ಶೈಲಜಾ ಟೀಚರನ್ನು ಅವರಷ್ಟಕ್ಕೇ ಬಿಟ್ಟು ಬಿಡಿ..! ಗೌರಿಯಮ್ಮ ಜೊತೆ ಶೈಲಜಾ ಟೀಚರ್ ಹೋಲಿಕೆಯೇ ತಪ್ಪು!

(ಇಕಾನಾಮಿಕ್ಸ್ ಟೈಮ್ಸ್ ಕೇರಳ ಬ್ಯೂರೋದ ಟಿ ಕೆ ಅರುಣ್ ಕುಮಾರ್ ಬರೆದ ಲೇಖನವಿದು. ಕೇರಳದ ರಾಜಕೀಯ, ಸಾಮಾಜಿಕ, ಅರ್ಥಿಕತೆಯನ್ನು ಆಳದಲ್ಲಿ ಅಧ್ಯಯನ ಮಾಡಿರುವ ಅರುಣ್ ಕುಮಾರ್ ರವರ ಲೇಖನವನ್ನು ನವೀನ್ಸೂರಿಂಜೆ ಅನುವಾದಿಸಿದ್ದಾರೆ

ಲೇಖನ : ಟಿ ಕೆ ಅರುಣ್, ಇಕಾನಮಿಕ್ಸ್ ಟೈಮ್ಸ್

ಅನುವಾದ : ನವೀನ್ ಸೂರಿಂಜೆ

ಕೇರಳದ ಆರೋಗ್ಯ ಸಚಿವರಾಗಿದ್ದ ಶೈಲಜಾ ಟೀಚರ್ ಗೆ ಎರಡನೇ ಅವಧಿಗೆ ಸಚಿವರಾಗುವ ಅವಕಾಶವನ್ನು ಸಿಪಿಐಎಂ ಏಕೆ ನೀಡಲಿಲ್ಲ? ಶೈಲಜಾ ಟೀಚರ್ ಕೊರೋನಾವನ್ನು ಕೇರಳದಲ್ಲಿ ಸಮರ್ಥವಾಗಿ ನಿರ್ವಹಿಸಿ ಮಾಧ್ಯಮಗಳು ಮತ್ತು ವಿದೇಶಗಳ ಪ್ರಶಂಸೆಗೆ ಒಳಗಾದರೂ ಶೈಲಜಾ ಟೀಚರ್ ಗೆ ಏಕೆ ಅವಕಾಶ ನಿರಾಕರಣೆ ಆಯ್ತು ? ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸ್ಥಾನಕ್ಕೆ ಶೈಲಜಾ ಟೀಚರ್ ಸ್ಪರ್ಧಿಯಾಗಿದ್ದರು ಎಂಬ ಕಾರಣಕ್ಕೋ ? ಇನ್ನು ಕೆಲವರು ಇದನ್ನು ಸಿಪಿಐಎಂ ಪಕ್ಷದ ಲಿಂಗಸೂಕ್ಷ್ಮತೆಯ ಕೊರತೆ ಎಂದು ಭಾವಿಸಿದ್ದಾರೆ‌. ಮತ್ತೊಂದಷ್ಟು ಜನ, ಸಿಪಿಐಎಂನ ಇಬ್ಬರು ಮಹಿಳಾ ನಾಯಕಿಯರಾದ ಕೆ ಆರ್ ಗೌರಿ ಮತ್ತು ಸುಶೀಲಾ ಗೋಪಾಲನ್ ಜೊತೆ ಶೈಲಜಾ ಟೀಚರನ್ನು ಹೋಲಿಸುತ್ತಿದ್ದಾರೆ. ಅಂದು ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದಂತೆ, ಇಂದು ಶೈಲಜಾ ಟೀಚರ್ ಗೂ ಮೋಸ ಮಾಡಲಾಗಿದೆ ಎಂದು ಆಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಶೈಲಜಾ ಟೀಚರ್ ಅವರನ್ನು ಕ್ಯಾಬಿನೆಟ್‌ನಿಂದ ಕೈಬಿಡುವುದು ಪಕ್ಷದಲ್ಲಿ ಪಿನರಾಯಿ ವಿಜಯನ್ ಅವರ ಪ್ರಾಬಲ್ಯ ಹೆಚ್ಚಾಗಿದೆ ಮತ್ತು ಪ್ರಶ್ನಾತೀತ ನಾಯಕನಾಗುವತ್ತಾ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ವಾಸ್ತವವಾಗಿ ಶೈಲಜಾ ಟೀಚರ್ “ಈ ಸಂಪುಟದಿಂದ ಕೈಬಿಡುವ ಪ್ರಕ್ರೀಯೆ” ಕೇಂದ್ರ ಬಿಂದುವಲ್ಲ. ವೈಟಿಂಗ್ ಫಾರ್ ಗೋಡಾಟ್ ನಾಟಕ ಓದಿದವರು/ ನೋಡಿದವರು ಇದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು. ಗೋಡಾಟ್ ಎಂದಿಗೂ ವೇದಿಕೆಗೆ ಬರುವುದಿಲ್ಲ. ಆದರೂ ಗೋಡಾಟ್ ಬಗ್ಗೆ ಚರ್ಚೆಯಾಗಿ ಪಾತ್ರಗಳು ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

ಶೈಲಾಜಾ ಟೀಚರ್ ಕರ್ತವ್ಯನಿಷ್ಠ ಕಾಮ್ರೇಡ್ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ನೀಡಲಾಗಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಶೈಲಜಾ ಟೀಚರ್ ಮಾಸ್ ಲೀಡರ್ ಅಲ್ಲ. ಪಕ್ಷದೊಳಗೆ ದೊಡ್ಡ ಮಟ್ಟದ ಫಾಲೋವರ್ಸ್ ಪಡೆಯನ್ನೇನೂ ಶೈಲಜಾ ಹೊಂದಿಲ್ಲ. ಪಿನರಾಯಿ ವಿಜಯನ್ ನಾಯಕತ್ವವನ್ನು ಪ್ರಶ್ನಿಸುವುದು ಬಿಡಿ, ಅದರ ಹತ್ತಿರ ಹೋಗಲೂ ಶೈಲಜಾ ಟೀಚರ್ ರಾಜಕೀಯವಾಗಿ ಅಸಮರ್ಥರು. ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೇ ಮಂತ್ರಿಗಳಾಗಿದ್ದವರಿಗೆ ಮತ್ತೆ ಸಚಿವರಾಗಲು ಅವಕಾಶವಿಲ್ಲ ಎಂದು ನಿರ್ಧರಿಸಿಯೇ ಚುನಾವಣೆಗೆ ಹೋಗಲಾಗಿತ್ತು.

ಹಾಗೆ ನೋಡಿದರೆ ಶೈಲಜಾ ಟೀಚರ್ ಕ್ಯಾಬಿನೆಟ್ ನಲ್ಲಿ ಇಲ್ಲದಿರುವುದು ಪಿನರಾಯಿ ವಿಜಯನ್ ಸಂಪುಟಕ್ಕೆ ದೊಡ್ಡ ನಷ್ಟ. ಖುದ್ದು ಪಿನರಾಯಿ ವಿಜಯನ್ ಕೂಡಾ ಶೈಲಜಾ ಟೀಚರ್ ತನ್ನ ಕ್ಯಾಬಿನೆಟ್ ನಲ್ಲಿ ಇರಬೇಕು ಎಂದು ಬಯಸುತ್ತಾರೆ. ಸರ್ಕಾರದ ಆರೋಗ್ಯ ನೀತಿಗಳನ್ನು ಶೈಲಜಾ ಟೀಚರ್ ಸುಲಲಿತವಾಗಿ ಜಾರಿ ಮಾಡುತ್ತಿದ್ದರು. ಜೊತೆಗೆ ಮಾಧ್ಯಮಗಳ ಯಾವ ವಿವಾದಕ್ಕೂ ಎಡೆ ಮಾಡಿಕೊಡದೇ ಇಲಾಖೆಯನ್ನು ನಿಭಾಯಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಶೈಲಜಾ ಟೀಚರ್ ತನ್ನ ಸಂಪುಟದಲ್ಲಿದ್ದರೆ ಸರ್ಕಾರ ಹೆಚ್ಚು ಶಕ್ತಿಯುತವಾಗಿರುತ್ತದೆ ಎಂಬುದೇ ಪಿನರಾಯಿ ವಿಜಯನ್ ಆಶಯವಾಗಿತ್ತು.‌ ಆದರೆ ಈ ಮೊದಲೇ ಸಿಪಿಐಎಂ ರಾಜ್ಯ ಸಮಿತಿ ನಿರ್ಧರಿಸಿದ್ದ ನಿಯಮವನ್ನು ಉಲ್ಲಂಘಿಸುವಂತಿಲ್ಲ. ಶೈಲಜಾ ಟೀಚರ್ ಒಬ್ಬರನ್ನೇ ಸಂಪುಟಕ್ಕೆ ಸೇರಿಸಬೇಕು ಎಂದು ಹಠ ಮಾಡಿದರೆ ತಾವೇ ರಚಿಸಿದ ನಿಯಮವನ್ನು ತಾವೇ ಮೀರಿದಂತಾಗುತ್ತದೆ. ಶೈಲಜಾಗಿಂತಲೂ ಸಮರ್ಥ ಹಣಕಾಸು ಸಚಿವ ಥಾಮಸ್ ಐಸಾಕ್ ಈ ಕ್ಯಾಬಿನೆಟ್ ನಲ್ಲಿ ಇಲ್ಲದಿರುವುದರ ಬಗ್ಗೆ ಖೇದ ಎಲ್ಲರಿಗೂ ಇದೆ. ಥಾಮಸ್ ಐಸಾಕ್ ಹಣಕಾಸು ಮಂತ್ರಿ ಅಲ್ಲದಿರುವುದು ಜಿಎಸ್ ಟಿ ಕೌನ್ಸಿಲ್ ಗೆ ದೊಡ್ಡ ನಷ್ಟ.

ಇದನ್ನೂ ಓದಿ : ಎಲ್.ಡಿ.ಎಫ್. ಸಂಪುಟದಲ್ಲಿ ಮೂವರು ಮಹಿಳೆಯರು, 17 ಹೊಸ ಮುಖಗಳು

ಕೆಲವರು ಪಿನರಾಯಿ ವಿಜಯನ್ ರನ್ನು ಪ್ರಧಾನಿ ಮೋದಿಗೆ ಹೋಲಿಸುತ್ತಿದ್ದಾರೆ. ಮೋದಿಯವರು ಬಿಜೆಪಿಯ ಮೇಲೆ ಸಂಪೂರ್ಣ ಹಿಡಿತ ಹೊಂದಿರುವಂತೆಯೇ ಪಿನರಾಯಿ ವಿಜಯನ್ ಸಿಪಿಐಎಂ ಪಕ್ಷದ ಮೇಲೆ ಹಿಡಿತ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು‌. ಸಿಪಿಐಎಂ ಪಕ್ಷವು ಇನ್ನೂ ಕೂಡಾ ಆಂತರಿಕ ಪ್ರಜಾಪ್ರಭುತ್ವದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆ ಆಂತರಿಕ ಪ್ರಜಾಪ್ರಭುತ್ವದ ಕಾರಣಕ್ಕಾಗಿಯೇ ಶೈಲಜಾ ಟೀಚರ್ ಸೇರಿದಂತೆ ಹಲವು ಉತ್ತಮ ಜನಪ್ರತಿನಿಧಿಗಳನ್ನು ಎರಡನೇ ಬಾರಿಯ ಪಿನರಾಯಿ ವಿಜಯನ್ ಕ್ಯಾಬಿನೆಟ್ ಕಳೆದುಕೊಳ್ಳಬೇಕಾಯಿತು.

ಪಿನರಾಯಿ ವಿಜಯನ್ ಅವರ ಅಳಿಯ ಮೊಹಮ್ಮದ್ ರಿಯಾಜ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದು ಪಕ್ಷದೊಳಗಿನ ಸ್ವಜನಪಕ್ಷಪಾತದ ಸಂಕೇತವೇ? ಖಂಡಿತವಾಗಿಯೂ ಅಲ್ಲ. ಯಾಕೆಂದರೆ ಮೊಹಮ್ಮದ್ ರಿಯಾಜ್ ಅವರು ಕೇವಲ ಕೆಲವು ತಿಂಗಳ ಹಿಂದೆಯಷ್ಟೇ ಪಿನಾರಾಯಿಯವರ ಮಗಳನ್ನು ಮದುವೆಯಾದರು. ಮೊಹಮ್ಮದ್ ರಿಯಾಜ್ ಅವರು ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಪಕ್ಷದ ನಾಯಕರಾಗಿ ಮನೆಮಾತಾಗಿದ್ದಾರೆ. ದಶಕಗಳಿಂದ ಜನಪರ ಹೋರಾಟದಲ್ಲಿ, ಪಕ್ಷದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯವಾಗಿ ಕೊಝಿಕೋಡ್ ವಿಧಾನಸಭಾ ಕ್ಷೇತ್ರದಿಂದ ಮೊಹಮ್ಮದ್ ರಿಯಾಜ್ ಗೆದ್ದು ಬಂದಿದ್ದಾರೆ. ಮೊಹಮ್ಮದ್ ರಿಯಾಜ್ ಮುಸ್ಲೀಮರಾಗಿದ್ದರೂ ಧರ್ಮಗುರುಗಳು ಹೇಳುವ ಧರ್ಮನಿಷ್ಠೆಯನ್ನು ಅನುಸರಿಸುವವರಲ್ಲ. ಹಾಗಿದ್ದರೂ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ನಾಯಕತ್ವದಲ್ಲಿ ಮುಸ್ಲೀಮರನ್ನು ಪ್ರತಿನಿಧಿಸುವುದು ಕೇರಳ ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ.

ಶೈಲಜಾ ಟೀಚರ್ ರನ್ನು ಕೆ.ಆರ್.ಗೌರಿ ಮತ್ತು ಸುಶೀಲಾ ಗೋಪಾಲನ್ ಅವರೊಂದಿಗೆ ಹೋಲಿಸಿದರೆ ಆ ದೊಡ್ಡ ನಾಯಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಇಬ್ಬರಲ್ಲಿ ಗೌರಿಯಮ್ಮ, ಎಲ್ಲರಿಗೂ ಗೊತ್ತಿರುವಂತೆ ಕೇರಳ ಜನರ ಸ್ಪೂರ್ತಿದಾಯಕ ನಾಯಕರಾಗಿದ್ದರು. 1957 ರ ಕೇರಳದ ಮೊದಲ ಕಮ್ಯುನಿಸ್ಟ್ ನೇತೃತ್ವದ ಸರ್ಕಾರವು, ಕೃಷ್ಣ ಅಯ್ಯರ್ ಅವರಂತಹ ಕಾನೂನು ತಜ್ಞರನ್ನು ಒಳಗೊಂಡಿತ್ತು. ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದವರು. ಗೌರಿಯಮ್ಮ ಕಂದಾಯ ಇಲಾಖೆಯನ್ನು ವಹಿಸಿಕೊಂಡಿದ್ದ ದಿನಗಳವು. ಭೂಸುಧಾರಣೆ ಕಾನೂನು ರೂಪಿಸಿ ಬಡವರು ಭೂ ಹಿಡುವಳಿಯನ್ನು ಶಾಶ್ವತವಾಗಿ ಹೊಂದಲು ಕಾರಣಿಕರ್ತರಾದವರು ಗೌರಿಯಮ್ಮ. ಮೊದಲ ಕಂದಾಯ ಸಚಿವರಾಗಿ ಕಮ್ಯೂನಿಷ್ಟ್ ಚಳುವಳಿಗಳು ಜನರಿಗೆ ನೀಡಿದ್ದ ಭೂಮಿ ಭರವಸೆಯನ್ನು ಈಡೇರಿಸಿದವರು ಗೌರಿಯಮ್ಮ. ಎಲ್ಲಾ ದೊಡ್ಡ ದೊಡ್ಡ ಸವಾಲುಗಳನ್ನು ಮೆಟ್ಟಿನಿಂತು ಕಾನೂನು ತಂದು, ರಾಜ್ಯದ ಹಳ್ಳಿಹಳ್ಳಿಯಲ್ಲೂ ಜಾರಿಗೊಳಿಸಿದ್ದೇ ಅಲ್ಲದೆ ಕಾನೂನನ್ನು ಅಸೆಂಬ್ಲಿಯಲ್ಲಿ ಸಮರ್ಥವಾಗಿ ಸಮರ್ಥಿಸಿಕೊಂಡು ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದರು.

ಇದನ್ನೂ ಓದಿ : ಮೇ 20 ಕ್ಕೆ ಪಿಣರಾಯಿ ವಿಜಯನ್ ಪ್ರಮಾಣ ವಚನ : ಸಂಪುಟಕ್ಕೆ ಹೊಸ ಮುಖಗಳು

ಗೌರಿಯಮ್ಮ ಕಾನೂನು ತಜ್ಞರೇನೂ ಅಗಿರಲಿಲ್ಲ.‌ಆದರೆ ಗೌರಿಯಮ್ಮ ಕೇರಳದ ಮಾಸ್ ಲೀಡರ್ ಆಗಿದ್ದರು. ಎಲ್ಲಿಯವರೆಗೆ ಗೌರಿಯಮ್ಮರಿಗೆ ಸಿಪಿಐಎಂ ಬಗ್ಗೆ ಬದ್ದತೆ ಇತ್ತು ಎಂದರೆ 1964 ರಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ವಿಭಜನೆಯಾಗಿ ಸಿಪಿಐ (ಎಂ) ರಚನೆಯಾದಾಗ ಕಮ್ಯುನಿಸ್ಟ್ ನಾಯಕರಾಗಿದ್ದ ಗೌರಿಯವರ ಟಿವಿ ಥಾಮಸ್ ಸಿಪಿಐನಲ್ಲಿ ಉಳಿದುಕೊಂಡರು‌. ಗಂಡ ಸಿಪಿಐ ಆಯ್ಕೆ ಮಾಡಿದರೂ ಗೌರಿಯವರು ಸಿಪಿಐ (ಎಂ) ಪರವಾಗಿ ನಿಂತರು. ಇದು ಅವರಿಬ್ಬರ ಪ್ರತ್ಯೇಕತೆಗೆ ಕಾರಣವಾಯಿತು. 1987 ರ ವಿಧಾನಸಭಾ ಚುನಾವಣೆಯಲ್ಲಿ ಗೌರಿಯಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸುದ್ದಿಯಲ್ಲಿರುವಷ್ಟು ಜನಪ್ರೀಯರಾಗಿದ್ದರು. ಕಮ್ಯೂನಿಷ್ಟ್ ನೇತೃತ್ವದ ರಂಗ ಬಹುಮತ ಪಡೆದಾಗ ಗೌರಿಯಮ್ಮ ಮುಖ್ಯಮಂತ್ರಿ ಆಗಿಯೇ ಬಿಟ್ಟರು ಎಂದು ಭಾವಿಸಲಾಗಿತ್ತು. ಆದರೆ ಪಕ್ಷದೊಳಗೆ ಇ ಕೆ ನಾಯನಾರ್ ಎದುರು ಗೌರಿಯಮ್ಮ ಸೋತಿದ್ದರು. ಇ ಕೆ ನಾಯನಾರ್ ಕೂಡಾ ಹಲವು ದಶಕಗಳಿಂದ ಕೇರಳದಲ್ಲಿ ಜನಪ್ರೀಯ ಕಮ್ಯೂನಿಷ್ಟ್ ನಾಯಕರಾಗಿದ್ದರು. ಕೊನೆಗೆ ಗೌರಿಯಮ್ಮ ಇ ಕೆ ನಾಯನಾರ್ ಸಂಪುಟಕ್ಕೆ ಸೇರಿದರು. ನಂತರದ ದಿನಗಳಲ್ಲಿ ಗೌರಿಯಮ್ಮ ಪಕ್ಷದಿಂದ ದೂರವಾದರು.

1997 ರಲ್ಲಿ, ಕಮ್ಯುನಿಸ್ಟ್ ನೇತೃತ್ವದ ರಂಗವು ಮತ್ತೆ ಬಹುಮತವನ್ನು ಪಡೆದಾಗ ಸುಶೀಲಾ ಗೋಪಾಲನ್ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಬಹುತೇಕವಾಗಿ ಎಲ್ಲರೂ ಭಾವಿಸಿದ್ದರು. ಆದರೆ ಬಹುತೇಕ ವಿ.ಎಸ್. ಅಚುತಾನಂದನ್ ನೇತೃತ್ವದ ಸಮಿತಿಯು ಇ ಕೆ ನಾಯನಾರ್ ರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತ್ತು.

ಪಿತೃಪ್ರಭುತ್ವದ ಪಕ್ಷಪಾತವು ಕೇರಳದ ಸಂಸ್ಕೃತಿಯ ಭಾಗವಾಗಿದೆ. ಎಡ ಚಳುವಳಿಯು ಇದನ್ನು ತನ್ನ ಮುಖ್ಯ ಅಜೆಂಡಾ ಎಂದು ಭಾವಿಸಿ ಈ ಸಮಸ್ಯೆಯನ್ನು ಪರಿಹರಿಸಲು ಗಮನಾರ್ಹವಾಗಿ ವಿಫಲವಾಗಿದೆ. ಆ ವೈಫಲ್ಯವು ರಾಜ್ಯದ ಮಹಿಳಾ ನಾಯಕರ ಕೊರತೆಗೆ ಕಾರಣವಾಗಿದೆ ಎಂಬುದನ್ನು ಸಿಪಿಐಎಂ ನಾಯಕರೇ ಒಪ್ಪಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಕೆ ಆರ್ ಗೌರಿಯಮ್ಮ ಅಥವಾ ಸುಶೀಲಾ ಗೋಪಾಲನ್ ಅವರು ಮುಖ್ಯಮಂತ್ರಿಯಾಗಲು ವಿಫಲರಾಗಿದ್ದಕ್ಕೂ ಪಿನರಾಯಿ ವಿಜಯನ್ ಕ್ಯಾಬಿನೆಟ್ ನಿಂದ ಶೈಲಜಾ ಟೀಚರ್ ರನ್ನು ಹೊರಗಿಟ್ಟಿದ್ದಕ್ಕೂ ಸಂಬಂಧವೂ ಇಲ್ಲ. ಹೋಲಿಕೆಯೂ ಸಲ್ಲ. ಶೈಲಜಾ ಟೀಚರ್ ಅವರನ್ನು ಕ್ಯಾಬಿನೆಟ್ ನಿಂದ ಹೊರಗಿಟ್ಟಿರುವುದು ಲಿಂಗ ಅಸಮಾನತೆಯೂ ಅಲ್ಲ. ಶೈಲಜಾ ಟೀಚರ್ ಮತ್ತು ಐಸಾಕ್ ರಂತಹ ಉತ್ತಮ ಸಚಿವರನ್ನು ಹೊರಗಿಟ್ಟಿರುವುದು ಪಕ್ಷದ ಆಂತರಿಕವಾಗಿರುವ ಬಲಿಷ್ಠ ಪ್ರಜಾಪ್ರಭುತ್ವ ಮತ್ತು ಚಲನಶೀಲ ರಾಜಕಾರಣದ ಸೂಚನೆಯಾಗಿದೆಯಷ್ಟೆ.

Donate Janashakthi Media

Leave a Reply

Your email address will not be published. Required fields are marked *