ಕಾನೂನು, ನ್ಯಾಯ ಮತ್ತು ಸಾರ್ವಜನಿಕ ಪ್ರಜ್ಞೆ

ವ್ಯಕ್ತಿಗತ ನಡೆನುಡಿಯಲ್ಲಿ ಇಲ್ಲದ ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ಯಾವ ರೂಪದಲ್ಲಿರಲು ಸಾಧ್ಯ?

ಉಡುಪಿಯ ಮಲ್ಪೆ ಬಳಿ, ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಒಂದು ಘಟನೆ ರಾಜ್ಯದ ಪ್ರಜ್ಞಾವಂತ ಮನಸ್ಸುಗಳನ್ನು ಸಹಜವಾಗಿ ಕೆರಳಿಸಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ನಿವಾಸಿಯಾದ ಈ ಮಹಿಳೆ ಕಳೆದ ಐದು ವರ್ಷಗಳಿಂದ ಉಡುಪಿ ಬಳಿಯ ಮಲ್ಪೆ ಬಂದರಿನಲ್ಲಿ ಬೋಟ್‌ ಮೂಲಕ ಮೀನು ಸಂಗ್ರಹಿಸಿ ಬುಟ್ಟಿಯಲ್ಲಿ ತುಂಬಿಸಿ ಕೊಡುವ ಕೆಲಸ ಮಾಡುತ್ತಿದ್ದರೆಂದು ಹೇಳಲಾಗಿದೆ. ಮಾರ್ಚ್‌ 18ರಂದು ಈ ಮಹಿಳೆ ಸಿಗಡಿ ಮೀನನ್ನು ಸಂಗ್ರಹಿಸಿ ಮತ್ತೊಂದು ಬುಟ್ಟಿಯಲ್ಲಿ ತುಂಬಿಸುತ್ತಿದ್ದಾಗ ಅದನ್ನು ಕಂಡ ಕೆಲವರು ಆಕೆಯನ್ನು ಹಾದಿಯಲ್ಲೇ ನಿಲ್ಲಿಸಿ, ಮಲ್ಪೆಯ ಮೀನನ್ನು ಬೇರೆ ಊರಿಗೆ ನ್ಯಾಯ ಕೊಂಡೊಯ್ಯುತ್ತಿರುವುದಾಗಿ ಆರೋಪಿಸಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆನಂತರ ಆಕೆಯನ್ನು ಮರಕ್ಕೆ ಕಟ್ಟಿಹಾಗಿ ಹೊಡೆಯುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳ ಮೂಲಕ ಹರಿಯಬಿಡಲಾಗಿದೆ.

-ನಾ ದಿವಾಕರ

ಈ ಘಟನೆಯಲ್ಲಿ ಹಲವು ವ್ಯಕ್ತಿಗಳನ್ನು ಬಂಧಿಸಲಾಗಿದ್ದು ಮತ್ತೊಬ್ಬ ವ್ಯಕ್ತಿಯ ವಿಚಾರಣೆ ನಡೆಸಲಾಗುತ್ತಿದೆ. ಸಾರ್ವಜನಿಕವಾಗಿ ಈ ರೀತಿ ಕ್ರೂರ ಶಿಕ್ಷೆ ನೀಡುತ್ತಿರುವ ದೃಶ್ಯ ರಾಜ್ಯದ ಸಹೃದಯ ಮನಸ್ಸುಗಳನ್ನು ಘಾಸಿಗೊಳಿಸಿದೆ. ಹಲ್ಲೆಗೊಳಗಾದ ಮಹಿಳೆ ದಲಿತ ಸಮುದಾಯಕ್ಕೆ ಸೇರಿರುವುದರಿಂದ, ದಲಿತ ಸಮಾಜದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಇದು ಉತ್ತರಪ್ರದೇಶವೋ, ಬಿಹಾರವೋ, ಪಾಕಿಸ್ತಾನವೋ ಎಂಬ ಪ್ರಶ್ನೆಗಳ ನಡುವೆ ಈ ಅಮಾನುಷ ಕೃತ್ಯವನ್ನು ಖಂಡಿಸಲಾಗುತ್ತಿದೆ. ಹಾಗೇನೂ ಭಾವಿಸಬೇಕಿಲ್ಲ, ನಮ್ಮ ರಾಜ್ಯವೂ ಈ ಕ್ರೌರ್ಯಕ್ಕೆ ಸಂಪೂರ್ಣ ಹೊರತಾಗಿಲ್ಲ. ರಾಜ್ಯ ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಖುದ್ದು ಪ್ರತಿಕ್ರಿಯಿಸಿದ್ದು , ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ವಾಭಾವಿಕವಾಗಿ ನಮಗೆ ಮಲ್ಪೆಯ ಮಹಿಳೆಯಲ್ಲಿ ಒಬ್ಬ  ದಲಿತ , ಅಕ್ಲಾಖ್‌ನಲ್ಲಿ ಒಬ್ಬ ಮುಸ್ಲಿಂ, ಗ್ರಾಹಂ ಸ್ಟೈನ್ಸ್‌ನಲ್ಲಿ ಒಬ್ಬ ಕ್ರೈಸ್ತ, ನಿರ್ಭಯಾಳಲ್ಲಿ ಒಬ್ಬ ಯುವತಿ, ಬಿಲ್ಕಿಸ್‌ ಬಾನೋನಲ್ಲಿ ಮುಸ್ಲಿಂ ಮಹಿಳೆ ಹೀಗೆ ಅಸ್ಮಿತೆಗಳ ನೆಲೆಯಲ್ಲಿ ಸಂತ್ರಸ್ತರಾಗಿ ಕಾಣುತ್ತಾರೆ. ಇದೇನೂ ಆಕ್ಷೇಪಾರ್ಹವಲ್ಲ. ಮಲ್ಪೆ ಪ್ರಕರಣದಲ್ಲಿ ಮೀನು ಕದ್ದ ಆರೋಪ ಹೊತ್ತಿರುವ ಮಹಿಳೆ ಮೇಲ್ಜಾತಿಯವರಾಗಿದ್ದಲ್ಲಿ, ಇದೇ ರೀತಿಯ ಕ್ರೌರ್ಯಕ್ಕೆ ಒಳಗಾಗುತ್ತಿದ್ದರೇ ಎಂಬ ಪ್ರಶ್ನೆಗೆ ಹೌದು ಎನ್ನುವ ದಾರ್ಷ್ಟ್ಯ ಇರಲು ಸಾಧ್ಯವಿಲ್ಲ. ಏಕೆಂದರೆ ಈ ರೀತಿ ಸಾರ್ವಜನಿಕರ ಕಾಂಗರೂ ನ್ಯಾಯದ ನಿಷ್ಕರ್ಷೆಗೊಳಗಾಗುವವರು ಸಾಮಾನ್ಯವಾಗಿ ದುರ್ಬಲರಾದ , ಬಡತನದ, ತಳಸಮುದಾಯದ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಸೇರಿದವರಾಗಿರುತ್ತಾರೆ. ಆದರೂ ಈ ಸಾರ್ವಜನಿಕ ನ್ಯಾಯ ವಿತರಣೆ (Public Justice Dispensation) ಎಂಬ ಪರಿಕಲ್ಪನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ , ಅಲ್ಲಿ ನಮಗೊಂದು ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನ ತಾತ್ವಿಕ-ಸಾಂಸ್ಥಿಕ ರೂಪದಲ್ಲಿ ಗುರುತಿಸಲು ಸಾಧ್ಯ. ನ್ಯಾಯ

ಬದಲಾದ ಭಾರತದ ವಿದ್ಯಮಾನ

ಆದರೆ ಕಳೆದ ಮೂರ್ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣದಲ್ಲಿ ವಿಶೇಷವಾಗಿ ಗುರುತಿಸಬೇಕಾದ ಅಂಶ ಎಂದರೆ, ತಳಸ್ತರದ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ವ್ಯಕ್ತಿಗತ ನೆಲೆಯಲ್ಲಿ ನೋಡದೆ ನಿರ್ದಿಷ್ಟ ಅಥವಾ ಉದ್ದೇಶಿತ ಸಮುದಾಯದ ನೆಲೆಯಲ್ಲಿಟ್ಟು ನೋಡುವ ಒಂದು ಸಂಸ್ಕೃತಿಯ ಬೆಳವಣಿಗೆ. ಸ್ತರೀಯ ಅಸಮಾನತೆಯನ್ನೇ ಇಂದಿಗೂ ಕಾಪಾಡಿಕೊಂಡು ಬಂದಿರುವ ನವ ಭಾರತದಲ್ಲಿ ಸಾಮಾಜಿಕ ಅಥವಾ ಆರ್ಥಿಕ ಅಪರಾಧಗಳೂ ಸಹ ಸ್ತರೀಕರಣಕ್ಕೊಳಗಾಗಿದ್ದು, ತಳಸ್ತರದ ಸಮಾಜದಲ್ಲಿ ನಡೆಯುವ ಅಪರಾಧಗಳು ಸಾಮುದಾಯಿಕ ಚೌಕಟ್ಟಿನೊಳಗೆ ನಿಷ್ಕರ್ಷೆಗೊಳಗಾಗುತ್ತದೆ. ಈ ಕಾಂಗರೂ ನ್ಯಾಯ ವ್ಯವಸ್ಥೆಯ ವಾರಸುದಾರರಾಗಿ ಸಮಾಜದ ಪ್ರಬಲ ಜಾತಿ-ವರ್ಗಗಳು ಯಜಮಾನಿಕೆ ವಹಿಸಿಕೊಳ್ಳುತ್ತವೆ. ಈ ಊಳಿಗಮಾನ್ಯ ವ್ಯವಸ್ಥೆಯೇ ಪ್ರಬಲ ಸಮಾಜಕ್ಕೆ “ತಪ್ಪು ಮಾಡಿದವರನ್ನು ಸಾರ್ವಜನಿಕವಾಗಿ ಶಿಕ್ಷಿಸುವ” ಹಕ್ಕನ್ನೂ ನೀಡುತ್ತದೆ.

ಇದನ್ನೂ ಓದಿ: ಕೊಯಂಬತ್ತೂರು| ಕಾಳಿಂಗ ಸರ್ಪ ಕಚ್ಚಿ 3 ದಿನಗಳ ನಂತರ ಉರಗ ತಜ್ಞ ಸಾವು

ಈ ಹಿನ್ನೆಲೆಯಲ್ಲೇ ಯಾವುದೇ ಅಪರಾಧ ಮಾಡಿದ ಅಥವಾ ಆರೋಪ ಹೊತ್ತ ವ್ಯಕ್ತಿಯನ್ನು ಸಾರ್ವಜನಿಕರೇ ದೈಹಿಕ ಶಿಕ್ಷೆಗೊಳಪಡಿಸುವ ಒಂದು ಸಂಸ್ಕೃತಿ ನಮ್ಮ ನಡುವೆ ಬೆಳೆದುಬಂದಿದೆ ಅಥವಾ ಬೆಳೆಸಲಾಗಿದೆ ಎನ್ನಬಹುದು.  ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳೂ ಸಹ ತಮ್ಮ ಸೈದ್ಧಾಂತಿಕ ನಿಲುವುಗಳಿಗೆ ಅನುಗುಣವಾಗಿ ಸಹಿಸಿಕೊಳ್ಳುವುದನ್ನೂ, ಮೌನ ಸಮ್ಮತಿಯ ಮೂಲಕ ನಿಷ್ಕ್ರಿಯವಾಗಿರುವುದನ್ನೂ ಗುರುತಿಸಬಹುದು. ಇಂತಹ ಘಟನೆಗಳನ್ನು ʼಕಾನೂನು ಕೈಗೆತ್ತಿಕೊಳ್ಳುವʼ ಒಂದು ಅನಪೇಕ್ಷಿತ ವಿದ್ಯಮಾನ ಎನ್ನುವುದಕ್ಕಿಂತಲೂ ಮುಖ್ಯವಾಗಿ, ಇದು  ಸಾಮಾಜಿಕವಾಗಿ ಸ್ವೀಕೃತವಾಗುತ್ತಿರುವ ಒಂದು ಊಳಿಗಮಾನ್ಯ ಮನಸ್ಥಿತಿ ಎಂದು ಭಾವಿಸುವುದು ಸೂಕ್ತ ಎನಿಸುತ್ತದೆ.  ಇದರ ಚಾರಿತ್ರಿಕ ನಡಿಗೆಯನ್ನೂ ವಿಮರ್ಶಿಸಬೇಕಿದೆ.

ಭಾರತದಲ್ಲಿ ಈ ಸಾರ್ವಜನಿಕ ವಿದ್ಯಮಾನ ವ್ಯಾಪಕವಾಗಿ ಚಾಲನೆಗೆ ಬಂದಿದ್ದು 1980-90ರ ದಶಕದಲ್ಲಿ. ಈ ದಶಕದಲ್ಲೇ ಭಾರತೀಯ ಸಮಾಜದಲ್ಲಿ ಮಧ್ಯಕಾಲೀನ ಸಾಮಾಜಿಕ ನಡತೆಗಳು ವಿಶಾಲ ಸಮಾಜದ, ನಿರ್ದಿಷ್ಟವಾಗಿ ಪ್ರಜಾಪ್ರಭುತ್ವ-ಸಂವಿಧಾನದ ಫಲಾನುಭವಿ ಮೇಲ್ಪದರ ಸಮಾಜದ, ಹಿತವಲಯದ ಮೌನ ಸಮ್ಮತಿ ಪಡೆದದ್ದೇ ಅಲ್ಲದೆ, ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ಸಾಂಘಿಕ-ಸಾಂಸ್ಥಿಕ ಶಕ್ತಿಗಳ ಮೂಲಕ ಪ್ರಚೋದಿಸಲ್ಪಟ್ಟವು. ಆರಂಭಿಕ ಮೂರು ದಶಕಗಳಿಗೂ ಹೆಚ್ಚು ಕಾಲ ಹೊಸ ಭಾರತದಲ್ಲಿ ಚಲನಶೀಲವಾಗಿದ್ದ ಪ್ರಜಾಪ್ರಭುತ್ವೀಯ ಮೌಲ್ಯಗಳು ಹಾಗೂ ಅದಕ್ಕೆ ಪೂರಕವಾದ ಮನುಜ ಸಂವೇದನೆಯ ತಾತ್ವಿಕ ನೆಲೆಗಳು ಶಿಥಿಲವಾಗಲು ಆರಂಭವಾಗಿದ್ದು ಈ ದಶಕದಲ್ಲೇ.

ಸಾಂಪ್ರದಾಯಿಕ ಸಮಾಜದ ನಡುವೆ

ಹಿಂದೂ ಬಲಪಂಥೀಯ ರಾಜಕಾರಣದ ಬಲವರ್ಧನೆ ಮತ್ತು ರಾಜಕೀಯ ಮುನ್ನಡೆ, ಇದಕ್ಕೆ ಪ್ರತಿಯಾಗಿ ಬೆಳೆದ ಮುಸ್ಲಿಂ ಮೂಲಭೂತವಾದ, ಒಬಿಸಿ ರಾಜಕಾರಣದ ಮೂಲಕ ತನ್ನ ಕಳೆದುಹೋದ ಬೇರುಗಳನ್ನು ಮರಳಿ ಪಡೆದುಕೊಂಡ ಮಧ್ಯವರ್ತಿ ಜಾತಿ ಸಮುದಾಯಗಳ (Intermediary Castes) ಯಜಮಾನಿಕೆ ಸಂಸ್ಕೃತಿ ಮತ್ತು ಈ ಎಲ್ಲ ಆಯಾಮಗಳಲ್ಲಿ ಮರುಪ್ರಕಟವಾದ ಪ್ರಾಚೀನ ಊಳಿಗಮಾನ್ಯ ಲಕ್ಷಣಗಳು 1980-90ರ ದಶಕದ ಒಂದು ಬಹುಮುಖ್ಯ ಬೆಳವಣಿಗೆಯಾಗಿತ್ತು. ಈ ಮರುಸ್ಥಾಪನೆಗೆ ಕಾರಣ ಸಾಮುದಾಯಿಕ ಆರ್ಥಿಕ ಸಬಲೀಕರಣ, ವಿಸ್ತರಿಸಿದ ರಾಜಕೀಯ ಪ್ರಾಬಲ್ಯ ಮತ್ತು ಇನ್ನೂ ಗಟ್ಟಿಯಾಗಿದ್ದ ಮೂಲ ಸಾಂಸ್ಕೃತಿಕ-ಧಾರ್ಮಿಕ ಬೇರುಗಳು.

ಭಾರತದಲ್ಲಿ ಪ್ರಜಾಪ್ರಭುತ್ವ ನೆಲದ ವಾಸ್ತವಗಳನ್ನು ಮರೆಮಾಚುವ ಮೇಲುಹೊದಿಕೆ ಮಾತ್ರ, ಮೂಲತಃ ಭಾರತೀಯ ಸಮಾಜ ಅಪ್ರಜಾತಾಂತ್ರಿಕ ಎಂಬ ಅಂಬೇಡ್ಕರ್‌ ಅವರ ದಾರ್ಶನಿಕ ಮಾತುಗಳನ್ನು ನೆನಪಿಸುವ ಹಾಗೆ ಭಾರತೀಯ ಸಮಾಜ ತನ್ನ ಪ್ರಾಚೀನ ಪಳೆಯುಳಿಕೆಗಳನ್ನು ಮರಳಿ ಸ್ಥಾಪಿಸಿದ್ದು ಈ ದಶಕಗಳಲ್ಲಿ. ಇದಕ್ಕೆ ಪೂರಕವಾಗಿ ಬೆಳೆದುಬಂದಿದ್ದು ಹಿಂದುತ್ವ ರಾಜಕಾರಣದ ಏಕ ಸಂಸ್ಕೃತಿಯ ಪ್ರತಿಪಾದನೆ, ಹಿಂದೂ-ಮುಸ್ಲಿಂ ಸಮಾಜದಲ್ಲಿ ಮರುಸ್ಥಾಪನೆಗೊಂಡ ಸಾಂಪ್ರದಾಯಿಕತೆ-ಮತೀಯವಾದ ಮತ್ತು ಮತಾಂಧತೆ, ದೇಶವ್ಯಾಪಿಯಾಗಿ ಎಲ್ಲ ಸಮಾಜಗಳಲ್ಲೂ ಮರಳಿ ಮಾನ್ಯತೆ ಪಡೆದ ಪಿತೃಪ್ರಧಾನ ಯಜಮಾನಿಕೆ ಹಾಗೂ ಅಧಿಕಾರ ರಾಜಕಾರಣದಲ್ಲಿ ಈ ಎಲ್ಲ ಲಕ್ಷಣಗಳನ್ನು ಕಾಪಾಡಲು ಪೂರಕವಾದ ನವ ಉದಾರವಾದಿ-ಬಂಡವಾಳಶಾಹಿ ಆರ್ಥಿಕತೆ. ಸಾಂಸ್ಕೃತಿಕ ವಲಯದಲ್ಲಿ ಸಾಂಸ್ಥೀಕರಣಗಗೊಂಡ ಅಧ್ಯಾತ್ಮ ಮತ್ತು ಆಧ್ಯಾತ್ಮಿಕ ನೆಲೆಗಳು ಈ ಪ್ರವೃತ್ತಿಯನ್ನು ತಳಮಟ್ಟದವರೆಗೂ ಕೊಂಡೊಯ್ದಿದ್ದು ಚಾರಿತ್ರಿಕ ಸತ್ಯ.

ʼಗುಂಪು ಥಳಿತʼ ಎಂಬ ವಿಕೃತಿ

ಮಲ್ಪೆಯ ಘಟನೆಯನ್ನು ಪ್ರತ್ಯೇಕಿಸದೆಯೇ, ಈ ಬೆಳವಣಿಗೆಯನ್ನು ಪರಾಮರ್ಶಿಸಿದಾಗ ನಮಗೆ ʼಗುಂಪು ಥಳಿತ ʼ ಎನ್ನುವ ಒಂದು ವಿದ್ಯಮಾನ ಕಾಣಲು ಸಾಧ್ಯ. ಇದಕ್ಕೆ ಬಲಿಯಾಗುವವರು ಸಾಮಾನ್ಯವಾಗಿ ತಳಸಮುದಾಯಗಳು, ಅಲ್ಪಸಂಖ್ಯಾತರು ಹಾಗೂ ಬಡ ಜನತೆ ಎನ್ನುವುದು ಸ್ಪಟಿಕ ಸತ್ಯ. ಆದರೆ ನಾವು ಗುರುತಿಸಬೇಕಿರುವುದು “ ಸಾರ್ವಜನಿಕ ನ್ಯಾಯ ವಿತರಣೆ”ಯನ್ನು ವ್ಯವಸ್ಥಿತವಾಗಿ ಪೋಷಿಸಿದ ನಮ್ಮ ಸಮಾಜದ ನಡಿಗೆಯನ್ನು. ಜಾಗತೀಕರಣದ ಪರಿಣಾಮವಾಗಿ ಭಾರತವನ್ನು ಆಕ್ರಮಿಸಿದ ತಂತ್ರಜ್ಞಾನಾಧಾರಿತ ಸಂವಹನ ಮಾಧ್ಯಮಗಳು, ವಿದ್ಯುನ್ಮಾನ ವಾಹಿನಿಗಳು, ಸುದ್ದಿಮನೆಗಳು, ʼತಪ್ಪು ಮಾಡಿದ ವ್ಯಕ್ತಿಯೊಬ್ಬ ಸಾರ್ವಜನಿಕರಿಂದಲೇ ಶಿಕ್ಷೆಗೊಳಗಾಗುವ ʼದೃಶ್ಯಗಳನ್ನು ರೋಚಕವಾಗಿ ಬಿಂಬಿಸಿದ್ದೇ ಅಲ್ಲದೆ, ಈ ಕ್ರೂರ ಪ್ರವೃತ್ತಿಯನ್ನು ಬಣ್ಣಿಸಲು ʼಸಾರ್ವಜನಿಕರಿಂದಲೇ ಗೂಸಾ- ಹಿಗ್ಗಾಮುಗ್ಗ ಥಳಿತ- ಅಟ್ಟಾಡಿಸಿ ಹೊಡೆದ ಜನರುʼ ಇವೇ ಮುಂತಾದ ರೋಚಕ ಪದಪುಂಜಗಳನ್ನು ಬಳಸಲಾರಂಭಿಸಿದ್ದನ್ನು ಹೇಗೆ ನಿರ್ವಚಿಸುವುದು ? ಈ ಪರಿಭಾಷೆ ಈಗ ಮುದ್ರಣ-ಸಾಮಾಜಿಕ ಮಾಧ್ಯಮ (Social Media)ಗಳಲ್ಲೂ ಸಾಮಾನ್ಯ ಬಳಕೆಯಲ್ಲಿದೆ.

ಅಚ್ಚರಿಯ ವಿಷಯ ಎಂದರೆ ಈ ವಿದ್ಯಮಾನವನ್ನು ಭಾರತೀಯ ಸಮಾಜವಾಗಲೀ, ಪ್ರಜಾಪ್ರಭುತ್ವ-ಸಂವಿಧಾನವನ್ನು ಗೌರವಿಸುವ ಸಂಘಟನೆಗಳಾಗಲೀ ಒಂದು ಸಾಮಾಜಿಕ ವ್ಯಸನ ಎಂದು ಭಾವಿಸಲೇ ಇಲ್ಲ. ʼ ಕಾನೂನು ಕೈಗೆತ್ತಿಕೊಳ್ಳುವವರನ್ನು ಸುಮ್ಮನೆ ಬಿಡುವುದಿಲ್ಲ ʼ ಎಂಬ ಸರ್ಕಾರಗಳ ಬೀಸು ಘೋಷಣೆಗಳು ಸಾಪೇಕ್ಷ ನೆಲೆಯಲ್ಲಿ ಮಸುಕಾಗಿಬಿಟ್ಟವು. ಆದರೆ ತಾವೇ ನ್ಯಾಯ ವ್ಯವಸ್ಥೆಯಾಗುವ ಒಂದು ಪ್ರಬಲ ಸಮುದಾಯ ಸವರ್ಣೀಯ ಸಮಾಜದಲ್ಲಿ, ಬಹುಸಂಖ್ಯಾತರ ನಡುವೆ, ಅಲ್ಪಸಂಖ್ಯಾತರಲ್ಲಿ ಪ್ರಬಲ ವರ್ಗಗಳ ನಡುವೆ ಮತ್ತು ಸಾಮಾಜಿಕವಾಗಿ-ಆರ್ಥಿಕವಾಗಿ ಮೇಲ್‌ ಸ್ತರದಲ್ಲಿರುವ ಸಮಾಜಗಳಲ್ಲಿ ಸೃಷ್ಟಿಯಾಗತೊಡಗಿದ್ದನ್ನು ಸಹಜ ಪ್ರಕ್ರಿಯೆಯೇನೋ ಎಂಬಂತೆ ಅಲಕ್ಷಿಸಲಾಯಿತು. ಈ ನಿರ್ಲಕ್ಷ್ಯದ ಒಂದು ಪ್ರಭಾವವನ್ನು ನಮ್ಮ ಚಲನಚಿತ್ರಗಳಲ್ಲಿ ಗುರುತಿಸಬಹುದು. 1980ರ ನಂತರದ ಸಿನೆಮಾಗಳಲ್ಲಿ ʼಹಾಸ್ಯ ಸನ್ನಿವೇಶಗಳುʼ ರೂಪಾಂತರಗೊಂಡಿದ್ದನ್ನು ಗಮನಿಸಿದಾಗ, ಸಂಭಾಷಣೆ ಅಥವಾ ಹಾವಭಾವಗಳಿಂದಲೇ ಪ್ರೇಕ್ಷಕರನ್ನು ನಗಿಸುವ ಒಂದು ಪರಂಪರೆ ನೇಪಥ್ಯಕ್ಕೆ ಸರಿದಿದ್ದನ್ನೂ ಗುರುತಿಸಬಹುದು.

ತಮಿಳು ಚಿತ್ರಗಳ ಸೆಂದಿಲ್-ವಡಿವೇಲು, ಕನ್ನಡದ ಸಾಧುಕೋಕಿಲ,  ತೆಲುಗು ಭಾಷೆಯ ಬ್ರಹ್ಮಾನಂದಂ, ಬಾಲಿವುಡ್‌ನ ಜಾನಿಲಿವರ್-ರಾಜಪಾಲ್‌ ಯಾದವ್‌ ಈ ಹಾಸ್ಯ ನಟರು ಜನಪ್ರಿಯವಾಗಿದ್ದು ಮೃದು ಹಾಸ್ಯದಿಂದಲ್ಲ, ಸಾರ್ವಜನಿಕರಿಂದ ಒದೆತ ತಿನ್ನುವ ದೃಶ್ಯಗಳ ಮೂಲಕ. ಇವರಲ್ಲಿದ್ದ ನಟನಾ ಕೌಶಲ, ಪ್ರೇಕ್ಷಕರಲ್ಲಿ ನಗೆ ಉಕ್ಕಿಸುವ ಅಭಿನಯ ಚಾತುರ್ಯ ಇವೆಲ್ಲವನ್ನೂ ವ್ಯರ್ಥ ಮಾಡಿದ ಸಿನಿಮಾ ನಿರ್ದೇಶಕ-ನಿರ್ಮಾಪಕರು, ಮುಖ್ಯ ಕಥಾ ಹಂದರಕ್ಕೆ ಸಂಬಂಧಿಸದ ದೃಶ್ಯಗಳಲ್ಲಿ ಈ ಪಾತ್ರಗಳು ʼ ಗುಂಪು ಥಳಿತ ʼಕ್ಕೊಳಗಾಗುವ ಮೂಲಕ ಹಾಸ್ಯದ ಹೊನಲು ಸೃಷ್ಟಿಸಲಾರಂಭಿಸಿದ್ದರು. ಮಾರುಕಟ್ಟೆ ಮತ್ತು ಲಾಭದ ದೃಷ್ಟಿಯಿಂದ ಇದು ಜನಪ್ರಿಯವಾಗಿದ್ದು ವಾಸ್ತವ ಆದರೆ ಇಲ್ಲಿ ನಷ್ಟವಾಗಿದ್ದು ಏನು ? ಸಿನೆಮಾ ಪ್ರೇಕ್ಷಕರ ಮತ್ತು ವಿಶಾಲ ಸಮಾಜದ ಮನುಜ ಸೂಕ್ಷ್ಮ ಪ್ರಜ್ಞೆ. ಪರದೆಯ ಮೇಲೆ ವ್ಯಕ್ತಿಯೊಬ್ಬ ಹೊಡೆತ ತಿನ್ನುವುದನ್ನು ನೋಡಿ ನಗೆಗಡಲಲ್ಲಿ ತೇಲುವ ಒಂದು ಪ್ರೇಕ್ಷಕ ವರ್ಗ ಇಲ್ಲಿ ಸೃಷ್ಟಿಯಾಯಿತು.

ಮನುಜ ಸೂಕ್ಷ್ಮತೆಯ ಕಣ್ಮರೆ

ಇದು ಹೇಗೆ ಸಾಧ್ಯ ? ಪೆಟ್ಟು ತಿನ್ನುವ ವ್ಯಕ್ತಿ ಅನುಭವಿಸುವ ನೋವು, ನೋಡುಗರಲ್ಲಿ ನಗೆ ಉಕ್ಕಿಸುವುದಾದರೂ ಹೇಗೆ ? ಮಕ್ಕಳಿಗಾಗಿ ತಯಾರಾಗಿರುವ ʼ ಟಾಂ ಅಂಡ್‌ ಜೆರಿ ʼ ಸರಣಿಯಲ್ಲೂ ಇದನ್ನು ಗುರುತಿಸಬಹುದು. ಭಾರತೀಯ ಸಮಾಜದಲ್ಲಿ ಸಿನೆಮಾಗಳು ಸಾಮಾಜಿಕ ಲಕ್ಷಣಗಳನ್ನು ಬಿಂಬಿಸುವುದಕ್ಕಿಂತಲೂ ಹೆಚ್ಚಾಗಿ ಸಮಾಜವನ್ನು ಪ್ರಭಾವಿಸುವುದೇ ಹೆಚ್ಚು. ಹಾಗಾಗಿ ಸಿನೆಮಾಗಳು ಹಾಸ್ಯದ ನೆಪದಲ್ಲಿ ಪ್ರಚೋದಿಸಿದ ಈ ದೈಹಿಕ ಕ್ರೌರ್ಯ ಸಹಜವಾಗಿಯೇ ಸಾಮಾಜಿಕ ನಡವಳಿಕೆಯೂ ಆಯಿತು. ಮೇಲ್ಪದರದ ಸುಶಿಕ್ಷಿತ ಸಮಾಜಕ್ಕೂ ಇದು ಆಕ್ಷೇಪಾರ್ಹವಾಗಿ ಕಾಣದೆ ಹೋಯಿತು. ಒಂದೆರಡು ಹೆಜ್ಜೆ ಹಿಂದೆ ಸರಿದು ಬಾಲಕೃಷ್ಣ, ನರಸಿಂಹರಾಜು, ತಾಯ್‌ ನಾಗೇಶ್‌, ರೇಲಂಗಿ, ಮೆಹಮೂದ್‌, ಜಾನಿವಾಕರ್‌ ಮತ್ತು ನಾಯಕ ನಟರಾದ ಅನಂತನಾಗ್‌ ಮತ್ತು ಡಾ ರಾಜ್ ಅವರ ಚಿತ್ರಗಳಲ್ಲಿನ ಹಾಸ್ಯ ಸನ್ನಿವೇಶಗಳನ್ನು ನೆನಪಿಸಿಕೊಳ್ಳುವುದಾದರೆ, ಸಿನೆಮಾ ಮತ್ತು ಸಮಾಜದ ನಡುವಿನ ಸೂಕ್ಷ್ಮ ಸಂಬಂಧಗಳು ಅರ್ಥವಾಗುತ್ತವೆ.

( ಸಣ್ಣ ಉದಾಹರಣೆ : ಡಾ ರಾಜ್‌ ನಟನೆಯ ಸಂಧ್ಯಾರಾಗ ಚಿತ್ರದ ಒಂದು ದೃಶ್ಯ ಹೀಗಿದೆ : ನರಸಿಂಹರಾಜು ಯಾವುದೋ ಪುಸ್ತಕ ಓದುತ್ತಾ ಬಾಗಿಲಲ್ಲೇ ನಿಂತಿರುತ್ತಾರೆ. ಆಗ ಅದೇ ದಿಕ್ಕಿನಲ್ಲಿ ಬರುವ ಮುಂಗೋಪಿ,  ಉದಯಕುಮಾರ್‌ ಅಡ್ಡ ಬಂದ ನರಸಿಂಹರಾಜುಗೆ  ́ ಒದೀತೀನಿ ನೋಡು ಕತ್ತೆ ʼ ಎಂದು ಬೈಯ್ಯುತ್ತಾನೆ. ಆಗ ನರಸಿಂಹರಾಜು ʼ ಒದೆಯೋನು ನೀನು ಕತ್ತೆ ನಾನಾ,,,,ʼ ಎನ್ನುತ್ತಾನೆ. ಪ್ರೇಕ್ಷಕರು ನಗೆಗಡಲಲ್ಲಿ ಮಿಂದೇಳುತ್ತಾರೆ )

ಹೀಗೆ ವಿಕಾಸದತ್ತ ಸಾಗುತ್ತಿದ್ದ ಭಾರತೀಯ ಸಮಾಜವನ್ನು ತಳಮಟ್ಟದವರೆಗೂ ಪ್ರಭಾವಿಸುವ ಭೌತಿಕ, ಬೌದ್ಧಿಕ ಶಕ್ತಿ ಇರುವ ಮುಖ್ಯವಾಹಿನಿಯ ಸಂವಹನ ಮಾಧ್ಯಮಗಳು ಸಾರ್ವಜನಿಕ ಹಿಂಸೆ ಮತ್ತು ಕ್ರೌರ್ಯವನ್ನು ರಂಜನೀಯಗೊಳಿಸಿದ್ದೇ ಅಲ್ಲದೆ, Romanticise ಮಾಡಿ, ವೈಭವೀಕರಿಸಿದ ಪರಿಣಾಮವನ್ನು ನಾವಿಂದು ಎದುರಿಸುತ್ತಿದ್ದೇವೆ. ಇದರ ವಿಸ್ತೃತ ಸಾಂಸ್ಥಿಕ ಆಯಾಮವನ್ನು ಧರ್ಮ-ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಸಕ್ರಿಯವಾಗಿರುವ ಸಂಘಪರಿವಾರದ ಗೋರಕ್ಷಕ ಪಡೆಗಳು, ಗುಂಪುಥಳಿತದ ಕಾರ್ಯಪಡೆಗಳು ಮತ್ತು ಮುಸ್ಲಿಂ ಸಮುದಾಯಗಳಲ್ಲೂ ಇರುವ ಧರ್ಮ ರಕ್ಷಕರ ಗುಂಪುಗಳಲ್ಲಿ ಗುರುತಿಸಬಹುದು. ಗೋರಕ್ಷಣೆಯ ಜವಾಬ್ದಾರಿಯನ್ನು ಈ ಗುಂಪುಗಳಿಗೇ ನೀಡಿರುವ ಸರ್ಕಾರಗಳು ಒಂದೆಡೆಯಾದರೆ, ಸ್ವತಃ  ನ್ಯಾಯ ವಿತರಣೆ ಮಾಡುವ ಈ ಪಡೆಗಳಿಗೆ ಮಾನ್ಯತೆ ನೀಡುವ ಒಂದು ಕಲಿತ-ಸುಶಿಕ್ಷಿತ ಹಿತವಲಯದ ಸಮಾಜವೂ ನಮ್ಮ ನಡುವೆ ಇದೆ ಅಲ್ಲವೇ ? ಆದರೆ ಇಲ್ಲಿ ಬಲಿಯಾಗುತ್ತಿರುವುದು ಸಾರ್ವಜನಿಕರ ಕಾನೂನು ಪ್ರಜ್ಞೆ, ಮನುಜ ಸೂಕ್ಷ್ಮತೆ ಮತ್ತು ನ್ಯಾಯ ಪ್ರಜ್ಞೆ ಅಲ್ಲವೇ ?

ಈ ವಿದ್ಯಮಾನ ಮೂರು ದಶಕಗಳನ್ನು ಪೂರೈಸಿದೆ. ಆದರೆ ಇಂದಿಗೂ ಸಹ ಇದನ್ನು ಒಂದು ಗಂಭೀರ ಸಾಮಾಜಿಕ ವಿಚಾರ ಎಂದು ಭಾವಿಸಿ ಚರ್ಚೆಗೊಳಪಡಿಸುವ ಪ್ರಯತ್ನಗಳು ಪ್ರಗತಿಪರರ ನಡುವೆಯೂ ನಡೆದಿಲ್ಲ ಎನ್ನುವುದು ವಾಸ್ತವ. ಸಂಘಪರಿವಾರದಿಂದ ಅಲ್ಪಸಂಖ್ಯಾತರು ದಾಳಿಗೊಳಗಾದಾಗ, ಮೇಲ್ಜಾತಿಯವರಿಂದ ದಲಿತರು ಹಲ್ಲೆಗೀಡಾದಾಗ, ಅಸಹಾಯಕ ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡುವಂತಹ ಕ್ರೂರ ಪ್ರಕರಣಗಳು ನಡೆದಾಗ ನಮ್ಮ ಪ್ರಜ್ಞೆ ಧಿಗ್ಗನೆದ್ದುಬಿಡುತ್ತದೆ. ಆದರೆ ಇದು ಇನ್ನೂ ಆಳವಾದ ಸಾಮಾಜಿಕ ವ್ಯಾಧಿ (Deeper Social Malaise) ಎಂದು ನಿರ್ವಚಿಸಬೇಕಾದ, ನಿಷ್ಕರ್ಷೆ ಮಾಡಬೇಕಾದ ಅಗತ್ಯತೆಯನ್ನು ಪ್ರಜ್ಞಾವಂತ ನಾಗರಿಕ ಸಮಾಜ (Conscious Civil Society) ಮನಗಾಣುವುದರಲ್ಲಿ ವಿಫಲವಾಗಿದೆ. ಪ್ರಸ್ತುತ ವಾತಾವರಣದಲ್ಲಿ ರಾಜಕೀಯ ಪಕ್ಷಗಳಿಂದ, ಸಿನೆಮಾಗಳ ಮೂಲಕ ಈ ಪ್ರಯತ್ನವನ್ನು ನಿರೀಕ್ಷಿಸಲೂ ಆಗುವುದಿಲ್ಲ. ಆದರೆ ಸಾಮಾಜಿಕ ವಿಕಾಸ, ಸಾಂವಿಧಾನಿಕ ನ್ಯಾಯ ಮತ್ತು ಸಮಸಮಾಜಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಗಳಲ್ಲಿ ಈ ಚಿಂತನೆ ಮೂಡಲೇಬೇಕಲ್ಲವೇ ?

ಸಾಮಾಜಿಕ ಜವಾಬ್ದಾರಿಯಾಗಿ,,,,

ʼಸಾರ್ವಜನಿಕ ನ್ಯಾಯ ನಿರ್ವಹಣೆ ʼ ಎನ್ನುವುದು ಸಾಂಸ್ಥಿಕ ರೂಪ ಪಡೆದುಕೊಂಡಾಗ ಈ ಸಮಸ್ಯೆಯೂ ಸಹ ಸಾರ್ವತ್ರಿಕ ರೂಪ ಪಡೆದುಕೊಳ್ಳುತ್ತದೆ. ಈ ಸಾಂಸ್ಥೀಕರಣವನ್ನು ಇಂದಿಗೂ ಖಾಪ್‌ ಪಂಚಾಯತ್‌ಗಳಲ್ಲಿ ಗುರುತಿಸಬಹುದು. ಕರ್ನಾಟಕದಲ್ಲೂ (ಚಾಮರಾಜನಗರ-ಕೊಳ್ಳೇಗಾಲ-ಕೊಪ್ಪಳ –ಉತ್ತರ ಕರ್ನಾಟಕದ ಹಲವೆಡೆ) ಸ್ಥಳೀಯ ಪ್ರಬಲ ಸಮಾಜಗಳು , ಸಾಮಾನ್ಯವಾಗಿ ಮೇಲ್ಜಾತಿ ಸಮುದಾಯಗಳು, ಇಂತಹ ನ್ಯಾಯ ವ್ಯವಸ್ಥೆಯನ್ನು ಇಂದಿಗೂ ಅನುಸರಿಸುತ್ತಲೇ ಬಂದಿವೆ. ಸಾಮಾಜಿಕ ಬಹಿಷ್ಕಾರ ಹೇರುವುದು ಈ ವ್ಯವಸ್ಥೆಯಲ್ಲಿನ ಕ್ರೌರ್ಯದ ಒಂದು ಮುಖ. ಇದನ್ನು ಕಂಡೂ ಕಾಣದಂತೆ ಮುನ್ನಡೆದಿರುವ ಸಮಾಜ, ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ ಮತ್ತು ಸೋದರತ್ವದ ಪ್ರಗತಿಪರ ಘೋಷಣೆಗಳಲ್ಲಿ ಮುಳುಗಿದೆ. ಇದರರ್ಥ ನಾವು ಡಾ. ಬಿ. ಆರ್.‌ ಅಂಬೇಡ್ಕರ್‌ ಅವರನ್ನು ಅಂತರ್ಗತಗೊಳಿಸಿಕೊಂಡಿಲ್ಲ ಎಂದೇ ಅಲ್ಲವೇ ?

ಮಲ್ಪೆಯಲ್ಲಿ ಮೀನು ಕದ್ದ ಆರೋಪ ಹೊತ್ತ ಮಹಿಳೆಯಲ್ಲಿ ನಮಗೆ ಒಂದು ದುರ್ಬಲ-ಅಸಹಾಯಕ ಸಮಾಜವೂ, ಆಕೆಯನ್ನು ಮರಕ್ಕೆ ಕಟ್ಟಿ ಹೊಡೆಯುವ ಸಮಾಜದಲ್ಲಿ ಅಮಾನುಷ ಕ್ರೌರ್ಯವೂ, ಇದರ ಬಗ್ಗೆ ಮೌನ ವಹಿಸುವ ರಾಜಕೀಯ ನಾಯಕರು-ಪಕ್ಷಗಳಲ್ಲಿ ಶೂನ್ಯ ಸಂವೇದನೆಯೂ ನಮಗೆ ಕಂಡುಬಂದರೆ, ಆಗ ನಮ್ಮ ಸಾರ್ವಜನಿಕ ಪ್ರಜ್ಞೆ ಮತ್ತಷ್ಟು ಮೊನಚಾಗಲು ಸಾಧ್ಯ. ಇದು ಜಾತಿ ಮತಗಳ ಎಲ್ಲೆ ಮೀರಿದ ಒಂದು ಗಂಭೀರ ಸಾಮಾಜಿಕ ಚಿಂತನೆಯಾಗಿ ನಮ್ಮ ನಡುವೆ ಚರ್ಚೆಗೊಳಗಾಗಬೇಕಿದೆ. ʼ ಕಾನೂನು ಕೈಗೆತ್ತಿಕೊಳ್ಳುವ ʼ ಅಥವಾ ಸ್ಥಳದಲ್ಲೇ ʼ ನ್ಯಾಯ ನಿರ್ಣಯ ʼ ಮಾಡುವ ಅಥವಾ ʼ ತಪ್ಪು ಮಾಡಿದವರನ್ನು ಸಾರ್ವಜನಿಕರೇ ಶಿಕ್ಷಿಸುವ ʼ ಪ್ರವೃತ್ತಿ ಮಧ್ಯಕಾಲೀನ ಅಥವಾ ಪ್ರಾಚೀನ ಸಮಾಜದ ಒಂದು ಪಳೆಯುಳಿಕೆ. ಇದು ಪ್ರಜಾಪ್ರಭುತ್ವ-ಸಂವಿಧಾನ ವಿರೋಧಿಯೂ ಹೌದಲ್ಲವೇ ?  ಇದನ್ನು ಪೋಷಿಸುವ ಮತ್ತು ಮೌನ ಸಮ್ಮತಿಯ ಮೂಲಕ ಪ್ರೋತ್ಸಾಹಿಸುವ ಮನಸ್ಥಿತಿಯ ವಿರುದ್ಧ ಪ್ರಜ್ಞಾವಂತ ಸಮಾಜ ಸಮರ ಸಾರುವುದು ಇವತ್ತಿನ ತುರ್ತು. ಇಲ್ಲಿ ನಮಗೆ ದಾರಿ ತೋರುವ ದಾರ್ಶನಿಕರು ಅಂಬೇಡ್ಕರಾದಿಯಾಗಿ ಹಲವರಿದ್ದಾರೆ. ಅವರತ್ತ ನೋಡುವ ವ್ಯವಧಾನ ನಮ್ಮೊಳಗೆ ಇರಬೇಕಷ್ಟೇ.

ಇದನ್ನೂ ನೋಡಿ: ವರ್ತಮಾನದಲ್ಲಿ ಸುಳ್ಳಿನ ಇತಿಹಾಸ ಸೃಷ್ಟಿಸುತ್ತಿರುವ ಆರೆಸ್ಸೆಸ್…

Donate Janashakthi Media

Leave a Reply

Your email address will not be published. Required fields are marked *