ಕಟ್ಟಡ ಕಾರ್ಮಿಕರ ನಿರಂತರ ಹೋರಾಟದಿಂದ ಐತಿಹಾಸಿಕ ಗೆಲುವು ಸಾಧಿಸಿದ ಕಟ್ಟಡ ಕಾರ್ಮಿಕ ಚಳವಳಿ
ಶೈಕ್ಷಣಿಕ ಧನಸಹಾಯಕ್ಕಾಗಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB)ಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ 2021ರ ಅಧಿಸೂಚನೆಯಂತೆ ಬಾಕಿ ಇರುವ ಮೂರು ವರ್ಷಗಳ ಶೈಕ್ಷಣಿಕ ಧನಸಹಾಯ ವಿತರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಜನವರಿ 10, 2025ರಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕಾರ್ಮಿಕರು ಹೋರಾಟದ ಮೂಲಕ ಪಡೆದುಕೊಂಡಿರುವ ಸೌಲಭ್ಯಗಳನ್ನು ಪಡೆಯಲು ಮತ್ತು ಅವುಗಳನ್ನು ಉಳಿಸಿಕೊಳ್ಳಲು ನಿರಂತರವಾಗಿ ಹೋರಾಡುತ್ತಲೇ ಇರಬೇಕಾಗುತ್ತದೆ. ಈ ವಿಷಯದಲ್ಲಿ ಕಾರ್ಮಿಕರು ‘ನಿದ್ದೆಗೆ ಜಾರಿದರೆ’ ಅವರು ಗಳಿಸಿಕೊಂಡ ಸೌಲಭ್ಯಗಳು ಸಿಗಲಾರವು ಎಂಬುದಕ್ಕೆ KBOCWWB ಒಂದು ಉದಾಹರಣೆಯಾಗಿದೆ.
-ಸಿ.ಸಿದ್ದಯ್ಯ
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (1948) ಹಾಗೂ ಸಂವಿಧಾನದ (21ಎ) ಅನ್ವಯ ಶಿಕ್ಷಣ ಒಂದು ಮೂಲಭೂತ ಹಕ್ಕು. ಆದರೆ, ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳಿಂದಾಗಿ ಇಂದು ಶಿಕ್ಷಣ ದುಬಾರಿಯಾಗಿದೆ. ಮುಕ್ತ ಆರ್ಥಿಕ ನೀತಿಯು ಶಿಕ್ಷಣವನ್ನು ಒಂದು ಮಾರಾಟದ ಸರಕನ್ನಾಗಿಸಿದೆ. ಸರ್ಕಾರಗಳು ತಮ್ಮ ಬಜೆಟ್ ಗಳಲ್ಲಿ ಸಾರ್ವಜನಿಕ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡುತ್ತಿಲ್ಲ. ಬಡವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದ ಪರಿಸ್ಥಿತಿಯನ್ನು ಇದು ತಂದಿಟ್ಟಿದೆ.
ಕಟ್ಟಡ ಕಾರ್ಮಿಕರ ಕುಟುಂಬದ ಮೇಲಿನ ಇಂತಹ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ನೀಡುವ ಸೌಲಭ್ಯ ಒದಗಿಸಲಾಗಿದೆ. ಶೈಕ್ಷಣಿಕ ಸಹಾಯಧನದ ಸೌಲಭ್ಯದ ಜೊತೆಗೆ, ಸದಸ್ಯರಿಗೆ ವೈಧ್ಯಕೀಯ ವೆಚ್ಚ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ, ಮನೆ ಕಟ್ಟಿಕೊಳ್ಳಲು ಧನಸಹಾಯ,ಪಿಂಚಣಿ ಸೇರಿದಂತೆ ಮಂಡಳಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ 19 ಬಗೆಯ ಸೌಲಭ್ಯಗಳು ಸಿಗುತ್ತವೆ.
ಶೈಕ್ಷಣಿಕ ಧನಸಹಾಯದಿಂದ ಮಂಡಳಿಯಲ್ಲಿ ನೊಂದಾಯಿತರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಒಂದಷ್ಟು ಸಹಕಾರಿಯಾಗುತ್ತಿದೆ. 2021 ರಿಂದ, ಆರ್ಥಿಕ ಹೊರೆಯ ನೆಪಗಳನ್ನು ಹೇಳುತ್ತ ಶೈಕ್ಷಣಿಕ ಧನಸಹಾಯ ನೀಡುವುದನ್ನು ಶೇ 65- ರಿಂದ 80 ರಷ್ಟು ಕಡಿತಗೊಳಿಸಿತ್ತು. 2021ರ ಅಧಿಸೂಚನೆ ಅನ್ವಯ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡುವಂತೆ ಕಾರ್ಮಿಕರು ತಮ್ಮ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಕಲ್ಯಾಣ ಮಂಡಳಿಯ ಕೇಂದ್ರ ಕಚೇರಿ ಎದುರು ಮತ್ತು ರಾಜ್ಯದ ಹಲವು ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೆ ಮಂಡಳಿಯ ಅಧಿಕಾರಿಗಳಾಗಲೀ, ಸಚಿವರು ಅಥವಾ ರಾಜ್ಯ ಸರ್ಕಾರದ ಮುಖ್ಯಸ್ಥರಾಗಲೀ ಕಿವಿಗೊಡಲಿಲ್ಲ.
ಕೋಟ್ಯಾಂತರ ರೂಪಾಯಿ ಅವ್ಯವಹಾರ
“19 ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಕಟ್ಟಡ ಕಾರ್ಮಿಕರಿಗಾಗಿ ಜಾರಿಗೊಳಿಸುತ್ತಿದೆ. ಆದರೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರು, ವೈದ್ಯಕೀಯ ತಪಾಸಣೆ ಹೆಸರಿನಲ್ಲಿ, ಮಕ್ಕಳಿಗೆ ಲ್ಯಾಪ್ ಟಾಪ್ ಮತ್ತು ಕಾರ್ಮಿಕರಿಗೆ ಕಟ್ಟಡ ನಿರ್ಮಾಣದ ಕೆಲಸದಲ್ಲಿ ಬಳಕೆಮಾಡುವ ಸಲಕರಣೆಗಳ ಖರೀದಿಯಲ್ಲಿ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರಗಳನ್ನು ಹಲವು ವರ್ಷಗಳಿಂದ ನಡೆಸುತ್ತಾ ತಮ್ಮ ಐಶಾರಾಮಿ ಜೀವನಕ್ಕೆ ಮಂಡಳಿಯ ನಿಧಿಯನ್ನು ಬಳಕೆ ಮಾಡಿಕೊಂಡಿದ್ದಾರೆ. ಕಲ್ಯಾಣ ಮಂಡಳಿಯು ತನ್ನ ಆಡಳಿತಾತ್ಮಕ ವೆಚ್ಚವನ್ನು ಕಾನೂನು ನಿಗದಿಪಡಿಸಿದ ಶೇ.5 ರಷ್ಟನ್ನು ಮೀರಿ, ಶೇ. 9 ರಿಂದ ಶೇ. 72 ರಷ್ಟು ಹೆಚ್ಚಾಗಿ ಖರ್ಚು ಮಾಡಿದೆ ಎಂದು ಸಿಎಜಿ ವರದಿ ಹೇಳಿದೆ. ಇದೂ ಸಾಲದೆಂಬಂತೆ, ಪೌಷ್ಠಿಕಾಂಶ ಪದಾರ್ಥಗಳು ಎಂಬ ಹೆಸರಿನಲ್ಲಿ ಮತ್ತು ಗಿಡಮೂಲಿಕೆ ಔಷಧಿಗಳು ಎಂಬ ಹೆಸರಿನಲ್ಲಿ ಅನಗತ್ಯವಾದ ವಸ್ತುಗಳನ್ನು ಖರೀದಿಸಿ ಕಾರ್ಮಿಕರಿಗೆ ವಿತರಣೆ ಮಾಡಲು ಮುಂದಾದರು. ಕಾರ್ಮಿಕರು ಇದನ್ನು ಪಡೆಯಲು ನಿರಾಕರಿಸಿದ ಅಥವಾ ಪಡೆದುಕೊಂಡರೂ ಅವುಗಳನ್ನು ಬಳಕೆ ಮಾಡದ ಸಾಕಷ್ಟು ಉದಾಹರಣೆಗಳಿವೆ.
ಇದನ್ನೂ ಓದಿ : ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಾವತಿಸಿ: ಹೈಕೋರ್ಟ್ ಮಹತ್ವದ ತೀರ್ಪು
ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಮಂಡಳಿಯ ಹಣದಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ಕಟ್ಟಡ ಕಾರ್ಮಿಕರಲ್ಲದವರಿಗೂ ಹಂಚಿಕೆ ಮಾಡಲಾಗಿದೆ. ಕೆಲವು ರಾಜಕಾರಣಿಗಳ ಜೊತೆ ಕೈಜೋಡಿಸಿದ ಮಂಡಳಿಯ ಅಧಿಕಾರಿಗಳು, ಆಹಾರ ಪದಾರ್ಥಗಳ ಕಿಟ್ ಗಳನ್ನು ಖರೀದಿಸಿ, ನೇರವಾಗಿ ರಾಜಕಾರಣಿಗಳಿಗೆ ಸರಭರಾಜು ಮಾಡಿದರು. ಇಂತಹ ಕಿಟ್ ಗಳ ಮೇಲಿದ್ದ ಮಂಡಳಿಯ ಹೆಸರನ್ನು ಮರೆಮಾಚಿ, ಶಾಸಕರು ಮತ್ತು ಅಂದಿನ ಆಡಳಿತ ಪಕ್ಷದ ಕೆಲ ರಾಜಕಾರಣಿಗಳು ತಮ್ಮದೇ ಹೆಸರುಗಳನ್ನು ಹಾಕಿಕೊಂಡು, ತಮ್ಮ ಹಿಂಬಾಲಕರಿಗೆ ಮತ್ತು ತಮ್ಮ ಬೆಂಬಲಿತ ಮತದಾರರಿಗೆ ಹಂಚಿಕೆ ಮಾಡಿರುವ ಸುದ್ದಿಗಳು ಮಾದ್ಯಮಗಳಲ್ಲಿ ಹರಿದಾಡಿದ್ದನ್ನು ನೋಡಿದ್ದೇವೆ. ನೈಜ ಫಲಾನುಭವಿಗಳಾದ ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಇತರರೂ ಕಸಿದುಕೊಂಡಿದ್ದಾರೆ. ಕಟ್ಟಡ ಕಾರ್ಮಿಕರಲ್ಲದ ಲಕ್ಷಾಂತರ ಜನರು ಮಂಡಳಿಯಲ್ಲಿ ನೊಂದಾಯಿತರಾಗಿ ಲೇಬರ್ ಕಾರ್ಡ್ ಪಡೆದಿದ್ದಾರೆ. ಚುನಾವಣಾ ಲಾಭಕ್ಕಾಗಿ ಅನರ್ಹರಿಗೆ ಕಾರ್ಡ್ ಗಳನ್ನು ಕೊಡಿಸುವಲ್ಲಿ ರಾಜಕಾರಣಿಗಳ ಪಾತ್ರವೂ ಇದೆ.
ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವಲ್ಲಿ, ವಿದ್ಯಾರ್ಥಿ ವೇತನ ವಿತರಣೆಯಲ್ಲಿ, ವಿವಿಧ ರೀತಿಯ ವಸ್ತುಗಳ ಖರೀದಿಗೆ ಟೆಂಡರ್ ಗಳನ್ನು ನೀಡುವಲ್ಲಿ, ನೇಮಕಾತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆದಿವೆ. ಈ ಭಷ್ಟಾಚಾರದಲ್ಲಿ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ಇದರ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ಖರೀದಿ ಟೆಂಡರ್ ಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಮತ್ತು ಇತರೆ ಕಟ್ಟಡ ಕಾರ್ಮಿಕ ಸಂಘಗಳು ಜೊತೆಗೂಡಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದವು.
ಹೈಕೋರ್ಟ್ ಗೆ ಅರ್ಜಿ
ಶೈಕ್ಷಣಿಕ ಧನಸಹಾಯ ಕಡಿತ ಮಾಡಿದ ಮಂಡಳಿಯು ಧನಸಹಾಯದ ಮೊತ್ತವನ್ನು 2023ರ ಶೈಕ್ಷಣಿಕ ವರ್ಷದಿಂದ ಶೇ. 60ರಿಂದ ಶೇ. 70ರಷ್ಟು ಕಡಿತಗೊಳಿಸಿತು. ಇದು ಕಾರ್ಮಿಕರನ್ನು ಮತ್ತಷ್ಟು ಸಿಟ್ಟಿಗೇಳಿಸಿತು. ಅವರು ಮತ್ತಷ್ಟು ಹೋರಾಟಗಳನ್ನು ನಡೆಸಿದರು. ಸರ್ಕಾರವು ಇದ್ಯಾವುದಕ್ಕೂ ಬಗ್ಗದಿದ್ದಾಗ, ಕಲ್ಯಾಣ ಮಂಡಳಿಯ ಈ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಡಬ್ಲ್ಯುಎಫ್‌ಐ–ಸಿಐಟಿಯು) ಹೈಕೋರ್ಟ್ ಮೆಟ್ಟಿಲೇರಿತು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಸಹಾಯಧನ ಒದಗಿಸಲು ಕೋರಿ ಕಾರ್ಮಿಕರ ಮಕ್ಕಳಾದ ಎಂ.ಅಮೃತಾ ಹಾಗೂ ಹೆಚ್. ಅಕ್ಷತಾ ಮತ್ತು ಸಿಡಬ್ಲ್ಯುಎಫ್‌ಐ ಪ್ರಧಾನ ಕಾರ್ಯದರ್ಶಿ ಕೆ.ಮಹಂತೇಶ್ ಹಾಗೂ ಇತರ ಇಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಗೆ ಆದೇಶ
ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು 2024ರ ಏಪ್ರಿಲ್ 23 ರಂದು ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ನಾಲ್ಕು ವಾರದೊಳಗೆ ಎಲ್.ಎಲ್.ಬಿ. ಹಾಗೂ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ 2021 ರ ಅಧಿಸೂಚನೆ ಅನ್ವಯ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆದೇಶಿಸಿತು. ಮಕ್ಕಳನ್ನು ನ್ಯಾಯಾಲಯ ಮೆಟ್ಟಿಲು ಹತ್ತುವಂತೆ ಮಾಡಿದ ಕಲ್ಯಾಣ ಮಂಡಳಿಗೆ ತಲಾ ರೂ. 25 ಸಾವಿರ ದಂಡ ವಿಧಿಸಿತು. ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ ವಾದ ಮಂಡಿಸಿದ್ದರು.
ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಕಲ್ಯಾಣ ಮಂಡಳಿ ವಿಳಂಬ ಧೋರಣೆ ಅನುಸರಿಸಿತು. ಈ ಆದೇಶದ ನಂತರ ಜೂನ್ 7ರಂದು ನಡೆದ ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ ಅವರು ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಪಾಲನೆಯಾಗಿಲ್ಲ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.
ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ಜಾರಿ ಮಾಡಲು ವಿಫಲವಾದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ವಿರುದ್ದ ಕಿಡಿ ಕಾರಿದರು. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ರೂ. 6,700 ಕೋಟಿ ಸೆಸ್, ಅದು ಹೊಂದಿರುವ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಯಾವ ಸೌಲಭ್ಯಗಳಿಗೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎನ್ನುವ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಿ ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿದರು.
ಹೈಕೋರ್ಟ್ ಮಧ್ಯಂತರ ಆದೇಶದನ್ವಯ ಕಲ್ಯಾಣ ಮಂಡಳಿಯು, ಕಾರ್ಮಿಕರ ಇಬ್ಬರು ಮಕ್ಕಳಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ (ರೂ 60,000 ಹಾಗೂ ರೂ 55,000) ಪಾವತಿಸಿತು. ಇಬ್ಬರು ವಿದ್ಯಾರ್ಥಿನಿಯರಿಗೆ ಧನಸಹಾಯ ಪಾವತಿಸಿದ ಮಾತ್ರಕ್ಕೆ ಈ ವಿಚಾರಣೆ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹೇಳಿದ ನ್ಯಾಯಪೀಠವು, ಮಂಡಳಿಯಲ್ಲಿ ಸಾವಿರಾರು ಕೋಟಿ ಸೆಸ್ ಇದ್ದರೂ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಶೇ 60-70ರಷ್ಟು ಕಡಿತ ಮಾಡಿರುವ ಕ್ರಮವನ್ನು ಯಾವುದೇ ಕಾರಣದಿಂದಲೂ ಒಪ್ಪಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಮಂಡಳಿಯಲ್ಲಿ ಈವರೆವಿಗೂ ಮಾಡಲಾಗಿರುವ ಪ್ರತಿಯೊಂದು ಖರ್ಚಿನ ಲೆಕ್ಕವನ್ನು ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು 2024ರ ಜುಲೈ 26ಕ್ಕೆ ಮುಂದೂಡಿತು.
ಸೆಸ್ ಹಣ ಕಾರ್ಮಿಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ
ಜೂನ್ 26 ರಂದು ಈ ರಿಟ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಲು ಮಾಡಿದ ಆದೇಶವನ್ನು ಜಾರಿಗೊಳಿಸದ ಕಲ್ಯಾಣ ಮಂಡಳಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. “ಬಿಸಿಲು ಮಳೆಯಲ್ಲಿ ಶ್ರಮಪಡುವ ಕಟ್ಟಡ ಕಾರ್ಮಿಕರ ದುಡಿಮೆಯಿಂದಾಗಿ ಸಾವಿರಾರು ಕೋಟಿ ಸೆಸ್ ಸಂಗ್ರಹವಾಗುತ್ತಿದೆ. ಈ ಸೆಸ್ ಹಣವನ್ನು ಕಾರ್ಮಿಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕೇ ವಿನಾ ಮಂಡಳಿಯ ಅಧಿಕಾರಿಗಳ ಐಷಾರಾಮಿ ಓಡಾಟಕ್ಕಲ್ಲ” ಎಂದು ಅತೃಪ್ತಿ ವ್ಯಕ್ತಪಡಿಸಿದರು. ಅಲ್ಲದೆ ಮಂಡಳಿಯಲ್ಲಿ ಸಂಗ್ರಹವಿರುವ ರೂ. 6700 ಕೋಟಿ ಹಣದ ವಿವರಗಳನ್ನು ಪೀಠದ ಮುಂದೆ ಮಂಡಿಸಲು ತಾಕೀತು ಮಾಡಿ ವಿಚಾರಣೆಯನ್ನು ಮೂಂದೂಡಿದ್ದರು.
ವಿಚಾರಣೆ ವೇಳೆ ರಾಜ್ಯ ಸರ್ಕಾರ ಹಾಗೂ ಕಲ್ಯಾಣ ಮಂಡಳಿಯನ್ನು ಪ್ರತಿನಿಧಿಸಿ ಹಾಜರಾಗಿದ್ದ ಸರ್ಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರು, “ಕಲ್ಯಾಣ ಮಂಡಳಿಯು ಈಗಾಗಲೇ 6 ಲಕ್ಷ ವಿದ್ಯಾರ್ಥಿಗಳಿಗೆ ರೂ 500 ಕೋಟಿ ಶೈಕ್ಷಣಿಕ ಧನಸಹಾಯ ವಿತರಿಸಿದೆ. ಅಲ್ಲದೆ ಮಂಡಳಿಯಲ್ಲಿ 19 ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಕಟ್ಟಡ ಕಾರ್ಮಿಕರಿಗಾಗಿ ಜಾರಿಗೊಳಿಸುತ್ತಿದೆ. ಆದ್ದರಿಂದ 2021 ರ ಅಧಿಸೂಚನೆ ಅನ್ವಯ ಶೈಕ್ಷಣಿಕ ಧನಸಹಾಯ ನೀಡಲು ಕಷ್ಟವಾಗಲಿದೆ” ಎಂದು ವಾದಿಸಿದರು. ಆದರೆ ಅವರ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು “ರಾಜ್ಯದಲ್ಲಿ ನಿರ್ಮಾಣ ಕಾಮಗಾರಿಗಳಿಂದ ಸಂಗ್ರಹವಾಗುವ ಸೆಸ್ ಹಣ ಕಾರ್ಮಿಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಖರ್ಚುಮಾಡಬೇಕಲ್ಲವೇ” ಎಂದು ಪ್ರಶ್ನಿಸಿದ್ದರು.
ನಿಗದಿಗಿಂತ ಹೆಚ್ಚು ಖರ್ಚು : ಸಿಎಜಿ ವರದಿ ಉಲ್ಲೇಖಿಸಿ ವಾದ
ಸರ್ಕಾರದ ಅಡ್ವೋಕೇಟ್ ಜನರಲ್ ವಾದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ ಅವರು, 2019ರ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ವರದಿಯ ಅನುಸಾರ ಕರ್ನಾಟಕ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯು ತನ್ನ ಆಡಳಿತಾತ್ಮಕ ವೆಚ್ಚವನ್ನು ಕಾನೂನಾತ್ಮಕವಾಗಿ ನಿಗದಿಪಡಿಸಿದ ಶೇ. 5ರಷ್ಟನ್ನು ಮೀರಿ ಶೇ. 9ರಿಂದ ಶೇ. 72ರಷ್ಟು ಹೆಚ್ಚಾಗಿ ಖರ್ಚು ಮಾಡಿದೆ. ಘಟನೋತ್ತರ ಅನುಮೋದನೆ ಮೂಲಕ ಮಂಡಳಿಯು ಇನ್ನೋವಾ ಕಾರುಗಳನ್ನು ಖರೀದಿಸಿದ್ದು, ಮಂಡಳಿಯ ನಿಧಿಯನ್ನು ಅನಗತ್ಯವಾಗಿ ಖರ್ಚು ಮಾಡಿದೆ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.
ಶೀಘ್ರ ಕ್ರಮ ಕೈಗೊಳ್ಳಿ: ಜನವರಿ 10ರಂದು ಹೈಕೋರ್ಟ್ ತೀರ್ಪು:
ಶೈಕ್ಷಣಿಕ ಧನಸಹಾಯ ಕೋರಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಮಕ್ಕಳಿಗೆ 2021ರ ಅಧಿಸೂಚನೆ ಅನ್ವಯ ಬಾಕಿ ಇರುವ ಮೂರು ವರ್ಷಗಳ ಶೈಕ್ಷಣಿಕ ಧನಸಹಾಯ ವಿತರಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಜನವರಿ 10, 2025ರಂದು ತೀರ್ಪು ನೀಡಿದೆ
ವಿದ್ಯಾರ್ಥಿಗಳು 2020-21, 2021-22 ಹಾಗೂ 2022-23ನೇ ಸಾಲಿನಲ್ಲಿ ಕೋರಿರುವ ಶೈಕ್ಷಣಿಕ ಸಹಾಯಧನವನ್ನು 2021ರ ಅಧಿಸೂಚನೆ ಅನ್ವಯವೇ ಬಿಡುಗಡೆ ಮಾಡಬೇಕು. ಅಂತೆಯೇ, ಈ ಆದೇಶವನ್ನು ಜಾರಿಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೋರ್ಟ್ ನಿರ್ದೇಶಿಸಿದೆ. ಅಲ್ಲದೇ, 2023ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿರುವ ಪೀಠವು ಈ ಹಿಂದಿನ 2021ರ ಅಧಿಸೂಚನೆ ಪ್ರಕಾರವೇ ವಿದ್ಯಾರ್ಥಿ ವೇತನ ಪಾವತಿಸುವಂತೆ ಆದೇಶಿಸಿದೆ.
ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಪರಿಷ್ಕರಿಸುವಾಗ ಕಲ್ಯಾಣ ಮಂಡಳಿಯಾಗಲಿ ಅಥವಾ ಸರ್ಕಾರವಾಗಲೀ ಹೈಕೋರ್ಟ್‌ನ ಈ ಆದೇಶಕ್ಕೆ ಅನುಗುಣವಾಗಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು ಎಂದು ನಿರ್ದೇಶಿಸಿದ ಪೀಠವು, “ಶೈಕ್ಷಣಿಕ ನೆರವಿನ ಯಾವುದೇ ಪರಿಷ್ಕರಣೆಯ ವೇಳೆ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳ ಕಲ್ಯಾಣವೇ ಆತ್ಯಂತಿಕ ಆದ್ಯತೆ ಆಗಿರುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನ್ಯಾಯಾಲಯಕ್ಕೆ ಅಲೆದಾಡದಂತೆ ಭವಿಷ್ಯದಲ್ಲಿ ನೋಡಿಕೊಳ್ಳಬೇಕು” ಎಂದು ಎಚ್ಚರಿಸಿದೆ.
ಮೂರು ತಿಂಗಳೊಳಗೆ ವರದಿ ಮಂಡಿಸಲು ಸಿಎಜಿ ಗೆ ಸೂಚನೆ
ಮಹಾಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರು (ಸಿಎಜಿ) ಮೂರು ತಿಂಗಳ ಒಳಗಾಗಿ ಕಲ್ಯಾಣ ಮಂಡಳಿಯ ಲೆಕ್ಕಪರಿಶೋಧನೆ ಮಾಡಿಸಿ ಅದರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಸಿಎಜಿಗೆ ನ್ಯಾಯಾಲಯ ಸೂಚಿಸಿದೆ. ಅಂತೆಯೇ, ಈ ಕುರಿತಂತೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಸಿಎಜಿಯಿಂದ ವರದಿ ಸಂಗ್ರಹಿಸಬೇಕು. ಈ ವರದಿ ಬಂದ ಕೂಡಲೇ ವಿಳಂಬ ಮಾಡದೆ ಪ್ರಕರಣವನ್ನು ವಿಚಾರಣೆಗೆ ಮರು ನಿಗದಿಗೊಳಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ತಾಕೀತು ಮಾಡಿದೆ.
ಹಕ್ಕುಗಳಿಗಾಗಿ ಹೋರಾಟ ಮುಂದುವರಿಸೋಣ
ಹೈಕೋರ್ಟ್ ನ ಈ ತೀರ್ಪು ಕಟ್ಟಡ ಕಾರ್ಮಿಕರ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ. ಹೋರಾಡಿ ಗಳಿಸಿಕೊಂಡಿರುವ ಈ ಕಲ್ಯಾಣ ಮಂಡಳಿಯನ್ನು ರಕ್ಷಿಸಿಕೊಳ್ಳಲು ಮತ್ತು ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು, ನೈಜ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಮಂಡಳಿಯಲ್ಲಿನ ನಿಧಿ ಬಳಕೆಯಾಗುವಂತೆ ನೋಡಿಕೊಳ್ಳಲು ಕಟ್ಟಡ ಕಾರ್ಮಿಕರು ನಿರಂತರವಾಗಿ, ಮತ್ತಷ್ಟು ಬಲಗೊಂಡು ಹೋರಾಟ ನಡೆಸಬೇಕಾಗಿದೆ. ಇದುವರೆಗೂ ಮಂಡಳಿಯಲ್ಲಿ ನೊಂದಾಯಿತರಾಗದ (ಲೇಬರ್ ಕಾರ್ಡ್ ಮಾಡಿಸದ) ಲಕ್ಷಾಂತರ ಕಟ್ಟಡ ಕಾರ್ಮಿಕರನ್ನು ನೊಂದಾಯಿತರಾಗುವಂತೆ ಮಾಡುವ ಜವಾಬ್ಧಾರಿಯೂ ನಮ್ಮೆಲ್ಲರ ಮೇಲಿದೆ.