗಳನ್ನು ಅವರಲ್ಲಿ ಬೆಳೆಸಬೇಕಾಗುತ್ತದೆ. ಹಾಗೆ ಮಾಡದೆ ಹೋದರೆ ಒಂದು ಇಡೀ ಪೀಳಿಗೆ ಸಮಾಜದ ಕೆಳಸ್ತರದ ತಲ್ಲಣಗಳಿಗೆ ವಿಮುಖವಾಗಿಯೇ ಬೆಳೆಯುತ್ತದೆ. ಸಾಮಾನ್ಯವಾಗಿ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿಯ ಫಲಾನುಭವಿ ಪ್ರಜೆಗಳು ತಮ್ಮ ಮುಂದಿನ ತಲೆಮಾರನ್ನು ಈ ಹಾದಿಯಲ್ಲೇ ಬೆಳೆಸುತ್ತಾರೆ.
ಹಾಗಾಗಿಯೇ ಸಾರ್ವಜನಿಕ ಸಂಕಥನಗಳಲ್ಲಿ ಬಡತನ ಮತ್ತು ಹಸಿವು ಒಂದು ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನವಾಗಿ ಕಂಡುಬರುವುದಿಲ್ಲ. ಈ ಬಡತನ ಮತ್ತು ಹಸಿವೆಗೆ, ಅವುಗಳು ಸೃಷ್ಟಿಸುವ ಅಸಮಾನತೆಯ ನೆಲೆಗಳಿಗೆ, ನಾವು ಅನುಸರಿಸುವ ಆರ್ಥಿಕ ನೀತಿಗಳು ಮತ್ತು ರಾಜಕೀಯ ಮಾದರಿಗಳೇ ಕಾರಣ ಎನ್ನುವುದನ್ನೂ ಸಹ ನಿಷ್ಕರ್ಷೆಗೊಳಪಡಿಸುವುದಿಲ್ಲ. ಮಾರ್ಕ್ಸ್ ತನ್ನ ತಾತ್ವಿಕ ಚಿಂತನೆಗಳಲ್ಲಿ ಬಡತನ ದಾರಿದ್ರ್ಯತೆ ಮತ್ತು ಹಸಿವೆಯನ್ನು ಸಾಮಾಜಿಕ ಸ್ಥಿತ್ಯಂತರಗಳ ಒಂದು ಪರಿಣಾಮವಾಗಿಯೇ ಕಾಣುತ್ತಾನೆ. ಮಾರ್ಕ್ಸ್ ಮತ್ತು ಏಂಗೆಲ್ಸ್ ಅವರಿಗೆ ದಾರಿದ್ರ್ಯತೆಯ ಹಿಂದೆ ಅಡಗಿರುವ ಸಾಮಾಜಿಕ ವ್ಯತ್ಯಯಗಳು, ಸಾಂಸ್ಕೃತಿಕ ಮೇಲರಿಮೆ ಮತ್ತು ಉತ್ಪಾದನಾ ಪ್ರಕ್ರಿಯೆಯ ಹಿಂದಿರುವ ಕ್ರೌರ್ಯವೇ ಪ್ರಧಾನವಾಗಿ ಕಾಣುತ್ತದೆ. ಈ ಕ್ರೌರ್ಯವನ್ನು ಮತ್ತು ಅದರಿಂದ ಸೃಷ್ಟಿಯಾಗುವ ಅಸಮಾನತೆಯ ನೆಲೆಗಳನ್ನು ವಸ್ತುನಿಷ್ಠವಾಗಿ ಶೋಧಿಸದೆ ಹೋದರೆ ಬಡತನ ಅಥವಾ ದಾರಿದ್ರ್ಯ ಒಂದು ವರ್ಗದ ಪೂರ್ವ ಜನ್ಮದ ಕರ್ಮಫಲವಾಗಿಯೋ ಅಥವಾ ವರ್ತಮಾನದ ಸಾಮಾಜಿಕ ಅನಿವಾರ್ಯತೆಯಾಗಿಯೋ ಕಾಣುತ್ತದೆ. ಅಲ್ಲಿ ಕಾಣುವ ಹಸಿವು ವಿಶಾಲ ಸಮಾಜದ ದೃಷ್ಟಿಯಲ್ಲಿ ಕ್ರೌರ್ಯ ಎನಿಸುವುದೇ ಇಲ್ಲ.
ಬಡತನ-ಹಸಿವು ಮತ್ತು ಆರ್ಥಿಕತೆ
ಸಂಪತ್ತಿನ ಒಡೆತನ, ಸಂಪನ್ಮೂಲಗಳ ಮೇಲಿನ ಯಜಮಾನಿಕೆ ಹಾಗೂ ಇವುಗಳ ಮುಖಾಂತರವೇ ನಡೆಯುವ ಉತ್ಪಾದನೆಯ ಪ್ರಕ್ರಿಯೆಯಲ್ಲಿ, ತದನಂತರದ ಉತ್ಪಾದಿತ ಸಂಪತ್ತಿನ ವಿತರಣೆಯ ಚೌಕಟ್ಟಿನಲ್ಲಿ, ಉತ್ಪಾದಕೀಯ ಶಕ್ತಿಗಳನ್ನು ನಿಕೃಷ್ಟವಾಗಿಯೇ ಕಾಣುವ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಬಡತನ ಮತ್ತು ಹಸಿವು ಸಹಜ ವಿದ್ಯಮಾನಗಳಾಗಿಯೇ ಕಾಣುತ್ತದೆ. ಹಾಗಾಗಿಯೇ ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಸಮರ್ಥಿಸುವ ಅರ್ಥಶಾಸ್ತ್ರಜ್ಞರೂ, ವಿದ್ವಾಂಸರೂ ಸಹ ಬಡತನವನ್ನು ನಿವಾರಿಸುವ, ಹಸಿವೆಯನ್ನು ನೀಗಿಸುವ ತಾತ್ಕಾಲಿಕ ಸೂತ್ರಗಳನ್ನು ಮುಂದಿರಿಸುತ್ತಾರೆಯೇ ಹೊರತು, ಮೂಲತಃ ಸಮಾಜವನ್ನು ಹಸಿವು ಮುಕ್ತವಾಗಿಸುವ ನಿಟ್ಟಿನಲ್ಲಿ ಯೋಚಿಸುವುದಿಲ್ಲ. 1970ರ ದಶಕದ ಗರೀಬಿ ಹಠಾವೋ ಘೋಷಣೆಯಿಂದ ಇವತ್ತಿನ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯವರೆಗೂ ಇದೇ ಆಡಳಿತ ನೀತಿಯನ್ನು ನಾವು ಕಾಣುತ್ತಿದ್ದೇವೆ. ಈ ಅರ್ಥವ್ಯವಸ್ಥೆಯಲ್ಲಿ ಬಡತನ, ದಾರಿದ್ರ್ಯ ಮತ್ತು ಹಸಿವೆಯನ್ನು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆಯ ಚೌಕಟ್ಟಿನಲ್ಲಿ ನಿಷ್ಕರ್ಷೆ ಮಾಡದೆ, ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮಾರ್ಗದ ಅನಿವಾರ್ಯ ತಡೆಗೋಡೆಗಳಂತೆಯೇ ಕಾಣಲಾಗುತ್ತದೆ.
ಆದ್ದರಿಂದಲೇ ಬಂಡವಾಳಶಾಹಿ ಆರ್ಥಿಕತೆಯನ್ನು ಅನುಸರಿಸುವಾಗಲೂ ಸಹ, ಆಳುವ ವರ್ಗಗಳು ಪ್ರಜಾಕಲ್ಯಾಣ ಪ್ರಭುತ್ವದ (Welfare State) ನೀತಿಗಳನ್ನು ಜಾರಿಗೊಳಿಸುವ ಉತ್ಸಾಹ ತೋರುತ್ತವೆ. ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಸುಸ್ಥಿರಗೊಳಿಸುವುದಕ್ಕಿಂತಲೂ , ಬದುಕುವ ಹಾದಿ ಸುಗಮಗೊಳಿಸುವ ಮೂಲಕ, ಅತೃಪ್ತಿಯ ಹೊಗೆ ಸ್ಫೋಟಿಸದಂತೆ ಎಚ್ಚರ ವಹಿಸುವ ಒಂದು ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸುತ್ತವೆ. ಬಡತನ ಮತ್ತು ದಾರಿದ್ರ್ಯವನ್ನು ತಮ್ಮ ಪೂರ್ವ ಜನ್ಮದ ಕರ್ಮಫಲ ಎಂದು ಭಾವಿಸುವ ಜನಸಂಖ್ಯೆಯೇ ಹೆಚ್ಚಾಗಿರುವ ಭಾರತದಂತಹ ದೇಶಗಳಲ್ಲಿ ಈ ಜನಕಲ್ಯಾಣ ನೀತಿಗಳೇ ಬಹುಸಂಖ್ಯಾತ ಜನತೆಗೆ ಅಪ್ಯಾಯಮಾನವಾಗಿ ಕಾಣುತ್ತದೆ. ಕೆಳಸ್ತರದ ಶೋಷಿತ ಶ್ರಮಿಕ ಸಮುದಾಯಗಳ ಸಾಮಾಜಿಕ-ಆರ್ಥಿಕ ಬುನಾದಿಯನ್ನು ಸುಸ್ಥಿರಗೊಳಿಸದೆಯೇ ಇವರ ಜೀವನೋಪಾಯ ಮಾರ್ಗಗಳಿಗೆ ಭಂಗ ಉಂಟಾಗದಂತೆ ಎಚ್ಚರವಹಿಸುವ ಬಂಡವಾಳಶಾಹಿ ಆರ್ಥಿಕತೆಯ ಒಂದು ಸುಲಭ ಮಾರ್ಗವೇ ಪ್ರಜಾಕಲ್ಯಾಣ ಅರ್ಥವ್ಯವಸ್ಥೆ (Welfare economics). ಬಡತನ, ದಾರಿದ್ರ್ಯ ಮತ್ತು ಹಸಿವೆಯನ್ನು ತಮ್ಮ ನಿತ್ಯ ಬದುಕಿನ ಭಾಗ ಎಂದೇ ಭಾವಿಸುವ ಕೆಳಸ್ತರದ ಸಮಾಜವು ಈ ಅರ್ಥವ್ಯವಸ್ಥೆಯಲ್ಲಿ ಗುಟುಕು ಹನಿಗಾಗಿ ಹಾತೊರೆಯುತ್ತಿರುತ್ತವೆ. ಈ ಗುಟುಕು ಹನಿಗಳನ್ನು ಕ್ರೋಢಿಕರಿಸಿ ಬೊಗಸೆಯಲ್ಲಿ ನೀಡುವ ಆಳುವ ವ್ಯವಸ್ಥೆ ಶ್ರೀಸಾಮಾನ್ಯನ ದೃಷ್ಟಿಯಲ್ಲಿ ಹೆಚ್ಚು ಜನಪರ-ಸರ್ಕಾರ ಎಂದೆನಿಸಿಕೊಳ್ಳುತ್ತದೆ.
ಮೇಲೆ ಉಲ್ಲೇಖಿಸಿದ ಐದು ಸನ್ನಿವೇಶಗಳಲ್ಲಿ ನಾವು ಕಾಣುವ ಒಂದು ಹಿತವಲಯದ ಸಮಾಜದ ದೃಷ್ಟಿಯಲ್ಲಿ ಇಂತಹ ಜನಪರ ಎನಿಸಿಕೊಳ್ಳುವ ಸರ್ಕಾರಗಳು ಕೆಳಸ್ತರದ ಜನತೆಗೆ ನೀಡುವ ಉಚಿತ ಸವಲತ್ತುಗಳು ʼಬೊಕ್ಕಸಕ್ಕೆ ದುಬಾರಿʼ ಎನಿಸುತ್ತದೆ. ರೇವ್ಡಿ ಸಂಸ್ಕೃತಿ ಎಂದು ಅಪಹಾಸ್ಯಕ್ಕೊಳಗಾಗುತ್ತಿರುವ ಉಚಿತ ಸವಲತ್ತು/ಸೌಕರ್ಯಗಳನ್ನು ವಿರೋಧಿಸುವ ಅಥವಾ ಅಪಹಾಸ್ಯ ಮಾಡುವ ಒಂದು ಬೃಹತ್ ವಲಯ ಇದೇ ಹಿತವಲಯಗಳ ಗರ್ಭದಲ್ಲೇ ಉಗಮಿಸುತ್ತದೆ. ಆಳುವ ವರ್ಗಗಳ ದೃಷ್ಟಿಯಲ್ಲಿ ಈ ಉಚಿತ ಸವಲತ್ತುಗಳು, ಸಾಮಾಜಿಕ-ಆರ್ಥಿಕತೆಯ ಅಸಮಾನತೆಗಳನ್ನು ಯಥಾಸ್ಥಿತಿಯಲ್ಲಿರಿಸುವ ಅಸ್ತ್ರಗಳಾಗಿ ಕಾಣುತ್ತದೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆಯು ಮಾನವ ಸಮಾಜದಲ್ಲಿ ಅಂತರ್ಗತವಾಗಿರಬಹುದಾದ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯನ್ನೂ ಲೆಕ್ಕಿಸದೆ, ಬಂಡವಾಳದ ಸಾಮ್ರಾಜ್ಯವನ್ನು ವಿಸ್ತರಿಸಲು ಅಪೇಕ್ಷಿಸುವುದರಿಂದ, ರೇವ್ಡಿ ಸಂಸ್ಕೃತಿಯನ್ನೇ ಕೊನೆಗೊಳಿಸಬೇಕೆನ್ನುವ ಕೂಗು ಮಾರುಕಟ್ಟೆಯಲ್ಲಿ ಸದಾ ಧ್ವನಿಸುತ್ತಿರುತ್ತದೆ. ಉಚಿತಗಳನ್ನು ಅಪಹಾಸ್ಯ ಮಾಡುವ ಮಧ್ಯಮ/ಮೇಲ್ವರ್ಗದ ಮನಸುಗಳು ಈ ಧ್ವನಿಯನ್ನೇ ಪ್ರತಿಧ್ವನಿಸುತ್ತವೆ.̈
( ಉಚಿತ ಸವಲತ್ತು ಮತ್ತು ಸೌಕರ್ಯಗಳ ವಾಸ್ತವತೆಗಳು- ಮುಂದಿನ ಲೇಖನದಲ್ಲಿ)
-೦-೦-೦-೦-