ಬೆಂಗಳೂರು: ಇನ್ನು ಮುಂದೆ ಲಂಚಕ್ಕೆ ಬೇಡಿಕೆ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ, ಅವ್ಯವಹಾರ ಮತ್ತಿತರ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬೀಳುವ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ. ಸುಪ್ರೀಂಕೋರ್ಟ್ ತೀರ್ಪು ಹಾಗೂ ಭ್ರಷ್ಟಾಚಾರ ತಡೆ ಅಧಿನಿಯಮ ತಿದ್ದುಪಡಿ ಕಾಯ್ದೆಯನ್ವಯ ಪ್ರಸ್ತಾವನೆ ಸಲ್ಲಿಕೆಯಾದ 3 ತಿಂಗಳ ಒಳಗೆ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವಂತೆ ಸಕ್ಷಮ ಪ್ರಾಧಿಕಾರಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಇದಲ್ಲದೆ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳುವಾಗ ಅಗತ್ಯ ದಾಖಲಾತಿಗಳ ಸಂಗ್ರಹಿಸಲು ತನಿಖಾ ಸಂಸ್ಥೆಗಳಿಗೂ ಸೂಚಿಸಿರುವುದು ಸದ್ಯದ ಮಹತ್ವದ ಬೆಳವಣಿಗೆ.
ಲೋಕಾಯುಕ್ತ, ಆದಾಯ ತೆರಿಗೆ ಇಲಾಖೆ, ಸಿಬಿಐ, ಇಡಿ, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಸಾವಿರಾರು ಪ್ರಕರಣಗಳಿಗೆ ಹಲವಾರು ವರ್ಷಗಳಿಂದ ಪ್ರಾಸಿಕ್ಯೂಷನ್ಗೆ ಅನುಮತಿ ಸಿಕ್ಕಿಲ್ಲ.
ಹೀಗಾಗಿ ಭ್ರಷ್ಟರ ವಿರುದ್ಧ ತನಿಖೆ ಮುಂದುವರಿಸಲು ಗ್ರೀನ್ಸಿಗ್ನಲ್ ಸಿಗದೆ ಪ್ರಮುಖ ಕೇಸ್ಗಳು ಹಳ್ಳ ಹಿಡಿಯುತ್ತಿವೆ. ಲೋಕಾಯುಕ್ತ ಸಂಸ್ಥೆಯೊಂದರಲ್ಲೇ ದಾಖಲಾಗಿರುವ 1000ಕ್ಕೂ ಅಧಿಕ ಪ್ರಕರಣಗಳಿಗೆ ಅಭಿಯೋಜನೆಗೆ ಮಂಜೂರಾತಿ ಸಿಕ್ಕಿಲ್ಲ.
ಇದನ್ನೂ ಓದಿ: ನವದಹಲಿ| ಆದಾಯ ತೆರಿಗೆ ಮಸೂದೆ-2025 ಮಂಡನೆ
ಪ್ರಾಸಿಕ್ಯೂಷನ್ ಅನುಮತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ಸೆಕ್ಷನ್ 19ರ ಅನ್ವಯ ಕೇಂದ್ರ ರೂಪಿಸಿರುವ ಕ್ರೂಢೀಕೃತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೇಂದ್ರ ರವಾನಿಸಿರುವ ಲಿಖಿತ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವ ಅಧಿಕಾರ ಹೊಂದಿರುವ ಎಲ್ಲ ಸಕ್ಷಮ ಪ್ರಾಧಿಕಾರಗಳು ಹಾಗೂ ಅನುಮತಿ ಕೇಳುವ ತನಿಖಾ ಏಜೆನ್ಸಿಗಳಿಗೆ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರ ವಿರುದ್ಧ ಮೊಕದ್ದಮೆ ಹೂಡುವುದಕ್ಕೆ ಅನುಮತಿ ನೀಡುವ ಮುನ್ನ ಸಕ್ಷಮ ಪ್ರಾಧಿಕಾರಗಳು ತಮ್ಮ ಮುಂದೆ ಮಂಡಿಸಲಾದ ದಾಖಲೆ ಪರಿಶೀಲಿಸಬೇಕು. ನೌಕರನ ವಿರುದ್ಧ ಪ್ರಕರಣ ದಾಖಲಿಸಲು ಮೇಲ್ನೋಟಕ್ಕೆ ಸಾಕಷ್ಟು ಆಧಾರಗಳಿರುವುದು ಕಂಡುಬಂದರೆ ಅನುಮತಿ ನೀಡುವ ಬಗ್ಗೆ ತೀರ್ವನಿಸಬೇಕು. ವಿನೀತ್ ನಾರಾಯಣ್ ಮತ್ತು ಇತರರ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪಾಲಿಸುವಂತೆ ಹೇಳಿದೆ. ಸುಪ್ರೀಂ ತೀರ್ಪಿನ ಪ್ರಕಾರ ಕಾಲಮಿತಿಯೊಳಗೆ ಅಂದರೆ 3 ತಿಂಗಳಲ್ಲಿ ಹಾಗೂ ಯಾವುದೇ ಕಾನೂನು ಅಧಿಕಾರಿಗಳನ್ನು ಸಂರ್ಪಸಬೇಕಿದ್ದಲ್ಲಿ ಮಾತ್ರ ಮತ್ತೊಂದು ತಿಂಗಳ ಅವಧಿಯಲ್ಲಿ ಅಭಿಯೋಜನಾ ಮಂಜೂರಾತಿ ನೀಡುವ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಾರ್ಗಸೂಚಿ ಪಾಲಿಸಲು ಡಿಜಿ-ಐಜಿ ಸೂಚನೆ: ಸರ್ಕಾರದ ಸೂಚನೆಯಂತೆ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವಾಗ ಹಾಗೂ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವ ಅಧಿಕಾರ ಹೊಂದಿರುವ ಸಕ್ಷಮ ಪ್ರಾಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಪೊಲೀಸ್ ಇಲಾಖೆಯ ಎಲ್ಲ ಘಟಕಾಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಫೆ.10 (ಸೋಮವಾರ) ಲಿಖಿತ ಸೂಚನೆ ನೀಡಿದ್ದಾರೆ.
ಇಲಾಖಾ ಮುಖ್ಯಸ್ಥರಿಗೆ ಹೊಣೆ: ಆಯಾ ಇಲಾಖೆ ಮುಖ್ಯಸ್ಥರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ತನಿಖಾ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿದಾಗ ಇಲಾಖಾ ಮುಖ್ಯಸ್ಥರು ಪರಿಶೀಲಿಸಿ ನಂತರ ಸರ್ಕಾರದ ಗಮನಕ್ಕೆ ತಂದು ಅನುಮತಿ ನೀಡಬೇಕಾಗುತ್ತದೆ. ಗ್ರೂಪ್ ಎ ಮತ್ತು ಬಿ ವರ್ಗದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇರುತ್ತದೆ. ಗ್ರೂಪ್ ಸಿ ಮತ್ತು ಡಿ ನೌಕರರ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ಸಚಿವರಿಗೆ ಇರುತ್ತದೆ. ಮುಖ್ಯಮಂತ್ರಿಗಳ ವಿರುದ್ಧವೇ ಆರೋಪ ಕೇಳಿಬಂದಾಗ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಕೊಡುವ ಅಧಿಕಾರ ಇರುತ್ತದೆ ಎಂದು ಹಿರಿಯ ಪೊಲೀಸ್
- ನಿಗದಿತ ಅಧಿಕಾರಿ/ನೌಕರನ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳುವಾಗ ಸ್ಪಷ್ಟ ತನಿಖಾ ವರದಿ ಸಲ್ಲಿಸಬೇಕು
- ಆರೋಪಕ್ಕೆ ಸಂಬಂಧಿಸಿದಂತೆ ಭೌತಿಕ ಸಾಕ್ಷ್ಯ, ಮೌಖಿಕ ಸಾಕ್ಷ್ಯ, ಸಾಂರ್ದಭಿಕ ಸಾಕ್ಷ್ಯ ಉಲ್ಲೇಖಿಸಿ ಪ್ರಸ್ತುತಪಡಿಸಬೇಕು
- ಸೆಕ್ಷನ್ 19ರ ಅನ್ವಯ ಆರೋಪಿತ ಅಧಿಕಾರಿ ವಿರುದ್ಧದ ಸಮಗ್ರ ವಿವರಗಳನ್ನೊಳಗೊಂಡ ಚೆಕ್ಲೀಸ್ಟ್ ಸಲ್ಲಿಸಬೇಕು
- ಸೆಕ್ಷನ್ 19ರಡಿ ಪೊಲೀಸ್ ಅಧಿಕಾರಿ ಅಥವಾ ತನಿಖಾ ಸಂಸ್ಥೆಯ ಅಧಿಕಾರಿಯಲ್ಲದ ಖಾಸಗಿ ವ್ಯಕ್ತಿಗಳು ಕೂಡ ಪ್ರಾಸಿಕ್ಯೂಷನ್ ಅನುಮತಿಗೆ ಪ್ರಸ್ತಾವನೆ ಸಲ್ಲಿಸಬಹುದು
- ಬಿಎನ್ಎಸ್ಎಸ್ ಸೆಕ್ಷನ್ 218 (ಸಿಆರ್ಪಿಸಿ ಸೆಕ್ಷನ್ 197) ಅನ್ವಯ ಅಥವಾ ಬೇರೆ ಕಾನೂನಿನಡಿ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಲಾಗುತ್ತಿದೆಯೇ ಎಂದು ಸ್ಪಷ್ಟಪಡಿಸಬೇಕು
ಯಾವ್ಯಾವ ಕೇಸಲ್ಲಿ ಪ್ರಾಸಿಕ್ಯೂಷನ್?
- ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಸಾರ್ವಜನಿಕ ಹಣ ದುರ್ಬಳಕೆ
- ಕ್ರಿಮಿನಲ್ ಕೇಸ್, ವಂಚನೆ, ಫೋರ್ಜರಿ, ಹಿಂಸಾಚಾರ ಕೃತ್ಯವೆಸಗಿದಲ್ಲ
- ಅಕ್ರಮ ಹಣಕಾಸು ವರ್ಗಾವಣೆ, ಬೇನಾಮಿ ಹೆಸರಲ್ಲಿ ಆಸ್ತಿ ಮಾಡುವುದು
ಸಕ್ಷಮ ಪ್ರಾಧಿಕಾರಗಳಿಗೆ ಸೂಚನೆ ಏನು?
- 1988 ಸೆಕ್ಷನ್ 19ರಡಿ ಪ್ರಾಸಿಕ್ಯೂಷನ್ ಅನುಮತಿ ಕಡ್ಡಾಯ
- ಅನುಮತಿ ಮುನ್ನ ತನಿಖಾ ಸಂಸ್ಥೆ ದಾಖಲೆ ಪರಿಶೀಲಿಸಬೇಕು
- ಕೇಸ್ ದಾಖಲಿಸಲು ಆಧಾರಗಳಿದ್ದರಷ್ಟೇ ಅನುಮತಿ ಕೊಡಿ
- ಪ್ರಸ್ತಾವನೆ ಸಲ್ಲಿಸಿದ 3 ತಿಂಗಳಲ್ಲಿ ಪ್ರಾಸಿಕ್ಯೂಷನ್ಗೆ ಸಮ್ಮತಿ
- ಕಾನೂನು ಅಭಿಪ್ರಾಯ ಅಗತ್ಯವಾದರೆ 1 ತಿಂಗಳು ಅವಕಾಶ
- ಅಭಿಯೋಜನಾ ಮಂಜೂರಾತಿ ನಿರ್ಣಯಕ್ಕೆ ವಿಳಂಬ ಸಲ್ಲ
ಆರೋಪಕ್ಕೆ ಪೂರಕವಾದ ದಾಖಲಾತಿ ಗಳಿದ್ದರೆ ಪ್ರಾಸಿ ಕ್ಯೂಷನ್ಗೆ ಅನುಮತಿ ಕೊಡಲಿ. ಆದರೆ, ಉತ್ತಮ ನೌಕರರ ವಿರುದ್ಧವೂ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟು ಅವರಿಗೆ ತೊಂದರೆಗಳಾಗಿರುವ ಸಾಕಷ್ಟು ಉದಾಹರಣೆಗಳಿವೆ. ಹಲವು ಪ್ರಕರಣಗಳು ಹೈಕೋರ್ಟ್ನಲ್ಲೂ ವಜಾಗೊಂಡಿವೆ. ಇನ್ನಷ್ಟು ಪ್ರಕರಣಗಳಿಗೆ ತಡೆಯಾಜ್ಞೆ ಕೊಟ್ಟಿದೆ. ಹೀಗಾಗಿ ಕಾನೂನಿನ ಪ್ರಕಾರ ಸಾಕಷ್ಟು ದಾಖಲೆಗಳಿದ್ದರಷ್ಟೇ ಅನುಮತಿ ಕೊಡಲಿ.
ಇದನ್ನೂ ನೋಡಿ: ಎಲ್‌ಐಸಿಯಲ್ಲಿ ವಿದೇಶ ನೇರ ಬಂಡವಾಳ : ವಿಮಾ ಉದ್ದಿಮೆಯ ಮೇಲೆ ಯಾವ ಪರೀಣಾಮ ಬೀರಬಹುದು? Janashakthi Media