ಬೆಂಗಳೂರು : ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಎಲ್ ಐ ಸಿ ಯನ್ನು ಖಾಸಗೀಕರಣ ಮಾಡಲು ಹೊರಟಿರುವ ಭಾರತ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ನಗರದ ಎಲ್ ಐ ಸಿ ಆಫೀಸ್ ಮುಂಭಾಗ ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಗಳು, ಅಧಿಕಾರಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ಮುಷ್ಕರ ನಡೆಸಿದರು.
ಮುಷ್ಕರವನ್ನು ಉದ್ದೇಶಿಸಿ ಎಐಐಇಎ ಸಂಘಟನೆಯ ಬೆಂಗಳೂರು ವಿಭಾಗ -1 ರ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಗೀತಾ ಮಾತನಾಡುತ್ತಾ ಲಾಭದಾಯಕವಾಗಿರುವ ಎಲ್.ಐ.ಸಿ ಯನ್ನು ಖಾಸಗೀಕರಣ ಮಾಡುವ ಉದ್ದೇಶವನ್ನು ನಾವು ವಿರೋಧಿಸುತ್ತೇವೆ, ದೇಶದ ಜನತೆಯ ಉಳಿತಾಯಕ್ಕೆ ಭದ್ರತೆ ನೀಡುವುದು ಮತ್ತು ದೇಶ ನಿರ್ಮಾಣಕ್ಕೆ ಅಗತ್ಯ ಬಂಡವಾಳ ಕ್ರೋಢಿಕರಿಸುವ ಅವಳಿ ಉದ್ದೇಶವನ್ನು ಎಲ್ ಐ ಸಿ ಸಂಪೂರ್ಣವಾಗಿ ನೇರವೇರಿಸಿದೆ. ವಿಮಾ ಕ್ಷೇತ್ರದಲ್ಲಿ ವಿದೇಶೀ ನೇರ ಬಂಡವಾಳವನ್ನು ಶೇ. 19 ರಿಂದ ಶೇ. 74 ಕ್ಕೇರಿಸುವುದನ್ನು ಮತ್ತು ಸಾರ್ವಜನಿಕ ವಲಯದ ಒಂದು ಸಾಮಾನ್ಯ ವಿಮಾ ಸಂಸ್ಥೆಯ ಖಾಸಗೀಕರಣದಂತಹ ಕ್ರಮಕ್ಕೆ ಮುಂದಾಗಿದೆ. ಇದು ಸರಿಯಾದ ಕ್ರಮವಲ್ಲ ಈ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಎಐಐಇಎ ಸಂಘಟನೆಯ ಬೆಂಗಳೂರು ವಿಭಾಗ -2 ರ ಪ್ರಧಾನ ಕಾರ್ಯದರ್ಶಿ ಕೆ. ಗೋಪಾಲ್ ಮಾತನಾಡುತ್ತಾ ಎಲ್ ಐ ಸಿ ಯಲ್ಲಿ ಒಟ್ಟು 42 ಕೋಟಿ ಪಾಲಿಸಿದಾರರಿದ್ದು, ಅದರಲ್ಲಿ 3.68 ಕೋಟಿ ಬಡ ಮತ್ತು ದುರ್ಬಲ ವರ್ಗದವರಿಗೆ ಸಾಮಾಜಿಕ ಸುರಕ್ಷತೆ ನೀಡಲಾಗುತ್ತಿದೆ. 2019 ರಲ್ಲಿ ಅದು 2.16 ಕೋಟಿ ದಾವೆಗಳನ್ನು ಇರ್ತ್ಯರ್ಥ ಮಾಡಿದ್ದು ಪಾವತಿ ಮಾಡಿರುವ ಮೊತ್ತ 1,59,769 ಕೋಟಿ ರೂ. ಸರ್ಕಾರ ಆರಂಭದಲ್ಲಿ ತೊಡಗಿಸಿದ 5 ಕೋಟಿ ರೂ ಪ್ರತಿಯಾಗಿ ಅದು ಒಟ್ಟು ರೂ 32 ಲಕ್ಷ ಕೋಟಿ ಮೌಲ್ಯದ ಆಸ್ತಿ ನಿರ್ಮಾಣಮಾಡಿದೆ. ದೇಶದ ಆರ್ಥಿಕತೆಯಲ್ಲಿ ಅದು ಹೂಡಿರುವ ಮೊತ್ತ 30.70 ಲಕ್ಷ ಕೋಟಿ ರೂ. ವಿವಿಧ ದೇಶ ನಿರ್ಮಾಣ ಯೋಜನೆಗಳಲ್ಲಿ ಅದು ತೊಡಗಿಸಿರುವ ಮೊತ್ತ 24 ಲಕ್ಷ ಕೋಟಿ ರೂ. ಇಲ್ಲಿಯವರೆಗು ಸರ್ಕಾರಕ್ಕೆ ನೀಡಿರುವ ಒಟ್ಟು ಲಾಭಾಂಶ 28000 ಕೋಟಿ ರೂ. 2019-20 ಒಂದು ವರ್ಷದಲ್ಲಿ ರೂ 2698 ಕೋಟಿ ರೂ ನೀಡಿದೆ. ಇಂತಹ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆಯನ್ನು ಕಾಸಗೀಕರಣ ಮಾಡುವುದೂ ಒಂದು ದೇಶದ ಹಿತಾಶಕ್ತಿ ವಿರೋಧಿ ಕ್ರಮವಾಗಿದೆ. ಈ ಸಂಸ್ಥೆಗಳನ್ನು ಖಾಸಗೀಕರಗೊಳಿಸುವ ಬದಲಿಗೆ ಅವುಗಳನ್ನು ಕ್ರೋಢಿಕರಿಸಿ ಇನ್ನಷ್ಟು ಸ್ಪರ್ಧಾತ್ಮಕಗೊಳಿಸಬೇಕು ಎಂದರು.
ಈ ಪ್ರತಿಭಟನೆಯಲ್ಲಿ ಎಐಐಇಎ ಸಂಘಟನೆಯ ಅಖಿಲ ಭಾರತ ಮಾಜಿ ಅಧ್ಯಕ್ಷರಾದ ಅಮಾನುಲ್ಲಾ ಖಾನ್, ಎಎಲ್‌ಐಸಿಐಇಎಫ್ ಸಂಘಟನೆಯ ಮುಖಂಡರಾದ ಬಿ.ಎಸ್ ಸಾಧನ, ಎಲ್‌ಐಸಿ ಸಿಎಲ್ 1 ಆಫೀಸರ‍್ಸ್ ಅಸೋಶಿಯಷೇನ್ ಸಂಘಟನೆಯ ಮುಖಂಡರಾದ ಪ್ರಸಾದ್, ಎನ್‌ಎಫ್‌ಐಎಫ್‌ಡಬ್ಲ್ಯೂಐ ಸಂಘಟನೆಯ ಮುಖಂಡರಾದ ಗಿರೀಶ್ ಮೂರ್ತಿ ಮಾತನಾಡಿದರು.