ಲಖಿಂಪುರ ಖೇರಿ ಪ್ರಕರಣ : ಆಶಿಶ್ ಗುಂಡು ಹಾರಿಸಿದ್ದು ನಿಜ – ವಿಧಿವಿಜ್ಞಾನ ವರದಿಯಲ್ಲಿ ದೃಢ

ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ರೈಫಲ್‌ನ ವಿಧಿವಿಜ್ಞಾನ ಪರೀಕ್ಷೆಯ ವರದಿ ಹೊರಬಂದಿದ್ದು ರೈಫಲ್‌ನಿಂದ ಗುಂಡು ಹಾರಿಸಿರುವುದು ದೃಢಪಟ್ಟಿದೆ ಎಂದು ಲಖಿಂಪುರ ಖೇರಿ ತನಿಖೆಗೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತನ ಹತ್ಯೆಯ ಆರೋಪ ಎದುರಿಸುತ್ತಿರುವ 13 ಆರೋಪಿಗಳಲ್ಲಿ ಆಶಿಶ್ ಮಿಶ್ರಾ ಅಲಿಯಾಸ್ ಮೋನು ಒಬ್ಬ. ರೈತರ ಮೇಲೆ ಹರಿದ ವಾಹನದಲ್ಲಿ ತಾವು ಇರಲಿಲ್ಲ ಎಂದು ಆಶಿಶ್‌ ತನಿಖೆಯ ವೇಳೆ ಹೇಳಿದ್ದರು. ಅಜಯ್‌ ಮಿಶ್ರಾ ಅವರೂ ಇದನ್ನು ಪುನರುಚ್ಚರಿಸಿದ್ದಾರೆ. ಆದರೆ, ಎಸ್‌ಯುವಿಯಲ್ಲಿ ಆಶಿಶ್‌ ಇದ್ದರು ಎಂದು ರೈತರು ಹೇಳಿದ್ದಾರೆ.

ಘಟನೆಯ ಹಿನ್ನಲೆ : ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು ರೈತರು ನಿಲ್ಲಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಅಜಯ್‌ ಮಿಶ್ರಾ ಅವರು ಹೇಳಿಕೆ ನೀಡಿದ್ದರು. ಅದರ ವಿರುದ್ಧ ಲಖಿಂಪುರ–ಖೇರಿಯ ತಿಕೋನಿಯಾ ಎಂಬಲ್ಲಿ ಕಳೆದ ತಿಂಗಳು ನೂರಾರು ರೈತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಲಾಗಿತ್ತು. ಅದರಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ಬಲಿಯಾಗಿದ್ದರು.

ಕೇಂದ್ರ ಸಚಿವ ಅಜಯ್ ಮಿಶ್ರಾ ಒಡೆತನದ ಮಹೀಂದ್ರ ಥಾರ್ ಎಸ್‌ಯುವಿ ವಾಹನ ಪ್ರತಿಭಟನಾನಿರತ ರೈತರ ಮೇಲೆ ವೇಗವಾಗಿ ಹರಿದು ನಾಲ್ವರು ರೈತರು ಸೇರಿದಂತೆ ಓರ್ವ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಇದರಿಂದ ಹಿಂಸಾಚಾರ ಭುಗಿಲೆದ್ದು ಮೂವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಈ ವೇಳೆ ಆಶಿಶ್ ಮಿಶ್ರಾ ವಾಹನ ಚಲಾಯಿಸುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ. ಜೊತೆಗೆ ಈ ವೇಳೆ ಗುಂಡು ಹಾರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದಾಗ್ಯೂ, ಶವಪರೀಕ್ಷೆಗಳು ಐವರಲ್ಲಿ ಯಾರಿಗೂ ಅಥವಾ ಆ ದಿನದ ನಂತರದ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಇತರ ಮೂವರಿಗೆ ಗುಂಡೇಟಿನಿಂದ ಗಾಯವಾಗಿಲ್ಲ ಎಂದು ದೃಢಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *