ನ್ಯಾಯಾಲಯದ ಆದೇಶಕ್ಕಾಗಿ ಕಾದ ನಾಯಕರು

-ಎಸ್.ವೈ. ಗುರುಶಾಂತ್ 

‘ಮುಡಾ’ ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ ಕುರಿತಾದ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ದ ತನಿಖೆಯ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತನ್ನ ತೀರ್ಪನ್ನು ಇದೇ 2024 ಸೆಪ್ಟೆಂಬರ್ 2 ಕ್ಕೆ ಮುಂದೂಡಿದೆ. ದೂರುದಾರರು ಮತ್ತು ಮನವಿದಾರರ ವಾದಗಳನ್ನು ಆಲಿಸಿದ ಏಕ ಸದಸ್ಯ ಪೀಠ ಹೀಗೆ ನಿರ್ಧಾರ ಪ್ರಕಟಸಿರುವುದು ಇನ್ನಷ್ಟು ಕುತೂಹಲದಿಂದ ಕಾಯುವಂತೆ ಮಾಡಿದೆ. ಈ ವಾದಗಳಲ್ಲಿ ಕೆಲವು ಹೊಸ ವಿಷಯಗಳು ಪ್ರಸ್ತಾಪಿಸಲ್ಪಟ್ಟಿವೆ. ಸಿದ್ಧರಾಮಯ್ಯನವರ ಪತ್ನಿ ಜಮೀನನ್ನು ಕಳೆದುಕೊಳ್ಳದೇ ಕೊಡದ ಜಮೀನಿಗೆ ಪ್ರತಿಯಾಗಿ ನಿವೇಶನಗಳನ್ನು ಪಡೆದಿದ್ದಾರೆ ಎಂಬುದು. ಸೈಟ್ ನೀಡಲು ನಿರ್ಧರಿಸಿದ ಸಭೆಯಲ್ಲಿ ಅವರ ಮಗ ಹಾಜರಿದ್ದರು, ಹೀಗಾಗಿ ಪ್ರಭಾವ ಬೀರಿದ್ದಾರೆ ಎನ್ನುವುದು ಮತ್ತೊಂದು. ಆಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯೂ ಆಗಿದ್ದರು ಎನ್ನುವುದೂ ಕೂಡ ಮೂಡಾ ಸೈಟ್ ಗಳನ್ನು ಹಂಚಿಕೆಯ ಮೇಲೆ ಪ್ರಭಾವ ಬೀರದೇ ಇರಲಾದೀತೇ ಎನ್ನುವುದು. ಆದರೆ ಸಿದ್ಧರಾಮಯ್ಯನವರ ಭಾಗಿತ್ವದ ನೇರ ಸಾಕ್ಷಿ, ದಾಖಲೆಗಳನ್ನು ನೀಡಲಾಗಿಲ್ಲ.

ಈ ಪ್ರಕರಣ ಆರಂಭಗೊಂಡ ರೀತಿ, ತೊಡಗಿದ ಹಲವು ಪಾತ್ರಗಳು ಕೆಂದ್ರದಲ್ಲಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರಕರಣವನ್ನು ಬೆಳಸಿದ ಹಾಗೂ ಬಳಸಿದ ರೀತಿ, ರಾಜ್ಯಪಾಲರ ಕಛೇರಿಯನ್ನೂ ಬಿಡದ ಅವರ ಪಿತೂರಿಗಳನ್ನು ಕಂಡ ಜನರಿಗೆ ನ್ಯಾಯಾಲಯವಾದರೂ ನ್ಯಾಯ ಕೊಡಬಹುದೇ ಎಂಬ ಕುತೂಹಲದ ನಿರೀಕ್ಷೆಯಲ್ಲಿದ್ದಾರೆ. ವಿರೋಧ ಪಕ್ಷಗಳ ಸರ್ಕಾರಗಳನ್ನು ದುಷ್ಟ ಸಂಚುಗಳ ಮೂಲಕ ಉರುಳಿಸುವ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ನ್ಯಾಯಾಲಯದ ತೀರ್ಪು ಸಹ ಮಹತ್ವವನ್ನು ಪಡೆಯಲಿದೆ. ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೂ ಕಾನೂನು ಮತ್ತು ರಾಜಕೀಯ ಸಮರ ಮುಂದುವರಿಯುವುದು ಶೇ.100 ಗ್ಯಾರಂಟಿ.

ಇದನ್ನೂ ಓದಿ: ನಕಲಿ ವೈದ್ಯ ಹಾಗೂ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಮೆಡಿಕಲ್‌ ಶಾಪ್‌ ಬಂದ್;‌ 1 ಲಕ್ಷ ರೂ. ದಂಡ

ಅತ್ತ ಹೈಕೋರ್ಟಿನಲ್ಲಿವಾದ ಪ್ರತಿವಾದ, ವಿವಾದಗಳು ನಡೆಯುತ್ತಿದ್ದರೆ ಇತ್ತ ರಾಜ್ಯಪಾಲರ ಕಡೆಗೆ ಕಾಂಗ್ರೆಸ್ಸಿನ ನಾಯಕರ ನಡಿಗೆಯೂ ನಡೆಯಿತು. ಅವರ ಮುಖ್ಯ ತಕರಾರು ಈಗಾಗಲೇ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಹಾಲಿ ಕೇಂದ್ರ ಕೈಗಾರಿಕಾ ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಅಂದಿನ ಮಂತ್ರಿಗಳಾಗಿದ್ದ, ಇಂದಿನ ಶಾಸಕರಾಗಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಶಶಿಕಲಾ ಜೊಲ್ಲೆ ಹಾಗೂ ಹಿಂದಿನ ಮಂತ್ರಿ, ಹಾಲಿ ಶಾಸಕ ಮುರುಗೇಶ್ ನಿರಾಣಿ ಅವರ ಮೇಲೆ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಕೂಡಲೇ ಅನುಮತಿ ಕೊಡಬೇಕು ಎಂಬ ಅಗ್ರಹ. ಹಾಗೆ ಇನ್ನು ಯಾಕೆ ಅದನ್ನು ಶೈತ್ಯಾಗಾರದಲ್ಲಿ ಕೊಳೆಯುವಂತೆ ಇಡಲಾಗಿದೆ ಎನ್ನುವ ಪ್ರಶ್ನೆ.

ಅಂದರೆ ರಾಜ್ಯಪಾಲರು ಆಡಳಿತದಲ್ಲಿರುವ ವಿರೋಧ ಪಕ್ಷಗಳಿಗೆ ಒಂದು ರೀತಿ, ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿನ ವಿರೋಧ ಪಕ್ಷಗಳಿಗೆ ಇನ್ನೊಂದು ರೀತಿ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಅಂಶವನ್ನು ಬಯಲಿಗಿಡುತ್ತಲೇ ತಮ್ಮ ಮೇಲಿನ ದಾಳಿಗೆ ಪ್ರತಿ ದಾಳಿ ನಡೆಸಲು ಮುಂದಾಗಿದ್ದಾರೆ. ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಕ್ಯಾಬಿನೆಟ್ಟಿನ ಹಲವು ಹಿರಿಯ ಸಚಿವರು ಮತ್ತು ಕಾಂಗ್ರೆಸ್ಸಿನ ನಾಯಕರು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ಬಳಿಕ ರಾಜ್ಯಪಾಲರ ಭವನದತ್ತ ಹೆಜ್ಜೆ ಹಾಕಿದ್ದಾರೆ. ಅವರ ಬೇಡಿಕೆ ಈ ಮೇಲೆ ಸೂಚಿಸಲಾದವರ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ ಕಲಂ-218 ರಂತೆ ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ ಅನುಗುಣವಾಗಿ ಅದರ ಸೆಕ್ಷನ್ 19ರ ಅಡಿಯಲ್ಲಿ ಕ್ರಮ ವಹಿಸಲು, 17ಎ ಹಾಗೂ 1988 (ತಿದ್ದುಪಡಿ ಕಾಯ್ದೆ 2018) ಆಧಾರದಲ್ಲಿಯೂ ಲೋಕಾಯುಕ್ತ ಪೊಲೀಸರಿಗೆ ಪರವಾನಿಗೆ ಕೊಡಬೇಕು ಎನ್ನುವುದಾಗಿದೆ.

ಈ ಆಗ್ರಹವೇನೂ ಇಂದು ಎತ್ತಿರುವುದೇನಲ್ಲ. ಈಗಾಗಲೇ ಕಳೆದ ಹಲವು ದಿನಗಳ ಹಿಂದಿನಿಂದಲೂ ಈ ಪ್ರಶ್ನೆಯನ್ನು ಕೇಳುತ್ತಲೇ ಬರಲಾಗುತ್ತಿದೆ ಮತ್ತು ಕ್ರಮ ವಹಿಸಲು ಒತ್ತಾಯವನ್ನು ಮಾಡಲಾಗುತ್ತಿದೆ. ಆದಾಗ್ಯೂ ರಾಜ್ಯಪಾಲರು ಯಾವುದೇ ಕ್ರಮಗಳನ್ನು ವಹಿಸದೆ ಮೌನವಾಗಿದ್ದಾರೆ! ಹಾಗೆ ನೋಡಿದರೆ ರಾಜ್ಯಪಾಲರನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಖುಲ್ಲಂ ಖುಲ್ಲಾ ತೊಡಗಿರುವುದು ಕಾಣುತ್ತಿದೆ. ಮೋದಿ ಮತ್ತು ಅಮಿತ್ ಶಾ ರವರ ಆಡಳಿತದಲ್ಲಿ ರಾಜ್ಯಪಾಲರಿಗಾಗಲಿ, ರಾಷ್ಟ್ರಪತಿ ಅವರಿಗಾಗಲಿ ಅಥವಾ ಸಂವಿಧಾನಾತ್ಮಕವಾದ ಯಾವುದೇ ಸಂಸ್ಥೆ ಅಥವಾ ಶಕ್ತಿಗಾಗಲಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತೇ?

ಆದಾಯ ಮೀರಿ ಆಸ್ತಿಗಳಿಕೆಯ ಆರೋಪದಲ್ಲಿ ತನಿಖೆ ನಡೆಸಲು ಹಿಂದಿನ ಸರ್ಕಾರ ಅನುಮತಿ ನೀಡಿತ್ತು. ಈ ಆದೇಶವನ್ನು ಹಿಂಪಡೆಯಲು ಇಂದಿನ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಹಿಂಪಡೆಯುವ ಈ ಆದೇಶವನ್ನು ಪ್ರಶ್ನಿಸಿದ್ದ ಎರಡು ರಿಟ್ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ನೀಡಿದ ಆದೇಶದಲ್ಲಿ ಎರಡು ಅರ್ಜಿಗಳನ್ನು ತಿರಸ್ಕರಿಸಿದೆ. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಲ್ಪ ಮಟ್ಟಿನ ನಿರುಮ್ಮಳ ನೀಡಿದೆ. ಇದರರ್ಥ ಮುಂದೆಯೂ ಈ ಪ್ರಕರಣ ಮುಂದುವರಿಯಲಾರದು ಎಂದು ಹೇಳಲು ಸಾಧ್ಯವಿಲ್ಲ! ಅಂತೂ ವಿಧಾನಸೌಧದ ಅವರವರ ಕಛೇರಿ ಬಾಗಿಲು ಮುಚ್ಚಿ ಸಾಲು ಸಾಲಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದವರು ನ್ಯಾಯಾಲಯದ ಹಿಂದೆ, ಮುಂದೆ ಪಥ ಸಂಚಲನ ನಡೆಸುತ್ತಿರುವುದು, ಜನ ಪರಿ ತಪಿಸುವುದು ಈ ವಾರದ ವಿಶೇಷ.

ಇದನ್ನೂ ನೋಡಿ: ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸಿರುವ ಆದೇಶ ಹಿಂಪಡೆಯಿರಿJanashakthi Media

Donate Janashakthi Media

Leave a Reply

Your email address will not be published. Required fields are marked *