ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿದ್ಯಾರ್ಥಿಗಳಿಂದ “ಬೆಳಗಾವಿ ಚಲೋ”

ಧಾರವಾಡ: ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು “ಬೆಳಗಾವಿ ಚಲೋ” ಹಮ್ಮಿಕೊಂಡಿದ್ದು ನಗರದ ಸರ್ಕಾರಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ಎದುರು ಹಕ್ಕೊತ್ತಾಯಗಳ ಪೋಸ್ಟರ್ ಬಿಡುಗಡೆ ಮಾಡಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು. ಶೈಕ್ಷಣಿಕ

ಸರ್ಕಾರ ತನ್ನ ಬಜೆಟ್‌ನಲ್ಲಿ ಶಿಕ್ಷಣಕ್ಕೆ 2024-25ನೇ ಸಾಲಿನಲ್ಲಿ ಕೇವಲ ಶೇ.10.8ರಷ್ಟು(37,043 ಕೋಟಿ) ಮಾತ್ರ ನೀಡಿದೆ. ಇಂದಿನ ರಾಜ್ಯ ಸರ್ಕಾರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿಫಲವಾಗಿವೆ. ಸರ್ಕಾರಿ ಶಾಲಾ/ಕಾಲೇಜುಗಳಿಗಿ ಸರಿಯಾದ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಶೌಚಾಲಯ ನಿರ್ಮಾಣ, ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕ ವಿತರಣೆಯಾಗುತ್ತಿಲ್ಲದ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದನ್ನೆಲ್ಲ ಕಡೆಗಣಿಸಿ ಪಂಚಾಯತಿಗೊಂದು ಕೆ.ಪಿ.ಎಸ್. ಶಾಲೆಗಳನ್ನು ತೆರೆಯಲಾಗುತ್ತಿದೆ. 5 ಕಿ.ಮೀ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಕಡಿಮೆ ದಾಖಲಾತಿ ನೆಪಹೇಳಿ ವಿಲೀನದ ಹೆಸರಿನಲ್ಲಿ ಮುಚ್ಚಲು ಮುಂದಾಗಿದೆ. ಶೈಕ್ಷಣಿಕ

ಹಾಸ್ಟೆಲ್ ಮೂಲಭೂತ ಸೌಕರ್ಯಗಳು, ಆಹಾರ ಭತ್ಯೆಯನ್ನು ಕನಿಷ್ಠ 4500 ರೂಪಾಯಿಗೆ ಏರಿಕೆ ಮಾಡುವಂತೆ, ವಿದ್ಯಾರ್ಥಿವೇತನ, ಅಂಕಪಟ್ಟಿ ಸಮಸ್ಯೆಗಳು, ವಿಶ್ವವಿದ್ಯಾಲಯಗಳಿಗೆ ಅನುದಾನ, ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಭಾರಿ ಭ್ರಷ್ಟಾಚಾರದ ತನಿಖೆಗಾಗಿ ಸೇರಿದಂತೆ ವಿದ್ಯಾರ್ಥಿ ಸಮುದಾಯದ ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಆಗ್ರಹಿಸಿ ಎಸ್.ಎಫ್.ಐ ಕರ್ನಾಟಕ ರಾಜ್ಯ ಸಮಿತಿ 12 ಡಿಸೆಂಬರ್ 2025 ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಆದ್ದರಿಂದ ಬೆಳಗಾವಿ ಚಲೋ ಯಶಸ್ವಿಗಾಗಿ ಸಹಕರಿಸಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಿ ಎಂದು ಕರೆ ನೀಡಿದರು. ಶೈಕ್ಷಣಿಕ

ಇದನ್ನೂ ಓದಿ: ಕೆಜೆವಿಎಸ್‌ : ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಲಕ್ಷ ಗಟ್ಟಲೆ ಸಾಲ ಮಾಡಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಸ್ಥಿತಿ ಇದ್ದರೂ, ಉದ್ಯೋಗ ಸಿಗದೇ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಜನರ ರಕ್ಷಣೆಗಾಗಿ ಕಾಯಿದೆ ಜಾರಿಗೆ ತರಬೇಕು ಹಾಗೂ ಉದ್ಯೋಗ ಸೃಷ್ಟಿಸಿ ಭದ್ರತೆಯನ್ನು ನೀಡಬೇಕು. ಬಹುತೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು. ಶಿಕ್ಷಣ, ಉದ್ಯೋಗದ ಹಕ್ಕಿಗಾಗಿ ಎಸ್ಎಫ್ಐ ನಡೆಸುತ್ತಿರುವ “ಬೆಳಗಾವಿ ಚಲೋ” ವಿದ್ಯಾರ್ಥಿ ಯುವಜನರು ಬೆಂಬಲ ನೀಡಿ ಯಶಸ್ವಿಗೊಳಿಸಿ ಎಂದರು. ಶೈಕ್ಷಣಿಕ

ಎಸ್ಎಫ್ಐ ಜಿಲ್ಲಾಧ್ಯಕ್ಷ ನಾಗರಾಜ ಛಲವಾದಿ ಮಾತನಾಡಿ, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ ಅಂಕಪಟ್ಟಿ ಶುಲ್ಕ ಹೆಚ್ಚಳ ಮಾಡುವ ಮೂಲಕ ಸರ್ಕಾರ ಲೂಟಿ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸುಮಾರು 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಗಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳ ಪ್ರಮಾಣ ಕುಸುಯುತ್ತಿವೆ ಮತ್ತು ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಸರಿಯಾಗಿ ಫೆಲೋಶಿಪ್ ನೀಡಲಾಗುತ್ತಿಲ್ಲ.

ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಪ್ರತಿ ವಿದ್ಯಾರ್ಥಿಗೆ ಆಹಾರ ಭತ್ಯೆಯನ್ನು 1750 ರಿಂದ 1850 ರೂ. ನಿಗದಿ ಮಾಡಲಾಗಿದೆ. ಪ್ರಸ್ತುತ ಬೆಲೆ ಏರಿಕೆಯಿಂದ ವಿದ್ಯಾರ್ಥಿಗಳಿಗೆ ಬೇಕಾಗಿರುವ ಪೌಷ್ಠಿಕಾಂಶ ಸಿಗದೇ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆರೋಗ್ಯ ಭದ್ರತೆ ಇಲ್ಲದಂತಾಗಿದೆ. ಹಾಗೂ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸಿದರೆ 2.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ನೀಡಲಾಗುತ್ತಿದೆ. 7.5ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆಯುತ್ತಿಲ್ಲ. ಆದರಿಂದ ಹಾಸ್ಟೆಲ್ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಒದಗಿಸಲು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ಹೊಸ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಬೇಕಿದೆ ಎಂದರು.

ಹಕ್ಕೊತ್ತಾಯಗಳು

1. ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗೆ ವಿಲೀನದ ಹೆಸರಿನಲ್ಲಿ ಹಳ್ಳಿಗಳ ಶಾಲೆಗಳನ್ನು ಮುಚ್ಚುವುದನ್ನು ಕೈಬಿಡಲು ಒತ್ತಾಯಿಸಿ.

2. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕವಾಗಿ 4,500 ರೂ. ಆಹಾರ ಭತ್ಯೆ ನೀಡಿ, ಆರೋಗ್ಯ ಭದ್ರತೆ, ಹಾಸ್ಟೆಲ್‌ಗೆ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ, ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ.

3. ಸರ್ಕಾರಿ ಶಾಲೆ/ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ, ಶೌಚಾಲಯ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿ, 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲು ಒತ್ತಾಯಿಸಿ.

4. ರಾಜ್ಯದಲ್ಲಿ ಉಳಿಸಿಕೊಂಡಿರುವ (ಯು.ಯು.ಸಿ.ಎಮ್.ಎಸ್) 30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ವಿತರಣೆ ಮಾಡಲು ಒತ್ತಾಯಿಸಿ.

5. 2026-27 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ.30 ರಷ್ಟು ಅನುದಾನ ಮೀಸಲಿಡಲು ಒತ್ತಾಯಿಸಿ.

6. 3 ವರ್ಷಗಳಿಂದ ಭಾಕಿ ಉಳಿಸಿಕೊಂಡ ಎಲ್ಲಾ ವರ್ಗದ ವಿದ್ಯಾರ್ಥಿ ವೇತನವನ್ನು(ಶಿಷ್ಯ ವೇತನ) ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿ.

7. ಜಿಲ್ಲೆಯಲ್ಲಿಗೊಂದು ಸರ್ಕಾರಿ ಬಿ.ಎಡ್, ಕಾನೂನು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಲು ಒತ್ತಾಯಿಸಿ.

8. ರಾಜ್ಯದ ಸ್ನಾತಕೋತ್ತರ ಪದವಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ ತಾಲ್ಲೂಕಿಗೊಂದು ಬಸ್ ಡಿಪೊ ತೆರೆದು ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಒತ್ತಾಯಿಸಿ

9. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 62,000 ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಒತ್ತಾಯಿಸಿ.

10. ಪದವಿ ಪೂರ್ವ(ಪಿ.ಯು) ಮತ್ತು ಪದವಿ(ಡಿಗ್ರಿ) ಕಾಲೇಜುಗಳಲ್ಲಿ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕ, ಪ್ರಾಧ್ಯಾಪಕರನ್ನು ನೇಮಕಾತಿ ಮಾಡಲು ಒತ್ತಾಯಿಸಿ.

11. ರಾಜ್ಯ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು. ಸಂಶೋಧನ ವಿದ್ಯಾರ್ಥಿಗಳಿಗೆ ಮಾಸಿಕ ಆರ್ಥಿಕ ಸಹಾಯ ಧನವನ್ನು 25,000 ರೂ. ಗೆ ಹೆಚ್ಚಿಸಲು ಒತ್ತಾಯಿಸಿ.

12. ಶಿಕ್ಷಣ ಸಂಸ್ಥೆಗಳಲ್ಲಿ ಅಭಿವೃದ್ಧಿ ಸಮಿತಿ, ವಿಶ್ವವಿದ್ಯಾಲಯಗಳ ಸಿಂಡಿಕೆಟ್, ಅಕಾಡೆಮಿಕ್ ಕೌನ್ಸಿಲ್, ಎಲ್.ಐ.ಸಿ ಸಮಿತಿಗಳಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯ ವಹಿಸಲು ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು ಘೋಷಿಸಲು ಒತ್ತಾಯಿಸಿ.

13. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚು ಆತ್ಮಹತ್ಯಗೆ ಒಳಗಾಗುತ್ತಿದ್ದಾರೆ, ಇದನ್ನು ತಪ್ಪಿಸಲು ವೈಜ್ಞಾನಿಕ ಸೆಮಿಸ್ಟರ್ ಪದ್ದತಿಯನ್ನು ಜಾರಿಗೆ ತರಬೇಕು ಮತ್ತು ಇಯರ್ ಬ್ಯಾಕ್ ಪದ್ಧತಿ ವಾಪಾಸ್ ಪಡೆಯಲು ಒತ್ತಾಯಿಸಿ.

14. ರಾಜ್ಯದಲ್ಲಿ ಯುವಜನರ ರಕ್ಷಣೆಗಾಗಿ ಯುತ್ ಕಮಿಷನ್ ರೂಪಿಸಿ ಜಾರಿಗೆ ತರಬೇಕು. ಮತ್ತು ಉದ್ಯೋಗ ಭದ್ರತೆ ನೀಡಲು ಒತ್ತಾಯಿಸಿ.

ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಉಪಸಮಿತಿ ರಾಜ್ಯ ಸಂಚಾಲಕ ಅರುಣ್ ನಾಗವತ್, ಹಾಸ್ಟೆಲ್ ಘಟಕ ಅಧ್ಯಕ್ಷ ಶ್ರೀನಿವಾಸ ಎಸ್, ನರೇಂದ್ರ ನಾಯಕ, ಹನುಮಂತಪ ಬಳ್ಳಾರಿ, ದಿಲೀಪ್ ಕುಮಾರ್, ಸರ್ವೇಶ್ ಹಿರೇಮಠ, ಗಿರೀಶ್ ಮುಂದಗೊಂಡ, ದ್ವಾರಾಜ ರಾಥೋಡ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ನೋಡಿ: ಹಿಂದೂ ಎಂಬುದು ಧರ್ಮವೇ ಅಲ್ಲ, RSS ವಿರುದ್ಧ ಮಾತನಾಡಲು ಭಯ ಬೇಡ – ಜಸ್ಟಿಸ್ ಬಿ.ಜಿ. ಕೋಲ್ಸೆ ಪಾಟೀಲ್

Donate Janashakthi Media

Leave a Reply

Your email address will not be published. Required fields are marked *