ಮಾರ್ಚ್ 5ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹ
ನವದೆಹಲಿ : ಎಲ್‌ಐಸಿಯನ್ನು ಶೇರು ಮಾರುಕಟ್ಟೆಗೆ ಒಯ್ಯುವುದಕ್ಕೆ ವ್ಯಾಪಕ ವಿರೋಧದ ಹೊರತಾಗಿಯೂ ಸರಕಾರದ ಪ್ರಯತ್ನ ತೀವ್ರಗೊಳ್ಳುತ್ತಿದೆ. ಈ ಕುರಿತು ಫೆಬ್ರುವರಿ 13ರಂದು ಕರಡು ಪ್ರಾಸ್ಪೆಕ್ಟಸ್‌ನ್ನು ಸೆಬಿ(ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯ)ಗೆ ಸರಕಾರ ಸಲ್ಲಿಸಿದ್ದು, ಮಾರ್ಚ್ 11ರಂದು 10ರೂ. ಮುಖಮೌಲ್ಯದ ಸುಮಾರು 32 ಕೋಟಿ ಶೇರುಗಳನ್ನು ಆರಂಭಿಕ ಮಾರಾಟಕ್ಕೆ ಇಡುವ(ಐಪಿಒ) ಯೋಚನೆ ಸರಕಾರಕ್ಕಿದೆ ಎಂದು ವರದಿಯಾಗಿದೆ.
ಈ ಶೇರು ಮಾರಾಟದಿಂದ ಬರುವ ಹಣ ಎಲ್ಲವೂ ಸರಕಾರಕ್ಕೆ ಹೋಗುತ್ತದೆ, ಎಲ್‌ಐಸಿ ಗೆ ಏನೂ ಸಿಗುವುದಿಲ್ಲ. ಅಂದರೆ ಈ ಹಣ ಎಲ್‌ಐಸಿಯ ಪಾಲಿಸಿದಾರರ ಪ್ರಯೋಜನಕ್ಕೆ ಅಲ್ಲ, ಬದಲಿಗೆ ಸರಕಾರದ ಬಜೆಟ್ ಕೊರತೆಯನ್ನು ಸರಕಾರ ತಾನೇ ಹಾಕಿಕೊಂಡ (ಜಿಡಿಪಿಯ) 6.4% ಸೀಮಿತಗೊಳಿಸಲಿಕ್ಕಾಗಿ ಮಾತ್ರ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎನ್ನಲಾಗಿದೆ.
ಇದರ ವಿರುದ್ಧ ಸತತ ಹೋರಾಟ ನಡೆಸಿಕೊಂಡು ಬಂದಿರುವ ಎಲ್‌ಐಸಿಯ ನೌಕರರು ಮತ್ತು ಅಧಿಕಾರಿಗಳ ಜಂಟಿ ವೇದಿಕೆ ಫೆಬ್ರುವರಿ 20ರಂದು ಹೈದರಾಬಾದಿನಲ್ಲಿ ಸಭೆ ಸೇರಿ ತಮ್ಮ ಐಕ್ಯ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಮಾರ್ಚ್ 5ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ಪ್ರತಿಭಟನೆ ನಡೆಸಲು ಜಂಟಿ ವೇದಿಕೆ ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ಸರಕಾರದ ಈ ಕ್ರಮಕ್ಕೆ ವಿರೋಧಕ್ಕೆ ಕಾರಣಗಳು, ಇದರ ದುಷ್ಪರಿಣಾಮಗಳ ಬಗ್ಗೆ ಗಮನ ಸೆಳೆಯಲಾಗುವುದು ಮತ್ತು ಸಾರ್ವಜನಿಕರ ಬೆಂಬಲವನ್ನು ಕೇಳಲಾಗುವುದು ಎಂದು ಜಂಟಿ ವೇದಿಕೆ ತಿಳಿಸಿದೆ.
ಮೂರನೇ ಮತ್ತು ನಾಲ್ಕನೇ ದರ್ಜೆಯ ನೌಕರರ ಸಂಘಟನೆಗಳಾದ ಎಐಐಇಎ, ಎಐಎಲ್‌ಐಸಿಇಎಫ್, ಅಭಿವೃದ್ಧಿ ಅಧಿಕಾರಿಗಳ ಸಂಘಟನೆಯಾದ ಎನ್‌ಎಫ್‌ಐಎಫ್‌ಡಬ್ಲ್ಯುಐ ಮತ್ತು ದರ್ಜೆ1 ಅಧಿಕಾರಿಗಳ ಸಂಘಗಳ ಒಕ್ಕೂಟ ಈ ಜಂಟಿ ವೇದಿಕೆಯನ್ನು ರಚಿಸಿಕೊಂಡಿವೆ.
ದೇಶಪ್ರೇಮೀ ಕರ್ತವ್ಯ
ಶೇರು ಮಾರಾಟವನ್ನು ಆರಂಭಿಸುವ ದಿನದಂದು ಸಿಬ್ಬಂದಿ ವರ್ಗಗಳ ಪ್ರತಿಭಟನಾ ಕಾರ್ಯಾಚರಣೆಯ ಬಗ್ಗೆಯೂ ಜಂಟಿ ವೇದಿಕೆಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಅದನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದೂ ಜಂಟಿ ವೇದಿಕೆ ತಿಳಿಸಿದೆ. ಜಂಟಿ ವೇದಿಕೆಯ ಪ್ರಮುಖ ಭಾಗವಾಗಿರುವ ಅಖಿಲ ಭಾರತ ವಿಮಾನೌಕರರ ಸಂಘ ಈಗಾಗಲೇ ಎಲ್‌ಐಸಿ ಐಪಿಒ ಆರಂಭಿಸುವ ದಿನದಂದು ಒಂದು ದಿನದ ಮುಷ್ಕರಕ್ಕೆ ಸಿದ್ಧವಾಗಿರುವಂತೆ ತನ್ನ ಸದಸ್ಯರಿಗೆ ಕರೆ ನೀಡಿದೆ.
ಎಲ್‌ಐಸಿ ಲಕ್ಷಾಂತರ ಸಿಬ್ಬಂದಿಯ ದುಡಿಮೆಯ ಶ್ರಮದಿಂದ ಮತ್ತು ಕೋಟ್ಯಂತರ ಪಾಲಿಸಿದಾರರ ವಂತಿಗೆಗಳು ಮತ್ತು ವಿಶ್ವಾಸದಿಂದ ಕಟ್ಟಿ ಬೆಳೆಸಿರುವ ಸಂಸ್ಥೆ. ಇದು ದೇಶದ ಕೈಗಾರಿಕೀಕರಣ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಆದ್ದರಿಂದ ಈ ಮಹಾನ್ ಸಂಸ್ಥೆಯನ್ನು ರಕ್ಷಿಸಲು ಹೋರಾಟವನ್ನು ಮುಂದುವರೆಸುವುದು ಎಲ್‌ಐಸಿ ನೌಕರರ ದೇಶಪ್ರೇಮೀ ಕರ್ತವ್ಯ ಎಂದು ಜಂಟಿ ವೇದಿಕೆ ಹೇಳಿದೆ.
ಈ ಮೊದಲು ಸರಕಾರ 10% ಶೇರುಗಳನ್ನು ಮಾರಾಟ ಮಾಡುವುದಾಗಿ ಹೇಳಿತ್ತು. ಇದಕ್ಕೆ ನೌಕರರಿಂದ ಮಾತ್ರವೇ ಅಲ್ಲ, ಹಲವಾರು ಅರ್ಥಶಾಸ್ತçಜ್ಞರು, ಅಧ್ಯಯನಕಾರರು, ಪತ್ರಕರ್ತರು ಮತ್ತು ಕಾನೂನು ತಜ್ಞರಿಂದಲೂ ವಿರೋಧ ವ್ಯಕ್ತವಾಗಿತ್ತು. ಪ್ರತಿಷ್ಥಿತ ನಾಗರಿಕರ ವೇದಿಕೆಯಾದ “ಸಾರ್ವಜನಿಕ ವಲಯ ಮತ್ತು ಸಾರ್ವಜನಿಕ ಸೇವೆಗಳ ಕುರಿತಾದ ಜನತಾ ಆಯೋಗ” ಈ ಶೇರು ಮಾರಾಟ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಸರಕಾರದ ಮುಂದಿಟ್ಟಿದೆ. ಬಹುಶಃ ಇವೆಲ್ಲದರ ಪರಿಣಾಮವಾಗಿ ಸರಕಾರ ಎಲ್‌ಐಸಿ ಕಾಯ್ದೆಯ ತಿದ್ದುಪಡಿಯಲ್ಲಿ 51 % ಒಡೆತನ ಸರಕಾರದ ಕೈಗಳಲ್ಲೇ ಇರುತ್ತದೆ ಎಂಬುದಕ್ಕೆ ಬದ್ಧಗೊಳ್ಳಬೇಕಾಗಿ ಬಂದಿದೆ. ಅಲ್ಲದೆ ಮಾರಾಟಕ್ಕಿಡುವ ಶೇರುಗಳ ಸಂಖ್ಯೆಯನ್ನು 5%ಕ್ಕಿಳಿಸಿದೆ. ಮತ್ತು ಶೇರು ಮಾರುಕಟ್ಟೆಗೆ ಎಲ್‌ಐಸಿಯನ್ನು ಒಯ್ಯಲಿಕ್ಕಾಗಿ ಸೆಬಿಗೆ ಸಲ್ಲಿಸಬೇಕಾದ ಕರಡನ್ನು ಒಂದು ರಜಾದಿನದಂದು (ಫೆಬ್ರುವರಿ 13 ರ ಭಾನುವಾರದ ಸಂಜೆ) ಸಲ್ಲಿಸಿದೆ.
ಈ ಸುದ್ದಿ ತಿಳಿದ ನೌಕರರು ಮರುದಿನವೇ, ಫೆಬ್ರುವರಿ 14ರಂದು ಊಟದ ವಿರಾಮದ ವೇಳೆಯಲ್ಲಿ ಜಂಟಿ ವೇದಿಕೆಯ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನಾ ಮತಪ್ರದರ್ಶನ ನಡೆಸಿದರು.
ಕೇವಲ 5% ಶೇರು ಮಾರಾಟಕ್ಕಿಟ್ಟರೂ, ಅದು ಈ ಅತ್ಯಂತ ಯಶಸ್ವಿ ಮಾದರಿಯನ್ನು ಹಾಕಿಕೊಟ್ಟ ಬೃಹತ್ ಸಾರ್ವಜನಿಕ ವಲಯದ ಸಂಸ್ಥೆಯ ಖಾಸಗೀಕರಣದತ್ತ ಮೊದಲ ಹೆಜ್ಜೆ. ಮಾರಾಟಕ್ಕಿಡುವ ಸಮಾರು 32 ಕೋಟಿ ಶೇರುಗಳಲ್ಲಿ 65% ದೇಶೀ ಮತ್ತು ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿದೆ. ಉಳಿದ 35% ವನ್ನು ಮಾತ್ರವೇ ಚಿಲ್ಲರೆ ಹೂಡಿಕೆದಾರರಿಗೆ ಕೊಡಲಾಗುವುದಂತೆ. ಇದರಲ್ಲಿ 10% ಪಾಲಿಸಿದಾರರಿಗೆ ಮತ್ತು 5% ನೌಕರರಿಗೆ ಮೀಸಲಿಡುವುದಾಗಿ ಹೇಳಲಾಗಿದೆ. ಆದರೆ ಇದು ಅವರಿಗೆ ಒಡ್ಡಿರುವ ಆಮಿಷವಷ್ಟೇ ಎಂದು ನೌಕರರು ಹೇಳುತ್ತಾರೆ.
ಎಲ್‌ಐಸಿ ಅಗಾಧ ಪ್ರಗತಿ ಸಾಧಿಸಿರುವುದು ಪಾಲಿಸಿದಾರರ ಹಣದಿಂದ ಮತ್ತು ನೌಕರರ ಶ್ರಮದಿಂದ. ಇದರಿಂದ ಸಾಮಾಜಿಕ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಮೂಲಕ ಇಡೀ ಸಮಾಜಕ್ಕೆ ಪ್ರಯೋಜನವಾಗಿದೆ. ಈ ರೀತಿಯಲ್ಲಿ ಕಟ್ಟಿದ ಸಂಸ್ಥೆಯನ್ನು ಕೆಲವು ಖಾಸಗಿ ಹೂಡಿಕೆದಾರರ ಲಾಭದ ಪ್ರವೃತ್ತಿಗೆ ಅಧೀನಗೊಳಿಸಬಾರದು ಎಂಬುದು ಸರಕಾರದ ಈ ಕ್ರಮವನ್ನು ವಿರೋಧಿಸುವ ಎಲ್ಲರ ಪ್ರಮುಖ ಆಕ್ಷೇಪ.
ಪಾಲಿಸಿದಾರರ ವಿಶ್ವಾಸವನ್ನು ಮಾರಾಟಕ್ಕಿಟ್ಟಿರುವ ಸರಕಾರ
ಎಲ್‌ಐಸಿಯಲ್ಲಿ ಇಕ್ವಿಟಿ ಬಂಡವಾಳದ ಮೊತ್ತ ರೂ.6325 ಕೋಟಿ ಎಂದು ಲೆಕ್ಕ ಹಾಕಲಾಗಿದೆ. ಇದರಲ್ಲಿ ಸರಕಾರದ ಹೂಡಿಕೆ 100 ಕೋಟಿ ರೂ. ಮಾತ್ರ. ಅಂದರೆ ಈಗ ಕೋಟ್ಯಂತರ ಪಾಲಿಸಿದಾರರ ವಂತಿಗೆಗಳಿಂದ ನಿರ್ಮಿತವಾದ ಅಗಾಧವಾದ ಮೌಲ್ಯದಲ್ಲಿ ಎಲ್ಲವನ್ನೂ ಸರಕಾರ ಶೇರುದಾರನಾಗಿ ತನ್ನದಾಗಿಸಿಕೊಂಡು ಖಾಸಗಿಯವರ ಲಾಭ ಗಳಿಕೆಗೆ ವಹಿಸಿಕೊಡುತ್ತಿದೆ ಎಂದು ಜಂಟಿ ವೇದಿಕೆ ಖೇದ ವ್ಯಕ್ತಪಡಿಸಿದೆ. ವಾಸ್ತವವಾಗಿ ಎಲ್‌ಐಸಿಯ ನಿಜವಾದ ಮೌಲ್ಯದ ಮಾಪನವೂ ಸರಿಯಾಗಿ ಆಗಿಯೇ ಇಲ್ಲ. ಮೌಲ್ಯಮಾಪನದ ಕೆಲಸವನ್ನು ಸಂಬಂಧಪಟ್ಟ ಯಾರೊಂದಿಗೂ ಸಮಾಲೋಚಿಸದೆ ಗುಟ್ಟಾಗಿ ನಡೆಸಲಾಗಿದೆ.
ಈ ಮೊದಲು ಎಲ್‌ಐಸಿ ಗಳಿಸುವ ಲಾಭಾಂಶದಲ್ಲಿ 95% ಪಾಲಿಸಿದಾರರಿಗೆ ಹೋಗುತ್ತಿತ್ತು. ನಂತರ ನವ-ಉದಾರೀಕರಣ ಧೋರಣೆಯ ಭಾಗವಾಗಿ ವಿರೋಧಗಳನ್ನೂ ಲೆಕ್ಕಿಸದೆ ಜೀವ ವಿಮೆಯನ್ನು ಖಾಸಗಿಯವರಿಗೆ ತೆರೆದ ನಂತರ ಇದನ್ನು 90%ಕ್ಕೆ ಇಳಿಸಲಾಯಿತು. ಈಗ ಎಲ್‌ಐಸಿಯನ್ನು ಶೇರು ಮಾರುಕಟ್ಟೆಗೆ ಒಯ್ಯುವುದರಿಂದ ಅದರ ವ್ಯವಹಾರದ ಮಾದರಿಯಲ್ಲಿಯೇ ಬದಲಾವಣೆಯಾಗಿ ಹಳೆಯ ಮತ್ತು ಹೊಸ ಪಾಲಿಸಿದಾರರಿಗಿಂತ ಹೊಸ ಶೇರುದಾರರ ಹಿತಾಸಕ್ತಿಯೇ ಮುಖ್ಯವಾಗುತ್ತದೆ, ಸಾಮಾಜಿಕ ಹಿತಾಸಕ್ತಿಗಳಿಗಿಂತ ಲಾಭಗಳಿಕೆಯೇ ಮುಖ್ಯವಾಗುತದೆ, ಶೇರುದಾರರಿಗೆ ಗರಿಷ್ಟ ಲಾಭ ಗಳಿಸಿಕೊಡುವ ದೊಡ್ಡ ಪಾಲಿಸಿಗಳ ಮಾರಾಟಕ್ಕೇ ಪ್ರಾಶಸ್ತ್ಯ ಸಿಕ್ಕಿ ಸಣ್ಣ ಪಾಲಿಸಿದಾರರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಏಕೆಂದರೆ ಸಣ್ಣ ಪಾಲಿಸಿದಾರರು ಜೀವ ವಿಮೆಯನ್ನು ಬೇಗನೇ ಸಾಯುವ ಅಪಾಯದ ವಿರುದ್ಧ ಮಾತ್ರವಲ್ಲ, ದೀರ್ಘ ಕಾಲ ಬದುಕಿದರೆ ಬೇಕಾಗುವ ಉಳಿತಾಯದ ಸಾಧನವಾಗಿಯೂ ಕಾಣುತ್ತಾರೆ ಎಂದು ಸರಕಾರದ ಈ ಕ್ರಮದ ದುಷ್ಪರಿಣಾಮಗಳ ವಿಶ್ಲೇಷಣೆ ಮಾಡುತ್ತ ಜಂಟಿ ವೇದಿಕೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಅದು ಎಲ್‌ಐಸಿ ಐಪಿಒ ವನ್ನು ವಿರೋಧಿಸಲೇ ಬೇಕಾಗಿದೆ ಮತ್ತು ಈ ಪ್ರಶ್ನೆಯ ಮೇಲೆ ಒಂದು ನಿರಂತರ ಹೋರಾಟದ ಅಗತ್ಯವಿದೆ ಎಂಬ ಒಮ್ಮತದ ನಿರ್ಧಾರಕ್ಕೆ ಬಂದಿರುವುದಾಗಿ ಜಂಟಿ ವೇದಿಕೆಯ ಹೇಳಿಕೆ ತಿಳಿಸಿದೆ.