“ಎಲ್ಐಸಿ ಪಾಲಿಸಿದಾರರ ಹಣ ಸಂಪೂರ್ಣ ಸುರಕ್ಷಿತ”

ಅದಾನಿ ಸಮೂಹದ ಶೇರು ಮೌಲ್ಯ ಕುಸಿತದಿಂದ ತಮ್ಮ ಹಣದ ಸುರಕ್ಷತೆಯ ಬಗ್ಗೆ ಎಲ್‍ಐಸಿ ಪಾಲಿಸಿದಾರರು ಚಿಂತಿಸಬೇಕಾಗಿಲ್ಲ. ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೆ ಭಾರತದ ಪ್ರತಿಯೊಬ್ಬರೂ  ಅರ್ಥವ್ಯವಸ್ಥೆಯ ಈಗಿನ ಏಕಸ್ವಾಮ್ಯದ ಬಗ್ಗೆ ಚಿಂತಿಸಬೇಕಾಗಿದೆ.  ಏಕೆಂದರೆ ಈ ರೀತಿಯ ಆರ್ಥಿಕ ಮಾದರಿಯಿಂದಾಗಿ ದೇಶದಲ್ಲಿ ಅಪಾರ ಅಸಮಾನತೆ ಉಂಟಾಗುತ್ತಿದೆ ಎನ್ನುತ್ತಾರೆ ಅಖಿಲ ಭಾರತ ವಿಮಾ ನೌಕರರ ಸಂಘ (ಎಐಐಇಎ)ದ ಹಿಂದಿನ ಅಧ್ಯಕ್ಷರಾದ ಅಮಾನುಲ್ಲ ಖಾನ್.

ಶೇರು ಮಾರುಕಟ್ಟೆಯಲ್ಲಿ ‘ಶಾರ್ಟ್‍ ಸೆಲ್ಲಿಂಗ್’ ಎಂಬ ವ್ಯವಹಾರದಲ್ಲಿ ತೊಡಗಿರುವ ಯುಎಸ್ ಮೂಲದ ‘ಹಿಂಡೆನ್‌ಬರ್ಗ್ ರಿಸರ್ಚ್‌’ ಸಂಸ್ಥೆ ಅದಾನಿ ಸಮೂಹದ ಷೇರು ವ್ಯವಹಾರಗಳನ್ನು ಕುರಿತು ಪ್ರಕಟಿಸಿದ ವರದಿಯನ್ನು ಅನುಸರಿಸಿ ಶೇರು ಮಾರುಕಟ್ಟೆಯಲ್ಲಿ ಅದರ ಷೇರುಗಳ ಭಾರೀ ಕುಸಿತದಿಂದ ಭಾರತೀಯ ಜೀವ ವಿಮಾ ನಿಗಮ(ಎಲ್‍ಐಸಿ)ದ ಪಾಲಿಸಿದಾರರು ಮತ್ತು ಹೂಡಿಕೆದಾರರು ಆತಂಕ ಪಡಬೇಕೇ?  ಏಕೆಂದರೆ ಸಾರ್ವಜನಿಕ ವಲಯದ  ಎಲ್‍ಐಸಿ  ಅದಾನಿ ಸಮೂಹ ಕಂಪನಿಗಳಲ್ಲಿ  35000 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದೆ.

ಇದನ್ನು ಓದಿ: ಅದಾನಿ ಸಮೂಹ ಸಂಸ್ಥೆಯ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ

 ಈ ಕುರಿತು ಎಲ್ಐಸಿ ಒಂದು ಹೇಳಿಕೆಯನ್ನು ನೀಡಿ, ಅದಾನಿ ಸಮೂಹದಲ್ಲಿ ತನ್ನ ಒಟ್ಟು ಹೂಡಿಕೆಯು ತನ್ನ ಎ.ಯು.ಎಂ.(ನಿರ್ವಹಣೆಯ ಅಡಿಯಲ್ಲಿರುವ ಆಸ್ತಿಗಳ) 1% ಕ್ಕಿಂತ ಕಡಿಮೆ ಎಂದು ಹೇಳಿದೆ.

ಎಲ್‍ಐಸಿ ಪಾಲಿಸಿದಾರರು ಈ ಬಗ್ಗೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಎಲ್ಐಸಿ ಯಾವುದೇ ಕಂಪನಿಯಲ್ಲಿ ದೀರ್ಘಕಾಲಾವಧಿಯ ಹೂಡಿಕೆ ಮಾಡುತ್ತದೆ, ಮತ್ತು ಒಂದು ಕಾರ್ಮಿಕ ಸಂಘಟನೆಯಾಗಿ ಮತ್ತು ಸಾರ್ವಜನಿಕ ಸಂಸ್ಥೆಯಾಗಿ ನಮ್ಮ ಕೆಲಸವೆಂದರೆ, ಎಲ್ಐಸಿ ಎಲ್ಲೆಲ್ಲಿ ಹೂಡಿಕೆ ಮಾಡಿದರೂ ಅದರ ಪ್ರಯೋಜನವು ಒಟ್ಟಾಗಿ ಸಮಾಜಕ್ಕೆ ಸಿಗಬೇಕು ಎಂದು,  ಹಾಗೆಯೇ ಪಾಲಿಸಿದಾರರ ಹಣದ ಸಂಪೂರ್ಣ ಸುರಕ್ಷತೆಯೂ ಇರುವಂತೆ ಖಚಿತಪಡಿಸುವುದು.

ಆದರೆ ಭಾರತದ ಜನತೆ ಆತಂಕ ಪಡಬೇಕಾದ ಬೇರೆ ವಿಚಾರಗಳೂ ಇದರಲ್ಲಿವೆ ಎನ್ನುತ್ತಾರೆ  ಈ ಪ್ರಶ್ನೆಗೆ ಉತ್ತರ ನೀಡುತ್ತ  ಎ.ಐ.ಐ.ಇ.ಎ. ಪೂರ್ವ ಅಧ್ಯಕ್ಷರಾದ ಅಮಾನುಲ್ಲಾ ಖಾನ್.

ಭಾರತೀಯ ಅರ್ಥವ್ಯವಸ್ಥೆಯ ಒಂದು ದೊಡ್ಡ ಭಾಗ, ಮೂಲಸೌಕರ್ಯ ಯೋಜನೆಗಳು- ಬಂದರುಗಳಿಂದ ಹಿಡಿದು ವಿಮಾನ ನಿಲ್ದಾಣಗಳವರೆಗೆ ಒಬ್ಬ ವ್ಯಕ್ತಿಯ ಕಂಪನಿಯ ಒಡೆತನದಲ್ಲಿವೆ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲ.  ಇದು ಎತ್ತಬೇಕಾದ ಆಧಾರಭೂತ ಪ್ರಶ್ನೆಯಾಗಿದೆ. ಇದು ನಮ್ಮ ದೇಶದ ಎಲ್ಲರೂ ಚಿಂತಿಸಬೇಕಾದ ವಿಷಯವಾಗಿದೆ;  ಏಕೆಂದರೆ ಈ ರೀತಿಯ ಆರ್ಥಿಕ ಮಾದರಿಯಿಂದಾಗಿ ದೇಶದಲ್ಲಿ ಅಪಾರ ಅಸಮಾನತೆ ಉಂಟಾಗುತ್ತಿದೆ ಎನ್ನುತ್ತಾರೆ ಅವರು.

Rediff.com ನ ಶೋಭಾ ವಾರಿಯರ್ ಈ ಬಗ್ಗೆ ಅವರೊಂದಿಗೆ ನಡೆಸಿದ ಸಂದರ್ಶನದ ಕನ್ನಡ ಅನುವಾದವನ್ನು ಈ ಮುಂದೆ ಕೊಡಲಾಗಿದೆ:

  • ಅದಾನಿ ವಿವಾದದ ಬಗ್ಗೆ ಸರ್ಕಾರ ಮೌನವಾಗಿರುವುದೇಕೆ? ಅದಾನಿ ಸಮೂಹದಲ್ಲಿ ತನ್ನ ಒಟ್ಟು ಎಯುಎಂ ನ 1% ಕ್ಕಿಂತ ಕಡಿಮೆ ಹೂಡಿಕೆ ಮಾಡಿದೆ ಎಂದು LIC ಹೇಳುತ್ತಿದೆ.  ಇದು 35,000 ಕೋಟಿ ರೂ. (350 ಶತಕೋಟಿ ರೂ.) ಗಿಂತಲೂ ಹೆಚ್ಚಿದೆ.  ಈ ಬಗ್ಗೆ ಜನರು ಕಾಳಜಿ ವಹಿಸಬೇಕೇ?

ಅಮಾನುಲ್ಲಾ ಖಾನ್:  ಇದನ್ನು ಎರಡು ಭಾಗಗಳಲ್ಲಿ ಉತ್ತರಿಸುತ್ತೇನೆ.  ಒಂದು, ಅದಾನಿ ಬೆಳವಣಿಗೆಯು ಭಾರತದಲ್ಲಿ ಬಂಟ-ಬಂಡವಾಳಶಾಹಿ(ಕ್ರೋನಿ ಕ್ಯಾಪಿಟಲಿಸಂ)ಗೆ ಪರಿಪೂರ್ಣವಾದ ಉದಾಹರಣೆ. ಒಂದು ಸಂಘಟನೆಯಾಗಿ ನಮಗೆ ಇದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂಡೆನ್‌ಬರ್ಗ್ ವರದಿಯು ಕೆಲವು ಸಮಂಜಸವಾದ  ಪ್ರಶ್ನೆಗಳನ್ನು ಕೇಳಿದೆ ಎಂಬುದನ್ನು ನಾವು ಸಹ ಒಪ್ಪುತ್ತೇವೆ. ಹಾಗೆಯೇ ಒಂದು ಸಂಘಟನೆಯಾಗಿ, ಇದು ಭಾರತದ ಅರ್ಥವ್ಯವಸ್ಥೆಗೆ ಮುಖ್ಯವಾಗಿರುವ ವಿಚಾರವಾದ ಕಾರಣ ಸರ್ಕಾರವು ತನಿಖೆಗೆ ಆದೇಶಿಸಬೇಕು ಮತ್ತು ಸತ್ಯವನ್ನು ಕಂಡುಹಿಡಿಯಬೇಕೆಂದು ಬಯಸುತ್ತೇವೆ. ಎಲ್‌ಐಸಿಯಲ್ಲಿ ಹೂಡಿಕೆದಾರರಿಗೆ ಭರವಸೆ ನೀಡಲು ನ್ಯಾಯಯುತ ವಿಚಾರಣೆ ನಡೆಸುವುದು ಅವಶ್ಯಕ. ಸೆಬಿ (SEBI) ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬ ಆತಂಕವೂ ನಮಗಿದೆ. ಸೆಬಿ ಕೂಡ ಸತ್ಯವನ್ನು ಕಂಡುಹಿಡಿಯಬೇಕು. ಅದಾನಿಯ ಬೆಳವಣಿಗೆಯಾದ ರೀತಿಯ ಬಗ್ಗೆ ನಮ್ಮ ವಿರೋಧವಿದೆ. ಇದು ಒಬ್ಬ ವ್ಯಕ್ತಿ ಬೆಳೆಯಲು ಸಹಾಯ ಮಾಡುವ ರಾಜಕೀಯ ಕೃಪಾಪೋಷಣೆಯ ಸ್ಪಷ್ಟ ನಿದರ್ಶನವಾಗಿದೆ.

ಇದನ್ನು ಓದಿ: ಉದ್ಯಮಿ ಅದಾನಿ ಸಮೂಹ ಸಂಸ್ಥೆಗಳ ಷೇರು ಕುಸಿತ; ಎಲ್​​ಐಸಿಗೆ ರೂ. 18000 ಕೋಟಿ ನಷ್ಟ

ಮುಂದಿನ ಅಂಶವೆಂದರೆ, ಎಲ್ಐಸಿ ಮೇಲೆ ಅದಾನಿ ಪ್ರಭಾವ. ಹಿಂಡೆನ್‌ಬರ್ಗ್ ವರದಿಯ ಕೆಲ ವಿಚಾರಗಳ ಬಗ್ಗೆ ತನಗೆ ಕಳವಳ ಇದೆ ಎಂದು ಎಲ್ಐಸಿ ಸ್ಪಷ್ಟವಾಗಿ ಹೇಳಿದೆ. ಅತಿದೊಡ್ಡ ಹೂಡಿಕೆದಾರರಾಗಿ, ವರದಿ ಕಂಡುಕೊಂಡ ಕೆಲವು ವಿಷಯಗಳ ಕುರಿತು  ಹಿಂಡೆನ್‌ಬರ್ಗ್ ಮತ್ತು ಅದಾನಿ ಪ್ರತಿಕ್ರಿಯೆ ಎರಡನ್ನೂ ಪ್ರಶ್ನಿಸುವ ಹಕ್ಕನ್ನು ಅದು ಹೊಂದಿದೆ. ಎಲ್ಐಸಿ ಯ ಈ ನಿಲುವು ಸ್ವಾಗತಾರ್ಹವಾಗಿದೆ.

ಈಗ, ಎಲ್ಐಸಿ ಯ ಹೂಡಿಕೆ ನೀತಿಯೆಂದರೆ, ಅದರ ಹೂಡಿಕೆಯ 80%ರಷ್ಟು ಸುರಕ್ಷಿತ ಠೇವಣಿಗಳಲ್ಲಿ, ಅಂದರೆ ಸರ್ಕಾರಿ ಭದ್ರತೆಗಳು, ಬಾಂಡ್‌ಗಳು ಇತ್ಯಾದಿಗಳಲ್ಲಿದೆ. ಉಳಿದ 20%, ಎಲ್ಐಸಿಯು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುತ್ತದೆ.  ಹಾಗೆಯೇ LIC ದೀರ್ಘಾವಧಿಯ ಹೂಡಿಕೆದಾರ. ಆದ್ದರಿಂದ, ದೀರ್ಘಾವಧಿಯಲ್ಲಿ ಪಾಲಿಸಿದಾರರಿಗೆ ಲಾಭದಾಯಕವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಎಲ್ಐಸಿ ಹೂಡಿಕೆ ಮಂಡಳಿಯನ್ನು ಹೊಂದಿದ್ದು ಹೂಡಿಕೆಯ ನಿರ್ಧಾರಗಳನ್ನು ಮಂಡಳಿಯು ಸಂಪೂರ್ಣ ಪರಿಶೀಲನೆಯ ನಂತರ ತೆಗೆದುಕೊಳ್ಳುತ್ತದೆ. ಅದಾನಿ ಸಮೂಹದಲ್ಲಿನ ಹೂಡಿಕೆಯ ಬಗ್ಗೆ ಜನರು ಮಾತನಾಡುತ್ತಿರುವುದು ಕೇವಲ ಕಾಲ್ಪನಿಕ ನಷ್ಟವಾಗಿದೆ, ಏಕೆಂದರೆ ಮಾರುಕಟ್ಟೆ ಮೌಲ್ಯವು ಕುಸಿದಿದೆಯೆ ಹೊರತು ನಿಜರೂಪದಲ್ಲಿ ಆಗಿರುವ ನಷ್ಟ ಅಲ್ಲ. ನಿಜವಾದ ನಷ್ಟವನ್ನು ಅನುಭವಿಸಲು ಎಲ್ಐಸಿ ಮಾರುಕಟ್ಟೆಯಲ್ಲಿ ಅದಾನಿಯ ಷೇರುಗಳನ್ನು ಮಾರಾಟ ಮಾಡಿದ್ದರೆ ನಷ್ಟದ ಪ್ರಶ್ನೆ ಬರುತ್ತಿತ್ತು.  ಆದರೆ ಎಲ್‍ಐಸಿ ಯಾವುದೇ ಅದಾನಿ ಸಮೂಹದ ಶೇರನ್ನು ಮಾರಿಲ್ಲ.  ಹಾಗೆ ನೋಡಿದರೆ ಅದಾನಿ ಷೇರುಗಳ ವಿಷಯದಲ್ಲಿ ಎಲ್ಐಸಿ ಸಹ ಕಾಲ್ಪನಿಕ ಲಾಭವನ್ನು ಗಳಿಸಿದೆ. ಏಕೆಂದರೆ ಹೂಡಿಕೆಯು ಸುಮಾರು 35,000 ಕೋಟಿ ರೂ. ಇಂದಿಗೂ ಅದರ ಮೌಲ್ಯ 56,000 ಕೋಟಿ ರೂ.  ಹಾಗಾಗಿ, ಕಾಲ್ಪನಿಕವಾಗಿ ಯಾವುದೇ ನಷ್ಟವಿಲ್ಲ ಹಾಗೆಯೇ ಕಾಲ್ಪನಿಕವಾಗಿ ಲಾಭವೂ ಸಹ ಇಲ್ಲ. ಎಲ್ಐಸಿ ಯು ತನ್ನ ಷೇರುಗಳನ್ನು ಮಾರುಕಟ್ಟೆಗೆ ಇಳಿಸಿದಾಗ ಮಾತ್ರ ಎಲ್‌ಐಸಿ ನಷ್ಟ ಅಥವಾ ಲಾಭವನ್ನು ಅನುಭವಿಸಿದೆಯೇ ಎಂಬ ಪ್ರಶ್ನೆ ಬರುತ್ತದೆ.  ಹಾಗಾಗಿ ಇದೀಗ ಕೇವಲ ಕಾಲ್ಪನಿಕ ಲೆಕ್ಕಾಚಾರವಾಗಿದೆ

  • ನಾವು ಈ ಹಿಂದೊಮ್ಮೆ ಮಾತನಾಡುವಾಗ ಎಲ್ಐಸಿ ಷೇರುಗಳನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರವು ಎಲ್ಐಸಿ ಮೇಲಿನ ಜನರ ವಿಶ್ವಾಸದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದೀರಿ. ಸಧ್ಯದ ಈ ಪರಿಸ್ಥಿತಿಯು ಕೂಡ ಎಲ್ಐಸಿಯಲ್ಲಿನ ಜನರ ನಂಬಿಕೆ ಮತ್ತು ವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ ಎಂದು ನೀವು ಭಾವಿಸುತ್ತೀರಾ?

ಅಮಾನುಲ್ಲಾ ಖಾನ್: ಇಲ್ಲಿ ಎರಡು ಅಂಶಗಳಿವೆ. ಎಲ್ಐಸಿಗೆ ಹೂಡಿಕೆ ಮಾಡಲು ದೊಡ್ಡ ಹಣಸಂಗ್ರಹ ಹೊಂದಿದೆ. ಪ್ರತಿ ವರ್ಷ, ಎಲ್ಐಸಿ ರೂ. 4.5 ಲಕ್ಷ ಕೋಟಿಯಿಂದ ರೂ. 5 ಲಕ್ಷ ಕೋಟಿಗಳಷ್ಟು ಮಿಗುತಾಯವನ್ನು ಉತ್ಪಾದಿಸುತ್ತದೆ.  ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ?  ನೀವು ಹಣವನ್ನು ನಿಷ್ಕ್ರಿಯವಾಗಿಡಲು ಸಾಧ್ಯವಿಲ್ಲ. ನೀವು ಅದನ್ನು ನಿಷ್ಕ್ರಿಯವಾಗಿ ಇರಿಸಿದರೆ, ಪಾಲಿಸಿದಾರರಿಗೆ ಪ್ರತಿಫಲ ನೀಡಲು ಸಾಧ್ಯವಿಲ್ಲ.  ಆದ್ದರಿಂದ, ಅದನ್ನು ಹೂಡಿಕೆ ಮಾಡಬೇಕು ಅಷ್ಟೇ ಅಲ್ಲ ಅತ್ಯಂತ  ವಿವೇಚನೆಯಿಂದ ಹೂಡಿಕೆ ಮಾಡಬೇಕು.

  • ಒಂದೇ ಸಮೂಹದಲ್ಲಿ ಇಷ್ಟು ಹಣ ಹೂಡುವುದು ಜಾಣತನವೇ?

ಅಮಾನುಲ್ಲಾ ಖಾನ್: ನಮ್ಮ  ಒಟ್ಟು ಮಾರುಕಟ್ಟೆ ಇಕ್ವಿಟಿ ಹೂಡಿಕೆಗಳಲ್ಲಿ , ಅದಾನಿ ಸಮೂಹದಲ್ಲಿನ ಹೂಡಿಕೆ  ಕೇವಲ 7% ಆಗಿದೆ. ರಿಲಯನ್ಸ್ ಸಮೂಹವನ್ನು ನೋಡಿದರೆ ಹೂಡಿಕೆ ಇದಕ್ಕಿಂತ  ತುಂಬಾ ದೊಡ್ಡದಾಗಿದೆ. ಕೆಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿಯೂ ಸಹ ಇದು ತುಂಬಾ ಹೆಚ್ಚಾಗಿದೆ. ರೂ. 35,000 ಕೋಟಿ ಮೊತ್ತವು ದೊಡ್ಡದಾಗಿ ಕಂಡುಬಂದರೂ, ಎಲ್ಐಸಿ ಉತ್ಪಾದಿಸುವ ವಾರ್ಷಿಕ ಮಿಗುತಾಯ(ಸರ್‍ ಪ್ಲಸ್‍)ದ ಮೊತ್ತಕ್ಕೆ ಹೋಲಿಸಿದರೆ ಇದು ಸಣ್ಣ ಮೊತ್ತ.

ಎಲ್‌ಐಸಿ ಈ ಹಿಂದೆ ಕೂಡ ಹಲವು ಬಾರಿ ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟಿತ್ತು. ಅದು  ಒಎನ್‌ಜಿಸಿ ಷೇರುಗಳನ್ನು ಖರೀದಿಸಿದಾಗ, ಎಲ್‌ಐಸಿ ಸರ್ಕಾರಕ್ಕೆ ತೆರಲು ಹಣವನ್ನು ತುಂಬಿಸುತ್ತಿದೆ ಎಂಬ ಪ್ರಚಾರವಾಗಿತ್ತು.  ಆದರೆ ಒಎನ್‌ಜಿಸಿ ಷೇರುಗಳಲ್ಲಿ ನಾವು ಶುದ್ಧ ಲಾಭ ಗಳಿಸಿದ್ದೇವೆ. ಐಡಿಬಿಐ ಬ್ಯಾಂಕ್ ಷೇರುಗಳನ್ನು ಖರೀದಿಸಿದಾಗ ಅದು ನಷ್ಟದ ಬ್ಯಾಂಕ್ ಆಗಿತ್ತು.  ಹಾಗಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.  ಆದರೆ ಇಂದು ನಾವು ಐಡಿಬಿಐ ಬ್ಯಾಂಕ್‌ನಿಂದ ಲಾಭ ಗಳಿಸುತ್ತಿದ್ದೇವೆ. ಎಲ್ಐಸಿ ಮತ್ತು ಇತರ ಹೂಡಿಕೆದಾರರ ನಡುವಿನ ವ್ಯತ್ಯಾಸವೆಂದರೆ ಎಲ್ಐಸಿ ದೀರ್ಘಾವಧಿಯ ಹೂಡಿಕೆದಾರ. ಬ್ಯಾಂಕುಗಳು ಹೀಗೆ ದೀರ್ಘಾವಧಿ ಹೂಡಿಕೆ ಮಾಡಲು ಸಾಧ್ಯವಿಲ್ಲ.

ಇದನ್ನು ಓದಿ: ಬಜೆಟ್‌ ಸಂಸತ್‌ ಅಧಿವೇಶನ: ಲೋಕಸಭೆಯಲ್ಲಿ ಅದಾನಿ ಸಂಸ್ಥೆ ವಿರುದ್ಧದ ಆರೋಪಗಳ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು

ಪಾಲಿಸಿದಾರರ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಂಪೂರ್ಣ ವಿಶ್ವಾಸ ನೀಡುತ್ತೇನೆ,  ಏಕೆಂದರೆ ನಮ್ಮ ಸಂದಾಯ ಅನುಪಾತವು ( ಸಾಲ್ವೆನ್ಸಿ ರೇಷ್ಯೋ) ಅಗತ್ಯಕ್ಕಿಂತ ಬಹಳ ಹೆಚ್ಚಿದೆ ಮತ್ತು ಎಲ್‍ಐಸಿಯ ಎಲ್ಲಾ ಬಾಧ್ಯತೆಗಳ ವೆಚ್ಚವು ಅದರ ಒಟ್ಟು ಸ್ವತ್ತುಗಳ ಮೌಲ್ಯದಲ್ಲಿ ಒಳಗೊಂಡಿದೆ. ಇಲ್ಲಿ ನಾನು ಆಸ್ತಿಗಳ ಮಾರುಕಟ್ಟೆ ಮೌಲ್ಯದ ಬಗ್ಗೆಯಲ್ಲ, ಬದಲಾಗಿ ‘ಪುಸ್ತಕ ಮೌಲ್ಯ’(ಬುಕ್‍ ವ್ಯಾಲ್ಯೂ)ದ ಬಗ್ಗೆ ಮಾತನಾಡುತ್ತಿದ್ದೇನೆ, ಹಾಗಾಗಿ, ಜನರು ಭಯಪಡುವ ಅಗತ್ಯವಿಲ್ಲ. ಅವರ ಹಣ ಸುರಕ್ಷಿತವಾಗಿ ಉಳಿಯುತ್ತದೆ.

  • ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವುದು ಆರ್ಥಿಕ ನಿರ್ಧಾರಕ್ಕಿಂತ ಹೆಚ್ಚಾಗಿ ರಾಜಕೀಯ ನಿರ್ಧಾರವೇ?

ಅಮಾನುಲ್ಲಾ ಖಾನ್: ಸತ್ಯಸಂಗತಿಯೆಂದರೆ,ಎಲ್‌ಐಸಿ  ಕೂಡ ಬಂಡವಾಳಶಾಹಿಯನ್ನು ಉತ್ತೇಜಿಸುವ ಸಂಸ್ಥೆಯೇ. ಮತ್ತು ಅದು ಆಳುವ ವರ್ಗಗಳ ನಿಯಂತ್ರಣದಲ್ಲಿದೆ.  ಆದ್ದರಿಂದ, ಅವರು ತಮ್ಮ ಸ್ವಂತ ಹಿತಾಸಕ್ತಿಯನ್ನು ಉತ್ತೇಜಿಸಲು ಅದನ್ನು ಬಳಸಿಕೊಳ್ಳುತ್ತಾರೆ.

ಆದರೆ ಒಂದು ಕಾರ್ಮಿಕ ಸಂಘಟನೆಯಾಗಿ ಮತ್ತು ಸಾರ್ವಜನಿಕ ಸಂಸ್ಥೆಯಾಗಿ ನಮ್ಮ ಕೆಲಸವೆಂದರೆ, ಎಲ್ಐಸಿ ಎಲ್ಲೆಲ್ಲಿ ಹೂಡಿಕೆ ಮಾಡಿದರೂ ಅದರ ಪ್ರಯೋಜನವು ಒಟ್ಟಾಗಿ ಸಮಾಜಕ್ಕೆ ಸಿಗಬೇಕು ಎಂದು ಖಚಿತಪಡಿಸುವುದು.  ಹಾಗೆಯೇ ಪಾಲಿಸಿದಾರರ ಹಣದ ಸಂಪೂರ್ಣ ಸುರಕ್ಷತೆಯೂ ಇರಬೇಕು.

  • ಅದಾನಿ ಷೇರುಗಳ ಕುಸಿತಕ್ಕೆ ಅರ್ಥವ್ಯವಸ್ಥೆಯು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿದರೆ, ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಒಂದು ಉದ್ದಿಮೆ ಗುಂಪು ಪ್ರಭಾವ ಹೊಂದಿರುವುದು ಕಂಡು ಆತಂಕವಾಗುವುದಿಲ್ಲವೇ?

ಅಮಾನುಲ್ಲಾ ಖಾನ್: ಹೌದು, ಇದು ಆತಂಕಕಾರಿ, ಒಂದಕ್ಕಿಂತ ಹೆಚ್ಚು ಅರ್ಥದಲ್ಲಿ ಆತಂಕಕಾರಿ.  ಭಾರತೀಯ ಅರ್ಥವ್ಯವಸ್ಥೆಯ ಒಂದು ದೊಡ್ಡ ಭಾಗ, ಮೂಲಸೌಕರ್ಯ ಯೋಜನೆಗಳು- ಬಂದರುಗಳಿಂದ ಹಿಡಿದು ವಿಮಾನ ನಿಲ್ದಾಣಗಳವರೆಗೆ ಒಬ್ಬ ವ್ಯಕ್ತಿಯ ಕಂಪನಿಯ ಒಡೆತನದಲ್ಲಿವೆ.

ಆಡಳಿತದಲ್ಲಿ ಪಾರದರ್ಶಕತೆ ಇಲ್ಲ.  ಇದು ಎತ್ತಬೇಕಾದ ಆಧಾರಭೂತ ಪ್ರಶ್ನೆಯಾಗಿದೆ. ಈ ಪ್ರಶ್ನೆಯನ್ನು ಎತ್ತುವಂತೆ ಎಲ್‌ಐಸಿಗೂ ಹೇಳಿದ್ದೇವೆ. ಇದು ಎಲ್ಲರೂ ಚಿಂತಿಸಬೇಕಾದ ವಿಷಯವಾಗಿದೆ;  ಕೇವಲ ಎಲ್‌ಐಸಿ ಯಷ್ಟೇ ಅಲ್ಲ, ಪ್ರತಿ ಭಾರತೀಯರು ಈಗ ನಡೆಯುತ್ತಿರುವ ಅರ್ಥವ್ಯವಸ್ಥೆಯ ಏಕಸ್ವಾಮ್ಯದ ಬಗ್ಗೆ ಚಿಂತಿಸಬೇಕು.

ಏಕೆಂದರೆ ಈ ರೀತಿಯ ಆರ್ಥಿಕ ಮಾದರಿಯಿಂದಾಗಿ ದೇಶದಲ್ಲಿ ಅಪಾರ ಅಸಮಾನತೆ ಉಂಟಾಗುತ್ತಿದೆ.

ಅನುವಾದ: ಹೆಚ್. ಕೆ. ನರಸಿಂಹಮೂರ್ತಿ
ಕೃಪೆ: Rediff.com,    ಫೆಬ್ರುವರಿ 3, 2023

 

 

Donate Janashakthi Media

Leave a Reply

Your email address will not be published. Required fields are marked *