ಲಖಿಂಪುರ ಖೇರಿ ಹಿಂಸಾಚಾರ: ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಸುಪ್ರೀಂ ಸೂಚನೆ

ನವದೆಹಲಿ: ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಕಾರ್ಯವೈಖರಿಯು ಅತೃಪ್ತಿಯಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಂಸಾಚಾರ ಪ್ರಕರಣದ ತನಿಖೆಯನ್ನು ನಡೆಸಲು ಬೇರೆ ರಾಜ್ಯದ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಯೊಬ್ಬರ ಉಸ್ತುವಾರಿಯಲ್ಲಿ ನಡೆಸಬೇಕು ಎಂದೂ ಸಲಹೆ ಮಾಡಿದೆ.

ಇಂದು ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠವು ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೇಮಿಸಿರುವ ನ್ಯಾಯಾಂಗ ಆಯೋಗದ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದು ಹೇಳಿದೆ.

ಇದನ್ನು ಓದಿ: ಲಖಿಂಪುರ ಖೇರಿ ಹಿಂಸಾಚಾರ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್‌

ಅಲ್ಲದೆ, ಬೇರೆ ರಾಜ್ಯದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ತನಿಖೆಯ ಮೇಲ್ವಿಚಾರಣೆ ನಡೆಸಬೇಕೆಂದು ಹೇಳಿದ್ದು, ತನಿಖೆಯ ಉಸ್ತುವಾರಿ ಹೊಣೆಯನ್ನು ವಹಿಸಲು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ರಾಕೇಶ್ ಕುಮಾರ್ ಜೈನ್‌ ಅಥವಾ ರಂಜಿತ್‌ ಸಿಂಗ್ ಅವರ ಹೆಸರನ್ನೂ ಪೀಠವು ಸೂಚಿಸಿತು.

ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸುವ ವಕೀಲ ಹರೀಶ್ ಸಾಳ್ವೆ ಈ ಕುರಿತಂತೆ ಸರ್ಕಾರದಿಂದ ಸೂಚನೆ ಪಡೆಯುವುದಾಗಿ ತಿಳಿಸಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠವು ನವೆಂಬರ್ 12ಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್ ನ್ಯಾಯಪೀಠ ವಿಚಾರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶ(ಯುಪಿ) ಸರ್ಕಾರಕ್ಕೆ ಘಟನೆಗೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿಗಳನ್ನು ಒದಗಿಸಲು ಕಾಲಾವಕಾಶ ನೀಡಿದರೂ ಸಹ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಧೀಶರು ಗರಂ ಆದರು. ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಮತ್ತು ಯಾವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸ್ಥಿತಿ ವರದಿಯಲ್ಲಿ ಪಟ್ಟಿ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿತ್ತು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ತನಿಖೆಯಲ್ಲಿ ಕಳಪೆ ಪ್ರಗತಿಯ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಕೆಲವು ಸಾಕ್ಷಿಗಳನ್ನು ಪರೀಕ್ಷಿಸಲಾಗಿದೆ ಎಂದು ಹೇಳುವುದನ್ನು ಬಿಟ್ಟರೆ ಸ್ಥಿತಿ ವರದಿಯಲ್ಲಿ ಏನೂ ಆಗಿಲ್ಲ. ನಾವು 10 ದಿನಗಳನ್ನು ನೀಡಿದ್ದೇವೆ. ಲ್ಯಾಬ್ ವರದಿಗಳು ಸಹ ಬಂದಿಲ್ಲ. ಇದು ನಾವು ನಿರೀಕ್ಷಿಸಿದ ರೀತಿಯಲ್ಲಿ ನಡೆಯುತ್ತಿಲ್ಲ” ಎಂದು ನ್ಯಾಯಪೀಠ ವಿವರಿಸಿದೆ.

ಇದನ್ನು ಓದಿ: ಲಖಿಂಪುರ್ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಸೇರಿ ಇತರರ ವಿರುದ್ಧ ಎಫ್ಐಆರ್

ಹಿಂಚಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಒಂದು- ರೈತರ ಸಾವಿನ ಬಗ್ಗೆ, ಮತ್ತೊಂದು- ಹಿಂಸಾಚಾರದಲ್ಲಿ ಅಸುನೀಗಿದ ರಾಜಕೀಯ ಕಾರ್ಯಕರ್ತರ ಬಗ್ಗೆ ಹಾಗೂ ಮೂರನೆಯದು- ಪತ್ರಕರ್ತರೊಬ್ಬರ ಸಾವಿನ ಬಗ್ಗೆ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ನ್ಯಾಯಾಲಯ ಮೂರು ಎಫ್‌ಐಆರ್‌ಗಳಲ್ಲಿನ ತನಿಖೆಯು ಪರಸ್ಪರ ಸ್ವತಂತ್ರವಾಗಿರಬೇಕಿದ್ದು ಒಂದು ಘಟನೆಯ ಸಾಕ್ಷಿಗಳನ್ನು ಮತ್ತೊಂದು ಘಟನೆಯ ಆರೋಪಿಗಳ ರಕ್ಷಣೆಗೆ ಬಳಸಬಾರದು ಎಂದು ಸೂಚಿಸಿತು.

ಪ್ರಕರಣದಲ್ಲಿ ಎರಡು ಎಫ್‌ಐಆರ್‌ಗಳು ಒಬ್ಬ ನಿರ್ದಿಷ್ಟ ಆರೋಪಿಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂದು ಪ್ರಾಥಮಿಕವಾಗಿ ತೋರುತ್ತಿದೆ ಎಂದು ಹೇಳಲು ನಾವು ವಿಷಾದಿಸುತ್ತೇವೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

“ಈಗ ಎರಡು ಎಫ್‌ಐಆರ್‌ಗಳಿವೆ ಎಂದು ಹೇಳಲಾಗುತ್ತಿದ್ದು, ಒಂದು ಎಫ್‌ಐಆರ್‌ನಲ್ಲಿ ಸಂಗ್ರಹಿಸಿದ ಸಾಕ್ಷ್ಯವನ್ನು ಮತ್ತೊಂದಕ್ಕೆ ಬಳಸಲಾಗುತ್ತಿದೆ. ಎಫ್‌ಐಆರ್ ಸಂಖ್ಯೆ 220ರಲ್ಲಿರುವ ಸಾಕ್ಷ್ಯಗಳನ್ನು ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ” ಎಂದು ನ್ಯಾಯಪೀಠ ಹೇಳಿದೆ.

ಇದನ್ನು ಓದಿ: ಹಿಂಸಾಚಾರ ಪ್ರಕರಣ: ಯುಪಿ ಸರ್ಕಾರದ ಕ್ರಮ ತೃಪ್ತಿದಾಯಕವಾಗಿಲ್ಲವೆಂದ ಸುಪ್ರೀಂ ಕೋರ್ಟ್

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅಕ್ಟೋಬರ್‌ 03ರಂದು ಲಖಿಂಪುರ ಜಿಲ್ಲೆಯ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿ ರೈತರ ಸಾವಿಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಘಟನೆಯ ದಿನದಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿ ವಿರೋಧಿಸಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿದ್ದು, ನಾಲ್ವರು ರೈತರು ಮೃತಪಟ್ಟಿದ್ದರು. ಗಂಭೀರ ಘಟನೆಯ ನಂತರ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ವಾಹನ ಚಾಲಕ ಹಾಗೂ ಸ್ಥಳೀಯ ಪತ್ರಕರ್ತರೊಬ್ಬರು ಹಿಂಸಾಚಾರದಲ್ಲಿ ಮೃತಪಟ್ಟಿದ್ದರು.

ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ಒಟ್ಟು ಎಂಟು ಜನರು ಕೊಲ್ಲಲ್ಪಟ್ಟರು. ಶಾಂತಿಯುತ ರೈತರ ಹೋರಾಟದ ವೇಳೆ ಕಾರು ಚಲಾಯಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆದವು. ಆದರೆ ಆಶಿಶ್ ಮಿಶ್ರಾ ಅವರನ್ನು ಪ್ರಕರಣದಿಂದ ಹೊರತರಲು ಹಲವಾರು ಸಾಕ್ಷಿಗಳನ್ನು ಹುಟ್ಟುಹಾಕಲಾಗುತ್ತಿದೆ ಎನ್ನುವ ಆರೋಪವಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಿಚಾರಣೆ ವೇಳೆ ಸರ್ಕಾರದ ನಡೆಯು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *