ಬೆಂಗಳೂರು: 120 ತಾಲ್ಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಕೇಂದ್ರ ಸರ್ಕಾರದ ಮಾನದಂಡದಂತೆ ಬರ ಘೋಷಣೆಗೆ ಈ ತಾಲ್ಲೂಕುಗಳ ಪ್ರತಿ ಹತ್ತು ಹಳ್ಳಿಗಳಲ್ಲಿ ಐದು ಪ್ರಮುಖ ಬೆಳೆಗಳ ಪರಿಸ್ಥಿತಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಹತ್ತು ದಿನಗಳ ಒಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾದ ಸಚಿವ ಸಂಪುಟ ಉಪ ಸಮಿತಿಯ ಸಭೆ ಮಂಗಳವಾರ ನಡೆಯಿತು.
ಇದನ್ನೂ ಓದಿ:ಕೇಂದ್ರದ ಮಾನದಂಡ ಆಧರಿಸಿ ಬರ ಪೀಡಿತ ಪ್ರದೇಶ ಘೋಷಣೆ:ಕಂದಾಯ ಸಚಿವ ಕೃಷ್ಣ ಬೈರೇಗೌಡ
ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯವೇ ಬರ ಘೋಷಿಸಬೇಕಾಗಿದೆ. ಮಳೆ ಕೊರತೆ,ಬೆಳೆಗಳ ಸ್ಥಿತಿ, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟವನ್ನು ಅವಲೋಕಿಸಿ ಬರ ಘೋಷಿಸಲಾಗುತ್ತದೆ. ಬರಪೀಡಿತ ತಾಲ್ಲೂಕುಗಳೆಂದು ಗುರುತಿಸಿದ ನಂತರ ಬೆಳೆ ಹಾನಿ ಪ್ರಮಾಣದ ಆಧಾರದಲ್ಲಿ ಬರ ವರ್ಗೀಕರಣ ಮಾಡಲಾಗುವುದು. ಹಾನಿಯೇ ಶೇ 50ಕ್ಕೂ ಹೆಚ್ಚಿದ್ದರೆ ಬರಪೀಡಿತ ಪ್ರದೇಶ ಗುರುತಿಸಿ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಆಗಸ್ಟ್ ತಿಂಗಳಲ್ಲಿ ಅನೇಕ ಭಾಗಗಳಲ್ಲಿ ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ಬಿತ್ತನೆಯಾದ ಕೆಲವು ಬೆಳೆಗಳು ತೇವಾಂಶ ಕೊರತೆ ಅನುಭವಿಸುತ್ತಿವೆ. ಮಳೆ ಕೊರತೆ ಮುಂದುವರಿದರೆ ಬೆಳೆಗಳು ಒಣಗುವ ಸಾಧ್ಯತೆಯಿದೆ. ಸೆಪ್ಟೆಂಬರ್‌ನ ಮಳೆ ಮುನ್ಸೂಚನೆ ಆಗಸ್ಟ್ ಅಂತ್ಯದಲ್ಲಿ ಸಿಗಲಿದೆ. ಕುಡಿಯುವ ನೀರಿಗೆ ಅಂಥ ಸಮಸ್ಯೆ ಇಲ್ಲ. 114 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ, 25 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಈಗಿನ ಮಾಹಿತಿ ಪ್ರಕಾರ ಸೆಪ್ಟೆಂಬರ್‌ನಲ್ಲೂ ಕಡಿಮೆ ಮಳೆಯಾಗುವ ಸೂಚನೆಯಿದೆ. ಮಳೆ ಕೊರತೆ ಮುಂದುವರಿದರೆ ಅದನ್ನು ಎದುರಿಸಲು ಸರ್ಕಾರ ಸನ್ನದ್ಧ ಆಗಬೇಕಿದೆ. ಈ ಬಗ್ಗೆ ಚರ್ಚಿಸಿದ್ದೇವೆ ಎಂದು ಸಚಿವರು ಹೇಳಿದರು.
ಕೆಲವು ತಾಲ್ಲೂಕುಗಳಲ್ಲಿ 15 ವಾರಗಳಿಗೆ ಸಾಕಾಗುವಷ್ಟು, ಕೆಲವು ತಾಲ್ಲೂಕುಗಳಲ್ಲಿ 30 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಇಲಾಖೆಯ ಯೋಜನೆಗಳ ಮೂಲಕ ರೈತರಿಗೆ ಮೇವಿನ ಬೀಜ ವಿತರಿಸಿ ಮೇವು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಬಿತ್ತನೆ ಕುರಿತು ಮಾಹಿತಿ ನೀಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಆಶ್ರಿತ ಬೆಳೆ ಬೆಳೆಯದಂತೆ ರೈತರಿಗೆ ಮನವಿ ಮಾಡಲಾಗಿದೆ. ಸದ್ಯ 15 ದಿನಗಳಿಗೊಮ್ಮೆ ಕಟ್ಟು ನೀರು ಪದ್ಧತಿಯಲ್ಲಿ ನೀರು ಕೊಡಲಾಗುತ್ತಿದ್ದು, ಮೂರು ತಿಂಗಳಿಗೆ ಕೊಡುವಷ್ಟು ಮಾತ್ರ ನೀರು ಲಭ್ಯವಿದೆ ಎಂದು ಹೇಳಿದರು.