ಮೋದಿ ರೋಡ್‌ ʼಶೋʼಕಿಗೆ ಮರಗಳಿಗೆ ಬಿತ್ತು ಕೊಡಲಿ!

ಮಂಡ್ಯ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭೆ ಸಮೀಪಿಸುತ್ತಿರುವ ಹೊತ್ತಿನಲ್ಲೆಎಲ್ಲೆಡೆ ತಮ್ಮ ಪಕ್ಷಕ್ಕೆ ಬಲ ತರುವ ಉದ್ದೇಶದಿಂದ ರಾಜ್ಯ ವ್ಯಾಪಿ ತಮ್ಮ ಸಂಚಾರವನ್ನು ಎಡಬಿಡದೆ ಮುಂದುವರಿಸುತ್ತಾ ಬರುತ್ತಿದ್ದಾರೆ.

ಇದೇ ತಿಂಗಳ ಮಾರ್ಚ್‌12ರಂದು ಮಂಡ್ಯಕ್ಕೆ ಭೇಟಿ ನೀಡುತ್ತಿದ್ದು, ಮೋದಿ ಸ್ವಾಗತಕ್ಕೆ ಜಿಲ್ಲಾಡಳಿತವು ಸಕಲ ಸಿದ್ದತೆಗಳ ಭರದಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸುಮಾರು 34 ಮರಗಳಿಗೆ ಕೊಡಲಿ ಏಟು ನೀಡಿದೆ. ಸೋಮವಾರ ತಡರಾತ್ರಿ ನಡೆದ ಈ ಘಟನೆಯಿಂದಾಗಿ  ಹಚ್ಚಸಿರಾಗಿದ್ದ ಸಾಕಷ್ಟು ಮರಗಳಿಗೆ ಕೊಡಲಿ ಏಟು ನೀಡಿರುವುದು ಅಲ್ಲಿಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಾರ್ಚ್‌ 12 ರಂದು ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಮಧ್ಯಾಹ್ನ 12ಕ್ಕೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳ ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ತದನಂತರ ನಗರದ ಪ್ರವಾಸಿ  ಮಂದಿರದಿಂದ ಕೆಂಪೇಗೌಡ ಉದ್ಯಾನದ ವರೆಗೆ 1.5 ಕಿ.ಮೀ ರೋಡ್‌ ಶೋ ನಡೆಸುವರು. ಮೋದಿಯವರ ಭದ್ರತೆಯ ದೃಷ್ಟಿಯಿಂದಾಗಿ ರಸ್ತೆಯ ಎರಡು ಬದಿಯಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಲಾಗಿದೆ. ‘ಮರಗಳಲ್ಲಿ ಒಣಗಿದ, ಬಾಗಿದ ಕೊಂಬೆಗಳಿದ್ದವು. ಅವುಗಳನ್ನು ತೆರವು ಮಾಡಲು ಕೆಳಮಟ್ಟದ ಕೊಂಬೆಗಳನ್ನೂ ತೆರವು ಮಾಡಬೇಕಾಯಿತು. ನಮಗೆ ಸ್ಪಷ್ಟ ಸೂಚನೆ ಇರಲಿಲ್ಲ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ಪರಿಶೀಲನೆ ಕೈಗೊಳ್ಳುತ್ತೇನೆ ಎಂದ ಜಿಲ್ಲಾಧಿಕಾರಿ :
ಪ್ರಧಾನಿ ರ್‍ಯಾಲಿಯಲ್ಲಿ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಣಗಿದ್ದ ಕೊಂಬೆ ತೆರವು ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದೆ. ಅವರು ಹೇಗೆ ಕಡಿಸಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ. ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಕೆಳ ಹಂತದ ಸಿಬ್ಬಂದಿ ಹಾಗೂ ಇತರೆ ಕಾರ್ಮಿಕರು ಮರಗಳನ್ನು ಕತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರದ ಕೊಂಬೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸದಾನಂದ ಗೌಡ, “ನಮ್ಮ ಕಡೆಯಿಂದ ಯಾವ ಆದೇಶವನ್ನೂ ಕೊಟ್ಟಿಲ್ಲ. ಅಧಿಕಾರಿಗಳು ನಿನ್ನೆ ಮರಗಳನ್ನು ಟ್ರಿಮ್ ಮಾಡಿದ್ದಾರೆ. ಮರದ ಕಂಟಿಂಗ್ ಮಾಡದ ಹಾಗೇ ವರಿಷ್ಠರು ಆದೇಶ ಕೊಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದನ್ನು ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಪಕ್ಷ, ಸರ್ಕಾರದ ಕಡೆಯಿಂದ ಯಾವುದೇ ಆದೇಶ ಮಾಡಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು  ಮಂಡ್ಯ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಅವರು  ಮಾಹಿತಿ ನೀಡಿದ್ದಾರೆ.

ಮೋದಿ ಮುಖವನ್ನು ಜನರಿಗೆ ತೋರಿಸುವ ಸಲುವಾಗಿ ಮರಕ್ಕೆ ಕೊಡಲಿ ಏಟು: ಮುಂಬರುವ ವಿಧಾನಸಭೆ ಚುನಾವಣಾ ಉದ್ದೇಶದಿಂದಾಗಿ  ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಬರುತ್ತಿದ್ದಾರೆ. ಮೋದಿ  ರೋಡ್‌ ಶೋ ಶೋಕಿಗೆ ನೂರಾರು ವರ್ಷಗಳಷ್ಟು ಹಳೆಯದಾದ ಮರಗಳನ್ನು ಕಡಿಯುವ ಅಗತ್ಯವಿರಲಿಲ್ಲ ಇದು ನಾನ್‌ ಸೆನ್ಸ್‌.. ಮೋದಿ ರೋಡ್‌ ಶೋ ವೇಳೆ ರಸ್ತೆ ಸಮೀಪದಲ್ಲಿನ ಕಟ್ಟಡಗಳ ಮೇಲೆ ಜನರು ನಿಂತು ನೋಡುವವರಿಗೆ ಅನುವು ಮಾಡಿಕೊಡುವುದಕ್ಕಾಗಿ ಇಷ್ಟೊಂದು ಮರಗಳನ್ನು ಕಡಿಯಲಾಗಿದೆ ಎಂದು ಜನಶಕ್ತಿ ಮೀಡಿಯಾದೊಂದಿಗೆ ಮಾತನಾಡಿದ  ಸಿಪಿಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ  ಟಿ ಎಲ್‌ ಕೃಷ್ಣೇಗೌಡ  ಅವರು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ : ಮಾರ್ಚ್‌ 25ಕ್ಕೆ ಮೋದಿ ಕೊನೆ ಭಾಷಣ-ನಂತರ ಚುನಾವಣೆ; ಆಯೋಗಕ್ಕೂ ಮೊದಲೇ ದಿನಾಂಕದ ಸುಳಿವು ನೀಡಿದ ಬಿಜೆಪಿ ಸಂಸದ

ಮೋದಿ ಶೋಕಿಗೆ ರೆಂಬೆಗಳ ನೆಪದಲ್ಲಿ ಮರಗಳಿಗೆ ಕೊಡಲಿ:
ಈ ಬಗ್ಗೆ ಟ್ವೀಟ್‌ ಮಾಡಿರುವ  ಕಾಂಗ್ರೆಸ್‌ ಮೋದಿ ‘ಶೋ’ಕಿಗಾಗಿ ನೆರಳು, ಗಾಳಿ ನೀಡುವ ಮರಗಳ ಮಾರಣಹೋಮ ಮಾಡಿದೆ. ಬಿಜೆಪಿಯ ಒಂದು ದಿನದ ಪ್ರಚಾರದ ಜಾತ್ರೆಗಾಗಿ ದಶಕಗಳಿಂದ ಬೆಳೆದ ಮರಗಳನ್ನು ಕಡಿದ 40 ಪರ್ಸೇಂಟ್‌ ಸರ್ಕಾರ ನಿರ್ಲಜ್ಜತನದ ಪರಮಾವಧಿಗೆ ತಲುಪುವ ಮೂಲಕ ರೆಂಬೆಗಳ ನೆಪದಲ್ಲಿ ಅರ್ಧ ಮರವನ್ನೇ ಕಡಿಯಲಾಗಿದೆ. ಹಿಂದೆ ಸ್ಟೀಲ್ ಬ್ರಿಡ್ಜ್ ಸಂದರ್ಭದಲ್ಲಿದ್ದ ಬಿಜೆಪಿಯ ಪರಿಸರ ಪ್ರೇಮ ಈಗ ಎಲ್ಲಿ ಹೋಗಿದೆ? ಎಂದು ಕಿಡಿಕಾ ರಿದೆ.


ಸೂಕ್ತ ಕಾನೂನು ಕ್ರಮ ಅಗತ್ಯ :
ಈ ಬಗ್ಗೆ ಜನಶಕ್ತಿ ಮೀಡಿಯಾದೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರದ ನಾಗೇಂದ್ರರವರು, ನನ್ನ ಗಮನಕ್ಕೆ ಬಂದಂತೆ ಸುಮಾರು 20 ರಿಂದ 25 ಮರಗಳನ್ನು ಕಡಿದುಹಾಕಲಾಗಿದೆ. ಮರಗಳನ್ನು ಕಡಿಯಲು ಕಾನೂನಿನ ಪ್ರಕಾರ ತನ್ನದೇ ಆದ ರೀತಿ ರಿವಾಜುಗಳಿದೆ ಆ ಪ್ರಕಾರವಾಗಿ ನಡೆದುಕೊಳ್ಳಬೇಕಿತ್ತು. ಈ ಬಗ್ಗೆ ಸರಿಯಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ವಿಪರ್ಯಾಸವೇ ಹೌದು. ಭದ್ರತೆಯ ದೃಷ್ಟಿಯಿಂದಾಗಿ ಮರಗಳನ್ನು ಕಡಿಯಲಾಗಿದೆ ಎನ್ನುವುದಾದರೆ ಅದೇ ರಸ್ತೆಯಲ್ಲಿ ಪ್ರತಿನಿತ್ಯ ಸಂಚೃ ಮಾಡುವ ವಾಹನಗಳು, ರಸ್ತೆ ದಾಟುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಈ ಮುಂಚೆ ತೊಂದರೆಯಾಗಿರಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ಕಡಿಯಲಾದ ಮರಗಳು ನೂರಾರು ವರ್ಷಗಳಿಂದ ಸಣ್ಣ-ಸಣ್ಣ ವ್ಯಾಪಾರಿಗಳಿಗೆ ನೆರಳು ನೀಡುತ್ತಿದ್ದುದಲ್ಲದೆ  ಆಮ್ಲಜನಕವನ್ನು ನೀಡುತ್ತಿತ್ತು. ರಸ್ತೆಗಳು ಬೇಗ ಹಾಳಾಗದಿರಲಿ, ಹೆಚ್ಚು ವರ್ಷಗಳ ಕಲ ಬಾಳಿಕೆ ಬರಲೆಂದು ರಸ್ತೆ ಬದಿ ಮರಗಳನ್ನು ನೆಡಲಾಗುತ್ತದೆ. ಆದರೆ ಈಗ ಮೋದಿ ಉದ್ದೇಶದಿಂದ ಮರಗಳನ್ನು ಕಡಿದಿರುವುದು ಸರಿಯಲ್ಲ. ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮೋದಿ  ಆಗಮ ಉದ್ದೇಶದಿಂದ ಭದ್ರತೆ ಕಾಯ್ದುಕೊಳ್ಳಲು ರಸ್ತೆಗಳನ್ನು ಬಂದ್‌ ಮಾಡುವುದು ಒಂದರ್ಥದಲ್ಲಿ ಸರಿಯಾದರೂ  ಈ ರಸ್ತೆ ಬಂದ್‌ಗಳ ಸಾರ್ವಜನಿಕ ಜೀವಕ್ಕೆ ತೊಂದರೆಯಾಗುತ್ತಲೇ ಬಂದಿದೆ. ವಾಹನ ಸಂಚಾರದ ಮಾರ್ಗಗಳನ್ನು ಬದಲಾಯಿಸುವುದು ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡುತ್ತಿರುವುಲ್ಲದೇ , ಶಾಲಾ-ಕಾಲೇಜುಗಳಿಗೆ ರಜೆ ನೀಡುತ್ತಾ ವಿದ್ಯಾರ್ಥಿಗಳ ಓದಿಗೆ ತೊಡಕು ಒಂದೆಡೆಯಾದರೆ ಮಂಡ್ಯದಲ್ಲಿ ಮರಗಳನ್ನು ಕಡಿದಿರುವುದು ಒಂದರ್ಥದಲ್ಲಿ ಪರಿಸರ ವಿನಾಶಕ್ಕೂ ಎಡೆಮಾಡಿಕೊಡುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

 

Donate Janashakthi Media

Leave a Reply

Your email address will not be published. Required fields are marked *