ಅಹಮದಾಬಾದ್: ಗುಜರಾತ್ ರಾಜ್ಯದ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು ಬಿದ್ದು ಜನರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡಸಿದ ಗುಜರಾತ್ ಹೈಕೋರ್ಟ್ ಸೇತುವೆ ನವೀಕರಣಕ್ಕಾಗಿ ಗುತ್ತಿಗೆ ನೀಡಿದ ವಿಧಾನವನ್ನು ಖಂಡಿಸಿದೆ.
ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಕೈಗೊಂಡಿತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಮೂರ್ತಿ ಸಾರ್ವಜನಿಕ ಸೇತುವೆಯ ದುರಸ್ತಿ ಕಾಮಗಾರಿಗೆ ಟೆಂಡರ್ ಏಕೆ ಕರೆಯಲಿಲ್ಲ? ಏಕೆ ಬಿಡ್ ದುರಸ್ತಿಗೆ ಗುತ್ತಿದಾರರನ್ನು ಆಹ್ವಾನಿಸಿಲ್ಲ? ಎಂದು ಪ್ರಶ್ನಿಸಿದರು.
ಅಕ್ಟೋಬರ್ 30ರಂದು ಸಂಭವಿಸಿದ ಸೇತುವೆ ಕುಸಿತದಿಂದ 130ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದರು. ಈ ಘಟನೆಗೆ ಸರ್ಕಾರವೇ ಹೊಣೆ ಎಂದು ಆರೋಪಗಳು ಕೇಳಿ ಬಂದಿವೆ.
ಅಜಂತಾ ಗೋಡೆ ಗಡಿಯಾರ ಬ್ರಾಂಡ್‌ಗೆ ಹೆಸರುವಾಸಿಯಾದ ಒರೆವಾ ಗ್ರೂಪ್ ಗೆ ಮೊರ್ಬಿ ಪುರಸಭೆಯು 15 ವರ್ಷಗಳ ಗುತ್ತಿಗೆಯನ್ನು ನೀಡಿತ್ತು. ಸರ್ಕಾರಿ ಸಂಸ್ಥೆಯಾಗಿರುವ ಪುರಸಭೆಯು ಡೀಫಾಲ್ಟ್ ಮಾಡಿದೆ, ಇದು ಈಗ 135 ಜನರನ್ನು ಕೊಂದಿದೆ ಎಂದು ನ್ಯಾಯಾಲಯ ಹೇಳಿದೆ. ಇಂತಹ ಮಹತ್ವದ ಕೆಲಸದ ಒಪ್ಪಂದವನ್ನು ಕೇವಲ ಒಂದೂವರೆ ಪುಟಗಳಲ್ಲಿ ಹೇಗೆ ಪೂರ್ಣಗೊಂಡಿತು? ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಯಾವುದೇ ಟೆಂಡರ್ ಕರೆಯದೇ ರಾಜ್ಯದ ದೊಡ್ಡ ಮೊತ್ತವನ್ನು ಅಜಂತಾ ಕಂಪನಿಗೆ ನೀಡಲಾಗಿದೆಯೇ? ಎಂದು ವಿಚಾರಣೆ ನಡೆಸಿದ ನ್ಯಾಯಾಲಯವು, ಜೂನ್ 2017 ರ ನಂತರ [2008 ರಲ್ಲಿ ಸಹಿ ಮಾಡಿದ ಒಪ್ಪಂದ] ನವೀಕರಿಸದಿದ್ದರೂ ಸಹ ಸೇತುವೆಯನ್ನು ಕಂಪನಿಯು ಯಾವ ಆಧಾರದ ಮೇಲೆ ನಿರ್ವಹಿಸುತ್ತಿದೆ ಎಂದು ಕೋರ್ಟ್ ಸ್ಪಷ್ಟವಾಗಿ ಕೇಳಿದೆ. ಈ ದುರಂತದ ಬಗ್ಗೆ ನ್ಯಾಯಾಲಯದ ಗಮನಕ್ಕೆ ಬಂದಿದೆ ಮತ್ತು ಆರು ಇಲಾಖೆಗಳಿಂದ ಈ ಬಗ್ಗೆ ಉತ್ತರವನ್ನು ಕೇಳಿದೆ.