ಲಸಿಕೆ ನೀಡಲು ಹಳ್ಳಿ ಹಳ್ಳಿಗಳಿಗೆ ಸಂಚರಿಸುವ ಬಸ್ಸಿಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು : ಕೊರೊನಾ ಮೂರನೇ ಅಲೆಯು ಎದುರಾಗದಂತೆ ತಡೆಯುವ ನಿಟ್ಟಿನಲ್ಲಿ ಲಸಿಕೆ ಒಂದೇ ಪರಿಹಾರವಾಗಿದೆ. ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿಯಾಗಿ ಲಸಿಕೆ ನೀಡುವಿಕೆಗಾಗಿ ನಾರಾಯಣ ಹೆಲ್ತ್ ಸಹಯೋಗದೊಂದಿಗೆ ವೋಲ್ವೋ ಸಂಸ್ಥೆ ಲಸಿಕಾ ವಾಹನ ತಯಾರಿಸಿದ್ದು, ಹಳ್ಳಿ ಹಳ್ಳಿಗಳಿಗೆ ತೆರಳಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಮುಂದಾಗಿದೆ.

ಉಚಿತ ಕೋವಿಡ್ ಲಸಿಕಾ ವಾಹನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಗೃಹ ಕಚೇರಿ ಕೃಷ್ಣಾದಲ್ಲಿ‌ ವ್ಯಾಕ್ಸಿನ್ ಆನ್ ವ್ಹೀಲ್ ಹೆಸರಿನ ಲಸಿಕೆ ನೀಡುವ ವಾಹನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಲಸಿಕೆ ನೀಡುವ ಸ್ಥಳ, ಪ್ರಥಮ ಚಿಕಿತ್ಸೆ ಸೌಲಭ್ಯ ಸೇರಿದಂತೆ ಸಂಪೂರ್ಣ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಬಸ್ಸಿನಲ್ಲಿನ ಸೌಲಭ್ಯಗಳು ಹಾಗೂ ಹಳ್ಳಿಗಳಿಗೆ ತೆರಳಿ ವ್ಯಾಕ್ಸಿನ್ ನೀಡುವ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಸ್ಸಿನ ವಿಶೇಷತೆಗಳು :

ಲಸಿಕಾ ಬಸ್ಸಿನಲ್ಲಿ ಕೋವಿಡ್ ವ್ಯಾಕ್ಸಿನ್ ಸಂರಕ್ಷಿಸಲು ಬೇಕಾದ ವ್ಯಾಕ್ಸಿನ್ ರೆಫ್ರಿಜರೇಟರ್​​​​ಗಳನ್ನು ಅಳವಡಿಸಲಾಗಿದೆ. ನಿತ್ಯ ಕೊಡಬೇಕಿರುವ ಲಸಿಕೆ ವಯಲ್ಸ್ ಅನ್ನು ಅದರಲ್ಲಿ ಸಂಗ್ರಹಿಸಲಿಡಲಾಗಿದೆ. ಕನಿಷ್ಠ 1 ವಯಲ್ಸ್​​​​ಗೆ ಆಗುವಷ್ಟು ಜನರು ಬಂದಾಗ ಮಾತ್ರ ರೆಫ್ರಿಜಿರೇಟರ್​​​ನಿಂದ ಲಸಿಕೆಯನ್ನು ಹೊರತೆಗೆದು ನೀಡಲಾಗುತ್ತದೆ. ಕನಿಷ್ಠ 10 ಜನರಿದ್ದಾಗ ಮಾತ್ರ ವಯಲ್ಸ್ ತೆರೆದು ಲಸಿಕೆ ನೀಡಲಾಗುತ್ತದೆ.

ಬಸ್ಸಿನ ಒಳಭಾಗದಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದು, ನಾಲ್ಕು ವ್ಯಾಕ್ಸಿನೇಷನ್ ಕೇಂದ್ರ ಇರಲಿದೆ. ಏಕಕಾಲಕ್ಕೆ ನಾಲ್ವರು ಲಸಿಕೆ ಪಡೆಯಬಹುದಾಗಿದೆ. ಲಸಿಕೆ ಪಡೆದ ವ್ಯಕ್ತಿಗಳಿಗೆ ಅಡ್ಡ ಪರಿಣಾಮ ಕಾಣಿಸಿಕೊಂಡಲ್ಲಿ ಪ್ರಥಮ ಚಿಕಿತ್ಸೆ ನೀಡಲು ಎರಡು ಬೆಡ್ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ಸಿಬ್ಬಂದಿಯ ಕ್ಯಾಬಿನ್ ಕೂಡ ಬಸ್ಸಿನಲ್ಲಿದೆ. ವೈದ್ಯಕೀಯ ಸಿಬ್ಬಂದಿ, ಲಸಿಕಾ ಸಿಬ್ಬಂದಿಯ ಅನುಕೂಲಕ್ಕಾಗಿ ಆಹಾರ ಬಿಸಿ ಮಾಡಲು ಓವನ್ ಸೌಲಭ್ಯ ಕಲ್ಪಿಸಿದ್ದು, ಕೆಮಿಕಲ್ ಟಾಯ್ಲೆಟ್ ಕೂಡ ಅಳವಡಿಸಲಾಗಿದೆ.

ಪ್ರತಿದಿನ ಕನಿಷ್ಠ 1 ರಿಂದ 2 ಸಾವಿರ ಡೋಸೇಜ್ ಲಸಿಕೆ ನೀಡಬೇಕೆನ್ನುವ ಗುರಿಯನ್ನು ಹೊಂದಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಬೇಕು ಎನ್ನುವ ಉದ್ದೇಶದೊಂದಿಗೆ ವ್ಯಾಕ್ಸಿನ್ ಆನ್ ವ್ಹೀಲ್ ಬಸ್ ಹಳ್ಳಿ ಹಳ್ಳಿಗಳನ್ನು ಸುತ್ತಲಿದೆ.

ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ:

ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಅಲ್ಲಿನ ಲಸಿಕಾ ಕೇಂದ್ರದಲ್ಲಿ ಸರಿಯಾಗಿ ಲಸಿಕೆ ಸಿಗದೆ ಇರುವುದು ಇದಕ್ಕೆ ಮುಖ್ಯ ಕಾರಣ. ಹಾಗಾಗಿ, ಲಸಿಕೆ ಕೊರತೆ ಇರುವ ಹಳ್ಳಿಗಳನ್ನೇ ಆಯ್ಕೆ ಮಾಡಿಕೊಂಡು ಅಲ್ಲಿಗೆ ತೆರಳಿ ಗ್ರಾಮ ಗ್ರಾಮಗಳಲ್ಲಿ ಲಸಿಕೆ ನೀಡುವ ಮೂಲಕ ಗುರಿ ಸಾಧಿಸಲು ಮುಂದಾಗಿದೆ.

ಉಚಿತ ಸೌಲಭ್ಯ:

ನಾರಾಯಣ ಹೆಲ್ತ್ ಮತ್ತು ವೋಲ್ವೋ ಸಹಭಾಗಿತ್ವದ ವ್ಯಾಕ್ಸಿನ್ ಆನ್ ವ್ಹೀಲ್ ಸಂಪೂರ್ಣ ಉಚಿತವಾಗಿರಲಿದೆ. ಕೋವಿಡ್ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡಲಾಗುತ್ತದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡಲಾಗುತ್ತದೆ. ಲಸಿಕೆ ಪಡೆಯದವರಿಗೂ ಮೊದಲ ಡೋಸ್ ಲಸಿಕೆ ನೀಡಲಾಗುತ್ತದೆ. ಲಸಿಕಾ ಬಸ್ಸಿನಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ತೆಗೆದುಕೊಂಡವರು ಬೇರೆ ಎಲ್ಲಿ ಬೇಕಾದರೂ ಎರಡನೇ ಡೋಸ್ ಪಡೆಯಬಹುದಾಗಿದ್ದು, ಆತಂಕವಿಲ್ಲದೆ ಜನರು ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ, ಬೆಂಗಳೂನ ಜನರು ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಿದ್ದಾರೆ. ಗ್ರಾಮೀಣ ಭಾಗದ ರೀಮೋಟ್ ಏರಿಯಾಗಳು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಲಸಿಕೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಹೀಗಾಗಿ, ಅಂತಹ ಸ್ಥಳಗಳ ಹಳ್ಳಿ ಭಾಗಗಳಿಗೆ ನಮ್ಮ ವಾಹನ ತೆರಳಿ ಲಸಿಕೆ ನೀಡಲಿದೆ ಎಂದರು.

ಶಾಲೆ ಆರಂಭಕ್ಕೆ ವರದಿ:

ಹಂತ-ಹಂತವಾಗಿ ಶಾಲೆ ಆರಂಭಕ್ಕೆ ಸಲಹೆ ನೀಡಿದ್ದೇವೆ. 1 ರಿಂದ 8ನೇ ತರಗತಿ ಶಾಲೆ ಆರಂಭದ ಬಗ್ಗೆ ಈಗಾಗಲೇ ಸರ್ಕಾರಕ್ಕೆ ತಿಳಿಸಲಾಗಿದೆ. ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ. ಸದ್ಯ 9 ರಿಂದ 12ನೇ ತರಗತಿಯವರೆಗೆ ಆರಂಭ ಮಾಡಲಾಗಿದ್ದು,ಅದರ ಪರಿಣಾಮವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಸರ್ಕಾರ ಪ್ರಾಥಮಿಕ ಶಾಲೆಗಳನ್ನು ಆರಂಭ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.

ಅಧಿಕ ಜನ ಸೇರುವ ಹಬ್ಬ ಬೇಡ :

ಗಣೇಶ ಹಬ್ಬ ಮಾತ್ರ ಅಲ್ಲ, ಗುಂಪು ಸೇರಿ ಯಾವುದೇ ಹಬ್ಬ ಮಾಡಿದರೂ ಸಮಸ್ಯೆಗಳು ಉಲ್ಬಣಗೊಳ್ಳಲಿದೆ. ಹಾಗಾಗಿ, ಎಚ್ಚರಿಕೆಯಿಂದ ಇರಬೇಕು. ಗಣೇಶೋತ್ಸವಕ್ಕೆ ಅನುಮತಿ ಕೊಡುವುದು, ಬಿಡುವುದು ಸರ್ಕಾರಕ್ಕೆ ಸೇರಿದ್ದು, ಈ ಬಗ್ಗೆ ನಾವೇನೂ ಹೆಚ್ಚಾಗಿ ತಿಳಿಸುವುದಿಲ್ಲ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *