ಡೀಸೆಲ್‌ ಬೆಲೆ ಏರಿಕೆ ಪರಿಣಾಮ: ಲಂಗರು ಹಾಕಿದ ಶೇ. 50ರಷ್ಟು ಮೀನುಗಾರಿಕೆ ಬೋಟ್‌ಗಳು

ಮಂಗಳೂರು: ಏಪ್ರಿಲ್-ಮೇ ತಿಂಗಳು ವಾರ್ಷಿಕವಾಗಿ ಅತ್ಯಧಿಕ ಮೀನುಗಾರಿಗೆ ನಡೆಸುವ ಸಮಯ. ಇಂತಹ ಸಂದರ್ಭಗಳಲ್ಲಿ ಹವಾಮಾನ ವೈಪರೀತ್ಯಗಳು ಕಡಿಮೆ ಮತ್ತು ಇತರೆ ದಿನಗಳಿಗಿಂತ ಅತ್ಯಧಿಕ ಸಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಆದರೆ, ಗಗನಕ್ಕೇರುತ್ತಿರುವ ಡೀಸೆಲ್​ ಬೆಲೆಯಿಂದಾಗಿ ಈ ಬಾರಿ ಮೀನುಗಾರಿಕೆಗೆ ತಡೆಯೊಡ್ಡಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ತೈಲಬೆಲೆಗಳು ಹೆಚ್ಚಾಗುತ್ತಿರುವುದರಿಂದ ಕರಾವಳಿಯ ಪ್ರಮುಖ ವಹಿವಾಟಾದ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ. ಮೀನುಗಾರಿಕೆಗೆ ತೆರಳುವ ಆಳ ಸಮುದ್ರ ಬೋಟ್, ಪರ್ಷಿಯನ್​ ಬೋಟ್​ಗಳಿಗೆ ಡೀಸೆಲ್ ಅಗತ್ಯವಾಗಿದೆ. ಆಳಸಮುದ್ರಕ್ಕೆ ತೆರಳುವ ಬೋಟ್​ಗಳು ಲಕ್ಷಾಂತರ ರೂಪಾಯಿಗಳ ಡೀಸೆಲ್ ತುಂಬಿಸಿ‌‌ ಮೀನುಗಾರಿಕೆಗೆ ಹೋಗುತ್ತವೆ.

ಡೀಸೆಲ್ ವೆಚ್ಚವೂ ಸೇರಿದಂತೆ ಸುಮಾರು 5 ಲಕ್ಷ ರೂ. ವರೆಗೆ ಒಂದು ಬಾರಿ ಮೀನುಗಾರಿಕೆಗೆ ಖರ್ಚಾಗುತ್ತದೆ. ಆದರೆ, ಮೀನುಗಾರಿಕೆಗೆ ತೆರಳುತ್ತಿರುವ ಬೋಟ್​ಗಳಿಗೆ ಅಷ್ಟು ಪ್ರಮಾಣದ ಮೀನುಗಳು ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮತ್ಸೋದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ. ನಷ್ಟದ ಭೀತಿಯ ಹಿನ್ನೆಲೆಯಲ್ಲಿ ಬೋಟ್​ಗಳ ಮಾಲೀಕರು ಮೀನುಗಾರಿಕೆಗೆ ಬೋಟ್​ಗಳನ್ನು ಕಳುಹಿಸದೆ ಕಡಲ ತೀರದಲ್ಲಿ ಲಂಗರು ಹಾಕಿದ್ದಾರೆ.

ಮೀನುಗಾರಿಕೆಗೆ ತೆರಳಿದರೆ ಇಷ್ಟೇ ಪ್ರಮಾಣದ ಮೀನುಗಳು ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಮೀನುಗಳ ಲಭ್ಯತೆ ಮತ್ತು ಯಾವ ಮೀನು ಎಂಬುದರ ಮೇಲೆ ಒಂದು ಬೋಟ್​ನಲ್ಲಿ ಎಷ್ಟು ಮೌಲ್ಯದ ಮೀನು ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಸುಮಾರು 4 ಲಕ್ಷ ರೂಪಾಯಿನಿಂದ 7-8 ಲಕ್ಷ ವರೆಗೆ ಮೀನುಗಳು ಸಿಗುತ್ತವೆಯಾದರೂ ಇದು ಬೋಟ್ ಮಾಲೀಕರಿಗೆ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಪರಿಸ್ಥಿತಿ ಇರುವುದರಿಂದ ಲಾಭ- ನಷ್ಟ ಎರಡೂ ಈ ಉದ್ಯಮದಲ್ಲಿದೆ. ಇನ್ನು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವುದು ನಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಲಾಭಾಂಶವನ್ನು ಕಡಿಮೆ ಮಾಡಿದೆ.

ಮೀನುಗಾರಿಕಾ ಬೋಟ್​ಗೆ ಸರ್ಕಾರ ನೀಡುವ ಡೀಸೆಲ್ ಸಬ್ಸಿಡಿ ಸಕಾಲದಲ್ಲಿ ಕೈಸೇರುತ್ತಿಲ್ಲ. ಮೀನು ಮಾರಾಟದ ಹಣವು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕಾರ್ಮಿಕರ ವೇತನ, ಇತ್ಯಾದಿ ಖರ್ಚುಗಳನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಪಡೆದುಕೊಂಡಿರುವ ಸಾಲವನ್ನು ಕಟ್ಟಲಾಗದ ಪರಿಸ್ಥಿತಿ ಎದುರಾಗಿದೆ ಎಂದು ಬೋಟ್ ಮಾಲೀಕರು ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *