ಮೂರನೇ ಜಗತ್ತಿನ ಕಾರ್ಮಿಕರಿಗೆ ಅತಿ ಹೆಚ್ಚು ಕೊರೊನ ಪೆಟ್ಟು

ಕೊರೊನಾ ಸಾಂಕ್ರಾಮಿಕವು ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡಿದ ಪರಿಣಾಮಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ, ಲಾಕ್‌ಡೌನ್‌ನಿಂದಾದ ಶ್ರಮ-ಗಂಟೆಗಳ ನಷ್ಟ (ಉತ್ಪಾದನೆಯ ನಷ್ಟ) ಮತ್ತು ಎಲ್ಲ ವಲಯಗಳಿಗೂ ಹರಡಿದ ಅದರ ಪರಿಣಾಮಗಳ ಬಗ್ಗೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯು(ಐಎಲ್‌ಒ) ಒಂದು ವರದಿಯನ್ನು ಹೊರತಂದಿದೆ. ಈ ವರದಿಯು ಒದಗಿಸಿರುವ ಅಂಕಿ ಅಂಶಗಳು ಬೇರೆ ಬೇರೆ ದೇಶಗಳು ಒದಗಿಸಿದ ಅಧಿಕೃತ ದತ್ತಾಂಶಗಳ ಸಂಗ್ರಹವಲ್ಲ. ಸದಸ್ಯ ದೇಶಗಳಿಂದ ಲಭ್ಯವಿರುವ ಮಾಹಿತಿಯನ್ನು ಆಧರಿಸಿ, ಐಎಲ್‌ಒ ಸ್ವಂತ ಅಂದಾಜುಗಳನ್ನು ಸಿದ್ಧಪಡಿಸುತ್ತದೆ. ಈ ಅಂದಾಜು ಅಂಕಿ-ಅಂಶಗಳು ಎಷ್ಟು ನಿಖರವಾಗಿವೆ ಎಂದು ಹೇಳಲು ಸಾಧ್ಯವಿಲ್ಲವಾದರೂ, ನಮಗೆ ಲಭ್ಯವಿರುವ ಏಕೈಕ ದತ್ತಾಂಶವೆಂದರೆ ಈ ಅಂಕೆ-ಸಂಖ್ಯೆಗಳೇ. ಆದರೆ, ಅಂಕಿ-ಅಂಶಗಳನ್ನೊಳಗೊಂಡ ಈ ವರದಿಯನ್ನು ಹೊರತರಲು ಐಎಲ್‌ಒ ವಹಿಸುವ ಜಾಗರೂಕತೆ, ಪರಿಶ್ರಮ ಮತ್ತು ದತ್ತಾಂಶಗಳ ನಿಖರತೆ, ಸೂಕ್ಷ್ಮ ವಿಷಯಗಳ ಬಗ್ಗೆ ಐಎಲ್‌ಒ ಕೊಡುವ ಗಮನ ಇವುಗಳನ್ನು ಗಣನೆಗೆ ತೆಗೆದುಕೊಂಡರೆ, ಈ ದತ್ತಾಂಶಗಳನ್ನು ಆಧರಿಸಿ ನಾವು ಕೆಲವು ನಿರ್ಣಯಗಳಿಗೆ ಬರಲು ಅಡ್ಡಿಯಿಲ್ಲ.

ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರದ ಸಾಧನೆಯು ಜಗತ್ತಿನಲ್ಲೇ ಅತ್ಯಂತ ಕಳಪೆಯದ್ದಾಗಿದೆ ಎಂದು ಅನೇಕರು ಬಹಳ ದಿನಗಳಿಂದ ಹೇಳುತ್ತಿದ್ದ ಅಭಿಪ್ರಾಯವನ್ನು ಐಎಲ್‌ಒ ಅಂಕಿಅಂಶಗಳು ಸಮರ್ಥಿಸುತ್ತವೆ……. ಈ ಸಾಂಕ್ರಾಮಿಕದ ಸಂದರ್ಭದಲ್ಲಿ, ಭಾರತ ಸರ್ಕಾರವು ತೋರಿದ್ದು ನಿರ್ಲಕ್ಷತೆ ಮಾತ್ರವಲ್ಲ, ಅದು ಜಗತ್ತಿನ ಅತ್ಯಂತ ಅಸಮರ್ಥ ಸರ್ಕಾರಗಳಲ್ಲಿ ಒಂದು ಎಂಬುದನ್ನೂ.

2019ರ ನಾಲ್ಕನೇ ತ್ರೈಮಾಸಿಕದ ಅಂಕಿ-ಅಂಶಗಳೊಂದಿಗೆ ಹೋಲಿಸಿ, ಕೊರೊನಾ ಕಾಲದ ಶ್ರಮ-ಗಂಟೆಗಳ ನಷ್ಟವನ್ನು ಲೆಕ್ಕಹಾಕಲಾಗುತ್ತದೆ. ಈ ಹೋಲಿಕೆಯ ಪ್ರಕಾರ, 2020ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಜಾಗತಿಕ ಅರ್ಥವ್ಯವಸ್ಥೆಯು ಅನುಕ್ರಮವಾಗಿ 5.6%, 17.3% ಮತ್ತು 12.1% ಕುಸಿತ ಕಂಡಿದೆ. 2020ರ ಮೂರು ತ್ರೈಮಾಸಿಕಗಳನ್ನು ಒಟ್ಟಿಗೆ ಪರಿಗಣಿಸಿದರೆ, ಜಾಗತಿಕ ಅರ್ಥವ್ಯವಸ್ಥೆಯ ಶ್ರಮ-ಗಂಟೆಗಳ ನಷ್ಟವು 11.7% ರಷ್ಟಿತ್ತು. ಗಮನಾರ್ಹವಾದ ಅಂಶವೆಂದರೆ, ಈ ಅವಧಿಯಲ್ಲಿ (2020ರ ಮೊದಲ ಮೂರು ತ್ರೈಮಾಸಿಕಗಳಲ್ಲಿ) ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಅನುಕ್ರಮವಾಗಿ 3.1%, 27.3% ಮತ್ತು 18.2% ಶ್ರಮ-ಗಂಟೆಗಳ ನಷ್ಟವಾಗಿತ್ತು. ವಾಸ್ತವವಾಗಿ ಹೇಳುವುದಾದರೆ, ಕೊರೊನಾದ ಪೆಟ್ಟುಗಳನ್ನು ಹೆಚ್ಚು ತಿಂದ (ಅಂದರೆ, ಆದಾಯ ಕಳೆದುಕೊಂಡ) ಪ್ರದೇಶಗಳೆಂದರೆ ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್, ನಂತರದಲ್ಲಿ ದಕ್ಷಿಣ ಏಷ್ಯಾ ಬರುತ್ತದೆ.

ಈ ಸಂಗತಿಯನ್ನು ಇತರ ಅಂಕಿ-ಅಂಶಗಳೂ ಸಹ ದೃಡೀಕರಿಸುತ್ತವೆ. ಶ್ರಮ-ಗಂಟೆಗಳ ನಷ್ಟವನ್ನು ಕಾರ್ಮಿಕರಿಗೆ ಉಂಟಾದ ಆದಾಯ ನಷ್ಟವೆಂದು ಐಎಲ್‌ಒ ಪರಿಗಣಿಸುತ್ತದೆ. 2020ರ ಮೂರು ತ್ರೈಮಾಸಿಕಗಳಲ್ಲಿ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಲ್ಲಿ ಕಾರ್ಮಿಕರು 19.3% ಆದಾಯವನ್ನು ಕಳೆದುಕೊಂಡರು. ದಕ್ಷಿಣ ಏಷ್ಯಾದ ದೇಶಗಳ ಕಾರ್ಮಿಕರು 16.2% ಆದಾಯ ಕಳೆದುಕೊಂಡರು. ಈ ಪ್ರದೇಶದ ಕಾರ್ಮಿಕರು ಕಳೆದುಕೊಂಡ ಆದಾಯವು ವಿಶ್ವದ ಇತರ ಎಲ್ಲ ಪ್ರದೇಶಗಳಿಗಿಂತಲೂ ಅಧಿಕವಾಗಿದೆ. ವಾಸ್ತವವಾಗಿ, ಇಡೀ ವಿಶ್ವದ ಕಾರ್ಮಿಕರ ಆದಾಯ ನಷ್ಟವು 10.7% ಗಿಂತ ಹೆಚ್ಚಿಗೆ ಇಲ್ಲ. ತನ್ನ ಅಗಾಧ ಗಾತ್ರದಿಂದಾಗಿ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಾರತವೇ ಮೇಲುಗೈ ಹೊಂದಿದ ದೇಶ. ಕೊರೊನಾ ಸಾಂಕ್ರಾಮಿಕವು ಪಾಕಿಸ್ತಾನವೂ ಸೇರಿದಂತೆ ಭಾರತದ ನೆರೆಯ ದೇಶಗಳನ್ನು ಅಷ್ಟಾಗಿ ಬಾಧಿಸಲಿಲ್ಲ ಮತ್ತು ಈ ದೇಶಗಳು ಕೊರೊನಾ ತಡೆಗಟ್ಟಲು ಅಷ್ಟೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲೂ ಇಲ್ಲ. ಹಾಗಾಗಿ, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಉಂಟಾದ ಆದಾಯ ನಷ್ಟದಲ್ಲಿ ಭಾರತ ಅನುಭವಿಸಿದ ನಷ್ಟವೇ ಅತಿ ಹೆಚ್ಚಿನದ್ದಾಗುತ್ತದೆ. ನಷ್ಟ ಅನುಭವಿಸಿದ ದೇಶಗಳ ಪಟ್ಟಿಯಲ್ಲಿ ಭಾರತವು, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳ ನಂತರದ ಸ್ಥಾನದಲ್ಲಿ ಬರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರದ ಸಾಧನೆಯು ಜಗತ್ತಿನಲ್ಲೇ ಅತ್ಯಂತ ಕಳಪೆಯದ್ದಾಗಿದೆ ಎಂದು ಅನೇಕರು ಬಹಳ ದಿನಗಳಿಂದ ಹೇಳುತ್ತಿದ್ದ ಅಭಿಪ್ರಾಯವನ್ನು ಐಎಲ್‌ಒ ಅಂಕಿ ಅಂಶಗಳು ಸಮರ್ಥಿಸುತ್ತವೆ.

ಸಾಂಕ್ರಾಮಿಕದ ಕಾರಣದಿಂದ ಹೇರಿದ ಲಾಕ್ಡೌನ್ ಪರಿಣಾಮದ ಉದ್ಯೋಗ ನಷ್ಟಕ್ಕೆ ಬೇರೆ ಬೇರೆ ದೇಶಗಳ ವಿತ್ತೀಯ ಸ್ಪಂದನೆಯಲ್ಲಿ ಭಾರೀ ವೈವಿಧ್ಯತೆ ಇದೆ. ಮುಂದುವರಿದ ದೇಶಗಳು ತಮ್ಮ ಅರ್ಥವ್ಯವಸ್ಥೆಗಳಿಗೆ ವಿತ್ತೀಯ ನೆರವನ್ನು ಧಾರಾಳವಾಗಿ ಒದಗಿಸಿವೆ. ಕಾರ್ಮಿಕರಿಗೂ ಧಾರಾಳ ನೆರವು ಒದಗಿಸಿವೆ. ಆದರೆ, ತೃತೀಯ ಜಗತ್ತಿನ ದೇಶಗಳು ತಮ್ಮ ಕಾರ್ಮಿಕರೊಂದಿಗೆ ಅತ್ಯಂತ ನಿಕೃಷ್ಟವಾಗಿ ವರ್ತಿಸಿವೆ. ಅದು ಅವರ ಆಯ್ಕೆಯಲ್ಲ (ಭಾರತವನ್ನು ಹೊರತುಪಡಿಸಿ), ಅನಿವಾರ್ಯತೆ. ಇದು, ಜಾಗತೀಕರಣದ ಯುಗದಲ್ಲಿ ತೃತೀಯ ಜಗತ್ತಿನ ಸರ್ಕಾರಗಳು ಸ್ವಾಯತ್ತತೆಯನ್ನು ಕಳೆದುಕೊಂಡಿರುವುದರ ಪರಿಣಾಮ. ಇದರಿಂದಾಗಿ ಮುಂದುವರಿದ ದೇಶಗಳಿಗೆ ಹೋಲಿಸಿದರೆ, ತೃತೀಯ ಜಗತ್ತಿನ ಕಾರ್ಮಿಕರ ಮೇಲೆ ಸಾಂಕ್ರಾಮಿಕವು ತೀವ್ರ ಹಾನಿ ಉಂಟುಮಾಡಿದೆ.

ಅಷ್ಟೇ ಅಲ್ಲ. ಶ್ರಮಿಕರ ಆದಾಯ ನಷ್ಟದ ಅಂಕಿ-ಅಂಶಗಳನ್ನು ಲೆಕ್ಕ ಹಾಕುವಾಗ ಐಎಲ್‌ಒ, ಆಯಾ ದೇಶಗಳ ಸರ್ಕಾರಗಳು ಒದಗಿಸಿದ ವಿತ್ತೀಯ ಬೆಂಬಲವನ್ನು ಗಣನೆಗೆ ತೆಗೆದುಕೊಳ್ಳದೆ ಲೆಕ್ಕ ಹಾಕಿತ್ತು. ಸರ್ಕಾರದ ಹೆಚ್ಚುವರಿ ವೆಚ್ಚಗಳು, ಆದಾಯ ವರ್ಗಾವಣೆಗಳು ಅಥವಾ ತೆರಿಗೆ ಕಡಿತದ ಕ್ರಮಗಳನ್ನು ವಿತ್ತೀಯ ಉತ್ತೇಜನ ಎಂದು ಐಎಲ್‌ಒ ವ್ಯಾಖ್ಯಾನಿಸುತ್ತದೆ. ಐಎಲ್‌ಒ ಅಧ್ಯಯನವು ಗುರುತಿಸಿರುವ ಒಂದು ಪ್ರಮುಖ ಅಂಶವೆಂದರೆ, ಶೇಕಡಾವಾರು ಜಿಡಿಪಿಯ ಲೆಕ್ಕದಲ್ಲಿ ಹೆಚ್ಚಿನ ಪ್ರಮಾಣದ ವಿತ್ತೀಯ ಉತ್ತೇಜನವನ್ನು ಒದಗಿಸಿದ ದೇಶಗಳಲ್ಲಿ ಶ್ರಮ-ಗಂಟೆಗಳ ನಷ್ಟ ಕಡಿಮೆ ಇದೆ. ಹೆಚ್ಚಿನ ಪ್ರಮಾಣದ ವಿತ್ತೀಯ ಉತ್ತೇಜನ ಮತ್ತು ಶ್ರಮ-ಗಂಟೆಗಳ ಕಡಿಮೆ ನಷ್ಟ ಇವುಗಳ ವಿಲೋಮ ಸಂಬಂಧದ ಬಗ್ಗೆ ಸ್ವತಃ ಐಎಲ್‌ಒ ಯಾವುದೇ ವಿವರಣೆಯನ್ನೂ ಕೊಟ್ಟಿಲ್ಲ. ಆದರೆ ಅದನ್ನು ಕಂಡುಹಿಡಿಯುವುದು ತುಂಬಾ ಕಷ್ಟವೇನಲ್ಲ.

ಒಂದು ವೇಳೆ ಶ್ರಮ-ಗಂಟೆಗಳ ನಷ್ಟವು ಸಂಪೂರ್ಣವಾಗಿ ಲಾಕ್‌ಡೌನ್ ಕಾರಣದಿಂದ ಉಂಟಾಗಿದ್ದರೆ, ಅಂದರೆ, ಶ್ರಮ-ಗಂಟೆಗಳ ನಷ್ಟವು ಸರ್ಕಾರದ ನಿರ್ದೇಶನದ ಮೇರೆಗೆ “ಪೂರೈಕೆಯ ಕಡೆ”ಯಿಂದ ಉಂಟಾದರೆ, ಆಗ ಅಂತಹ ನಷ್ಟ ಮತ್ತು ವಿತ್ತೀಯ ಉತ್ತೇಜನದ ಗಾತ್ರದ ನಡುವೆ ವಿಲೋಮ ಸಂಬಂಧವಿರಲು ಕಾರಣವೇ ಇಲ್ಲ; ಆಗ ನಷ್ಟದ ಪ್ರಮಾಣವು ಕೇವಲ ಲಾಕ್‌ಡೌನ್ ಎಷ್ಟು ಬಿಗಿಯಾಗಿತ್ತು ಎಂಬುದನ್ನು ಅವಲಂಬಿಸಿರುತ್ತದೆಯೇ ಹೊರತು ವಿತ್ತೀಯ ಉತ್ತೇಜನದ ಗಾತ್ರವನ್ನಲ್ಲ. ಆದರೆ, ಲಾಕ್‌ಡೌನ್‌ಗೆ ಬೇಡಿಕೆ-ಕಡೆಯಿಂದ ಒಂದು “ಗುಣಕ”  ಪರಿಣಾಮವೂ ಇದೆ. ಲಾಕ್‌ಡೌನ್ ಕಾರಣದಿಂದ ಆದಾಯ ನಷ್ಟವಾದರೆ, ಆಗ ಜನರು ಹೇರ್ ಕಟಿಂಗ್ ಸಲೂನ್, ತಿಂಡಿ-ತಿನಿಸು ಅಂಗಡಿಗಳಿಂದ ಹಿಡಿದು ವಿವಿಧ ರೀತಿಯ ರಿಪೇರಿ-ಅಂಗಡಿಗಳವರೆಗೆ, ಲಾಕ್‌ಡೌನ್‌ನಲ್ಲಿ ಅವಕಾಶವಿದ್ದರೂ ಸಹ, ಜನರು ತಮ್ಮ ವಿವಿಧ ಸೇವೆಗಳ ಮೇಲಿನ ತಮ್ಮ ಬೇಡಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಈ ಸೇವಾ ಪೂರೈಕೆದಾರರು ತಮ್ಮ ತಮ್ಮ ಅಂಗಡಿಗಳನ್ನು ಮುಚ್ಚಿದರೆ, ಅದಕ್ಕೆ ಲಾಕ್‌ಡೌನ್ ಹೇರಿದ ನಿರ್ಬಂಧಗಳು ಕಾರಣವಾಗಿರುವುದಿಲ್ಲ, ಬದಲಿಗೆ, ಲಾಕ್‌ಡೌನ್‌ನ ಪರೋಕ್ಷ ಕಾರಣದಿಂದ ಬೇಡಿಕೆ ಇಲ್ಲದಿರುವುದು ಕಾರಣವಾಗುತ್ತದೆ. ಈ ರೀತಿಯಲ್ಲಿ “ಪೂರೈಕೆ-ಕಡೆ”ಯಿಂದ ಹೇರಲಾದ ಆದಾಯ ನಷ್ಟದ ಜೊತೆಗೆ ಬೇಡಿಕೆ-ಕಡೆಯಿಂದಲೂ ಮತ್ತಷ್ಟು ಆದಾಯ ನಷ್ಟವಾಗುತ್ತದೆ.

ವಿತ್ತೀಯ ಉತ್ತೇಜನದ ಅವಶ್ಯಕತೆ ಮತ್ತು ಅನಿವಾರ್ಯತೆ ಉಂಟಾಗುವುದು ಇಂತಹ ಪರಿಸ್ಥಿತಿಯಲ್ಲೇ. ಈ ಕ್ರಮವು, ಲಾಕ್‌ಡೌನ್ ಕಾರಣದಿಂದ ತಮ್ಮ ಆದಾಯ ನಷ್ಟ ಅನುಭವಿಸಿದ ಜನರ ಕೈಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದಿಷ್ಟು ಖರೀದಿ ಶಕ್ತಿಯನ್ನು ಇರಿಸುತ್ತದೆ ಮತ್ತು ಈ ಮೂಲಕ ಬೇಡಿಕೆ-ಕಡೆಯಿಂದ ಉಂಟಾದ ಹೆಚ್ಚಿನ ಆದಾಯ ನಷ್ಟದ ಅಥವಾ ಬೇಡಿಕೆ-ಕಡೆಯ “ಗುಣಕ”ದ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಜಿಡಿಪಿಗೆ ಹೋಲಿಸಿದರೆ ವಿತ್ತೀಯ ಉತ್ತೇಜನದ ಗಾತ್ರವು ದೊಡ್ಡದಾದಷ್ಟೂ, ಲಾಕ್‌ಡೌನ್‌ನ “ಗುಣಕ”ದ  ಅಡ್ಡಪರಿಣಾಮವು ಚಿಕ್ಕದಾಗುತ್ತದೆ. ಆದ್ದರಿಂದ, ಶ್ರಮ-ಗಂಟೆಯ ನಷ್ಟದ ಪ್ರಮಾಣವು ವಿತ್ತೀಯ ಉತ್ತೇಜನದ ಗಾತ್ರಕ್ಕೆ ತಕ್ಕ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಐಎಲ್‌ಒ ಅಧ್ಯಯನವು ಕಂಡುಹಿಡಿದಿರುವುದು ಇದನ್ನೇ.

ಕೊವಿಡ್ ಸೋಂಕಿತರ ಸಂಖ್ಯೆ 1000ಕ್ಕಿಂತ ಕಡಿಮೆ ಇದ್ದಾಗ ಕೊವಿಡ್ ಸೋಂಕಿತರ ಸಂಖ್ಯೆ 1000000 ದಾಟಿದಾಗ ವ್ಯಂಗ್ಯಚಿತ್ರ: ಪಂಜು ಗಂಗೊಳ್ಳಿ

ನಷ್ಟವಾದ ಶ್ರಮ-ಗಂಟೆಗಳು ಮತ್ತು ಆರ್ಥಿಕ ಉತ್ತೇಜನದ ಗಾತ್ರಕ್ಕೆ ಸಂಬಂಧಿಸಿದಂತೆ ಐಎಲ್‌ಒ ಮತ್ತೊಂದು ಅಂದಾಜನ್ನು ಸಿದ್ಧಪಡಿಸಿದೆ. ಈ ಅಂದಾಜಿನಲ್ಲಿ ನಷ್ಟವಾದ ಶ್ರಮ-ಗಂಟೆಗಳನ್ನು ಪೂರ್ಣಾವಧಿಯ ಕೆಲಸದ ಗಂಟೆಗೆ (ಸಮನಾಗಿ) ಪರಿವರ್ತಿಸಲಾಗಿದೆ. ಅದೇ ರೀತಿಯಲ್ಲಿ, ವಿತ್ತೀಯ ಉತ್ತೇಜನವನ್ನು ಅದು ಎಷ್ಟು ಪೂರ್ಣಕಾಲಿಕ ಉದ್ಯೋಗಳಿಗೆ ಸಮಾನವಾಗುತ್ತದೆ ಎನ್ನುವ ರೀತಿಯಲ್ಲಿ ಪರಿವರ್ತಿಸಲಾಗುತ್ತದೆ. ಈ ಎರಡು ಅಂಶಗಳ ನಡುವಿನ ಅನುಪಾತವು, ನಷ್ಟವಾದ ಶ್ರಮ-ಗಂಟೆಗಳ ಮೊತ್ತಕ್ಕೆ ಹೋಲಿಸಿದರೆ ವಿತ್ತೀಯ ಉತ್ತೇಜನದ ಗಾತ್ರ ಎಷ್ಟೆಂಬುದು ತಿಳಿಯುತ್ತದೆ. ಈ ಲೆಕ್ಕಾಚಾರದಲ್ಲಿ ನೋಡಿದರೆ, ವಿಶ್ವದ ಎಲ್ಲಾ ಪ್ರದೇಶಗಳ ಪೈಕಿ, “ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್” ಮತ್ತು “ಸಹರಾ-ಕೆಳಗಿನ ಆಫ್ರಿಕಾ” ಗಳನ್ನು ಒಂದೇ ಪ್ರದೇಶವೆಂದು ಪರಿಗಣಿಸಿದರೆ, ದಕ್ಷಿಣ ಏಷ್ಯಾದ ಶ್ರಮ-ಗಂಟೆಗಳ ನಷ್ಟಕ್ಕೆ ಹೋಲಿಸಿದರೆ ಅಲ್ಲಿ ದೊರೆತ ವಿತ್ತೀಯ ಉತ್ತೇಜನವು ಅತ್ಯಂತ ಕಡಿಮೆ ಪ್ರಮಾಣದ್ದಾಗಿತ್ತು. ಈ ಬಗ್ಗೆಯೂ ದಕ್ಷಿಣ ಏಷ್ಯಾದ ಕಳಪೆ ದಾಖಲೆಗೆ ಭಾರತದ ವಿತ್ತೀಯ ಜಿಪುಣತನವೇ ಪ್ರಮುಖ ಕಾರಣವಾಗುತ್ತದೆ.

ಐಎಲ್‌ಒ ತನ್ನ ಅಂದಾಜಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವು ಎರಡು ಅಂಶಗಳನ್ನು ಸೂಚ್ಯವಾಗಿ ತಿಳಿಸುತ್ತದೆ. ಮೊದಲನೆಯದು, ಭಾರತದ ಜುಜುಬಿ ಮೊತ್ತದ ವಿತ್ತೀಯ ಉತ್ತೇಜನವು ಶ್ರಮ-ಗಂಟೆಗಳ ನಷ್ಟವನ್ನು ಉಲ್ಬಣಗೊಳಿಸಿತು, ಹೇಗೆಂದರೆ, ಬಿಗಿ ಲಾಕ್‌ಡೌನ್‌ನ ನೇರ ಪರಿಣಾಮವಾಗಿ ಶ್ರಮ-ಗಂಟೆಗಳ ಆರಂಭಿಕ ನಷ್ಟವು “ಗುಣಕ”ದ ರೀತಿಯಲ್ಲಿ ವರ್ಧಿಸಿತು. ಎರಡನೆಯದು, ವಿತ್ತೀಯ ಉತ್ತೇಜನವು ಕಾರ್ಮಿಕರಿಗೆ ಆದಾಯ-ಬೆಂಬಲ ಒದಗಿಸುತ್ತದೆ. ಮತ್ತು, ಈ ಆದಾಯ-ಬೆಂಬಲವು ಸಾಂಕ್ರಾಮಿಕ ಕಾರಣದ ಆರ್ಥಿಕ ಬಿಕ್ಕಟ್ಟಿನ ನಡುವೆ ಜೀವ ಉಳಿಸಿಕೊಳ್ಳುವ ಒಂದು ಅತ್ಯಗತ್ಯ ಸಾಧನವಾಗಿದೆ. ಹಾಗಾಗಿ, ಭಾರತ ಸರ್ಕಾರದ ಜಿಪುಣತನವು ದುಪ್ಪಟ್ಟು ಖಂಡನೀಯವಾಗುತ್ತದೆ: ದುಡಿಯುವ ಜನರಿಗೆ ಸರ್ಕಾರವು ಎರಡು ರೀತಿಯಲ್ಲಿ ನೋವುಂಟು ಮಾಡಿತು. ಮೊದಲನೆಯದಾಗಿ, ಅದಾಗಲೇ ಒಂದು ಕಠೋರ ಲಾಕ್‌ಡೌನ್‌ನಿಂದಾಗಿ ಜರ್ಝರಿತರಾಗಿದ್ದ ದುಡಿಮೆಗಾರರನ್ನು ಮತ್ತಷ್ಟು ಘಾಸಿಗೊಳಿಸಿತು, ಲಾಕ್‌ಡೌನ್ ವಿಸ್ತರಿಸುವ ಮೂಲಕ. ಎರಡನೆಯದಾಗಿ, ಸೂಕ್ತ ನೆರವು ಅವರಿಗೆ ಅತ್ಯವಶ್ಯವಿದ್ದಾಗ ಅದನ್ನು ಒದಗಿಸದೇ ಇದ್ದುದು ಗಾಯದ ಮೇಲೆ ಬರೆ ಎಳೆದ ರೀತಿಯಲ್ಲಿ ನೋವುಂಟುಮಾಡಿತು. ಹಾಗಾಗಿ, ಈ ಸಾಂಕ್ರಾಮಿಕದ ಸಂದರ್ಭದಲ್ಲಿ, ಭಾರತ ಸರ್ಕಾರವು ತೋರಿದ್ದು ನಿರ್ಲಕ್ಷತೆ ಮಾತ್ರವಲ್ಲ, ಅದು ಜಗತ್ತಿನ ಅತ್ಯಂತ ಅಸಮರ್ಥ ಸರ್ಕಾರಗಳಲ್ಲಿ ಒಂದು ಎಂಬುದನ್ನು.

ನಮ್ಮ ಅರ್ಥವ್ಯವಸ್ಥೆಯು ಸದೃಢವಾಗಿದೆ ಎಂದು ಗಟ್ಟಿಯಾಗಿ ಎಲ್ಲ ಸರ್ಕಾರಗಳೂ ಸತತವಾಗಿ ಹೇಳಿಕೊಂಡಿರುವ ಕಾರಣದ ಮೇಲೆ, ಭಾರತದ ಜುಜುಬಿ ಮೊತ್ತದ ವಿತ್ತೀಯ ಉತ್ತೇಜನವು ಸರ್ಕಾರದ ಕಡು ಕ್ರೂರ ಮನೋಭಾವದ ಪ್ರತೀಕವೆಂದು ಆರೋಪಿಸಬಹುದು. ಆದರೆ, ತೃತೀಯ ಜಗತ್ತಿನ ಹಲವು ದೇಶಗಳ ಬಹು ದೊಡ್ಡ ಸಂಖ್ಯೆಯ ದುಡಿಮೆಗಾರರ ವಿಷಯದಲ್ಲಿ, ಅಂದರೆ, ಅವರಿಗೆ ನೆರವು ಒದಗಿಸುವ ವಿಷಯದಲ್ಲಿ, ಆ ಸರ್ಕಾರಗಳಿಗೆ ಹೆಚ್ಚಿನ ಆಯ್ಕೆಗಳೇ ಇಲ್ಲ. ಈ ದೇಶಗಳಲ್ಲಿ, ವಿತ್ತೀಯ ಉತ್ತೇಜನವು ಅತಿ ಕಡಿಮೆ ಪ್ರಮಾಣದಲ್ಲಿದೆ ಎಂದು ಐಎಲ್‌ಒ ವರದಿ ಹೇಳುತ್ತದೆ. ನವ ಉದಾರಿ ಯುಗದಲ್ಲಿ ಈ ದೇಶಗಳ ಅರ್ಥವ್ಯವಸ್ಥೆಗಳು ಎಷ್ಟು ಅಧೋಗತಿಗೆ ಇಳಿದಿವೆ ಎಂದರೆ ಅಲ್ಪ ಪ್ರಮಾಣದ ವಿತ್ತೀಯ ಬೆಂಬಲ ಒದಗಿಸಲೂ ಸಹ ಅವು ಬಾಹ್ಯ ಸಾಲಗಳನ್ನು ಅವಲಂಬಿಸಬೇಕಾಗುತ್ತದೆ ಮತ್ತು ಅಂತಹ ಸಾಲ ಸಿಗುವುದೂ ದುರ್ಲಭವೇ.

ಸಾಂಕ್ರಾಮಿಕದ ಕಾರಣದಿಂದ ಹೇರಿದ ಲಾಕ್‌ಡೌನ್ ಪರಿಣಾಮದ ಉದ್ಯೋಗ ನಷ್ಟಕ್ಕೆ ಬೇರೆ ಬೇರೆ ದೇಶಗಳ ವಿತ್ತೀಯ ಸ್ಪಂದನೆಯಲ್ಲಿ ಭಾರೀ ವೈವಿಧ್ಯತೆ ಇದೆ. ಮುಂದುವರಿದ ದೇಶಗಳು ತಮ್ಮ ಅರ್ಥವ್ಯವಸ್ಥೆಗಳಿಗೆ ವಿತ್ತೀಯ ನೆರವನ್ನು ಧಾರಾಳವಾಗಿ ಒದಗಿಸಿವೆ. ಕಾರ್ಮಿಕರಿಗೂ ಧಾರಾಳ ನೆರವು ಒದಗಿಸಿವೆ. ಆದರೆ, ತೃತೀಯ ಜಗತ್ತಿನ ದೇಶಗಳು ತಮ್ಮ ಕಾರ್ಮಿಕರೊಂದಿಗೆ ಅತ್ಯಂತ ನಿಕೃಷ್ಟವಾಗಿ ವರ್ತಿಸಿವೆ. ಅದು ಅವರ ಆಯ್ಕೆಯಲ್ಲ (ಭಾರತವನ್ನು ಹೊರತುಪಡಿಸಿ), ಅನಿವಾರ್ಯತೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ, ತೃತೀಯ ಜಗತ್ತಿನ ಕಾರ್ಮಿಕರ ಮೇಲೆ ಈ ಸಾಂಕ್ರಾಮಿಕವು ತೀವ್ರ ಹಾನಿ ಉಂಟುಮಾಡಿದೆ. ಇವರ ದುರ್ಗತಿಗೆ ಹೋಲಿಸಿದರೆ, ಮುಂದುವರೆದ ದೇಶಗಳ ಕಾರ್ಮಿಕರ ತೊಂದರೆಗಳು ಕಡಿಮೆಯೇ.

ಎಲ್ಲ ದೇಶಗಳ ಕಾರ್ಮಿಕರು ಕಷ್ಟ ನಷ್ಟಗಳಿಗೆ ಒಳಗಾಗಿದ್ದಾರೆ. ಆದರೆ, ಬಿಲಿಯನೇರ್‌ಗಳಿಗಂತೂ ಇಷ್ಟೊಂದು ಸಮೃದ್ಧಿಯ ಕಾಲ ಯಾವತ್ತೂ ಇರಲಿಲ್ಲ. (ಜನಶಕ್ತಿ, ಸಂಚಿಕೆ 45, ನವೆಂಬರ್ 2-8). ಆದರೆ, ಕಾರ್ಮಿಕರ ವಿಶ್ವ ಸಮುದಾಯದಲ್ಲಿ, ತೃತೀಯ ಜಗತ್ತಿನ ಕಾರ್ಮಿಕರ ಸಂಕಷ್ಟಗಳು ತೀಕ್ಷ್ಣವಾಗಿವೆ. ಇದು, ಜಾಗತೀಕರಣದ ಯುಗದಲ್ಲಿ ತೃತೀಯ ಜಗತ್ತಿನ ಸರ್ಕಾರಗಳು ಸ್ವಾಯತ್ತತೆಯನ್ನು ಕಳೆದುಕೊಂಡಿರುವುದರ ಪರಿಣಾಮ.

 

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *