-ನಾ ದಿವಾಕರ
ಆತುರದ ಉದ್ಘಾಟನೆ ಅಸಮಪರ್ಕ ವ್ಯವಸ್ಥೆಯ ನಡುವೆ ಸಂಚಾರಿಗಳ ಅಂತಿಮ ಪಯಣ. ಒಂದು ಪ್ರಾಮಾಣಿಕ-ಪಾರದರ್ಶಕ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳು ಮೂಲತಃ ಜನೋಪಯೋಗಿಯಾಗಿರಬೇಕು ಮತ್ತು ಬಹುಮುಖ್ಯವಾಗಿ ಬಳಕೆಗೆ ಯೋಗ್ಯವಾಗಿರಬೇಕು. ಬಳಕೆ ಯೋಗ್ಯ ಎಂದ ಕೂಡಲೇ ಥಳುಕು-ಬಳುಕಿನ ನವಿರಾದ ಸುಂದರವಾಗಿ ಕಾಣುವ ನಿರ್ಮಾಣಗಳೇ ಎಂದು ಭಾವಿಸಬೇಕಿಲ್ಲ. ಜನಸಾಮಾನ್ಯರ ಬಳಕೆಗೆ ಯೋಗ್ಯವಾಗಿರಬೇಕಾದರೆ ಈ ಕಾಮಗಾರಿಗಳ ಮೂಲಕ ನಿರ್ಮಾಣವಾಗುವ ಸೇತುವೆಗಳು, ರಸ್ತೆಗಳು, ಹೆದ್ದಾರಿಗಳು, ಮೇಲ್ಸೇತುವೆಗಳು ಹಾಗೂ ಆಧುನಿಕ ಟ್ರೆಂಡ್ ಆಗಿರುವ ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿಗಳು ಅವುಗಳನ್ನು ಬಳಸುವ ಸಾಮಾನ್ಯ ಜನತೆಗೆ ಸುರಕ್ಷೆಯನ್ನು ನೀಡುವಂತಿರಬೇಕು. ಸುರಕ್ಷತೆ ಎಂದರೆ ಅಪಘಾತಗಳಿಗೆ ಅವಕಾಶವಿಲ್ಲದಂತೆ ತಿರುವುಗಳನ್ನು, ರಸ್ತೆ ಡುಬ್ಬಗಳನ್ನು, ವಿಭಜಕಗಳನ್ನು ನಿರ್ಮಿಸಬೇಕು. ಪ್ರತಿಯೊಂದು ತಿರುವಿಗೂ ಮುನ್ನ ಎಚ್ಚರಿಕೆಯ ಫಲಕಗಳು ಕಣ್ಣಿಗೆ ಕಾಣುವಂತೆ ಇರಬೇಕು.
ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸರ್ಕಾರಗಳು ಈ ಹೊಣೆಯನ್ನು ಹೊರುವುದಿಲ್ಲ. ಹಾಗಾಗಿ ಉತ್ತರದಾಯಿತ್ವದಿಂದಲೂ ಪಾರಾಗುತ್ತವೆ. ಈ ರೀತಿಯ ಸಾರ್ವಜನಿಕ ಕಾಮಗಾರಿಗಳೆಲ್ಲವೂ ಖಾಸಗಿ ಗುತ್ತಿಗೆದಾರರ ಮೂಲಕ, ಟೆಂಡರ್‌ಗಳ ಮೂಲಕ ಬಿಕರಿಯಾಗುವುದರಿಂದ, ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡುವ ಗುತ್ತಿಗೆದಾರರು ಇದರ ನಿರ್ಮಾತೃಗಳಾಗುತ್ತಾರೆ. ಆದರೆ ಟೆಂಡರ್‌ಗಳಿಗೆ ಬಿಡ್ ಮಾಡುವ ಪ್ರಕ್ರಿಯೆಯಲ್ಲೇ ಅಡಗಿರುವ ಒಳಪಾವತಿಗಳ ಒಂದು ನಿಯಮ ಮಾರುಕಟ್ಟೆ ಪ್ರಕ್ರಿಯೆಯ ಒಂದು ಭಾಗವಾಗಿಯೇ ರೂಪುಗೊಂಡಿರುತ್ತದೆ. ಗುತ್ತಿಗೆಯನ್ನು ತಮ್ಮ ಪಾಲಿಗೆ ಪಡೆದುಕೊಳ್ಳಲು ಈ ಒಳಪಾವತಿಗಳು ಭ್ರಷ್ಟ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಈ ಅಕ್ರಮ ಹಣದ ಹರಿವು ಆಡಳಿತ ಕೇಂದ್ರಗಳಿಗೂ ವಿಸ್ತರಿಸುವುದರಿಂದಲೇ ಇಡೀ ಆಡಳಿತ ವ್ಯವಸ್ಥೆಯೇ ಭ್ರಷ್ಟಾಚಾರದ ಕೂಪವಾಗಿ ಕಾಣುತ್ತದೆ. ಪಶ್ಚಿಮ ಬಂಗಾಲ-ನೊಯ್ಡಾದಿಂದ ಬೆಂಗಳೂರಿನವರೆಗೂ ಕಂಡುಬರುವ ಸೇತುವೆ-ಮೆಟ್ರೋ ಪಿಲ್ಲರ್-ರಸ್ತೆ ಕುಸಿತಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಭ್ರಷ್ಟತೆಯ ವಿರಾಟ್ ಸ್ವರೂಪವೇ ತೆರೆದುಕೊಳ್ಳುತ್ತದೆ.
ಆಳುವ ಸರ್ಕಾರಗಳ ಬಾಧ್ಯತೆ
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ ಆಡಳಿತ ಕೇಂದ್ರಗಳು ಮುಖ್ಯವಾಗಿ ಗುತ್ತಿಗೆದಾರರ ರಕ್ಷಣೆಗೆ ನಿಲ್ಲುವುದರಿಂದ, ಈ ಕುಸಿದ ಸೇತುವೆಗಳ ಭಗ್ನಾವಶೇಷಳಂತೆಯೇ ಅದರ ಹಿಂದಿನ ಭ್ರಷ್ಟತೆಯ ಮೂಲಗಳೂ ಮರೆಯಾಗುತ್ತವೆ. ಗುಜರಾತ್‌ನ ಮೋರ್ಬಿ ಸೇತುವೆ, ಬಿಹಾರದ ಸುಲ್ತಂಗಂಜ್-ಅಗುವಾನಿ ಘಾಟ್ ಸೇತುವೆ, ದಕ್ಷಿಣ ಕೋಲ್ಕತ್ತಾದ ಮಜೆರ್‌ಹತ್ ಮತ್ತು ವಿವೇಕಾನಂದ ಸೇತುವೆ ಈ ಎಲ್ಲ ಅವಘಡಗಳೂ ಮಾನವ ನಿರ್ಮಿತ ಅನಾಹುತ ಅಥವಾ ದುರಂತಗಳು. ವಿವೇಕಾನಂದ ಸೇತುವೆ ಕುಸಿದಾಗ ಅದರ ನಿರ್ಮಾಣದ ಗುತ್ತಿಗೆ ಪಡೆದಿದ್ದ ಮಹಾನುಭಾವರೊಬ್ಬರು ʼಅದು ದೇವರ ಕೃತ್ಯʼ ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು. ಕೇದಾರನಾಥದಲ್ಲಿ ಸಂಭವಿಸಿದ ಅನಾಹುತದ ಬಗ್ಗೆಯೂ ಇದೇ ರೀತಿಯ ಅಭಿಪ್ರಾಯ ಪಂಡಿತೋತ್ತಮರಿಂದ ಕೇಳಿಬಂದಿತ್ತು. ಏತನ್ಮಧ್ಯೆ ಈ ಸಾವುಗಳ ನಡುವೆಯೂ ಧರ್ಮರಾಜಕಾರಣದ ಸುಳಿವುಗಳನ್ನು ಶೋಧಿಸುವ ವಾಟ್ಸಾಪ್ ವಿಶ್ವವಿದ್ಯಾಲಯದ ಚಿಂತನಕಟ್ಟೆಗಳು ಅಪರಾಧಿಗಳನ್ನು ಘೋಷಿಸಲು ಸದಾ ಸನ್ನದ್ಧವಾಗಿರುತ್ತವೆ. ಈ ಗೊಂದಲಗಳ ನಡುವೆಯೇ ನಾವು ಅಮಾಯಕರಿಗೆ ಜೀವಕಂಟಕವಾಗುವ ಕಾಮಗಾರಿಗಳ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ.
ಏನೇ ಇರಲಿ ಈ ಅವಘಡಗಳಿಗೆ ಮತ್ತು ಅದರಿಂದಾಗುವ ಸಾವು ನೋವುಗಳಿಗೆ ಕಾರಣ ಯಾರು ? ಈ ಪ್ರಶ್ನೆ ಎದುರಾದಾಗ ನಮ್ಮ ಆಡಳಿತ ವ್ಯವಸ್ಥೆಯ ಉತ್ತರ ಕುಸಿದ ಸೇತುವೆಗಳಷ್ಟೇ ದುರ್ಬಲವಾಗಿ ಕಾಣುತ್ತದೆ. ಏಕೆಂದರೆ ಯಾವ ಅವಘಡದಲ್ಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುವುದಿರಲಿ, ವಿಚಾರಣೆಯೂ ನಡೆಯುವುದಿಲ್ಲ. ರೈಲ್ವೆ ದುರಂತಗಳಲ್ಲಿ ಈ ರೀತಿಯ ವಿಚಾರಣೆ ನಡೆಯುವುದಾದರೂ, ಉತ್ತರದಾಯಿತ್ವವಿಲ್ಲದ ಆಡಳಿತ ವ್ಯವಸ್ಥೆಯಲ್ಲಿ ಇಂತಹ ವಿಚಾರಣೆಗಳು ವಿಳಂಬವಾದಷ್ಟೂ ತಪ್ಪು ಮಾಡಿದವರು ಸುರಕ್ಷಿತವಾಗಲು ಸಾಕಷ್ಟು ಅವಕಾಶಗಳೂ ಲಭ್ಯವಾಗುತ್ತವೆ. ಇಲಾಖೆಗಳಿಗೆ ಸಂಬಂಧಪಟ್ಟ ಸಚಿವರಾಗಲೀ, ಕ್ಷೇತ್ರ ಪಾಲಕ ಶಾಸಕ-ಸಂಸದರಾಗಲೀ ಇಂತಹ ಅವಘಡಗಳಿಗೂ ತಮಗೂ ಸಂಬಂಧವೇ ಇಲ್ಲದವರಂತೆ ಇದ್ದುಬಿಡುತ್ತಾರೆ. ಉತ್ತರದಾಯಿತ್ವ ಇಲ್ಲದ ಯಾವುದೇ ವ್ಯವಸ್ಥೆಯಲ್ಲಿ ಇದು ಸ್ವಾಭಾವಿಕವಾಗಿ ಕಾಣುತ್ತದೆ.
ಮೂಲ ಸೌಕರ್ಯಗಳ ನಿರ್ಮಾಣ, ನಿಯಂತ್ರಣ ಹಾಗೂ ಬಳಕೆಯೋಗ್ಯವಾದ ನಿರ್ವಹಣೆ ಈ ಮೂರೂ ಪ್ರಕ್ರಿಯೆಗಳಲ್ಲಿ ಮೂಲತಃ ಪಾರದರ್ಶಕತೆ ಇಲ್ಲದಿರುವುದರಿಂದ, ಆಡಳಿತಾರೂಢ ಸರ್ಕಾರವಾಗಲೀ , ಅಧಿಕಾರಶಾಹಿಯಾಗಲೀ ಅಥವಾ ʼ ಜನ ʼ ಪ್ರತಿನಿಧಿಗಳಾಗಲೀ ಸಾಮಾನ್ಯ ಜನತೆಗೆ ಜೀವಕಂಟಕವಾಗುವ ಇಂತಹ ಕಾಮಗಾರಿಗಳ ಬಗ್ಗೆ ಅಥವಾ ಅಂತಹ ಗುತ್ತಿಗೆದಾರ ಉದ್ದಿಮೆಗಳ ಬಗ್ಗೆ ಜಾಗರೂಕತೆಯಿಂದ ಗಮನ ನೀಡುವುದಿಲ್ಲ. ಅಭಿವೃದ್ಧಿ ಪಥದಲ್ಲಿ ಇಡೀ ಆರ್ಥಿಕತೆಯೇ ಆಧುನಿಕತೆಯತ್ತ ಧಾವಿಸುತ್ತಿರುವಾಗ ಬಂಡವಾಳದ ಹರಿವು ಎಷ್ಟು ಸಹಜವಾಗಿ ಕಾಣುವುದೋ , ಈ ಪ್ರಕ್ರಿಯೆಯೊಳಗಿನ ಭ್ರಷ್ಟಾಚಾರ, ಅದಕ್ಷತೆ, ಅಪ್ರಾಮಾಣಿಕತೆ ಹಾಗೂ ಅಪಾರದರ್ಶಕತೆಯೂ ಅಷ್ಟೇ ಸಹಜವಾಗಿ ಪರಿಗಣಿಸಲ್ಪಡುತ್ತದೆ. ಹಾಗೆಯೇ ಇದರಿಂದ ಸಂಭವಿಸುವ ಸಾವುನೋವುಗಳು ಸಹ. ಯಾವುದೋ ಒಂದು ಘಟ್ಟದಲ್ಲಿ ಇಂತಹ ಅವಘಡಗಳಿಗೆ ಅದನ್ನು ಬಳಸುವ ಜನತೆಯನ್ನೇ ಹೊಣೆ ಮಾಡುವ ಪ್ರಸಂಗಗಳನ್ನೂ ಕಂಡಿದ್ದೇವೆ. ಹೆದ್ದಾರಿ ಅಪಘಾತಗಳಲ್ಲಿ ವೇಗದ ಚಾಲನೆಯೇ ಕಾರಣ ಎನ್ನುವ ಒಂದು ವಾದವನ್ನು ಗಮನಿಸಬಹುದು.
ನಾಗರಿಕರ ಜವಾಬ್ದಾರಿ
ಈ ಆರೋಪವನ್ನು ಭಾಗಶಃ ಒಪ್ಪಬಹುದು. ಏಕೆಂದರೆ ರಸ್ತೆ ನವಿರಾದಷ್ಟೂ ವಾಹನಗಳ ವೇಗ ಹೆಚ್ಚಿಸುವ ಒಂದು ಖಯಾಲಿ ವಾಹನ ಚಾಲಕರಲ್ಲಿರುತ್ತದೆ. ಇದನ್ನು ದೊಡ್ಡ ನಗರಗಳ, ಪಟ್ಟಣಗಳ ಜನನಿಬಿಡ ರಸ್ತೆಗಳಲ್ಲೇ ದಿನನಿತ್ಯ ಗಮನಿಸಬಹುದು. ರಸ್ತೆ ಅಗಲೀಕರಣ ಮಾಡುವುದು ಸುಗಮ ಸಂಚಾರ ವ್ಯವಸ್ಥೆಗೇ ಆದರೂ, ಅಗಲವಾದ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಈ ರಸ್ತೆಗಳು ಎಲ್ಲರಿಗೂ ಸಲ್ಲುವ ಸೌಕರ್ಯ ಎಂಬ ಭಾವನೆಗಿಂತಲೂ ತಮ್ಮ ಸ್ವೇಚ್ಚಾಚಾರ ಚಾಲನೆಗೆ ನೀಡಿದ ರಹದಾರಿ ಎಂದೇ ಭಾಸವಾಗುತ್ತದೆ. ಅತ್ಯಾಧುನಿಕ ಬೈಕುಗಳನ್ನು ಬಳಸುವ ಯುವ ಪೀಳಿಗೆ ಮತ್ತು ಎಸ್‌ಯುವಿ ಕಾರುಗಳನ್ನು ಬಳಸುವ ಹಣವಂತರಲ್ಲಿ ಈ ಧೋರಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಆದರೆ ಈ ಮುಕ್ತ-ಬೇಕಾಬಿಟ್ಟಿ-ಐಷಾರಾಮಿ ಸಂಚಾರ ವೀರರನ್ನು ನಿಯಂತ್ರಿಸುವ ಜವಾಬ್ದಾರಿಯೂ ಆಯಾ ನಗರಗಳ ಆಡಳಿತಾಧಿಕಾರಿಗಳ ಮೇಲಿರುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಇದ್ದರೆ, ಅಧಿಕಾರಿ ವರ್ಗಗಳು ತಮ್ಮ ಕರ್ತವ್ಯನಿಷ್ಠೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ಯೋಗಕ್ಷೇಮವನ್ನೂ ಗಮನದಲ್ಲಿಟ್ಟುಕೊಂಡರೆ ಇಂತಹ ಸಂಚಾರ ವಿಕೃತಿಗಳನ್ನು ನಿಯಂತ್ರಿಸುವುದು ಸುಲಭ. ಆದರೆ ನಮ್ಮ ಆಡಳಿತ ವ್ಯವಸ್ಥೆಯ ದೌರ್ಬಲ್ಯ ಇರುವುದೇ ಅಧಿಕಾರಶಾಹಿಯ ನಿರ್ಲಕ್ಷ್ಯ ಮತ್ತು ಅಪ್ರಾಮಾಣಿಕತೆಯಲ್ಲಿ. ಹಾಗಾಗಿಯೇ ಯಾವುದೇ ಅಪಘಾತ, ಅವಘಡಗಳಾದರೂ ಸತ್ತವರಿಗೊಂದಿಷ್ಟು, ಗಾಯಗೊಂಡವರಿಗೆ ಕೊಂಚ ಕಡಿಮೆ, ಸತ್ತುಬದುಕಿದ ಕುಟುಂಬದವರಿಗೆ ಒಂದಿಷ್ಟು ಪರಿಹಾರ ನೀಡುವ ಮೂಲಕ ಸರ್ಕಾರಗಳೂ ಕೈತೊಳೆದುಕೊಳ್ಳುತ್ತವೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಜೀವನಾವಶ್ಯ ಆಮ್ಲಜನಕ ಕೊರತೆಯಿಂದ ಮೂವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆಯ ಬಗ್ಗೆ ತನಿಖೆ ನಡೆಸಲು ಸರ್ಕಾರವೇ ಬದಲಾಗಬೇಕಾಯಿತು. ಮೂಲ ಸೌಕರ್ಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಇಂಜಿನಿಯರುಗಳು, ಇವರನ್ನೇ ಆಶ್ರಯಿಸುವ ಗುತ್ತಿಗೆದಾರರು, ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಅಸಡ್ಡೆ ತೋರುವ ವೈದ್ಯರು, ಈ ವೃತ್ತಿಪರರಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳೇ ಹಲವಾರು ಅವಘಡಗಳಿಗೆ, ಅಮಾಯಕರ ಸಾವುಗಳಿಗೆ, ಅನಾಥ ಕುಟುಂಬಗಳಿಗೆ ಪರೋಕ್ಷ ಕಾರಣವಾಗುತ್ತಿವೆ.
ಹೆದ್ದಾರಿ ಸಂಚಾರ ಜೀವಕ್ಕೆ ಸಂಚಕಾರ
ಬೆಂಗಳೂರು ಮೈಸೂರು ನಡುವೆ ಮಹತ್ವಾಕಾಂಕ್ಷೆಯೊಂದಿಗೆ ನಿರ್ಮಾಣವಾಗಿರುವ ದಶಪಥ ರಸ್ತೆಯಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಾಗಿದೆ. ಸಿಲಿಕಾನ್ ನಗರ ಮತ್ತು ಸಾಂಸ್ಕೃತಿಕ ನಗರದ ನಡುವಿನ ಪ್ರಯಾಣದ ಅವಧಿಯನ್ನು ಮೂರು ಗಂಟೆಯಿಂದ ಒಂದೂವರೆ ಗಂಟೆಗೆ ಇಳಿಸುವ ಒಂದು ನವಿರಾದ ರಸ್ತೆಯನ್ನು ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆಯಿಂದ ವಿಭಜನೆಯಾಗುವ ಹಳ್ಳಿಗಳ ಬಗ್ಗೆಯಾಗಲೀ, ಈ ಹಳ್ಳಿಗಳಲ್ಲಿರುವ ರೈತರ ವಸತಿ ಮತ್ತು ಕೃಷಿ ಭೂಮಿಯ ನಡುವೆ ಬೃಹತ್ ರಸ್ತೆಗಳು ಅಡ್ಡಗೋಡೆಯಾಗಿ ನಿಲ್ಲುವುದರಿಂದ ಉಂಟಾಗಬಹುದಾದ ಸಮಸ್ಯೆಗಳ ಬದುಕಿನ ಬಗ್ಗೆಯಾಗಲೀ ಕಾಳಜಿ ವಹಿಸಿದಂತೆ ಕಾಣುವುದಿಲ್ಲ. ಬದಲಾಗಿ ಟೋಲ್ ಶುಲ್ಕದ ಹೆಚ್ಚಳ ಮತ್ತು ಜಾರಿಯ ಬಗ್ಗೆ ಹೆಚ್ಚು ಉತ್ಸುಕವಾಗಿದೆ. ಸಮಾಜದ ಮೇಲ್ಪದರದ ವರ್ಗಗಳ ಅನುಕೂಲಕ್ಕಾಗಿಯೇ ನಿರ್ಮಿಸಲಾಗುವ ಈ ಮೂಲ ಸೌಕರ್ಯಗಳು ದೇಶದ ಅಭಿವೃದ್ಧಿಯ ಸಂಕೇತವಾಗಿ ಮಾತ್ರ ಕಾಣುತ್ತದೆ. ಹಾಗಾಗಿ ತಮ್ಮ ಕೃಷಿ ಭೂಮಿ ಮತ್ತು ಒಕ್ಕಲು ವಲಯವನ್ನು ಕಳೆದುಕೊಳ್ಳುವ ಗ್ರಾಮದ ಜನತೆ ತಾವು ನಂಬಿ ಬದುಕುವ ಜಮೀನಿನಿಂದಲೂ ಪ್ರತ್ಯೇಕಿಸಲ್ಪಡುವುದನ್ನೂ ʼದೇಶದ ಅಭಿವೃದ್ಧಿಗಾಗಿ ಮಾಡಿದ ತ್ಯಾಗʼ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಪ್ರಾಣಕಳೆದುಕೊಳ್ಳುವ ಪಯಣಿಗರನ್ನೂ ಇದೇ ಪ್ರವರ್ಗಕ್ಕೆ ಸೇರಿಸಲಾಗುತ್ತದೆ.
ಅದ್ಭುತವಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ದಶಪಥ ರಸ್ತೆ ಪೂರ್ಣಗೊಂಡ ನಂತರದಲ್ಲಿ ಸೃಷ್ಟಿಸಿರುವ ಅವಾಂತರಗಳನ್ನು ನಿರ್ಮಾಣ ಹಂತದಲ್ಲೇ ಊಹಿಸುವುದು ಮುಂಗಾಣ್ಕೆ ಇರುವ ಅಧಿಕಾರಶಾಹಿಗೆ ಕಷ್ಟವಾಗುತ್ತಿರಲಿಲ್ಲ. ಇಬ್ಭಾಗವಾಗಿರುವ ಹಳ್ಳಿಗಳಲ್ಲಿ ವಾಸಿಸುವ ರೈತರು ದಶಪಥ ರಸ್ತೆಯ ಮತ್ತೊಂದು ಬದಿಯಲ್ಲಿರುವ ತಮ್ಮ ಕೃಷಿ ಭೂಮಿಯನ್ನು ತಲುಪಬೇಕಾದರೆ ಐದಾರು ಕಿಲೋಮೀಟರ್ ನಡೆಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈ ಶ್ರಮವನ್ನು ತಪ್ಪಿಸಲು ಕೆಲವು ದಶಪಥದ ಇಕ್ಕೆಲಗಳಲ್ಲಿ ನಿರ್ಮಿಸಿರುವ ತಡೆಬೇಲಿಗಳನ್ನು ಕಿತ್ತುಹಾಕಿರುವುದೂ ಉಂಟು. ಇನ್ನು ಕೆಲವೆಡೆ ರಸ್ತೆ ವಿಭಜಕಗಳನ್ನು ಒಡೆದು, ದ್ವಿಚಕ್ರ ವಾಹನ ನುಸುಳುವ ಅವಕಾಶವನ್ನೂ ಕಲ್ಪಿಸಿಕೊಳ್ಳಲಾಗಿದೆ. ಈಗ ಹೆದ್ದಾರಿ ಪ್ರಾಧಿಕಾರವು ಇಬ್ಬದಿಯ ಗ್ರಾಮಸ್ಥರಿಗೆ ಅತ್ತಿಂದಿತ್ತ ಚಲಿಸಲು ಸ್ಕೈವಾಕ್‌ಗಳನ್ನು ನಿರ್ಮಿಸಲು ಯೋಚಿಸುತ್ತಿದೆ. ತಮ್ಮ ಜಾನುವಾರು, ಟ್ರಾಕ್ಟರ್ ಮತ್ತಿತರ ವಾಹನಗಳನ್ನು ಕೊಂಡೊಯ್ಯುವಾಗ ಮರಳಿ ಐದಾರು ಕಿಲೋಮೀಟರ್ ಮಾರ್ಗವನ್ನೇ ಬಳಸಬೇಕಾಗುತ್ತದೆ. ದಶಪಥ ರಸ್ತೆಯಲ್ಲಿ ದ್ವಿಚಕ್ರ-ತ್ರಿಚಕ್ರ ವಾಹನ, ಟ್ರಾಕ್ಟರ್‌ಗಳನ್ನೂ ನಿರ್ಬಂಧಿಸುವ ನಿಯಮ ಶೀಘ್ರದಲ್ಲೇ ಜಾರಿಯಾಗಲಿದ್ದು, ಸ್ಥಳೀಯ ಜನತೆ ಸರ್ವೀಸ್ ರಸ್ತೆಯಲ್ಲೇ ಸಂಚರಿಸಬೇಕಾಗುತ್ತದೆ.
ಸೆಪ್ಟಂಬರ್ 2022 ರಿಂದ ಈವರೆಗೆ ಒಂಬತ್ತು ತಿಂಗಳ ಅವಧಿಯಲ್ಲಿ ದಶಪಥ ಹೆದ್ದಾರಿಯಲ್ಲಿ 595 ಅಪಘಾತಗಳು ಸಂಭವಿಸಿದ್ದು, 158 ಮಂದಿ ಸಾವನ್ನಪ್ಪಿದ್ದಾರೆ. 538 ಮಂದಿ ಗಾಯಗೊಂಡಿದ್ದಾರೆ. ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 283, ಮಂಡ್ಯ ವ್ಯಾಪ್ತಿಯಲ್ಲಿ 282, ಮೈಸೂರು ವ್ಯಾಪ್ತಿಯಲ್ಲಿ 30 ಅಪಘಾತಗಳು ಸಂಭವಿಸಿದ್ದು, ಕ್ರಮವಾಗಿ 297 , 210 ಮತ್ತು 31 ಮಂದಿ ಸಾವನ್ನಪ್ಪಿದ್ದಾರೆ. ಈ ಸಾವುಗಳು ಸಂಭವಿಸಲು ಕಾರಣ ಅತಿವೇಗದ ವಾಹನ ಚಾಲನೆ ಎನ್ನುವುದು ನಿರ್ವಿವಾದ. ನಾಲ್ಕು ಚಕ್ರ ವಾಹನಗಳ ಚಾಲಕರು ಕನಿಷ್ಠ ಗಂಟೆಗೆ 120-140 ಕಿಮೀ ವೇಗದಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ. ಒಂದು ಕ್ಷಣ ಎಚ್ಚರ ತಪ್ಪಿದರೂ ಯಮಲೋಕದ ಬಾಗಿಲು ಸಿದ್ಧವಾಗಿರುತ್ತದೆ. ಹೆದ್ದಾರಿಯ ಹಲವು ತಿರುವುಗಳಲ್ಲಿ ರಸ್ತೆ ವಿಭಜಕಗಳು ಹಾಗೂ ಇಕ್ಕೆಲಗಳ ತಡೆಗೋಡೆಗಳಿಗೆ ಢಿಕ್ಕಿಹೊಡೆದು ಹಲವು ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ ಚಾಲಕರ ಅಜಾಗರೂಕತೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ರಸ್ತೆ ನವಿರಾದಷ್ಟೂ ವಾಹನ ಚಾಲನೆ ಯದ್ವಾತದ್ವಾ ಇರಬಹುದು ಎಂಬ ಅಲಿಖಿತ ನಿಯಮವನ್ನು ಚಾಲಕರೂ ಅಳವಡಿಕೊಂಡಿರುವುದೂ ಇದಕ್ಕೆ ಕಾರಣ. ಈ ವೇಗ ಚಾಲನೆಗೆ ಪೂರಕವಾದ ವಾಹನಗಳೂ ಸಹ ತಯಾರಾಗುತ್ತಿದ್ದು, ಆಧುನಿಕ ಯುವಕರಿಗೆ ಇದು ಮೋಜಿನ ತಾಣವಾಗುತ್ತದೆ. ಈ ಎಲ್ಲ ಸಾಮಾಜಿಕ-ಮನುಜ ಸಹಜ ವಿಕೃತಿಗಳೂ ನಿರೀಕ್ಷಿತವೇ. ಹಾಗಾಗಿ ದಶಪಥದಂತಹ ರಸ್ತೆಯನ್ನು ಉದ್ಘಾಟಿಸುವ ಮುನ್ನವೇ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅಪೇಕ್ಷಣೀಯ. ಸುಖ ಪ್ರಯಾಣದ ಮಾರ್ಗಗಳು ಸಾವು ಬದುಕಿನ ಪ್ರಶ್ನೆಗಳಿಗೆ ಅವಕಾಶ ನೀಡಕೂಡದು ಎಂಬ ಪರಿವೆ ಈ ಅಧಿಕಾರ ವಲಯಗಳಲ್ಲಿದ್ದಿದ್ದರೆ, ಹೆದ್ದಾರಿಯ ಉದ್ಘಾಟನೆ ಕಾಮಗಾರಿ ಪೂರ್ಣಗೊಂಡ ನಂತರವೇ ನಡೆಯಬಹುದಿತ್ತು. ಪೂರ್ಣಗೊಳ್ಳುವುದು ಎಂದರೆ ಬೀದಿ ದೀಪಗಳು, ಸೂಚನಾ ಫಲಕಗಳು, ಮುನ್ನೆಚ್ಚರಿಕೆಯ ಸೂಚನೆಗಳು, ಆಘಾತ ಕೇಂದ್ರಗಳು, ಸಹಾಯವಾಣಿಗಳು, ವೇಗ ನಿಯಂತ್ರಣ ಸಾಧಕಗಳು, ರಹಸ್ಯ ಕ್ಯಾಮರಾಗಳು ಮತ್ತು ಸೂಕ್ತ ಸಂಚಾರ ನಿಯಂತ್ರಕ ನಿಯಮಗಳು- ಇವೆಲ್ಲವನ್ನೂ ಅಳವಡಿಸುವುದೆಂದೇ ಅರ್ಥ. ಆದರೆ ಬಿಜೆಪಿ ಸರ್ಕಾರಕ್ಕೆ ಮತ್ತು ಸಂಸದರಿಗೆ ಈ ಹೆದ್ದಾರಿಯ ಉದ್ಭಾಟನೆ ಚುನಾವಣೆಗಳಲ್ಲಿ ಲಾಭ ತಂದುಕೊಡುವ ಒಂದು ಮಾರ್ಗವಾಗಿ ಕಂಡಿತ್ತು. ಇದರ ಪರಿಣಾಮ ಅಪೂರ್ಣ ಕಾಮಗಾರಿ ಮತ್ತು ಅವ್ಯವಸ್ಥೆ. ಈ ಅವ್ಯವಸ್ಥೆಗೆ ಬಲಿಯಾಗುತ್ತಿರುವುದು ಟೋಲ್ ಕಟ್ಟಿ ಪ್ರಾಣಕಳೆದುಕೊಳ್ಳುವ ಸಾಮಾನ್ಯ ಜನತೆ.
ಅಭಿವೃದ್ಧಿ ಮತ್ತು ಆಳ್ವಿಕೆಯ ಜವಾಬ್ದಾರಿ
ಸಾರ್ವಜನಿಕರ ಬಳಕೆಗಾಗಿ ಉತ್ತಮ ರಸ್ತೆ ನಿರ್ಮಾಣ ಮಾಡುವುದು ಪ್ರಜಾಸತ್ತಾತ್ಮಕ ಸರ್ಕಾರದ ಬಾಧ್ಯತೆಯೂ ಹೌದು ಕರ್ತವ್ಯವೂ ಹೌದು. ಆದರೆ ಭಾರತದ ಎಕ್ಸ್‌ಪ್ರೆಸ್ ಹೆದ್ದಾರಿಗಳು ಸಾಮಾನ್ಯ ಜನತೆಯ ಪಾಲಿಗೆ ಸುಲಿಗೆಯ ಕೇಂದ್ರಗಳಾಗಿ ಪರಿಣಮಿಸಿವೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ದೇಶದಲ್ಲಿ ಅತಿ ಹೆಚ್ಚು ಟೋಲ್ ಸಂಗ್ರಹ ಹೊಂದಿರುವ ರಾಜ್ಯಗಳಾಗಿ ಹೊರಹೊಮ್ಮಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ನಾಲ್ಕು ರಾಜ್ಯಗಳಲ್ಲಿ ಟೋಲ್ ಸಂಗ್ರಹವು ಡಿಸೆಂಬರ್ 22ರ ಅಂತ್ಯದವರೆಗೆ 14,000 ಕೋಟಿ ರೂ.ಗೆ ತಲುಪಿದ್ದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಇತರ 17 ರಾಜ್ಯಗಳಲ್ಲಿ ಸುಮಾರು 20,000 ಕೋಟಿ ರೂಗಳಷ್ಟಾಗಿದೆ. ಸಚಿವಾಲಯದ ದತ್ತಾಂಶವು 2023 ರ ಹಣಕಾಸು ವರ್ಷದಲ್ಲಿ ಟೋಲ್ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಮಟ್ಟವನ್ನು ದಾಟಲಿದೆ ಎಂದು ಸೂಚಿಸುತ್ತದೆ, ಇದು ಹಣಕಾಸು ವರ್ಷ 2022-23 ರಲ್ಲಿ 40,000 ಕೋಟಿ ರೂಗಳಷ್ಟಾಗಿದೆ. ಭಾರತ್ ಮಾಲಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸುಮಾರು 35,000 ಕಿ.ಮೀ ರಸ್ತೆಗಳನ್ನು ಒಳಗೊಂಡ ಹೆದ್ದಾರಿ ಯೋಜನೆಗಳ ತ್ವರಿತ ಅಭಿವೃದ್ಧಿಯಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಟೋಲ್ ಆದಾಯವು 1.4 ಟ್ರಿಲಿಯನ್ ರೂ.ಗೆ ಏರಲಿದೆ ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆದರೆ ಟೋಲ್ ಸಂಗ್ರಹದ ಬಗ್ಗೆ ಯಾವುದೇ ಪಕ್ಷವೂ ಪ್ರತಿರೋಧ ವ್ಯಕ್ತಪಡಿಸದೆ ಇರುವುದನ್ನು ನೋಡಿದರೆ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಈ ಬಂಡವಾಳಶಾಹಿ ಧೋರಣೆಯನ್ನು ಒಪ್ಪಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. “ ಉತ್ತಮ ಸೇವೆಗೆ ಯೋಗ್ಯ ಬೆಲೆ ” ಎಂಬ ಸೂತ್ರ ತಾತ್ವಿಕವಾಗಿ ಒಪ್ಪುವಂತಹುದಾದರೂ, ಜನಸಾಮಾನ್ಯರು ಈ ಸೇವೆಗಳಿಗಾಗಿ ತೆತ್ತುವ ಬೆಲೆ ಯಾರನ್ನು ತಲುಪುತ್ತದೆ ಎನ್ನುವುದು ಯೋಚಿಸಬೇಕಾದ ವಿಚಾರ. ನವ ಉದಾರವಾದದ ವಿರುದ್ಧ ಧ್ವನಿ ಎತ್ತದ ಬಂಡವಾಳಿಗ ರಾಜಕೀಯ ಪಕ್ಷಗಳಿಂದ ಹೆಚ್ಚಿನ ನಿರೀಕ್ಷೆಯೂ ಸಲ್ಲದು. ಹೊಸ ಸರ್ಕಾರ ರಚನೆಯಾದ ನಂತರ ರಾಜ್ಯ ಸರ್ಕಾರದ ಸಚಿವರು, ಎನ್ಎಚ್ಎಐ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳ ನಡುವೆ ಇತ್ತೀಚೆಗೆ ಸಭೆ ನಡೆಸಿ ಮೈಸೂರು ಬೆಂಗಳೂರು ನಡುವಿನ ದಶಪಥ ರಸ್ತೆಯ ಬೈಪಾಸ್‌ಗಳು ಮತ್ತು ಸಂಪರ್ಕ ರಸ್ತೆಗಳ ಅವೈಜ್ಞಾನಿಕ ನಿರ್ಮಾಣ, ಕಳಪೆ ಎಂಜಿನಿಯರಿಂಗ್, ಬೀದಿ ದೀಪಗಳ ಕೊರತೆ, ಅಸಮರ್ಪಕ ರಸ್ತೆ ಸಂಕೇತಗಳು ಮತ್ತು ರಸ್ತೆ ವಿಭಜಕಗಳ ದೋಷಗಳನ್ನು ಪ್ರಧಾನವಾಗಿ ಪಟ್ಟಿ ಮಾಡಲಾಗಿದೆ. ಕ್ಯಾಮೆರಾಗಳು, ಬೀದಿ ದೀಪಗಳು, ಸ್ಪೀಡ್ ಬ್ರೇಕರ್‌ಗಳ ಕೊರತೆಯೊಂದಿಗೆ, ಸೇತುವೆಗಳ ಕೆಳಗೆ ನೀರು ಸಂಗ್ರಹವಾಗುವ ಸಮಸ್ಯೆಯನ್ನೂ ಚರ್ಚಿಸಲಾಗಿದೆ. ಈ ಸಮಸ್ಯೆಗಳೆಲ್ಲವೂ ಉದ್ಘಾಟನೆಗೆ ಮುನ್ನವೇ ಅಧಿಕಾರಿಗಳ ಗಮನಕ್ಕೆ ಬರಬೇಕಿತ್ತಲ್ಲವೇ ? 8,480 ಕೋಟಿ ರೂ ವೆಚ್ಚದ ಬೃಹತ್ ಕಾಮಗಾರಿಯ ನಿರ್ವಹಣೆಯಲ್ಲಿ ಪ್ರಾಮಾಣಿಕತೆಯೊಂದಿಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವೂ ಇರಬೇಕಲ್ಲವೇ ? ಈ ಕೊರತೆಗಳ ಕಾರಣದಿಂದಲೇ ಪ್ರಾಣ ಕಳೆದುಕೊಂಡ-ಗಾಯಗೊಂಡ ಜನರಿಗೆ ಮತ್ತು ಅನಾಥವಾದ ಕುಟುಂಬಗಳಿಗೆ ಉತ್ತರದಾಯಿಗಳಾದರೂ ಯಾರು? ಆತುರದಲ್ಲಿ ಉದ್ಘಾಟನೆ ಆಯೋಜಿಸಿದವರೇ ಅಥವಾ ಕಳಪೆ/ಅಸಮಪರ್ಕ ಕಾಮಗಾರಿಯನ್ನು ನಿರ್ವಹಿಸಿದವರೇ ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯಷ್ಟೇ ಮುಖ್ಯವಾದುದು ಪಾರದರ್ಶಕತೆ ಮತ್ತು ಉತ್ತರದಾಯಿತ್ವ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಈ ಮೂರೂ ಗುಣಲಕ್ಷಣಗಳು ಇಲ್ಲದಿರುವುದೇ ಇಂತಹ ಮನುಜ ನಿರ್ಮಿತ ಅವಘಡ-ಅನಾಹುತಗಳಿಗೆ ಕಾರಣವಾಗುತ್ತದೆ. ದಶಪಥದಂತಹ ಎಕ್ಸ್‌ಪ್ರೆಸ್ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳಿಗೆ ಲೇನ್ ಶಿಸ್ತು ಪಾಲಿಸುವುದನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಯೋಚಿಸಬೇಕಿದೆ. ನಿರ್ದಿಷ್ಟ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳನ್ನು ನಿಗದಿಪಡಿಸುವ ಮೂಲಕ ಅಪಘಾತಗಳನ್ನು ತಪ್ಪಿಸಬಹುದು. ಉದ್ಘಾಟನೆಗೂ ಮುಂಚಿತವಾಗಿಯೇ ಈ ಲೇನ್ ಶಿಸ್ತಿನ ನಿಯಮಗಳನ್ನು ಅಳವಡಿಸಬೇಕಿತ್ತಲ್ಲವೇ ? ಉದ್ಘಾಟನೆಯ ಆತುರದಿಂದ ಈಗಾಗಲೇ ಸಾಕಷ್ಟು ಜೀವಹಾನಿ-ಅನಾಹುತಗಳು ಸಂಭವಿಸಿವೆ, ನೂರಾರು ಜೀವಗಳು ಮಸಣ ಸೇರಿವೆ, ಜೊತೆಗೆ ಪ್ರಯಾಣದ ಆತುರದಿಂದ ಮತ್ತಷ್ಟು ಜೀವಗಳು ನಿರ್ಗಮಿಸುತ್ತಲೇ ಇವೆ. ಇದು ಪರಸ್ಪರ ದೋಷಾರೋಪಣೆಯ ರಾಜಕೀಯ ವಿಚಾರವಲ್ಲ. ಜನಸಾಮಾನ್ಯರ ಸಾವು ಬದುಕಿನ ಪ್ರಶ್ನೆ. ಬಂಡವಾಳಶಾಹಿ ಉದ್ಯಮಿಗಳನ್ನು ಪೋಷಿಸಲು ಸಂಗ್ರಹಿಸುವ ಟೋಲ್ ಶುಲ್ಕ ಉಳ್ಳವರಿಗೂ ಹೊರೆಯೆನಿಸುತ್ತಿದ್ದು, ಇದರಿಂದ ಸಾಮಾನ್ಯ ಜನತೆ ಬಳಸುವ ಓಲಾ, ಊಬರ್ ಮುಂತಾದ ಸಂಚಾರ ಸಾಧನಗಳ ಬಳಕೆದಾರರಿಗೂ ಹೊರೆ ಹೆಚ್ಚಾಗುತ್ತದೆ. ಕ್ರಮೇಣ ಈ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಸುಗಳ ದರಗಳನ್ನೂ ಹೆಚ್ಚಿಸಲಾಗುತ್ತದೆ.
ಈ ವ್ಯತ್ಯಯಗಳ ನಡುವೆಯೇ ರಾಜ್ಯ ಸರ್ಕಾರ ದಶಪಥ ರಸ್ತೆಯಲ್ಲಿ ಎಚ್ಚೆತ್ತುಕೊಂಡು ಸೂಕ್ತ ಸುರಕ್ಷತೆಯ-ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳಬೇಕಿದೆ.. ರಸ್ತೆಯುದ್ದಕ್ಕೂ ವೈದ್ಯಕೀಯ ಸೌಲಭ್ಯಗಳು ಸುಲಭವಾಗಿ ಕೈಗೆಟುಕುವಂತೆ ಸ್ಥಾಪಿಸುವುದು, ಸಹಾಯವಾಣಿಗಳನ್ನು ಒದಗಿಸುವುದು, ಆಘಾತ ಕೇಂದ್ರಗಳನ್ನು ಸ್ಥಾಪಿಸುವುದು ರಾಜ್ಯ ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿದೆ. ದಶಪಥ ಎನ್ನುವ ಐಷಾರಾಮಿ ಸೌಲಭ್ಯ ಅಮಾಯಕ ಸಾಮಾನ್ಯರ ಸಾವಿನ ರಹದಾರಿಯಾಗದಿರಲಿ ಎಂದಷ್ಟೇ ಆಶಿಸಬಹುದು.