ನವದೆಹಲಿ: ದೇಶದ ಮಧ್ಯಸ್ಥಿಕೆ ವ್ಯವಸ್ಥೆಯನ್ನು ಬಲಪಡಿಸಲು ಕಾನೂನು ಹಾಗೂ ನ್ಯಾಯಾಂಗ ಸುಧಾರಣೆಗಳು ನಡೆದಿದ್ದರೂ ಸಹ, ಭಾರತದಲ್ಲಿನ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ವ್ಯಾಜ್ಯಗಳಲ್ಲಿ ಭಾಗಿಯಾಗಿರುವ ಪಕ್ಷಕಾರರು ಇನ್ನೂ ದೇಶದ ಹೊರಗಿನ ಸ್ಥಳಗಳನ್ನು ಆಯ್ಕೆ ಮಾಡುತ್ತಿವೆ ಎಂದು ಫೆಬ್ರವರಿ 28ರಂದು ಗುಜರಾತ್ ಹೈಕೋರ್ಟ್ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಕವಲು ಹಾದಿಯಲ್ಲಿ ಸಾಂಸ್ಥಿಕ ಮಧ್ಯಸ್ಥಿಕೆ: ಸವಾಲುಗಳು ಮತ್ತು ಭವಿಷ್ಯ ಹೆಸರಿನ ಎರಡು ದಿನಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಜೆಐ ಸೂರ್ಯ ಕಾಂತ್ ಅಭಿಪ್ರಾಯಪಟ್ಟರು. ಭಾರತೀಯ
ಸವಾಲು ಇರುವುದು ಮಧ್ಯಸ್ಥಿಕೆ ಕಾರ್ಯಸಾಧುವೇ ಎಂಬುದರಲ್ಲಿ ಅಲ್ಲ, ಬದಲಿಗೆ ಭಾರತೀಯ ಸಂಸ್ಥೆಗಳು ಸಾಕಷ್ಟು ವಿಶ್ವಾಸ ಮೂಡಿಸುತ್ತಿವೆಯೇ ಎಂಬುದರಲ್ಲಿದೆ. ಮಧ್ಯಸ್ಥರ ನೇಮಕಾತಿಯಲ್ಲಿ ತಟಸ್ಥತೆ ಅತ್ಯಂತ ಮುಖ್ಯ. ವಿಶ್ವಾಸ ಮೂಡಿಸಲು ಪ್ರಕ್ರಿಯಾತ್ಮಕ ಸಮಗ್ರತೆ ಅಗತ್ಯವಿದೆ ಎಂದು ಅವರು ಹೇಳಿದರು. ಭಾರತೀಯ
ಮಧ್ಯಸ್ಥಿಕೆ ತೀರ್ಪುಗಳು ಜಾರಿಗೆ ಬರುವಂತೆ ನೋಡಿಕೊಳ್ಳುವುದು ಬಳಕೆದಾರರ ವಿಶ್ವಾಸದ ಕೇಂದ್ರ ಬಿಂದುವಾಗಿರುತ್ತದೆ. ಕೇವಲ ಕಾಗದದ ಮೇಲಿನ ನಿಯಮಗಳಿಂದ ವಿಶ್ವಾಸ ನಿರ್ಮಾಣವಾಗುವುದಿಲ್ಲ; ತೀರ್ಪಿನ ನಿರಂತರ, ಪಾರದರ್ಶಕ ಮತ್ತು ನ್ಯಾಯಸಮ್ಮತ ಜಾರಿ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ದುಡಿಯುವವರ ಆದಾಯ ಕಡಿಮೆಯಾಗುತ್ತಿದೆ, ಕುಳಿತು ತಿನ್ನುವವರ ಆದಾಯ ಹೆಚ್ಚುತ್ತಿದೆ – ಯು.ಬಸವರಾಜ
ವಿಚಾರಣಾ ಸಭಾಂಗಣಗಳು, ಡಿಜಿಟಲ್ ವ್ಯವಸ್ಥೆಗಳು ಹಾಗೂ ಗೌಪ್ಯತಾ ಭದ್ರತೆಯಂತಹ ಸಮಸ್ಯೆಗಳು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಇವೆ. ವಾಣಿಜ್ಯ ಕ್ಷೇತ್ರದಲ್ಲಿ ʼಸಮಯವೇ ಬಂಡವಾಳ, ನಿಶ್ಚಿತತೆಯೇ ನಗದುʼ ಎಂದರು.
ದೇಶದಲ್ಲಿ ಉಂಟಾಗುವ ವಾಣಿಜ್ಯ ವ್ಯಾಜ್ಯಗಳ ಪ್ರಮಾಣಕ್ಕೆ ಹೋಲಿಸಿದರೆ ಸಾಂಸ್ಥಿಕ ಮಧ್ಯಸ್ಥಿಕೆ ಇನ್ನೂ ಕಡಿಮೆ ಪ್ರಮಾಣದಲ್ಲಿದೆ. ಅನೇಕ ಪಕ್ಷಕಾರರು ಇನ್ನೂ ತಾತ್ಕಾಲಿಕ ಮಧ್ಯಸ್ಥಿಕೆ ಇಲ್ಲವೇ ಸಾಂಪ್ರದಾಯಿಕ ನ್ಯಾಯಾಂಗ ವಿಚಾರಣೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಧ್ಯಸ್ಥಿಕೆಗೆ ವಿಶೇಷ ಕಾನೂನು ಪರಿಣತಿ, ಪ್ರಕರಣ ನಿರ್ವಹಣಾ ಕೌಶಲ್ಯ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಅರಿವು ಅಗತ್ಯ ಎಂದ ಸಿಜೆಐ ಅವರು ಮಧ್ಯಸ್ಥಿಕೆದಾರ ತರಬೇತಿ, ಆಡಳಿತ ಸಾಮರ್ಥ್ಯ ನಿರ್ಮಾಣ ಹಾಗೂ ಅರ್ಹ ವೃತ್ತಿಪರರ ಬೆಳವಣಿಗೆಗೆ ಗಂಭೀರ ಹೂಡಿಕೆ ಅಗತ್ಯ ಎಂದರು.
ಭಾರತದ ಮಧ್ಯಸ್ಥಿಕೆ ಕ್ಷೇತ್ರದ ಪ್ರಗತಿಯನ್ನು ಅದರ ಹಿಂದಿನ ಸ್ಥಿತಿಯೊಂದಿಗೆ ಅಲ್ಲ, ಜಾಗತಿಕ ಪ್ರಮುಖ ಮಧ್ಯಸ್ಥಿಕೆ ಕೇಂದ್ರಗಳ ಮಾನದಂಡಗಳೊಂದಿಗೆ ತುಲನೆ ಮಾಡಬೇಕಿದೆ. ವೇಗವಾದ ಮತ್ತು ಪರಿಣಾಮಕಾರಿ ವ್ಯಾಜ್ಯ ಪರಿಹಾರ ನೀಡಬೇಕು ಎಂಬ ಪಕ್ಷಕಾರರ ನ್ಯಾಯಸಮ್ಮತ ನಿರೀಕ್ಷೆಗಳನ್ನು ದೇಶದ ಮಧ್ಯಸ್ಥಿಕೆ ಕ್ಷೇತ್ರ ನನಸು ಮಾಡಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ನೋಡಿ: ಧಾರವಾಡ | ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಕಾಂಗ್ರೆಸ್–ಬಿಜೆಪಿಗೆ ಎಚ್ಚರಿಕೆಯ ಸಂಕೇತ! Janashakthi Media
