ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ಎಲ್‌ಡಿಎಫ್ ಮೈತ್ರಿಯ ಪ್ರಮುಖ ಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪಕ್ಷವು ಎಂಭತ್ತಾರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಐವತ್ತಾರು ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಎಂ. ಗೋವಿಂದನ್ ತಿಳಿಸಿದ್ದಾರೆ. ಕೇರಳ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಧರ್ಮಡಂ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಎಂಭತ್ತು ವರ್ಷದ ಪಿಣರಾಯಿ ವಿಜಯನ್ ಅವರಿಗೆ ವಯೋಮಿತಿ ಹಾಗೂ ಅವಧಿ ಸಂಬಂಧಿತ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ. ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಪಕ್ಷವು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಲಾಗಿದೆ.
ಸಚಿವರಾದ ಶಿವನ್‌ಕುಟ್ಟಿ, ವೀಣಾ ಜಾರ್ಜ್, ಬಾಲಗೋಪಾಲ್, ಬಿಂದು, ರಾಜೀವ್, ರಾಜೇಶ್, ಮೊಹಮ್ಮದ್ ರಿಯಾಸ್, ವಾಸವನ್, ಸಾಜಿ ಚೇರಿಯನ್ ಮತ್ತು ಕೇಲು ಸೇರಿದಂತೆ ಹಲವು ಮಂದಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಹಿಂದಿನ ಸಚಿವರಾದ ಕೆ.ಕೆ. ಶೈಲಜಾ, ರವೀಂದ್ರನಾಥ್, ಮೊಯ್ದೀನ್ ಮತ್ತು ಕಡಂಪಳ್ಳಿ ಸುರೇಂದ್ರನ್ ಕೂಡ ಅಭ್ಯರ್ಥಿಗಳಾಗಿದ್ದಾರೆ.
ಇದನ್ನೂ ಓದಿ : ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ: ಭಾರತದಲ್ಲಿ ಎಲ್‌ಪಿಜಿ ಸರಬರಾಜಿನ ಆತಂಕ – ದುರ್ಬಲ ಶಕ್ತಿ ಸಂಗ್ರಹ ಬಯಲಿಗೆ
ಮಾಜಿ ಫುಟ್ಬಾಲ್ ಆಟಗಾರ ಯು. ಶರಫ್‌ಅಲಿ ಅವರಿಗೆ ಮಲಪ್ಪುರಂ ಜಿಲ್ಲೆಯ ನಿಲಂಬೂರು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಮಟ್ಟನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವೆ ಕೆ.ಕೆ. ಶೈಲಜಾ ಅವರನ್ನು ಈ ಬಾರಿ ಪೆರವೂರು ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಇದೇ ವೇಳೆ ಎಲ್‌ಡಿಎಫ್ ಮೈತ್ರಿಯ ಮತ್ತೊಂದು ಪ್ರಮುಖ ಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷ ಇಪ್ಪತ್ತೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಅದರ ನಾಲ್ವರು ಸಚಿವರು ಮತ್ತೆ ಚುನಾವಣಾ ಕಣಕ್ಕಿಳಿಯಲಿದ್ದಾರೆ.
ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ ಕೇರಳದಲ್ಲಿ ಏಪ್ರಿಲ್ ಒಂಬತ್ತರಂದು ಮತದಾನ ನಡೆಯಲಿದ್ದು, ಮೇ ನಾಲ್ಕರಂದು ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳ ಘೋಷಣೆಯೊಂದಿಗೆ ರಾಜ್ಯದಾದ್ಯಂತ ಚುನಾವಣಾ ಪ್ರಚಾರವೂ ಆರಂಭಗೊಂಡಿದೆ.
ಇದನ್ನೂ ನೋಡಿ : ಪಿಚ್ಚರ್ ಪಯಣ – 170 | ಚಿತ್ರ : ಮ್ಯಾಗೆಲ್ಲನ್, ವಿಶ್ಲೇಷಣೆ : ಮ ಶ್ರಿ ಮುರಳಿ ಕೃಷ್ಣ Janashakthi Media
