ಬದುಕುವ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡೋಣ : ಪ್ರೊ.ಬರಗೂರು ರಾಮಚಂದ್ರಪ್ಪ

ವರದಿ : ಶಶಿಕುಮಾರ್‌. ಕೆ

ಬೆಂಗಳೂರು: ಬದುಕುವ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.

ಆಗಸ್ಟ್-14‌ ಮಂಗಳವಾರ ಸಂಜೆ ಟೌನ್‌ ಹಾಲ್‌ ಮುಂಭಾಗದಲ್ಲಿ ಸಿಐಟಿಯು, ಕೆಪಿಆರ್‌ಎಸ್‌, ಎಐಎಡಬ್ಲೂಯೂ ನೇತೃತ್ವದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನದ ಸಂರಕ್ಷಣೆಗಾಗಿ ಜನತೆಯ ಹಕ್ಕುಗಳ ಉಳಿವಿಗಾಗಿ ಅಹೋರಾತ್ರಿ 77ನೇ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಪ್ರೊ.ಬರಗೂರ ರಾಮಚಂದ್ರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನೆರೆದಿದ್ದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ ಮಾತುಗಳನ್ನು ಆರಂಭಿಸಿದರು.

ಇದನ್ನೂ ಓದಿ:ಬಹುಭಾಷಾ ಕವಿಗೋಷ್ಠಿ ಕುರಿತ ಸುದ್ದಿಯು ತಪ್ಪು ಶೀರ್ಷಿಕೆಯಡಿ ಪ್ರಕಟ; ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ

ಸಿಐಟಿಯು ಹಾಗೂ ಇತರೆ ಜನಪರ ಸಂಘಟನೆಗಳು ಅಹೋರಾತ್ರಿ 77ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಸುಮಾರು ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿ ಸಿಐಟಿಯು ನೇತೃತ್ವದಲ್ಲಿ ಮೊದಲು ಪ್ರಾರಂಭವಾಗಿದ್ದು ಆನಂತರ ದೇಶದ ವಿವಿಧ ಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಅನ್ವಯಿಸಿಕೊಂಡಿವೆ ಎಂಬುವುದಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು  ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸಿದರು.

ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನದ ಸಂರಕ್ಷಣೆಗಾಗಿ ಎಂದು ಹೇಳಲಾಗಿದ್ದು, ಅದರ ಅರ್ಥ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಬಿಕ್ಕಟ್ಟಿನಲ್ಲಿದೆ ಎಂಬುದೇ ಅದರರ್ಥ ಎಂದರು. ಅದನ್ನು ನಾವು ಸಂರಕ್ಷಿಸಬೇಕಾಗಿದೆ  ಎಂಬುದನ್ನು ಸ್ವಾತಂತ್ರ್ಯೋತ್ಸವದ ಮುನ್ನ ದಿನ ಮಾತನಾಡುತ್ತೇವೆ.  ಆ ಪರಿಕಲ್ಪನೆಗಳ ಅರ್ಥವನ್ನೇ ಕಳೆದುಕೊಂಡಿರುವಂತಹ ಸನ್ನಿವೇಶದಲ್ಲಿ ಈ ದೇಶ ಹಾದುಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಗ, ನಿಜವಾದ ಸ್ವಾತಂತ್ರ್ಯ ಭಾರತದ ಕಲ್ಪನೆ ಹೇಗಿರಬೇಕು ಎಂಬುದನ್ನುಸ್ವಾತಂತ್ರ್ಯ ಪೂರ್ವದದಲ್ಲಿಯೇ ನಮ್ಮ ಹೋರಾಟಗಳು ಹೇಳಿದ್ದವು ಎನ್ನುವುದು ನನ್ನ ಅಭಿಪ್ರಾಯ ಎಂದರು. ಸ್ವಾತಂತ್ರ್ಯ ಹೋರಾಟ ಎಂಬುದು ಒಂದೇ ಧಾರೆಯ ಹೋರಾಟ ಆಗಿರಲಿಲ್ಲ. ರಾಷ್ಟ್ರೀಯವಾದ ಅನ್ನುವುದು ಒಂದೇ ಧಾರೆಯ ಹೋರಾಟ ಅಗಿರಲಿಲ್ಲ. ಅಲ್ಲಿ ಗಾಂಧಿ, ಅಂಬೇಡ್ಕರ್‌, ಸುಭಾಸ್‌ ಚಂದ್ರ ಬೋಸ್‌, ಭಗತ್‌ ಸಿಂಗ್‌, ತಿಲಕ್‌ ಅವರು ಇದ್ದರು.

ಹೀಗೆ ವಿವಿಧ ಧಾರೆಗಳ ಮುಖಾಂತರವಾಗಿ ರಾಷ್ಟ್ರೀಯತೆ ಎನ್ನುವ ಹೆಸರಿನಲ್ಲಿ ಹೋರಾಟ ಕಟ್ಟಿರುವ ಉದಾಹರಣೆಗಳು ನಮ್ಮಲ್ಲಿ ಇವೆ ಎಂದರು. ಅವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಬಹುದಾಗಿದೆ ಎಂದರು.

ಒಂದು ಗಾಂಧಿ ನೇತೃತ್ವದಲ್ಲಿ ನಡೆದಿರುವ ಬ್ರೀಟಿಷ್ ರಾಜಕೀಯ ವಸಾಹತು ಶಾಹಿ ವಿರುದ್ಧದ ಹೋರಾಟ, ಇನ್ನೊಂದು ಅಂಬೇಡ್ಕರ್‌ ಅವರು ನೇತೃತ್ವದಲ್ಲಿ ನಡೆದಂತಹ ಸಾಮಾಜಿಕ ವಸಾಹತು ಶಾಹಿ ವಿರುದ್ಧದ ಹೋರಾಟ, ಮತ್ತೊಂದು ಸಮತಾವಾದಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಆರ್ಥಿಕ ವಸಾಹತುಶಾಹಿ ವಿರೋಧಿ ಹೋರಾಟ, ಹೀಗೆ ಮೂರು ವಸಹತುಶಾಹಿಗಳನ್ನು ವಿರೋಧ ಮಾಡಿರುವಂತಹ ಈ ಹೋರಾಟಗಳೇ ಸ್ವಾತಂತ್ರ್ಯ ನಂತರದ ನಮ್ಮ ಭಾರತ ಹೇಗಿರಬೇಕು ಎಂಬುವುದರ ಸೂಚನೆ ಆಗುತ್ತೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಅದರರ್ಥ ನಮಗೆ ರಾಜಕೀಯ ಅಧಿಕಾರ, ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ ಕೂಡಲೇ ನಮಗೆ ಎಲ್ಲವೂ ಆಯಿತು, ಅದು ನಿಜವಾದ ಸ್ವಾತಂತ್ರ್ಯ ಎನ್ನುವ ಭಾವನೆ, ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶುರುವಲ್ಲಿ ಇರಲಿಲ್ಲ ಎಂಬುದು ಬಹಳ ಮುಖ್ಯವಾಗಿದ್ದು ಎಂದರು.

 

ಗಾಂಧೀಜಿಯವರು ಆ ಕಾಲದಲ್ಲಿ ಒಂದು ಮಾತನ್ನು ಹೇಳಿದ್ದರು,  ಬ್ರೀಟಿಷರಿಂದ ಸ್ವಾತಂತ್ರ್ಯ ಪಡೆದು ಅದನ್ನು ಶ್ರೀಮಂತರಿಗೆ ಕೊಟ್ಟರೆ ಅದು ರಾಮರಾಜ್ಯವೂ ಅಲ್ಲ, ರಾವಣ ರಾಜ್ಯವೂ ಅಲ್ಲ, ಕುಂಭಕರಣ ರಾಜ್ಯ ಅಂತ ಹೇಳ್ತಾರೆ. ಅಂಬೇಡ್ಕರ್‌ ಅವರಂತೂ ಪ್ರಜಾಪ್ರಭುತ್ವವನ್ನ ಬಹಳ ಚನ್ನಾಗಿ ನಿರ್ವಚನ ಮಾಡಿದ್ದಾರೆ. ಒಂದು ರಾಜಕೀಯ ಪ್ರಜಾಪ್ರಭುತ್ವ, ಇನ್ನೊಂದು ಆರ್ಥಿಕ ಪ್ರಜಾಪ್ರಭುತ್ವ, ಮತ್ತೊಂದು ಸಾಮಾಜಿಕ ಪ್ರಜಾಪ್ರಭುತ್ವ ಅಂತ. ರಾಜಕೀಯ ಪ್ರಜಾಪ್ರಭುತ್ವಕ್ಕೆ ಆರ್ಥಿಕ ಪ್ರಜಾಪ್ರಭುತ್ವ ತಳಹದಿಯಾಗಿರಬೇಕು ಎಂದು ಹೇಳುವ ಅಂಬೇಡ್ಕರ್‌ ಬಹಳ ಮುಖ್ಯವಾಗಿ ಸಾಮಾಜಿಕ ಪ್ರಜಾಪ್ರಭುತ್ವ ಇದೆಯಲ್ಲ ಅದು ಭಾರತಕ್ಕೆ ಬೇಕಾಗಿದೆ ಎಂದು ಹೇಳಿದ್ದರು. ಸಾಮಾಜಿಕ ಪ್ರಜಾಪ್ರಭುತ್ವ ಅಂದರೆ, ಸ್ವಾತಂತ್ರ್ಯ , ಸಮಾನತೆ, ಮತ್ತು ಸಹೋದರತೆ ಈ ಮೂರು ಅಂಶಗಳನ್ನು ಆಧಾರ ಮಾಡಿಕೊಂಡಿರುವುದೇ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವ. ಸಮತಾವಾದಿಗಳು ಮೊದಲಿನಿಂದಲೂ ಬಂಡವಾಳಶಾಹಿ ಆರ್ಥಿಕತೆಯ ವಿರುದ್ಧವಾಗಿ  ಹೋರಾಟ ಮಾಡುತ್ತ ನಿಜವಾದ ಸ್ವಾತಂತ್ರ್ಯವನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು ಎಂದರು.

ಇದನ್ನೂ ಓದಿ:ಕವಿಗಳು, ಸಾಹಿತಿಗಳು ಕಾಲದ ದನಿಯಾಗುವುದು ಅತಿಮುಖ್ಯ: ಬರಗೂರು ರಾಮಚಂದ್ರಪ್ಪ

ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತಹ ಪರಿಕಲ್ಪನೆಗಳು ಸ್ವಾತಂತ್ರ್ಯ ಭಾರತದಲ್ಲಿ ಎಷ್ಟರ ಮಟ್ಟಿಗೆ ಸಕಾರವಾದವು ಎಂಬ ಪ್ರಶ್ನೆಗಳನ್ನು ನಾವು ನಿರಂತರವಾಗಿ ಕೇಳಿಕೊಳ್ಳುತ್ತಾ ಬಂದಿದ್ದೇವೆ. ಇದರರ್ಥ ಸ್ವಾತಂತ್ರ್ಯ ಭಾರತದಲ್ಲಿ ಏನೂ ಆಗಿಲ್ಲ  ಅಂತೇಳಿದರೆ ಅದು ಸಿಡುಕುತನದ  ಮಾತಾಗುತ್ತದೆ. ಏನೂ ಆಗಿಲ್ಲದೆ ಇದ್ದಿದ್ದರೆ ನಾನು ಬರಗೂರಿನಂತಹ ಹಳ್ಳಿಯಿಂದ ಬಂದು ಇಲ್ಲಿ ನಿಂತು ನಿಮ್ಮನ್ನುದ್ದೇಷಿಸಿ ಭಾಷಣ ಮಾಡ್ತಾ ಇರಲಿಲ್ಲ. ಅಂತಹದೊಂದು ಸನ್ನಿವೇಶ ಬರ್ತಾ ಇರಲಿಲ್ಲ ಎಂದರು.

ಸ್ವಾತಂತ್ರ್ಯ ಭಾರತದಲ್ಲಿ ಏನೂ ಆಗಿಲ್ಲ ಅಂತ ಹೇಳಿದ್ರೆ ಅದು ಸಿಡುಕುತನದ ಬಹಳ ನಕಾರಾತ್ಮಕ ಮಾತು. ಆದರೆ ಯಾವ ಆಶಯಗಳು ನಮ್ಮಲ್ಲಿ ಇದ್ವು ಯಾವ ಸಮಾನತೆ ನಮ್ಮಲ್ಲಿ ಬರಬೇಕು, ಅದು ನಿಜವಾಗಿ ಬಂದಿದೀಯಾ ಅನ್ನೋ ಪ್ರಶ್ನೆ ಹಾಕಿಕೊಂಡಾಗ ಅದು ಬಂದಿಲ್ಲ. ಅಂತ ಹೇಳೋದಾದರೆ ಅದಕ್ಕೆ ಕಾರಣ ಇಷ್ಟೇನೆ! ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತಹ ಆದ್ಯತೆಗಳು, ಸ್ವಾತಂತ್ರ್ಯ ಬಂದ ಹೊಸದರಲ್ಲಿ ಇದ್ದಂತಹ ಆದ್ಯತೆಗಳು ಅವತ್ತು ಪಲ್ಲಟಗೊಂಡಿವೆ. ಆ ಆದ್ಯತೆಗಳ ಪಲ್ಲಟ ಇದೆಯಲ್ಲಾ ಅದು ಈ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ಯತೆಗಳ ಪಲ್ಲಟಕ್ಕೆ ಯಾವುದು ನಿಜವಾದ ಕಾರಣ ಕಾರ್ಪೊರೇಟೀಕರಣ ಮತ್ತು ಕೋಮುವಾದಿಕರಣಗಳು ಈ ದೇಶದ ಆದ್ಯತೆಗಳನ್ನು ಬದಲಾಯಿಸಿರವುದನ್ನು ನಾವು ನೋಡುತ್ತೇವೆ. ಕಾರ್ಪೊರೇಟೀಕರಣದಿಂದ ನಮ್ಮ ಆರ್ಥಿಕ ನೀತಿಗಳೆ ಬದಲಾದವು ಈ ದೇಶದ ಸಂಪತ್ತಿನ ಕ್ರೋಡಿಕರಣ ಇದೆಯಲ್ಲಾ ಶೇ1 ರಷ್ಟು ಜನದಲ್ಲಿ ಶೇ 74 ರಷ್ಟು ಸಂಪತ್ತು ಕ್ರೋಡಿಕರಣವಾಗಿದೆ. ಈ ದೇಶ ಎಷ್ಟರಮಟ್ಟಿಗೆ ಶ್ರೀಮಂತವಾಗಿದೆ ಎನ್ನುವುದು ನಮಗೆ ಅರ್ಥವಾಗುತ್ತದೆ ಎಂದರು. ನಿರುದ್ಯೋಗದ ಬಗ್ಗೆಯೂ ಮಾತನಾಡಿದ ಅವರು ನಮ್ಮ ದೇಶದಲ್ಲಿ65 ಕೋಟಿ ಯುವಜನರಿದ್ದಾರೆ ಎಂದರು.

ಚಿಂತಕರಾದ ಡಾ.ಜಿ.ರಾಮಕೃಷ್ಣ, ಸಿ.ಬಸವಲಿಂಗಯ್ಯ, ಡಾ.ಬಿ.ಆರ್.ಮಂಜುನಾಥ್‌, ಜಿ.ಎನ್.ನಾಗರಾಜು, ಟಿ.ಯಶವಂತ, ಭೀಮನಗೌಡ, ಗೋಪಾಲಕೃಷ್ಣ ಅರಳಹಳ್ಳಿ, ಗೌರಮ್ಮ ಸೇರಿದಂತೆ ಅನೇಕರು ಮಾತನಾಡಿದರು.

ಧ್ವಜಾರೋಹಣವನ್ನು ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿ ಸುಂದರಂ ನೇರವೆರಿಸಿದರು. ಲಿಂಗರಾಜು ಸ್ವಾಗತಿಸಿ, ಪಿ.ಮುನಿರಾಜು ವಂದಿಸಿದರು. ಹಾಗೂ ಭೂಮ್ತಾಯಿ ಬಳಗದಿಂದ ಕ್ರಾಂತಗೀತೆಗಳು ಮೊಳಗಿದವು. ಕಾರ್ಯಕ್ರಮದಲ್ಲಿ ವಿವಿಧ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ

 

 

Donate Janashakthi Media

Leave a Reply

Your email address will not be published. Required fields are marked *