ಲಕ್ನೋ: ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಜಿಲ್ಲೆಯ ಖೇರಿ ಗ್ರಾಮದಲ್ಲಿ ಅಕ್ಟೋಬರ್ 03ರಂದು ನಡೆದ ಹಿಂಸಾಚಾರ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಸೇರಿದಂತೆ 13 ಬಂಧಿತ ಆರೋಪಿಗಳ ವಿರುದ್ಧ ಕೊಲೆ ಯತ್ನದ ಆರೋಪವನ್ನು ದೃಢಪಟ್ಟಿದೆ ಎಂದು ತಿಳಿಸಿದ್ದು, ಈ ಘಟನೆ ಪೂರ್ವ ಯೋಜಿತ ಕೃತ್ಯವಾಗಿದೆ ಎಂದು ತಿಳಿಸಿದೆ.
ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿಸಿದ ಘಟನೆ ಆಕಸ್ಮಿಕವಲ್ಲ, ಅದು ‘ಪೂರ್ವ ನಿಯೋಜಿತ’ ಎಂದು ಎಸ್‌ಐಟಿ ಹೇಳಿದೆ. ಇದರಿಂದ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣ, ಈಗ ಮತ್ತೆ ಸಂಚಲನ ಮೂಡಿಸಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ಜೈಲಿನಲ್ಲಿದ್ದಾರೆ.
ಎಸ್‌ಐಟಿ 13 ಆರೋಪಿಗಳ ವಿರುದ್ಧ ಹೊಸ ಸೆಕ್ಷನ್‌ಗಳನ್ನು ಸೇರಿಸಿ, ಅವರ ಅಪರಾಧವನ್ನು ಕೊಲೆ ಯತ್ನದ ಅಡಿಯಲ್ಲಿ ಶಿಕ್ಷಾರ್ಹಗೊಳಿಸಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ಮುಂದೆ ಅರ್ಜಿ ಸಲ್ಲಿಸಿದೆ. ಐಪಿಸಿ ಸೆಕ್ಷನ್ 279, 338 ಮತ್ತು 304ಎ ಬದಲಿಗೆ ವಾರಂಟ್‌ನಲ್ಲಿ ಹೊಸ ಸೆಕ್ಷನ್‌ಗಳನ್ನು ಸೇರಿಸಲು ಎಸ್‌ಐಟಿ ನ್ಯಾಯಾಲಯದ ಮೊರೆ ಹೋಗಿದೆ.
ತನಿಖೆಯ ಆಧಾರದ ಮೇಲೆ ಎಸ್‌ಐಟಿ, ಕೊಲೆ ಯತ್ನ, ಸ್ವಯಂಪ್ರೇರಣೆಯಿಂದ ಅಪಾಯಕಾರಿ ಆಯುಧಗಳಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು, ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳ ಆರೋಪಗಳನ್ನು ಸೇರಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದೆ. ಘಟನೆಯು ಉದ್ದೇಶಪೂರ್ವಕ ಕೃತ್ಯವಾಗಿದ್ದು, ನಿರ್ಲಕ್ಷ್ಯ ಅಥವಾ ನಿರ್ಲಕ್ಷತನದಿಂದ ಸಂಭವಿಸಿದಲ್ಲ ಎಂದು ಎಸ್‌ಐಟಿ ತನಿಖಾ ಅಧಿಕಾರಿ ವಿದ್ಯಾರಾಮ್ ದಿವಾಕರ್ ಹೇಳಿದ್ದಾರೆ.
ಅಕ್ಟೋಬರ್ 3ರಂದು ರೈತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಹಿಂದಿನಿಂದ ಬಂದ ಎಸ್‌ಯುವಿ ಹರಿದ ಪರಿಣಾಮ ನಾಲ್ವರು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಈ ವಾಹನ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿದ್ದು, ಆಶೀಶ್ ಮಿಶ್ರಾ ಅವರೇ ವಾಹನ ಚಲಾಯಿಸುತ್ತಿದ್ದರು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದರು. ಇದರ ಬಳಿಕ ಆಶೀಶ್ ಮಿಶ್ರಾ ಸ್ಥಳದಿಂದ ಪರಾರಿಯಾಗಿದ್ದರು. ಆಕ್ರೋಶಗೊಂಡ ಜನರು ವಾಹನಕ್ಕೆ ಬೆಂಕಿ ಹಚ್ಚಿದ್ದರು.
ಘಟನೆಗೆ ಸಂಬಂಧಿಸಿದಂತೆ 13 ಮಂದಿ ಆರೋಪಿಗಳಾದ ಆಶೀಶ್ ಮಿಶ್ರಾ, ಲವಕುಶ್, ಆಶೀಶ್ ಪಾಂಡೆ, ಶೇಖರ್ ಭಾರ್ತಿ, ಅಂಕಿತ್ ದಾಸ್, ಲತೀಫ್, ಶಿಶುಪಾಲ್, ನಂದನ್ ಸಿಂಗ್, ಸತ್ಯಂ ತ್ರಿಪಾಠಿ, ಸುಮಿತ್ ಜೈಸ್ವಾಲ್, ಧರ್ಮೇಂದ್ರ ಬಂಜಾರಾ, ರಿಂಕು ರಾಣಾ ಮತ್ತು ಉಲ್ಲಾಸ್ ತ್ರಿವೇದಿ ಅವರನ್ನು ಬಂಧಿಸಲಾಗಿತ್ತು.
ಆರೋಪಿಗಳು ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿನೋದ್ ಶಾಹಿ ಅವರು ತನಿಖೆ ನಡೆಯುತ್ತಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು. ಇನ್ನೂ ಹೆಚ್ಚಿನ ಸಂಖ್ಯೆಯ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿದೆ ಎಂದು ಶಾಹಿ ಹೇಳಿದ್ದಾರೆ.
ಆರೋಪಿಗಳ ಮೇಲೆ ಘಟನೆಗೆ ಸಂಬಂಧಿಸಿದಂತೆ ಲಖಿಂಪುರ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೃತ ರೈತರ ಕುಟುಂಬದವರು ಆಶಿಶ್ ಮಿಶ್ರಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ. ಇನ್ನೊಂದು ಎಫ್‌ಐಆರ್ ಅನ್ನು ಲಖಿಂಪುರದ ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ಅವರು ನಂತರ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಹೆಸರಿಸದ ರೈತರ ವಿರುದ್ಧ ದಾಖಲಿಸಿದ್ದಾರೆ. ವೈರಲ್ ವಿಡಿಯೊಗಳಲ್ಲಿ, ಜೈಸ್ವಾಲ್ ರೈತರಿಗೆ ಗುದ್ದಿದ ಎಸ್‌ಯುವಿ ಒಂದರಿಂದ ಓಡುತ್ತಿರುವುದನ್ನು ಕಾಣಬಹುದು. ನಂತರ ಆಶಿಶ್ ಮಿಶ್ರಾ ಎಫ್‌ಐಆರ್‌ನಲ್ಲಿ ಸಹ ಆರೋಪಿಯಾಗಿ ಬಂಧಿಸಲಾಯಿತು. ಈ ಪ್ರಕರಣದ ಅರ್ಜಿಯನ್ನು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.