ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ- ನೆರೆ ಹೊರೆಯ ಸಮಾನ ಶಾಲೆಯಾಗಲಿ

ಬೆಂಗಳೂರು :  ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದರೂ , ಇನ್ನೂ ಹಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ , ಷೂ ಹಾಗು  ಸಾಕ್ಸ್  ದೊರೆತಿಲ್ಲ.  ಏಳನೇ ತರಗತಿಯಿಂದ ಎಂಟು ಅಥವಾ ಎಂಟರಿಂದ ಒಂಭತ್ತನೇ ತರಗತಿಗೆ ಹೋಗುತ್ತಿರುವ  ಮಕ್ಕಳಿಗೆ ಉಚಿತ ಬೈಸಿಕಲ್ ಸಿಕ್ಕಿಲ್ಲ ಪರಿಸ್ಥಿತಿ ಹೀಗಿರುವಾಗ,  ಶಿಕ್ಷಣ ಸಚಿವರು ಮಕ್ಕಳ ಕಲಿಕೆಗೆ ಪೂರಕವಾಗಿರುವ ವಿಷಯಗಳ ಬಗ್ಗೆ ಆದ್ಯತೆಯ ಮೇಲೆ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮನವಿ ಸಲ್ಲಿಸಿದೆ.

ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರು  ಸದನದಲ್ಲಿ ಬಂದ ಒಂದು ಪ್ರಶ್ನೆಯ ಭಾಗವಾಗಿ  ಶಿಕ್ಷಕರಿಗೆ ಸಮವಸ್ತ್ರದ ವಿಷಯ ಪ್ರಸ್ತಾಪಿಸಿದ್ದಾರೆ . ಅದರ  ಚರ್ಚೆ ಬಗ್ಗೆ ನಡೆಯಲಿ, ನಮ್ಮ ಅಭ್ಯಂತರವಿಲ್ಲ ಆದರೆ , ಶಾಲಾ ಶಿಕ್ಷಣದಲ್ಲಿನ ಕೇಂದ್ರ ಬಿಂದು ಮಕ್ಕಳು ಹಾಗು ಮಕ್ಕಳ ಕಲಿಕೆ . ಈ ಮಕ್ಕಳಿಗಿರುವ  ಶಿಕ್ಷಣದ ಮೂಲಭೂತ ಹಕ್ಕಿನ ಭಾಗವಾಗಿ ಒದಗಿಸಬೇಕಾದ ಉತ್ತೇಜಕಗಳು, ಕಲಿಯಲು ಅಗತ್ಯವಾದ ಮೂಲ ಸೌಕರ್ಯ ಹಾಗು ಕಲಿಸಲು ಬೇಕಾದ ಅರ್ಹ ಶಿಕ್ಷಕರು ನಮ್ಮ ಮೊಟ್ಟ ಮೊದಲ ಆದ್ಯತೆಯಾಗಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ  ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು  ಆಗ್ರಹಿಸಿದೆ.

ಶಾಲಾ ಹಂತದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೂಡಲೇ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸದಸ್ಯರ ಸಭೆ ಕರೆಯಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ  ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು  ಒತ್ತಾಯಿಸಿದ್ದಾರೆ ಎಂದು ಅಧ್ಯಕ್ಷರು ಉಮೇಶ್ ಜಿ ಗಂಗವಾಡಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂಓದಿ:ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ಹೊಸ ಶಿಕ್ಷಣ ನೀತಿ: ಬಜೆಟ್ ನಲ್ಲಿ ಸಿಎಂ ಘೋಷಣೆ

ಹಕ್ಕೊತ್ತಾಯಗಳು

  1. ಶಾಲೆಗಳು ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದರು ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ , ಷೂ ಹಾಗು  ಸಾಕ್ಸ್ ಗಳು ದೊರಕಿರುವುದಿಲ್ಲ. ಎಲ್ಲಾ ಮಕ್ಕಳಿಗೆ ಸಮವಸ್ತ್ರ , ಷೂ ಹಾಗು  ಸಾಕ್ಸ್ ಗಳನ್ನು ಒದಗಿಸಲು ತುರ್ತು  ಕ್ರಮವಹಿಸಬೇಕು .
  1. ಎರಡನೇ ಕಂತಿನ ಅತಿಥಿ ಶಿಕ್ಷರ ನೇಮಕದಲ್ಲಿ ವಿಳಂಬವಾಗಿರುವುದರಿಂದ ಕಲಿಕೆಗೆ ತೀವ್ರ ತೊಂದರೆಯಾಗುತ್ತಿದ್ದು ಕೂಡಲೇ ಅತಿಥಿ ಶಿಕ್ಷಕರ ನೇಮಕಕ್ಕೆ  ಕ್ರಮವಹಿಸಬೇಕು.
  1. ಅಂತಿಮಗೊಂಡಿರುವ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಶೀಘ್ರವಾಗಿ ಪರಿಹರಿಸಿ 13,352 ಖಾಯಂ ಶಿಕ್ಷಕರನ್ನು ಶೀಘ್ರವಾಗಿ ನೇಮಿಸಿಕೊಳ್ಳಲು ಕ್ರಮವಹಿಸಬೇಕು
  1. ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದರೂ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಈ ಖಾಯಂ ಶಿಕ್ಷಕರ ನೇಮಕವಾಗಬೇಕು. ಜೊತೆಗೆ , ಈಗ ನೇಮಕವಾಗುತ್ತಿರುವ ಖಾಯಂ ಶಿಕ್ಷಕರನ್ನು ಅತ್ಯಗತ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ನಿಯೋಜಿಸಬೇಕು.
  1. ಸರ್ಕಾರಿ ಶಾಲೆಗಳಲ್ಲಿ ಬಳಸುವ ವಿದ್ಯುಚ್ಛಕ್ತಿ ಹಾಗು ನೀರಿನ ಬಳಕೆಯ ಬಿಲ್ ಗಳ ಹಣವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಲು ಕ್ರಮವಹಿಸಬೇಕು.
  1. ಪ್ರೌಢ ಶಿಕ್ಷಣ ಮುಂದುವರಿಸಲು ಏಳನೇ ತರಗತಿಯಿಂದ ಎಂಟು ಅಥವಾ ಎಂಟರಿಂದ ಒಂಭತ್ತನೇ ತರಗತಿಗೆ ಹೋಗುತ್ತಿರುವ  ಮಕ್ಕಳಿಗೆ ಉಚಿತ ಬೈಸಿಕಲ್ ಕಳೆದ ಮೂರ್ನಲ್ಕು ವರ್ಷದಿಂದ ಸಿಕ್ಕಿರುವುದಿಲ್ಲ . ಇದರಿಂದ ಸಾವಿರಾರು ಮಕ್ಕಳು ಶಾಲೆ ಬಿಟ್ಟಿದ್ದಾರೆ .  ಈ ಮಕ್ಕಳಿಗೆ  ಅನುಕೂಲವಾಗುವಂತೆ ಕೂಡಲೇ  ಮಕ್ಕಳಿಗೆ ಬೈಸಿಕಲ್ ವಿತರಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು.
  1. ಯಾವುದೇ ನೆಪಹೇಳಿ ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ ವಿಲೀನಗೊಳಿಸುವ ಪ್ರಕ್ರಿಯೆಯನ್ನುಪೂರ್ಣವಾಗಿ ನಿಲ್ಲಿಸುವುದು.
  1. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತೀ ಮಗುವಿನ ಯುನಿಟ್ ವೆಚ್ಚವನ್ನು ಹೆಚ್ಚಿಸಬೇಕು.
  1. ಶಾಲೆಯಲ್ಲಿ ಎಲ್ಲಾ ಸರ್ಕಾರಿಗಳಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿಗತಿ ಅರಿಯಲು ಸಿಆರ್ಪಿ , ಶಿಕ್ಷಣ ಸಂಯೋಕಕರು, ಬಿಆರ್ ಸಿ , ಬಿಆರ್ ಪಿ , ಬಿಇಒ, ಡಿಡಿಪಿಐ ಮತ್ತು ಡಯಟ್ ಸಿಬ್ಬಂದಿಗಳು ಶಾಲೆಗಳಿಗೆ ಭೇಟಿ ನೀಡಿ ವಿವರವಾದ ವರದಿ ಸಲ್ಲಿಸಲು ಕ್ರಮ ವಹಿಸಬೇಕು
  1. ಶಾಲಾ ಹಂತದಲ್ಲಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ರಚಿಸಿ ಬಲವರ್ಧನೆಗೊಳಿಸಲು  ಪರಿಣಾಮಕಾರಿ ತರಬೇತಿ ಒದಗಿಸಲು ಕ್ರಮ.
  1. ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣವೂ ಒಳಗೊಂಡಂತೆ ಕನಿಷ್ಠ 12ನೆಯ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವಿಸ್ತರಿಸಲು ಸಂವಿಧಾನ ಹಾಗು ಶಿಕ್ಷಣಹಕ್ಕು ಕಾಯಿದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು.
  1. ಸಂವಿಧಾನದಲ್ಲಿನ ಮೂಲಭೂತ ಹಕ್ಕಾಗಿರುವ 21ಎ ನ್ನು ಕೊಡಮಾಡುವ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಹಾಗು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗು ನಿಗದಿತ ಸಮಯದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು  ಹೊಸ ಸರ್ಕಾರ ಕಾಲಮಿತಿ ಯೋಜನೆ ರೂಪಿಸಬೇಕು.

ಈ ಸಂದರ್ಭದಲ್ಲಿ  ಶಿಕ್ಷಣ ತಜ್ಞರು ಪ್ರೊ.(ಡಾ.) ನಿರಂಜನಾರಾಧ್ಯ ವಿ ಪಿ, ಕಾರ್ಯದರ್ಶಿ  ಪಾರ್ವತಿ ಜಿ.ಎಸ್, ಮುಖಂಡರಾದ ಗುನ್ನಳ್ಳಿ ರಾಘವೇಂದ್ರ, ಮಾಥ್ಯು ಮುನಿಯಪ್ಪ,  ಅಬ್ದುಲ್  ಸಲಾಂ ಚಿತ್ತೂರು,  ಶಂಕರ  ಬನಪ್ಪನವರ,  ರಾಜಶೇಖರ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *